ಮುಗಿಯದ ಈ ಕೊರೊನ ಮತ್ತು ಪಾರ್ವತೀ ಕಣಿವೆಯ ಹಾಡು

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ.

ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಮಹಿಳಾ ಸ್ವಾವಲಂಬನೆ ವಿಭಾಗದಲ್ಲಿ ಗ್ರಾಮೀಣ ಮಹಿಳೆಯರಿಗೆ ಕಲಾ ತರಬೇತಿ ನೀಡುತ್ತಿರುವುದು ತೃಪ್ತಿಕೊಟ್ಟಿದೆ.

ತಿರುಗಾಟ ಹುಚ್ಚು. ಸ್ಟ್ರೆಂತೂ, ವೀಕ್ನೆಸ್ಸುಗಳೆರಡೂ ಹಿಮಾಲಯವೇ. ಬದುಕಿನ ಚಿಕ್ಕ ಚಿಕ್ಕ ಸಂಗತಿಗಳು ಕ್ಯಾಮರಾ ಫ್ರೇಮಿನೊಳಗೆ ಇಳಿವಾಗ ಅವುಗಳು ರೂಪಾಂತರ ಹೊಂದುವ ಅದ್ಭುತ ಸಾಧ್ಯತೆಗಳ ಬಗ್ಗೆ ಸದಾ ಬೆರಗು.

ಅರ್ಧಕ್ಕರ್ಧ ಅಂಗಡಿಗಳು ಬಾಗಿಲು ಮುಚ್ಚಿ ಕುಂತಿದ್ದವು. ಆ ಕಡೆಯಿಂದ ಒಂದು ಕಾಫಿ ಶಾಪ್, ಈ ಕಡೆ ಒಂದು ಜರ್ಮನ್ ಬೇಕರಿ, ಎಡಕ್ಕೆ ತಿರುಗಿದ ರಸ್ತೆಯ ಉದ್ದಕ್ಕೂ ಸಾಲು ಸಾಲು ಸೋವನೀರ್ ಅಂಗಡಿಗಳ ಪೈಕಿ  ಕೆಲವು ಬಾಗಿಲು ತೆರೆದು ಖಾಲಿ ಕೂತು ನೊಣ ಹೊಡೆಯುತ್ತಾ, ಇನ್ನೂ ಕೆಲವು ತೆರೆಯುವ ಸಾಹಸವನ್ನು ಮಾಡದೆ ಸುಮ್ಮನಿದ್ದವು.

ಮುಚ್ಚಿದ ಬಾಗಿಲ ಮುಂದೆ ಕೆಲಸವಿಲ್ಲದೆ ಕೂತು ಮೊಬೈಲ್ ಒಳಗೆ ಪ್ರಪಂಚ ಮರೆತ ಅಪ್ಪಂದಿರು, ಅಲ್ಲೇ ಬದಿಯಲ್ಲಿ ಮೂಗಿಂದ ಕೆಳಗೆ ಜಾರಿಸಿದ ಮಾಸ್ಕಿನಡಿಯಲ್ಲಿ ಕಿಲಕಿಲ ನಗುತ್ತಾ ಕಂಬಾಟ ಆಡುತ್ತಾ,  ಕಂಬ ಹಿಡಿಯಲು ನಿಂತಾಗ ಅಪ್ಪನ ಮೊಬೈಲಿನೊಳಗೆ ಇಣುಕಿ ಆಟ ಮರೆಯುವ ಪುಟಾಣಿಗಳು..!

ಇವೆಲ್ಲ ಚಿತ್ರಗಳ ನಡುವೆ, ಬಣ್ಣದ ಉಣ್ಣೆಯ ತಲೆಗವಸುಗಳು, ಬಣ್ಣಬಣ್ಣದ ಮಾಸ್ಕುಗಳು, ಕೀ ಹ್ಯಾಂಗರ್, ಮಣ್ಣು ಮಸಿ ಎಲ್ಲ ಹೊತ್ತು ಗಿರಾಕಿಗಳಿಲ್ಲದೆ ಖಾಲಿಯಾಗಿ ಗಲಗಲಿಸುತ್ತಿದ್ದ ಅಂಗಡಿಯ ಹೊರಗಡೆ ರಸ್ತೆ ಬದಿಯಲ್ಲಿ ಕುರ್ಚಿ ಹಾಕಿ ಕೂತು ಹಿಂದಿ ಪಠ್ಯ ಓದಿಕೊಳ್ಳುತ್ತಿದ್ದ ಪುಟಾಣಿ ಹುಡುಗ ಕಣ್ಣಿಗೆ ಬಿದ್ದ.  ನನ್ನ ಕೈ ಕ್ಯಾಮರಾ ಕಡೆಗೆ ಹೋಗುತ್ತಲೇ ಪುಸ್ತಕದಿಂದ ಮುಖ ಮುಚ್ಚಿದ. ಅವ ಪುಸ್ತಕದೆಡೆಯಿಂದ ಇಣುಕಿದ್ದೂ ನನ್ನ ಕ್ಯಾಮರಾ ಕ್ಲಿಕ್ ಎಂದಿದ್ದೂ ಸರಿಹೋಯಿತು. ಅರೆ ಹುಡುಗ, ಹೆಸ್ರೇನು ಅಂದೆ. ಧ್ರುವ ಅಂದ.

ನಿತ್ಯವೂ ಪ್ರವಾಸಿಗರಿಗೆ ಪೋಸು ಕೊಟ್ಟು ಕೊಟ್ಟು ಅಭ್ಯಾಸವಾಗಿ ಕ್ಯಾಮರಾ ಕಂಡರೆ ನಾಚದ ಇಂಥಾ ಪರ್ವತದೂರಿನ ಮಂದಿಯ ಮಧ್ಯೆ ಈ ಹುಡುಗ ಕೊಂಚ ಡಿಫರೆಂಟು. ‘ಕ್ಯಾಮರಾ ಕಂಡ್ರೆ ಅಷ್ಟೂ ನಾಚಿಕೆನಾ?’ ಅಂದಾಗ ಮತ್ತೆ ಪುಸ್ತಕ ಅಡ್ಡ ಹಿಡಿದ. ಅಂಗಡಿಯ ಒಳಗಡೆಯಿಂದ ಇಣುಕಿದ ಅವನಪ್ಪ, ‘ಅಯ್ಯೋ ಬಿಡಿ, ಹೇಳಿ ಸುಖ ಇಲ್ಲ’ ಎಂಬ ಧಾಟಿಯಲ್ಲಿ, ‘ನಾಳೆ ಪರೀಕ್ಷೆ. ಮನೇಲಿ ಕೂತು ಕೂತು ಬೊರಾಗಿದೆ ಮಕ್ಳಿಗೂ! ಆನ್ಲೈನ್ ಕ್ಲಾಸು ಎಂಬ ಹಣೆಬರಹ ಈ ಮಕ್ಳ ತಲೇಲಿ ಯಾಕೆ ಬರೆದಿಟ್ನೋ ಆ ಭಗವಂತ. ಹಿಂಗೆಲ್ಲ ಸರ್ಕಸ್ ನೋಡಿ ಈಗ’ ಅಂದ್ರು.

‘ಒಹೋ, ಇಲ್ಲೂ ಆನ್ಲೈನ್ ಕ್ಲಾಸು ನಡೀತಿದ್ಯ? ಹೆಂಗೆ ನಡೀತಿದೆ ಕ್ಲಾಸು. ಸ್ಕೂಲಿಗೆ ಹೋಗೋ ಉಸಾಬರಿ ಇಲ್ದೆ ಮಜಾ ಬರ್ತಿದ್ಯಾ?’ ಅಂತ ಸುಮ್ನೆ ಕಿಚಾಯಿಸಿದೆ. ‘ಇಲ್ಲೂ ನಡೀತಿದೆ. ಭರ್ಜರಿಯಾಗಿಯೇ ನಡೀತಿದೆ. ಆದ್ರೆ, ಮಕ್ಳಿಗೆ ಮಾತ್ರ ಅಲ್ಲ, ನಮ್ಗೂ ಕಷ್ಟ ಆಗ್ತಿದೆ’ ಅಂದ್ರು. ಅಷ್ಟರವರೆಗೆ ಬಾಯಿಗೆ ಬೀಗ ಹಾಕಿ ಕೂತಿದ್ದ ಧ್ರುವ ಕೂಡಾ, ‘ಈ ಆನ್ಲೈನ್ ಕ್ಲಾಸಿಗಿಂತ ಸ್ಕೂಲೇ ಚೆನಾಗಿತ್ತು’ ಅಂತ ನಾಚಿಕೊಂಡೆ ಪುಸ್ತಕದೆಡೆಯಿಂದ ಇಣುಕುತ್ತ ಮೆಲ್ಲಗೆ ಹೇಳಿದ. 

ಸ್ವಲ್ಪ ಮುಂದೆ ಹೋದ್ರೆ ಇಬ್ಬರು ಚಿಳ್ಳೆ ಪಿಳ್ಳೆ ಮಕ್ಕಳು ಭಾರೀ ಸೀರಿಯಸ್ಸಾಗಿ ಅಡುಗೆ ಮಾಡುತ್ತಿದ್ದರು. ವಯಸ್ಸು ಐದಾರು ದಾಟಿರಲಿಕ್ಕಿಲ್ಲ, ಅಡುಗೆ ಮಾಡುವ ಉತ್ಸಾಹ ಇವರನ್ನು ನೋಡಿ ಕಲೀಬೇಕಪ್ಪಾ ಅನಿಸಿತು. ಎನ್ ಮಾಡ್ತಿದೀರಾ ಅಂದೆ. ಆ ಹುಡುಗಿ ಬಹಳ ಸೀರಿಯಸ್ಸಾಗಿ, ಮಾಸ್ಕಿನೊಳಗಿನಿಂದಲೇ ರೋಟಿ- ದಾಲ್- ಸಬ್ಜಿ ಅಂದಳು. ರೋಟಿ ಎಂದು ಭ್ರಮಿಸಿಕೊಂಡ ಒಂದು ಚಪ್ಪಟೆಯ ವಸ್ತುವೊಂದನ್ನು ಪದೇ ಪದೇ ಲಟ್ಟಿಸಿ ಲಟ್ಟಿಸಿ  ಕಾವಲಿ ಮೇಲೆ ಎತ್ತಿ ಎತ್ತಿ ಒಗೆದು ಸೈಡಿಗೆ ಹಾಕುತ್ತಿದ್ದಳು.

ಅವಳ ಆ ಆಟದಲ್ಲೂ ಪರ್ವತನಾಡಿನ ಹೆಂಗಸರು ಶ್ರದ್ಧಾಭಕ್ತಿಗಳಿಂದ ಮಾಡುವಂಥದ್ದೇ ಚುರುಕು ಹಾಗೂ ಗಂಭೀರತೆ ಕಾಣುತ್ತಿತ್ತು. ಅವಳಿಗಿಂತ ಸಣ್ಣವನಂಗೆ ಕಾಣುತ್ತಿದ್ದ ಇನ್ನೊಬ್ಬ ಪುಟಾಣಿ ಇವಳಿಗೆ ಸಹಾಯಕ. ಸಬ್ಜಿ ತಂದು ಕೊಟ್ಟು, ಅದನ್ನು ಕಟ್ ಮಾಡಿ ರೆಡಿ ಮಾಡು ಎಂದು ಅವಳು ಆರ್ಡರ್ ಮಾಡುತ್ತಿದ್ದರೆ, ಅವ ಚಾಚೂ ತಪ್ಪದೆ ಅವಳು ಹೇಳಿದಂತೆ ಕುಣಿಯುತ್ತಿದ್ದ. ಅರೇ, ನಿನ್ನ ಮಾಸ್ಕೆಲ್ಲಿ ಹುಡುಗ ಎಂದರೆ, ಮಾಸ್ಕೂ ತೊಂದ್ರೆ ಕೊಡತ್ತೆ ಅಂತ, ಓ ಅಲ್ಲೇ ಬಿಚ್ಚಿಟ್ಟೆ ಎಂದು ಮೂಲೆ ತೋರಿಸಿದ.

ಸಂಜೆ ಐದರ ಹೊಂಬಣ್ಣದ ಬಿಸಿಲು ಮಕ್ಕಳ ಮೇಲೆ ತಾಗಿ ಅವರು ಬಂಗಾರದ ಪುತ್ಥಳಿಗಳಂತೆ ಫಳಫಳನೆ ಹೊಳೆಯುತ್ತಿದ್ದರು. ಈ ಮಕ್ಕಳ ಆಟ ಮಜಾ ಅನಿಸಿ, ಅವರ ಒಂದೆರಡು ಚಿತ್ರವೂ  ಕ್ಯಾಮರಾದೊಳಗೆ ಇಳಿಯುತ್ತಲೇ ಹೆಸರೇನೆಂದು ಕೇಳಿದರೆ ಆಕೆ ಯಶಿಕಾ ಅಂದಳು. ಹಳೇ ಕ್ಯಾಮರಾ ನೆನಪಾಗಿ, ನಿಕಾನಿನಲ್ಲಿ ಎರಡು ಹೆಚ್ಚೇ ಪಟ ತೆಗೆದೆ.

ಹಿಮಾಚಲದ ಕುಲ್ಲುವಿಗೆ ತಾಗಿಕೊಂಡಿರುವ ಪಾರ್ವತೀ ನದಿ ದಂಡೆಯ ಕಸೋಲ್ ಎಂಬ ಆ ಪುಟಾಣಿ ಪಟ್ಟಣದ ಮೊನ್ನೆ ಮೊನ್ನೆಯ ಚಿತ್ರವಿದು. ಸದಾ ಪ್ರವಾಸಿಗರಿಂದ ಗಿಜಿಗುಡುತ್ತಿರುವ ಇದು ಮೊನ್ನೆ ಮಾತ್ರ  ಮೌನವಾಗಿ ಕೂತಿತ್ತು. ಕೊರೋನ ಅಷ್ಟರಮಟ್ಟಿಗೆ ಪ್ರಪಂಚವನ್ನೇ ಬದಲಿಸಿ ಬಿಟ್ಟಿದೆ ಎಂಬುದಕ್ಕೆ ಇದೇ ಸಾಕ್ಷಿ.

ಹಿಮಾಚಲ ಪ್ರದೇಶ ಈಗಷ್ಟೇ ಕೆಲವೇ ದಿನಗಳ ಹಿಂದಷ್ಟೇ ಪ್ರವಾಸಿಗರಿಗೆ ತನ್ನ ಬಾಗಿಲು ತೆರೆದಿದೆ. ಕೊರೋನಾದಿಂದಾಗಿ ಸತ್ತೇ ಹೋಗಿದ್ದ ಪ್ರವಾಸೋದ್ಯಮ ಇನ್ನೂ ಮೆಲ್ಲಗೆ ಕಣ್ಣುಜ್ಜಿಕೊಂಡು ನೋಡಲು ಹೊರಟಿದೆಯಷ್ಟೆ. ಯಾವಾಗಲೂ ಪ್ರವಾಸಿಗರಿಂದ ಗಿಜಿಗುಡುವ ಕಸೋಲ್ ಎಂಬ ಈ ತಣ್ಣಗಿನ ಊರು ಕೂಡಾ ಇದರಿಂದ ಹೊರತಾಗಿಲ್ಲ.

ಪಾರ್ವತೀ ಕಣಿವೆಯ ದಟ್ಟಾರಣ್ಯದಲ್ಲಿ ಕಳೆದು ಹೋಗಲು ಬರುವ ಸೀರಿಯಸ್ ಚಾರಣಿಗರಿಂದ ಹಿಡಿದು ಸುಖಾಸುಮ್ಮನೆ ದಿನಗಟ್ಟಲೆ ಪಾರ್ವತೀ ದಂಡೆಯಲ್ಲಿ ಸೋಂಬೇರಿಯಂತೆ ಕೂತು ಹೊಗೆ ಬಿಡುತ್ತ ಪ್ರಪಂಚ ಮರೆಯಲು ಬರುವ ಪ್ರವಾಸಿಗರವರೆಗೆ ಕಸೋಲ್ ಎಲ್ಲರಿಗೂ ಪ್ರಿಯ. ತೋಷ್, ಮಲಾನ, ರಸೋಲ್, ಚಲಾಲ್, ಕಲ್ಗ, ಪುಲ್ಗ,  ಗ್ರಹಣ್…

ಹೀಗೆ ಮೈಲುಗಟ್ಟಲೆ ಪಾರ್ವತೀ ಕಣಿವೆಯೊಳಗೆ ದೇವಲೋಕ ಸ್ಪರ್ಶಿಸುವ ದೇವದಾರು ಮರಗಳ ನೀಲಿ-ಹಸುರುಗತ್ತಲ ಬೆಳಕಿನಲ್ಲಿ ನಡೆದು ದಕ್ಕುವ ಸ್ವರ್ಗಸದೃಷ ಹಳ್ಳಿಗಳು ಒಂದು ಆಕರ್ಷಣೆಯಾದರೆ, ಇನ್ನೂ ಗಂಭೀರ ಚಾರಣಗಳಾದ, ಖೀರ್ ಗಂಗಾ, ಚಂದ್ರ ಖೇಣಿ, ರುದ್ರನಾಗ್, ಸರ್ ಪಾಸ್, ಪಿನ್ ಪಾರ್ವತೀ ಕಣಿವೆಗಳ ಆಕರ್ಷಣೆ ಇನ್ನೊಂದೆಡೆ. ಈ ಎಲ್ಲವುಗಳ ಆರಂಭಕ್ಕೆ ಈ ಕಸೋಲ್ ಎಂಬ ಪುಟಾಣಿ ಪೇಟೆಯೇ ಮಡಿಲು.

‘ವರ್ಕ್ ಫ್ರಮ್ ಮೌಂಟೇನ್ಸ್’ ಎನ್ನುತ್ತಾ ಲ್ಯಾಪ್ ಟಾಪ್ ಹೆಗಲಿಗೇರಿಸಿ ಪ್ರಶಾಂತವಾದ ಹೋಂ ಸ್ಟೇ ಗಳಲ್ಲಿ  ಮೆಲು ಸಂಗೀತ ಕೇಳುತ್ತಾ ಗಂಟೆಗಟ್ಟಲೆ  ಕೀಪ್ಯಾಡು ಕುಟ್ಟುತ್ತಾ, ಶುದ್ಧ ಗಾಳಿ ಹೀರುತ್ತಾ, ಪ್ರಪಂಚದ ಜಂಜಡಗಳಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಸಂಜೆಗಳನ್ನು ನದಿ ದಂಡೆಯ ಕೆಫೆಗಳಲ್ಲಿ ಕಳೆದು, ಬಿಸಿಬಿಸಿ ಚಹಾವೋ, ಇನ್ಯಾವುದೋ ಕುಡಿದು ಈ ಪ್ರಪಂಚದಲ್ಲಿ ಕೊರೋನಾ ಎಂಬ ಕಣ್ಣಿಗೆ ಕಾಣದ ಜೀವಿ ಇದ್ಯಾ ಅನ್ನೋದೇ ಡೌಟ್ ಎಂಬಂತೆ ಬದುಕುತ್ತಿರುವ ಕೆಲವು ಸುಖಜೀವಿಗಳೂ ಇಲ್ಲಿದ್ದವು.

ವೈಫೈ ಬೇಕೆಂದಾಗ ಕಸೋಲ್ ಪಟ್ಟಣದ ಆ ಕೆಫೆಯಲ್ಲಿ ಕೂತು ಸೀರಿಯಸ್ ಆಗಿ ಕೆಲಸ ಮಾಡಿ, ವಾರಾಂತ್ಯದಲ್ಲಿ ಪರ್ವತವೇರಿ, ನೆಟ್ ವರ್ಕ್ ಸಿಗದ ಆ ಹಳ್ಳಿಗಳಲ್ಲಿ ಆನಂದವಾಗಿ ಕಳೆದು ಬರುವ ಊರಿನ ಹಂಗಿಲ್ಲದೆ ಬದುಕುವ ಸ್ವಚ್ಛಂದ ಹಕ್ಕಿಗಳವು.

‘ಏ ಸ್ವಲ್ಪ ಆ ಮ್ಯೂಸಿಕ್ ಬಂದ್ ಮಾಡಪ್ಪ, ನಾವು ಮುದುಕರು, ಶಾಂತಿಯಿಂದ ಇರಲು ಬಂದಿದ್ದೇವೆ ನೋಡಿ, ತಪ್ಪು ತಿಳೀಬೇಡಿ!’ ಪಕ್ಕದ ರೂಮಿಗೆ ಹೊಸದಾಗಿ ಬಂದಿದ್ದ ಯುವ ಗುಂಪೊಂದು ಹಾಕಿದ್ದ ಜೋರಾಗಿ ಗುದ್ದುವ ಮ್ಯೂಸಿಕ್ಕಿಗೆ ಕಿವಿ ಬಿಡಲಾಗಿದೆ ಒದ್ದಾಡುತ್ತಿದ್ದಾಗ, ‘ಅಬ್ಬಾ! ನಾ ಹೇಳಲು ಒದ್ದಾಡಿ, ಹೇಳಲಾಗದೆ ಇದ್ದದ್ದನ್ನು ಇವರು ಹೇಳಿಬಿಟ್ಟರಲ್ಲಾ’  ಅಂತ ಖುಷಿಯಾಗಿ ನಾನು ನೆಮ್ಮದಿಯಿಂದ ಆ ಇಬ್ಬರು ಮಹಿಳೆಯರ ಕಡೆ ತಿರುಗಿದಾಗ ನಮ್ಮ ನಡುವೆ ನಗು ವಿನಿಮಯವಾಗಿತ್ತು.

‘ಇಂಥಾ ಜಾಗದಲ್ಲೂ ಲೌಡ್ ಸ್ಪೀಕರಲ್ಲಿ ಮ್ಯೂಸಿಕ್ ಹಾಕಿ ನಮ್ಮ ಶಾಂತಿ ಹಾಳು ಮಾಡಿದರೆ, ಕೆಟ್ಟ ಕೋಪ ಬರುತ್ತದಪ್ಪ. ಮೊದಲಾದರೆ, ನೇರವಾಗಿ ಮ್ಯೂಸಿಕ್ ಬಂದ್ ಮಾಡ್ರಪ್ಪಾ ಅಂದರೆ, ‘ನಾವು ಕೇಳಿದ್ರೆ ನಿಮ್ ಗಂಟೇನ್ ಹೋಗತ್ತೆ ಅನ್ನೋ ಥರ ಮಾತಾಡ್ತಿದ್ರು. ಅದಕ್ಕೇ ಈ ಉಪಾಯ ನೋಡಿ. ನಾವು ಮುದುಕರು, ದಯವಿಟ್ಟು ಬಂದ್ ಮಾಡಿ ಅಂದ್ರೆ ಎರಡು ಮಾತಿಲ್ದೆ ನಿಲ್ಲಿಸ್ತಾರೆ. ಹೆಂಗೆ ನಾವು?!’ ಅಂತ ನಕ್ಕರು. ‘ಇದು ಮಸ್ತ್  ಐಡಿಯಾ ನೋಡಿ’ ಅಂತ ನಾನೂ ನಕ್ಕೆ.

50ರ ಆಸುಪಾಸಿನ ಆ ಇಬ್ಬರು ಮಹಿಳೆಯರು ದೆಹಲಿ ನಿವಾಸಿಗಳು. ಲಾಕ್ ಡೌನ್ ಮುಗಿದ ತಕ್ಷಣವೇ ಬೈಕ್ ಹತ್ತಿಕೊಂಡು ಇಲ್ಲಿ ಬಂದು ಒಂದು ತಿಂಗಳೇ ಕಳೆದಿದೆ. ‘ಲಾಕ್ ಡೌನ್ ಮುಗ್ಯೋದನ್ನೇ ಕಾಯ್ತಿದ್ವಿ. ನಮ್ಮ ಜವಾಬ್ದಾರಿಗಳೆಲ್ಲ ಮುಗಿದಿವೆ ನೋಡಿ, ನಮ್ಗೆ ಹೀಗೆ ಬೈಕ್ ಹತ್ತಿ ತಿರುಗಾಡಿ ಅಭ್ಯಾಸ. ಈ ಕೊರೋನ ನೆಪದಲ್ಲಿ ಮನೇಲಿ ನಾಲ್ಕು ಗೋಡೆ ಮಧ್ಯ ಕೂತು ಸಾಕಾಯ್ತು.

ಸರ್ಕಾರ ಕೇಳಿದ ಕೋವಿಡ್ ಟೆಸ್ಟ್ ಮಾಡಿಸ್ಕೊಂಡು ಬಂದ್ಬಿಟ್ವಿ. ಒಂದು ತಿಂಗಳಾಯ್ತು. ಇಲ್ಲಿ ಸುಮಾರು ಪರ್ವತ ಏರಿ ಇಳಿದಾಯ್ತು. ಸಮಯ ಸರಿದಿದ್ದೇ ಗೊತ್ತಾಗಲಿಲ್ಲ. ಮನೇಲಿರೋ ಹಿರಿ ಜೀವಗಳು ಇನ್ನೂ ಯಾಕೆ ಬಂದಿಲ್ಲ ಅಂತ ಬೈತಾರೆ, ಆದ್ರೆ ಹೋಗಲು ಮನಸಿಲ್ಲ ನೋಡಿ. ಕೊರೋನ ಅಂದ್ರೇನು ಅಂತ ಮರೆತೇ ಹೋಗಿದೆ ಅಂದರು ನಗ್ತಾ.

ದೂರದಲ್ಲಿ ಅಲ್ಲೇ ನಾಯಿಯೊಂದಿಗೆ ಆಡ್ತಾ ಒಡ್ತಿದ್ದ ಮಗನನ್ನ ನೋಡಿ, ‘ನೀನೂ ಇಲ್ಲೇ ಇರು ಹುಡುಗ, ಅಲ್ಲಿ ಹೋಗಿ ಆನ್ಲೈನ್ ಕ್ಲಾಸು ಅಟೆಂಡಾಗೋದ್ರಲ್ಲಿ ಕಲಿಯೋದೇನೂ ಇಲ್ಲ. ಇಲ್ಲೊಂದು ತಿಂಗಳು ಇದ್ರೆ ಸಾಕು ನೋಡು. ನೀ ವರ್ಷದಲ್ಲಿ ಅಲ್ಲಿ ಕಲಿತದ್ದು ಇಲ್ಲಿ ಒಂದೇ ತಿಂಗಳಲ್ಲಿ ಜೀವನ ಪಾಠ ಅಂದರು. ‘ಸತ್ಯ ನೋಡಿ’ ಅಂದೆ.

‍ಲೇಖಕರು ರಾಧಿಕ ವಿಟ್ಲ

October 18, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ವಿಫಲ ಪ್ರೇಮಕ್ಕೆ ಐದು ಉದಾಹರಣೆಗಳು

ವಿಫಲ ಪ್ರೇಮಕ್ಕೆ ಐದು ಉದಾಹರಣೆಗಳು

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: