‘ಮುಟ್ಟಿದರೆ ಮುನಿ’ಯು ಮುನಿಯುವುದೇಕೆ?

ಪರಿಸರಪ್ರೇಮಿ ಎಂಬ ಹೆಸರಲ್ಲಿ ಅರುಣ್ ಎಲ್ ಪರಿಸರ ಬ್ಲಾಗ್ ನಡೆಸುತ್ತಿದ್ದಾರೆ. ‘ಕ್ಷಿತಿಜಾನಿಸಿಕೆ’ ಸರಳವಾಗಿ ಎಷ್ಟೊಂದು ವಿಚಾರಗಳನ್ನ ಮುಟ್ಟಿಸುತ್ತದೆ! ಈ ಬ್ಲಾಗ್ ಗೆ ದಿನವೂ ಭೇಟಿ ನೀಡಿ ಎನ್ನುತ್ತಾ ಅರುಣ್ ಅವರ ‘ಯಾಕೆ?’ ಸರಮಾಲೆ ಇಲ್ಲಿದೆ. 

ಯಾಕೆ?

ಪ್ರ.೧. ಗಂಡು ನಾಯಿಗಳು ಆಗಾಗ್ಗೆ ಸಿಕ್ಕ ಸಿಕ್ಕ ಕಡೆ ಮೂತ್ರ ವಿಸರ್ಜನೆ ಮಾಡುವುದು ಏಕೆ?

ಗಂಡು ನಾಯಿಗಳು ತಮ್ಮ ‘ಸಾಮ್ರಾಜ್ಯ’ವನ್ನು ನಿರ್ಮಿಸಿಕೊಂಡಿರುತ್ತೆ. ಅದರ ಪರಿಧಿಯನ್ನು ಮೂತ್ರದಿಂದ ಗುರುತು ಮಾಡುತ್ತೆ. ವಾಸನೆಯು ಬೇಗ ಹೊರಟು ಹೋಗುವುದರಿಂದ ಮತ್ತೆ ಮತ್ತೆ ಮೂತ್ರ ವಿಸರ್ಜನೆ ಮಾಡುತ್ತೆ. ಸರಹದ್ದನ್ನು ದಾಟಿ ಬೇರೆ ಗಂಡು ನಾಯಿಗಳು ಬಂದರೆ ಸಾಮ್ರಾಜ್ಯದೊಳಗಿನ ನಾಯಿಗಳು ಗುಂಪಾಗಿ ಆಕ್ರಮಿಸಿ ಓಡಿಸಿಬಿಡುತ್ತೆ.

* ಇದೇ ಪದ್ಧತಿಯನ್ನು ಬೆಕ್ಕುಗಳೂ, ಹುಲಿಗಳೂ, ಸಿಂಹಗಳೂ, ತೋಳಗಳೂ, ನರಿಗಳೂ, ಚಿರತೆಗಳೂ, ಕಿರುಬಗಳೂ ಅನುಸರಿಸುತ್ತವೆ.

………………………………………………………………………….

ಪ್ರ. ೨. ಹಾವುಗಳು ಪೊರೆ ಬಿಡುವುದು ಏಕೆ?

ಹಾವಿನ ದೇಹ ವಿನ್ಯಾಸ ನಮ್ಮಂತೆ ಇಲ್ಲ. ಚರ್ಮದ ಒಳಗಿರುವ ದೇಹವು ಬೆಳೆಯುತ್ತೆ, ಆದರೆ ಚರ್ಮವು ಬೆಳೆಯುವುದಿಲ್ಲ. ಹಾಗಾಗಿ ಕಾಲಕಾಲಕ್ಕೆ ಬಟ್ಟೆ ಚಿಕ್ಕದಾದ ಹಾಗೆ ಬಟ್ಟೆ ಬದಲಿಸುವಂತೆ ಹಳೆ ಚರ್ಮವನ್ನು ತೊರೆಯುತ್ತೆ. ಇದಕ್ಕೆ Ecdysis ಎಂದು ಹೆಸರು.

* ಹಾವುಗಳು ಮಾತ್ರವಲ್ಲ, ಹಾವುಗಳಂತೆ exoskeleton ಉಳ್ಳ ಎಲ್ಲಾ ಸರೀಸೃಪಗಳೂ, ಕೀಟಗಳೂ ಪೊರೆ ಬಿಡುತ್ತವೆ.
………………………………………………………………………….

 ೩. ಸೊಳ್ಳೆಗಳು ಗುಯ್ಗುಟ್ಟುವುದು ಏಕೆ?

ಸೊಳ್ಳೆಗಳು ಕಂಠದಿಂದ ಶಬ್ದ ಮಾಡುವುದಿಲ್ಲ. ಗುಯ್ಗುಟ್ಟುವ ಶಬ್ದ ಬರುವುದು ರೆಕ್ಕೆಗಳಿಂದ. ಸೊಳ್ಳೆಗಳ ರೆಕ್ಕೆಗಳು ಒಂದು ಕ್ಷಣಕ್ಕೆ ಆರು ನೂರು ಸಲ ಬಡಿದುಕೊಳ್ಳುತ್ತೆ. ಇದರ ಪರಿಣಾಮವೇ ಗುಯ್‍ಯ್….

* ದುಂಬಿ, ಜೇನು, ನೊಣ – ಎಲ್ಲವೂ ರೆಕ್ಕೆ ಬಡಿದು ಸದ್ದು ಮಾಡುವ ಹುಳುಗಳೇ.

………………………………………………………………………….

ಪ್ರ. ೪. ‘ಮುಟ್ಟಿದರೆ ಮುನಿ’ಯು ಮುನಿಯುವುದೇಕೆ?

ಮುಟ್ಟಿದರೆ ಮುನಿ – Mimosa pudica ಗಿಡದ ಎಲೆಗಳ ಜೀವಕೋಶಗಳು ಸೂಕ್ಷ್ಮವಾಗಿದ್ದು, ಕಿಂಚಿತ್ ಒತ್ತಡ ವ್ಯತ್ಯಾಸವಾದರೂ ಮಡಚಿಕೊಂಡು ಬಿಡುತ್ತೆ. ಸಸ್ಯಶಾಸ್ತ್ರಜ್ಞರು ಇದನ್ನು defence mechanism ಎಂದೂ ಶಂಕಿಸುತ್ತಾರೆ. ಹುಳು ಹುಪ್ಪಟೆಗಳಿಂದ, ಮೇಯಲು ಬಂದ ಪ್ರಾಣಿಗಳಿಂದ ತಪ್ಪಿಸಿಕೊಳ್ಳಲು ಎಲೆಗಳನ್ನು ಮಡಚಿಕೊಂಡರೆ ತನ್ನಲ್ಲಿರುವ ಮುಳ್ಳು ಆ ಪ್ರಾಣಿಗೆ ಚುಚ್ಚಿ ಪಾರಾಗಬಹುದು. ಇದೊಂದು ಸಸ್ಯಲೋಕದ ವಿಸ್ಮಯ ಜೀವಿ.
…………………………………………………………………………..

ಪ್ರ. ೫. ಆನೆಗಳು ವಿಪರೀತ ಲದ್ದಿ ಹಾಕುವುದು ಯಾಕೆ?

ಆನೆಗಳ ಜೀರ್ಣಶಕ್ತಿ ತೀರ ಕಡಿಮೆ. ಅದೇ ಕಾರಣಕ್ಕಾಗಿ ವಿಪರೀತ ತಿನ್ನುತ್ತೆ. ದಕ್ಕುವುದು ವಿಪರೀತ ಕಮ್ಮಿ.

* ಆನೆಯ ಜೀರ್ಣಶಕ್ತಿ ಕಡಿಮೆಯೆನ್ನುವುದಕ್ಕೆ ಸಾಕ್ಷಿ, ಅದರ ಲದ್ದಿಯಲ್ಲಿ ಹುಲ್ಲುಕಡ್ಡಿಗಳು, ಎಲೆ ಚೂರುಗಳು ಹಾಗ್‍ಹಾಗೇ ಇರುತ್ತೆ.

…………………………………………………………………………..

ಪ್ರ. ೬. ಅರಣ್ಯದಲ್ಲಿ ಪ್ಲಾಸ್ಟಿಕ್ ಯಾಕೆ ಬಿಸಾಡಬಾರದು?

ಗಿಡಗಳಿಗೆ ಸಾರಜನಕ ದೊರಕುವುದು ಮಣ್ಣಿನಿಂದ, ಪ್ಲಾಸ್ಟಿಕ್ ಅದನ್ನು ತಡೆಹಿಡಿದು ಬಿಡುತ್ತೆ. ಯಾವುದೇ ಪ್ರಾಣಿಯೂ, ಮನುಷ್ಯನನ್ನೂ ಸೇರಿಸಿ, ಪ್ಲಾಸ್ಟಿಕ್‍ಅನ್ನು ಜೀರ್ಣಿಸಿಕೊಳ್ಳಲು ಅಸಮರ್ಥ. ಪ್ಲಾಸ್ಟಿಕ್ ವಸ್ತುವು ಕರುಳುಗಳನ್ನು ಬ್ಲಾಕ್ ಮಾಡಿಬಿಡುತ್ತೆ. ಇಂದು ಅರಣ್ಯದಲ್ಲಿ ಬಹುತೇಕ ಪ್ರಾಣಿಗಳ ಸಾವಿಗೆ ಪ್ಲಾಸ್ಟಿಕ್ ಕಾರಣ.

* ಎಂಥಾ ಗಟ್ಟಿಯಾದ ಮರವನ್ನೇ ತಿಂದು ಮುಗಿಸುವ ಗೆದ್ದಲು ಹುಳು ಕೂಡ ಪ್ಲಾಸ್ಟಿಕ್ ಅನ್ನು ತಿನ್ನಲಾಗುವುದಿಲ್ಲ.

…………………………………………………………………………..

ಪ್ರ. ೭. ನದಿ ನೀರು ಸಿಹಿ, ಮಳೆ ನೀರು ಸಿಹಿ, ಅಂತರ್ಜಲ ಸಿಹಿ – ಮುನ್ನೀರು (ಈ ಮೂರೂ ಸೇರಿ ಆಗುವುದು = ಸಮುದ್ರ) ಮಾತ್ರ ಉಪ್ಪು. ಯಾಕೆ?

ಭೂಮಿ ಸೃಷ್ಟಿಯಾದಾಗ ವರ್ಷಾನುಗಟ್ಟಲೆ ಮಳೆಗರೆದಾಗ ಸಾಗರಗಳು ಸೃಷ್ಟಿಯಾದವು. ಉಲ್ಕಾಪಾತಗಳಿಂದಾದ ಬೃಹದ್ಬಾವಿಗಳಲ್ಲಿ ಅಡಗಿದ್ದ ಉಪ್ಪಿನಂಶವು (ಎಲ್ಲಾ ಬಗೆಯ ಉಪ್ಪು) ಸಾಗರದ ನೀರಿನಲ್ಲಿ ಕರಗಿ ಹೋದವು. ಹಾಗೆ ಕರಗಿ ಹೋಗಿ, ಸೂರ್ಯನ ತಾಪಕ್ಕೆ ತಳಹೊಕ್ಕವು. ಅದೇ ತಾಪಕ್ಕೆ ನೀರು ಮಾತ್ರ ಆವಿಯಾಗಿ ಮತ್ತೆ ಮೋಡವಾಗಿ ಮಳೆಗರೆಯುವುದು. ಹಾಗೆ ಮಳೆಯಾಗಿ ಸುರಿಯುವ ನೀರು, ಈ ಬೃಹದ್ಬಾವಿಗಳಲ್ಲದ ಸ್ಥಳಗಳಲ್ಲಿ ಬಿದ್ದಾಗ ಅವು ಹರಿದು ಹೋಗುವ ಝರಿ ತೊರೆ ನದಿ ಕೆರೆಗಳಾದವು. ಅಲ್ಲಿ ಉಪ್ಪಿನಂಶವಿಲ್ಲ. ಭೂಮಿಯ ಸೃಷ್ಟಿಯ ಸಮಯದಲ್ಲಿ ಉಂಟಾದ ಬಾವಿಗಳಲ್ಲಿ ಉಪ್ಪಿನಂಶವಿರುವುದು ಸುಮಾರು ಐವತ್ತು ಮಿಲಿಯನ್ ಬಿಲಿಯನ್ ಟನ್‍ಗಳು ಎನ್ನಲಾಗಿದೆ.

* ಸಮುದ್ರದ ನೀರು ಮೊದಲ ಮಳೆಯಿಂದಲೂ ಉಪ್ಪಾಗಿಯೇ ಇದೆ.

…………………………………………………………………………..

ಪ್ರ. ೮. ಮರಕುಟುಕ ಹಕ್ಕಿ ಯಾಕೆ ಮರವನ್ನು ಕುಟುಕುತ್ತೆ?

ಅನೇಕರು ಮರಕುಟುಕ ಪಕ್ಷಿಯು ಮರದ ಚೂರನ್ನು ತಿನ್ನುತ್ತೆ ಎಂದು ನಂಬಿದ್ದಾರೆ. ಆದರೆ, ಮರಕುಟುಕವು ಹುಳುಗಳನ್ನು ತಿನ್ನುವ ಹಕ್ಕಿ. ಸತ್ತು ಹೋದ ಮರವನ್ನು ಹೆಚ್ಚು ಬಯಸುತ್ತೆ. ಯಾಕೆಂದರೆ ಸತ್ತ ಮರದ ಮೇಲೆ ಹುಳುಗಳು ಹೆಚ್ಚಿರುತ್ತೆ. ಅಂಥಾ ಮರದಲ್ಲಿ ಗೂಡನ್ನು, ಅದರಲ್ಲೂ ಸಣ್ಣ ಸಣ್ಣ ಪೊಟರೆಗಳನ್ನು ಮಾಡುವ ಸಲುವಾಗಿ ಮರವನ್ನು ಕುಟುಕುತ್ತೆ. ಜೊತೆಗೆ, ಮರವನ್ನು ಕುಟುಕುವ ಸದ್ದು ಇವುಗಳಲ್ಲಿ ಸಂಭಾಷಣೆಯ ರೀತಿಯೂ ಕೂಡ!!
…………………………………………………………………………..

ಪ್ರ. ೯. ಹಲ್ಲಿಗಳು ಬಾಲಗಳನ್ನು ಕಳಚುವುದೇಕೆ?

ಇದಕ್ಕೆ ಆಟೋಟಮಿ ಎಂದು ಹೆಸರು. ಅಂದರೆ ತನ್ನ ಒಂದು ಅಂಗವನ್ನು ಸ್ವೇಚ್ಛೆಯಿಂದ ಕಳಚಿಬಿಡುವುದು. ಹಾಗೆ ಕಳಚಿಕೊಂಡ ಅಂಗವು ಮತ್ತೆ ಬೆಳೆಯುವುದು. ಇದಕ್ಕೆ regeneration ಎಂದು ಹೆಸರು. ಶತ್ರು ಪ್ರಾಣಿಯಿಂದ ತಪ್ಪಿಸಿಕೊಳ್ಳಲು, ಶತ್ರುವನ್ನು ಮೂರ್ಖಗೊಳಿಸಲು ಹಲ್ಲಿಯು ಹೂಡುವ ತಂತ್ರವು ಈ ಆಟೋಟಮಿ.

* ಹಲ್ಲಿಯು ಬಾಲ ಕಳಚುವಂತೆ ಸ್ಯಾಲಮಾಂಡರ್ ಕೂಡ ಕಳಚುತ್ತೆ. ಅನೇಕ ಏಡಿಗಳು, ಜೇಡಗಳು ತಮ್ಮ ಕಾಲನ್ನೇ ಕಳಚಿಬಿಡುತ್ತವೆ.

…………………………………………………………………………..

ಪ್ರ. ೧೦. ಮುಂಗುಸಿಗೆ ಹಾವಿನ ವಿಷವೇಕೆ ತಗುಲುವುದಿಲ್ಲ?

ಇದು ತಪ್ಪು ನಂಬಿಕೆ. ಹಾವಿಗಿಂತ ಮುಂಗುಸಿಯು ವೇಗವಾಗಿರುತ್ತೆ, ಮತ್ತು ಚುರುಕಾಗಿರುತ್ತೆ. ಮುಂಗುಸಿಯು ಹಾವನ್ನು ಬೇಟೆಯಾಡಲೆಂದೇ ಹುಟ್ಟಿರುವ ಪ್ರಾಣಿ. ನೇರವಾಗಿ ಹಾವಿನ ತಲೆಯ ಮೇಲೆಯೇ ಎರಗಿ, ಹಾವಿನ ತಲೆಬುರುಡೆಯನ್ನು ಮುರಿಯುವಂತೆ ಕಚ್ಚುತ್ತೆ. ಮುಂಗುಸಿಯ ಹಲ್ಲುಗಳು ಗರಗಸದಂತೆ ಹರಿತವಾಗಿದ್ದು, ಹಾವಿನ ಪ್ರಾಕೃತ ಶತ್ರುವಾಗಿರುವುದರಿಂದ ಈ ಕೆಲಸದಲ್ಲಿ ಯಶಸ್ವಿಯಾಗುತ್ತೆ. ಕೆಲವು ಸಲ ಹಾವೂ ಗೆಲ್ಲುತ್ತೆ!

* ಮುಂಗುಸಿಯದೇ ಜಾತಿಯ (Herpestes) ಎಲ್ಲಾ ಪ್ರಾಣಿಗಳೂ ಹಾವುಗಳಂತಹ ಸರೀಸೃಪಗಳನ್ನೇ ಅವಲಂಬಿಸಿ ಬದುಕುವುದು ಆಹಾರಕ್ಕೆ.
…………………………………………………………………………..

‍ಲೇಖಕರು avadhi

October 17, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿರುತ್ತರದ ಉತ್ತರ, ರಾಜೇಶ್ವರಿ ತೇಜಸ್ವಿ

ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ...

ಅಂಬೇಡ್ಕರ್ ಇಲ್ಲಿದ್ದಾರೆ..

ಅಂಬೇಡ್ಕರ್ ಅವರ ಬರಹಗಳ ಎಲ್ಲಾ ಸಂಪುಟವನ್ನು ಉಚಿತವಾಗಿ ಕನಡದ ಓದುಗರಿಗೆ ಸಿಗಲಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈಗಾಗಲೇ ೫ ಸಂಪುಟಗಳನ್ನು...

’ಧರ್ಮ ನಿರಪೇಕ್ಷತೆ, ಕೋಮುವಾದ ಮತ್ತು ನಮ್ಮೆದುರಿನ ಸವಾಲುಗಳು’ – ಶಶಿಧರ ಭಟ್

ಶಶಿಧರ ಭಟ್ ಕುಮ್ರಿ ಧರ್ಮ ನಿರಪೇಕ್ಷತೆ ಮತ್ತು ಕೋಮುವಾದ ಎಂಬ ಶಬ್ದ ನನ್ನ ಕಿವಿಗೆ ಬಿದ್ದುದು ಯಾವಾಗ ಎಂಬ ಪ್ರಶ್ನೆಗೆ ನನ್ನ ಬಳಿ ಸರಳ...

2 ಪ್ರತಿಕ್ರಿಯೆಗಳು

 1. ಶಿವು.ಕೆ

  ಧನ್ಯವಾದಗಳು ಅರುಣ್, ನಿಮ್ಮ ಬ್ಲಾಗಿನಲ್ಲಿ ಅತ್ಯುತ್ಯಮ ಪರಿಸರ ಸಂಭಂದಿ ವಿಚಾರಗಳಿವೆ. ಇಂಥಹ ಬ್ಲಾಗ್ ಗಳೇ ನಮಗೆ ಬೇಕಿರುವುದು. ಹೀಗೆ ಬರೆಯುತ್ತಿರಿ. ನಿಮ್ಮ ಬ್ಲಾಗನ್ನು ಲಿಂಕಿಸಿಕೊಳ್ಳುತ್ತೇನೆ. ಈ ಬ್ಲಾಗ್ ತೋರಿಸಿಕೊಟ್ಟ ಅವಧಿ ಗೆ ಧನ್ಯವಾದಗಳು.

  ಶಿವು.ಕೆ

  ಪ್ರತಿಕ್ರಿಯೆ
 2. Gear

  ಮಹನೀಯರೇ
  ನನ್ನದೊಂದು ಪ್ರಶ್ನೆ, ನಮ್ಮ ದೇಶದ (ಬೇರೆ ದೇಶದಲ್ಲೂ ಇರಬಹುದು) ಗಂಡಸರು ಎಲ್ಲಿ ಬೇಕಲ್ಲಿ ಮೂತ್ರ ವಿಸರ್ಜನೆ ಮಾಡುವುದು ಯಾಕೆ?
  ವಂದನೆಗಳು
  Gee

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: