
ಜಿತೇಂದ್ರ ಬೇದೂರು
೧ ಮುಸ್ಸಂಜೆ
ಯೌವ್ವನದ ಕ್ಷಣದಲ್ಲಿ ಎಷ್ಟೊಂದು ಉರಿದಿದ್ದ
ಸೂರ್ಯ, ಈಗೇಕೋ ತಣ್ಣಗಾಗಿ ಹೋದ.
ಯಾರು ಸರಿಸಿದರೋ ಏನೋ
ಪಡುವಣ ಅಂಚ ಸೇರಿಹೋದ.
ಇದು ಪಕ್ಷಿ ಗೂಡು ಸೇರುವ ಹೊತ್ತು!
ಧುಮ್ಮಿಕ್ಕಿ ಹರಿದಿತ್ತು ಬಿಸಿರಕ್ತ,
ಆಗ, ಧಮನಿಯೊಳಗೆಲ್ಲ ರಭಸವಾಗಿ.
ಈಗ ಅಲ್ಲೇ ತೆವಳುತ್ತಿದೆ,
ತಣಿದು, ದಣಿದು, ಆರ್ಭಟವಡಗಿ.

ಸದ್ದು ಅಡಗಿದೆ ಈಗ,
ಶಿಥಿಲವಾಗಿದೆ ದೇಹ.
ಬದಲಾವಣೆಗೆ ಯಾರು ಕಾರಣರು?
ಕರೆ ತಂದು ನಿಲ್ಲಿಸಿದೆ ಕಾಲ,
ಯಾರಿಗೂ ಬೇಡದ ಕಗ್ಗತ್ತಲ ಎದುರು
ಇದು ಜೀವನದ ಮುಸ್ಸಂಜೆ ಹೊತ್ತು!
೨ ಒಂಟಿ ಮನಸು
ದಪ್ಪ ಗಾಜಿನ ಕನ್ನಡಕ,
ಪೊರೆಗಣ್ಣು, ದೃಷ್ಟಿ ಮಂಜು,
ದಣಿದ ದೇಹ, ಭಾವ ಶೂನ್ಯ…..
ಒಂಟಿಯಾದದ್ದು ಎಂದಿನಿಂದ?
ವರುಷ ಉರುಳಿತೆಂದು ಯಾರೋ
ಉಸುರಿದ ನೆನಪು,
ಉರುಳಿದ್ದು ಒಂದು ಯುಗವಲ್ಲವೇ?

ತಣ್ಣ ಕೈ ಹಿಡಿದು ನಡೆದದ್ದು ಏಳು ಹೆಜ್ಜೆ,
ಬೆಚ್ಚನೆಯ ಕನಸುಗಳು ನೂರು.
ಬಂಧಿಸಿತ್ತು ಪ್ರೀತಿಯ ಬೇರು.
ಬದುಕಿನುದ್ದಕ್ಕೂ,
ಪ್ರತಿ ಘಟನೆಯಲ್ಲೂ,
ಸೊಲ್ಲೆತ್ತದೆ ಸೋತೆ ನೀನು,
‘ಗಂಡು’ ದರ್ಪದಲಿ ಗೆದ್ದ ಗೆಲುವಿಗೆ,
ಈ ಏಕಾಂಗಿತನದ ಪ್ರತಿಕಾರವೇನು..?
0 ಪ್ರತಿಕ್ರಿಯೆಗಳು