ಮೆಟ್ಟುಗತ್ತಿ ಹೊಸಬಣ್ಣ ನಾಯ್ಕ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ..

ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ ನಮಗೆ ‘ಮೀನುಪೇಟೆಯ ತಿರುವಿನಲ್ಲಿ’ ಸಿಗುತ್ತಿದ್ದರು. ಇನ್ನು ಮುಂದೆ ಪ್ರತಿ ಶುಕ್ರವಾರ ‘ಅವಧಿ’ಯ ‘ನನ್ನ ಶಾಲ್ಮಲೆ’ ಅಂಕಣದಲ್ಲಿ ಸಿಗಲಿದ್ದಾರೆ.

|ಕಳೆದ ಸಂಚಿಕೆಯಿಂದ|

ಗೋವಿಂದಣ್ಣ ಹೇಳುವುದೆಲ್ಲ ಮುಗಿದು ನಾನು ಎಷ್ಟು ಹೊತ್ತಿಗೆ ಹೋದೇನು ಎಂಬಂತೆ ಹಿಂದುಗಡೆಯ ಮನೆಯಲ್ಲಿ ಇಷ್ಟು ಹೊತ್ತು ಕುಳಿತಿದ್ದನೋ ಏನೋ ಹೊಸಬಣ್ಣ ಮಾಸ್ತರ.. ಇದು ಮುಗಿಯದ ಕತೆ ಎಂಬಂತೆ ಅಸಹನೆಯ ಮುಖದಲ್ಲಿ ಸಾಲೆಯ ಶೆಡ್ಡಿನ ಕಿಬ್ಬಳಿಯಿಂದ ಅವಸರವಸರದವನಂತೆ ಒಳಬಂದ. ಆರಂಭದಲ್ಲಿ ನೋಡಿದ್ದ ಅವನನ್ನು ನಾನು ಗೋವಿಂದನೊಂದಿಗೆ ಮಾತಾಡುತ್ತ ಮರೆತೇಬಿಟ್ಟಿದ್ದೆ.

“ಇಕಾ ಗೋಯ್ದಾ.. ಈ ಹಲಸಿನ ಹಲಗೆಗೆ ಈ ಮಿಲಾಮಿನ ಕತ್ತಿ ಕುಳ್ಳಿಸಿಕೊಡು. ನಾನು ನಟ್ಟು ಬೋಲ್ಟು ಎಲ್ಲ ತಕ್ಕೊಂಡೇ ಬಂದೇನೆ. ದೊಡ್ಡ ಗಂಡಸು ಕುಳಿತು ತೆಂಗಿನಕಾಯಿ ಕೆರೆಯುವ ಹಾಗೆ ಒಂದೂವರೆ ಗೇಣು ಎತ್ತರ ಮತ್ತು ಹಲಗೆಯಿದ್ದಷ್ಟೂ ಅಗಲ ಆಗಬೇಕು ನೋಡು ಮಣೆ. ಕಟ್ಟಿಗೆ ಚೂರೂ ವೇಷ್ಟಾಗಬಾರದು. ಈ ಮೆಟ್ಟುಗತ್ತಿ ನನ್ನ ಅಳಿಯನಿಗೆ. ಅವನು ಸ್ವಲ್ಪ ದಪ್ಪ ಮತ್ತು ಎತ್ತರ. ನಿನ್ನ ಮಗ ಬತ್ತಿನೇನೋ ಅಂತ ಇಲ್ಲಿವರೆಗೆ ಕಾದೆ ಅಂವ ಬರಲಿಲ್ಲ. ನೀನೇ ನಾನು ಹೇಳಿದಂತೆ ಹೇಳಿ ಅವನ ಹತ್ರ ಮಾಡಿಸು. ಮಜಬೂತಾಗಬೇಕು ಮೆಟ್ಟುಗತ್ತಿ. ನಾ ಇನ್ನ ಬರ್ತೇನೆ. ನಿನ್ನ ಮಗನಿಗೆ ಫೋನ್ ಮಾಡ್ತೇನೆ ರಾತ್ರಿ” ಎಂದು ಹೇಳುತ್ತ ಹೊರಟು ಹೋದ.

ತಲೆಯೆತ್ತಿ ಅವನನ್ನು ನೋಡಿದ್ದರೆ ‘ಬರ್ತೇನೆ ಅಗಾ?’ ಎಂಬುದೊಂದು ಮಾತು ಅಥವಾ ಒಂದು ‘ಸಾಧಾರಣ ನಗು’ ವಿನಿಮಯ ಆಗ್ತಿತ್ತೋ ಏನೋ ನಮ್ಮಿಬ್ಬರ ನಡುವೆ. ನನಗೆ ಅವನನ್ನು ನೋಡಬೇಕು ಅನ್ನಿಸಲಿಲ್ಲ. ಹಾಗಾಗಿ ಹತಾರ ಅದ್ದುವ ಸಿಮೆಂಟು ಬಾನಿಯ ನೀರಿನಲ್ಲಿ ಅಲ್ಲೇ ಬಿದ್ದ ಒಂದು ಹಿಡಿಕಡ್ಡಿ ಹಾಕಿ ತಿರುಗಿಸುತ್ತ ಅಂವ ಹೋಗುವವರೆಗೂ ತಲೆ ಹಣಕಿಕೊಂಡು ಉಳಿದೆ ನಾನು.

ಕತ್ತುಮುಸಡಿ ಹೊಸಬಣ್ಣ ನಾಯ್ಕ ಹೈಸ್ಕೂಲು ಹೆಡ್‌ಮಾಸ್ತರ. ಅವನ ಹೆಂಡತಿಯೂ ಬೇರೆ ಹೈಸ್ಕೂಲಿನಲ್ಲಿ ವಿಜ್ಞಾನ ಕಲಿಸುವ ಶಿಕ್ಷಕಿ. ನಮ್ಮ ಕರಾವಳಿ ಜಿಲ್ಲೆಗಳ ಎಲ್ಲ ತಾಲೂಕಿನಲ್ಲೂ ಮನೆಗೆ ಎರಡೋ ಮೂರೋ ಶಿಕ್ಷಕರು ಇದ್ದೇ ಇರುತ್ತಾರೆ. ಮತ್ತವರು ಮೀಟಿಂಗು, ಎಲೆಕ್ಷನ್ ಡ್ಯೂಟಿ, ದಿನಾಚರಣೆ, ಸಭೆ ಅಂತ ಅಲ್ಲಲ್ಲಿ ಆಗಾಗ ಎದುರಾಗುತ್ತಲೇ ಇರುತ್ತಾರೆ. ಹಾಗಾಗಿ ಅವರ ಹೆಸರು ಪರಿಚಯ ಅಷ್ಟಾಗಿ ಇರದಿದ್ದರೂ ಇವರು ಶಿಕ್ಷಕರು ಎಂಬುದು ವೃತ್ತಿ ಬಾಂಧವರಿಗೆ ಗೊತ್ತಿರುತ್ತದೆ. ಹಾಗೆ ಇಷ್ಟೇ ಗೊತ್ತಿದ್ದವರು ನನಗೆ ಹೊಸಬಣ್ಣ ಮಾಸ್ತರ ಮತ್ತವನ ಹೆಂಡತಿ.

ಕೆಲವು ಕಾಲದ ಹಿಂದೆ ನಾನು ಬೆಳಿಗ್ಗೆ ಏಳೂವರೆಗೆ ಟೆಂಪೋ ಹತ್ತಿ  ದೂರದೂರಿನ ಶಾಲೆಗೆ ಹೋಗುವಾಗ ಈ ಮಾಸ್ತರನೂ ತನ್ನ ಹೆಂಡತಿಯನ್ನು ಅದೇ ಟೆಂಪೋಕ್ಕೆ ಹತ್ತಿಸಲು ಟೂ ವ್ಹೀಲರ್ ಮೇಲೆ ಬರುತ್ತಿದ್ದ. ಹತ್ತುವಾಗ ಕೈಯಲ್ಲಿ ಹತ್ತೋ ಇಪ್ಪತ್ತೋ ರೂಪಾಯಿ ಮುದುರಿ ಇಡುತ್ತಿದ್ದ. ಅವಳೂ ಮುಷ್ಟಿ ಮುಚ್ಚಿಕೊಂಡೇ ಅದನ್ನು ತಕ್ಕೊಳ್ಳುತ್ತಿದ್ದಳು. ಇದು ದಿನವಹಿಯ ಮಾತು. “ಟೆಂಪೋದವನಿಗೆ ಕೊಡಲು ಚಿಲ್ಲರೆ” ಎಂಬುದು ಎಲ್ಲರೂ ನಂಬಿಕೊಂಡ ಸಂಗತಿ.

ಖಾಯಂ ಕಿವಿನೋವೋ ಅಥವಾ ಮುಖ ಮರೆಮಾಚಲೋ ತಲೆತುಂಬ ಸ್ಕಾರ್ಫ ಕಟ್ಟಿಕೊಂಡಿರುತ್ತಿದ್ದ ಅವಳು ಯಾರೊಂದಿಗೂ ಮಾತನಾಡದೇ ಒಂದು ಮೂಲೆಯ ಕಿಟಕಿ ಹಿಡಿದು ಮುಖ ಹೊರಗಿಟ್ಟು ಕುಳಿತುಬಿಡುತ್ತಿದ್ದಳು. ಸದಾ ಆಕಾಶ ತಲೆ ಮೇಲೆ ಬಿದ್ದಂತಹ ಮೊಗ ಹೊತ್ತ, ಪೇಲವ ಭಾವದ ಆಕೆ ಯಾರು ಮಾತಾಡಿಸಿದರೂ ಆಂ.. ಹಾಂ.. ಹೊರತು ಹೆಚ್ಚಿಗೆ ಮಾತಾಡುತ್ತಿರಲಿಲ್ಲ. ‘ಸೊಕ್ಕು, ದುರಹಂಕಾರ, ಶಾಲೆಗೆಹೋಗಿ ಏನು ಕಲಿಸಿಯಾಳು ಒಂದೂ ಮಾತೇ ಆಡದ ಇವಳು’ ಹಾಗೆ ಹೀಗೆ ಅವಳ ಮೌನದ ಕುರಿತಾಗಿ ಮಾತುಗಳು ಹರಿದಾಡುತ್ತಿದ್ದವು ಟೆಂಪೋದಲ್ಲಿ.

ಈ ಮಾಸ್ತರ ಸುತ್ತಲಿನ ಊರಿಗೆಲ್ಲ ಹೋಗಿ ಕೌರವ, ಜರಾಸಂಧ, ಭೀಮ, ಕೀಚಕ ಮುಂತಾದ ಅಬ್ಬರದ ಯಕ್ಷಗಾನದ ಪಾರ್ಟು ಮಾಡುವುದರಲ್ಲಿ ಹೆಸರಾಗಿದ್ದ. ಅಷ್ಟೇ ಅಲ್ಲದೇ ತನ್ನ ಮಗಳನ್ನೂ ಉತ್ತಮ ಯಕ್ಷಗಾನ ಕಲಾವಿದೆಯನ್ನಾಗಿ ರೂಪಿಸಿದ್ದ. ಉತ್ತಮ ಪ್ರತಿಭೆಯೂ ಇದ್ದ ಆಕೆ ಭಾಷಣ, ಭರತನಾಟ್ಯ, ನಾಟಕ, ಡಾನ್ಸು, ಎಲ್ಲ ನಮೂನೆಯ ಕ್ರೀಡಾಕೂಟ ಹೀಗೆ ಎಲ್ಲದರಲ್ಲೂ ಬಹುಮಾನಿತಳಾಗಿ ಸ್ಥಳೀಯ ಪತ್ರಿಕೆಯಲ್ಲಿ ಆಗಾಗ ಸುದ್ದಿಯಾಗುತ್ತಿದ್ದಳು. ತನ್ನಪ್ಪನ ಶ್ರಮ ಇಲ್ಲದಿದ್ದರೆ ತಾನು ಇವೆಲ್ಲವನ್ನೂ ಸಾಧಿಸಲಾಗುತ್ತಿರಲಿಲ್ಲ ಎಂಬ ಬಗ್ಗೆ ಒಂದೆರಡು ಸಂದರ್ಶನವನ್ನೂ ಕೊಟ್ಟಿದ್ದಳು.

ಮದುವೆಗೆ ಬೆಳೆದ ಹೆಣ್ಣುಮಕ್ಕಳು ಹೀಗೆ ಆಟ ನಾಟಕ ಅಂತ ಪಾರ್ಟು ಹಚ್ಚಿ ಹೊರಡುವುದು ಸ್ವಲ್ಪ ಅಪರೂಪವೇ ನಮ್ಮ ಉತ್ತರಕನ್ನಡದ ಕರಾವಳಿಯಲ್ಲಿ. ಹಾಗಾಗಿ ಇದೊಂದು ಗುರುತಿಸುವ ಸುದ್ದಿಯೇ ಆಗಿ ಹೆಂಗಸರಿಗಂತೂ ಅವಳ ಪಾರ್ಟು ನೋಡಿದಾಗಲೆಲ್ಲ ಉಂಡು ತಿಂದು ಮಲಗುವ, ಮಕ್ಕಳ ಮೇಲೆ ಕಾಳಜಿ ಇಲ್ಲದ ತಮ್ಮ ತಮ್ಮ ಗಂಡಂದಿರು ಈ ಹೊಸಬಣ್ಣನ ಮುಂದೆ ಎಂಥಕ್ಕೂ ಉಪಯೋಗಿಲ್ಲದ ಬಿಕನಾಸಿಗಳಾಗಿ ತೋರುತ್ತಿದ್ದರು.

ಹೀಗಿರುವಾಗಲೊಮ್ಮೆ ‘ಎಲ್ಲ ಬಣ್ಣ ಮಸಿ ನುಂಗಿತಣ್ಣ’ ಎಂಬ ಸಂಗತಿಯೊಂದಾಯಿತು.

ನಮ್ಮ ಮನೆ ಎದುರು ರಸ್ತೆಯಾಚೆ ಸತ್ಯಾಗ್ರಹ ಸ್ಮಾರಕ ವಿದ್ಯಾಲಯದ ಹತ್ತಾರು ಎಕರೆ ಸಪಾಟು ಬಯಲಿದೆ. ಹೊಸತಾಗಿ ವಾಹನ ಕೊಂಡವರೆಲ್ಲ ಚಾಲನೆಯ ಹಿಡಿತಕ್ಕಾಗಿ ಬೆಳಿಗ್ಗೆ ಮತ್ತು ಸಂಜೆ ಇಲ್ಲೇ ಬಂದು ರೌಂಡು ಹಾಕೋದು. ಆದರೊಂದು ದಿನ ಮಧ್ಯಾಹ್ನ ಎರಡು ಗಂಟೆಯ ಹೊತ್ತಿಗೇ ಒಂದು ಕೆಂಪು ಪ್ಲೆಷ಼ರ್ ಟೂ ವೀಲ್ಹರ್ ಅಲ್ಲಿ ಸುತ್ತು ಹಾಕುವುದು ನಮ್ಮನೆ ಮಾಳಿಗೆಯಿಂದ ಕಾಣುತ್ತಿತ್ತು. ಇಷ್ಟು ರಣ ಬಿಸಿಲಿಗೆ ಯಾರಪ್ಪ ಹೀಗೆ ಅಂದುಕೊಂಡರೆ ಅದರ ಮರುದಿನ ಮತ್ತರದ ಮರುದಿನವೂ ಹಾಗೆಯೇ. ಜೊತೆಗೆ ಜೋರುಜೋರು ಮಾತು ಮತ್ತು ಬೈಗುಳ ಮತ್ತು ಹೆಣ್ಣಿನ ಅಳುವೂ. ನಾಲ್ಕನೆಯ ದಿನ ಕೂತೂಹಲವಾಗಿ ರಸ್ತೆದಾಟಿ ಹೋಗಿ ಹೈಸ್ಕೂಲಿನ ದಣಪೆಯಾಚೆ ಮರಗಳ ಮರೆಯಲ್ಲಿ ನಿಂತು ನೋಡಿದರೆ ಇದೇ ಈ ಹೊಸಬಣ್ಣ ಮತ್ತವನ ಹೆಂಡತಿ. 

ನಾನು ನೋಡುವಾಗ ಮಾಸ್ತರ ಗಾಡಿ ಒಂದು ಬದಿ ನಿಲ್ಲಿಸಿ ಹಾಡೇಹಗಲು ಆ ಬಯಲಲ್ಲಿ ಹೆಂಡತಿಯನ್ನು ಕೆಳಕ್ಕೆ ಕೆಡವಿ ಒಂದು ಕಾಲಲ್ಲಿ ಅವಳ ಅಡ್ಡ ಮೈ ಮೆಟ್ಟಿ ನಿಂತಿದ್ದ. ಎಡಗೈಯಲ್ಲಿ ಅವಳ ಚಂಡಿಕೆ ಜಗ್ಗಾಡುತ್ತ ಬಲಗೈಯಲ್ಲಿ ಅವಳ ಮುಖ ಮೂತಿ ನೊಡದೇ ಬಡಿಯುತ್ತಿದ್ದ. ಓರ್ವ ಶಿಕ್ಷಕನ ಬಾಯಲ್ಲಂತೂ ಬರಲೇಬಾರದ ಹೆಣ್ಣನ್ನು ಜರೆಯುವ ತೀರ ಕೆಳಮಟ್ಟದ ಹೊಲಸು ಬಯ್ಗುಳಗಳು ಅವನ ಬಾಯಿಂದ ಅಸ್ಖಲಿತವಾಗಿ ಹೊಮ್ಮುತ್ತಿದ್ದವು. ಇಷ್ಟಲ್ಲದೇ ಇನ್ನೂ ತೀಕ್ಷ್ಣ ಏಟಿಗಾಗಿ ಮತ್ತೆ ಆಚೀಚೆ ಕೋಲಿನಂತಹುದ್ದೇನಾದರೂ ಸಿಗಬಹುದೇನೋ ಎಂಬಂತೆ ಹುಡುಕುತ್ತಿದ್ದ. ಆತನ ಕಾಲು ಹಿಡಿಯುತ್ತ, ಕೈ ಮುಗಿಯುತ್ತ, ಬೇಡುತ್ತ ಅವಳು ಅವನ ಹೊಡೆತಕ್ಕೆ ಕೈ ಅಡ್ಡ ಹಿಡಿಯುತ್ತ ಅಳುತ್ತಿದ್ದಳು. ಇಬ್ಬರ ಬಗ್ಗೂ ಅಸಹ್ಯವಾಯಿತು ನನಗೆ..

ಈಗ ನಾನು ‘ಗಂಡಹೆಂಡತಿ ಸುದ್ದಿ ನನಗ್ಯಾಕೆ?’ ಅಂತ ಕಂಡೂ ಕಾಣದ ಹಾಗೆ ಹೋಗಿಬಿಡುವುದೋ’ ಅಥವಾ ‘ಕಂಡಿತು ನನಗೆ ನಿನ್ನ ಬಂಕುಡಿ’ ಅಂತ ದರ್ಶನವಾಗಿ ಬಿಡೋದೋ ಎಂಬ ಇಬ್ಬಗೆಯ ಗೋಜಲಾಯಿತು. ‘ಕುಟುಂಬ ದೌರ್ಜನ್ಯಕ್ಕೆ ತಡೆಯಾಗಿ ಕರೆಗಂಟೆಯನ್ನಾದರೂ ಒತ್ತು’ ಜಾಹೀರಾತು ನೆನಪಾಗಿ ನೋಡುವಾ ಏನಾಗುತ್ತದೆ ಅಂತ ಬೇರೆಯಾವುದೋ ಕಾರಣಕ್ಕೆ ಬಂದವಳ ಹಾಗೆ ಕಾಣಿಸಿಕೊಂಡು ಅವರ ಮುಂದಿನಿಂದ ಅವರನ್ನೇ ನೋಡುತ್ತ ಹಾದುಹೋದೆ.. ನನ್ನ ನೋಡಿದ್ದೇ ಹೊಸಬಣ್ಣನ ಮುಖದಲ್ಲಿ ತೀವ್ರ ಅಸಹನೆ.. ಮತ್ತವಳಲ್ಲಿ ಜೀವ ಹಿಡಿಯಾಗಿಸಿಕೊಂಡ ದುಃಖ, ಅಸಹಾಯಕತೆ ಎಲ್ಲವೂ.. ಸಾವರಿಸಿಕೊಂಡು ಹೋದ ಅವರು ಅದರ ಮರುದಿನದಿಂದ ಗಾಡಿ ಕಲಿಯಲು ಈ ಬಯಲಿಗೆ ಬರಲಿಲ್ಲ.

ನಂತರ ಗೊತ್ತಾದದ್ದೆಂದರೆ ಹೊಸಬಣ್ಣ ಮಾಸ್ತರ ತಾನು ಎರಡು ತಿಂಗಳಿಗೆ ನಿವೃತ್ತಿಯಾಗಲಿದ್ದು ಹೆಂಡತಿಗೆ ಇನ್ನು ಮುಂದೆ ಟೆಂಪೋದವರೆಗೆ ಅವಳೇ ಸ್ವತಃ ಹೋಗಲು ಹಳೆಯದೊಂದು ಟೂ ವ್ಹೀಲರ್ ಕಲಿಸಲು ಪ್ರಯತ್ನಿಸುತ್ತಿದ್ದ. ವಾರವಾದರೂ ಕಲಿಯದ ಅವಳ ಅಸಫಲತೆಗೆ ಸಿಟ್ಟು ಉಕ್ಕಿ ಹೀಗೆ ನಡುಬಯಲಲ್ಲಿ ಬಡಿದದ್ದು ಅವಳನ್ನು.

ಇವಳ್ಯಾಕೆ ಹೀಗೆ ಹೊಡೆಸಿಕೊಳ್ಳುತ್ತಿದ್ದಾಳೆ ಅವನಿಂದ..? ಕೈಲಾದಷ್ಟು ಪ್ರತಿಭಟನೆಯನ್ನೂ ಮಾಡುತ್ತಿಲ್ಲ ಎಂದು ಅವಳ ಮೇಲೆಯೂ ಆ ಕ್ಷಣಕ್ಕೆ ಸಿಟ್ಟು, ಅಸಹ್ಯ ಉಕ್ಕಿತ್ತು ನನಗೆ. ಸಾರ್ವಜನಿಕ ಸ್ಥಳದಲ್ಲಿ ಇಷ್ಟು ಚಿಕ್ಕ ಕಾರಣಕ್ಕೆ ಹೀಗೆ ಹಿಗ್ಗಾ ಮುಗ್ಗಾ ಹೆಂಡತಿಯನ್ನು ಬಡಿಯುವ ಇಂವ ಮನೆಯ ನಾಲ್ಕು ಗೋಡೆಯ ನಡುಮಧ್ಯ ಎಂಥಾ ಕ್ರೂರಿಯಾಗಿರಬಹುದು. ಇಲ್ಲಿ ಪ್ರತಿಭಟಿಸಿದರೆ ಮನೆಯಲ್ಲಿ ಕತ್ತಿ ಭರ್ಜಿ ಶಲ್ಯವೇ ಕಾದಿರಬಹುದೋ ಏನೋ ಅವಳಿಗೆ. ಹಾಗಾಗಿ ಹೀಗೆ ಏಟು ತಿನ್ನುತ್ತಿದ್ದಾಳೆ ತೆಪ್ಪಗೆ.

ಇದು ನಡೆದು ಈಗ ಐದಾರು ವರ್ಷದ ಮೇಲಾದರೂ ಅವಳು ಗಾಡಿ ಕಲಿತು ಎಲ್ಲೂ ಓಡಾಡಿದ್ದನ್ನು ನಾನು ನೋಡಲಿಲ್ಲ. ಸದಾ ನಡುಗುತ್ತ ಹೆದರಿಕೆಯಲ್ಲೇ ಬದುಕಿಬಾಳಿದ ಜೀವ ಸ್ವತಂತ್ರವಾಗಿ ಏನನ್ನಾದರೂ ಕಲಿಯೋದುಂಟೇ..? ಬೇಟೆಗೆ ಹೊತ್ತುಕೊಂಡು ಹೋದ ನಾಯಿ ಮೊಲ ಹಿಡಿದೀತೇ..?

ಇದಿಷ್ಟಾದ ಮೇಲೆ ನನಗೆ ಅವರ ಸಂಸಾರದ ಕುರಿತು ಕುತೂಹಲವಿಲ್ಲದಿದ್ದರೂ ಅವನ ಹೆಂಡತಿಯ ಕುರಿತು ಖೇದವಿದ್ದ ಕಾರಣಕ್ಕೆ ಅವರದೇ ಮನೆಯ ಅಕ್ಕಪಕ್ಕದವರಲ್ಲಿ ವಿಚಾರಿಸಲಾಗಿ ಹೊಸಬಣ್ಣನ ಕುರಿತು ತೀರ ನಿಕೃಷ್ಟ ಮಾತುಗಳು ಕೇಳಿಬಂದವು.. ಹಗಲೂ ರಾತ್ರಿ ಹೆಂಡತಿಯನ್ನು ಗುಲಾಮಳಂತೆ ದುಡಿಸಿಕೊಳ್ಳುತ್ತಿದ್ದ ಆತ ಬರೀ ಮನೆಯ ಕೆಲಸ ಅಷ್ಟೇ ಅಲ್ಲದೇ ತನ್ನ ತೋಟದಲ್ಲೂ ಅವಳನ್ನು ದುಡಿಸುತ್ತಿದ್ದ. ಮುಂಜಾನೆ ನಾಲ್ಕಕ್ಕೆ ಎಬ್ಬಿಸಿ ಬುಟ್ಟಿ ಕೊಟ್ಟು ರಸ್ತೆಯ ಸಗಣಿ ಹೆಕ್ಕಿಸುತ್ತಿದ್ದ, ತೋಟಪಟ್ಟಿಗೆ ನೀರು ಹಾಯಿಸಲು ಹಚ್ಚುತ್ತಿದ್ದ.. ಮಾರಾಟಮಾಡಲು ದಿನಕ್ಕೆ ಇಪ್ಪತ್ತು ಮೂವತ್ತು ತೆಂಗಿನಕಾಯಿ ಸುಲಿಸುತ್ತಿದ್ದ.. ತಪ್ಪಿದರೆ ಹೊಡೆತ ಬಡಿತ ಕಟ್ಟಿಟ್ಟದ್ದು..

“ಊರಿನ ಜನರಾದರೂ ಎಷ್ಟು ದಿನ ತಪ್ಪಿಸಲು ಹೋಗಿ ಅವನಿಂದ ಕೆಟ್ಟಮಾತು ಅನ್ನಿಸಿಕೊಂಡು ಬರುತ್ತಾರೆ..? ಪ್ರತಿಸಲ ಅವಳಿಗೆ ಬಡಿಯುವಾಗಲೂ ಮುಷ್ಟಿ ಕೂದಲು ಕೀಳುತ್ತಾನೆ ಅಂವ.. ತಲೆ ಪೂರ್ತಿ ಬೋಳಾಗಿದೆ.. ಹಾಗಾಗಿ ಪಾಪ ಖಾಯಂ ಸ್ಕಾರ್ಪು ಕಟ್ಟಿಕೊಂಡು ಹೋಗುತ್ತಾಳೆ.” -ನೋಡಿದವರೊಬ್ಬರು ಹೇಳುವಾಗ ಇಂತಹ ಷಂಡ ಗಂಡಸೂ ಇರುತ್ತಾನೆಯೇ ಲೋಕದಲ್ಲಿ ಅನ್ನಿಸಿತ್ತು ನನಗೆ.

ಪುರುಷನಿಗೆ ಸರಿಸಾಟಿಯಾಗಿ ಅಥವಾ ಅದಕ್ಕೂ ಹೆಚ್ಚೇ ಅನ್ನುವಷ್ಟು ಸಾರ್ವಜನಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಹೆಣ್ಣಿನಿಂದ ಹಿಡಿದು ತಳಸ್ತರದ ಕೂಲಿಗೆ ಹೋಗುತ್ತಿರುವ ಹೆಣ್ಣಿನವರೆಗೂ ಕೂಡ ಕಚೇರಿ ಉದ್ಯಮಕ್ಷೇತ್ರ ದಿನಗೂಲಿಯ ಸ್ಥಳ ಹೀಗೆ ಎಲ್ಲ ಕಡೆಗಳಲ್ಲಿ, ಹಾದಿಬೀದಿಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಪ್ರಯಾಣದ ಸಂದರ್ಭದಲ್ಲಿ ಸದಾ ಲೈಂಗಿಕ ಕಿರುಕುಳ, ಅತ್ಯಾಚಾರ ಮತ್ತು ಇವೆಲ್ಲಕ್ಕೂ ಸಹಕರಿಸದ ಕಾರಣಕ್ಕೆ ಮಾನಸಿಕ ಶೋಷಣೆಗಳು ಎದುರಾಗುತ್ತ ಮಹಿಳೆ ದಿನನಿತ್ಯವೂ ಕಂಗೆಡುತ್ತಲೇ ಬದುಕುವ ಸಂದರ್ಭ ಈ ಮುಂದುವರಿದ ಕಾಲಘಟ್ಟದಲ್ಲಿಯೂ ಕೂಡ ಹೆಚ್ಚುತ್ತಲೇ ಇದೆ. ಆರ್ಥಿಕ ಸ್ವಾತಂತ್ರ್ಯ ಎಂಬುದು ಮಹಿಳೆಯನ್ನು ಸಬಲ ಹಾಗೂ ಸ್ವಾಭಿಮಾನಿಯಾಗಿಸಿ  ವೈಚಾರಿಕ ಗಟ್ಟಿತನವನ್ನೂ ತಂದುಕೊಡುತ್ತದೆ ಎಂಬ ಮಾತು ಕೌಟುಂಬಿಕ ಹಿಂಸಾಚಾರ ಮತ್ತದರ ಭೀಕರತೆಗೆ ಗುರಿಯಾದ ಹೆಣ್ಣಿನ ಸಂದರ್ಭದಲ್ಲಿ ಹೇಳುವುದಾದರೆ ಅಪ್ಪಟು ಸುಳ್ಳು ಮಾತು.

ಓರ್ವ ಶಿಕ್ಷಕಿಯಾಗಿ ಇಪ್ಪತ್ತು ವರ್ಷದ ಸೇವಾವಧಿಯಲ್ಲಿ ನನ್ನ ನೋಟಕ್ಕೆ ಸಿಕ್ಕ ಪ್ರಕಾರ ನೂರಕ್ಕೆ ಮೂವತ್ತರಷ್ಟು ಉದ್ಯೋಗಸ್ಥ ಮಹಿಳೆಯರಿಗೆ ಅದರಲ್ಲೂ ಪ್ರಮುಖವಾಗಿ ಶಿಕ್ಷಕಿಯರಿಗೆ ತಮ್ಮ ವೇತನ ಯಾವ ಬ್ಯಾಂಕಿನಲ್ಲಿ ಆಗುತ್ತದೆ ಎಂಬುದೂ ಗೊತ್ತಿಲ್ಲ.. ಹಳ್ಳಿ ಕಡೆಯಂತೂ ಐವತ್ತರಷ್ಟು ಶಿಕ್ಷಕಿಯರು ಅವರ ವೇತನದ ಪಾಸ್ ಪುಸ್ತಕ ಹಾಗೂ ಚೆಕ್ ಪುಸ್ತಕವನ್ನು ವರ್ಷಕ್ಕೊಮ್ಮೆಯೂ ಮುಟ್ಟಿ ನೋಡುವುದು ಸುಳ್ಳು. ಚೆಕ್ ಪುಸ್ತಕಕ್ಕೆ ಸಹಿ ಹಾಕಿ ಹಣ ತರೋದು ಗಂಡಂದಿರೇ ಆದ ಕಾರಣಕ್ಕೆ ಅಪರೂಪಕ್ಕೆ ಬ್ಯಾಂಕಿಗೆ ಹೋಗಿ ಸಾಲಪತ್ರಕ್ಕೆ ಅಥವಾ ಇನ್ಯಾವುದಕ್ಕಾದರೂ ಸಹಿಹಾಕಿದರೆ ತಂತ್ರಾಂಶ ಇವರ ಸಹಿಯನ್ನು ಇದು ನಿಮ್ಮದಲ್ಲ ಎಂದು ತಿರಸ್ಕರಿಸುತ್ತದೆ.

 ಮತ್ತಿಂಥ ಪರಿಸ್ಥಿತಿಯನ್ನು ನಮ್ಮೆಲ್ಲ ಉದ್ಯೋಗಸ್ಥೆಯರು ‘ಎಲ್ಲರೂ ಹಾಗೇ’ ಎಂಬ ಕಾರಣಕ್ಕೆ ಒಪ್ಪಿಕೊಂಡೂ ಬಿಟ್ಟಿದಾರೆ. ಚೂರು ದೊಡ್ಡ ಮೊತ್ತದ ಹಣ ಅವಶ್ಯಕತೆ ಬಿದ್ದರೆ ಸಾವಿರ ಕಾರಣ ಕೇಳುವ, ಖರ್ಚಾದ ಮೇಲೆ ಲೆಕ್ಕ ಬೇಡುವ ಗಂಡನ ಉಚಾಪತಿಯೇ ಬೇಡ ಎಂಬಂತೆ ಅವನದೇ ಜೇಬಿಂದ ಗೊತ್ತಾಗದ ಹಾಗೆ ಒಂದಿಷ್ಟು ಹಣ ಆಗೀಗ ಎಗರಿಸಿ ಅಷ್ಟಕ್ಕೇ ಸಮಾಧಾನಿಯಾಗುತ್ತಾರೆ. ಇದನ್ನು ನಾನು ಯಾವುದೋ ಒಂದು ವರ್ಗವನ್ನು ಹಳಿಯಲು ಅಥವಾ ಕೀಳಾಗಿಸಲು ಹೇಳುತ್ತಿಲ್ಲ.. ಅಪವಾದಗಳಿದ್ದೂ ಒಟ್ಟಾರೆಯಾಗಿ ಇಂಥ ಪರಿಸ್ಥಿತಿ ಇದೆ.. ಉದ್ಯೋಗಸ್ಥೆಯಾಗಿದ್ದು ಕೂಡ ಪರಾವಲಂಬಿಯಾಗಿದ್ದಾಳೆ ಮಹಿಳೆ ಈಗಲೂ ಎಂಬುದನ್ನು ಹೇಳಬೇಕಿದೆ ನನಗೆ.

ಹೆಣ್ಣು ಅಡುಗೆ, ಮಕ್ಕಳು ಮರಿ ಮನೆ ಸಂಭಾಳಿಸೋದು, ನೌಕರಿ ಇದಿಷ್ಟನ್ನು ಮಾಡಿಕೊಂಡು ಹೋದರೆ ನೆಮ್ಮದಿಯಾಗಿ ಇರುತ್ತದೆ ಮನೆ.. ಅವಳು ಗಂಡಿನ ನೆರಳು.. ಈ ನೆರಳೆಂದೂ ಸ್ವತಂತ್ರವಾಗಬಾರದು. ಒಪ್ಪಿಗೆ ಪಡೆಯದೇ ಹೇಳದೇ ಕೇಳದೇ ವರ್ಷಕ್ಕೊಮ್ಮೆಯಾದರೂ ಎಲ್ಲೂ ಹೋಗಬಾರದು.. ಹೋದರೆ ಪತಿಯ ಬೆನ್ನಿಗಷ್ಟೇ.. ಈ ನಿಯಮ ಮೀರಿದರೆ ಅವಳು ಹಾದಿ ತಪ್ಪಿ ಹೋಗುತ್ತಿದ್ದಾಳೆ ಎಂಬಂತೆಯೂ.. ತನ್ನ ಪುರುಷತ್ವಕ್ಕೆ ದೊಡ್ಡ ದಕ್ಕೆ ಈ ನಡೆ ಎಂದೂ ತಿಳಿಯುತ್ತಾನೆ ಗಂಡು.. ಹೆಣ್ಣು ಅಡಿಯಾಳಾಗಿದ್ದಷ್ಟೂ ಸಮಾಧಾನವಾಗಿರುತ್ತದೆ ಪುರುಷ ಮನಸ್ಥಿತಿ. ತನ್ನನ್ನು ಬೇಡಲಿ, ಕೇಳಲಿ, ಮರ್ಜಿಗೆ ಕಾಯಲಿ ಎಂದು ಸದಾ ಬಯಸುತ್ತಿರುತ್ತದೆ.

ಮನೆಯ ಎಲ್ಲ ನಿರ್ಧಾರಗಳು ಹೆಣ್ಣಿನ ಅನುಮತಿ ಸಾಯಲಿ ಅವಳ ಅಭಿಪ್ರಾಯ ಕೇಳುವಾ ಎಂಬ ಕನಿಷ್ಠ ಸೌಜನ್ಯಕ್ಕೂ ನಿಮಿತ್ತವಿಲ್ಲದೇ ಜರುಗುತ್ತವೆ.

ಉತ್ತಮ ಸೀರೆ ಕೊಳ್ಳಬೇಕೆಂದರೆ, ಅಥವಾ ಒಂದು ಕೊಳ್ಳುವಲ್ಲಿ ಎರಡು ಕೊಳ್ಳೋಣವೆನಿಸಿದರೆ, ಇಷ್ಟದ ವಸ್ತು ಕೊಳ್ಳೋಣವೆಂದರೆ ತಿಂಗಳಿಗೆ ಅರ್ಧ ಲಕ್ಷ ವೇತನ ಪಡೆದೂ ‘ಪ್ರಾಣಾದ ಪದ್ಮ ಪುರುಷನ’ ಪರ್ಮಿಷನ್‌ಗೆ ಕಾಯಬೇಕು… ಇಂತಹ ಸಾವಿರ, ಲಕ್ಷ ಘಟನೆಗಳು ಅನೂಚಾನವಾಗಿ ತಲೆಮಾರಿನಿಂದ ನಡೆದುಕೊಂಡು ಬರುತ್ತಿರುವುದನ್ನು ಪೋಷಿಸುವ, ಗಂಡಿನ ಎಲ್ಲಾ ಅಹಮಿಕೆಯನ್ನು ಸಹಿಸಿಕೊಳ್ಳಬೇಕು ಎಂಬ ಅಸಹಾಯಕತೆಯನ್ನು ಹೆಣ್ಣಿನಲ್ಲಿ ತುಂಬಿದ ಸಮಾಜದ ಪರಿಧಿಯೊಳಗಿದ್ದಾಳೆ ಅವಳು.

ದೌರ್ಜನ್ಯವನ್ನು ವಿರೋಧಿಸಿ ನಿಂತರೆ ಮನೆಯಿಂದ ಹೊರಹೋಗು ಅನ್ನುತ್ತದೆ ಕುಟುಂಬವರ್ಗ. ಹಕ್ಕಿಗಾಗಿ ಅಹವಾಲಿತ್ತರೆ, ನ್ಯಾಯಕ್ಕಾಗಿ ಹತ್ತಾರು ಕಡೆ ತಿರುಗಿದರೆ ವಿಷಯವನ್ನೇ ತಿರುಚಿ ನೇರ ಶೀಲಕ್ಕೆ ಕೈ ಹಾಕಿ ಸುಳ್ಳು ಸುಳ್ಳೇ ಅನೈತಿಕ ಸಂಬಂಧ ಕಟ್ಟಿ ಅವಳ ಬಾಯಿ ಮತ್ತು ಹಾದಿ ಎರಡನ್ನೂ ಮುಚ್ಚಿಸಲಾಗುತ್ತದೆ.

“ಇನ್ ಕ್ಯಾಮರಾ ಪ್ರೊಸೀಡಿಂಗ್” ನಂತಹ ವ್ಯವಸ್ಥೆ ಇರುವ ಉತ್ತಮ ಕಾನೂನಿನ ನೆರವು ಈಗಿದ್ದರೂ ನೂರಕ್ಕೆ ಹತ್ತು ಶೇಕಡಾ ಮಹಿಳೆಯರು ಕೂಡ ಕಾನೂನಿನ ನೆರವು ಪಡೆಯುತ್ತಿಲ್ಲ… ಇವೆಲ್ಲ ಮುಗಿದ ಮೇಲೆ  ಮತ್ತದೇ ಕೊಂಪೆಗೆ ಹೋಗಿ ಮತ್ತೆ ಇನ್ನೂ ಹೆಚ್ಚಿನ ಮಾನಸಿಕ ತೊಂದರೆ ಅನುಭವಿಸಬೇಕಲ್ಲ. ಸಮಾಜದ ಎದುರು ಕೋರ್ಟು ಕಚೇರಿ ಅಲೆದಾಡಿ ಬಂದವಳು ಅನ್ನಿಸಿಕೊಳ್ಳಬೇಕಲ್ಲ. ವಿಚ್ಚೇದನ ಪಡೆದು ಬಾಳುವ ಸ್ಥೈರ್ಯಕ್ಕೂ ಮನಸ್ಸು ಮಾಡದಿರಲು ಹೀಗೆಯೇ ನೂರು ಅಸಹಾಯಕತೆಗಳಿರುತ್ತದೆ ಹೆಣ್ಣಿಗೆ.

ಪ್ರತಿವರ್ಷ ನವೆಂಬರ್ ಇಪ್ಪತ್ತೈದರಂದು ವಿಶ್ವಸಂಸ್ಥೆ ಮಹಿಳಾ ದೌರ್ಜನ್ಯ ನಿರ್ಮೂಲನಕ್ಕೆ ಕರೆ ಕೊಡುತ್ತಿದೆ. ಎಷ್ಟು ಪ್ರಕರಣಗಳು ಬೆಳಕಿಗೆ ಬರುತ್ತಿವೆ? ಒಳಕೋಣೆಯಲ್ಲಿ. ಮತ್ತೆ ಬಯಲಲ್ಲಿ ಮಹಿಳೆಯನ್ನು ಮೆಟ್ಟುತ್ತಲೇ ಇದೆ ಗಂಡುವರ್ಗ. ಹೆಣ್ಣು ಅತ್ತು ಸುಮ್ಮನಿರುತ್ತಲೇ ಇದ್ದಾಳೆ. ಹೊರಗಡೆಯ ಲೈಂಗಿಕ ದೌರ್ಜನ್ಯ ಕಿರುಕುಳಗಳಿಂದ ಪಾರಾಗಲು ಕೆಲವಷ್ಟಾದರೂ ಪಾಡಾದ ಮಾರ್ಗಗಳಿವೆ. ಆದರೆ ವಿನಾಕಾರಣ ಒತ್ತಡ ಹೇರುವ, ಸದಾ ಸಂಶಯಿಸಿ ಮಾತಾಡುವ, ತನ್ನ ಅಸಹಾಯಕತೆ, ಅಸಹನೆ, ದರ್ಪವನ್ನು ಹೆಂಗಸರ ಮೇಲೆ ಹೇರುವ, ಸಿಟ್ಟು ಹಾಗೂ ಹತಾಷೆಯನ್ನು ಅವಳ ಮೇಲೆ ತೋರಿಸುವ ಒಳಗಿನ ಪುರುಷ ದೌರ್ಜನ್ಯಕ್ಕೆ ಸಾಕ್ಷಿ ಎಲ್ಲಿದೆ. ಹೆಚ್ಚೆಂದರೆ ಆರೋಪ ಪ್ರತ್ಯಾರೋಪದ ಹಂತದಲ್ಲೇ ನಿಂತುಬಿಡುತ್ತವೆ ಇವೆಲ್ಲ..

ಒಂದೇ ಮನೆಯ ಎರಡು ಹೆಣ್ಣು ಅಂದರೆ ಹೆಂಡತಿ ಹಾಗೂ ಮಗಳು ಇಬ್ಬರನ್ನೂ ಬೇರೆಬೇರೆ ದೃಷ್ಟಿಕೋನದಿಂದ ನೋಡುವ ಹೊಸಬಣ್ಣನಂಥವರು ನಮಗೆ ಅಲ್ಲಿಲ್ಲಿ ಸಿಗುತ್ತಲೇ ಇರುತ್ತಾರೆ. ಮಗಳಿಗೆ ಸಕಲ ಸೌಕರ್ಯಗಳ ಅನುಕೂಲ ಮಾಡಿಕೊಟ್ಟು ಅವಳು ಎಲ್ಲಾ ರಂಗದಲ್ಲಿ ಮುಂಚೂಣಿಗೆ ಬರಬೇಕೆಂದು ಬಯಸುವ ಓರ್ವ ಅಪ್ಪ ತನ್ನ ಹೆಂಡತಿಯನ್ನು ಆಳಿನಂತೆ ನಡೆಸಿಕೊಳ್ಳುವುದು ನಮಗೆ ಸಮಾಜದಲ್ಲಿ ಕಾಣದ ಸಂಗತಿಯೇನೂ ಅಲ್ಲ.

ಹೊಸಬಣ್ಣನ ಮಗಳಿಗೀಗ ಮದುವೆಯಾಗಿ ಆರು ತಿಂಗಳಾಗಿದೆಯಂತೆ. “ಹೂವಿನಂತೆ ಸಾಕಿದ್ದೆ ಮಗಳನ್ನು.. ತಾನು ಪೂಜೆ ಮಾಡುತ್ತಿದ್ದ ಕೊಗ್ರೆ ಬೊಮ್ಮಯ್ಯದೇವ ದೊಡ್ಡವ. ನನ್ನ ಕೈಬಿಡಲಿಲ್ಲ. ಅಳಿಯ ಬಂಗಾರದಂಥವ ಸಿಕ್ಕಿದಾನೆ. ಮಗಳಿಗೆ ಕಡ್ಡಿ ಕೆಲಸ ಮಾಡಲು ಬಿಡೋದಿಲ್ಲ. ಅಡುಗೇನೂ ತಾನೇ ಮಾಡುತ್ತಾನೆ. ಅವಳಿಗೆ ತೆಂಗಿನಕಾಯಿ ಕೆರೆಯಲು ಬರೋದಿಲ್ಲ. ಹಿಂದೆ ಇದ್ದ ಮೆಟ್ಟುಗತ್ತಿ ಚಿಕ್ಕದಂತೆ. ಈಗ ದೊಡ್ಡ ದೇಹದ, ಅಗಲ ಕುಂಡೆಯ ಅಳಿಯನಿಗೆ ಒಂದು ಹದಾ ಮೆಟ್ಟುಗತ್ತಿ ಅರ್ಜಂಟ್ ಬೇಕಿದೆ. ಬೇಗ ಮಾಡಿಕೊಡು” ಎಂದು ನನಗೆ ಕೇಳದಂತೆ ಗೋವಿಂದನ ಕಿವಿಯಲ್ಲಿ ಗುಸುಗುಸು ಮಾಡಿ ಹೋಗಿದ್ದ ಈಗಿಲ್ಲಿ ಹೊಸಬಣ್ಣ ನಾಯ್ಕ..

ಗೋವಿಂದನಿಗೆ ಗೊತ್ತಿಲ್ಲದ ಕಥೆಯೇನೂ ಅಲ್ಲ ಈ ಹೊಸಬಣ್ಣ ನಾಯ್ಕನದು. ಅವರವರ ಹಣೇಬರಹ. ಇನ್ನೊಬ್ಬರೇನು ಮಾಡಲಾಗುತ್ತದೆ ಅಲ್ವಾ ತಂಗೀ. ಎಂದು ಗೋಯ್ದಣ್ಣ ಹೊಸಬಣ್ಣ ನಾಯ್ಕ ಹೋದ ದಿಕ್ಕಿಗೆ ನೋಡಿ ಒಂದು ತಿರಸ್ಕಾರದ ನಗೆ ನಕ್ಕರೆ.. ನಾನು ಥೂ..! ಅಂತ ಅದೇ ದಿಕ್ಕಿಗೆ ಉಗಿದು ಇವನಿಗೆ ಬೇಗ ಸಾವು ಬರಬಾರದಿತ್ತೇ.. ಎಂದು ನನ್ನ ಜೀವನದಲ್ಲಿ ಮೊದಲಬಾರಿಗೆ ಒಬ್ಬನ ಸಾವಿಗಾಗಿ ಬೇಡಿಕೊಂಡೆ…

January 1, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ದಿಲ್ಲಿ ಹೈ ದಿಲ್ ಹಿಂದೂಸ್ತಾನ್ ಕಾ – 2’

‘ದಿಲ್ಲಿ ಹೈ ದಿಲ್ ಹಿಂದೂಸ್ತಾನ್ ಕಾ – 2’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ |ಕಳೆದ ಸಂಚಿಕೆಯಿಂದ|...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: