ಮೈನೇ ಚೋರಿ ಕರ್ದಿಯಾ

img_6629ವಿ ಆರ್ ಕಾರ್ಪೆಂಟರ್ ನಮ್ಮ ನಡುವಿನ ಭರವಸೆಯ ಕವಿ. ‘ನಾಲ್ಕನೇ ಗೋಡೆಯ ಚಿತ್ರಗಳು’ ‘ಸಿಗ್ನಲ್ ಟವರ್’ ಇವರ ಕವನ ಸಂಕಲನಗಳು. ಕಾರ್ಪೆಂಟರ್ ವೃತ್ತಿಯ ಉಪಮೆಗಳನ್ನು ಬಳಸುತ್ತಲೇ ಎಲ್ಲರ ಗಮನ ಸೆಳೆದ ಹುಡುಗ ನಂತರ ಕನ್ನಡ ಕಾವ್ಯಕ್ಕೂ ಉಳಿಪೆಟ್ಟು ನೀಡಿದ್ದಾನೆ.

ಕೇಂದ್ರ ಸಾಹಿತ್ಯ ಅಕಾಡೆಮಿ ಈತನ ಪ್ರತಿಭೆಯನ್ನು ಗುರುತಿಸಿ ಅಂತರ ರಾಜ್ಯ ಸಾಹಿತಿ ವಿನಿಮಯ ಯೋಜನೆಗೆ ಆಯ್ಕೆ ಮಾಡಿದೆ. ಸಧ್ಯದಲ್ಲಿಯೇ ಈತ ಕಾವ್ಯದ ಕಡತದೊಂದಿಗೆ ಡೆಹ್ರಾಡೂನ್ ಗೆ ತೆರಳಲಿದ್ದಾನೆ.

-ವಿ.ಆರ್.ಕಾರ್ಪೆಂಟರ್

ಅಷ್ಟೇನು ಎತ್ತರವಿರದ, ಕ್ರಾಪು ಕೂದಲು, ಉದ್ದ ಮೂಗಿನ, ತಕ್ಷಣಕ್ಕೆ ಸುಲಭಕ್ಕೆ ಸಿಗುವ ಹಾಗೆ ಕಾಣುವ, ಉಡಾಫೆ ಸಿಟ್ಟಿನ, ಜಾಗರೂಕತೆಯ ಮನುಷ್ಯ ನನ್ನಪ್ಪ. ನನಗೆ ಬುದ್ಧಿ ಬೆಳದಂದಿನಿಂದ ಅವನು ಅರ್ಧ ಅಂಗುಲದ ಗಡ್ಡ-ಮೀಸೆಯನ್ನು ಬಿಟ್ಟಿರಲಿಲ್ಲ. ದಿನವೂ ಅಲ್ಲದಿದ್ದರೂ ವಾರಕ್ಕೆ ಮೂರುನಾಲ್ಕು ಬಾರಿಯಾದರೂ ಶೇವ್ ಮಾಡಿಕೊಳ್ಳುತ್ತಿದ್ದ. ಒಂದು ಬ್ಲೇಡ್ ತಂದರೆ ಅದು ಸವೆದುಹೋಗಿದ್ದರೂ ಕೂಡ ಅದರಲ್ಲೇ ‘ಪರ್, ಪರ್…’ ಎಂದು ಸದ್ದು ಮೂಡುವಂತೆ ಗಡ್ಡ ಕೆರೆದುಕೊಳ್ಳುತ್ತಿದ್ದ. ಮೀಸೆಯನ್ನು ಕತ್ತರಿಯಿಂದ ಕಾಲು ಇಂಚಿಗೂ ಕಡಿಮೆ ಎನ್ನುವಂತೆ ಕತ್ತರಿಸಿಕೊಳ್ಳುತ್ತಿದ್ದ. ಅವನು ಡಾ. ರಾಜ್ ಕುಮಾರ್ರಾ ನನ್ನು ಸ್ವಲ್ಪ ಹೆಚ್ಚಿಗೆ ಅನ್ನಿಸುವಷ್ಟು ಇಷ್ಟಪಡುತ್ತಿದ್ದ. ಆದ್ದರಿಂದಲೇ ಯಾವಾಗಲೂ ರಾಜ್ರಾ ಕುಮಾರ್ ‘ಸಂಪತ್ತಿಗೆ ಸವಾಲ್’ ಚಿತ್ರದಲ್ಲಿ ಮಾಡಿಸಿದ್ದ ಕಟಿಂಗ್ಅನ್ನೇ ಮಾಡಿಸುತ್ತಿದ್ದ.

1813253460_6fcb40a7ac

ನಾನು ಚಿಕ್ಕವನಿದ್ದಾಗ ಅವನು ತೊಡುತ್ತಿದ್ದ ಬಟ್ಟೆಯನ್ನು ಒಗೆದರೂ, ಒಗೆಯದೇ ಇದ್ದರೂ, ಇಸ್ತ್ರಿ ಮಾಡಿದಂತೆ ಕಾಣಿಸಬೇಕಾಗಿತ್ತು. ಅಷ್ಟೇ. ಇಲ್ಲವಾದರೆ ಅವನ ಅಂದಿನ ಮೂಡ್ ಸರಿಯಾಗಿರುತ್ತಿರಲಿಲ್ಲ. ಆದರೂ ಅವನು ತನ್ನ ಬಟ್ಟೆಯನ್ನು ಎಂದಿಗೂ ಇಸ್ತ್ರಿಗೆ ಕೊಡಲಿಲ್ಲ. ಅವನೇ ತನ್ನ ನಾಲೈದು ಶರ್ಟ್, ಪ್ಯಾಂಟ್ ಗಳನ್ನು ಇಸ್ತ್ರಿ ಮಾಡಿದಾಗ ಮಡಚುವಂತೆ ಮಡಚಿ, ತಲೆದಿಂಬಿನ ಅಡಿಗಿಟ್ಟುಕೊಂಡು ಮಲಗಿ ಅವುಗಳಿಗೆ ಗೆರೆ ಮೂಡಿಸುತ್ತಿದ್ದ. ಬಟ್ಟೆಯನ್ನು ಇಸ್ತ್ರಿಗೆ ಇಟ್ಟ ದಿನ ಯಾರನ್ನೂ ಹತ್ತಿರಕ್ಕೆ ಸೇರಿಸುತ್ತಿರಲಿಲ್ಲ. ನಾವ್ಯಾರಾದರೂ ಆ ಕಡೆ ಸುಳಿದರೆ ಸಣ್ಣಗೆ ರೇಗಿ ಕಳುಹಿಸುತ್ತಿದ್ದ. ಅವನದೇ ಆದ ಒಂದು ಕಪ್ಪು ಕಂಬಳಿ ಇತ್ತು. ಅದನ್ನು ಹೊದ್ದುಕೊಂಡು ನೇರವಾಗಿ ಅಂದರೆ ತನ್ನ ದೇಹದ ಭಾರವನ್ನೆಲ್ಲಾ ತಲೆದಿಂಬಿನ ಮೇಲೆಯೇ ಹಾಕುತ್ತಿದ್ದೇನೇನೋ ಎನ್ನುವ ದಾಟಿಯಲ್ಲಿ, ದೇಹವನ್ನು ಸ್ವಲ್ಪವೂ ಕದಲಿಸದೇ ಮಲಗುತ್ತಿದ್ದ. ರಾತ್ರಿ ಮಲಗಿದವನು ಬೆಳಗ್ಗೆ ಎದ್ದಾಗ ಕೂಡ ಹಾಗೆ ಇರುತ್ತಿದ್ದ. ಚಾಪೆಯ ಮೇಲೆ ಹಾಸಿಕೊಳ್ಳುತ್ತಿದ್ದ ಬೆಡ್ ಶೀಟ್ ಕೂಡಾ ಬಯಲು ಪ್ರದೇಶದಂತೆ ಎಲ್ಲೂ ಉಬ್ಬು ತಗ್ಗುಗಳೇಳದೆ ಸಮತಟ್ಟಾಗಿರುತ್ತಿತ್ತು. ಬೆಳಗ್ಗೆ ಎದ್ದವನೇ ತಲೆದಿಂಬನ್ನು ಪಕ್ಕಕ್ಕೆ ಸರಿಸಿ ಬಟ್ಟೆಗಳನ್ನು ಕೈಗೆತ್ತಿಕೊಂಡು ಪರೀಕ್ಷಿಸುತ್ತಿದ್ದ. ಗೆರೆಗಳೇನಾದರೂ ಸರಿಯಾಗಿ ಮೂಡಿರದಿದ್ದರೆ ಹೆಬ್ಬೆರಳಿನಿಂದ ತೀಡುತ್ತಿದ್ದ. ಗೆರೆ ಮೂಡುವವರೆಗೂ ಬಿಡುತ್ತಿರಲಿಲ್ಲ. ಅವನ ಬಲಗೈನ ಹೆಬ್ಬೆರಳಿನ ಉಗುರನ್ನು ಸ್ವಲ್ಪ ಬಿಟ್ಟು ಬಾಣದ ಆಕಾರದಲ್ಲಿ ಕತ್ತರಿಸುತ್ತಿದ್ದರಿಂದ ಅದು ಬಟ್ಟೆ ತೀಡಲು ಸಹಕಾರಿಯಾಗಿತ್ತು. ಕೆಲವು ಸಾರಿ ಅವನು ತೀಡುತ್ತಿದ್ದ ರಭಸಕ್ಕೆ ಉಗುರಿನ ಒಂದು ಕೋನ ಸವೆದು ಹೋಗಿ, ಅದು ಬೆಳೆಯುವವರೆಗೂ ಮುಕ್ಕಾದ ಬಾಣದ ಹಾಗೆ ಕಾಣಿಸುತ್ತಿತ್ತು.

ಸ್ನಾನ ಮಾಡಲು ಕುಳಿತರೂ ಕೂಡ ಅಷ್ಟೆ. ಬೆಣಚು ಕಲ್ಲಿನಿಂದ ತೀಡಿಕೊಂಡು ಕುಳಿತರೆ ಏಳುವುದು ಹಲವು ಗಂಟೆಗಳ ನಂತರವೇ. ಅಮ್ಮ ‘ಏನ್ ಚರ್ಮ ಸುಲ್ಕಂಡ್ ಕೂತಿದಿಯಾ? ಎದಳು ಸಾಕು’ ಎಂದರೂ ಅವನದೇ ಲೋಕದಲ್ಲಿ ತೀಡುವುದು ಮಾತ್ರ ನಡೆದೇ ಇರುತ್ತಿತ್ತು. ಅವನು ಸ್ನಾನ ಮಾಡದ ದಿನ ಮುಖಕ್ಕೆ ನೀರೆರೆಚಿಕೊಂಡು ಬಟ್ಟೆ ಹಾಕಿಕೊಳ್ಳುತ್ತಿದ್ದ. ಶರ್ಟ್ ಅನ್ನು ಯಾವಾಗಲೂ ಇನ್ ಮಾಡಿಕೊಳ್ಳುತ್ತಿದ್ದ. ಕಣ್ಣು ಸರಿಯಾಗಿದ್ದರೂ ಕಣ್ಣಿನ ವೈದ್ಯರ ಹತ್ತಿರ ಏನೇನೋ ನಾಟಕವಾಡಿ ಅಗಲ ಗಾಜಿನ ಕನ್ನಡಕವನ್ನು ಕೊಂಡುಕೊಂಡಿದ್ದ. ಅದನ್ನು ಯಾರಿಗೂ ಕಾಣದಂತೆ ಅಜ್ಜಿ ತನ್ನ ಮನೆದೇವರ ದೀಪಕ್ಕೆಂದು ಇಟ್ಟಿರುತ್ತಿದ್ದ ಹತ್ತಿಯಿಂದ ಉಜ್ಜಿ ಅದನ್ನು ಇನ್ನಷ್ಟು ಪಾರದರ್ಶಕಗೊಳಿಸಲು ಪ್ರಯತ್ನಿಸಿ, ಹಾಕಿಕೊಂಡು ಹೊರಟನೆಂದರೆ, ಯಲಹಂಕದ ಆನಂದ್ ವಾಚ್ ಸೆಂಟ ರ್ ನಲ್ಲೋ, ಚಕ್ರಪಾಣಿಯ ರೇಡಿಯೋ ಅಂಗಡಿಯಲ್ಲೋ ಕಾಲ ಕಳೆದು ಬರುತ್ತಿದ್ದ. ನಾನು ಕಂಡಂತೆ ಆ ದಿನಗಳಲ್ಲಿ ಅಪ್ಪ ಆ ಅಂಗಡಿಗಳಲ್ಲಿ ಟೀ ತಂದುಕೊಡುವುದು, ಯಾವುದಾದರೂ ಬಿಡಿಭಾಗಗಳು ಇಲ್ಲದಿದ್ದರೆ ಬೇರೆ ಅಂಗಡಿಗಳಲ್ಲಿ ತಂದುಕೊಡುವುದು ಮಾಡುತ್ತಿದ್ದ. ಆನಂದ್ ವಾಚ್ ಸೆಂಟರ್ ನ ಯಾವುದಾದರೂ ವಾಚ್ ಅನ್ನು ಅಪ್ಪ ಕೈಗೆ ಕಟ್ಟಿಕೊಳ್ಳುತ್ತಿದ್ದ. ಒಂದು ದಿನ ಕಟ್ಟಿದ್ದ ವಾಚನ್ನು ಇನ್ನೊಂದು ದಿನ ಕಟ್ಟುತ್ತಿರಲಿಲ್ಲ. ಎಲ್ಲವೂ ರಿಪೇರಿಗೆ ಬಂದಿದ್ದ ವಾಚ್ ಗಳೇ ಆಗಿರುತ್ತಿದ್ದವು. ನಾನು ಮೂರನೇ ತರಗತಿ ಓದುವಾಗಲೇ ನನಗೆ ಎಲ್.ಇ.ಡಿ. ಡಿಸ್ಪ್ಲೇ ಇದ್ದ ವಾಚ್ ಕೊಟ್ಟಿದ್ದ. ಯಾವುದಾದರೂ ವಾಚ್ಗಳು ರಿಪೇರಿಯಾಗಿ ಆರು ತಿಂಗಳಿಗೂ ಅವುಗಳ ಮಾಲಿಕರು ಅಂಗಡಿಯ ಕಡೆ ತಲೆ ಹಾಕದಿದ್ದಾಗ, ಅಪ್ಪನೇ ಅವನ್ನು ತಂದು ಊರಿನಲ್ಲಿ ಯಾರಿಗಾದರೂ ಮಾರಿಬಿಡುತ್ತಿದ್ದ. ಗೋಡೆ ಗಡಿಯಾರಗಳಾದರೆ ಮೊದಲು ನಮ್ಮ ಮನೆಯ ಗೋಡೆಯಲ್ಲಿ ವಾರಗಟ್ಟಲೇ ನೇತಾಡುತ್ತಿದ್ದವು.

ಒಂದು ದಿನ ಮಾಸ್ಟರ್ ಕಂಪೆನಿಯ ಲೋಲಕದ ಗಡಿಯಾರ ತಂದಿದ್ದ. ಅದು ಪ್ರತೀದಿನವೂ ಆಗಿನ ಸಮಯದಷ್ಟು ಗಂಟೆ ಬಾರಿಸುತ್ತಿತ್ತು. ಅಪ್ಪ ಮನೆಯಲ್ಲಿದ್ದಾಗ ಚಿಕ್ಕ ಮಕ್ಕಳಂತೆ ಪ್ರತಿ ಬಾರಿಯೂ ಕೂಡ ಅದು ಗಂಟೆ ಬಾರಿಸುವುದನ್ನು ಎಣಿಸುತ್ತಿದ್ದ. ದಿನವೂ ಅದಕ್ಕೆ ಕೀ ಕೊಡಬೇಕಾಗಿತ್ತು. ಒಂದು ದಿನ ಸ್ಟೂಲ್ ಮೇಲೆ ನಿಂತುಕೊಂಡು ಕೀ ಕೊಡುತ್ತಿದ್ದ ಅಪ್ಪ ಜಾರಿ ಬಿದ್ದುಬಿಟ್ಟ. ಕೈ ಮೂಳೆ ಮುರಿದು ಹೋಗಿ ಕಟ್ಟು ಹಾಕಿಸಿಕೊಂಡ. ಅದೂ ಅವನು ಬಿದ್ದ ದಿನ ಬೀಳಿಸಿದ ಗೋಡೆ ಗಡಿಯಾರ ಮಾರಿದ ಹಣದಿಂದ. ಬಿದ್ದ ಕೋಪಕ್ಕೆ ಅದನ್ನು ಗೋಡೆಯಿಂದ ಕೆಳಗಿಳಿಸುವಾಗ ‘ನನ್ಮಗುಂದು ನಂಗೇ ಏಟ್ ಮಾಡ್ತಲ್ಲಾ’ ಎಂದು ಗೊಣಗಿಕೊಂಡು ಇಳಿಸಿದ. ಯಾರದಾದರೂ ವಾಚ್ಗಳು ಕೆಟ್ಟು ಹೋಗಿದ್ದರೆ ಅವರು ಅಪ್ಪನ್ನು ಹುಡುಕಿಕೊಂಡು ಬರುತ್ತಿದ್ದರು. ಅಪ್ಪನ ಬಳಿ ಒಂದು ದೊಡ್ಡ ಜಾಮಿಟ್ರಿ ಬಾಕ್ಸ್ ಆಕಾರದ ಪೆಟ್ಟಿಗೆ ಇತ್ತು ಅದರಲ್ಲಿ ವಾಚ್ ರಿಪೇರಿಗೆ ಬೇಕಾದ ಸಲಕರಣೆಗಳ ಜೊತೆಗೆ ವಾಚ್ಗಳ ಕೇಸ್, ಡಯಲ್, ಕೆಟ್ಟು ಹೋಗಿದ್ದ ಸಣ್ಣ ಎಲ್.ಇ.ಡಿ. ವಾಚ್ಗಳು ಕೀ ಕೊಡುವ ವಾಚ್, ಟೇಪ್ ರೆಕಾರ್ಡರ್ ಮೋಟಾರ್ ನ ಬೆಲ್ಟ್ ಗಳು, ಹೆಡ್ಗಳು ಯಾವುಯಾವುದೋ ಮುಳ್ಳುಚಕ್ರಗಳು, ಇನ್ನೂ ಅನೇಕ ರೀತಿಯ ಬಿಡಿಭಾಗಗಳು ಇರುತ್ತಿದ್ದವು. ಅಪ್ಪ ಬರೀ ತೆಗೆದು ನೋಡಿ ವಾಚ್ನ ಕಾರ್ಯಕ್ಷಮತೆಯನ್ನು ನಿಖರವಾಗಿ ಹೇಳುತ್ತಿದ್ದ. ಮನೆಯಲ್ಲೇ ಮಾಡಬಹುದಾದ ರಿಪೇರಿಗಳನ್ನು ಮಾಡಿ ಉಳಿದದ್ದನ್ನು ಆನಂದ್ ವಾಚ್ ಸೆಂಟರ್ನಲ್ಲಿ ಮಾಡಿಸುತ್ತಿದ್ದ.

ನಾನು ಕಂಡಂತೆ ಆಗ ಈಗಿದ್ದಂತೆ ಸಣ್ಣ ರೇಡಿಯೋಗಳು ತುಂಬಾ ವಿರಳವಾಗಿದ್ದವು. ಬರೀ ಜಪಾನ್ ಮೇಡ್ ನ ರೇಡಿಯೋಗಳು ಮಾತ್ರ ಸಣ್ಣ ಗಾತ್ರದಲ್ಲಿ ತಯಾರುಗೊಳ್ಳುತ್ತಿದ್ದವು. ಭಾರತದ ಕಂಪೆನಿಗಳ ರೇಡಿಯೋಗಳು ಈಗಿನ ಫೋರ್ಟಬಲ್ ಟಿ.ವಿ.ಯ ಗಾತ್ರಕ್ಕಿರುತ್ತಿದ್ದವು. ಅವುಗಳಿಗಾಗಿ ಮರದ ಶೋ ಕೇಸ್ಗಳು, ಗೋಡೆಯಲ್ಲೇ ಮಾಡಿದಂತಹ ಕಪಾಟುಗಳ ಜಾಗಗಳು ಬೇಕಾಗುತ್ತಿತ್ತು. ಇನ್ನು ಜಪಾನ್ ತಯಾರಿಸುತ್ತಿದ್ದ ಪಾಕೇಟ್ ರೇಡಿಯೋಗಳ ಬೆಲೆಯೂ ಸಹ ದೊಡ್ಡ ರೇಡಿಯೋಗಳಿಗಿಂತ ದುಬಾರಿಯಾಗಿದ್ದವು. ನಾನು ರೇಡಿಯೋ ಮುಟ್ಟುವ ಕಾಲಕ್ಕೆ ಸರ್ಕಾರದವರು ಅದಕ್ಕೆ ವಿಧಿಸುತ್ತಿದ್ದ ಲೈಸನ್ಸ್ ಪದ್ಧತಿಯನ್ನು ನಿಲ್ಲಿಸಿದ್ದರು. ನಮ್ಮ ಮನೆಯಲ್ಲೂ ಕೂಡ ಆರು ಬ್ಯಾಂಡಿನ ದೊಡ್ಡ ರೇಡಿಯೋ ಇತ್ತು. ಅದರಲ್ಲಿ ಬಿ.ಬಿ.ಸಿ., ಸಿಲೋನ್, ಕ್ರಿಸ್ತವಾಣಿ ಮುಂತಾದ ವಿದೇಶಿ ಬಾನುಲಿ ಕೇಂದ್ರಗಳು ನಮ್ಮ ಭಾರತೀಯ ಬಾನುಲಿಗಳಿಗಿಂತ ಸ್ಪಷ್ಟವಾಗಿ ಪ್ರಸಾರವಾಗುತ್ತಿದ್ದವು.

ನನ್ನ ಊರಿನಲ್ಲಿ ನನ್ನಪ್ಪನೇ ವಾಚು ಮತ್ತು ರೇಡಿಯೋ ರಿಪೇರಿ ಮಾಡುವುದರಲ್ಲಿ ಮೊದಲಿಗ. ಹೀಗಿದ್ದಾಗ ಅಪ್ಪ ನನ್ನನ್ನೂ ರೇಡಿಯೋ ಮೆಕಾನಿಕ್ ಮಾಡುವ ತೀರ್ಮಾನಕ್ಕೆ ಬಂದ. ನಾನು ಐದನೇ ತರಗತಿ ಓದುತ್ತಿದ್ದ ವರ್ಷ ಬೇಸಿಗೆ ರಜೆ ಸಿಕ್ಕಿತ್ತು. ಯಲಹಂಕದಲ್ಲಿ ರೇಡಿಯೋ ರಿಪೇರಿ ಅಂಗಡಿ ಇಟ್ಟಿದ್ದ ಚಕ್ರಪಾಣಿ ನನ್ನ ಅಪ್ಪನಿಗೆ ಸ್ನೇಹಿತನಾಗಿದ್ದರೂ, ನನ್ನ ಕೈಯ್ಯಲ್ಲೇ ಕೆಲಸ ಕಲಿಸುವ ಬಗ್ಗೆ ಒಂದು ಮನವಿ ಪತ್ರವನ್ನು ಬರೆಸಿ, ಚಕ್ರಪಾಣಿಯ ಅಂಗಡಿಗೆ ಸೇರಿಸಿದ.

ಮೀಸೆ ಮತ್ತು ತಲೆ ಕೂದಲಿಗೆ ಹೇರ್ ಡೈ ಹಾಕಿಕೊಂಡು, ಯಾವಾಗಲೂ ಎಣ್ಣೆ ಸವರಿಕೊಂಡು, ಮುಸ್ಲಿಂನಂತೆ ಕಾಣುತ್ತಿದ್ದ ಚಕ್ರಪಾಣಿ ಸ್ವಲ್ಪ ಎತ್ತರಕ್ಕೆ ಒಂದು ಸುತ್ತು ದಪ್ಪಗಿದ್ದ. ಜೇಬಿನಲ್ಲಿ ಯಾವಾಗಲೂ ಸಕ್ಕರೆ ಕಾಯಿಲೆಯ ಮತ್ತು ಬೈದ್ಯನಾಥ್ ಮಾತ್ರೆಗಳನ್ನು ಸ್ಟಾಕ್ ಇಟ್ಟಿರುತ್ತಿದ್ದ. ತಮಾಷೆ ಮಾಡುತ್ತಿದ್ದ ವ್ಯಕ್ತಿಯಾಗಿದ್ದರೂ ರೇಗುತ್ತಿದ್ದವನಂತೆ ಕಾಣಿಸುತ್ತಿದ್ದ. ಅವನು ಅಂಗಡಿಯಲ್ಲಿ ಯಾವಾಗಲೂ ಒಂದು ಮೂಲೆಯಲ್ಲಿ ರೇಡಿಯೋ ಇಟ್ಟುಕೊಂಡು ರಿಪೇರಿ ಮಾಡಲು ಕೂತಿರುತ್ತಿದ್ದ. ಯಾರಾದರೂ ಗಿರಾಕಿಗಳು ಬಂದರೆ ಅಲ್ಲಿಂದಲೇ ವ್ಯವಹರಿಸುತ್ತಾ ಕೂತಿರುತ್ತಿದ್ದ. ಗುರುವಾರದ ಮಧ್ಯಾಹ್ನ ಮಾತ್ರ ಬಿಡಿಭಾಗಗಳನ್ನು ತರಲು ಬೆಂಗಳೂರಿನ ಎಸ್.ಪಿ. ರೋಡಿಗೆ ಹೋಗಿಬರುತ್ತಿದ್ದ. ನನಗೆ ಭಾನುವಾರ, ಮೆಕಾನಿಕ್ ಬಾಷಾನಿಗೆ ಶುಕ್ರವಾರ ರಜೆ ಕೊಟ್ಟರೆ, ಉಳಿದಂತೆ ಅಂಗಡಿ ತೆರೆದೇ ಇರುತ್ತಿತ್ತು.

ಅವನು ದೂರದ ಶಿವಕೋಟೆಯಲ್ಲಿ ಮದುವೆಯಾಗಿದ್ದ. ಒಂದು ದಿನ ಮನೆಯಲ್ಲಿದ್ದ ಹಿತ್ತಾಳೆ ಪಾತ್ರೆಯನ್ನು ಆತನ ಹೆಂಡತಿ ಆಲ್ಯೂಮಿನಿಯಂ ಪಾತ್ರೆಗೆ ಬದಲಾಯಿಸಿದ ನೆಪಕ್ಕೇ ದೊಡ್ಡ ಜಗಳವಾಗಿ ಎರಡು ಮೂರು ತಿಂಗಳು ಊರು ಬಿಟ್ಟು ತಾಯಿಯ ಮನೆಯಲ್ಲಿದ್ದಳು. ಆ ನಂತರ ಅವಳ ತಾಯಿ, ಅಣ್ಣಂದಿರು ಮತ್ತು ಇನ್ಯಾರ್ಯಾರೋ ಬಂದು ಅಂಗಡಿಯ ಮುಂದೆಯೇ ಜಗಳ ತೆಗೆದು ಅವನ ಮುಂದಲೆಯ ಕೂದಲನ್ನೆಲ್ಲಾ ಕಿತ್ತು ಬರುವಂತೆ ಹೊಡೆದಿದ್ದರು. ಅಂದಿನಿಂದ ಅವನ ತಲೆಯ ತುಂಬ ಕೂದಲಿದ್ದರೂ ಬೊಕ್ಕ ತಲೆಯವನಂತೆಯೂ, ಜಗಳದಲ್ಲಿ ಮೈ ಪರಚಿಸಿಕೊಂಡ ಕರಡಿಯಂತೆಯೂ ಕಾಣಿಸುತ್ತಿದ್ದ. ನಂತರದ ಕೆಲದಿನಗಳಲ್ಲೇ ಗಂಡ-ಹೆಂಡತಿ ಒಂದಾದರೂ ದಿನವೂ ಜಗಳವೆನ್ನುವುದು ಸಾಮಾನ್ಯ ವಿಷಯವಾಗಿ ಬಿಟ್ಟಿತ್ತು. ಚಕ್ರಪಾಣಿ ರಾತ್ರಿಯೆಲ್ಲಾ ಹೆಂಡತಿಯೊಡನೆ ಜಗಳವಾಡಿಕೊಂಡು ಬರುತ್ತಿದ್ದ. ಬೆಳಗ್ಗೆ ಬಂದವನೆ ಮೆಕಾನಿಕ್ ಬಾಷಾನ ಹತ್ತಿರ ರಾತ್ರಿ ನಡೆದ ಜಗಳದ ಪೂರ್ತಿ ಕಥೆ ಹೇಳುತ್ತಿದ್ದ. -ಒಂದು ದಿನ ಅವಳು ಅಡುಗೆ ಮಾಡದೆ ಇದ್ದುದರಿಂದ ಜಗಳ ಆಯಿತು; ಒಂದುದಿನ ಅವಳ ತಾಯಿ ಊರಿಂದ ಬಂದಾಗ ಸರಿಯಾಗಿ ನೋಡಿಕೊಳ್ಳದಿದ್ದಕ್ಕೆ ಜಗಳ ಆಯಿತು; ಒಂದು ದಿನ ಪಕ್ಕದಲ್ಲಿ ಮಲಗದಿದ್ದಕ್ಕೆ ಜಗಳ ಆಯಿತು- ಹೀಗೆ ದಿನವೂ ಒಂದೊಂದು ಕಥೆಗಳಿಗೆ ಬಾಷಾನ ಜೊತೆಗೆ ನಾನೂ ಕಾಯುವುದು ರೂಢಿಯಾಗಿತ್ತು. ಆದರೆ ಸ್ವಲ್ಪದಿನಕ್ಕೇ ಆತನ ಕತೆಗಳಿಗೆ ಬಾಷ ಸುಮ್ಮನೇ ‘ಊ್ಞ’ ಗುಟ್ಟಿದರೂ ಕೇಳಿಸಿಕೊಳ್ಳದೇ ನನ್ನ ಕಡೆ ತಿರುಗಿ ನಗುತ್ತಿದ್ದುದನ್ನು ಕಾಣುತ್ತಿದ್ದೆ. ಒಂದೊಂದು ದಿನ ಅವಳು ಬೆಳಗಿನ ತಿಂಡಿಯನ್ನು ಸಹ ಹಾಕದೇ ಕಳುಹಿಸುತ್ತಿದ್ದಳು. ಅವನು ಹೋಟೆಲ್ನಲ್ಲಿ ತಿನ್ನುತ್ತಿರಲಿಲ್ಲ. ಸಕ್ಕರೆ ಖಾಯಿಲೆ ಬೇರೆ ಇದ್ದುದರಿಂದ ಅವನ ಊರಾದ ಹೊಸಹಳ್ಳಿಯಿಂದ ಯಲಂಹಂಕಕ್ಕೆ (12 ಕಿ.ಮೀ.) ಬಸ್ನಲ್ಲಿ ಬರುವಷ್ಟೊತ್ತಿಗೆ ಸುಸ್ತಾಗಿ ಕೈ ಕಾಲುಗಳು ನಡುಗುತ್ತಿದ್ದವು.

ಆ ಅಂಗಡಿಯ ಒಂದು ಭಾಗದಲ್ಲಿ ಪ್ಲೈವುಡ್ ಪಾರ್ಟಿಷನ್ ಇತ್ತು. ಅದರಲ್ಲಿ ಒಂದು ಸ್ಟೌವ್, ಸಣ್ಣದಾದ ಒಂದು ಟೇಪಿನ ಮಂಚ, ಚಕ್ರಪಾಣಿಯ ನಾಲ್ಕೈದು ಜೊತೆ ಬಟ್ಟೆಗಳು, ಎರಡು ರತಿವಿಜ್ಞಾನ ಪುಸ್ತಕಗಳು, ಎರಡು ಪಾತ್ರೆ, ಎರಡು ತಟ್ಟೆ, ಸೌಟು, ಅನ್ನದ ಕೈ, ನೀರು ಕುಡಿಯುವ ಚೆಂಬು, ಲೋಟ, ಸ್ನಾನ ಮಾಡಲು ಮೂಲೆಯಲ್ಲಿ ಸಿಮೆಂಟಿನ ಮೊಣಕಾಲಿಗಿಂತಲೂ ಚಿಕ್ಕದಾಗಿ ಕಟ್ಟಿದ್ದ ಕಟ್ಟೆಯಲ್ಲಿ ಒಂದು ಬಕೆಟ್, ಬಿಂದಿಗೆ, ಜಗ್ ಇದ್ದವು. ಚಕ್ರಪಾಣಿ ತನ್ನ ಹೆಂಡತಿ ತವರಿಗೆ ಹೋದಾಗಲೆಲ್ಲಾ ಅವಳನ್ನು ಬೈದುಕೊಂಡು ಮನೆಗೆ ಹೋಗದೆ ಅಂಗಡಿಯಲ್ಲೇ ಉಳಿಯುತ್ತಿದ್ದ. ನನಗೂ ಒಂದೆರಡು ವಾರ ಏನನ್ನೂ ಕಲಿಯಲು ಸಾಧ್ಯವಾಗದೇ ಚೆನ್ನಾಗಿ ಟೀ ಮಾಡುವುದು, ಅನ್ನ ಮಾಡುವುದು, ಹೋಟೆಲ್ನಿಂದ ಸಾಂಬಾರ್ ತರುವುದನ್ನು ಕಲಿತೆ.

ನನ್ನ ಅಪ್ಪ ಒಳ್ಳೆಯ ವಾಚ್ ಮೆಕಾನಿಕ್ ಆಗಿದ್ದಂತೆ ಬೆಂಗಳೂರಿನ ಆರ್.ಟಿ.ನಗರದಿಂದ ಬರುತ್ತಿದ್ದ ಬಾಷಾ ಒಳ್ಳೆಯ ರೇಡಿಯೋ ಮೆಕಾನಿಕ್ ಆಗಿದ್ದ. ಅವನು ಕೆಟ್ಟು ಹೋಗಿದ್ದ ರೇಡಿಯೋವನ್ನು ಆನ್ ಮಾಡಿದ ತಕ್ಷಣವೇ ಅದಕ್ಕೆ ಏನು ಸಮಸ್ಯೆ ಎಂದು ಹೇಳುತ್ತಿದ್ದ. ಟೇಪ್ ರೆಕಾರ್ಡರ್ ಮತ್ತು ಬ್ಲಾಕ್ ಅಂಡ್ ವೈಟ್ ಟಿ.ವಿ.ಗಳನ್ನು ಸಹ ಚೆನ್ನಾಗಿ ರಿಪೇರಿ ಮಾಡುತ್ತಿದ್ದ. ಆದರೆ ಕಲರ್ ಟಿ.ವಿ.ಗಳನ್ನು ಮಾತ್ರ ಮುಟ್ಟುತ್ತಿರಲಿಲ್ಲ. ಕಲರ್ ಟಿ.ವಿ.ಗಳು ಬಂದರೆ ಬೇರೆ ಅಂಗಡಿಯಿಂದ ಮೆಕಾನಿಕ್ನನ್ನು ಕರೆಸುತ್ತಿದ್ದರು. ಹಾಲಿವುಡ್ ಚಿತ್ರ ಕಲೀಗುಲ ಚಿತ್ರದ ಹೀರೋ ಮಾಲ್ಕಮ್ ಮೆಕ್ಡೊವೆಲ್ನಂತೆ ವಿಕೃತನಂತೆ ಕಂಡರೂ ಬಾಷ ಬಹಳ ಒಳ್ಳೆಯ ಮನುಷ್ಯನಾಗಿದ್ದ. ಅವನು ರೇಡಿಯೋದ ಟ್ಯೂನರ್ನ ಗ್ಯಾಂಗ್ಗೆ ಟೇಪ್ ರೆಕಾರ್ಡರ್ನಲ್ಲಿರುತ್ತಿದ್ದ ಸಣ್ಣ ಮೈಕ್ಅನ್ನು ಸಾಲ್ಡರಿಂಗ್ನಿಂದ ಕೂಡಿಸಿ, ಆ್ಯಂಟೆನಾ ಏರಿಸಿ ‘ಹೆಲೋ, ಹೆಲೋ, ವನ್, ಟೂ, ತ್ರಿ, ಮೈಕ್ ಟೆಸ್ಟಿಂಗ್’ ಎಂದು ಮಾತನಾಡುತ್ತಿದ್ದ. ಅವನ ಮಾತು ಐವತ್ತು ಮೀಟರ್ನಲ್ಲಿದ್ದ ಎಲ್ಲಾ ರೇಡಿಯೋಗಳಲ್ಲೂ ಕೇಳಿಸುತ್ತಿತ್ತು. ನಾನೂ ಎಷ್ಟೋ ಸಾರಿ ಮನೆಯಲ್ಲಿದ್ದ ರೇಡಿಯೋವನ್ನು ಬಿಚ್ಚಿ ಮೈಕ್ ಕೂರಿಸಲು ಪ್ರಯತ್ನಿಸುತ್ತಿದ್ದೆ. ಆದರೆ ಆ ರೇಡಿಯೋ ಮಾತ್ರ ‘ಕುಯ್’ ಗುಟ್ಟಿ ಸುಮ್ಮನಾಗುತ್ತಿತ್ತು. ಅದರ ಬಗ್ಗೆ ಬಾಷಾನ ಹತ್ತಿರ ಕೇಳಿದರೆ ‘ಏನಾದರೂ ರಾಂಗ್ ಕನೆಕ್ಷನ್ ಆಗಿ ಬೇರೆ ಯಾವ್ದಾದ್ರೂ ರೇಡಿಯೋ ಸ್ಟೇಷನ್ ಟ್ರ್ಯಾಪ್ ಆದ್ರೆ ಪೊಲೀಸ್ನೋರ್ ಬಂದು ಅರೆಸ್ಟ್ ಮಾಡ್ತಾರೆ, ತಿಕಾ ಮುಚ್ಕಂಡ್ ಇರದ್ ಕಲ್ತ್ಕೋ’ ಎಂದು ಹೆದರಿಸುತ್ತಿದ್ದ. ಆದರೂ ನಾನು ಮಾತ್ರ ಆಗಾಗ ಆ ಪ್ರಯೋಗವನ್ನು ಮಾಡದೇ ಬಿಡುತ್ತಿರಲಿಲ್ಲ. ಆದರೆ ನನ್ನ ಮಾತು ಐವತ್ತು ಮೀಟರಿನ ರೇಡಿಯೋಗಳಲ್ಲಿ ಬಂದಿತ್ತೋ, ಇಲ್ಲವೋ ಗೊತ್ತಾಗಲಿಲ್ಲ.

ಬಾಷಾ ಸಲ್ಮಾ ಎನ್ನುವ ಹುಡುಗಿಯನ್ನು ಪ್ರೀತಿಸುತ್ತಿದ್ದ. ಅವಳು ಗಿಫ್ಟ್ ಎಂದು ಕೊಡಿಸಿದ್ದ ಜುಬ್ಬಾವನ್ನು ವಾರಕ್ಕೆ ಮೂರು ಸಾರಿಯಾದರೂ ಹಾಕಿಕೊಂಡು ಬರುತ್ತಿದ್ದ. ಚಕ್ರಪಾಣಿಗೂ ತನ್ನ ಪ್ರೇಮಕಥೆಗಳನ್ನು ಯಾವುದೋ ಸಿನೆಮಾದ ಕಥೆ ಹೇಳುವ ಧಾಟಿಯಲ್ಲಿ ಹೇಳುತ್ತಿದ್ದ. ಆದರೂ ಅದನ್ನು ಯಾವುದೋ ಗುಟ್ಟು ಹೇಳುವವನಂತೆ ಗಂಟಲಿನಿಂದ ಹೊರಡುವ ಪದಗಳಲ್ಲೇ ಹೇಳಿ ಮುಗಿಸುತ್ತಿದ್ದ. ಅವನು ಸಲ್ಮಾನ್ ಖಾನ್ ನ ಕಟ್ಟಾ ಅಭಿಮಾನಿ. ಯಾವಾಗಲೂ ನೀಲಿ ಜೀನ್ಸ್ ಪ್ಯಾಂಟ್ ತೊಟ್ಟು, ಶಿವಾಜಿನಗರದ ಉರ್ದು ಮಿಶ್ರಿತ ಕನ್ನಡ ಮಾತನಾಡುತ್ತಿದ್ದ ಬಾಷ ಕುಳ್ಳಗೆ, ಗಾಳಿ ಬಂದರೆ ಬಿದ್ದು ಹೋಗುವವನ ಹಾಗಿದ್ದ. ಅವನು ಸುಮ್ಮನಿದ್ದ ವೇಳೆಯಲ್ಲಿ ಹಾಡುಗಳನ್ನು ಕೇಳುವವನಂತೆಯೂ, ಮಾತನಾಡುವಾಗ ಹಾಡು ಹೇಳುವವನಂತೆಯೂ ಕಾಣುತ್ತಿದ್ದ. ಅಂಗಡಿಯಲ್ಲಿ ಅವನಿದ್ದರೆ ಹೆಚ್ಚಾಗಿ ಮೈನೇ ಪ್ಯಾರ್ ಕಿಯಾ ಚಿತ್ರದ ಹಾಡುಗಳು. ನನಗೂ ಅದೇ ಗುಂಗು ಹಿಡಿದು ಆ ಕ್ಯಾಸೆಟ್ ಹಾಕಿದಾಗಲೆಲ್ಲಾ ನಾನೂ ಅದರ ಜೊತೆಗೇ ಹಾಡಿಕೊಳ್ಳುತ್ತಿದ್ದೆ.

ಆ ಚಿತ್ರದ ಹಾಡುಗಳನ್ನು ನನ್ನ ಮನೆಯಲ್ಲಿದ್ದ ಟೇಪ್ ರೆಕಾರ್ಡರ್ನಲ್ಲಿ ಕೇಳುವ ಆಸೆಯಾಗಿ ಒಂದು ದಿನ ಸಂಜೆ, ಮನೆಗೆ ಬರುವ, ವೇಳೆ ‘ಮೈನೆ ಪ್ಯಾರ್ ಕಿಯಾ’ ಆಡಿಯೋ ಕ್ಯಾಸೆಟ್ಅನ್ನು ಜೇಬಿಗಿಳಿಸಿಕೊಂಡು ಚಕ್ರಪಾಣಿಗೆ ‘ಅಣ್ಣಾ ಮನೆಗೊತೀನಿ’ ಎಂದೆ. ಆಯ್ತು ಎಂದವನು ನನ್ನ ಜೇಬಿನ ಕಡೆ ನೋಡಿ ತಡಕಿದ. ಕ್ಯಾಸೆಟ್ ಸಿಕ್ಕಿತು. ವ್ಯಗ್ರನಾದ. ನಾನೂ ಗಲಿಬಿಲಿಯಿಂದ ಏನೇನೋ ತಡವರಿಸಿದೆ. ಅಷ್ಟೇ ಸಾಕಾಗಿತ್ತು. ನಾಲ್ಕೈದು ಏಟುಗಳನ್ನು ಬಾರಿಸಿದ ‘ನಿಮ್ಮಪ್ಪನೇ ನನಗೆ ಈ ಅಂಗಡಿ ಬಾಡಿಗೆ ಕೊಡಿಸಿದ್ದು. ಆರೇಳು ವರ್ಷ ಆಯ್ತು ಅವತ್ತಿನಿಂದ ಒಂದ್ ಸಾಮಾನೂ ಕದ್ದಿರಲಿಲ್ಲ. ನೀನ್ ನೋಡಿದ್ರೆ ಇಂಥ ಕೆಲ್ಸ ಮಾಡ್ತೀಯ. ಇನ್ಯಾವತ್ತೂ ಈ ಕಡೆ ಬರ್ಬೇಡ’ ಎಂದು ಮನೆಗೆ ಕಳುಹಿಸಿಬಿಟ್ಟ.

ಮನೆಗೆ ಬಂದು ಅಮ್ಮನಿಗೆ ವಿಷಯ ತಿಳಿಸದೇ ಊಟ ಮಾಡದೇ ಸುಮ್ಮನೇ ಮಲಗಿಬಿಟ್ಟೆ. ಸಂಜೆ ಅಪ್ಪ ಮನೆಗೆ ಬಂದವನೇ ಅಮ್ಮನಿಗೆ ಹೇಳಿದ ಮೊದಲ ವಿಷಯವೇ ನನ್ನ ಕಳ್ಳತನದ್ದು. ಅಪ್ಪ ನನ್ನನ್ನು ಹೊಡೆಯುತ್ತಿರಲಿಲ್ಲ. ಅಮ್ಮ ಮಾತ್ರ ಚೆನ್ನಾಗಿ ಮುಖ-ಮೂತಿ ನೋಡದೇ ಬಾರಿಸುತ್ತಿದ್ದಳು. ಆ ದಿನವೂ ಸಾಕಾಗುವಷ್ಟು ಹೊಡೆದಳು. ಅಪ್ಪ ಆ ಸಮಯದಲ್ಲಿ ಅಮ್ಮನನ್ನು ಸಮಾಧಾನಗೊಳಿಸಿ ಚಕ್ರಪಾಣಿ ರಾತ್ರಿ ತನ್ನ ಹೆಂಡತಿ ಮಾಡಿದ್ದ ಊಟದಲ್ಲಿ ಗಾಜಿನ ತುಂಡು ಸಿಕ್ಕಿದ್ದ ಕೋಪವನ್ನು ನನ್ನ ಮೇಲೆ ತೀರಿಸಿಕೊಂಡಿದ್ದನ್ನು ಹೇಳಿದ ಮೇಲೆ ಅಮ್ಮ ಸುಮ್ಮನಾದಳು. ಇಲ್ಲದಿದ್ದರೆ ಸಾಯಿಸಿಬಿಡುತ್ತಿದ್ದಳೇನೋ. ಕೆಲದಿನಗಳ ನಂತರ ಚಕ್ರಪಾಣಿಯೇ ಮತ್ತೆ ಅಪ್ಪನ ಕೈಲಿ ಅಂಗಡಿಗೆ ಬರಲು ಹೇಳಿ ಕಳುಹಿಸಿದ. ನಾನು ಹೋಗಲಿಲ್ಲ. ಅಮ್ಮನೂ ಬೇಡವೆಂದಿದ್ದಳು. ಈಗ ಅಲ್ಲಿ ರೇಡಿಯೋ ಅಂಗಡಿ ಇಲ್ಲ. ಯಲಹಂಕದಲ್ಲ್ಲಿ ಆಗ ಇದ್ದ ರೇಡಿಯೋ ರಿಪೇರಿ ಅಂಗಡಿಗಳಲ್ಲಿ ಈಗ ಒಂದೂ ಇಲ್ಲ. ಕೆಲವರ್ಷ ಅಂಗಡಿ ನಡೆಸಿದ ಚಕ್ರಪಾಣಿ ಅದನ್ನು ಬೇರೆಯವರಿಗೆ ಮಾರಿದ. ಅವರು ಕೂಡ ಬಾಗಿಲು ಮುಚ್ಚಿಕೊಂಡು ಹೋಗಿದ್ದಾರೆ. ಈಗ ಒಂದು ಬಾಳೆಹಣ್ಣಿನ ಮಂಡಿಯಿದೆ. ಚಕ್ರಪಾಣಿ ಊರಿನಲ್ಲಿದ್ದ ತನ್ನ ಜಮೀನನ್ನು ಮಾರಿ ದೊಡ್ಡವರಾದ ಮಕ್ಕಳೊಡನೆ ಮತ್ತು ಹಳೆಯ ಜಗಳಗಳನ್ನೆಲ್ಲಾ ಮರೆತು ಮೃದುಗೊಂಡ ಹೆಂಡತಿಯೊಡನೆ ಸುಖವಾಗಿದ್ದಾನೆ. ನಾನು ಯಾವುದಾದರೂ ಕಾರಣಕ್ಕೆ ಆ ಚಕ್ರಪಾಣಿಯ ಅಂಗಡಿಯ ಹತ್ತಿರ ಸುಳಿದಾಗ ಮೈನೆ ಪ್ಯಾರ್ ಕಿಯಾ ಸಿನಿಮಾದ ‘ಕಬುತ್ತರ್ ಜಾ. ಜಾ. ಜಾ…’ ಎಂಬ ಹಾಡು ಅಪಘಾತಕ್ಕೀಡಾಗಿ ಸತ್ತ ಬಾಷಾನ ದನಿಯಲ್ಲಿ ಕೇಳಿಸುತ್ತಿರುತ್ತದೆ.

‍ಲೇಖಕರು avadhi

September 16, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

4 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: