ಮೈಸೂರು ಅನಂತಸ್ವಾಮಿ s/o ಶ್ರೀಮತಿ ಕಮಲಮ್ಮ

ಅಜ್ಜಿ-ತಾತ

ಅಣ್ಣ ಅವರ ತಂದೆ-ತಾಯಿಯ ಬಗ್ಗೆ ಹೀಗೆ ಹೇಳ್ತಿದ್ರು:

“ತಾನು ಹೆತ್ತು, ಹೊತ್ತು, ಸಾಕಿ ಸಲುಹಿದ ಮಕ್ಕಳಿಗೆ ಎಲ್ಲವನ್ನೂ ಮಾಡಿಟ್ಟೂ ಅವರಿಂದ ಒಂದು ಚಿಕ್ಕ ಸಹಾಯವನ್ನು ಬಯಸದೆ, ಮಕ್ಕಳಿಗೆ ಯಾವ ಕಷ್ಟವನ್ನೂ ಕೊಡದೆ ಸಾವಿನ ಅಂತ್ಯದವರೆಗೆ ಸ್ವತಂತ್ರ ಜೀವನ ನಡೆಸುವವ; ಉತ್ತಮನು, ಸರ್ವೋತ್ತಮನು.

mysore-anantaswamy-column1ಈ ಸಾಲಿಗೆ ಸೇರುವವರು, ನಮ್ಮ ತಂದೆ-ತಾಯಿ. ನಮ್ಮ ತಂದೆಯ ಶಿಸ್ತಿನ ಜೀವನ, ಒಳ್ಳೆಯ ನಡತೆ, ಅವರಿಗಿದ್ದ ದೈವ ಭಕ್ತಿ, ನಮಗೆಲ್ಲ ಮಾರ್ಗದರ್ಶನ ನೀಡಿತು. ನಮ್ಮನ್ನೆಲ್ಲ ಬಡತನದಲ್ಲೂ ಸುಖವಾಗಿ ಸಾಕಿದರು. ಇವರಿಗೇ ಮಾಡಿಸಿಟ್ಟಂತಹ ಜೋಡಿ, ನನ್ನ ತಾಯಿ. ಆಕೆ ಒಬ್ಬ ದೊಡ್ಡ ಕಲಾವಿದರ ಮಗಳಾಗಿದ್ದರೂ, ಗಂಡನ ಕಷ್ಟ-ಸುಖದಲ್ಲಿ ಭಾಗಿಯಾದವರು…”

ಅಣ್ಣನ ಸಂಗೀತಕ್ಕೆ ಬಾಲ್ಯದಿಂದ ಉತ್ತೇಜನ , ಪ್ರೋತ್ಸಾಹ ಹಾಗು ಮಾರ್ಗದರ್ಶನ ನೀಡಿದವರು ಅವರ ತಾಯಿ, ನಮ್ಮ cute  ಅಜ್ಜಿ, ಶ್ರೀಮತಿ. ಕಮಲಮ್ಮ. ಅಜ್ಜಿ ಕಮಲಮ್ಮ, ಮಾದರಿ ಹೆಣ್ಣು, ಮಗಳು, ಮಡದಿ, ತಾಯಿ, ಅಜ್ಜಿ!!

“ಯಾವ ಸೌಭಾಗ್ಯ ಸಮ ಈ ಚೆಲುವಿಗೆ

ಪ್ರೀತಿ ಚಿಮ್ಮುವ ತಾಯ ಮೊಗದ ಸಿರಿಗೆ”

ಡಾ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ ಅವರ ಈ ಸಾಲುಗಳಿಂದ ಅವರ ಮುಖಲಕ್ಷಣವನ್ನು ನಿಖರವಾಗಿ ವರ್ಣಿಸಬಹುದು.

ಮೂರು ಗಂಡು, ನಾಲ್ಕು ಹೆಣ್ಣು ಮಕ್ಕಳನ್ನು  ಹೊತ್ತು, ಹೆತ್ತು , ಪ್ರೀತಿ,  ಪ್ರೇರಣೆ, ಬೆಂಬಲ ನೀಡಿದಂಥ ಅಸಾಮಾನ್ಯ ಮಹಿಳೆ.  ೯೨  ವರುಷಗಳ ತನಕ ಅವರ “ಬ್ಯೂಟಿಫುಲ್ ಸ್ಮೈಲ್ ” ಅವರ ಜೀವನದ ಎಲ್ಲಾ ಕಷ್ಟ ನಿಷ್ಠುರಗಳ್ಳನ್ನು ತಡೆಗಟ್ಟುವ ದೃಢವಾದ ಭಿತ್ತಿಯಾಗಿತ್ತು.  ತಾಳ್ಮೆ, ಸಂಸ್ಕಾರ, ಕಲೆ , ಸಂಸ್ಕೃತಿ, ಇವನ್ನೆಲ್ಲ  ಒಳಗೊಂಡ, ನಿಮ್ಮ typical ಅಜ್ಜಿ,  ಆದ್ರೆ ಎಷ್ಟು ಸಂಪ್ರದಾಯಸ್ಥರಾಗಿದ್ದರೋ, ಆಲೋಚನೆಯಲ್ಲಿ ಅಷ್ಟೇ ಸಮಕಾಲೀನರಾಗಿದ್ದರು.

ಬಹುಷಃ ಆಗಿನ ಕಾಲಕ್ಕೆ ಚಿಕ್ಕರಾಮರಾಯರಿಗೆ ಅವರು ಮಗನಾಗಿ ಹುಟ್ಟಿದ್ದರೆ, ಅವರ ಚಾತುರ್ಯ, ಪ್ರತಿಭೆ ಅವರಿಗೆ ಬಹಳ ಕೀರ್ತಿ ತರುವುದಲ್ಲದೆ ಸಂಗೀತ ಲೋಕಕ್ಕೆ ಅವರ ಕೊಡುಗೆಯೂ ಇರುತ್ತಿತ್ತೇನೋ!

ಸಿರಿ ಕಂಠ ಪಡೆದಿದ್ದರು.  ಅವರ ಹಾಡುಗಾರಿಕೆ,  ಭಕ್ತಿ, ಶೃಂಗಾರ, ಭಾವದಿಂದ ತುಂಬಿರುತ್ತಿತ್ತು. ಅಜ್ಜಿ, ಬರೀ ಹಾಡುವುದಲ್ಲ, ಸ್ವರ ಸಂಯೋಜನೆ ಕೂಡ ಮಾಡುತ್ತಿದ್ದರು. ಎಷ್ಟೋ ದೇವರನಾಮಗಳನ್ನು, ಶ್ಲೋಕಗಳನ್ನು , ತಮ್ಮದೇ ರಾಗ ಸಂಯೋಜನೆಯಲ್ಲಿ ಹಾಡುತ್ತಿದ್ದರು. ನಮ್ಮನ್ನ ಕಂಡಾಗಲೆಲ್ಲ ಹೊಸ ಹಾಡು ಮಾಡಿದ್ದೀನಿ , ಅಂತ ಹೇಳಿದ್ದೆ ಕ್ಷಣ ಉತ್ಸಾಹದಿಂದ  ಅದನ್ನ ಹಾಡಿ ತೋರಿಸಿಬಿಡುತ್ತಿದ್ದರು. ಸ್ಮಾರ್ಟ್ ಫೋನ್ ಗಳು ಅವಾಗ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!! ಎಲ್ಲಾ ತರಹದ ಹಾಡುಗಳನ್ನೂ ಕೇಳುವವರು, ಕಲಿಯುವವರೂ ಕೂಡ. ಒಮ್ಮೆ ಟ್ರೈನ್ ನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಯಾರೋ ಒಬ್ಬ ಭಿಕ್ಷುಕ ಹಾಡಿಕೊಂಡು ಬಂದನಂತೆ. ಆ ಹಾಡು ಇವರಿಗೆ ಬಹಳ ಇಷ್ಟವಾಗಿ ಅವನಿಂದ ಆ ಹಾಡನ್ನು ಕಲಿತುಕೊಂಡರಂತೆ.

ಸಂಪ್ರದಾಯದ ಗೀತೆಗಳು, ಭಕ್ತಿಗೀತೆಗಳು ಇವೆಲ್ಲವನ್ನು ಬಹಳ ಭಾವಪೂರ್ಣವಾಗಿ ಹಾಡುವವರು. ನಮ್ಮ ಅಜ್ಜಿಯ ಅಜ್ಜಿ, ಅಂದ್ರೆ ಚಿಕ್ಕರಾಮರಾಯರ ತಾಯಿ, ಭಾಗಮ್ಮನವರು ರಾಮಾಯಣದ ಶ್ಲೋಕಗಳನ್ನು, ಭಾಗವತ, ಭಗವದ್ಗೀತೆಯ ಶ್ಲೋಕಗಳನ್ನು, ಸುಶ್ರಾವ್ಯವಾಗಿ ಹಾಡುವುದಲ್ಲದೆ, ಭಾರತ ವಾಚನವನ್ನೂ ಅದ್ಭುತವಾಗಿ ಮಾಡುತ್ತಿದ್ದರಂತೆ.

ಅಣ್ಣನ ತಂದೆಯವರಿಗೆ  ಬೇರೆ ಬೇರೆ ಊರುಗಳಿಗೆ ವರ್ಗಾವಣೆ ಆಗುತ್ತಲೇ ಇರುತ್ತಿತ್ತು. ಹಾಗಾಗಿ ಅಣ್ಣ ಅವರ ತಾತನ ಮನೆಯಲ್ಲಿ ಬಾಲ್ಯವನ್ನು ಕಳೆದರು . ಅವರ ಬಾಲ್ಯದ ಸಂಗೀತಮಯ ವಾತಾವರಣ ಹೇಗಿತ್ತು ಅಂತ  ಅಣ್ಣನ ಬಾಯಲ್ಲೇ ಹೇಳಬೇಕು ಅಂದ್ರೆ “ಮುಂಜಾನೆ ಕಣ್ಣು ಅರಳುತ್ತಿದದ್ದು ತಾತನವರ ಸಂಗೀತಾಭ್ಯಾಸದಿಂದ. ನಂತರ ಶಿಷ್ಯರಿಗೆ ಪಾಠ. ಅದಾದ ನಂತರ ತಾಯಿ ಚಿಕ್ಕಮ್ಮಂದಿರು ತುಳಸಿ ಪೂಜೆ ಮತ್ತಿತ್ತರ ದೇವತಾಕಾರ್ಯಕ್ಕಾಗಿ ಹಾಡುತ್ತಿದ್ದ ದೇವರನಾಮಗಳು, ಸಂಜೆ ಮತ್ತೆ ಭಜನೆ, ರಾತ್ರಿ, ಲಾಲಿ ಹಾಡಿನೊಂದಿಗೆ ಗಂಧರ್ವಲೋಕದತ್ತ ಪಯಣ. ತಾತ ಚಿಕ್ಕರಾಮರಾಯರನ್ನು ಕಾಣಲು ಬರುತ್ತಿದ್ದ ಅನೇಕ ಸಂಗೀತಗಾರರು, ಇಡೀ ದೇಶದ ನಾನಾ ಭಾಗಗಳಿಂದ ಬರುತ್ತಿದ್ದರು. ಅವರ ಜೊತೆ ಚರ್ಚೆ, ಸಂಯಮ,ಮತ್ತು ನಾನಾ ಸಂಗೀತ ಪ್ರಕಾರಗಳ ಪರಿಚಯ, ತಾತನ ಜೊತೆ ಹಲವಾರು ಕಾರ್ಯಕ್ರಮಗಳಿಗೆ ಹೋಗಿದ್ದು ಅಲ್ಲದೆ ಅಂದಿನ ಕಾಲದಲ್ಲಿ ನಡೆಯುತ್ತಿದ್ದ ಕಚೇರಿಗಳು, ಇವೆಲ್ಲಾ ಚಿಕ್ಕ ವಯಸ್ಸಿನಿಂದಲೇ ನನ್ನಲ್ಲಿ ಪ್ರಭಾವ ಬೀರಿತ್ತು . ಅದರಲ್ಲೂ ಉತ್ತರ ದೇಶದಿಂದ ಬರುತ್ತಿದ್ದ ಗಾಯಕರು ನಮ್ಮ ತಾತನವರ ಜೊತೆ ಉತ್ತರಾದಿ ಮತ್ತು ದಕ್ಷಿಣಾದಿ ಸಂಗೀತಗಳ ಸಮ್ಮಿಲನದ ಪ್ರಯೋಗಗಳನ್ನು ನಡೆಸುತ್ತಿದ್ದರು. ಈ ಶೈಲಿಯಿಂದ ಹಾಡಿದ ದೇವರನಾಮಗಳು ಬಹು ಜನಪ್ರಿಯವಾಗಿತ್ತು. ಇವನ್ನೇ ನಮ್ಮ ತಾಯಿ ಚಿಕ್ಕಮ್ಮಂದಿರು ಹಾಡಿದಾಗ ಅದು ಇನ್ನೂ ಸರಳವಾಯಿತು, ಸುಗಮವಾಗಿತ್ತು. ”

ಅಣ್ಣ ಸುಮಾರು ವರ್ಷಗಳ ಕಾಲ ಕೊಳಲು ಮತ್ತು ಮ್ಯಾಂಡೊಲಿನ್ ನುಡಿಸುತ್ತಿದ್ದರು. ಹಾಡುತ್ತಿದ್ದದ್ದು ಕಮ್ಮಿ . ಅವರು ಹಾಡುಗಾರನಾಗಲು ಮುಖ್ಯವಾಗಿ ಕಾರಣವಾದವರು ಅಜ್ಜಿ. ಒಮ್ಮೆ ಅಣ್ಣನನ್ನು ಕೂರಿಸಿ ಅವರಿಗೆ ಬುದ್ಧಿವಾದ ಹೇಳಿದರು “ನೀನು ಹಾಡಬೇಕು . ನಿನ್ನಲ್ಲಿ ಇರುವ ವಿಶೇಷವಾದ ಸಂಗತಿ ಎಂದರೆ ನಿನ್ನ ಹಾಡುಗಾರಿಕೆ”, ಎಂದು. ಇದು ಅಣ್ಣನಿಗೂ ಸರಿ ಎನ್ನಿಸಿ , ಅಲ್ಲಿಂದ ಮುಂದೆ ಹಾಡುವುದರ ಕಡೆಗೆ ಹೆಚ್ಚು ಗಮನ ಕೊಟ್ಟರು .

ಕ್ಲಿಕ್: ಎಂ ಶ್ರೀಧರ ಮೂರ್ತಿ

ಕ್ಲಿಕ್: ಎಂ ಶ್ರೀಧರ ಮೂರ್ತಿ

ನಮ್ಮ ತಾತ, ಅಂದ್ರೆ ಅಣ್ಣನ ತಂದೆ, ಜೆ ಪಿ ಸುಬ್ಬ ರಾವ್ , Economics ಮತ್ತು Political  Scienceನಲ್ಲಿ ಡಬ್ಬಲ್ MA  ಪಡೆದವರು.  MA ಪದವಿ ಬಂದಮೇಲೆ ಗುಮಾಸ್ತರಾಗಿ ಹೆಚ್ಚುಕಾಲ ಜೀವನ ನಡೆಸಿದರು, ನಂತರ Revenue Inspector ಆಗಿದ್ದರು. ಜಮಾಬಂದಿಯಲ್ಲಿ ಆಗಿನ Divisional commissioner ಒಬ್ಬರು, ಇವರು ಬರೆದ report ಓದಿ ಇವರ ಬಗ್ಗೆ ವಿಚಾರಿಸಿ ತಕ್ಷಣವೇ ಇವರನ್ನು Treasury Officer ಆಗಿ ಬಡ್ತಿ ನೀಡಿದರು. ಅವರು ೬೩ನೇ ವಯಸ್ಸಿನಲ್ಲಿ ಕೆಲಸದಿಂದ ನಿವೃತ್ತರಾದಾಗ ಮಡಿಕೇರಿಯಲ್ಲಿ ವಾಸಿಸುತ್ತಿದ್ದರು. ನಮ್ಮ ತಾತ ಹಾಗು ಕವಿ ಕೆ ಎಸ್ ನರಸಿಂಹಸ್ವಾಮಿ ಸಹೋದ್ಯೋಗಿಗಳಾಗಿದ್ದರು. ಎಲ್ಲಿ, ಯಾವಾಗ ಅಂತ ನನಗೆ ತಿಳಿದಿಲ್ಲ.

ತಾತನಿಗೆ ಎಲ್ಲಾ ವಿಷಯಗಳು ಚೆನ್ನಾಗಿ ತಿಳಿದಿತ್ತು, ಬಹಳ ಓದುತ್ತಿದ್ದರು. ಇಂಗ್ಲಿಷ್ ಭಾಷೆಯಲ್ಲಿ ಚೆನ್ನಾಗಿ ಮಾತನಾಡುವವರು ಹಾಗು ಬರವಣಿಗೆಯಲ್ಲೂ ನಿಪುಣರಾಗಿದ್ದರು.  ಅವರ ಮಾತುಕತೆ ಮತ್ತು  ನಡುವಳಿಕೆಯಿಂದ ಅವರು ವಿದ್ಯಾವಂತರು ಎಂದು ತಿಳಿಯುತ್ತಿತ್ತು.

ಕುತೂಹಲಕಾರಿ ವಿಷಯವೇನೆಂದರೆ, ಇವರು ಲಾಟರಿಯಲ್ಲಿ ಒಂದು ಲಕ್ಷ ರೂಪಾಯಿ ಗೆದ್ದರು. ಆಗ ಮಡಿಕೇರಿಯಲ್ಲಿ ‘ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್’  ಎಂಬ ಟೈಪಿಂಗ್ ಇನ್ಸ್ಟಿಟ್ಯೂಟ್ ಶುರು ಮಾಡಿದರು. ಈಗಲೂ ಮಡಿಕೇರಿಯಲ್ಲಿ ಅದನ್ನು ನಮ್ಮ ದೊಡ್ಡಪ್ಪ ನಡೆಸುತ್ತಿದ್ದಾರೆ.  ಅಲ್ಲಿ ಅದೇ ಮೊಟ್ಟ ಮೊದಲನೇ ಟೈಪಿಂಗ್ ಇನ್ಸ್ಟಿಟ್ಯೂಟ್.

ತಾತನಿಗೆ, ಸಂಗೀತಗಾರನಾಗಲು ಹೊರಟಿದ್ದ ಅವರ ಮಗ ತಮ್ಮ ಹಾಗೆಯೇ ಓದಿ ಗವರ್ನಮೆಂಟ್ ಕೆಲಸಕ್ಕೆ ಸೇರಲಿ ಎಂಬ ಆಸೆ ಇತ್ತು. ಅಣ್ಣ ಗವರ್ನಮೆಂಟ್ ಕೆಲಸಕ್ಕೇನೋ ಸೇರಿದರು ಆದರೆ ಅವರ ಸಂಗೀತದಿಂದ (ಇದೇ ಬೇರೆ ಕತೆ, ಆಮೇಲೆ ಹೇಳ್ತೀನಿ).

ತಾತ Revenue Inspector ಆಗಿದ್ದ ಕಾಲದ ಒಂದು ಕತೆ:

ಆಗ ಈಗ ಮನೇಲಿ ಸಕ್ಕರೆ ಹಾಗು ಮತ್ತಿತರ ಸಾಮಾನುಗಳ ಮೂಟೆಗಳು ಬರುತ್ತಿದ್ದವು. ಅಣ್ಣನಿಗೆ ಸಕ್ಕರೆ ಅಂದ್ರೆ ಪ್ರಾಣ. ಒಮ್ಮೆ ಒಂದು ಮೂಟೆ ಸಕ್ಕರೆ ಅಟ್ಟದ ಮೇಲಿತ್ತು . ಅಣ್ಣ ಹೋಗ್ತಾ ಬರ್ತಾ ಅಟ್ಟ ಹತ್ತಿ ಸಕ್ಕರೆ ಮುಕ್ಕುತ್ತಿದ್ದರು. ಹೀಗೆ ಸಕ್ಕರೆ ಮುಕ್ಕುತ್ತಾ ಅಟ್ಟದ  ಮೇಲೆ ಕೂತಿದ್ದಾರೆ, ಅಜ್ಜಿ ಒಳಗೆ ಬಂದ ಸದ್ದು ಕೇಳಿಸ್ತು, ತಕ್ಷಣ ಸ್ವಲ್ಪವೂ ಯೋಚಿಸದೆ ಅಟ್ಟದ ಮೇಲಿಂದ ಕೆಳಕ್ಕೆ ಹಾರಿದ್ದಾರೆ, ಹಾರುವಾಗ, ಅವರ ಹಣೆ, ಮಾಳಿಗೆಗೆ ತಗಲಿ ಕೆಳಗೆ ಬಿದ್ದರು ; ಬಿದ್ದಾಗ  ಅಜ್ಜಿ ಕಂಡದ್ದು, ಅಣ್ಣನ ಬಾಯಿ ತುಂಬಾ ಸಕ್ಕರೆ- ಹಣೆಮೇಲೆ ದೊಡ್ಡ ಬೋರೆ.  ಅವರ ಹಣೆ ಮೇಲೆ ಎಷ್ಟು ಜೋರಾಗಿ ಏಟು ಬಿತ್ತೆಂದರೆ, ಜೀವನ ಪೂರಾ ಆ ಘಟನೆ ಅವರಿಗೆ ಜ್ಞಾಪಕವಿರಲಿ ಎಂದು ಆ ಬೋರೆ ಹಾಗೆ ಉಳಿದಿತ್ತು.

‍ಲೇಖಕರು Admin

November 18, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ರೈತರ ‘ಚಲೋ ದಿಲ್ಲಿ’

ರೈತರ ‘ಚಲೋ ದಿಲ್ಲಿ’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಹಿಂದೆ ದಿಲ್ಲಿ ಮತ್ತು...

ಪರನಾಡಿನಲ್ಲಿ ಪ್ರೀತಿ ಹಂಚಿದ ಮುಖಗಳು

ಪರನಾಡಿನಲ್ಲಿ ಪ್ರೀತಿ ಹಂಚಿದ ಮುಖಗಳು

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ...

3 ಪ್ರತಿಕ್ರಿಯೆಗಳು

  1. Anonymous

    ತುಂಬಾ ಸೊಗಸಾಗಿದೆ ಸುನೀತಾ ಈ ಸಂಚಿಕೆ. ಅವರ ಹಣೆಯ ಬೋರೆಯ ರಹಸ್ಯ ತಿಳಿಯಿತು.

    ಪ್ರತಿಕ್ರಿಯೆ
  2. Roopa.k

    ಸೊಗಸಾದ ಚಿತ್ರಣ ಕಟ್ಟಿಕೊಟ್ಟಿದ್ದೀರಿ.ಧನ್ಯವಾದಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: