‘ಮೊಟ್ಟೆಯ ಕತೆ’ಯ ರಾಜ್ ಶೆಟ್ಟಿ ಬಂದರು…

ಕನ್ನಡ ರಂಗಭೂಮಿಯ ಮಹತ್ವದ ಹೆಸರು ಚಂಪಾ ಶೆಟ್ಟಿ.

ಕಾಲೇಜು ರಂಗ ಶಿಬಿರದ ಮೂಲಕ ರಂಗಭೂಮಿ ಪ್ರವೇಶಿಸಿದ ಈಕೆ ನಂತರ ಚಿತ್ರರಂಗದಲ್ಲಿ ಕಂಠದಾನ ಕಲಾವಿದೆಯಾಗಿ ಹೆಸರು ಮಾಡಿದರು.

ರಂಗ ಮಂಟಪ’ ತಂಡದ ಸ್ಥಾಪಕಿಯೂ ಹೌದು. ತಂಡಕ್ಕೆ ‘ಗಾಂಧಿ ಬಂದ’ ನಿರ್ದೇಶಿಸಿ ಸೈ ಅನಿಸಿಕೊಂಡರು. ನಂತರ ವೈದೇಹಿಯವರ ‘ಅಕ್ಕು’ ಅಮ್ಮಚ್ಚಿ ಎಂಬ ನೆನಪು ಆಗಿ ಚಿತ್ರ ನಿರ್ದೇಶಕಿಯೂ ಆದರು.

ಒಂದು ಸುಂದರ ಕಾವ್ಯದಂತಿರುವ ‘ಅಮ್ಮಚ್ಚಿ ಎಂಬ ನೆನಪು’ ತೆರೆಯ ಮೇಲೆ ಅರಳಿದ ಕಥೆ ನಿಮ್ಮ ಮುಂದೆ..

ಅಮ್ಮಚ್ಚಿ ಸಿನೆಮಾದ ತಯಾರಿಯ ಆರಂಭದ ದಿನಗಳಲ್ಲೇ ರಿಲೀಸ್ ಆಗಿದ್ದು “ಒಂದು ಮೊಟ್ಟೆಯ ಕತೆ” .. ನಾವು ಕುಟುಂಬ ಸಮೇತರಾಗಿ ಹೋಗಿ ನೋಡಿ ಹೊಟ್ಟೆ ಹುಣ್ಣಾಗುವಂತೆ ನಕ್ಕು ಬಂದ ಸಿನೆಮಾವದು.. ಹಾಗೆ ನಗುತ್ತಲೇ ನನ್ನ ಗಮನ ಸೆಳೆದದ್ದು ಸಿನೆಮಾದ ಕತೆ, ನಿರ್ದೇಶನಗಳಿಗಿಂತಾ ಮುಖ್ಯವಾಗಿ ರಾಜ್. ಬಿ. ಶೆಟ್ಟಿ ಅವರ ಅದ್ಭುತ ನಟನೆ… ನಟನೆ ಎಂದರೂ ತಪ್ಪಾಗುತ್ತದೆ .

ಸಿನೆಮಾದಲ್ಲಿ ಅವರು ತೋರಿದ ಖುಷಿ, ಸಿಟ್ಟು, ಹತಾಷೆ, ದುಖಃ ಎಲ್ಲವೂ ಎಷ್ಟು ಸಹಜವಾಗಿತ್ತೆಂದರೆ, ‌ಎಲ್ಲೂ ಅವರು ಅಭಿನಯಿಸಿರಲಿಲ್ಲ ಅನುಭವಿಸಿದ್ದರು…ಇಂತಾ ಕಲಾವಿದ ಅಮ್ಮಚ್ಚಿಯ ವೆಂಕಪಯ್ಯನಾದರೆ ಹೇಗೆ ಎಂಬ ನನ್ನ ಆ ಆಸೆ ಅಷ್ಟು ಸುಲಭವಾಗಿ ನೆರವೇರುತ್ತದೆ ಎಂದು ನಾನಾದರೂ ಅಂದುಕೊಂಡಿರಲಿಲ್ಲ…

ನನ್ನ ಆಸೆ ಹೇಳುತ್ತಲೇ ನಮ್ಮ ತಂಡದವರೇ ಆದ ಗೀತಾ ಸುರತ್ಕಲ್, ಕೂಡಲೇ ರಾಜ್ ಅವರ ಬಳಿ ಮಾತನಾಡಿದ್ದರು. ಕತೆ ಓದಿ ತಿಳಿಸುತ್ತೇನೆ ಎಂದ ರಾಜ್ ಅವರು , ಕತೆ ಓದಿದ ಕೂಡಲೇ ಪಾತ್ರ ಮಾಡಲು ಒಪ್ಪಿದ್ದರು…

ನಂತರ ಅನೇಕ ಬಾರಿ ಕಾಲ್ ಮಾಡಿ ಪಾತ್ರದ ಹಿನ್ನೆಲೆ, ನನ್ನ ದೃಷ್ಟಿಯಲ್ಲಿ ಪಾತ್ರದ ಕಲ್ಪನೆಗಳ ಬಗೆಗೆ ಮಾತನಾಡುತ್ತಿದ್ದರು, ಹೀಗೇ ಮಾತನಾಡುತ್ತಾ ಅವರು, “ನನಗೆ ವೆಂಕಪ್ಪಯ್ಯ ವಿಲನ್ ಅಲ್ಲ ಮೇಡಂ ನಾನು ಆ ಪಾತ್ರ ಮಾಡುವಾಗ ಆ ಪಾತ್ರವನ್ನು ನಾನು ಸಮರ್ಥಿಸಿ ಕೊಳ್ಳಬೇಕಾಗುತ್ತದೆ ಎಂದಾಗ” ಅರೇ ನನ್ನ ಮಾತೇ ಇವರು ಆಡುತ್ತಿದ್ದಾರಲ್ಲಾ ಅನ್ನಿಸಿತ್ತು. ಗಾಂಧಿ ಬಂದ ನಾಟಕದ ಹೆಬ್ಬಾರರ ಪಾತ್ರಕ್ಕಾಗಿ ನಮ್ಮ ತಂಡದ ರಾಜ್ ಕುಮಾರ್ ಅವರಿಗೆ ಈ ಮಾತನ್ನು ಹಲವಾರು ಬಾರಿ ಹೇಳಿದ್ದೆ. .

ಹೀಗೇ ಅನೇಕ ವಿಷಯಗಳಲ್ಲಿ ನಮ್ಮಿಬ್ಬರ ವಿಚಾರಗಳಲ್ಲಿನ ಸಾಮ್ಯತೆ ಕಂಡು ಇಬ್ಬರೂ ಆಶ್ಚರ್ಯ ಪಟ್ಟಿದ್ದೆವು…. ಇಷ್ಟಾದರೂ ಒಂದು ಸಣ್ಣ ಆತಂಕ ನನ್ನನ್ನು ಬಿಡದೆ ಕಾಡುತ್ತಿತ್ತು…. ಈಗಾಗಲೇ “ಒಂದು ಮೊಟ್ಟೆಯ ಕತೆ “ಮಾಡಿ ಅಷ್ಟು ದೊಡ್ಡ ಹೆಸರು ಮಾಡಿದವರು, ನಮ್ಮ ಜೊತೆ ಹೇಗಿರುತ್ತಾರೆ? ಆವರಿಗೆ ಹೇಗೆ ನಿರ್ದೇಶನ ಮಾಡುವುದು? ಇತ್ಯಾದಿ….

ಶೂಟಿಂಗ್ ದಿನ ನಮ್ಮ ಎಲ್ಲಾ ಊಹೆಗಳನ್ನು ತಲೆಕೆಳಗು ಮಾಡಿದ ರಾಜ್ ಸರ್ ಸೀದಾ ಬಂದವರೆ, ನಮ್ಮೆಲ್ಲರಂತೆ ಚಾಪೆಯಲ್ಲೇ ಮಲಗಿ, ಪುಟ್ಟ ಮಾಣಿಯಿಂದ ಹಿಡಿದು ಎಲ್ಲರ‌ ಜೊತೆ ಮಾತನಾಡುತ್ತಾ, ನಗುತ್ತಾ ನಮ್ಮೊಳಗೊಬ್ಬರಾದದ್ದು ನಮಗೆ ವಿಶೇಷವಾದರೂ ರಾಜ್ ಅವರನ್ನು ಹತ್ತಿರದಿಂದ ಬಲ್ಲವರಿಗೆ ಅದು ಸಹಜವಾಗಿತ್ತು…..

ಶೂಟಿಂಗ್ ಹಿಂದಿನ ರಾತ್ರಿ ಪಾತ್ರದ ಬಗ್ಗೆ ಚರ್ಚಿಸುತ್ತಾ ನಾನು ಹೇಳಿದ ಒಂದು ಅಂಶದ ಬಗ್ಗೆ ತಲೆಕೆಡಿಸಿಕೊಂಡ ಅವರು, ರಾತ್ರಿ‌ಇಡೀ ಯೋಚಿಸುತ್ತಾ ಬೆಳಿಗ್ಗೆ , “ಮೇಡಂ ಹೀಗೆ ಮಾಡಿದ್ರೆ ಹೇಗೆ ?” ಅಂದಾಗ ಅವರ ವಿನಯದ ಜೊತೆಗೆ ಪಾತ್ರ ಪೋಷಣೆಯ ಬಗ್ಗೆ ಅವರಿಗಿರುವ ಕಾಳಜಿ,ಮತ್ತು ಇಂತಹ ಕಲಾವಿದರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ಹೆಮ್ಮೆಯಾಗಿತ್ತು..

ರಾಜ್ ಶೆಟ್ಟಿಯವರು ನಮ್ಮ ಸಿನೆಮಾದಲ್ಲಿ ಮಾಡಬೇಕೆಂದು ನಾನು ಆಸೆಪಟ್ಟದ್ದು ಅವರ ಈ ಪ್ರತಿಭೆಗೇ ಹೊರತು, ಅವರಿಗಿದ್ದ ಜನಪ್ರಿಯತೆಯೋ, ಅಥವಾ ಇನ್ಯಾವುದೋ ಕಾರಣವೋ ಅಲ್ಲ…. .ತಾವೂ ಒಬ್ಬ ನಿರ್ದೇಶಕರಾದರೂ, ಒಂದಿಷ್ಟೂ ಅಹಂ ಇಲ್ಲದೇ ಒಬ್ಬ ಕಲಾವಿದರಾಗಿ ಅವರು ವೆಂಕಪ್ಪಯ್ಯನೊಳಗೆ ಹೊಕ್ಕ ಬಗೆ, ಸಿನೆಮಾ ನೋಡಿದವರಿಗೆ ಅರಿವಾಗದೇ ಇರುವುದಿಲ್ಲ…..

ನಮ್ಮ ತಂಡದ ಆಲೋಚನೆಗಳೂ, ರಾಜ್ ಸರ್ ಅವರ ಆಲೋಚನೆಗಳೂ ಒಂದೇ ಆದ್ದರಿಂದಲೋ ಏನೋ ರಾಜ್ ಸರ್ ನಮ್ಮ ತಂಡದವರೇ ಆಗಿಹೋದರು. ಪೋಸ್ಟ್ ಪ್ರೊಡಕ್ಷನ್ ಸಮಯದಲ್ಲಿ ಸಿನೆಮಾ ಕುರಿತು ಅನೇಕ ಸಲಹೆ ಸೂಚನೆಗಳನ್ನು ಕೊಟ್ಟರಲ್ಲದೆ , ಅವರಿಂದ ನಮಗೆ ಸಿಕ್ಕ ದೊಡ್ಡ ಕೊಡುಗೆ, ರಾಜ್ ಸರ್ ಮಾಡಿಕೊಟ್ಟ‌ ಸಿನಿಮಾದ “ಅದ್ಭುತವಾದ ಟ್ರೇಲರ್”…..

ಸಿನೆಮಾದ ಕಲಾವಿದರು, ತಂತ್ರಜ್ಞರು ಎಲ್ಲಾ fix ಆದರು. ಆದರೆ, ಸಿನೆಮಾ ಆಗುವ ಜಾಗ , ಅಂದರೆ, ಸಿನೆಮಾ ಭಾಷೆಯಲ್ಲಿ, ಲೊಕೇಷನ್ ಬೇಕಲ್ಲಾ .. ..

ವೈದೇಹಿ ಮೇಡಂ ಹೇಳಿದಂತೆ
“ಕರ್ನಿರೆ ನಮ್ಮ ಕರ್ಮಭೂಮಿ”

ಸಿನೆಮಾದ ಕತೆ ನಡೆಯುವುದು ಕುಂದಾಪುರದಲ್ಲಿ ಹಾಗಾಗಿ ಮೊದಲು ನಮ್ಮ ತಂಡ ಲೊಕೇಷನ್ ಹಂಟ್ ಗಾಗಿ ಹೊರಟದ್ದು ಕುಂದಾಪುರಕ್ಕೆ…. ಎರಡು ದಿನ ಸತತವಾಗಿ ಹುಡುಕಿ ಸುಮಾರು ಹದಿನೈದು ಮನೆಗಳನ್ನು ಹುಡುಕಿದರೂ ಒಂದು ಮನೆಯೂ ಸರಿ ಹೊಂದುತ್ತಿಲ್ಲಾ … ಅಂದು ಬೆಳಗಿನಿಂದಾ ಅಲೆದಾಡಿದ ಆಯಾಸಕ್ಕಿಂತಾ ಯಾವ ಮನೆಯೂ ಸರಿಯಾಗಲಿಲ್ಲವೆಂಬ ಬೇಸರದಲ್ಲೇ ಹಿಂದಿರುಗುತ್ತಿದ್ದೆವು, ಆಗ ನನ್ನೊಳಗಿದ್ದ ಒಂದು ಆಲೋಚನೆಯನ್ನು ತಂಡಕ್ಕೆ ಹೇಳಿದ್ದೆ…

ಪಡುಬಿದ್ರೆಯ ಹತ್ತಿರ ಇರುವ ನನ್ನ ಚಿಕ್ಕತ್ತೆಯ (ಪ್ರಕಾಶ್ ಶೆಟ್ರ ಚಿಕ್ಕಮ್ಮ) ಮನೆಗೆ ಹಲವರು ಬಾರಿ ನಾನು ಹೋಗಿದ್ದೆ ಅಕ್ಕು ನಾಟಕ ನಿರ್ದೇಶಿಸುವಾಗ. ನಾನು ಆ ಮನೆಯನ್ನು ಮನಸ್ಸಿನಲ್ಲಿಟ್ಟುಕೊಂಡೇ ವಿನ್ಯಾಸ ಮಾಡಿದ್ದೆ…

ಹಾಗಾಗಿ ಆ ಮನೆಯೇ ಆಗಬಹುದೇ ಎಂಬ ಆಸೆಯಲ್ಲಿ ಅಂದು ರಾತ್ರಿ ಅಲ್ಲಿಯೇ ಹೋಗಿ ಉಳಿದುಕೊಳ್ಳೋಣ ಎಂದಾಗ , ಪ್ರಕಾಶ್ ಶೆಟ್ರು, ಲೊಕೇಶನ್ ಸೆಟ್ ಆಗುತ್ತದೆಯೋ ಇಲ್ಲವೋ, ಆದರೆ ಚಿಕ್ಕಮ್ಮನ ಅಪಾರವಾದ ಪ್ರೀತಿಯ ಜೊತೆಗೆ, ಅದ್ಭುತವಾದ ಮೀನಿನ ಊಟವನ್ನು ತಂಡದೊಟ್ಟಿಗೆ ಸವಿಯಬಹುದಲ್ಲಾ ಅನ್ನುವ ಆಸೆಗೆ , ಗಾಡಿ ತಿರುಗಿಸಿದ್ದು ಸೀದಾ ಕರ್ನಿರೆಯ ಕಡೆಗೆ…

 ಅಂದುಕೊಂಡಂತೆ ಸುಗ್ರಾಸ ಭೋಜನ ಮುಗಿಸಿ ಚಿಕ್ಕಪ್ಪನೊಂದಿಗೆ ಸಿನೆಮಾದ ವಿಷಯ ಹೇಳುತ್ತಾ ಹೀಗೊಂದು ಮನೆ ಬೇಕಿತ್ತು ಅಂದಾಗ, ಚಿಕಪ್ಪಾ ಮನಸ್ಸಿನಲ್ಲಿಯೇ ಲೆಕ್ಕಚಾರ ಮಾಡಿ, ನೀನು ನನೊಟ್ಟಿಗೆ ಬಾ ಅಂತಾ ಆ ರಾತ್ರಿಯೇ ಶೆಟ್ರನ್ನು ಯರದೋ ಮನೆಗೆ ಕರೆದುಕೊಂಡು ಹೋದರು, ನಾವು ವಿವರಿಸಿದ ಚಿತ್ರದ ಕತೆಯ ಪರಿಣಾಮವೋ ಚಿಕ್ಕಪ್ಪನ ಗ್ರಹಿಕೆಯ ಅದ್ಭುತವೋ ಗೊತ್ತಿಲ್ಲಾ, ನಮ್ಮ ಸಿನೆಮಾಗಾಗಿಯೇ ಕಾದುಕುಳಿತಂತಿದ್ದ ಕತೆಗೆ ಹೇಳಿ ಮಾಡಿಸಿದ , ನೂರಾರು ವರ್ಷದ ಹಿಂದಿನ ಅಚ್ಚುಕಟ್ಟಾದ ಮನೆಯನ್ನು ತೋರಿಸಿದ್ದರು, ನಮ್ಮ ಚಿಕ್ಕಪ್ಪ….

ಚಿಕ್ಕಪ್ಪನ ಅತ್ಯಂತ ಆತ್ಮೀಯರ ಮನೆಯಾದ್ದರಿಂದ ಒಪ್ಪಿಗೆಗೆ ಕಾಯುವ ಅವಶ್ಯಕತೆಯೇ ಇಲ್ಲವೆಂಬಂತೆ ಲೊಕೇಷನ್ ಫಿಕ್ಸ್ ಆಗಿಹೋಯಿತು… ಜೊತೆಗೆ ನಾವು ಉಳಿದುಕೊಂಡ ನಮ್ಮ ಪ್ರೀತಿಯ ಚಿಕ್ಕಪ್ಪನ ಮನೆ ಅಮ್ಮಚ್ವಿ ಮನೆಯಾಯಿತು (ಒಳಾಂಗಣ ದೃಷ್ಯಗಳು)…ಮನೆಗಳು ಮಾತ್ರವಲ್ಲದೇ ಮನೆಯವರೂ ಸಿನೆಮಾದ ಭಾಗವಾದದ್ದು ಸಿನೆಮಾದ ಅದೃಷ್ಟವೇ ಸರಿ….


ಇಡೀ ಸಿನೆಮಾ ಚಿತ್ರೀಕರಣಗೊಂಡದ್ದು ಕರ್ನಿರೆಯ ಎರಡು ಕಿಲೋಮೀಟರ್ ವ್ಯಾಪ್ತಿಯ ಒಳಗೆ… ಮನೆಯ ಸುತ್ತಮುತ್ತಲಿನ ಗದ್ದೆಗಳು, ತಣ್ಷನೆ ಹರಿಯುವ ನದಿ , ಚೆಂದದ ಸೇತುವೆ, ಅಲ್ಲಲ್ಲಿ ಕಾಣುವ ಹೆಂಚಿನ ಮನೆಗಳು, ಸಮಯದ ಹಂಗಿಲ್ಲದೆ ಕೊಳವೆಯಿಂದ ಬರುವ ಹೊಗೆ, ಹಚ್ಚಹಸಿರಿನ ಮರಗಿಡಗಳು…

ಅಲ್ಲಲ್ಲೇ ಮುಟ್ಟಾಲೆ (ಅಡಿಕೆ ಹಾಳೆಯ ಟೊಪ್ಪಿ) ತಲೆಗೇರಿಸಿಕೊಂಡು ನಡೆವ ಹೆಂಗಸರು, ಕರಾವಳಿಯ ಸೊಬಗನ್ನು ಸೂಸುವ ಇಂತಹ ಅನೇಕ ದೃಶ್ಯಗಳು ನಮ್ಮ ಸಿನೆಮಾಗಾಗಿಯೇ ಇದ್ದವೇನೋ ಎಂಬತಿದ್ದದ್ದು ಅದೃಷ್ಟವಲ್ಲದೇ ಮತ್ತೇನು?….

ಇದರ ನಡುವೆಯೇ ಅಮ್ಮಚ್ಚಿಯ ಕನಸಿನ ಹುಡುಗನ ಮನೆ (ಶಂಭಟ್ರ ಮಗನ ಮನೆ) ಚಿತ್ರೀಕರಣಗೊಂಡದ್ದು ತುಳುನಾಡ ಪ್ರಸಿದ್ದ ಆರಾಧ್ಯದೈವ “ಸಿರಿ”ಯ ಗಂಡನ ಮನೆಯಲ್ಲಿ ಎಂಬುದು ಮತ್ತೊಂದು ವಿಶೇಷ….

ಶೂಟಿಂಗ್ ಗೆ ಬೇಕಾದ ಜಾಗಗಳಷ್ಟೇ ಅಚ್ವುಕಟ್ಟಾಗಿ ನಮಗೆ ಸಿಕ್ಕಿದ್ದು, ನಾವೆಲ್ಲಾ ತಂಗುವ ಜಾಗ…ಕರ್ನಿರೆ ಒಂದು ಪುಟ್ಟ ಗ್ರಾಮ, ಅಲ್ಲಿ ಹೊಟೆಲ್ ಇಲ್ಲಾ , ಹೊಟೆಲ್ ಇದ್ದಿದ್ದರೂ ಬಹುಶಃ ನಾವಲ್ಲಿ ತಂಗುತ್ತಿರಲಿಲ್ಲ..

ನಾನಾಗಲೇ ತಿಳಿಸಿದ ಚಿಕ್ಕಪ್ಪನವರ ತಂಗಿಯ ಬೇಸಿಗೆಯ ಅರಮನೆ ಅಂದರೆ, ದೂರದ ಮುಂಬೈನಲ್ಲಿರುವ ಅವರು ಊರಿಗೆ ಬಂದಾಗ ಉಳಿದುಕೊಳ್ಳಲು ಕಟ್ಟಿರುವ ಚೆಂದದ ಮನೆ ಚಿಕ್ಕಪ್ಪನವರ ಸುಪರ್ದಿಯಲ್ಲೇ ಇದ್ದುದರಿಂದ ಸರಾಗವಾಗಿ ಅದು ನಮ್ಮದಾಗಿ, ಟೆಕ್ನಿಷಿಯನ್ಸ್ ಉಳಿದುಕೊಳ್ಳಲು ಅನುಕೂಲವಾಯಿತು…

ಹಾಗೇ ಅದರ ಪಕ್ಕದಲ್ಲೇ ಇದ್ದ, ನಮ್ಮ ಗೀತಾ ಸುರತ್ಕಲ್ ಅವರ ಕುಟುಂಬ ಸ್ನೇಹಿತರಾದ ‘ಹರೀಶ್ ಅಗರಗುತ್ತು’ ಅವರ ಅಂತಹುದೇ ಒಂದು ಅರಮನೆ, ನಾವು ಕಲಾವಿದರೆಲ್ಲಾ ಉಳಿಯಲು ತಯಾರಾಯಿತು… ಇನ್ಯಾಕೆ ನಮಗೆ ಹೊಟೆಲ್ ನ ಹಂಗು? ಒಟ್ಟಿನಲ್ಲಿ ನಾವು ಉಳಿದುಕೊಡಿದ್ದ ಮನೆಗಳು, ಶೂಟಿಂಗ್ ಮನೆ, ಎಲ್ಲವೂ ಕಾಲ್ನಡಿಗೆಯ ಅಂತರದಲ್ಲೇ ಇದ್ದುದರಿಂದ, ಗಾಡಿಗಳ ಹಂಗೂ ಬೇಡವಾಯಿತು.

ಕ್ಯಾಮರಾ ಗಾಡಿ ಬಿಟ್ಟು ಉಳಿದೆಲ್ಲರೂ ಬೆಳ್ ಬೆಳಿಗ್ಗೆ ನಡೆದುಕೊಂಡು ಹೊರಡುತ್ತಿದ್ದ ಸಂಭ್ರಮವನ್ನು ಮಾತಿನಲ್ಲಿ ಹೇಳಲಾಗದು… ಇನ್ನು ಶೂಟಿಂಗ್ (ಗುಣಶೀಲ) ಮನೆಯವರಂತೂ, ನಮ್ಮನ್ನು ಅತಿಥಿಗಳಂತೆ ಬರಮಾಡಿಕೊಳ್ಳುತ್ತಿದ್ದ ರೀತಿ, ನಮ್ಮ ಮೇಲೆ ತೋರುತಿದ್ದ ಅವರ ಪ್ರೀತಿ ಶೂಟಿಂಗ್ ನ ಕೊನೆಯದಿನದವರೆಗೂ ಒಂದಿಂಚೂ ಬದಲಾಗದೇ ಉಳಿದದ್ದು, ಮತ್ತು ಇಂದಿಗೂ ನಮ್ಮೊಡನಿರುವ ಅವರ ಒಡನಾಟ, ದಕ್ಷಿಣಕನ್ನಡದ ಜನರ ಅತಿಥಿ ಸತ್ಕಾರಕ್ಕೆ ಸಾಕ್ಷಿ ಎನ್ನಲೇ?….


ಊರ ಜನರೇ ಇಷ್ಟು ಪ್ರೀತಿಸುವಾಗ ಇನ್ನು ನಮ್ಮ ಚಿಕ್ಕಪ್ಪ ಚಿಕ್ಕಮ್ಮನ ಸತ್ಕಾರ ಕೇಳಬೇಕೆ ? ಮಗ ನಿರ್ಮಾಪಕ, ಸೊಸೆಯ ನಿರ್ದೇಶನ, ಅವರ ಸಂಭ್ರಮಕ್ಕೆ ಎಡೆಯೇ ಇರಲಿಲ್ಲ… ಬೆಳಗಿನ ಜಾವ ನಾಲ್ಕು ಗಂಟೆಗೇ ಎದ್ದು ಒಲೆ ಉರಿ ಹಾಕುತ್ತಿದ್ದ ಚಿಕ್ಕಮ್ಮ,.. ಹಾಲು ಕರೆದು ಬಿಸಿಮಾಡಿ‌ ಒಂದುದಿನವೂ ತಪ್ಪದೆ ನನಗಾಗಿ ತೆಗೆದಿಡುತ್ತಿದ್ದ ಚಿಕ್ಕಪ್ಪ, ದಿನವಿಡೀ ತಂಡದವರ ಜೊತೆಗೇ ಇದ್ದು ಏನುಬೇಕೋ ಎಲ್ಲವನ್ನೂ ಒದಗಿಸಿ ಕೊಟ್ಟು, ಎಲ್ಲರೊಂದಿಗೂ ಬೆರೆಯುತ್ತಿದ್ದ ಅವರಿಬ್ಬರ ಬಗ್ಗೆ, ನಾನು ಹೇಳಿದಷ್ಟೂ ಕೇಳುವರಿಗೆ ಉತ್ಪ್ರೇಕ್ಷೆ ಎನಿಸಬಹುದಾದರೂ, ಅನುಭವಿಸಿದವರಿಗೆ ಹೇಳಿದಷ್ಟೂ ಕಡಿಮೆಯೇ…

ನಮ್ಮಿಬ್ಬರಿಗೆ ಮಾತ್ರವಲ್ಲದೆ,ಇಡೀ ತಂಡದವರಿಗೇ ಅವರು ತಿದ್ದಿ ( ತುಳು ಭಾಷೆಯ ಚಿಕ್ಕಪ್ಪ), ಚಿಕ್ಕಮ್ಮ ಆಗಿಬಿಟ್ಟಿದ್ದರು…. ವಾರವಿಡೀ ಉದಯರಾವ್ ಅವರ, ಕರಾವಳಿಯ ವಿಶೇಷ ತರಕಾರಿ ಅಡುಗೆಯ ಜೊತೆಗೆ, ವಾರದ ಕೊನೆಗೆ, ಚಿಕಪ್ಪನ ಕುಟುಂಬದವರೇ ಮಾಡಿ ಬಡಿಸುತ್ತಿದ್ದ ವಿಶೇಷ ಊಟದ ಪರಿಮಳಕ್ಕೆ ತಂಡದವರೆಲ್ಲಾ ಫಿದಾ ಆಗಿದ್ದರೆಂಬುದಕ್ಕೆ ಸಾಕ್ಷಿಯಾಗುತ್ತಿದ್ದುದು, ಮರುದಿನ ಅವರೊಳಗೆ ನಡೆಯುತ್ತಿದ್ದ ಊಟದ ಬಗೆಗಿನ ಚರ್ಚೆ….

ಒಮ್ಮೆ ತಡ ರಾತ್ರಿ ಶೂಟಿಂಗ್ ಸಮಯದಲ್ಲಿ ಸುಸ್ತಾಗಿದ್ದ ನನಗೆ, ಚಿಕ್ಕಮ್ಮ ಮಾಡಿತಂದ ಒಂದು ಲೋಟ ಕಶಾಯ, ಮುಂದೆ ಒಂದು ಕೊಳಗವಾಗಿ ಇಡೀ ತಂಡಕ್ಜೆ ದಿನವೂ ಮಾಡಿತರುವ ಪದ್ದತಿಯಾಗಿ, ಹತ್ತು ಗಂಟೆಗೆ ಎಲ್ಲರೂ ಕಶಾಯಕ್ಕಾಗಿ ಕಾಯುವಂತಾದ್ದದ್ದು ಕಶಾಯದ ರುಚಿಯ ಮಹಿಮೆಯೋ ಚಿಕ್ಕಮ್ಮನ ಮಮತೆಯ ಮಹಿಮೆಯೋ ಗೊತ್ತಿಲ್ಲ …

ಇಷ್ಟೆಲ್ಲಾ ವೈಭೋಗದ ನಡುವೆ ಮೊದಲ ದಿನದ ಶೂಟಿಂಗ್ ನಿಂದಲೇ ಅಮ್ಮಚ್ಚಿ ಸರಾಗವಾಗಿ ಬೆಳೆಯುತ್ತಾ ಹೋದಳು ಎಂಬಲ್ಲಿಗೆ, ಕರ್ನಿರೆಯ ಪುರಾಣ ಮುಕ್ತಾಯ…. ‌ಮುಂದಿನ ಸಂಚಿಕೆಯಲ್ಲಿ, ಶೂಟಿಂಗ್ ನ ಕೆಲವು ರೋಚಕ ಅನುಭವಗಳು ನಿಮ್ಮ ಮುಂದೆ…..

‍ಲೇಖಕರು ಚಂಪಾ ಶೆಟ್ಟಿ

October 11, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ವಿಫಲ ಪ್ರೇಮಕ್ಕೆ ಐದು ಉದಾಹರಣೆಗಳು

ವಿಫಲ ಪ್ರೇಮಕ್ಕೆ ಐದು ಉದಾಹರಣೆಗಳು

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ...

೧ ಪ್ರತಿಕ್ರಿಯೆ

  1. T S SHRAVANA KUMARI

    ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದೇನಾದ್ದರಿಂದ ಪ್ರತಿ ವಿವರಣೆಯೂ ಆಪ್ತವಾಗಿದೆ. ರಾಜ್ ಶೆಟ್ರು ನಮ್ಮಲ್ಲಿ ಮಾತ್ರವಲ್ಲದೆ ಅಮೇರಿಕಾದಲ್ಲೂ ಎಲ್ಲ ಕನ್ನಡಿಗರಿಗೂ ಅಚ್ಚುಮೆಚ್ಚು. ಅಲ್ಲೂ ಎಲ್ಲರೂ ಅವರ ಮೊಟ್ಟೆಯ ಕತೆಗೆ ಫಿದಾ ಆಗಿದ್ದವರೇ. ರಾಜ್ ಶೆಟ್ರು ಸುಚಿತ್ರಾನಲ್ಲಿ ಸಿಕ್ಕಾಗ ಅವರೊಂದಿಗೆ ಇದನ್ನು ಹಂಚಿಕೊಂಡೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: