ಅಹಹ ವೇಷವೆ…!

2117918639_2ff8bd637c.jpg

ಯಕ್ಷರಿಗೊಂದು ಪ್ರಶ್ನೆ

ಇದು ವಿಕಾಸ ನೇಗಿಲೋಣಿ ಬರಹ.  ಯಲ್ಲಾಪುರ, ಸಿದ್ಧಾಪುರ, ತೀರ್ಥಹಳ್ಳಿ, ಸಾಗರ, ಕಾಸರಗೋಡು, ಕುಂದಾಪುರದಂಥ ಊರಿನ ಹಂಗಾಮಿ ಯುವಕರನ್ನು ನಾಸ್ಟಾಲ್ಜಿಯಾದಂತೆ ಕಾಡುವ ಯಕ್ಷಗಾನವನ್ನು ವಿಕಾಸ್‌ ಅದ್ಭುತವಾಗಿ ಮೆಲುಕು ಹಾಕಿದ್ದಾರೆ. ಅವರು ಇತ್ತೀಚೆಗೆ ಬರೆದ ಒಳ್ಳೆಯ ಬರಹಗಳಲ್ಲಿ ಇದೂ ಒಂದು. ಓದಿ ನೋಡಿ ಎನ್ನುತ್ತಾರೆ ‘ಪಿಚ್ಚರ್’ನ ಪರಮೇಶ್ವರ ಗುಂಡ್ಕಲ್.

ಒಂದು ವಾರಕ್ಕೂ ಮೊದಲು ನಮ್ಮ ಕಿವಿಗೆ ಬಿದ್ದ ಆ ಸುದ್ದಿ ಥಟ್ಟನೆ ರೋಮಾಂಚನವನ್ನುಂಟುಮಾಡಿ, ಮೈ ಮನವನ್ನು ಆವರಿಸಿ ಮುಂದಿನ ಒಂದು ವಾರವನ್ನು ನಿರೀಕ್ಷೆಯ ಸಂಭ್ರಮದಲ್ಲಿ ತೇಲಿಸುತ್ತಿತ್ತು. ಊರು ಊರುಗಳಿಗೆ ಆ ಸಂಭ್ರಮ ರಿಕ್ಷಾದಲ್ಲಿ ಸಾಗಿ ಹೋಗುತ್ತಿತ್ತು. ಹೆಲಿಕ್ಯಾಪ್ಟರ್‌ನ ಮೂಲಕ ಪುಷ್ಪವೃಷ್ಟಿ ಮಾಡುವಂತೆ ಒಂದು ಆಟೋ ಮೂಲಕ ಊರು ಊರುಗಳಿಗೆ ಸಂಭ್ರಮದ ಸುದ್ದಿಯ ಪುಷ್ಪವೃಷ್ಟಿಯಾಗುತ್ತಿತ್ತು. ಮಕ್ಕಳ ಕಿವಿಗೆ ಸಂತೋಷದ ಸುದ್ದಿ ಬೀಳುವುದು ಬೇಗ ಮತ್ತು ಆಗಾಗುವ ಸಂಭ್ರಮ ಬಹಳ.ಆಟೋಕ್ಕೆ ಕಟ್ಟಿಕೊಂಡ ಮೈಕ್‌ಸೆಟ್‌ ಹೇಳುತ್ತಿದ್ದುದಿಷ್ಟೇ: ಒಂದೇ ಒಂದು ಆಟ, ಮರೆಯದಿರಿ, ಮರೆತು ನಿರಾಶರಾಗದಿರಿ. ಶ್ರೀ ಅನಂತ ಪದ್ಮನಾಭ ದಶಾವತಾರ ಯಕ್ಷಗಾನ ಮಂಡಳಿ ಪೆರ್ಡೂರು ಇವರಿಂದ ಆಟ. ಪ್ರಸಂಗ- ಇಂತಿಂಥದ್ದು, ಇಂತಿಂಥದ್ದು.ಆ ದಿನದಿಂದ ಮನೆಯಲ್ಲಿ ಯಾರು ಏನೇ ಕಷ್ಟ ಕೊಟ್ಟರೂ ಸಹಿಸಿಕೊಳ್ಳುತ್ತಿದ್ದೆವು, ಬೈದರೆ ಬೈಸಿಕೊಳ್ಳುತ್ತಿದ್ದೆವು, ಕೆಲಸ ಮಾಡೆಂದರೆ ತುಟಿ ಪಿಟಕ್‌ ಎನ್ನದೇ ಕೆಲಸ ಮಾಡಿ ಮುಗಿಸುತ್ತಿದ್ದೆವು. ಈ ಎಲ್ಲವನ್ನೂ ಮನೆಯವರು ನಮ್ಮಿಂದ ನಡೆಸಿಕೊಳ್ಳುತಿದ್ದುದು `ಯಕ್ಷಗಾನಕ್ಕೆ ಕರೆದುಕೊಂಡು ಹೋಗಬೇಕಿದ್ದರೆ…’ ಎಂಬ ಅಡ್ಡಗೋಡೆ ಮೇಲಿನ ದೀಪದಂಥ ಮಾತಿನ ಬಲದ ಮೇಲೆ. ಆ ಅಸ್ತ್ರವನ್ನು ಆಗ ಎಷ್ಟು ಬೇಕೋ ಅಷ್ಟು ಬಳಸಿಕೊಳ್ಳುತ್ತಿದ್ದರು. ನಾವು ಅವರ ಮಾತನ್ನು ಕೇಳದ ಕ್ಷಣದಲ್ಲೆಲ್ಲಾ ಯಕ್ಷಗಾನಕ್ಕೆ ಕರೆದುಕೊಂಡೇ ಹೋಗುವುದಿಲ್ಲೆಂದು ಹೆದರಿಸಿ ನಮ್ಮ ಕಣ್ಣಿಂದ ಕನಿಷ್ಟ ಮೂರ್ನಾಲ್ಕು ಬಾರಿಯಾದರೂ ಕಣ್ಣೀರು ಸುರಿಸಿ ತಮ್ಮ ಸೇಡು ತೀರಿಸಿಕೊಳ್ಳುತ್ತಿದ್ದರು.ಈ ಎಲ್ಲಾ `ಕಷ್ಟ ಕಾರ್ಪಣ್ಯ’ದ ಕೊನೆಯಲ್ಲಿ ಇರುತ್ತಿದ್ದುದು ಯಕ್ಷಗಾನದ ದಿನ. ಮಧ್ಯಾಹ್ನದಿಂದಲೇ ನಮಗವತ್ತು ಊಟ ಮೆಚ್ಚದು, ಕಣ್ಣಿಗೆ ಮಧ್ಯಾಹ್ನದ ಕೋಳಿ ನಿದ್ದೆ ಹತ್ತದು, ಎಷ್ಟು ಹೊತ್ತಾದರೂ ಗಂಟೆಯೇ ಮುಂದೆ ಹೋಗದು. ಅಮ್ಮನಿಗೆ ಡ್ರೆಸ್‌ ಮಾಡಿಯೇ ಮುಗಿಯದು, ಅಪ್ಪನಿಗೆ ಕೊಟ್ಟಿಗೆ ಕೆಲಸವೇ ಮುಗಿಯದು. ಎಲ್ಲಾ ಆಗಿ ಬಸ್‌ ಸ್ಟ್ಯಾಂಡ್‌ನಲ್ಲಿ ನಿಂತರೆ `ಇವತ್ತು ಬಸ್‌ ಕೈಕೊಡತ್ತೆ, ಮೊನ್ನೆ ಬಂದಿತ್ತು. ಆದರೆ ನಿನ್ನೆ ಮಾತ್ರ ಯಾಕೋ ಬರಲೇ ಇಲ್ಲವಂತೆ, ತೀರ್ಥಹಳ್ಳಿ ಹತ್ತಿರ ಏನೋ ಬಸ್‌ ಕೆಟ್ಟು ಹೋಗಿ ಅರ್ಧಕ್ಕೇ ವಾಪಾಸ್‌ ಹೋಯಿತಂತೆ’ ಎಂದು ನಮ್ಮೂರ ಹಿರಿಯರು ಗೊಣಗುತ್ತಿದ್ದರು. ನಮ್ಮ ಗ್ರಹಚಾರಕ್ಕೆ ಅವತ್ತೇ ಬಸ್ಸು ಕಾಲು ಗಂಟೆ ತಡ ಆದರೂ ಬರುತ್ತಿರಲಿಲ್ಲ. ಒಮ್ಮೊಮ್ಮೆ ದೂರದಲ್ಲಿ ಏನೋ ಸವುಂಡ್‌ ಆಗಿ, ಅದು ಬಸ್ಸು ಎಂದು ನಾವೆಲ್ಲಾ ಭ್ರಮಿಸಿ ಕೊನೆಗದು ಬೈಕೋ, ವ್ಯಾನೋ, ಲಾರಿಯೋ ಆಗಿ ನಮ್ಮ ಸಂಭ್ರಮವನ್ನು ರೊಯ್ಯನೆ ಕೊಂಡು ಹೋಗುತ್ತಿತ್ತು. ಆ ಹೊತ್ತಿಗೆ `ಇನ್ನೊಂದು ಮೂರು ಕಿಲೋ ಮೀಟರ್‌ ನಡೆದುಕೊಂಡು ಹೋದರೆ ಕಾನಗೋಡಿನಿಂದ ಬಸ್ಸು ಸಿಗುತ್ತದೆ’ ಎಂದು ಯಾರೋ ಹೇಳಿದಾಗ ನಮಗೆ ಮತ್ತೆ ಸಂತೋಷ, ಹಾಗೆ ಹೇಳಿದ ಮಹಾನುಭಾವ ನಮ್ಮ ಪಾಲಿನ ದೇವರಾಗಿ ಕಾಣುತ್ತಿದ್ದ.

ಇಂಥ ನಿರೀಕ್ಷೆ, ನಿರಾಶೆಯ ಅನೇಕ ಸಂದರ್ಭಗಳಲ್ಲಿ ಕೆಲವು ಸಂದರ್ಭ ಮಾತ್ರ ನಮ್ಮ ಪಾಲಿಗೆ ಸಂಭ್ರಮವನ್ನು ತರುತ್ತಿತ್ತು. ಅಂಥ ಸಂದರ್ಭಗಳಲ್ಲಿ ನಾವು ಮುಖವನ್ನು ಗಾಳಿಗೊಡ್ಡಿ ಬಸ್‌ನ ಕಿಟಕಿ ಪಕ್ಕ ಕೂತು ಯಕ್ಷಗಾನ ನೋಡಲು ಹೋಗುತ್ತಾ ಇರುತ್ತಿದ್ದೆವು. ಬಸ್‌ ಇಳಿದು ಬಯಲಿನೊಳಗೆ ಹಾಕಿದ ಟೆಂಟ್‌ ನೋಡುವಾಗ ನಮಗೆ ಯಾವುದೋ ಸ್ವರ್ಗವನ್ನು ಬಟ್ಟೆಯೊಳಗೆ ಅಡಗಿಸಿಟ್ಟಂತೆ, ನಾವು ಇಪ್ಪತ್ತು ರೂಪಾಯಿ ಕೊಟ್ಟು ಆ ಸ್ವರ್ಗದ ರಹಸ್ಯವನ್ನು ಭೇದಿಸುತ್ತಿರುವಂತೆ, ಆ ಸ್ವರ್ಗವನ್ನು ಆ ರಾತ್ರಿಯ ಮಟ್ಟಿಗೆ ನಾವೊಬ್ಬರೇ ಸವಿಯುತ್ತಿರುವಂತೆ ಭಾಸವಾಗುತ್ತಿತ್ತು.

 

ಸೀತೆ ಅಶೋಕವನದಲ್ಲಿ ಅತ್ತಿದ್ದನ್ನು, ಹನುಮಂತ ಮಂಡೋದರಿಯನ್ನು ನೋಡಿ ಸೀತೆ ಎಂದು ತಪ್ಪು ತಿಳಿದಿದ್ದನ್ನು, ವೈಶಂಪಾಯನದಲ್ಲಿ ಅಡಗಿದ ದುರ್ಯೋಧನನನ್ನು ಭೀಮ ಪರಿಪರಿಯಾಗಿ ನಿಂದಿಸಿ ಹೊರಗೆಳೆದಿದ್ದನ್ನು, ಕೃಷ್ಣ ಸಂಧಾನಕ್ಕೆ ಹೋಗಿದ್ದನ್ನು, ನಳನನ್ನು ಹುಡುಕಿಸಲು ದಮಯಂತಿ ಪುನಃಸ್ವಯಂವರದ ನಾಟಕ ಮಾಡಿದ್ದನ್ನು, ಚಂದ್ರಹಾಸನನ್ನು ವಿಷಯೆ ಮೋಹಿಸಿದ್ದನ್ನು ನಾವು ಅಲ್ಲೇ ಮೊದಲ ಬಾರಿ `ನೋಡಿದ್ದು’. ನಮಗೆ ಹಾಸ್ಯಗಾರನ ಅಷ್ಟಾವಕ್ರ ಅಭಿನಯವೂ ಕತೆಯನ್ನು, ಹಾಸ್ಯ ಪ್ರಜ್ಞೆಯನ್ನು ಅರ್ಥ ಮಾಡಿಕೊಳ್ಳುವ ಒಂದು ಭಾಗ. ಅಳುವುದು ಹೇಗೆ, ನಗಿಸುವುದು ಹೇಗೆ ಎಂದು ಹೇಳಿಕೊಡಲೂ ಆ ಯಕ್ಷರು ಒಂದು ಮಾರ್ಗ. ಮಧ್ಯರಾತ್ರಿ ಬಾಯೊಳಗೆ ಬಿದ್ದ ಕಡಲೆಬೀಜ, ಅದರ ಜತೆ ಗೊತ್ತಿಲ್ಲದೇ ಹೋದ ಒಂದು ಕಲ್ಲು, ಅದಕ್ಕಾಗಿ ಕಟಕ್‌ ಎಂದ ಹಲ್ಲು, ನೆಲದ ಮೇಲೆ ಹಾಸಿದ ಹೊಸ ಹೊದಿಕೆ, ಉಚ್ಚೆ ಹೊಯ್ಯಲು ಹೋಗುವಾಗ ಗೇಟ್‌ಕೀಪರ್‌ ಕೊಟ್ಟ ಹರಿದ ಟಿಕೇಟು, ಟೆಂಟ್‌ನ ಬಾಗಿಲಲ್ಲಿದ್ದ ಕೆಂಪು- ಬಿಳಿ ಪಟ್ಟಿಯಿರುವ ಟೆಂಟ್‌ ಬಟ್ಟೆ, ಹೊರಗಡೆ ಚಹಾ-ಕಾಫಿ, ಅಪ್ಪನ ಶರಾಬು ವಾಸನೆ, ಆ ಪ್ರಸಂಗವೇ ತಮ್ಮ `ಜೀವನ ಪರಸಂಗ’ದ ಕೊನೆಯ ಅಂಕ ಎಂಬಂತೆ ಬಂದು ಯಕ್ಷಗಾನವನ್ನು ಸವಿಯುತ್ತಿರುವ ಅಸಂಖ್ಯ ಅಜ್ಜಿಯರ ಬಾಯೊಳಗಿನ ಎಲೆ ಅಡಿಕೆ- ಇವೆಲ್ಲವೂ ನಮ್ಮ ಅನುಭವದ ಒಂದು ಭಾಗ.

 

ಆಗ ಯಾರೂ ಯಕ್ಷರನ್ನು ಪ್ರಶ್ನಿಸುತ್ತಿರಲಿಲ್ಲ. `ಕೃಷ್ಣನ ವೇಷ ಮಾಡಿದವ ಚೆನ್ನಾಗಿ ಮಾಡಲಿಲ್ಲ, ಇವತ್ತು’ ಎಂದು ನಮಗೆ ಹೇಳಬೇಕೆಂದು ಅನಿಸುತ್ತಲೇ ಇರಲಿಲ್ಲ, ಯಾಕೆಂದರೆ ಆ ಕೃಷ್ಣ ನಮ್ಮ ಕಣ್ಣಿಗೆ `ಅದು ವೇಷದ ಜನ’ವೇ ಆಗಿ ಕಾಣುತ್ತಿರಲಿಲ್ಲ. ಕಂಸನನ್ನು ನೋಡಿ ನಾವು ಹೆದರಿಕೊಂಡು, ಭಸ್ಮಾಸುರನನ್ನು ನೋಡಿ ಉಚ್ಚೆ ಹೊಯ್ದುಕೊಂಡ ಮೇಲೆ ಆ ಪಾತ್ರ ಮಾಡಿದ್ದು ಗೋಡೆ ನಾರಾಯಣ ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ ಎಂದು ನಮಗೆ ಗೊತ್ತಾದಾಗ ಅದೊಂದು ಪವಾಡದಂತೇ ಕಂಡಿತ್ತು. ಆಗ ನಾವು ಹೆಚ್ಚೆಂದರೆ ಚೌಕಿಮನೆಯಲ್ಲಿ ವೇಷ ಹಾಕಿಕೊಳ್ಳುತ್ತಿರುವ ವ್ಯಕ್ತಿಗಳನ್ನು ಬಾಗಿಲಲ್ಲೇ ಹಣುಕುತ್ತಿದ್ದೆವೇ ವಿನಃ ಪ್ರಶ್ನೆ ಮಾಡುತ್ತಿರಲಿಲ್ಲ, ಎದುರುಗೊಳ್ಳುತ್ತಿರಲಿಲ್ಲ.

***

ಈಗ ನಾವು ದೊಡ್ಡವರಾಗಿದ್ದೇವೆ, ನಮ್ಮ ಕಾಲದ ಕೃಷ್ಣನಿಗೂ ವಯಸ್ಸಾಗಿದೆ. ಕಂಸನಿಗೆ ಮೊಣಕಾಲು ನೋವು ಬಂದಿದೆ, ಹನುಮಂತ ಖಾಯಿಲೆ ಬಂದು ಅಕಾಲ ಮರಣಕ್ಕೀಡಾಗಿದ್ದಾನೆ. ನಮ್ಮೂರಲ್ಲಿ ಟೆಂಟ್‌ಗೆ ಜಾಗ ಕೊಡುತ್ತಿದ್ದ ಆಟದ ಬಯಲುಗಳು ಈಗ ಯಕ್ಷರಿಗಾಗಿ ಆಹ್ವಾನ ಹೊತ್ತು ಕೂತಿವೆ. ಐದಾರು ವರ್ಷಗಳ ಹಿಂದೆ ಆ ಬಯಲಲ್ಲಿ ಪೌರಾಣಿಕ ಪ್ರಸಂಗ ನಡೆದು ಜನ ಇಲ್ಲದೇ ಅರ್ಧಕ್ಕೇ ಟೆಂಟ್‌ ಎತ್ತಬೇಕಾಗಿ ಬಂತಂತೆ. `ಈಗ ಆ ದುರ್ಯೋಧನನನ್ನು ವೈಶಂಪಾಯನ ಸರೋವರದಿಂದ ಹೊರಗೆ ತರುತ್ತೇನೆ’ ಎಂದು ಹೇಳಿ ಭೀಮ ಒಳಹೋಗುತ್ತಲೇ ಇತ್ತ ಯಕ್ಷಗಾನ ನಿಂತು ಹೋಗಿದೆ, ಭೀಮ ದುರ್ಯೋಧನನನ್ನು ಹುಡುಕುವುದು ಬೇಡ ಅಂತ ತೀರ್ಮಾನಿಸಿದ್ದಾನೆ, ಇತ್ತ ಭೀಮ ಬರುವುದನ್ನೇ ಕಾದು ದುರ್ಯೋಧನ ಸರೋವರದಲ್ಲಿ `ಬೆಮರ್ದು’ ಕುಳಿತಿದ್ದಾನೆ. ಬೆಳಗಿನ ಜಾವ ಆ ಬಯಲಲ್ಲೇ ತೀರ್ಮಾನವಾಗಿದೆ, `ಇನ್ನು ಮುಂದೆ ಪೌರಾಣಿಕ ಪ್ರಸಂಗ ಆಡುವುದನ್ನು ಬಿಡುವುದು ಒಳ್ಳೆಯದು. ಈ ವರ್ಷ ಒಂದು ಹೊಸ ಪ್ರಸಂಗ ಮಾಡುವಾ’.

 

ನನ್ನಂಥ ಅದೆಷ್ಟೋ `ಬಾಲ ಗೋಪಾಲ’ ವೇಷಗಳು ಯಕ್ಷಗಾನದ ಹುಚ್ಚು ಬಿಟ್ಟು ಬೆಂಗಳೂರು ಸೇರಿದ್ದೇವೆ. ನನ್ನ ಆಫೀಸು ಕೆಲಸದ ನಡುವೆ `ಇವತ್ತು ಪೌರಾಣಿಕ ಪ್ರಸಂಗ ಇದೆಯಂತೆ, ಈ ಹೊಸ ಪ್ರಸಂಗ ಆದ್ರೆ ಯಾರು ನೋಡ್ತಾರೆ ಮಾರಾಯಾ’ ಅಂತ ನನ್ನ ಸಹೋದ್ಯೋಗಿಗಳ ಹತ್ತಿರ ಗೊಣಗಿಕೊಂಡು ಪುರಭವನಕ್ಕೆ ಯಕ್ಷಗಾನಕ್ಕೆ ಹೋಗುತ್ತೇನೆ. ಈಗ ನನಗೆ ಯಕ್ಷಗಾನವನ್ನು ಯಾಕೋ ತುಂಬ ಎಳೆಯುತ್ತಿದ್ದಾರೆ ಅಂತ ಅನಿಸುತ್ತಿದೆ. `ಆ ಕಣ್ಣೀಮನೆಗೆ ಶೃಗಾರ ರಾವಣ ಕೊಟ್ಟಿದ್ದಾರೆ, ಇನ್ಯಾರೂ ಇರಲಿಲ್ಲವೇ’ ಎಂದು ಆಕಳಿಸುತ್ತೇನೆ. ನನಗೆ ಯಾವ ಪಾತ್ರ ಯಾರು ಮಾಡುತ್ತಾರೆ ಅಂತ ಗೊತ್ತಾಗಿದೆ.

 

ಯಕ್ಷರಿಗೆ ನನ್ನಂಥವನ ಪ್ರಶ್ನೆಯ ಶಾಪ ತಟ್ಟಿದೆ. ಹೀಗೆ `ಲಂಕಾದಹನ’ದ ಹನುಮಂತ, ಸೀತೆ, ರಾವಣ ಮೊನ್ನೆ ಪುರಭವನದಲ್ಲಿ ಸತ್ತುಹೋದರು!

‍ಲೇಖಕರು avadhi

January 30, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This