ಮೋಡಿಯ ಮಾಡಿದೋಳ ಪರಸಂಗ ಐತೆ!

ಎಸ್ ಕೃಷ್ಣಪ್ಪ

ಕೇವಲ ಐವತ್ತು ಮನೆಗಳ ಗ್ರಾಮವಾದ ನಮ್ಮ ಹಳ್ಳಿಯಲ್ಲಿ ಸುಮಾರು ೩೦೦ ಜನರಿದ್ದು ಇಲ್ಲಿಗೆ ಹತ್ತು ವರ್ಷಗಳ ಹಿಂದೆ ವ್ಯವಸಾಯವೇ ಮುಖ್ಯ ಕಸುಬು. ಅದರೊಟ್ಟಿಗೆ ಬದುಕುತ್ತಿದ್ದ ಈ ಜನರೆಲ್ಲಾ ಬಾರದ ಮಳೆಗಾಗಿ “ನಗಾರಿ” ಬಾರಿಸಿ ಊರ ಮುಂದೆ ಕುಣಿದು ಕುಪ್ಪಳಿಸಿ ಕೂಗುತ್ತಾ ಹನಿ ಮಳೆಯಿಂದ ತಮ್ಮ ದಾಹ ತೀರಿಸಿಕೊಳ್ಳುತ್ತಿದ್ದರು. ಆದರೆ ಇಂದು ಈ ಪುಟ್ಟ ಗ್ರಾಮದಲ್ಲಿ ಯಾರೂ ಯಾರ ಮಾತನ್ನೂ ಕೇಳುವುದಿಲ್ಲ. ಇಪ್ಪತ್ತು ವರ್ಷದ ನಂತರದ ಮಧ್ಯ ವಯಸ್ಸಿನವರ ಸಂಖ್ಯೆ ಕಡಿಮೆಯಾಗುತ್ತಿದೆ. ನೇಗಿಲ ಮೇಣಿಯ ಮೇಲೆ ಕೈಯಿಟ್ಟು ಬದುಕುವವರು ಇಲ್ಲವಾಗತೊಡಗಿದ್ದಾರೆ. ಊರಿನಲ್ಲಿ ದಬ್ಬಾಳಿಕೆ, ಪೌರುಷ, ಅಸೂಯೆಗಳು ಹೆಚ್ಚಾಗತೊಡಗಿ, ಪ್ರಾಮಾಣಿಕತೆ, ಸತ್ಯ, ಪ್ರೀತಿ ಸಂಬಂಧಗಳು ದೂರ ಸರಿದಿವೆ.

ಹಳ್ಳಿಯ ನೈಜವಾದ ಮಣ್ಣಿನ ವಾಸನೆಯಲ್ಲಿ ಬೆಳೆದ ಸುಮಾರು ಎಂಭತ್ತು ಮಂದಿ ದೂರದ ಬೆಂಗಳೂರಿನ ಗಾರ್ಮೆಂಟ್ಸ್, ವರ್ಕ್ ಶಾಪ್, ಬಟ್ಟೆ ಅಂಗಡಿ, ವೈನ್ ಸೆಂಟರ್, ಟೈರ್ ಅಂಡ್ ಟ್ಯೂಬ್ ಶಾಪ್, ವಾಚ್ ಮನ್ ಇನ್ನಿತರ ದೈಹಿಕ ಶ್ರಮಾಧಾರಿತ ಕೈಗಾರಿಕೆಗಳಲ್ಲಿ ಎರಡು ಅಥವಾ ಮೂರು ಸಾವಿರ ರೂಪಾಯಿಗಳ ತಿಂಗಳ ಸಂಬಳಕ್ಕಾಗಿ ದುಡಿಯುತ್ತಿದ್ದಾರೆ.

ಹಳ್ಳಿಯಲ್ಲಿ ರೊಟ್ಟಿ, ಮುದ್ದೆ ತಿಂದು ಮುಂಜಾವಿನಿಂದ ಸಂಜೆಯವರೆಗೂ ಚಳಿ, ಮಳೆ, ಉರಿಬಿಸಿಲಿನಲ್ಲಿ ಬೆವರು ಸುರಿಸಿ ದುಡಿಯುತ್ತಿದ್ದ ಗಟ್ಟಿ ಜನ ಬೆಂಗಳೂರು ಸೇರಿಕೊಳ್ಳುತ್ತಿದ್ದಾರೆ. ಐಷಾರಾಮಿಗಳಿಗೆ, ಈ ಹಳ್ಳಿಗರ ಶಕ್ತಿ ಅದ್ಭುತ ಸಂಪನ್ಮೂಲವಾಗಿದೆ. ಬೆಂಗಳೂರಿನ ಸಹವಾಸವೇ ಬೇಡವೆಂದು ವಾಪಸು ಊರಿಗೆ ಬಂದ ಈ ಶ್ರಮಜೀವಿಗಳನ್ನು ಐಷಾರಾಮಿಗಳು ಸ್ವತಃ ಕಾರಿನಲ್ಲಿ ಬಂದು ಏನೇನೋ ಪುಸಲಾಯಿಸಿ ಮತ್ತೆ ಬೆಂಗಳೂರಿಗೆ ಕರೆದುಕೊಂಡು ಹೋಗಿರುವ ಘಟನೆಗಳು ನಮ್ಮ ಹಳ್ಳಿಯಲ್ಲಿವೆ.

maayaa.jpgಬೆಂಗಳೂರಿನಲ್ಲಿರುವ ಈ ಹಳ್ಳಿ ಹೈಕಳುಗಳು ಎಷ್ಟು ಸಮಯ ಬೇಕಾದರೂ ದುಡಿಯುತ್ತಾರೆ. ನನ್ನ ಸ್ನೇಹಿತನೊಬ್ಬ ಹೇಳಿದಂತೆ ಎರಡು ಮೂರು ಜನರು ಮಾಡುವ ಕೆಲಸವನ್ನು ಒಬ್ಬರೇ ಮಾಡುತಾರೆ. ಸಾಕಷ್ಟು ಶ್ರಮ, ಸಾಹಸ ಪಡುವ ಇವರಿಗೆ ಬೇಕಿರುವುದು ತಿಂಗಳ ಸಂಬಳ. ಕೇಳಿದರೆ ಚೆನ್ನಾಗಿದ್ದೇವೆ ಎನ್ನುತ್ತಾರೆ. ನಿದ್ದೆಗೆಟ್ಟು ದುಡಿಯುವುದರಿಂದ ಒಣಗಿದ ನುಗ್ಗೆಕಡ್ಡಿಯಂತೆ ಇರುತ್ತಾರೆ. ಊರಿಗೆ ಬರುವಾಗ ಫುಟ್ ಪಾತ್ ನಲ್ಲಿ ಸಿಗುವ ಬಣ್ಣಬಣ್ಣದ ಬಟ್ಟೆ ತೊಟ್ಟು ಕೈಯಲ್ಲೊಂದು ಏರ್ ಬ್ಯಾಗ್ ಹಿಡಿದುಕೊಂಡು ಬರುತ್ತಾರೆ. ಹಳ್ಳಿಯಲ್ಲೇ ಇದ್ದು ನೇಗಿಲ ಮೇಣಿಯ ಮೇಲೆ ಕೈಯಿಟ್ಟು ತಮಗಿರುವ ಭೂಮಿ, ನೀರನ್ನು ನಂಬಿ ದುಡಿಯುತ್ತಿರುವ ಅಲ್ಲೊಬ್ಬ, ಇಲ್ಲೊಬ್ಬರು ಈ ಬೆಂಗಳೂರಿಗರನ್ನು ಕಂಡು ಬೆರಗುಗೊಳ್ಳುತ್ತಿದ್ದಾರೆ.

ಹಳ್ಳಿಯ ನನ್ನ ಸಂಬಂಧಿಕರೊಬ್ಬರ ಮಗನಾದ ಪ್ರಕಾಶ್ ಬೆಂಗಳೂರು ವರ್ಕ್ ಶಾಪ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ತಿಂಗಳಿಗೆ ಎರಡೂವರೆ ಸಾವಿರ ರೂಪಾಯಿಗಳನ್ನು ಪಡೆಯುತ್ತಿದ್ದಾನೆ. ಈತನಿಗೆ ಮದುವೆಯಾಗಿದೆ. ಎರಡು ಪುಟ್ಟ ಮಕ್ಕಳಿವೆ. ಹೆಂಡತಿ ಗಾರ್ಮೆಂಟ್ಸ್ ಗೆ ಹೋಗುತ್ತಿದ್ದಾಳೆ. ಈ ಪ್ರಕಾಶನಿಗೆ ಹಳ್ಳಿಯಲ್ಲಿ ಒಳ್ಳೆಯ ಜಮೀನಿದೆ. ಸಾಕಷ್ಟು ನೀರಿದೆ. ಇಲ್ಲಿ ತೆಂಗು, ಅಡಿಕೆ, ತರಕಾರಿ, ಭತ್ತ ಎಲ್ಲಾ ಬೆಳೆಯಬಹುದು. ಆದರೆ ಈತ ಬೆಂಗಳೂರಿನ ಕೊಳಗೇರಿಯಂತಿರುವ ಪ್ರದೇಶದಲ್ಲಿ ನಾಲಾಯಕ್ಕಾದ ಮನೆಯೊಂದರಲ್ಲಿ ಬೆಳೆಯುತ್ತಿರುವ ಮಕ್ಕಳೊಂದಿಗೆ ಬದುಕುತ್ತಿದ್ದಾನೆ. ಗಂಡ-ಹೆಂಡತಿ ಇಬ್ಬರೂ ದುಡಿಯುತ್ತಿದ್ದಾರೆ. ಓ.ಟಿ ಯನ್ನೂ ಮಾಡ್ತಾರೆ. ಆದರೆ ಮಕ್ಕಳು…?

ಇದಲ್ಲದೆ ನಾನು ಇತ್ತೀಚೆಗೆ ಕಂಡ ಕಮಲ ಎಂಬ ಹೆಣ್ಣು ಮಗಳು ದ್ವಿತೀಯ ಪಿಯುಸಿ ಪಾಸಾಗಿದ್ದರೂ, ತನ್ನ ಅಕ್ಕನ ಮದುವೆಯ ಸಾಲವನ್ನು ತೀರಿಸಲಿಕ್ಕಾಗಿ ಬೆಂಗಳೂರಿನ ಗಾರ್ಮೆಂಟ್ಸ್ ಗೆ ಸೇರಿಕೊಂಡಳು.

ಈಕೆ ತನಗೆ ಬರುವ ಎರಡು ಸಾವಿರ ರೂಪಾಯಿಗಳ ತಿಂಗಳ ಸಂಬಳದಲ್ಲಿ ಒಂದು ಸಾವಿರವನ್ನು ಕಳುಹಿಸುತ್ತಿದ್ದಳು. ಬರಬರುತ್ತಾ ಕಮಲಳಿಗೆ ಗಾರ್ಮೆಂಟ್ಸ್ ಬದುಕು ತನ್ನ ಆರೋಗ್ಯಕ್ಕೆ ಒಗ್ಗದಾಯಿತು. ಜೊತೆಗೆ ಎರಡು-ಮೂರು ಕುಟುಂಬಗಳು ಇದ್ದಂತಹ ಚಿಕ್ಕ ಮನೆಯಲ್ಲಿ ಈ ಹೆಣ್ಣು ಮಗಳು ಇರಬೇಕಿತ್ತು. ತಂದೆ-ತಾಯಿಗಳು ತಮ್ಮ ಸಾಲಬಾಧೆಗಾಗಿ ಇದನ್ನು ಅಷ್ಟಾಗಿ ತಲೆಗೂ ಹಾಕಿಕೊಳ್ಳಲಿಲ್ಲ. ಕಮಲ ಅನಾರೋಗ್ಯದಿಂದ ಒಣಗುತ್ತಲೇ ಇದ್ದಾಳೆ. ಈಕೆಗೆ ಗಾರ್ಮೆಂಟ್ಸ್ ಬದುಕು ಬೇಡವೇ ಆಯಿತು. ಕೆಲವು ದಿನಗಳ  ಹಿಂದೆ ಕಮಲಳ ಮದುವೆಯೂ ಆಗಿದೆ. ಹುಡುಗ ಬೆಂಗಳೂರಿನ ಆಫೀಸ್ ಒಂದರ ವಾಚ್ ಮನ್ ಆಗಿದ್ದಾನೆ. ಆದರೂ ಕಮಲಳಿಗೆ ಗಾರ್ಮೆಂಟ್ಸ್ ನಿಂದ ಮುಕ್ತಿ ದೊರೆತೇ ಇಲ್ಲ.

ಇಂತಹ ಅನೇಕ ಘಟನೆಗಳು ನಮ್ಮ ಹಳ್ಳಿಯ ಸುತ್ತಲ ಗ್ರಾಮಗಳಲ್ಲೂ ನಡೆಯುತ್ತಿದೆ. ಪೋಷಕರಿಗಂತೂ ತಮ್ಮ ಮಗಳಿಗೆ ಹಳ್ಳಿಯ ಆಸ್ತಿವಂತ ಹುಡುಗರು ಬೇಕಿಲ್ಲ. ಹೆಣ್ಣುಮಕ್ಕಳೂ ಸಂಬಳ ತರುವ ಬೆಂಗಳೂರು ಹುಡುಗರೇ ಬೇಕೆನ್ನುತ್ತಾರೆ. ನಿಧಾನವಾಗಿ ಹಳ್ಳಿ ಬರಿದಾಗುತ್ತಿದೆ. ನೇಗಿಲು ಹಿಡಿದು ವ್ಯವಸಾಯ ಮಾಡುವವರೇ ಇಲ್ಲವಾಗುತ್ತಿದ್ದಾರೆ.

ಅಷ್ಟೇ ಏಕೆ, ನನ್ನ ತಮ್ಮನೂ, ಹೆಂಡತಿಯೊಂದಿಗೆ ಬೆಂಗಳೂರು ಬಸ್ ಹತ್ತುವೆನೆಂದು ನನ್ನನ್ನು ಹೆದರಿಸುತ್ತಲೇ ಇರುತ್ತಾನೆ. ಈತನಿಗೂ ಜಮೀನಿದೆ. ನೀರಿದೆ, ಮಕ್ಕಳಿವೆ… ಆದರೆ ಬೆಂಗಳೂರೆಂಬ ಮಾಯಾಂಗನೆ ಕರೆಯುತ್ತಲೇ ಇದ್ದಾಳೆ!

‍ಲೇಖಕರು avadhi

August 30, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಿನಿಮಾ ತಯಾರಿಯ ತಮಾಷೆಗಳು…

-ಕೃಷ್ಣ ಮಾಸಡಿ ನಾನು ಬಾಲ್ಯದಲ್ಲಿ ಹೊನ್ನಾಳಿ ಮತ್ತು ರಾಂಪುರ ಜಾತ್ರೆಯಲ್ಲಿ ಹಾಕುತ್ತಿದ್ದ ಟೂರಿಂಗ್ ಟಾಕೀಸುಗಳಲ್ಲಿ ನೆಲದಲ್ಲಿ ಹಾಗೂ ಆಗಾಗ...

2 ಪ್ರತಿಕ್ರಿಯೆಗಳು

  1. Vikram Hathwar

    This reminded me of K.V.Subbanna’s comments on ‘Gokula Nirgamana’. Thanks for the writeup.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: