ಮೋಡ ಹನಿಗೂಡುವ ಮುನ್ನ..

ಷಕೀಬ್ ಎಸ್ ಕಣದ್ಮನೆ ನವಿಲೇಹಾಳ್

ಪ್ರತಿಯೊಬ್ಬ ಸಹೃದಯನಲ್ಲೂ ಒಬ್ಬ ಸುಪ್ತ ಬರಹಗಾರನಿರುತ್ತಾನೆ. ಆದರೆ ನಮ್ಮೊಳಗಿನ ಆ ಪ್ರಜ್ಞೆ ಲೇಖನಿಯ ಮಸಿಯಾಗಿ, ಹಸಿದ ಭಾವನೆಗಳ ಬುತ್ತಿಯಾಗಿ, ಬತ್ತಲಾಗದ ಒಂದಷ್ಟು ಧಾರೆಗಳು ಕೆಲವೊಂದು ಸಮಯದಲ್ಲಿ ಮಾತ್ರ ಹೊರಹೊಮ್ಮುತ್ತವೆ. ಸತತ ಪ್ರಯತ್ನ ಮತ್ತು ಪರಿಶ್ರಮದಿಂದ ಉತ್ತಮ ಪ್ರತಿಫಲಕ್ಕಾಗಿ ಹಂಬಲಿಸುವ ಈ ಬರಹ ಅಳಿದುಳಿದ ಆಗು ಹೋಗುಗಳ ಬಗ್ಗೆ ನಿಮ್ಮ ಇಚ್ಚೆಗೆ ಬಿಟ್ಟು, ಮುಂದುವರಿದು ಭಾಷೆಯೊಂದು ಬೆಳೆಯುವುದು ಬರಹಗಾರನಿಂದ ಅಲ್ಲ ಸಹೃದಯನಿಂದ ಎಂದು ಹೇಳುತ್ತಾ ನನ್ನ ಮೊದಲ ಕವನ ಸಂಕಲನ “ಮೋಹದ ಮೋಡಗಳು” ಪುಸ್ತಕವನ್ನು ಕೈಯಲ್ಲಿ ಹಿಡಿದಿರುವ ನನ್ನೆಲ್ಲ ಸಹೃದಯರಿಗೂ ನನ್ನ ಹೃದಯ ಪೂರ್ವಕ ನಮನಗಳು.

ಸುಮಾರು ವರ್ಷಗಳಿಂದ ಸಣ್ಣ-ಪುಟ್ಟ ಕವಿತೆಗಳನ್ನು ಬರೆಯುತ್ತಾ ಬಂದ ನಾನು, ಇಂದು ಕೆಲವು ಕವನಗಳನ್ನ ಒಂದು ಪುಸ್ತಕ ರೂಪದಲ್ಲಿ ಹೊರ ಜಗತ್ತಿಗೆ ತೆರೆದಿಡುತ್ತಿರುವುದು ತುಂಬಾ ಸಂತಸದ ವಿಷಯವಾಗಿದೆ.

ಅಡಿಕೆ, ತೆಂಗು, ಭತ್ತದ ಹಚ್ಚ ಹಸಿರುಗಳ ನಡುವೆ ಹುಟ್ಟಿ ಬೆಳೆದ ನನಗೆ ಸಹಜವಾಗಿ ಪ್ರಕೃತಿಯ ಪರಿಚಯ ನನ್ನ ಮನಸ್ಸಿಗಿದೆ, ಆ ಮನಸ್ಸು ಆಗಾಗ ಅಕ್ಷರಗಳಿಗೆ ಭಾವಕೊಟ್ಟು ಭಾವಗಳಿಗೆ ರೂಪಕೊಟ್ಟು ರೂಪಗಳಿಗೆ ಉಪಮೇಯವಾಗಿ ಈ ಕವನ ಸಂಕಲನ ಎದ್ದುನಿಂತಿದೆ. ಮಾನವನ ಜೀವನದಲ್ಲಿ ಆಗಾಗ ಏರು-ಇಳಿತ, ಸುಖ-ದುಖ, ನೋವು, ಆಶಾಡ-ಶ್ರಾವಣಗಳಂತೆ ಜೋಡು ಜೋಡಾಗಿ ಜೋರು ಮೆದುವಾಗಿ ಬದುಗಳಿಗೆ ಹತ್ತಿಕೊಂಡು ಭಾವಗಳಿಗೆ ಸೆಳೆದುಕೊಂಡು ಅಕ್ಷರಗಳೊಂದಿಗೆ ಆಟವಾಡುತ್ತಾ ಎಳೆಯ ಮನಸ್ಸಿಗೆ ಜೋತು ಬೀಳುತ್ತಾ ನವಜಾತ ಶಿಶುವಿನಂತೆ ಹಸಿವಾದಾಗ ನಕ್ಕು ನಿದ್ರೆಯಲಿ ಮರ್ಮರಿಸುತ್ತಾ ಒಮ್ಮೆ ಪರಿಚಿತವಾಗಿ ಒಮ್ಮೆ ಅಪರಿಚಿತವಾಗಿ ಒಮ್ಮೊಮ್ಮೆ ದೂರದಿಂದಲೇ ಇಣುಕಿನೋಡಿ ಮತ್ತೊಮ್ಮೆ ಅತೀ ಹತ್ತಿರದಲ್ಲಿ ನಿಂತು ಮೈಸವರಿ ನನ್ನದಲ್ಲದ ನೋವುಗಳಿಗೆ ಬೇರೆಯವರ ಸಾವುಗಳಿಗೆ ಬೇಕೆಂದವರ ಭಾವಗಳಿಗೆ ಸ್ಫಂದಿಸುತ್ತಾ ಬಂದಿದೆ. ಇದುವೇ ಜೀವನದ ಜೀವಾಳ, ಭಾವದುಂದುಭಿಯ ಶಿಶು-ಈ ಹೊತ್ತಿಗೆ.

ಎಳೆ ಹರೆಯದಿಂದಲೂ ತಂದೆ-ತಾಯಿ, ಅಕ್ಕ-ತಂಗಿ, ಸೋದರ, ಸಂಬಂಧಿಗಳೊಟ್ಟಿಗೆ ನೇರ ನೇರ ಸಂಬಂಧ, ಮಾತುಕತೆ, ಕುಚೇಷ್ಟೆ, ವಾದ, ಸಂವಾದ, ಜಗಳ, ಮುನಿಸು ನಮ್ಮ ಭಾವನೆಗಳಿಗೆ ಸ್ಫಂದಿಸದಿದ್ದಾಗ ಜಿಗುಪ್ಸೆ, ಷ್ಟೆಬಿಲಿಟಿಗಾಗಿ ಹೋರಾಟ ಮಾಡುತ್ತಲೇ ಬಂದಿದ್ದು, ಈ ವಿಶೇಷತೆ, ಭಾವತೀವ್ರತೆ, ಹೊಸತನ, ಆಂಗೀಕತೆ, ಕುಟುಂಬದ ಎಲ್ಲಾ ಸದಸ್ಯರ ಒಂದೊಂದು ಸೆಳೆತದ ವಿಶೇಷ ಅರ್ಹತೆಯ ಶೇಷ ತೀವ್ರತೆಯ ಜಾತ ಯುಜ್ಮಗಳು, ತಂದೆಯಾಗಲಿ ತಾಯಿಯಾಗಲಿ ಸಂಬಂಧಿಕರಾಗಲಿ ನೋಯಿಸಿದಾಗ, ಹೆಚ್ಚು ನಗಿಸಿದಾಗ, ಕಡಿಮೆ ಮಾತನಾಡಿದಾಗ ಒಂದಿಲ್ಲೊಂದು ಭಾವದ ಕಳವು ಆಗುತ್ತಲೇ ಇತ್ತು, ಅವುಗಳ ಉಳುವಿನ ಚಲನೆಗೆ ಅವರು ಕಾರಣೀಕರ್ತರಾದರೆ, ನಾನು ಕಾರಣೀಭೂತ. ಈ ಅದ್ವೈತ ದ್ವೇತಕದ ನಡುವೆ ಲೇಖನಿ ನಡೆದು, ನಕ್ಕು, ನನ್ನೊಳಗೆ ಹೊಕ್ಕು ‘ಮೋಹದ ಮೋಡ’ಗಳಾಗಿ ಹನಿಸಿದೆ.

ಚಲಿಸುವ ಮೋಡಗಳಿಗೆ ಗಾಳಿ ದಿಸೆ ತೋರಿಸಿದರೆ, ಹನಿಸುವ ಲೇಖನಿಯ ಹನಿಗಳಿಗೆ ಸಹೃದಯ ದಿಶೆಯಾಗಬೇಕು. ಓದುಗರನ್ನು ಘರ್ಷಿಸುವ, ಆಕರ್ಷಿಸುವ, ತೃಪ್ತಿ ಪಡಿಸುವ ಎಲ್ಲಾ ಲಕ್ಷಣಗಳು ನನ್ನ ಕವನಗಳಲ್ಲಿವೆ ಎನ್ನುವಷ್ಟು ಪ್ರಬುದ್ಧಭಾವಗಳು, ತೀವ್ರ ಉನ್ಮಾದಗಳು, ಎಲ್ಲೆಡೆಯೂ ಹುಡುಕದೆ, ಒಂದೇ ದಿಶೆಯಲ್ಲಿ ಇಡೀ ಕವನಗಳನ್ನ ಓದದೇ, ಇಡೀ ಹಿಡಿದು, ಮುಡಿ ಅರಿತು, ಬೇಧಿಸಿ ನನ್ನ ಸಂಕಲನಕ್ಕೊಂದು ಮೌಲ್ಯ ಒದಗಿಸಿ ದಿಶೆ ತೋರಿಸುತ್ತೀರಿ ಎಂಬ ನಂಬಿಕೆಯಲ್ಲಿದ್ದೇನೆ.

ಬಾಲ್ಯದಿಂದಲೂ ನನ್ನಲ್ಲಿರುವ ಸೃಜನತೆ, ವಿಶೇಷತೆ, ಭಾವತೀವ್ರತೆ, ಹುಚ್ಚು-ಹುಚ್ಚಾದ ಚರ್ಚೆ, ಎಳೆ ಎಳೆಯಾದ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾ ಮೊದಲ ಗುರುವಾದ ನನ್ನ ಹೆತ್ತವ್ವ ಪರ್ವಿನ್ ಹೆಚ್ ನನ್ನೆಲ್ಲ ನೋವು-ನಲಿವು, ಇಚ್ಚೆ, ಅಭಿಲಾಷೆ, ಗುರಿಗಳಿಗೆ ಅತೀ ಹತ್ತಿರದಿಂದ ಸ್ಫಂದಿಸಿ ಎತ್ತರದೊಂದಿಗೆ ಚಿತ್ತಾರವು ಆದ ನನ್ನಪ್ಪ ಷಂಷು ಕೆ ಬಿ ರವರಿಗೂ, ಗೆಳೆಯನ ಪ್ರೀತಿ, ತಮ್ಮನ ನೀತಿ, ಗೌರವಿಸುವ ರೀತಿ, ಎಲ್ಲದಕ್ಕೂ ಹಿಂದೆ ನಿಂತು ಸ್ವಾಗತಿಸುತ್ತಾ, ಹುರಿದುಂಬಿಸುತ್ತಾ, ಜೊತೆಯಾಗುತ್ತಾ ಬಂದಿರುವ ನನ್ನ ತಮ್ಮಂದಿರಿಗೂ, ಒಲುಮೆ, ಸಲುಗೆ, ಕುಚೇಷ್ಟೆ, ಕಾಡುವಿಕೆ, ಚೇಡಿಸುವಿಕೆ, ವಾದಿಸುವಿಕೆ, ಎಲ್ಲರೊಳಗೂ ನನ್ನ ತನ, ಅಣ್ಣನ ಸ್ಥಾನ ಎತ್ತಿಸಿಕೊಟ್ಟ ತಂಗಿಯರಿಗೂ, ತಮ್ಮನ ಸ್ಥಾನ ದೊರಕಿಸಿದ ಅಕ್ಕಂದಿರಿಗೂ, ಎಲ್ಲವೂ ಇದ್ದಾಗ ಬೆಲ್ಲದಂತಿರುವ, ಸಲ್ಲದ್ದನ್ನು ಮಾಡಿದಾಗ ಕಲ್ಲಿನಂತಾಗುವ, ಬಗಸಿ ಹೋದಾಗಲೆಲ್ಲ ಮಾರ್ಗದರ್ಶಕರಂತೆ ಇರುವ ಅಣ್ಣಂದಿರಿಗೂ ನಾ ಋಣಿಯಾಗಿರುತ್ತೇನೆ.

ಶೀರ್ಷಿಕೆಯಿಂದ ಹಿಡಿದು ಇಡೀ ಕವನಗಳನ್ನು ತಿದ್ದಿ-ತೀಡಿ ಸರಿಪಡಿಸಿರುವ, ಅಕ್ಷರ ದೋಷಗಳೊಂದಿಗೆ ಭಾವದೋಷಗಳನ್ನು ಉತ್ತಮ ಪಡಿಸಿರುವ ಸರ್ವರಿಗೂ, ನನ್ನ ಎಲ್ಲ ಕವನಗಳನ್ನು ಓದಿ ವಿಶ್ಲೇಷಿಸಿ, ವಿಮರ್ಶಿಸಿ, ಮುನ್ನುಡಿ ಬರೆದು ಕೊಟ್ಟಿರುವ ರಂಗಕರ್ಮಿಗಳು, ಸಿನೆಮಾ ನಿರ್ದೇಶಕರು, ಆದ ಡಾ. ಸಿದ್ರಾಮ ಕಾರಣೀಕ ಅವರಿಗೂ, ಬೆನ್ನುಡಿ ಬರೆದುಕೊಟ್ಟಿರುವ ಆತ್ಮೀಯರು, ಸಹೃದಯರು, ಆದ ಡಾ. ಶರೀಫ್ ಹಸಮಕಲ್ ಅವರಿಗೂ, ನನ್ನ ಕವನಗಳ ಹಸ್ತಪ್ರತಿಯನ್ನು ಆಯ್ಕೆಮಾಡಿದ ಕನ್ನಡ ಪುಸ್ತಕ ಪ್ರಾಧಿಕಾರ-ಬೆಂಗಳೂರು ಇವರಿಗೂ, ಆಶಯ ನುಡಿಗಳನ್ನು ಬರೆದುಕೊಟ್ಟ ನನ್ನ ಪಿ.ಹೆಚ್‍ಡಿ ಮಾರ್ಗದರ್ಶಕರಾದ ಡಾ. ಮಲ್ಲಿಕಾರ್ಜುನ ಎಂ ಅವರಿಗೂ, ಶುಭ ಹಾರೈಕೆ ಹೇಳಿದ ಇಮಾಮ್ ಹಡಗಲಿ, ಮತ್ತು ಡಾ. ಸಿ ಆರ್ ಕಂಬಾರ ಶೆಟ್ಟಿಕೇರಾ ಅವರಿಗೂ, ಅನಿಸಿಕೆಗಳನ್ನು ಬರೆದುಕೊಟ್ಟ ರಾಜು ಸೂಲೇನಹಳ್ಳಿ ಅವರಿಗೂ, ಅಚ್ಚುಕಟ್ಟಾಗಿ ಮುದ್ರಣ ಮಾಡಿಕೊಟ್ಟ ಬಿ ಜಿ ಪ್ರಿಂಟರ್ಸ್ ಅವರಿಗೂ. ನನ್ನ ಸ್ನೇಹದ ಸಿಂಧು ಹೃದಯದ ಬಂಧುಗಳೆಲ್ಲರಿಗೂ ತುಂಬು ಮನದ ಧನ್ಯವಾದಗಳು.

‍ಲೇಖಕರು Avadhi

December 18, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಾಲತೇಶ ಅಂಗೂರರ ‘ಹಾವೇರಿಯಾಂವ್’

ಮಾಲತೇಶ ಅಂಗೂರರ ‘ಹಾವೇರಿಯಾಂವ್’

ಸತೀಶ ಕುಲಕರ್ಣಿ ಹಾವೇರಿ ನೆಲದ ಮಾತುಗಳಿಗೊಂದು ವಿಚಿತ್ರ ರುಚಿ ಇದೆ. ಸಿಟ್ಟು ಸೆಡವು, ಗಡಸು ಗಿಚ್ಚಿ ಹೊಡೆಯುವ ಮೊನಚು ಇವುಗಳದ್ದು. ವ್ಯಂಗ್ಯ...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: