ಮೌನ ಮಾತಾದಾಗ..

girija shasthri
ಗಿರಿಜಾಶಾಸ್ತ್ರಿ / ಮುಂಬೈನಿಂದ 

ಡಾ. ಎಚ್.ಎಸ್. ರಾಘವೇಂದ್ರರಾವ್ ಅವರು ಕನ್ನಡಕ್ಕೆ ತಂದಿರುವ, ಟೆಡ್ ಕೂಸರ್ ನ ‘ಮಂಜು ಮಣ್ಣು ಮೌನ’ ಕವಿತಾ ಸಂಕಲನದ ಬೆನ್ನುಡಿಯಲ್ಲಿ ‘ಬೌದ್ಧರ ವಿಪಶ್ಶನಾ ಧ್ಯಾನದಿಂದ ಪ್ರೇರಿತವಾದ ಕಾವ್ಯದ ಹೊಳಹು ಇಲ್ಲಿದೆ’ ಎಂದು ಅನಂದ ಝುಂಜರವಾಡ ಅವರು ಅಭಿಪ್ರಾಯ ಪಡುತ್ತಾರೆ.

ಅದನ್ನೇ ಒಂದು ಕೀಲಿಕೈಯಾಗಿರಿಸಿಕೊಂಡು ‘ಮಂಜು ಮಣ್ಣು ಮೌನ’ದ ಮನೆಯನ್ನು ಪ್ರವೇಶಿಸಬಹುದಾಗಿದೆ. ದೇಹದ ಸೂಕ್ಷ್ಮ ಸಂವೇದನೆಗಳನ್ನು ಮುಡಿಯಿಂದ ಅಡಿಯವರೆಗೆ, ಅಡಿಯಿಂದ ಮುಡಿಯವರೆಗೆ, ಯಾವುದೇ ಪ್ರತಿಕ್ರಿಯೆಗಳಿಲ್ಲದೇ ಸುಮ್ಮನೇ ಗಮನಿಸುವುದು (ಅದನ್ನೇ ವಿಶೇಷವಾಗಿ (ವಿಪಶ್ಶನಾ) ನೋಡುವುದು ಎನ್ನುತ್ತ್ತಾರೆ) ವಿಪಶ್ಶನಾ ಧ್ಯಾನದ ಸ್ವರೂಪ.

ted-kooserಝುಂಜರವಾಡ ಅವರು ಬೆನ್ನುಡಿಯ ಪ್ರಾರಂಭದಲ್ಲೇ ತಾಯಿ ಬೇರುಗಳಿಂದ ಹಿಡಿದು ಕೊಂಬೆ ಕೊಂಬೆಗಳ ವಿಸ್ತಾರ ಜಾಲದಲ್ಲಿ ಸಿಕ್ಕು ಹಾಕಿಕೊಂಡಿರುವ’ ಪ್ರತಿಯೊಂದು ವಿವರಗಳನ್ನೂ ಕಾಣಿಸುವ ರೀತಿ ಟೆೆಡ್ ಕೂಸರ್ ಅವರ ಕಾವ್ಯದ ರೀತಿ ಎಂದು ಹೇಳಿರುವುದು, ಸತ್ಯನಾರಾಯಣ ಗೊಯೆಂಕಾ ಅವರು ವಿಪಶ್ಶನಾ ಶಿಬಿರಗಳಲ್ಲಿ ದೇಹದ ಅಡಿಯಿಂದ ಮುಡಿಯವರೆಗೆ ಬದಲಾಗುತ್ತಲೇ ಹರಿಯುವ ಸಂವೇದನೆಗಳ ಸೂಕ್ಷ್ಮ ಸ್ವರೂಪವನ್ನು ಅವುಗಳ ವೈವಿಧ್ಯ ವಿಸ್ತಾರವನ್ನೂ ಗಮನಿಸಲು ಹೇಳುವ ರೀತಿಯದೇ ಆಗಿದೆ.

ಹೀಗೆ ತನ್ಮಯತೆ ಮತ್ತು ಎಚ್ಚರದಿಂದ, ನಿರಂತರವಾಗಿ ನೋಡುತ್ತಿದ್ದರೆ ದೇಹದೊಳಗೆ ಒಂದು ರೀತಿಯ ನಿರ್ವಾತ ಪ್ರಾಪ್ತಿಯಾಗುತ್ತದೆ. ಹೀಗೆ ಪ್ರಾಪ್ತವಾಗುವ ನಿರ್ವಾತ ನಮ್ಮ ನೋಟವನ್ನು ಹರಿತಗೊಳಿಸುತ್ತದೆ, ವಿಸ್ತಾರಗೊಳಿಸುತ್ತದೆ, ಅದು ಕ್ರಮೇಣ ಪು.ತಿ.ನ ಅವರು ಹೇಳುವಂತೆ ‘ಭವನಿಮಜ್ಜನ ಮತ್ತು ಭವಲಘಿಮಾ ಕೌಶಲ’ದ ನಡುವೆ ಸಮತೋಲನೆಯನ್ನು ಸಾಧಿಸಲು ದಾರಿಮಾಡಿಕೊಡುತ್ತದೆ.  ಹೊರಜಗತ್ತನ್ನು (ಸಾಮಾಜಿಕ ಸಂಬಂಧಗಳನ್ನು) ಆರೋಗ್ಯಕರ ನೆಲೆಯಲ್ಲಿ ಅಖಂಡವಾಗಿ ಗ್ರಹಿಸಲು ಸಾಧ್ಯವಾಗುತ್ತದೆ ಎಂಬುದು ಅವರ ನಂಬಿಕೆ.

ನನಗೆ ಟೆಡ್ ಕೂಸರ್ ನ ಕವಿತೆಗಳ ಕನ್ನಡ ಅನುವಾದವನ್ನು ಓದಿದ ತಕ್ಷಣ ಕ್ಷಣಮಾತ್ರವಾದರೂ ನನ್ನ ಅನುಭವಕ್ಕೆ ಬಂದದ್ದು ಮೇಲೆ ಹೇಳಿದ ನಿರ್ವಾತವೇ. ಒಂದು ರೀತಿಯ ವಸ್ತುನಿಷ್ಠ ದೂರದಿಂದ ಅತ್ಯಂತ ಸಣ್ಣ ವಿವರಗಳನ್ನೂ ಯಾವುದೇ ಉತ್ಪ್ರೇಕ್ಷೆಗಳಿಲ್ಲದೇ, ಕಾವ್ಯದ ಯಾವುದೇ ಹೆಚ್ಚಿನ ಅಲಂಕಾರಿಕ ಪರಿಕರಗಳಿಲ್ಲದೇ ದಾಖಲಿಸುವುದು. ಕೇವಲ ದಾಖಲಿಸುವುದಕ್ಕಾಗಿ ಮಾತ್ರ ದಾಖಲಿಸುವುದು. ಹಾಗೆ ದಾಖಲಿಸುವಾಗ ಅವು ಯಾವ ತೀರ್ಮಾನವನ್ನೂ ತಲಪುವುದಿಲ್ಲ ಎಂಬುದು ಬಹಳ ಮುಖ್ಯವಾದುದು. ಯಾವುದರ ವಕ್ತಾರನಾಗಿಯೂ ಟೆಡ್ ಮಾತನಾಡುವುದಿಲ್ಲ. ಇದು ಇರುವುದು ಹೀಗೆ ಅಥವ ತನಗೆ ಕಾಣುತ್ತಿರುವುದು ಎಂದಷ್ಟೇ ಹೇಳಬೇಕಾಗಿದೆ.

ಮಂಜು ಮಣ್ಣು ಮೌನ ಸಂಕಲನದ ಕವಿತೆಗಳ ಹರಹು ವಿಸ್ತಾರವಾದುದು. ಲೈಬ್ರರಿಯ ಒಳಗೆ ತನ್ನ ಕನಸಿನ ಹಡಗನ್ನು ನೂಕುವ ವಿದ್ಯಾರ್ಥಿ (ವಿದ್ಯಾರ್ಥಿ), ಕ್ಯಾನ್ಸರ್ ರೋಗಿಯೊಬ್ಬಳನ್ನು ನೋಡಿಕೊಳ್ಳುವವರಲ್ಲಿ ತುಂಬಿಕೊಂಡಿರುವ ಜೀವ ಕಾರುಣ್ಯ ಮತ್ತು ಘನತೆ, ಆ ರೋಗಿ ನರ್ಸ್ ಒಬ್ಬಳಿಂದ ಪಡೆಯುವ ಸಾಂತ್ವನ (ಕ್ಯಾನ್ಸರ್ ಆಸ್ಪತ್ರೆಯಲ್ಲಿ), ಹಾಸಿಗೆಯಲ್ಲಿ ಒಬ್ಬರೇ ಮಲಗಿಕೊಂಡಾಗಲೂ, ನಿಜವಾಗಿ ಒಬ್ಬರೇ ಮಲಗಿಕೊಂಡಿರುವುದಿಲ್ಲ ಎಂಬ ಸತ್ಯವನ್ನು ಅವಾಕ್ಕಾಗುವಂತೆ ಬಯಲಾಗಿಸುವ ರೀತಿ (ನಿಟ್ಟುಸಿರು), ಮೊಳಕೆ ಒಣಗಿರುವ ತನ್ನ ಅಂತರಂಗವನ್ನು ಅನೇಕ ಮುಖವಾಡಗಳ ಒಳಗೆ ಬಚ್ಚಿಟ್ಟುಕೊಂಡಿರುವ ಹೆಣ್ಣಿನ ಭಯ (ಈರುಳ್ಳಿ ಹೆಣ್ಣು), ಮುದಿನಾಯಿಯ ಮೇಲೆ, ಕಂದು ಹುಲ್ಲಿನ ಕಾಡಿನೊಳಗೆ ನಡುಕದಿಂದ ಓಡುವ ಕೀಟದ ಮೇಲೆ ಉಂಟುಮಾಡುವ ಬಿಸಲ ಪರಿಣಾಮ (ಇಷ್ಟಗಲ ಬಿಸಿಲು)..

..ಹರಿಯುವ ನದಿ ಚಳಿಗಾಲದಲ್ಲಿ ಮರಗಟ್ಟುವಂತೆ, ಚಟುವಟಿಕೆಯಿಂದ ಇದ್ದ ಇಲಿ ಚಳಿಗಾಲದಲ್ಲಿ ಗ್ಯಾರೇಜೊಂದರಲ್ಲ್ಲಿ ಸತ್ತು ಮರಗಟ್ಟುವುದು (ಇಲಿ), ತಾವೇ ನೀಡಿದ ಬಿಸುಪನ್ನು ನಮ್ಮಿಂದ ಕಿತ್ತುಕೊಳ್ಳುವ ದಿನಗಳು, ಕೊನೆಗೆ ಮೇಜು ಲೋಟಗಳಂತೆ ಒಂಟಿಯಾಗುವುದನ್ನು ಕಲಿಯುವ ಅಸಹಾಯಕತೆ (ಪಶ್ಚಿಮದ ಕಿಟಕಿ), ಪ್ರೀತಿಯ ಪದದ ಅರ್ಥವೇ ತಿಳಿಯದ ತಾನು ಇಟ್ಟುಕೊಂಡವನು ಸತ್ತಾಗ ಕೇವಲ ನೋಡುವ, ಏನೂ ಆಗಿಯೆ ಇಲ್ಲವೆನೋ ಎನ್ನುವಂತೆ ಬಟ್ಟೆ ಒಣಗಿಸುವ ಕೆಲಸವನ್ನು ‘ಮೊದಲು ಮಾಡುವ’ ಹೆಣ್ಣು (ವಿಧವೆ), ಮುದುಕನ ಹೆಗಲ ಸುತ್ತ ಹರಡಿಕೊಂಡಿರುವ, ಒಲವುಗಳಿಂದ ಹೆಣೆದಿರುವ, ಮೈನವಿರಿನ ಹೊದಿಕೆಯಾಗಿ ಕಾಣುವ ಶಾಲು (ನಡುರಾತ್ರಿಯಲ್ಲಿ), ಹೊಲದ ನಡುವೆ ಬಿದ್ದಿರುವ ಭಾರವಾದ ಕಲ್ಲುಚಪ್ಪಡಿಯ ಮೇಲೆ ನೇಗಿಲು ಮಾಡಿದ ಗುನ್ನದ ಗುರುತು (ನೇಗಿಲ ಗುರುತು), ಭೂತ ವರ್ತಮಾನದ ಲಾಳಿಯಾಟದಲ್ಲಿ ಸಂಬಂಧಗಳ ವಾಸನೆ (ಈ ಕ್ಷಣ)..

..ಹಕ್ಕಿಗಳ ಬೀಜಗಳಂತೆ ಕಾಣುವ ಕೊಂಬೆಗಳ ಮೇಲೆ ಸಾಲುಗಟ್ಟಿರುವ ಗಟ್ಟಿ ಮೊಗ್ಗುಗಳು (ಹೊಸವರ್ಷದ ಮೊದಲ ದಿನ), ತಾಯಿಯ ಸಾವನ್ನು ಬಹಳ ಸಹಜವಾಗಿ ತೆಗೆದುಕೊಂಡ ಮಗ ಅದನ್ನು ಅವಳ ಗೆಳತಿಗೆ ತಿಳಿಸಲು ಬರುವುದು (ಪರ್ಲ್), ತನ್ನನ್ನು ತೊರೆದು ದೂರ ಹೋದ ಮಕ್ಕಳ ಫೋಟೋ ಫ್ರೇಮುಗಳಿಗೆ, ಚಡ್ಡಿ ಬಿಚ್ಚಿ ತನ್ನ ಯೋನಿಯನ್ನು ತೋರುವ ತಾಯಿ (ಮುದುಕಿ), ಅಪ್ಪ ಸತ್ತದ್ದಕ್ಕೆ ಧನ್ಯವಾದ ಹೇಳುವ ಮಗ (ಅಪ್ಪ), ಆತ್ಮವಿಶ್ವಾಸದ ಪರಾಕಾಷ್ಠೆಯನ್ನೂ, ಶೋಷಣೆ ಮತ್ತು ಹಿಂಸೆಯ ಅಗಾಧತೆಯನ್ನು ಬಹಳ ಮೆಲುದನಿಯಲ್ಲಿ ವ್ಯಕ್ತಪಡಿಸುವ ನೌಕರ (ಆಫೀಸಿನಲ್ಲಿ ಅವರು), ಬಂಡೆಗಳನ್ನು ಎಡವಿಕೊಂಡು ಚಲಿಸುವ ಮುದುಕರು (ಮುದುಕರು)……ಇದರ ಜೊತೆಗೆ ಇಲ್ಲಿನ ಕವಿತೆಗಳಲ್ಲಿ ಅನೇಕ ಬಣ್ಣಗಳು ಬರುತ್ತವೆ.

manju-mannu-mouna-hsrಅವು ಬದುಕಿನ ಬಣ್ಣಗಳು. ಇಂತಹ ವರ್ಣರಂಜಿತ ಬದುಕಿನ ಜೊತೆಜೊತೆಗೇ ಗಾಢವಾದ ವಿಷಾದವೂ ಇದೆ. ಪ್ರಕೃತಿಯನ್ನು ‘ಸ್ಥಿರವಾಸ್ತವ’ ಎಂದು ತಿಳಿಯಲಾಗಿದೆ. ಹಾಗೆೆ ನೋಡಿದರೆ ಪ್ರಕೃತಿಯೂ ಕೂಡ ಅನೇಕ ಬದಲಾವಣೆಗಳಿಗೆ ಪಕ್ಕಾಗುತ್ತ ಹೋಗುವ ಚರವಾಸ್ತವವೇ. ಅದಕ್ಕೆ ತಕ್ಕಂತೆ ನಮ್ಮ ಬದುಕಿನಲ್ಲಿ ಬದಲಾವಣೆಗಳಾಗುವುದು ಸಹಜ. ಇಂತಹ ಬದಲಾವಣೆಗಳನ್ನು ಒಪ್ಪಿಕೊಳ್ಳಲು ನಾವು ಸಿದ್ಧರಿಲ್ಲದಾಗ ವಿಷಾದ ಉಂಟಾಗುತ್ತದೆ.

ವಿಪಶ್ಶನಾ ಹೇಳುವ ‘ಅನಿಚ್ಛ ಬೋಧ’ದ ಕಲ್ಪನೆಯೂ ಇದೇ ಅಗಿದೆ. ಎಲ್ಲವೂ ನಿರಂತರ ಬದಲಾವಣೆಗಳಿಗೆ ಪಕ್ಕಾಗುತ್ತಲೇ ಹೋಗುತ್ತಿರುವಂತಹುದು, ಅಂತಹ ಅನಿಚ್ಛ ಸಂಗತಿಗಳ ಬಗೆಗೆ ರಾಗವನ್ನಾಗಲೀ ದ್ವೇಶವನ್ನಾಗಲೀ ಯಾಕೆ ತಳೆಯಬೇಕು ಎನ್ನವುದು. ರಾಗ, ದ್ವೇಶಗಳಿಂದ ಮುಕ್ತವಾಗಿ, ಆಗುತ್ತಿರುವ ಬದಲಾವಣೆಗಳನ್ನು ನಿರ್ಲಿಪ್ತವಾಗಿ ಆದರೆ ಅನಿಯಂತ್ರಿತ ಪ್ರೇಮದ ಕಣ್ಣುಗಳಿಂದ ನೋಡಿದಾಗ ನಮ್ಮ ಮನಸ್ಸು ಅವುಗಳನ್ನು ಸ್ವೀಕರಿಸಲು ಸಿದ್ಧವಾಗುತ್ತದೆೆ ಎನ್ನುವುದು ಅದರ ತತ್ವ.

ಅಮೇರಿಕೆಯ ನೆಬ್ರಾಸ್ಕಾ ಪರಿಸರದ ಮಂಜು ಮತ್ತು ಮಣ್ಣಿಗೆ ಸಂಬಂಧಿಸಿದಂತೆ ಈ ಕವಿತೆಗಳು ಮಾತನಾಡುವುದು ಮೌನವನ್ನು. ಹಾಗೆ ನೋಡಿದರೆ ‘ವಿಪಶ್ಶನಾ’ ಮಾತನಾಡುವುದೂ ಮೌನವನ್ನೇ. ಆದುದರಿಂದಲೇ ಈ ಕವಿತೆಗಳನ್ನು ಓದಿದಾಗ ಮಾತಿಗೆ, ಅರ್ಥಕ್ಕೆ ಮೀರಿದ, ಬೌದ್ಧಿಕ ಗ್ರಹಿಕೆಯಾಚೆಗಿನ ಆಪ್ತ ಮತ್ತು ಖಾಸಗೀ ಅನುಭವವೊಂದು ಉಂಟಾಗುತ್ತದೆ.

ಈ ಕವಿತೆಗಳ ಬಗೆಗೆ ಹೇಳುತ್ತಾ ನಮ್ಮೊಳಗಡೆಯೇ ಇರುವ ಒಳನೀರಿನ ಒರತೆಗಳನ್ನು ಬಯಲಿಗೆ ತರುತ್ತದೆ ಎಂದು ಎಚ್. ಎಸ್. ಆರ್ ಅವರು ತಮ್ಮ ‘ನುಡಿ ಬಾಗಿನ’ ದಲ್ಲಿ ಸರಿಯಾಗಿಯೇ ಗುರುತಿಸುತ್ತಾರೆ. ಅವರು, ಕೂಸರ್ ಅನುಭವಗಳಾಚೆಗಿನ ಅತೀಂದ್ರಿಯ ಅಧ್ಯಾತ್ಮಗಳ ಒತ್ತಾಸೆ ಪಡೆಯಲು ಬಯಸುವುದಿಲ್ಲ ಎಂದು ಹೇಳಿದರೂ, ಕವಿ ಇಲ್ಲಿ ಯಾವುದೇ ಲೇಪಗಳಿಲ್ಲದೇ, ಅಂಟಿಲ್ಲದೇ ಲೌಕಿಕ ವಿವರಗಳನ್ನು ಗಮನಿಸುವ ಪ್ರಕ್ರಿಯೆ ಉಪನಿಷತ್ತಿನಲ್ಲಿ ಬರುವ ಬರಿದೇ ‘ನೋಡುವ ಹಕ್ಕಿ’ಯನ್ನೂ ನೆನಪಿಗೆ ತರುತ್ತದೆ.
ಆದರೆ ಹೀಗೆ ಕವಿ ಬರಿದೇ ನೋಡುತ್ತಾನೆ ಎಂದಾಗ ಅನೇಕ ಬಾರಿ ನಿರ್ಭಾವುಕ ಸ್ಥಿತಿಗೆ ವಾಲುವ ಅಪಾಯವಿರುತ್ತದೆ.

ಆದರೆ ಟೆಡ್ ನ ಈ ಸಂಕಲನದ ಕವಿತೆಗಳಲ್ಲಿ ಅಂತಹ ಶುಷ್ಕತೆಯನ್ನು ಕಾಣಲು ಸಾಧ್ಯವಿಲ್ಲ. ಕವಿ ತನ್ಮಯತೆ ಮತ್ತು ಎಚ್ಚರಗಳಿಂದ ಕಂಡಿರಿಸುವ ದೈನಿಕ ವಿವರಗಳ ಮೂಲಕ ವ್ಯಕ್ತಪಡಿಸುವ ಮಾನವೀಯ ಮೌಲ್ಯಗಳು ಓದುಗರನ್ನು ಇನ್ನಿಲ್ಲದಂತೆ ಆದ್ರ್ರಗೊಳಿಸುತ್ತವೆ. ಗಾಢವಾಗಿ ತಟ್ಟುತ್ತವೆ. ಉದಾಹರಣೆಗೆ ಅವರ ‘ಮುತ್ತು ಜೋಡಿಸಿದ ಪರ್ಸ್’ ಎಂಬ ಕವಿತೆಯಲ್ಲಿ ಮಗಳ ಶವ ಪೆಟ್ಟಿಗೆಯನ್ನು ತೆರೆದ ಮುದುಕ ಅವಳು ಬಡತನದಲ್ಲಿ ಸತ್ತಿರುವಳೆಂಬ ಸಂಗತಿ ಅವಳ ತಾಯಿಗೆ ಗೊತ್ತಾಗಬಾರದೆಂದು ಶವದ ಬಳಿಯಿದ್ದ ಖಾಲಿ ಮಣಿ ಪರ್ಸ್ ನೊಳಗೆ ‘ಒಂದಿಷ್ಟು ನೋಟುಗಳ ತೆಗೆದು’ ಇರಿಸುತ್ತಾನೆ ‘ಅವಳ ತಾಯಿಗೆ ಕಾಣ’ಲೆಂದು. ‘ಜೇಬಿನಲ್ಲಿ ಒಂದು ಕವಿತೆ’ ಯಲ್ಲಿ ನೂರು ಬಾರಿ ಮಡಿಸಿ ತನ್ನ ಪ್ರೇಮಿಗೆ ತಲಪಿಸದೇ ಇದ್ದ ಪ್ರೇಮ ಪತ್ರವೊಂದು ಮಸುಕಾದರೂ ಮೈಕಾವಿನಿಂದ ಬೆಚ್ಚಗಿರುತ್ತದೆ. ‘ಧೂಳು’ ಕವಿತೆಯಲ್ಲಿ ಧೂಳನ್ನು ಒರೆಸುತ್ತಲೇ ಚಿಕ್ಕಮ್ಮ ಧೂಳಾಗಿ ಬಿಡುತ್ತಾಳೆ. ‘ಶವಸಂಸ್ಕಾರದ ಬಳಿಕ ಮೆಡಿಸಿನ ಪೆಟ್ಟಿಗೆ ಕ್ಲೀನ್ ಮಾಡುವಾಗ’ ವ್ಯಕ್ತಿ ಸತ್ತಮೇಲೆ ಡೇಟು ಮುಗಿದಿರುವ ಮಾತ್ರೆಗಳನ್ನು ಟಾಯ್ಲೆಟ್ಟಿನೊಳಗೆ ಸುರಿಯುತ್ತಾರೆ.

‘ರೈತ ಕಟ್ಟಿಸಿದ ಮನೆ’ ಯಲ್ಲಿ ಸಾಲದ ಭಾರ ತಾಳಲಾರದೆ ರೈತನೊಬ್ಬ ಕಣಜದ ಮೇಲಿಂದ ಕೆಳಗೆ ಬಿದ್ದು ಸತ್ತರೆ, ಸಾಯಲೆಂದೇ ಎಸೆದ ಬೆಕ್ಕು ನೆಲೆದ ಮೇಲೆ ದೊಪ್ಪೆಂದು ಬಿದ್ದರೂ ಎದ್ದು ನಿಂತು ಕಡುಬಿಸಿಲಿನಲ್ಲಿ ಕಣ್ಮುಚ್ಚಿ ಮುಂದೆನಡೆಯುತ್ತದೆ’, ಚರಂಡಿಯಲ್ಲಿ ಯಾರೋ ಎಸೆದ ಬೀರ್ ಬಾಟಲಿ ಕೂಡ ಒಡೆಯದೇ’ ನೇರವಾಗಿ ನಿಲ್ಲುತ್ತದೆ. (ಬೀರ ಬಾಟಲ್), ನೌಕರನೊಬ್ಬ ಕೈ ಕತ್ತರಿಸಿದರೂ ಮೊಂಡು ಕೈಯಲ್ಲಿ ಟೈಪ್ ಮಾಡುತ್ತಾನೆ (ಆಫೀಸಿನಲ್ಲಿ ಅವರು) ಈ ಕವಿತೆಗಳ ವೈರುಧ್ಯ, ಮನುಷ್ಯ ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ಬದುಕುವ ಛಲವನ್ನು ಬೆಳೆಸಿಕೊಳ್ಳಬೇಕು ಎನ್ನುವುದರತ್ತ ಬೆಳಕು ಚೆಲ್ಲುತ್ತದೆ. ಈ ಎಲ್ಲಾ ಕವಿತೆಗಳಲ್ಲಿ ಮೇಲುನೋಟಕ್ಕೆ ಬಹಳ ಸರಳವಾಗಿ, ಯಾವುದೇ ಭಾವಪ್ರದರ್ಶನವಿಲ್ಲದೇ ವ್ಯಕ್ತಪಡಿಸುವ ಇಂತಹ ಸಂಗತಿಗಳು ಓದುಗರನ್ನು ಇನ್ನಿಲ್ಲದಂತೆ ಕಲಕಿಬಿಡುತ್ತವೆ.

ಅಲ್ಲದೆ, ಇಲ್ಲಿ ಬರುವ ನಾಗರಿಕ ಜೀವನದ ದೊಡ್ಡ ದುರಂತವಾದ ವೃದ್ಧರ ಒಂಟಿತನ ಅಸಹಾಯಕತೆ, ರೈತರ ಬವಣೆ, ಪರಿಸರಕ್ಕೆ ಬಂದೊದಗಿರುವ ಸಂಕಷ್ಟಗಳು, ಬಡತನ, ಹಸಿವು ಮುಂತಾದ ವಿವರಗಳು ಅಮೇರಿಕದ ಬಗೆಗೆ ನಾವು ಕಟ್ಟಿಕೊಂಡಿರುವ ಭ್ರಮೆಗಳನ್ನು ಕಿತ್ತೊಗೆಯುತ್ತವೆ.

poetry crowತಾನು ಕಂಡದ್ದನ್ನು ಕಾವ್ಯದ ಮೂಲಕ ಇರಿಸುವಾಗ ಕೂಡ, ಕಾಣುವ ಮತ್ತು ಇರಿಸುವ ಕ್ರಿಯೆಯಲ್ಲಿ ವ್ಯಕ್ತಿಗತವಾದ ಆಯ್ಕೆಯ ಪ್ರಶ್ನೆಗಳು ಇದ್ದೇ ಇರುತ್ತವೆ. ನಾವು ಯಾವುದರ ವಕ್ತಾರರೂ ಅಲ್ಲ ಎಂದುಕೊಂಡರೂ ಯಾವುದೋ ಒಂದರ ವಕ್ತಾರರಾಗಿ ನಾವು ಹೊರಜಗತ್ತನ್ನು ಕಾಣುತ್ತೇವೆ. ಎಲ್ಲರೀತಿಯ ಪೂರ್ವಗ್ರಹಗಳಿಂದ ಬಿಡಿಸಿಕೊಂಡು ಹೊಸದಾಗಿ, ಮುಕ್ತವಾಗಿ ನೋಡಬೇಕೆನ್ನುವ ಜೆ.ಕೆ ಅವರ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಿಲ್ಲವೇನೋ. ಭಾಷೆಯೋ, ಸಂಸ್ಕೃತಿಯೋ, ದೇಶ ಕಾಲವೋ ಯಾವುದಾದರೊಂದು ಮಿತಿ ಇದ್ದೇ ಇರುತ್ತದೆ

ಈ ಎಲ್ಲ ಮಿತಿಗಳನ್ನು ಗಮನದಲ್ಲಿಟ್ಟುಕೊಂಡೇ ಬಹುಶಃ ನಾವು ಕಾವ್ಯವನ್ನು ನೋಡಬೇಕೇನೋ? ಆ ಮಿತಿಯೊಳಗೆ ಕವಿ ಪಡೆದುಕೊಳ್ಳುವ ಸ್ವಾತಂತ್ರ್ಯದ ಕುರಿತಾಗಿ ಮಾತನಾಡಬೇಕೇನೋ? ಇಲ್ಲದಿದ್ದರೆ ಯಾವುದೇ ಕಲಾಕೃತಿಯ ಚರ್ಚೆಯೇ ಸಾಧ್ಯವಾಗುವುದಿಲ್ಲ. ಟೆಡ್ ಕೂಸರ್ ನ ಕವಿತೆಗಳನ್ನು ಈ ಮಿತಿಯಲ್ಲಿ ನೋಡಿದರೂ ಕನ್ನಡಕ್ಕೆ ಬಹಳ ವಿಶಿಷ್ಟವಾಗಿಯೇ ಕಾಣುತ್ತವೆ. ಭೂಮಿಯ ಮೇಲಿನ ಅನೇಕ ಸಾಮಾನ್ಯ, ವೈವಿಧ್ಯಮಯ, ವಿಷಯಗಳು ಗದ್ಯದ ಸರಳತೆ ಮತ್ತು ಕಾವ್ಯದ ಆರ್ಧ್ರತೆಯನ್ನು ಮೈಗೂಡಿಸಿಕೊಂಡು ಸಂವಹನಗೊಳ್ಳುವ ರೀತಿ ಕನ್ನಡಕ್ಕೆ ಹೊಸದಾಗಿಯೇ ಇದೆ.

ಭೂಮಿ ಮತ್ತು ಆಕಾಶಕ್ಕೆ ವ್ಯತ್ಯಾಸವೇ ಇಲ್ಲವೆನ್ನುವಂತೆ ಅನೇಕ ಬಾರಿ ಆಕಾಶವೂ ಉಲ್ಕಾಪಾತವೂ ಕವಿತೆಗಳಲ್ಲಿ ಬರುತ್ತವೆ. ಆಕಾಶದ ಅಗಾಧತೆಯನ್ನು ಭೂಮಿಯ ಮೇಲಿನ ವಸ್ತುವಿವರಗಳು ಪ್ರತಿಪಾದಿಸುತ್ತವೆ. ಆಕಾಶವನ್ನು ಹಿಡಿಯಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಭೂಮಿಯನ್ನೂ ಹಿಡಿಯಲು ಸಾಧ್ಯವಿಲ್ಲ. ಅವು ನಮ್ಮ ಗ್ರಹಿಕೆಯ ಆಚೆಗೆ ನಿಲ್ಲುತ್ತವೆ ಎಂಬುದನ್ನು ಈ ಕವಿತೆಗಳು ವ್ಯಕ್ತಪಡಿಸುತ್ತವೆ. ವಿಪಶ್ಶನಾ ಕೂಡ ಯಾವ ಅನುಭವವನ್ನೂ ತನ್ನ ಗ್ರಹಿಕೆಗೆ ತೆಗೆದುಕೊಳ್ಳುವುದರ ಬಗೆಗಾಗಲೀ ಅದನ್ನು ನಿಯಂತ್ರಿಸುವುದರ ಬಗೆಗಾಗಲೀ, ಅವುಗಳಿಗೆ ಲೇಬಲ್ ಹಚ್ಚಿ ಅಖಂಡವಾದದ್ದನ್ನು ಒಡೆಯುವ ಪ್ರಯತ್ನವನ್ನಾಗಲೀ ಮಾಡುವುದಿಲ್ಲ.

ಬೇಂದ್ರೆಯವರೇನೋ ಕಾವ್ಯವಸ್ತು ಕುರಿತಾಗಿ ಹೇಳುವಾಗ ‘ಹೂತ ಹುಣಿಸೀ ಮರ ಸಾಕು’ ಎಂದು ಹೇಳಿರಬಹುದು. ಆದರೆ ಕನ್ನಡದ ಸಂದರ್ಭದಲ್ಲಿ ಟೆಡ್ ನ ಹಾಗೆ ಬದುಕಿನ ಸಣ್ಣ ಸಣ್ಣವಿವರಗಳನ್ನು ಯಾವುದೇ ತಾತ್ವಿಕ ಜಿಜ್ಞಾಸೆಯ ಭಾರವಿಲ್ಲದೇ, ಒಂದು ವಸ್ತುನಿಷ್ಠ ದೂರದಲ್ಲಿಟ್ಟು ಅತ್ಯಂತ ಸರಳವಾಗಿ ಹೇಳುವಂತಹ ಪ್ರಯೋಗಗಳು ನಡೆದಿರುವುದು ಕಡಿಮೆ. ಈ ದೃಷ್ಟಿಯಲ್ಲಿ ಟೆಡ್ ಕೂಸರ್ ನನ್ನು ಓದುವುದರ ಮೂಲಕ ಕನ್ನಡ ಕಾವ್ಯ ಬರಹ ಹೊಸಬಗೆಯ ಪ್ರಯೋಗಕ್ಕೆ ತೆರೆದುಕೊಳ್ಳಬಹುದಾಗಿದೆ. ಇಂತಹ ಕವಿತೆಗಳನ್ನು ಕನ್ನಡಿಗರಿಗೆ ಪರಿಚಯಿಸಿದ ಕನ್ನಡದ ಜಾಯಮಾನಕ್ಕೆ ತಕ್ಕಂತೆ ಕನ್ನಡೀಕರಿಸಿರುವ ಡಾ. ಎಚ್. ಎಸ್. ರಾಘವೇಂದ್ರರಾವ್ ಅಭಿನಂದನೀಯರು.

‍ಲೇಖಕರು Admin

November 28, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಮಾಸಂಗಿ’ ಎಂಬ ಮಕ್ಕಳ ಆಸ್ತಿ..

 ಶರಣಬಸವ.ಕೆ.ಗುಡದಿನ್ನಿ 'ಮಾಸಂಗಿ' ಎಂಬ ಹೆಸರೇ ನನ್ನನ್ನ ಆ ಪುಸ್ತಕ ಎತ್ತಿಕೊಳ್ಳುವಂತೆ ಮಾಡಿತು. ಹಂಗಂದ್ರೆ ಏನಿರಬೌದು? ಅಂತ ಪುಸ್ತಕದ ಹೆಸರು...

2 ಪ್ರತಿಕ್ರಿಯೆಗಳು

  1. A.N.Mukunda

    ಕವಿತೆಗಳಿಗೆ ತುಂಬಾ ಆಪ್ತ ವಾದ ಪ್ರವೇಶಿಕೆಯನ್ನು ಒದಗಿಸಿದ್ದೀರಿ. ಮತ್ತೊಮ್ಮೆ ಓದುವಂತೆ ಮಾಡಿದ್ದೀರಿ. ವಂದನೆಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: