ಮೌಲ್ಯ ಸ್ವಾಮಿ ಅವರ ‘ಸುಮ್ಮನೆ ಬಿದ್ದಿರುವ ಬಿಕ್ಕುಗಳು’.

ಕವಯತ್ರಿ ಮೌಲ್ಯ ಸ್ವಾಮಿ ಅವರ ಮೊದಲ ಕವನ ಸಂಕಲನ ‘ಸುಮ್ಮನೆ ಬಿದ್ದಿರುವ ಬಿಕ್ಕುಗಳು’.

ಈ ಸಂಕಲನಕ್ಕೆ ಹಿರಿಯ ಸಾಹಿತಿ ಜಿ ಪಿ ಬಸವರಾಜು ಅವರು ಬರೆದ ಮುನ್ನುಡಿ ಇಲ್ಲಿದೆ-

ಜಿ ಪಿ ಬಸವರಾಜು

ನನ್ನ ಕಣ್ಮುಂದೆಯೇ ಬೆಳೆದ ಹುಡುಗಿ ಮೌಲ್ಯ. ಹೀಗೆ ಹೇಳಿದರೂ, ನಾನು ಈವರೆಗೆ ಇವಳನ್ನು ನೋಡಿರುವುದು ನಾಲ್ಕಾರು ಬಾರಿ ಮಾತ್ರ. ಪಿಯುಸಿಯ ವಿದ್ಯಾರ್ಥಿಯಾಗಿದ್ದಾಗ ಮೊದಲ ಬಾರಿಗೆ; ನಂತರ ಪದವಿಗೆ ಓದುತ್ತಿದ್ದಾಗ. ಮತ್ತೆ ಒಂದೆರಡು ಬಾರಿ ಇನ್ನು ಯಾವಾಗಲೊ. ನಿಜಕ್ಕೂ ನಾನು ಮೌಲ್ಯಳನ್ನು ಗಮನಿಸಿದ್ದು ಎರಡು ವರ್ಷಗಳ ಹಿಂದೆ. ಮೌಲ್ಯಳ ತಂದೆ ಪ್ರೊ.ಮರಿಸ್ವಾಮಿ. ಕರ್ನಾಟಕ ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯದ ಸಂವಹನ ವಿಭಾದಲ್ಲಿ ಪ್ರಾಧ್ಯಾಪಕರಾಗಿ ವಿದ್ಯಾರ್ಥಿಗಳ ಜೊತೆ ಒಡನಾಡಿದವರು. ತಾಯಿ‌ ಶೈಲಜಾ ಇಬ್ಬರೂ ಮಗಳ ಇಚ್ಚೆಗಳನ್ನು ಅವಳ ಅಪೇಕ್ಷೆಯಂತೆಯೇ ನಡೆಸಿಕೊಟ್ಟವರು.

ಈಗ ಮೌಲ್ಯ ತನ್ನ ಕೂಸಿನಂತೆ ಈ ಕವನ ಸಂಕಲನವನ್ನು ಹಿಡಿದುಕೊಂಡು ನನ್ನ ಮುಂದೆ ಬಂದಿದ್ದಾಳೆ. ನಾಲ್ಕು ಮಾತುಗಳನ್ನು ಅಪೇಕ್ಷಿಸಿದ್ದಾಳೆ. ಯೌವನದ ಹುರುಪು, ಕಾವ್ಯದ ಬಗೆಗಿರುವ ಅದಮ್ಯ ಉತ್ಸಾಹ, ಬದುಕನ್ನು ತನ್ನದೇ ನೋಟದಲ್ಲಿ ಕಾಣುವ ಕಾತರ ಇವೆಲ್ಲ ತುಂಬಿ ತುಳುಕುವಾಗ ಇದೆಲ್ಲ ಸಹಜ. ‘ಅರ್ಥ’ದ ಬೆನ್ನುಹತ್ತಿ ಹೋಗುವ ತರುಣ ತರುಣಿಯರ ಮಧ್ಯೆ ಹೀಗೆ ಅಕ್ಷರದ ಪ್ರೀತಿಗೆ ಮರುಳಾಗಿ ಕವಿತೆ, ಕತೆಗಳ ಲೋಕಕ್ಕೆ ಧಾವಿಸುವ ಕೆಲವೇ ಕೆಲವರ ನಡುವೆ ಮೌಲ್ಯ ನಿಂತಿದ್ದಾಳೆ. ಅನೇಕರಿಗೆ ಇದು ವ್ಯವಹಾರಿಕ ನಡೆಯಲ್ಲ. ನಮ್ಮಂಥವರಿಗೆ ಮಾತ್ರ ಹೆಮ್ಮೆಯ, ಖುಷಿಯ ಸಂಗತಿ.

ನಡೆದು ನಡೆದು, ಜಾಳುಜಾಳಾಗಿ, ಸವೆದು ಹೋದ ಸವಕಲು ಹಾದಿಯ ಕವಿತೆಗಳನ್ನೇ ಓದಿ ಓದಿ ಮಂಕಾದ ಮನಸ್ಸಿಗೆ ಇಲ್ಲಿನ ಕವಿತೆಗಳ ಚೇತೋಹಾರಿ ನಡೆ ಮುದನೀಡುತ್ತದೆ. ಯಾವುದೇ ಕವಿತೆಯ ಎದುರು ನಿಂತು ಕೈಗೆ ಸಿಗುವ ಯಾವುದೇ ನುಡಿಯನ್ನು ಎತ್ತಿಕೊಂಡರೂ ಇಲ್ಲಿ ಹೊಸತನ ಕಾಣಿಸುತ್ತದೆ. ಜೊಂಪೆ ಜೊಂಪೆ ರೂಪಕಗಳು, ಪ್ರತಿಮೆ, ಪ್ರತೀಕಗಳು ಸಿಕ್ಕುತ್ತವೆ. ‘ಮೂರು ಕಲ್ಲಿನ ಒಲೆಯ ಅಳುವಿಗೆ ದನಿಯಿಲ್ಲ’, ‘ಒಲೆಯ ಕೆಂಡಕೆ ಕೆಂಪು ಹಿಂಗಿ ಇದೀಗಷ್ಟೇ ಜೋಂಪು’, ‘ಸಾವಿನ ಮುಂದೆ ಮಜಬೂತು ನಾಟ್ಯ ನೀಡುತ್ತ ಗೋಗರೆಯುತ್ತಿದೆ ಬೆಳ್ಳಿಮಾತು’, ’ಅನಾಮಿಕ ಬೀದಿಯ ಆಗಂತುಕ ತಿರುವಿನಲ್ಲಿ’, ’ಸೆರಗ ಚುಂಗಿನಲ್ಲಿಷ್ಟು ಗಲ್ಲ ಕರಗದ ನಕ್ಷತ್ರಗಳನ್ನು ಕಟ್ಟಿಕೊಂಡು ನಾನಾದರೂ ಒಂದೇ ಸಮನೆ ತಡಕಾಡುತ್ತಿದ್ದೇನೆ,’  ‘ತಬ್ಬಲಿತನದ ಉರಿಗೆ ಎದೆಯ ಕವಾಟವೆಲ್ಲ ಮೀನಿನಂಗಡಿ’, ‘ಮೇಜಿನ ಮೇಲಿರುವ ಕನ್ನಡಕಕೆ ಅನೂಹ್ಯ ದಿಗಿಲು’,’ತುಕ್ಕು ಹಿಡಿದ ಬೆಳಕು’, ‘ನಂಜಿನ ಬೆಳದಿಂಗಳು’, ‘ಕೆಂಡದ ಮುತ್ತುಗಳು’, ‘ತಾಜಾ ನಿರಾಶೆಗಳು’,’ಯಾರದೋ ಒಬ್ಬಂಟಿತನದ ಬೇಟೆಗೆ ಮರಳ ಮೈಯ್ಯ ಮೇಲೆ ಬರೆದ ಚಿತ್ರ’, ‘ನಂಬಿಕೆಗಳ ಹೆಣಗಳನ್ನು ಕತ್ತಲಿನ ಗುಂಡಿಯೊಳಗೆ ಹೂತದ್ದಾಯಿತು’, ‘ಮುಂಗುರುಳ ನೇವರಿಸಿ ಹಣೆಗೆ ಮುತ್ತೊತ್ತುವ ಅಮ್ಮ, ಬಿದ್ದಾಗ ನೆಲವಾದವಳು, ಅತ್ತಾಗ ಸೆರಗಾದವಳು

– ಹೀಗೆ ಮಾತು ಇಲ್ಲಿ ಗರಿಬಿಚ್ಚಿ ಕುಣಿಯುತ್ತದೆ; ರೂಪರೂಪಕಗಳನ್ನು ಕಟ್ಟುತ್ತದೆ. ಹೊಸ ರೀತಿಯ ತುಡಿತ, ಗ್ರಹಿಕೆ ಮತ್ತು ನೋಟಗಳಿಂದ ಮಾತ್ರ ಇಂಥ ಕಾವ್ಯ ಹುಟ್ಟುತ್ತದೆ. ಈ ಭಾಷೆಗೆ ಬಿರುಕುಗಳಿಲ್ಲ. ಅನಾಗತ್ಯ ಊತಗಳಿಲ್ಲ. ನಿಗಿ ನಿಗಿ ಕಣ್ಣಲ್ಲಿ ನಗುವನ್ನು ತುಳುಕಿಸುತ್ತದೆ! ಕವಿತೆ ಕೈಗೆಟುಕದೇ?-  ಚಿಂತೆ ಬೇಡ, ಕೇವಲ ಇದರ ಭಾಷೆಯ ಸೊಗಸಿಗೇ ಓದಿ ;  ಅಷ್ಟು ಸಾಕು.

ಮೊದಲ ಸಂಕಲನದಲ್ಲಿಯೇ ಇದನ್ನು ಸಾಧ್ಯ ಮಾಡಿರುವುದು, ಮೌಲ್ಯ ಕಾವ್ಯವನ್ನು ಗಂಭೀರವಾಗಿ ಪರಿಭಾವಿಸಿರುವುದರ ಸೂಚನೆಯಾಗಿ ತೋರುತ್ತದೆ.

ಈ ಸಂಕಲನದ ಹೆಸರೇ-ಸುಮ್ಮನೇ ಬಿದ್ದಿರುವ ಬಿಕ್ಕುಗಳು. ಈ ಬಿದ್ದುಕೊಂಡಿರುವ ಸ್ಥಿತಿ ಆಲಸ್ಯದ್ದಲ್ಲ. ಪುಟಿಯುವ, ನೆಗೆಯುವ, ಗರಿಬಿಚ್ಚಿ ಹಾರುವ ಉಮೇದು ಇದ್ದರೂ, ಈ ಚೇತನ ಹಾರಲಾರದು, ಜಿಗಿಯಲಾರದು. ಇದರ ರೆಕ್ಕೆಯನ್ನು ಕತ್ತರಿಸಲಾಗಿದೆ. ಹೆಜ್ಜೆ ಹೆಜ್ಜೆಗೂ ವಿಧಿನಿಷೇಧಗಳನ್ನು ಹೇರಲಾಗಿದೆ. ಅನುಮಾನಗಳು ಸಂಬಂಧಗಳನ್ನು ಮುರಿದಿವೆ. ನಂಬಿಕೆಗಳು ಅರ್ಥ ಕಳೆದುಕೊಂಡಿವೆ. ಬಿದ್ದ ಚೇತನದ ಬಿಕ್ಕುಗಳು ಸಂಕಲನದುದ್ದಕ್ಕೂ ಅನುರಣಿಸುತ್ತವೆ. ತನ್ನ ಸುತ್ತಲಿನ ಜಗತ್ತು ಭ್ರಷ್ಟಗೊಂಡಿರುವುದು, ಸಹಜ ಸಂಬಂಧಗಳು ಕಡಿದುಬಿದ್ದಿರುವುದು, ಹೃದಯಗಳು ಮಿಡಿಯಲಾರದೆ ಹೋಗಿರುವುದು, ಚೇತನವು ಅರಳಲು ನೆರವಾಗಬೇಕಾದ ಸುತ್ತಲಿನ ಪರಿಸರವೇ ಬಂಧಿಸುವ ಸೆರೆಮನೆಯ ಗೋಡೆಗಳಾಗಿರುವುದು, ಮಾತುಗಳು ಅರ್ಥ ಕಳೆದುಕೊಂಡು ಬರಿಯ ಗದ್ದಲವಾಗಿರುವುದು, ಸಮಾಜಿಕ ಪರಿಸರವೇ ಜೀವ ವಿರೋಧಿಯಾಗಿರುವುದು ಮತ್ತು ಇಂಥವೇ ನೂರಾರು ಕಠೋರ ಸಂಗತಿಗಳು ಈ ಚೈತನ್ಯವನ್ನು ವಿಷಾದದ ಮಡುವಿಗೆ ನೂಕಿವೆ. ನಿರಾಶೆ, ಹತಾಶೆ, ಏಕಾಂಗಿತನ, ಮುತ್ತಿದ ಕತ್ತಲು, ನಿಟ್ಟುಸಿರು, ಸೋತ ದನಿಗಳು, ಬಿಕರಿಯಾದ ನಾಳೆಗಳು, ವಿಳಾಸವಿಲ್ಲದ ಊರಿನಲ್ಲಿ ಕರುಳು ಹರಿದ ಓಣಿ- ಹೀಗೆ ವಿಷಾದವನ್ನು ತುಂಬಿಕೊಂಡ ಚಿತ್ರಗಳೇ ಉದ್ದಕ್ಕೂ ಕಣ್ಣಿಗೆ ರಾಚುತ್ತವೆ.

 ತನ್ನೆಲ್ಲಾ ‘ದಿಗಿಲುಗಳಿಗೆ ಪೂರ್ಣ ವಿರಾಮ ಬರೆದ’ ಇನ್ನೊಂದು ಜೀವ ಇಲ್ಲಿ ಕಾಣಿಸಿದರೂ ಅದರಿಂದಲೂ ಸಾಂತ್ವಾನ ಸಿಗುವ ಸೂಚನೆಗಳಿಲ್ಲ. ‘ಅವನ ದಿಂಬಿನಡಿಯಲ್ಲಿಷ್ಟು/ ಹಸಿ ಕಾಂಕ್ಷೆ/ಗಳ ಹರಡಿದ್ದೆ/ ರಾತ್ರಿ ಕಳೆದು/ ಬೆಳಗು ಮೂಡುವ ಹೊತ್ತಿಗೆ/ ಬೂದಿ ಮಾತ್ರವೇ ಉಳಿದಿದೆ.’

ಅಷ್ಟೇ ಅಲ್ಲ,

‘ಅಂದು ಕೊರಳನೆತ್ತಿಸಿ ನಕ್ಷತ್ರ ತೋರಿದ ಅಪ್ಪ/ ಇಂದು ಕುಂತಲ್ಲೇ ಒಸಗುತ್ತಾನೆ ಅಸಹನೆಯಲಿ/ ನಕ್ಷತ್ರಗಳತ್ತಲೇ ಕಣ್ಣು ನೆಟ್ಟವಳನ್ನು ಕಂಡು.’

ಆರ್ದ್ರ, ಆಪ್ತ ಸಂಬಂಧಗಳು ಹಾಗೆಯೇ ಉಳಿಯಲು ಈ ಸಮಾಜ, ಅದರ ಅರ್ಥಹೀನ ಕಟ್ಟುಪಾಡುಗಳು ಬಿಡುವುದೇ ಇಲ್ಲ. ಈ ಚೌಕಟ್ಟಿನಲ್ಲಿಯೇ ತನ್ನ ಬದುಕನ್ನು, ಮಗಳ ಭವಿಷ್ಯವನ್ನು ರೂಪಿಸಬೇಕಾದ ತಂದೆ ಈ ಕಟ್ಟುಪಾಡುಗಳ ಗೆರೆಯನ್ನು ಮೀರಲಾರ, ಮಗಳನ್ನು ತನ್ನ ಜೀವದಂತೆಯೇ ಪ್ರೀತಿಸಿದರೂ, ಅವಳ ಸ್ವಾತಂತ್ರ್ಯವನ್ನು ಒಪ್ಪಲಾರ. ಇಂಥ ಸಂಕಟಗಳ ನಡುವೆ ಬೇಯುವ, ನೋಯುವ, ಹತಾಶೆಯನ್ನು ಹೊತ್ತು ನಡೆಯುವ ಮಗಳ ಹಾಡು, ‘ಮುಗಿಯದ ಕಾವಳದ ಹಾಡು’… ಅಲ್ಲಿ ಬೆಳಗು ಮೂಡುವ ಭರವಸೆಯಿಲ್ಲ.

ಈ ಸಂಗ್ರಹದ ಮೊದಲ ಪದ್ಯವೇ  ಬಹುದೊಡ್ಡ ಆಘಾತದಂತೆ ಎದುರಾಗುತ್ತದೆ. ಇದೊಂದು ಘೋರ, ಭಯಾನಕ, ಆತ್ಯಂತಿಕ ಸ್ಥಿತಿಯ ಚಿತ್ರ. ಹೆಣ್ಣುಕುಲ ಎದುರಿಸುತ್ತ ಬಂದಿರುವ, ಈಗಲೂ ಎದುರಿಸುತ್ತಿರುವ ಮನುಕುಲವೇ ನಾಚಿ ತಲೆತಗ್ಗಿಸಬೇಕಾದ ಕಠೋರ ಸತ್ಯವನ್ನು ಇದು ತೆರೆದು ತೋರಿಸುತ್ತದೆ. ಇದು ಚರಮಗೀತೆಯೂ ಹೌದು; ಶ್ರುತಿ ತಪ್ಪಿದ ಗೀತೆಯೂ ಹೌದು. ಕಾಲಾಂತರದಿಂದ, ದೇಶಾಂತರದಿಂದ ಹಾಡುತ್ತ ಬಂದ ಈ ಗೀತೆ ಕೊನೆಯಾಗುವ ಅಥವಾ ಬದಲಾಗುವ ಸೂಚನೆಯೇ ಇಲ್ಲ. ಅಕ್ಕ, ತಂಗಿ, ತಾಯಿ ಯಾವ ಭೇದವೂ ಇಲ್ಲದೆ ಎಲ್ಲ ‘ಹೆಣ್ಣಿನ ಮೈಮಾಂಸಗಳನ್ನು ಸುಲಿದು ತಿನ್ನಲಾಗಿದೆ.’ ‘ಉರಿಗೊಳ್ಳಿಯ ಬಳ್ಳಿಗಳಾಗಿ ಹರಿಯುತ್ತಲೇ ಇರುವ ನದಿಗಳು’ ಇದ್ದರೂ ಅವು, ‘ಶತಮಾನದಿಂದ ಶತಮಾನಕ್ಕೆ ಯಾರನ್ನೂ ಸುಡದೆ’ ಹರಿದಿವೆ. ಇದು ಎಂಥ ಸನ್ನಿವೇಶ ಎಂದರೆ, ಇಲ್ಲಿ ‘ನಿಂತ ಮಣ್ಣ ಕಣಕಣದಲ್ಲೂ ಕಡು ಕೆಂಡದ ಹೊರಳು.’ ಎದೆಯಾಳದ ಈ ನೋವು ಅದೆಷ್ಟು ಘೋರವೆಂದರೆ ಚೀರಲೂ ದನಿ ಇಲ್ಲ. ದನಿ ಸತ್ತು ಹೋಗಿದೆ. ಆದರೆ ತಣ್ಣನೆಯ ಕೋಪ ಹೇಗೆ ಹರಿದಿದೆ ಎಂದರೆ ಈ ಕವಿತೆಯ ವ್ಯಂಗ್ಯದ ಸಾಲುಗಳಲ್ಲಿ ಈ ಕ್ರೋಧ ಜ್ವಾಲೆಯಾಗಿ ಉರಿದಿದೆ: ‘ನಿಮ್ಮ ಕೈಮುಳ್ಳುಗಳಿಂದ ನಾವು ಹೆತ್ತ ಕುಡಿಗಳ ಹೆಣಗಳನ್ನಾದರೂ ಕಾಪಾಡಲು ಭದ್ರ, ಸುಭದ್ರ ಗೋರಿಗಳ ಕಟ್ಟುತ್ತೇವೆ’ ಎಂದು ಸೋದರರಿಗೆ ಪ್ರಾರ್ಥಿಸುವ ಹೆಣ್ಣು ತನ್ನ ನೋವಿನಾಳವನ್ನು ತೆರೆದು ತೋರಿಸುತ್ತಾಳೆ. ಜಗದ ತಾಯಂದಿರ ಮೇಲೆ ಆಣೆಮಾಡಿ ತನ್ನ ವಿನಂತಿಯನ್ನು ಮುಂದಿಡುತ್ತಾಳೆ.

ಇವು ಕೊನೆಯಿರದ ಬಿಕ್ಕುಗಳು; ಸುಮ್ಮನೇ ಬಿದ್ದಿರುವ ಬಿಕ್ಕುಗಳು. ಕೂಗಲಾಗದ, ಧ್ವನಿಕೊಟ್ಟು ಅಳಲಾಗದ, ಅಂತರಾಳದ ನೋವಿನ, ಸಂಕಟದ, ತಲ್ಲಣಕ್ಕೆ ಸೊರಗಿ ಕುಸಿದು ಬಿದ್ದಿರುವ ಬಿಕ್ಕುಗಳು. ಇಂಥ ನೋವಿನ ಅನೇಕ ಕವಿತೆಗಳು ಈ ಸಂಗ್ರಹದಲ್ಲಿ ನೋವನ್ನು ಎಳೆಎಳೆಯಾಗಿ ಹೆಣೆದಿವೆ. ಇದು ನೋವಿನ ಬಟ್ಟೆ. ನೆಲದಿಂದ ಮುಗಿಲಿಗೆ ಹಬ್ಬಿದ ಬಟ್ಟೆ.

ಸಾಹಿತ್ಯ ಕ್ಷೇತ್ರದಲ್ಲಿ ಮೊದಲ ಹೆಜ್ಜೆಯನ್ನು ಊರಿರುವ ಮೌಲ್ಯಳ ಈ ಸಂಕಲನದಲ್ಲಿ ಗಮನಿಸಬೇಕಾದ ಅನೇಕ ಮುಖ್ಯ ಗುಣಗಳಿವೆ. ಹಾಗೆಯೇ ಕೊರತೆಗಳಿರುವುದೂ ಸಹಜ. ಈ ಕಾವ್ಯದ ನಾಯಕಿಯ ಬದುಕಿಗೆ ಭುಜಕೊಡಬಲ್ಲ ಸಖ ಮತ್ತು ಅವನ ಜೊತೆಯಲ್ಲಿ ಕಟ್ಟಿಕೊಂಡ ಸಂಬಂಧ ಇಲ್ಲಿ ಕೇವಲ ಗೆರೆಯಲ್ಲಿ ಮೂಡಿ ಮರೆಯಾಗಿದೆ. ಈ ಗೆರೆಗಳು ದಟ್ಟವಾಗಿ ಚಿತ್ರವಾಗಬೇಕು; ಹಾಗೆಯೇ ಈ ಗೆರೆಗಳ ನಡುವೆ ಬಣ್ಣಗಳೂ ತುಂಬಿಕೊಳ್ಳಬೇಕು. ಆಗ ಇಡಿಯ ಚಿತ್ರ ಮೂಡುತ್ತದೆ. ಸಂಬಂಧ ಸೂಕ್ಷ್ಮಗಳನ್ನು ಇನ್ನಷ್ಟು ಆಳಕ್ಕೆ ಹೋಗಿ ನೋಡಬಲ್ಲ ದಿಟ್ಟತನವೂ ಬೇಕು. ಆಗ ಕಾವ್ಯ ತೀವ್ರತೆಯನ್ನು ಪಡೆದುಕೊಳ್ಳುತ್ತದೆ. ಹೆಚ್ಚು ಹೆಚ್ಚು ಸ್ಪಷ್ಟತೆಯನ್ನು ಪಡೆದುಕೊಳ್ಳುತ್ತದೆ. ಹಾಗೆಯೇ ಸಂಗ್ರಹವಾಗಿ, ಮೊನಚಾಗಿ, ಭಾಷೆ ಮತ್ತು ಅರ್ಥ ಸಾಧ್ಯತೆಗಳ ಎಲ್ಲ ಆಯಾಮಗಳೂ ಕೂಡಿಕೊಳ್ಳುವಂತೆ ಕಾವ್ಯವನ್ನು ಕಟ್ಟುವ ಕಲೆಗಾರಿಕೆ ಇನ್ನೂ ಗಟ್ಟಿಯಾಗಬೇಕು. ಇವೆಲ್ಲವನ್ನೂ ಪಟ್ಟಿಮಾಡುತ್ತ ಹೋಗಿ ಮೌಲ್ಯಳ ದಿಗಿಲನ್ನು ಹೆಚ್ಚು ಮಾಡಲಾರೆ. ನಡೆಯುತ್ತ ನಡೆಯುತ್ತ ನೋಟ ನಿಚ್ಚಳವಾಗುತ್ತದೆ. ದಾರಿ, ನಡಿಗೆಯ ಗತಿ ಎಲ್ಲವೂ ತಕ್ಕ ಲಯವನ್ನು ಪಡೆದುಕೊಳ್ಳುತ್ತವೆ.

ಅಂಥ ಲಯ ಮೌಲ್ಯಳಿಗೆ ದಕ್ಕಲಿ. ಕಾವ್ಯ ಅವಳ ಬದುಕಿನ ಬೆಳಕನ್ನು ಹೆಚ್ಚಿಸಲಿ. ಅವಳ ಒಳಗಿರುವ ಸಾಮರ್ಥ್ಯ ಅಗತ್ಯ ಹೊರದಾರಿಯನ್ನು ಕಂಡುಕೊಳ್ಳಲಿ. ಕವಿಯಾಗಿ, ವ್ಯಕ್ತಿಯಾಗಿ ಎತ್ತರೆತ್ತರದ ಮಜಲುಗಳನ್ನು ಮೌಲ್ಯ ಏರುತ್ತ ಹೋಗಲಿ ಎಂದು ಆಶಿಸುತ್ತೇನೆ.

                                                                                           

‍ಲೇಖಕರು avadhi

December 24, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಾಲತೇಶ ಅಂಗೂರರ ‘ಹಾವೇರಿಯಾಂವ್’

ಮಾಲತೇಶ ಅಂಗೂರರ ‘ಹಾವೇರಿಯಾಂವ್’

ಸತೀಶ ಕುಲಕರ್ಣಿ ಹಾವೇರಿ ನೆಲದ ಮಾತುಗಳಿಗೊಂದು ವಿಚಿತ್ರ ರುಚಿ ಇದೆ. ಸಿಟ್ಟು ಸೆಡವು, ಗಡಸು ಗಿಚ್ಚಿ ಹೊಡೆಯುವ ಮೊನಚು ಇವುಗಳದ್ದು. ವ್ಯಂಗ್ಯ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This