ಮ್ಯಾರಡೋನಾ, ಮ್ಯಾರಡೋನಾ….

ಕೆ. ಪುಟ್ಟಸ್ವಾಮಿ

ಡೀಗೋ ಮ್ಯಾರಡೋನಾ ನಿಧನರಾದ ಸುದ್ದಿಯನ್ನು ದರ್ಶನ್‌ ಜೈನ್‌ ಅವರ ವಾಲ್‍ನಲ್ಲಿ ಓದಿದಾಗ 1982,1986 ಮತ್ತು1990ರ ವಿಶ್ವಕಪ್ ಫುಟ್ ಬಾಲ್ ಟೂರ್ನಿಗಳನ್ನು ಹುಚ್ಚನಂತೆ ನೋಡಿದ ನನಗೆ ಆತನ ಪ್ರತಿ ನಡೆಯನ್ನೂ ಕಣ್ತುಂಬಿಕೊಂಡಿದ್ದೆ. ಆತನ Die Hard Fan ಆಗಿದ್ದೆ, ಆದರೆ ನಾನು ಕ್ರೀಡೆಯನ್ನು ಕುರಿತ ಪುಸ್ತಕ ‘ಭುವನದ ಬೆಡಗು’ (2000) ಬರೆಯುವ ವೇಳೆಗೆ ಅತನ ಬಗ್ಗೆ ವಿಚಿತ್ರ ಅನುಕಂಪ ಮೂಡಿತ್ತು.

ಜಗತ್ತಿನ ಸರ್ವಶ್ರೇಷ್ಟ ಸಾಕರ್ ಆಟಗಾರರಾದ ಪೆಲೆ ಮತ್ತು ಮ್ಯಾರಡೋನ ಬಗ್ಗೆ ಎರಡು ಸುದೀರ್ಘ ಲೇಖನಗಳು ಆ ಕೃತಿಯಲ್ಲಿವೆ. ಹಿರಿಯ ಗೆಳೆಯ ಅಗ್ರಹಾರ ಕೃಷ್ಣಮೂರ್ತಿಯವರು ಕೃತಿ ಬಿಡುಗಡೆಯ ಸಮಾರಂಭದಲ್ಲಿ ಈ ಲೇಖನದ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳಿದ್ದರು. ಈ ಸಂದರ್ಭದಲ್ಲಿ ಅದರ ಯಥಾವತ್ ರೂಪದಲ್ಲಿ ಗೆಳೆಯರಿಗೆ ಇಷ್ಟವಾಗಬಹುದೆಂದು ಹಂಚಿಕೊಂಡಿದ್ದೇನೆ. ಬಹುತೇಕ ಲೇಖನಗಳು ಅಂದಿನ ಸುದ್ದಿ ಸಂಗಾತಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದವು. ಆಗ ಮತ್ತು ಈ ಪುಸ್ತಕ ಪ್ರಕಟವಾಗುವ ಪೂರ್ವದಲ್ಲಿ ಲೇಖನಗಳಿಗೆ ಗೆಳೆಯ ಎನ್ ಎಸ್ ಶಂಕರ್ ಕೈಯಾಡಿಸಿದ್ದಾರೆ.

ಬಯಸಿದ್ದೆಲ್ಲ ಹಿಡಿಮುಷ್ಟಿಗೆ ದಕ್ಕುವ ಸಿರಿವಂತಿಕೆ; ಜಗತ್ತಿನ ಸುಂದರ ಪುರುಷರಲ್ಲೊಬ್ಬನೆನಿಸಿದ ಗಂಡ. ಜಗತ್ಪ್ರಸಿದ್ಧಿ ಪಡೆದ ಅರಮನೆಯ ಒಡತಿ. ಸುಖದ ಸೋಪಾನದರಮನೆ… ಚಾಚಿದ ಬಾಹುಗಳು ಬಾಚುವಷ್ಟು ಬಂಗಾರ. ಜಗದ ಸಿರಿಯೇ ಮಗುವಾಗಿ ಅವತರಿಸಿದೆಯೇನೋ ಎಂಬಂಥ ಕರುಳ ಕುಡಿಗಳು. ಹೋದೆಲ್ಲೆಡೆ ಹಿಂಬಾಲಿಸುವ ಕ್ಯಾಮರಾ ಕಣ್ಣುಗಳು. ಏನು ಬೇಕಿತ್ತು! ಯಾವುದಕ್ಕೆ ಕೊರತೆಯಿತ್ತು? ಆದರೂ ಇವೆಲ್ಲಕ್ಕೂ ಬೆನ್ನು ತಿರುಗಿಸಿ ರಾಜಕುಮಾರಿ ಡಯಾನಾ ಕೋಟ್ಯಾಧಿಪತಿ ಪ್ರಿಯಕರನೊಡನೆ ಹೊರಟೇ ಬಿಟ್ಟಳು.

ಆಗಸ್ಟ್ 31, 1997 ರಂದು, ಎಂದೂ ಹಿಂದಿರುಗಿ ಬಾರದ ತಾಣಕ್ಕೆ! ವೇಲ್ಸ್‌ನ ರಾಜಕುಮಾರಿ ಡಯಾನಾಳ ದುರ್ಮರಣಕ್ಕೆ ಎರಡು ದಿನ ಮೊದಲು – ಜಗತ್ತಿನ ಅಪ್ರತಿಮ ಆಟಗಾರನೊಬ್ಬನ ವೃತ್ತಿ ಬದುಕಿಗೆ ಮರಣ ಶಾಸನವೊಂದು ಜಾರಿಯಾಗಿತ್ತು. ಉಣಲೂ ಗತಿಯಿಲ್ಲದ ಬಾಲ್ಯ ಅವನದು. ಆದರೀಗ ಕುಬೇರ. ಜಗತ್ತಿನ ಕ್ರೀಡಾಪ್ರಿಯರ ಮೇಲೆ ಮೋಡಿ ಹಾಕಿದ್ದ ಬಂಗಾರದ ಎಡಗಾಲಿನ ಒಡೆಯ. ಅವನ ಹಿಂದೆ ಗ್ರಹಗಳಂತೆ ಪರಿಭ್ರಮಿಸುವ ಛಾಯಾಗ್ರಾಹಕರ ಹಿಂಡಿತ್ತು.

ಚಿಟಿಕೆ ಹೊಡೆದರೆ ಏನುಬೇಕಾದರೂ ಕಾಲ ಬಳಿ ಬಂದು ಬೀಳುವ ಕಾಲವಿತ್ತು. ಐದು ಅಡಿ ಐದು ಅಂಗುಲ ಎತ್ತರದ ಈ ವಾಮನ ತ್ರಿವಿಕ್ರಮನಾಗಿ ಬೆಳೆದ. ಯಶಸ್ಸಿನ ಅಲೆಯೇರಿ ತೇಲಿಬಂದ. ಹೆಜ್ಜೆಯಿಟ್ಟೆಡೆಯೆಲ್ಲ ತಬ್ಬುವ ಸುಖವನ್ನರಸಿ ಹೊರಟ. ತನ್ನ ಅಭಿಮಾನಿ ಮಹಾಪೂರದ ಹೃದಯಕ್ಕೆ ಎಂದೂ ಮಾಯದ ಬರೆಯೆಳೆದ. ಇರುವುದೆಲ್ಲವ ಬಿಟ್ಟ ಇರದುದರೆಡೆಗೆ ತುಡಿದ ಮನಸ್ಸನ್ನು ಹಿಂಬಾಲಿಸಿದ.

ಡಯಾನಾಳ ಅಂತ್ಯಸಂಸ್ಕಾರಕ್ಕೆ ಮೂರುದಿನ ಇರುವಂತೆಯೇ ಅವನ ಮರಣಶಾಸನ ದೃಢಪಟ್ಟಿತು. ತನ್ನ ಪ್ರಿಯವಾದ ಸಾಕರ್ ಮೈದಾನವನ್ನು ತೊರೆದು ಹೊರನಡೆದ, ಮತ್ತೊಂದು ಮರಳಿಬಾರದಂತೆ!! ಈ ದುರಂತ ನಾಯಕನೇ ಡೀಗೋ ಆರ್ಮಂಡ ಮ್ಯಾರಡೊನ. ಅರ್ಜೆಂಟೀನಾದ “ಎಲ್ ಪಿಬೆ ಡೇ ಒರೊ“ ಅಥವಾ ಅರ್ಜೆಂಟೀನಾ ಸಾಕರ್‌ನ ಬಂಗಾರದ ಬಾಲಕ. ಕೊಳೆಗೇರಿಯಿಂದ ಹೆಜ್ಜೆಯಿಟ್ಟು ಅರಮನೆಗೆ ಒಡೆಯನಾದ ಕಥಾನಾಯಕ.

ಮಾದಕ ವಸ್ತುಗಳ ಮೋಹಿನಿಯ ನರ್ತನಕ್ಕೆ ಬಲಿಯಾದ ಭಸ್ಮಾಸುರ. ಭೂಗ್ರಹದ ಅತ್ಯಂತ ರೋಮಾಂಚಕ ಆಟವೆನಿಸಿದ ಸಾಕರ್ ಆಗಸದಲ್ಲಿ ಪೆಲೆಯ ನಂತರ ಅವತರಿಸಿದ ಉಜ್ವಲ ತಾರೆ, ಮ್ಯಾರಡೋನ. ಪೆಲೆಯಂತೆಯೇ ಅವನದೂ ಬಡತನದ ಬಾಲ್ಯ. ಪೆಲೆಯಂತೆಯೇ ಅಪ್ರತಿಮ ಆಟಗಾರ. ಪೆಲೆಯಂತೆಯೇ ತನ್ನ ದೇಶಕ್ಕೆ ಏಕಾಂಗಿಯಾಗಿ ಹೋರಾಡಿ ವಿಶ್ವಕಪ್ ಕಿರೀಟ ತೊಡಿಸಿದ ವೀರ. ಹೋಲಿಕೆ ಅಲ್ಲಿಗೆ ಮುಕ್ತಾಯ. ಪೆಲೆಯಲ್ಲಿದ್ದ ಬದುಕಿನ ಮತ್ತು ಆಟದ ಶಿಸ್ತು ಆತನಿಗೆ ಅಪರಿಚಿತ.

ಅಪರಿಮಿತಿ ಪ್ರತಿಭೆಯಿದ್ದರೂ ಗೆಲುವಿಗಾಗಿ ಮೋಸವನ್ನೂ ಮಾಡಬಲ್ಲ!! ರೆಫರಿಯ ಮೂಗಿನಡಿಯಲ್ಲೇ ನಿಯಮಗಳನ್ನು ಉಲ್ಲಂಘಿಸಿ ನುಣುಚಿಕೊಳ್ಳಬಲ್ಲ! ಬದುಕು ಮತ್ತು ಆಟ ತನ್ನ ನಿಯಮಗಳಿಗೆ ಅಧೀನವಾಗಿರಬೇಕೆಂದು ಬಯಸಿ ಅದರಂತೆ ನಡೆದ ಬಂಡಾಯಗಾರ. ಹಾಗಾಗಿ ಎಲ್ಲವೂ ಇದ್ದು, ಎಲ್ಲವನ್ನೂ ಗಳಿಸಿ. ಕೊನೆಗೆ ಎಲ್ಲವನ್ನೂ ಕಳೆದುಕೊಂಡ. ಶ್ರಮದಿಂದ ಹೋರಾಡಿ ಕೀರ್ತಿಯ ಅಲೆಯೇರಿದವನು ತಾನಾಗಿಯೇ ಪಾಪದ ಕೂಪವನ್ನು ತೋಡಿಕೊಂಡ.

ಆಟವನ್ನು ಬಿಟ್ಟು ಮೂರು ದಶಕಗಳಾದರೂ ಪೆಲೆಯ ನೆನಪು ಜನರ ಮನಸ್ಸಿನಿಂದ ಮಾಸಿಲ್ಲ. ಮ್ಯಾರಡೋನ ಹೆಸರು ಕೇವಲ ಮೂರು ವರ್ಷದಲ್ಲಿ ಅಪಥ್ಯ. ಈಗ ಹೆನ್ರಿ ರೋನೋನಂತೆ ಮ್ಯಾರಡೋನ ಕ್ರೀಡಾಪಟುಗಳ ಪಾಲಿಗೆ ಏಕಕಾಲಕ್ಕೆ ಒಂದು ಆದರ್ಶವೂ ಹೌದು! ಎಚ್ಚರಿಕೆಯೂ ಹೌದು! ವಿಲ್ಲ ಫಿಯೊಂಟೋ ಬ್ಯಾರಿಯೋ ಎಂಬುದು ಅರ್ಜೆಂಟೀನಾ ರಾಜಧಾನಿ ಬ್ಯೂನಸ್ ಐರಿಸ್‌ನಲ್ಲಿ ಒಂದು ಕೊಳಚೆ ಪ್ರದೇಶ. ಅಲ್ಲೊಬ್ಬ ಕಾರ್ಖಾನೆಯಲ್ಲಿ, ದುಡಿಯುವ ನೌಕರ. ಅವನ ಎಂಟು ಮಕ್ಕಳಲ್ಲಿ ಡೀಗೋ ಮ್ಯಾರಡೋನ ಒಬ್ಬ. (ಜನನ 1961).

ಊಟಕ್ಕೂ ಗತಿಯಿಲ್ಲದ ಮನೆಯಲ್ಲಿ ಬೊಂಬೆಗಳೂ ಇರಲಿಲ್ಲ. ಹಾಗಾಗಿ ಮ್ಯಾರಡೋನ ಗೊಂಬೆಗಳ ಜೊತೆಯಲ್ಲಿ ಬಾಲ್ಯ ಕಳೆಯಲಿಲ್ಲ. ಎದ್ದು ಹೊರಗೆ ಓಡಾಡುತ್ತಿದ್ದಂತೆ ಜೊತೆಗಾರರೊಟ್ಟಿಗೆ ಸಾಕರ್ ಆಡಲಾರಂಭಿಸಿದ. ಅರ್ಜೆಂಟೀನಾದಲ್ಲಿ ಸಾಕರ್ ಕೇವಲ ಆಟವಲ್ಲ; ಅದೊಂದು ಬದುಕು, ವೃತ್ತಿ ಮತ್ತು ಧರ್ಮ. ಮ್ಯಾರಡೋನಾದು ಜನ್ಮಜಾತ ಪ್ರತಿಭೆ. ಅದು ಕ್ಷಿಪ್ರದಲ್ಲೇ ವಿಕಸನವಾಯಿತು.

ಎಲ್ಲ ಜಗತ್ಪ್ರಸಿದ್ದ ಆಟಗಾರರಂತೆಯೇ ಅವನ ಶೈಕ್ಷಣಿಕ ಬದುಕು ಸಹ ಬಹುಬೇಗನೆ ಅಂತ್ಯ ಕಂಡಿತು. ಎಳೆಯ ಪ್ರತಿಭೆಯಾಗಿ ಪ್ರಸಿದ್ಧ ಸಿಬೊಲಿಟಾಸ್ ಕ್ಲಬ್ ಸೇರಿ ತರಬೇತಿ ಪಡೆದ. ಅವನ ತಂಡ ಸತತವಾಗಿ 140 ಪಂದ್ಯಗಳನ್ನು ಗೆದ್ದಾಗ ಮ್ಯಾರಡೋನ ಹೊಸ ತಾರೆಯಾಗಿ ಕಂಗೊಳಿಸಿದ. ಸಾಕರ್ ಆಟದಲ್ಲಿ ಹತ್ತನೆ ನಂಬರ್‌ನ ಜೆರ್ಸಿಗೆ ಬಹಳ ಮಹತ್ವ. ಆ ಸಂಖ್ಯೆಯ ಜೆರ್ಸಿ ಪೆಲೆ ತೊಟ್ಟ ನಂತರ ಜಗತ್ರ್ಪಸಿದ್ದಿಯಾಯಿತು.

ಮ್ಯಾರಡೊನ ಕೂಡ ಹತ್ತನೇ ನಂಬರ್‌ನ ಜೆರ್ಸಿ ಗಳಿಸಿದ. ಆಟಗಾರನಾಗಿ ಆತ ಕುಬ್ಜ. ಕೇವಲ ಐದು ಅಡಿ ಅಷ್ಟೇ ಅಂಗುಲ. ಆದರೆ ಮ್ಯಾರಡೋನ ಗೋಲು ಗಳಿಸುವ ಬ್ರಹ್ಮಾಸ್ತ್ರವಾಗಿ, ಚಾಣಾಕ್ಷ ಮಿಡ್ ಫೀಲ್ಡ್ ಪಟುವಾಗಿ ರೂಪುಗೊಂಡ. ಸಾಕರ್‌ನಲ್ಲಿ ಸ್ಟ್ರೈಕರ್ (Striker) ಮತ್ತು ಮಿಡ್‌ಫೀಲ್ಡ್ ಆಟಗಾರರಿಗೆ ಹೆಚ್ಚಿನ ಮಹತ್ವ. ಗೊಲಿನ ಆಸುಪಾಸು ಹೊಂಚುಹಾಕಿ ನಿಂತು ತನ್ನ ತಂಡದವರು ನೀಡುವ ಚೆಂಡನ್ನು ಚಾಣಾಕ್ಷತೆಯಿಂದ ಒದ್ದು ಇಲ್ಲವೇ ತಲೆಯಿಂದ ಗುದ್ದಿ ಗೋಲು ಗಳಿಸುವವನು ಸ್ಟ್ರೈಕರ್.

ಇಡೀ ಆಟದ ಆಕ್ರಮಣ ಮತ್ತು ರಕ್ಷಣೆಯನ್ನು ನಿರ್ದೇಶಿಸುವವನು ಮಿಡ್‌ಫೀಲ್ಡರ್. ಆಟದ ಗತಿಯನ್ನು ಗಮನಿಸಿ ಸ್ಟ್ರೈಕರ್‌ಗೆ ಇಲ್ಲವೇ ರಕ್ಷಣಾಗಾರರಿಗೆ ಚೆಂಡನ್ನು ರವಾನಿಸುವ ದೊಡ್ಡ ಜವಾಬ್ದಾರಿ ಆತನದು. ಆದರೆ ಮ್ಯಾರಡೋನ ಶ್ರೇಷ್ಠ ಮಿಡ್‌ಫೀಲ್ಡ್ ಆಟಗಾರನಾದರೂ ವಿಚಿತ್ರವಾದ ಪ್ರತಿಭಾವಂತ. ಅವನು ಏಕಕಾಲಕ್ಕೆ ಆಕ್ರಮಣಕಾರನಾಗಿಯೂ, ರಕ್ಷಣಗಾರನಾಗಿಯೂ ಮಿಂಚುತ್ತಿದ್ದ. ಇಲ್ಲವೇ ಚೆಂಡಿನ ರವಾನೆಗಾಗಿ ಗೋಲುಗಳನ್ನು ’ಸೆಟ್ ಅಪ್’ ಮಾಡಬಲ್ಲವನಾಗಿದ್ದ. ಅವನಲ್ಲಿ ಅದ್ಭುತವಾದ ಡ್ರಿಬ್ಲಿಂಗ್ ಕೌಶಲ್ಯವಿತ್ತು. ದೈಹಿಕವಾಗಿ ಕುಳ್ಳಗಿದ್ದರೂ ಚಿಗರೆಯಂತೆ ಓಡಬಲ್ಲ.

ಎರಡೂ ತಂಡದ ಆಟಗಾರರು ನಕ್ಷತ್ರದ ಸುತ್ತ ಗ್ರಹಗಳು ಸುತ್ತುವಂತೆ ಅವನ ಸುತ್ತ ಸುತ್ತುತ್ತಿದ್ದರು. ತೊಡರುಗಾಲು ಕೊಟ್ಟರೆ ಅದನ್ನು ದಾಟಿ, ’ಬಾಕ್ಸ್’ ರಕ್ಷಣೆಯನ್ನು ಬೇಧಿಸಿ, ಎದುರಾಳಿಗಳನ್ನು ವಂಚಿಸಿ ಗೋಲು ಗಳಿಸುತ್ತಿದ್ದ. ಇಲ್ಲವೇ, ಇತರರು ಗೋಲು ಗಳಿಸುವಂತೆ ’ಸೆಟ್ ಅಪ್’ ಮಾಡುತ್ತಿದ್ದ. ಅವನು ಗೋಲು ಸಮೀಪ ಎಡಗಾಲಿನ ಹತ್ತಿರ ಚೆಂಡು ಇತ್ತೆಂದರೆ ಖಂಡಿತಾ ಗೋಲಾಗುತ್ತಿತ್ತು. ಅವನ ಆಟದ ವೈಖರಿ ನೋಡಲೆಂದೇ ಪ್ರೇಕ್ಷಕರು ಮುಗಿಬೀಳುತ್ತಿದ್ದರು. ಅವನು ಮೈದಾನದಲ್ಲಿ ಓಡುವಷ್ಟು ಕಾಲವೂ ಪ್ರೇಕ್ಷಕರೆದೆಯಲ್ಲಿ ಸಂತಸದ ಅಲೆಗಳು ಏಳುತ್ತಿದ್ದವು.

1978ರಲ್ಲಿ ಅರ್ಜೆಂಟೀನ ವಿಶ್ವಕಪ್ ಸಾಕರ್ ಕೂಟವನ್ನು ಸಂಘಟಿಸಿತು. ಮ್ಯಾರಡೋನನಿಗೆ ಆಗಿನ್ನೂ ಹದಿನೇಳರ ವಯಸ್ಸು. ತಂಡಕ್ಕೆ ಆಯ್ಕೆಯಾದರೂ ಆಟವಾಡಲೂ ಕೋಚ್ ಬಿಡಲಿಲ್ಲ. ಡೇನಿಯಲ್ ಪಸರೆಲನ ತಂಡ ಫೈನಲ್‌ನಲ್ಲಿ ಡಚ್ ತಂಡ ಸೋಲಿಸಿ ಅರ್ಜೆಂಟೀನಾಗೆ ಕಪ್ ಗೆದ್ದು ಕೊಟ್ಟಿತು. ಹೊಂಗೂದಲಿನ ಚೆಲುವ ಮಾರಿಯೋ ಕೆಂಪ್ಸ್ ಆ ಕೂಟದ ’ಹೀರೋ’ ಆಗಿದ್ದ. ತನ್ನ ತಂಡ ಗೆದ್ದರೂ, ತಾನು ಆಡಲಿಲ್ಲವೆಂದು ಮ್ಯಾರಡೋನ ರಿಸರ್ವ್ ಬೆಂಚ್‌ನಲ್ಲಿ ಕೂತು ಬಿಕ್ಕಿದ್ದನ್ನು ಯಾರೂ ಹೆಚ್ಚಾಗಿ ಗಮನಿಸಲಿಲ್ಲ. ತನಗೆ ವಂಚನೆಯಾಯಿತೆಂದು ಭಾವಿಸಿ ಕೋಚ್ ಜೊತೆ ಆರು ತಿಂಗಳು ಮುನಿಸಿಕೊಂಡು ಕೋಪ ತೀರಿಸಿಕೊಂಡ.

ಅರ್ಜೆಂಟಿನಾದ ಬೋಕಾ ಜ್ಯೂನಿಯರ್ಸ್ ಕ್ಲಬ್ ಮೊದಲಬಾರಿಗೆ 1980-81ನೇ ಸಾಲಿಗೆ ಮ್ಯಾರಡೋನ ಜೊತೆ ಒಪ್ಪಂದ ಮಾಡಿಕೊಂಡಿತು. ಅವನ ಅಪ್ರತಿಮ ಪ್ರತಿಭೆಯನ್ನು ಕಂಡ ಪ್ರಸಿದ್ಧ ಬಾರ್ಸಿಲೋನಾ ಕ್ಲಬ್ 1982ರಲ್ಲಿ 90ಲಕ್ಷ ಡಾಲರ್ ನೀಡಿ ಅವನ ಸದಸ್ಯತ್ವವನ್ನು ವರ್ಗಾಯಿಸಿಕೊಂಡಿತು. ಅಂತಾರಾಷ್ಟ್ರೀಯ ಆಟಗಾರನಾಗಿ ಬಹುಬೇಗನೆ ವರ್ಧಮಾನಕ್ಕೆ ಬಂದ ಮ್ಯಾರಡೋನ 1982ರ ವಿಶ್ವಕಪ್ ಕೂಟದಲ್ಲಿ ಒದೆತ ತಿನ್ನಬೇಕಾಯಿತು. ಸ್ಪೇನ್ ಸಂಘಟಿಸಿದ 1982ರ ವಿಶ್ವಕಪ್ ಟೂರ್ನಿಯಲ್ಲಿ ಮ್ಯಾರಡೋನ ’ಕಟ್ಟಿಹಾಕಬೇಕಾದ’ ಪಟುವಾಗಿದ್ದ (ಮಾರ್ಕ್‌ಡ್ ಮ್ಯಾನ್).

ಕಾಳಗದ ಗೂಳಿಯಂತಿದ್ದ 21 ವರ್ಷದ ಮ್ಯಾರಡೋನ ಮುಟ್ಟಿದರೆ ಸಿಡಿಯುವಂತಿದ್ದ. ಇಟಲಿ ತಂಡದ ಕ್ಲಾಡಿಯೋ ಜೆಂಟಲ್ ಎದುರಾಳಿಯನ್ನು ಕಟ್ಟಿ ಹಾಕುವುದರಲ್ಲಿ ಚಾಣಾಕ್ಷ. ಚೆಂಡು ಕಸಿಯುವ ನೆಪದಲ್ಲಿ ಯಾರಿಗೂ ತಿಳಿಯದಂತೆ ಎದುರಾಳಿಗೆ ಒದೆಯಬಲ್ಲ ನಿಷ್ಣಾತ. ಆರಂಭದ ಸುತ್ತಿನ ಅರ್ಜೆಟಿನಾ- ಇಟಲಿ ಪಂದ್ಯದಲ್ಲಿ ಜೆಂಟಲ್ ಮಂಡಿ, ತೊಡೆ, ಪಾದದ ಕೀಲು ಮುರಿಯುವಂತೆ ಒದ್ದು ಮ್ಯಾರಡೋನಾನನ್ನು ಕಟ್ಟಿಹಾಕಿದ.

ನನ್ನ ವೃತ್ತಿ ಜೀವನದಲ್ಲಿ ಯಾರೂ ಜೆಂಟಿಲ್‌ನಷ್ಟು ಒದೆಯಲಿಲ್ಲ ಎಂದು ಮ್ಯಾರಡೋನ ಆರೋಪಿಸಿದ. ಅದಕ್ಕೆ ಜೆಂಟಿಲ್ ಉತ್ತರಿಸಿದ್ದು-“ಮಗೂ… ಸಾಕರ್ ಪುರುಷರು ಆಡುವ ಆಟ. ನರ್ತಕಿಯರ ಲಾಸ್ಯವಲ್ಲ”. ಈ ಟೀಕೆಯಿಂದ ರೊಚ್ಚಿಗೆದ್ದ ಮ್ಯಾರಡೋನ ಮುಂದಿನ ಪಂದ್ಯದಲ್ಲಿ ಬ್ರೆಜಿಲ್‌ನ ಆಟಗಾರನೊಬ್ಬ ತಡೆಯಲು ಬಂದಾಗ ಮಾರಣಾಂತಿಕ ಪೆಟ್ಟು ನೀಡಿ ಪಂದ್ಯದಿಂದ ಹೊರಹಾಕಿಸಿಕೊಂಡ. ಬಳಿಕ ಅರ್ಜೆಂಟೀನಾ ತಂಡ ಟೂರ್ನಿಯಿಂದ ಹೊರಬಿತ್ತು. ಸ್ಥಳೀಯ ಪತ್ರಿಕೆಗಳ ಅವಹೇಳನಕ್ಕೆ ಮ್ಯಾರಡೋನ ಗುರಿಯಾದ.

‘ಮಿನಿ ಡೋನ’ (ಪುಟಾಣಿ ಹೆಂಗಸು) ಎಂಬ ಬಿರುದೂ ಪ್ರಾಪ್ತವಾಯಿತು. 1982 ರ ವಿಶ್ವಕಪ್ ಟೂರ್ನಿಯ ನಂತರ ಮ್ಯಾರಡೋನಾನ ವೃತ್ತಿ ಬದುಕಿನ ಉತ್ಕರ್ಷ ಆರಂಭ. ಇಟಲಿಯ ಪ್ರಖ್ಯಾತ ನೇಪಲ್ಸ್ ಕ್ಲಬ್‌ನಿಂದ ಆಹ್ವಾನ. ಜೊತೆಗೆ ಭಾರಿ ಮೊತ್ತದ ಸಂಭಾವನೆ. 1984 ಜುಲೈ 5ರಂದು ಅವನಿಗೆ ಇಟಲಿಯ ಜನತೆಯಿಂದ ಅದ್ಭುತ ಸ್ವಾಗತ. ಸ್ಯಾನ್ ಪೊಲೊ ಮೈದಾನದಲ್ಲಿ 85 ಸಾವಿರ ಜನರ ಹರ್ಷೋದ್ಗಾರದೊಡನೆ ಅವನ ಹೊಸ ವೃತ್ತಿ ಬದುಕು ಆರಂಭವಾಯಿತು.

ಎರಡೇ ವರ್ಷಗಳಲ್ಲಿ ನೇಪಲ್ಸ್ ತಂಡವನ್ನು 12ನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ತಂದು ಇಟಲಿಯ ಜನರ ಕಣ್ಮಣಿಯಾದ. ಕೀರ್ತಿಯ ಅಲೆಯೇರಿ ಮ್ಯಾರಡೋನ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲು ಮೆಕ್ಸಿಕೋಗೆ ಬಂದಾಗ (1986) ಜಗತ್ತು ಅವನ ಕಾಲಬಳಿ ಶರಣಾಗಿತ್ತು. ಅರ್ಜೆಂಟೀನಾ ದೇಶಕ್ಕೆ ಮ್ಯಾರಡೋನಾ ಮಾತ್ರ ವಿಶ್ವಕಪ್ ತೊಡಿಸಬಲ್ಲ ಎಂಬ ಆತ್ಮವಿಶ್ವಾಸ ಗಟ್ಟಿಯಾಗಿತ್ತು.

ಮ್ಯಾರಡೋನಾನನ್ನು ಕಟ್ಟಿಹಾಕಿದರೆ ಮಾತ್ರ ಪಂದ್ಯ ಗೆಲ್ಲಲು ಸಾಧ್ಯ ಎಂದು ಎದುರಾಳಿಗಳು ಅಚಲವಾಗಿ ನಂಬಿದ್ದರು. ಆರಂಭದ ಸುತ್ತಿನ ಮೊದಲ ಆಟದಲ್ಲಿ ದಕ್ಷಿಣ ಕೊರಿಯಾ ಆಟಗಾರರು ಹತ್ತು ಸಾರಿಯಾದರೂ ಅವನನ್ನು ಕೆಡವಿದರು. ಆದರೂ ಮ್ಯಾರಡೋನ ಮೂರು ಗೋಲ್‌ಗಳನ್ನು ‘ಸೆಟಪ್’ ಮಾಡಿದ. ಹದಿನಾರು ತಂಡಗಳ ಅರ್ಹತಾ ಸುತ್ತಿನಲ್ಲಿ ಉರುಗ್ವೆ ಎದುರು ಮತ್ತೊಂದು ಗೋಲು ಬರಲು ಕಾರಣನಾದ. ಕ್ವಾರ್ಟರ್ ಫೈನಲ್ಸ್‌ನಲ್ಲಿ ಎದುರಾದದ್ದು ಪ್ರಬಲ ಇಂಗ್ಲೆಂಡ್ ತಂಡ.

ಆಟ ಆರಂಭವಾದ ಐವತ್ತೊಂದನೇ ನಿಮಿಷದಲ್ಲಿ ಸಾಕರ್ ಇತಿಹಾಸದ ಅತ್ಯಂತ ವಿವಾದಾಸ್ಪದ ಗೋಲಿಗೆ ಕಾರಣನಾದ. ಸಾಕರ್ ಅಸ್ತಿತ್ವದಲ್ಲಿರುವವರೆಗೂ ಆ ಬಗ್ಗೆ ಚರ್ಚೆ ನಡೆಯುವುದು ಖಂಡಿತ. ಗೋಲು ಪೆಟ್ಟಿಗೆಯ ಬಳಿ ಮೇಲಕ್ಕೇರಿ ಬಂದ ಚೆಂಡು ಕಂಡ ಆತ ಇಂಗ್ಲೆಂಡ್ ಗೋಲಿ ಪೀಟರ್ ಶಿಲ್ಟನ್ ಜೊತೆ ಮೇಲಕ್ಕೆ ಹಾರಿದ. ಆ ವಾಮನ ತನ್ನ ಎಡಗೈಯನ್ನು ಸವರಿ ಚೆಂಡನ್ನು ಗೋಲಿಗೆ ತೂರಿಸಿಯೇ ಬಿಟ್ಟ. ಟ್ಯುನಿಸಿಯಾದ ರೆಫರಿ ಆಲಿ ಬೆನ್ ನಕಿಯರ್‌ಗೆ ಆ ವಂಚನೆ ತಿಳಿಯಲಿಲ್ಲ.

ಇಂಗ್ಲೆಂಡ್ ಆಟಗಾರರ ಪ್ರತಿಭಟನೆಯನ್ನು ಪುರಸ್ಕರಿಸಲಿಲ್ಲ. ಈ ಆಘಾತದಿಂದ ಇಂಗ್ಲೆಂಡ್ ಇನ್ನೂ ಹೊರಬಂದಿಲ್ಲ. ನಾಲ್ಕು ನಿಮಿಷಗಳಲ್ಲೇ ಮ್ಯಾರಡೋನಾ ಏಕಾಂಗಿಯಾಗಿ ಎಪ್ಪತ್ತು ಗಜ ಚೆಂಡನ್ನು ಡ್ರಿಬಲ್ ಮಾಡಿ ಅಡ್ಡಬಂದ ಐವರು ಇಂಗ್ಲೆಂಡ್ ಆಟಗಾರರ ರಕ್ಷಣಾ ಕೋಟೆ ಬೇಧಿಸಿ ಶಿಲ್ಟನ್‌ನನ್ನೂ ವಂಚಿಸಿ ಹಿಂದಿನ ಕಳಂಕವನ್ನು ಅಳಿಸುವ ರೀತಿಯಲ್ಲಿ ಅದ್ಭುತ ಗೋಲು ಗಳಿಸಿದ. ಪ್ರೇಕ್ಷಕರಿರಲಿ, ಆ ಗೋಲನ್ನು ಕಂಡು ಆಟಗಾರರೇ ಕಕ್ಕಾಬಿಕ್ಕಿಯಾದರು. ಹೀಗೂ ಸಾಧ್ಯವೇ? ಎಂದು ದಂಗು ಬಡಿದು ಹೋಗಿದ್ದರು.

ಬೆಲ್ಜಿಯಂ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಪ್ರೇಕ್ಷಕರು ಜಗತ್ತಿನ ಸರ್ವಶ್ರೇಷ್ಠ ಗೋಲುಗಳಿಗೆ ಸಾಕ್ಷಿಯಾದರು. ಮಧ್ಯಗೆರೆಯಿಂದಲೇ ಚೆಂಡನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ಬ್ಯಾಲೆ ನರ್ತಕನಂತೆ ಲಾವಣ್ಯಪೂರ್ಣವಾಗಿ ಮುನ್ನಡೆಸುತ್ತಾ ಬೆಲ್ಜಿಯಂನ ಆರು ಜನರು ಮುಗಿಬಿದ್ದರೂ ನುಣುಚಿಕೊಂಡು ಎರಡುಬಾರಿ ಗೋಲುಗಳಿಸಿದ ಮ್ಯಾರಡೋನ ಸಾಮರ್ಥ್ಯಕ್ಕೆ ವಿಶ್ವವೇ ತಲೆದೂಗಿತು.

ಇಂಗ್ಲೆಂಡ್ ಮೇಲೆ ಹೊಡೆದ ಎರಡನೆಯ ಗೋಲು ಹಾಗೂ ಬೆಲ್ಜಿಯಂ ಮೇಲೆ ಹೊಡೆದ ಆ ಎರಡು ಗೋಲುಗಳು ವಿಶ್ವದ ಅತ್ಯಂತ ಶ್ರೇಷ್ಠ ಗೋಲುಗಳ ಪಟ್ಟಿಗೆ ಸೇರಿ ಹೋಗಿವೆ. ಪ್ರಬಲ ಜರ್ಮನಿಯನ್ನು ಫೈನಲ್‌ನಲ್ಲಿ ಎದುರಿಸಿದ ಅರ್ಜೆಂಟಿನಾ ಆರಂಭದಲ್ಲೇ ಎರಡು ಗೋಲು ಗಳಿಸಿತು. ಜರ್ಮನ್ ತಂಡದ ಮಥಾಯಿಸ್‌ನಂಥ ಅಪ್ರತಿಮ ಆಟಗಾರರು ಮ್ಯಾರಡೋನನ್ನು ಕಟ್ಟಿಹಾಕಲು ಅವನ ನೆರಳಾಗಿ ಸಂಚರಿಸುತ್ತಿದ್ದಾಗ ಉಳಿದ ಆಟಗಾರರು ಗೋಲು ಗಳಿಸಿದ್ದರು.

ಮೈದಡವಿಕೊಂಡ ಜರ್ಮನಿ ತಾನೂ ಎರಡು ಗೋಲು ಗಳಿಸಿ ಪಂದ್ಯಕ್ಕೆ ರೋಮಾಂಚನ ತಂದು ಪಂದ್ಯವನ್ನು ಕುತೂಹಲದ ಕಡಲಲ್ಲಿ ಮುಳುಗಿಸಿತು. ಅಬ್ ಆಯಾ ಮಜಾ ಎಂದು ಪ್ರೇಕ್ಷಕರು ಮೈಯೆಲ್ಲ ಕಣ್ನು ಮಾಡಿಕೊಂಡು ಕೂತರು. ಆಟಗಾರರ ಬಾಕ್ಸ್‌ನಲ್ಲೇ ನರಳುತ್ತಿದ್ದ ಮ್ಯಾರಡೋನ ಇದ್ದಕ್ಕಿದ್ದಂತೆ ಪೊರೆ ಕಳಚಿದ ಹಾವಿನಂತೆ ಹೊರಬಂದು ಸಹ ಆಟಗಾರ ಬುರಚಾಗನಿಗೆ ಗೋಲು ಹೊಡೆಯುವಂತೆ ಮಾಡಿದ ’ಸೆಟಪ್’ ಯಶಸ್ವಿಯಾಯಿತು. ಅರ್ಜೆಂಟೀನಾ ಮುಡಿಗೆ ವಿಶ್ವಕಪ್ ಗರಿ ಏರಿತು.

ವಿಶ್ವಕಪ್ ಸಾಧನೆಯ ನಂತರ ಆತ ಜಗತ್ತಿನ ಕಣ್ಮಣಿಯಾದ. ನೇಪಲ್ಸ್ ಮ್ಯಾರಡೋನನ ಸಂಭಾವನೆ ಏರಿಸಿತು. 1987ರಲ್ಲಿ ಇಟಾಲಿಯನ್ ಲೀಗ್ ಮತ್ತು ಇಟಾಲಿಯನ್ ರಾಷ್ಟ್ರೀಯ ಚಾಂಪಿಯನ್‌ಷಿಪ್ ಅನ್ನು ನೇಪಲ್ಸ್ ಕ್ಲಬ್‌ಗೆ ಮ್ಯಾರಡೋನ ತಂದುಕೊಟ್ಟ. 1989ರಲ್ಲಿ ಯುಇಎಫ್‌ಎ ಕಪ್ ಹಾಗೂ 1990ರಲ್ಲಿ ಮತ್ತೊಮ್ಮೆ ಇಟಾಲಿಯನ್ ಲೀಗ್ ಚಾಂಪಿಯನ್‌ಷಿಪ್ ನೇಪಲ್ಸ್‌ನ ಷೋಕೇಸನ್ನು ಅಲಂಕರಿಸಿದವು.

ಸಾಕರ್ ಹುಚ್ಚಿನ ಇಟಲಿಯ ಜನರು ಮೈಮೇಲೆ, ಕಾಲಿನಮೇಲೆ ಮ್ಯಾರಡೋನಾನನ್ನು ಹಚ್ಚೆ ಹಾಕಿಸಿಕೊಂಡರು, ಆರಾಧಿಸಿದರು. ದುರದೃಷ್ಟವೆಂದರೆ ಮ್ಯಾರಡೋನನ ಇಂಥ ಉಚ್ಛ್ರಾಯವೇ ಅವನ ಪತನಕ್ಕೂ ನಾಂದಿಯಾಯಿತು. ಅರ್ಜೆಂಟಿನಾದ ಕೊಳಗೇರಿಯ ಬಾಲಕನಿಗೆ ಇದ್ದಕ್ಕಿದ್ದಂತೆ ಮಹಾಪೂರವಾಗಿ ಹರಿದ ಪ್ರಸಿದ್ಧಿಯನ್ನು ಅರಗಿಸಿಕೊಳ್ಳಲಾಗಲಿಲ್ಲ. ಮೋಜು, ನರ್ತನ ದಿನನಿತ್ಯದ ಬದುಕಾಯಿತು.

ಮದ್ಯದ ಅಮಲು ತಲೆಗೇರಿತು. ತನ್ನ ಮಗಳಿಗೆ ಮದುವೆಯ ಫೋಟೋ ತೋರಿಸಲು ಹತ್ತುಲಕ್ಷ ಡಾಲರ್ ವೆಚ್ಚ ಮಾಡಿ ಹುಚ್ಚನ ರೀತಿ ಮತ್ತೊಮ್ಮೆ ಮದುವೆ ಮಾಡಿಕೊಂಡ. ಅಂದು ಮಧ್ಯರಾತ್ರಿಯವರೆಗೂ ನಡೆದ ಮದ್ಯಪಾನದ ಹುಚ್ಚುಹೊಳೆಯ ಸಂಭ್ರಮದಲ್ಲಿ ಛಾಯಾಗ್ರಾಹಕನ ಮೂಗಿಗೆ ಗುದ್ದಿ ಕುಪ್ರಸಿದ್ಧಿ ಪಡೆದ. ವಿವಾದದಿಂದ ಪಾಠ ಕಲಿಯದ ಮ್ಯಾರಡೋನ ಆಟ ಮರೆತು ಮೋಜಿನಲ್ಲಿ ಲೀನನಾದ. ಕಟ್ಟು ಹರಿದ ಪಂಜಿನಂತೆ ಅವನ ಬದುಕು ದಿಕ್ಕಾಪಾಲಾಯಿತು.

1990ರಲ್ಲಿ ಇಟಲಿಯಲ್ಲಿ ನಡೆದ ವಿಶ್ವಕಪ್ ಟೂರ್ನಿ ಅವನ ಪಾಲಿನ ದುಃಸ್ವಪ್ನ. ಆರಂಭದ ಆಟದಲ್ಲಿ ಕ್ಯಾಮೆರೂನ್ ತಂಡದ ವಿರುದ್ಧ ಚಾಂಪಿಯನ್ ಅರ್ಜೆಂಟೀನಾ ಸೋತಿತು. ಕ್ಯಾನಿಗಿಯಾನಂಥ ಆಟಗಾರರನ್ನು ಬಿಟ್ಟರೆ ಮೂರನೇ ದರ್ಜೆಯ ತಂಡವನ್ನು ತನ್ನ ನಾಮಬಲದಿಂದ ಫೈನಲ್ ಹಂತ ತಲುಪಿಸಿದ್ದೇ ಮ್ಯಾರಡೋನಾನ ಸಾಧನೆ. ಗೋಲ್‌ಕೀಪರ್ ಗೋಟೋಕಿಯಾ ದುರ್ಬಲ ತಂಡಕ್ಕೆ ಆಸರೆಯಾಗಿ ನಿಂತ. ಆವರೆಗಿನ ವಿಶ್ವಕಪ್‌ನ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಫೈನಲ್ ಪಂದ್ಯದಲ್ಲಿ ಹಾಗೂ ವಿವಾದಾಸ್ಪದ ಪೆನಾಲ್ಟಿ ತೀರ್ಪಿನ ಲಾಭ ಪಡೆದ ಜರ್ಮನಿ 1-0ಯಿಂದ ಗೆದ್ದಿತು.

ಫೈನಲ್ ಪಂದ್ಯದ ನಂತರ ಮ್ಯಾರಡೋನ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತ.ಆವೇಳೆಗೆ ತನ್ನ ಅಂತರಂಗದ ಶತ್ರುಗಳ ಪ್ರಾಬಲ್ಯ ಅವನಿಗೆ ಅರ್ಥವಾಗಿತ್ತು. ಅವನ ವೈಭವದ ವೃತ್ತಿ ಬದುಕು ಮತ್ತು ಉಜ್ವಲ ವ್ಯಕ್ತಿತ್ವವನ್ನು ಅದು ನಾಶಮಾಡಿತ್ತು. ಮರುಜನ್ಮ ಪಡೆಯಲು ಮ್ಯಾರಡೋನಾ ಹೋರಾಟ ಆರಂಭಿಸಿದ. ನೇಪಲ್ಸ್ ಬಿಡಲು ಅವನಿಂದಾಗಲಿಲ್ಲ. ಇಟಲಿಯ ಸಾಕರ್ ಪ್ರಪಂಚ ಜೂಜನ್ನೇ ನೆಚ್ಚಿತ್ತು. ಮಾಫಿಯಾಗಳ ಹಿಡಿತದಲ್ಲಿತ್ತು. ಕ್ಲಬ್ ಬಿಡಬಾರದೆಂದು ಮಾಫಿಯಾಗಳ ಬೆದರಿಕೆ ಎದುರಿಸುತ್ತಿದ್ದಾನೆಂಬ ಗುಲ್ಲು ಎದ್ದಿತು. ಮಾನಸಿಕವಾಗಿ ಕುಸಿದ ಆತ ಮಾದಕ ವಸ್ತುಗಳ ಮೊರೆ ಹೊಕ್ಕ.

ನೇಪಲ್ಸ್‌ನಲ್ಲಿ 1991ರ ಸೆಪ್ಟೆಂಬರ್‌ನಲ್ಲಿ ಕೊಕೇನ್ ಇಟ್ಟುಕೊಂಡಿದ್ದು ಪತ್ತೆಯಾಗಿ 14 ತಿಂಗಳ ಜೈಲು ಶಿಕ್ಷೆಯಾಯಿತು. ಶಿಕ್ಷೆ ಮುಗಿಸಿ ತಾಯ್ನಾಡಿಗೆ ಹಿಂದಿರುಗಿದ ನಂತರ ಕೆಲವೇ ತಿಂಗಳಲ್ಲಿ ಮಾದಕ ವಸ್ತು ಇಟ್ಟುಕೊಂಡಿದ್ದಕ್ಕಾಗಿ ಅರ್ಜೆಂಟೀನಾ ನ್ಯಾಯಾಲಯ ಶಿಕ್ಷೆ ವಿಧಿಸಿತು. ಮಾನಸಿಕವಾಗಿ ಮತ್ತುಷ್ಟು ಕುಗ್ಗಿದ ಮ್ಯಾರಡೋನ ಮತ್ತೆ ಜನಮನ್ನಣೆ ಗಳಿಸಲು ಹೋರಾಟ ಆರಂಭಿಸಿದ.1994ರಲ್ಲಿ ಅಮೇರಿಕಾದಲ್ಲಿ ಸಂಘಟಿತವಾದ ವಿಶ್ವಕಪ್ ಟೂರ್ನಿಗೆ ಅರ್ಜೆಂಟೀನಾ ತಂಡವನ್ನು ಪ್ರತಿನಿಧಿಸಿದ.

ಜಗತ್ತು ಸಾಕರ್ ಚಕ್ರವರ್ತಿಯ ನೈಪುಣ್ಯವನ್ನು ನೋಡಲು ಕಾತರಿಸಿತ್ತು. ಆರಂಭದ ಆಟದಲ್ಲಿ ಮತ್ತೆ ಹಳೆಯ ಮ್ಯಾರಡೋನಾ ವಿಜೃಂಭಿಸಿದ. ಅದೇ ಎಡಗಾಲಿನಿಂದ ಒದ್ದು ಗೋಲನ್ನು ಗಳಿಸಿದ. ಆದರೆ ಪಂದ್ಯ ಮುಗಿದ ನಂತರ ಮಾಡಿದ ಪರೀಕ್ಷೆಯಲ್ಲಿ ಅನೇಕ ಬಗೆಯ ಮಾದಕವಸ್ತುಗಳನ್ನು ಆತ ಸೇವಿಸುತ್ತಿದ್ದದ್ದು ಬಹಿರಂಗವಾಯಿತು. ಟೂರ್ನಿಯಿಂದ ಅಮಾನತ್ತುಗೊಂಡ ಮ್ಯಾರಡೋನ ಕರುಣೆಗೆ ಮಾತ್ರ ಪಾತ್ರನಾಗಿದ್ದ.

ಯುವಕರಿಗೆ ನೀತಿಯ, ಆದರ್ಶದ ಸಂಕೇತವಾಗಿರಬೇಕಿದ್ದ ಆಟಗಾರನೊಬ್ಬ ಮೋಸ, ವಂಚನೆಯನ್ನು ಎತ್ತಿಹಿಡಿವ ಶಿಥಿಲ ಮನಸ್ಸಿನ ಪಾಷಂಡಿಯಾಗಿದ್ದ. ತನ್ನ ಹಳೆಯ ಬದುಕನ್ನು ಮರಳಿ ಪಡೆಯಲು ಮ್ಯಾರಡೋನ ಮತ್ತೆ ಹೋರಾಟ ಆರಂಭಿಸಿದ. ತನ್ನ ದುಶ್ಚಟ ತೊರೆಯುವುದಾಗಿ ಪಣತೊಟ್ಟ. ಮಾದಕವಸ್ತು ಸೇವನೆ ವಿರುದ್ಧದ ಆಂದೋಲನದಲ್ಲೂ ಭಾಗಿಯಾದ! 1997ರ ಏಪ್ರಿಲ್‌ನಲ್ಲಿ ಮತ್ತೆ ಬೋಕಾ ಜ್ಯೂನಿಯರ್ಸ್ ಕ್ಲಬ್ ಆತನ ಜೊತೆ ಪಂದ್ಯವೊಂದಕ್ಕೆ 50 ಸಾವಿರ ಡಾಲರ್‌ನಂತೆ ಒಪ್ಪಂದ ಮಾಡಿಕೊಂಡಿತು.

ಆಗಸ್ಟ್‌ನಲ್ಲಿ ನಡೆದ ಪಂದ್ಯವೊಂದರಲ್ಲಿ ಮತ್ತೆ ಗೋಲು ಗಳಿಸಿದ. ಆದರೆ ಮತ್ತೆ ನಡೆಸಿದ ಮಾದಕ ವಸ್ತು ಸೇವನೆ ಪರೀಕ್ಷೆಯಲ್ಲಿ ಸಿಕ್ಕಿಬಿದ್ದ. ಅದು ಆತನ ವೃತ್ತಿ ಬದುಕಿಗೆ ಬಿದ್ದ ಕೊನೆಯ ಪೆಟ್ಟು. ಎಂದೆಂದಿಗೂ ಬದಲಾಗದ ಮನುಷ್ಯನೆಂದು ತೀರ್ಮಾನಿಸಿ ಅರ್ಜೆಂಟೀನಾ ಹಾಗೂ ಅಂತಾರಾಷ್ಟ್ರೀಯ ಫುಟ್‌ಬಾಲ್ ಒಕ್ಕೂಟ ಜೀವನ ಪರ್ಯಂತ ನಿಷೇಧ ಹೇರಿ ಅವನ ವೃತ್ತಿ ಬದುಕಿಗೆ ಮರಣ ಶಾಸನ ಬರೆಯಿತು.

1998ರ ವಿಶ್ವಕಪ್ ಕೂಟದಲ್ಲಿ ಆತ ಟಿ.ವಿ. ವೀಕ್ಷಕ ವಿವರಣೆಗಾರನಾಗಿ ಬಂದಾಗ ಜಗತ್ತು ಅವನನ್ನು ಗುರುತಿಸಲೂ ನಿರಾಕರಿಸಿತು. ಕೇವಲ ಹದಿನೈದು ವರ್ಷಗಳ ಹಿಂದೆ ಜಗತ್ತಿನ ಜನರ ಕಣ್ಮಣಿಯಾಗಿದ್ದ ಮ್ಯಾರಡೋನ ಇಂದು ಮರೆತುಹೋದ ಮನುಷ್ಯ. ಇರುವುದೆಲ್ಲವ ಬಿಟ್ಟು ಇರದುದನ್ನು ಅರಸುತ್ತಾ ಹೋದ ಅವನ ಚೇತನಕ್ಕೆ ಇಂದು ಕಣ್ಣೀರು ಮಿಡಿಯುವವರಿಲ್ಲ. ಆದರೂ ಅವನ ಅದ್ಭುತ ಆಟದ ಕ್ಷಣಗಳು ಸಾಕರ್ ಚರಿತ್ರೆಯ ಅಜರಾಮರ ಪುಟಗಳಾಗಿ ಉಳಿಯುತ್ತವೆ ಎಂಬುದೊಂದೇ ಸಮಾಧಾನ. (ಈ ಲೇಖನ ಬರೆದದ್ದು 2000ದಲ್ಲಿ. ಮ್ಯಾರಡೋನನ ನಂತರದ ಬದುಕು ಸಹ ಪತನಮುಖಿಯಾಗಿಯೇ ಇತ್ತು. ಏಕಕಾಲಕ್ಕೆ ಅತ ಇತರರಿಗೆ ಒಂದು ಆದರ್ಶವೂ ಎಚ್ಚರಿಕೆಯೂ ಆಗಿದ್ದ)

‍ಲೇಖಕರು Avadhi

November 26, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹುಲಿಹೊಂಡದ ಹುಲಿಯಪ್ಪ ನೆನಪು

ಹುಲಿಹೊಂಡದ ಹುಲಿಯಪ್ಪ ನೆನಪು

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This