ಯಡಿಯೂರಪ್ಪ ಕಥೆ ಮ್ಯಾಕ್ ಬೆತ್ ದುರಂತ ನಾಟಕದಂತೆ..

4488_1144993912381_1453505436_377814_52563_nದಿಲಾವರ್ ರಾಮದುರ್ಗ ಪ್ರತಿಭಾವಂತ.  ‘ಸುಧಾ’ ಸಾಪ್ತಾಹಿಕದಲ್ಲಿ ಕೆಲಸ. ರಂಗಭೂಮಿಯನ್ನು ದಿಲಾವರ್ ಕಣ್ಣುಗಳ ಮೂಲಕ ನೋಡುವುದೇ ಒಂದು ಚಂದ. ಯಾವುದೇ ನಾಟಕವನ್ನೂ ತಿಕ್ಕಿ ತೀಡಿ, ಒರೆಗೆ ಹಚ್ಚಿ ನೋಡಬಲ್ಲ ಪ್ರತಿಭೆ. ದಿಲಾವರ್ ದಿಲ್ ಸಹಾ ದೊಡ್ಡದು. ಹಾಗಾಗಿಯೇ ಇತ್ತೀಚಿಗೆ ‘dilse’ಎಂಬ ಬ್ಲಾಗ್ ಆರಂಭಿಸಿದ್ದಾರೆ. ನಾಟಕ ಮತ್ತು ಕರ್ ‘ನಾಟಕ’ ಎರಡನ್ನೂ ಇವರು ಬೆಸೆದಿರುವ ರೀತಿ ನೋಡಿ.
ಯಡಿಯೂರಪ್ಪ ಮತ್ತು ‘ಮ್ಯಾಕ್ ಬೆತ್’
-ದಿಲಾವರ್ ರಾಮದುರ್ಗ
pc007-cartoon-shakespeareನಮ್ಮ ಮುಖ್ಯಮಂತ್ರಿ ಯಡಿಯೂರಪ್ಪ ಕಥೆ ಮ್ಯಾಕ್ ಬೆತ್ ದುರಂತ ನಾಟಕದಂತೆ ಸಾಗುತ್ತಿದೆ। ಶೇಕಸ್ಪಿಯರ್ ರಾಜಕೀಯ ದುರಂತ ನಾಟಕಗಳಲ್ಲಿ ತುಂಬ ಮಹತ್ವದ ನಾಟಕ ಮ್ಯಾಕ್ ಬೆತ್। ಶೂರ, ಧೀರ, ದಿಟ್ಟನೂ ಆದ ಮ್ಯಾಕ್ ಬೆತ್ ಹೇಗೆ ದುರಾಸೆಗೆ ಬಿದ್ದು ರಾಜಕಾರಣದ ಅಹಮಿಕೆಯಿಂದ ಪತನವಾಗುತ್ತಾನೆ ಎನ್ನುವುದು ಕಥಾ ಹಂದರ. ಅದರ ಒಳಸುಳಿಗಳೆಲ್ಲ ಮನುಷ್ಯ ದುರಂತವನ್ನು ಹೇಳುತ್ತವೆ। ಅದು ರಾಜಕೀಯ ಅಧಿಕಾರ, ಶಕ್ತಿ, ಯುಕ್ತಿಯ ದುರಂತ। ಒಟ್ಟು ದುರಾಸೆಯ ವ್ಯಕ್ತಿಗಳ ದುರಂತ …

ಮ್ಯಾಕ್ ಬೆತ್ ನಾಟಕ ಸಂಕ್ಷಿಪ್ತವಾಗಿ ಹೀಗಿದೆ:
ಸ್ಕಾಟ್ಲೆಂಡಿನ ರಾಜ ಡಂಕಣನನ್ನು ಕೊಲೆ ಮಾಡಿ ಮ್ಯಾಕ್ ಬೆತ್ ರಾಜನಾಗುತ್ತಾನೆ। ವೀರ, ಸಾಹಸಿ ಮತ್ತು ಅತ್ಯಂತ ಸ್ವಾಮಿನಿಷ್ಠನೂ ಆದ ಮ್ಯಾಕ್ ಬೆತ್ ಅತಿಮಾನುಷ ಶಕ್ತಿಗಳ ದುರಾಸೆಗೆ ಬಲಿಯಾಗುತ್ತಾನೆ। ಧೀರ, ದಿಟ್ಟತನ ಬಿಟ್ಟು ಸಂಚು, ವಂಚನೆ, ಕ್ರೌರ್ಯಗಳಿಗೆ ಮನಸ್ಸುಕೊಟ್ಟು ನೀಚನಾಗುತ್ತಾನೆ। ಅವನ ಹೆಂಡತಿ ಇವನನ್ನು ಅತಿವ ಪ್ರೀತಿಸುವವಳು। ರಾಜರ ರಾಜನಾಗಲೆಂಬ ಸಹಜ ಬಯಕೆ ಹೊಂದಿದವಳು। ತಮ್ಮಿಬ್ಬರ ಸಂಚಿನಿಂದ ನಡೆದ ಕೊಲೆಗಳ ಸರಮಾಲೆಯಿಂದ ಕಂಗಾಲಾಗಿ ಮನೋರೋಗಿಯಾಗಿ ಮ್ಯಾಕ್ ಬೆತ್ ಹೆಂಡತಿ ಸಾಯುತ್ತಾಳೆ। ಮ್ಯಾಕ್ ಬೆತ್ ಯಕ್ಷಿಣಿಯರ ಚೆಲ್ಲಾಟ ಅರ್ಥಮಾಡಿಕೊಳ್ಳದೇ ಹೋಗುತ್ತಾನೆ। ಅದು ಅರ್ಥವಾಗುವಷ್ಟೊತ್ತಿಗೆ ಎಲ್ಲ ಕೈಮೀರಿರುತ್ತದೆ। ಮ್ಯಾಕ್ ಡೆಫ್ ನಿಂದ ಮ್ಯಾಕ್ ಬೆತ್ ಕೊಲೆ ನಡೆಯುತ್ತದೆ। ಡಂಕಣನ ಮಗ ಮಾಲ್ಕಂ ರಾಜನಾಗುತ್ತಾನೆ।
ಮ್ಯಾಕ್ ಬೆತ್ ಕಥೆ ಇಟ್ಟುಕೊಂಡು ಒಮ್ಮೆ ರಾಜ್ಯ ರಾಜಕಾರಣದತ್ತ ನೋಡೋಣ..
ಒಂದು ಚುನಾವಣೆಯಲ್ಲಿ ರಾಜ್ಯದ ಜನತೆ ಯಾವುದೇ ಸ್ಪಷ್ಟ ಜನಾದೇಶ ನೀಡುವುದಿಲ್ಲ। ಅಂಥ ಸ್ಥಿತಿಯಲ್ಲಿ ಹಗಲುಗನಸು ಕಾಣುವವರೆಲ್ಲ ರಾಜನಾಗುವ ಕನಸು ಕಾಣುತ್ತಾರೆ। ಯಾರೋ ಒಬ್ಬರಿಗೆ ಅದೃಷ್ಟ ಒಲಿದು ಬಿಡುತ್ತೆ ಅಥವಾ ಅದೃಷ್ಟವನ್ನು ಹೇಗಾದರೂ ಒಲಿಸಿಕೊಳ್ಳುವವರೂ ಇರುತ್ತಾರೆ। ಹಾಗೊಂದು ಸ್ಥಿತಿಯಲ್ಲಿ ಕುಮಾರಸ್ವಾಮಿ ತಮ್ಮ ಕೆಲ ಶಾಸಕ ಮಿತ್ರರ ಮನವೊಲಿಸಿ ರೆಸಾರ್ಟ್ ಸೇರಿಕೊಂಡು ರಾಜ್ಯಭಾರದ ಕಿರೀಟ ಹೊತ್ತುಕೊಂಡೇ ಮುಖ್ಯಮಂತ್ರಿ ಪೀಠ ಅಲಂಕರಿಸುತ್ತಾರೆ। ಅಧಿಕಾರ ಹಂಚಿಕೊಳ್ಳುವ ಪೂರ್ವ ಷರತ್ತಿನಂತೆ ನಡೆದುಕೊಳ್ಳದೇ ಅನೈತಿಕ ರಾಜಕೀಯ ಯಕ್ಷಿಣಿಯ ಚೆಲ್ಲಾಟಕ್ಕೆ ಬಲಿಯಾಗುತ್ತಾರೆ।
ಮುಂದೆ ಹಸಿದ ಹೆಬ್ಬುಲಿಯಂತಿದ್ದ ಯಡಿಯೂರಪ್ಪ ಆ ಅನ್ಯಾಯವನ್ನೇ ಎಲ್ಲೆಡೆ ಮಠಾಧೀಶರು/ಜಾತಿವಾದಿಗಳ ಮೂಲಕ ಘರ್ಜಿಸುತ್ತ ಅಧಿಕಾರದ ಗದ್ದುಗೆ ತಲುಪಿದರು। ಹಾಗೆ ಪಡಕೊಂಡ ಕುರ್ಚಿ ಭದ್ರಪಡಿಸಲು ಬೇಕಾದ ಸಂಖ್ಯೆಗಾಗಿ ರಾಜಕೀಯ ಕೊಲೆಗೆ ನಿಂತರು (ಪಕ್ಷಾಂತರ ಎಂದರೆ ಅದೊಂದು ನೈಜ ರಾಜಕಾರಣದ ಕೊಲೆಯೇ ಆಗುತ್ತದೆ)। ಒಂದನ್ನು ಸಮರ್ಥಿಸಿಕೊಳ್ಳಲು ಮತ್ತೊಂದು ಹಾಗೇ ಒಂದಷ್ಟು ರಾಜಕೀಯ ಕೊಲೆಗಳು ನಡೆದವು। ಅನೈತಿಕ ರಾಜಕೀಯ/ಮಠಾಧೀಶರು/ಜಾತಿವಾದಿ ಎನ್ನುವ ಯಕ್ಷಿಣಿಗಳು ಹೇಳಿದಂತೆ ನಡೆದುಕೊಳ್ಳುತ್ತ ತಮ್ಮವರಿಗೇ (ಮಂತ್ರಿವರ್ಯರು, ಕಾರ್ಯಕರ್ತರು) ಸರ್ವಾಧಿಕಾರಿಯಂತಾದರು। ಇದೆಲ್ಲವನ್ನು ಮ್ಯಾಕ್ ಡೆಫ್ ನಂತೆ ಕಾಯುತ್ತಲೇ ಇದ್ದ ಜನಾರ್ಧನ ರೆಡ್ಡಿ (ಶೆಟ್ಟರ್ ಅವರನ್ನಿಟ್ಟುಕೊಂಡು) ಸಮಯ ಸಾಧಿಸಿ ದಂಡಯಾತ್ರೆಗೆ ನಿಂತು ಕೋಟೆಯನ್ನೇ ಹೊಕ್ಕಿಬಿಟ್ಟರು।
ನಿದ್ರೆಯಲ್ಲಿ ಕಾವಲುಗಾರರ ಮುಖ, ಕೈಗಳಿಗೆ ಮತ್ತು ಖಡ್ಗ, ಭರ್ಚಿಗಳಿಗೆ ರಕುತ ಮೆತ್ತಿ ಕೊಲೆ ಕೊಲೆ ಎಂದು ಚೀರಿ ಅವರೆಚ್ಚರಗೊಂಡಾಗ ಅವರನ್ನೂ ಚಚ್ಚಿ ಒಳಗಿನ ರಾಜನನ್ನು ಅಡ್ಡ ಮಲಗಿಸಿ ಅದರ ಕಳಂಕವನ್ನೆಲ್ಲ ಇವರಿಗೆ ಮೆತ್ತಿ ತಾನು ಅಧಿಕಾರ ವಹಿಸಿಕೊಳ್ಳುವ ಕ್ರೂರ ಸೇನಾಧಿಪತಿಯಂತೆ ಯಡಿಯೂರಪ್ಪ ರಾಜ್ಯದಲ್ಲಿ ವರ್ತಿಸತೊಡಗಿದ್ದರು। ಯಾವ್ಯಾವುದೋ ಆಮಿಷ, ಆಶ್ವಾಸನೆಗಳನ್ನು ನೀಡಿ ಯಾವ್ಯಾವುದೋ ಪಾರ್ಟಿಯಿಂದ ಜನರನ್ನು ಜಾತಿ ಹೆಸರಲ್ಲಿ ಸೆಳೆದು ಮಠಾಧೀಶರಿಂದ ಮನವೊಲಿಸಿ ಪಕ್ಷಾಂತರವನ್ನು ಅಧಿಕೃತವಾಗಿ ಮಾಡಿ ಗೆಲುವಿನ ಕೇಕೆಯನ್ನೂ ಹಾಕಿದರು। ರಾಜಕೀಯ ನಾಟಕದ ಮೊದಲ ಅಂಕಗಳಲ್ಲೆಲ್ಲ ಯಡಿಯೂರಪ್ಪ ಇಂಥ ಬೇಟೆಗಳಿಂದ ಗೆಲುವು ದಾಖಲಿಸುತ್ತಲೇ ಸಾಗಿದರು।
‘ಕೋಟೆ ಕುಸಿದರೆ ಒಳಗಿನಿಂದಲೇ ಕುಸಿಯಬೇಕು..’ ಎನ್ನುವ ಮಾತು ಕಾರ್ನಾಡರ ಒಂದು ನಾಟಕದಲ್ಲಿ ಬರುತ್ತದೆ। ಹಾಗೆ ಯಡಿಯೂರಪ್ಪ ದರ್ಬಾರಿನ ಕೆಲ ಉನ್ನತ ಅಧಿಕಾರಿಗಳು, ಆಪ್ತ ಸಚಿವೆಯ ಕೆಲ ವರ್ತನೆಗಳು ಇಡೀ ವ್ಯವಸ್ಥೆಯನ್ನು ಕ್ರೂರವನ್ನಾಗಿಸಿದವು। ಇಂಥ ವ್ಯವಸ್ಥೆ ಯಡಿಯೂರಪ್ಪ ಅವರನ್ನು ಸರ್ವಾಧಿಕಾರಿ ಧೋರಣೆಗೆ ಎಳೆದು ತಂದಿತು। ತಮ್ಮ ಒಳಗಿನ ಮತ್ತು ತಮಗೆ ಸಾಕಷ್ಟು ನೆರವಾದವರ ವಿರುದ್ಧ ಯಾವುದೋ ಕಾರಣಕ್ಕೆ ಅಥವಾ ಕೆಲ ಹಿತಾಸಕ್ತಿಗಳನ್ನು ಖುಷಿಪಡಿಸಲು ಸೇಡಿನ ಮನೋಭಾವ ಪ್ರದರ್ಶಿಸಿದರು। ಅದಿರು ಲಾರಿಗಳ ಮೇಲೆ ಭಾರಿ ಸುಂಕ ವಿಧಿಸುವ ಹೆಸರಲ್ಲಿ ಗಣಿ ಧಣಿಗಳ ದೊಡ್ಡ ಹೊಟ್ಟೆಗಳ ಮೇಲೆ ಕಾಲಿಡಲು ನಿರ್ಧರಿಸಿದರು। ಇಲ್ಲೇ ಯಡವಟ್ಟಾಗಿದ್ದು। ಈ ಮೂಲಕ ಅವರು ಭಾರಿ ಪೈಲ್ವಾನ್ ಎನಿಸಿಕೊಳ್ಳಲೆತ್ನಿಸಿದ್ದರು। ಆದರೆ ಅದೆಲ್ಲ ಉಲ್ಟಾ ಆಯಿತು। ರೆಡ್ಡಿಗಳು ತಿರುಗಿಬಿದ್ದರು।
ರೆಡ್ಡಿಗಳು ತುಂಬ ದಿಟ್ಟವಾದ ಮತ್ತು ವ್ಯವಸ್ಥಿತವಾದ ಆಕ್ರಮಣಕ್ಕಿಳಿದಿದ್ದಾರೆ। ಹೀಗಾಗಿ ಥೇಟು ಅಂತಿಮ ಯುದ್ಧದ ವಾತಾವರಣ ಸೃಷ್ಟಿಯಾಗಿದೆ। ಇದರ ಅಂತ್ಯ ಬಹುಶಃ ಮ್ಯಾಕ್ ಬೆತ್ ನಾಟಕದ ಕೊನೆಯ ದೃಶ್ಯದಂತೆ ಆಗಬಹುದೇ?
ಮ್ಯಾಕ್ ಬೆತ್ ನಾಟಕದ ಕಡೆಯ ದೃಶ್ಯ ಹೀಗಿದೆ:
ಮ್ಯಾಕ್ ಬೆತ್: ನಾನ್ಯಾಕೆ ನಿಮ್ಮ ಜತೆ ವ್ಯರ್ಥವಾಗಿ ಹೋರಾಡಬೇಕು? ನನ್ನದೇ ಕತ್ತಿಯಿಂದ ಇರಿದುಕೊಂಡು ಸಾಯಬೇಕು?
ಮ್ಯಾಕ್ ಡೆಫ್: ನಿಲ್ಲು ನಿಲ್ಲು ದೂರ್ತ।
ಮ್ಯಾಕ್ ಬೆತ್: ನಿನ್ನನ್ನು ಕೊಲ್ಲದೆ ಬೇಕೆಂದೇ ಸುಮ್ಮನೇ ಬಿಟ್ಟಿದ್ದೇನೆ। ನಿನ್ನವರ ರಕ್ತದಿಂದ ಆಗಲೇ ನನ್ನಾತ್ಮ ಕಲೂಷಿತಗೊಂಡಿದೆ। ಸುಮ್ಮನೇ ತೊಲಗಾಚೆ।
ಮ್ಯಾಕ್ ಡೆಫ್: ವಿವರಿಸಲಿಕ್ಕೂ ಆಗದ ನೀಚ ನೀನು। ರಕ್ತಪಿಪಾಸು ಪಾಪಾತ್ಮ ನೀನು। ನನ್ನ ಕತ್ತಿಯಿಂದಲೇ ನಿನಗೆ ಉತ್ತರ ನೀಡುತ್ತೇನೆ।
ಮ್ಯಾಕ್ ಬೆತ್: ವ್ಯರ್ಥವಾಗಿ ಹೀಗೇಕೆ ಕತ್ತಿ ಝಳಪಿಸುವೆ। ನನ್ನ ಮುಗಿಸುವ ನಿನ್ನ ಯತ್ನ ಫಲ ನೀಡದು। ನಾನು ಅಮರಜೀವಿ। ನನ್ನ ಹಿಂದೆ ಅಭಯ ಹಸ್ತಗಳಿವೆ। ಯಾರೂ ನನ್ನನೇನೂ ಮಾಡಲಾರರು। ನೀಚ, ನನ್ನ ಕತ್ತಿಗೆ ನಿನ್ನ ರಕ್ತದ ರುಚಿ ಉಣ್ಣಿಸುವೆ।
ಮ್ಯಾಕ್ ಡೆಫ್: ಮೂರ್ಖ ಆ ಗತಿಯನ್ನು ನಿನಗೇ ಕಾಣಿಸಲಿದೆ ನನ್ನೀ ಕತ್ತಿ। ನೀನು ಆರಾಧಿಸುವ ಆ ಯಕ್ಷಿಣಿಗಳಿದಾವಲ್ಲ ಅವೇ ಹೇಳಲಿ ನೀನು ತಾಯಿ ಹೊಟ್ಟೆಯಿಂದ ಬಂದವನಲ್ಲ, ಹೊಟ್ಟೆ ಸೀಳಿ ಹೊರಬಂದವನೆಂದು।
ಮ್ಯಾಕ್ ಬೆತ್: ನನ್ನ ಅಧೀರನನ್ನಾಗಿಸುತ್ತಿರುವ ಮಾತುಗಳನ್ನಾಡುತ್ತಿರುವ ನಿನ್ನ ನಾಲಗೆ ಸೇದಿ ಹೋಗಲಿ। ನಾ ನಿನ್ನ ಜತೆ ಯುದ್ಧ ಮಾಡಲಾರೆ।
ಮ್ಯಾಕ್ ಡೆಫ್: ಹಾಗಾದರೆ ಶರಣಾಗೋ ಹೇಡಿ।
ಮ್ಯಾಕ್ ಬೆತ್: ನಾನು ನಿನ್ನಂತೆ ಹೊಂಚು ಹಾಕಿ ನುಗ್ಗಿದವನಲ್ಲ। ಪಿತೂರಿಗಳನ್ನಷ್ಟೇ ನಂಬಿದವನಲ್ಲ। ಬಾ ನನ್ನ ಕೆಣಕಿದವನೆ, ಯುದ್ಧಕ್ಕೆ ಅಣಿಯಾಗು।
(ಇಬ್ಬರೂ ಕತ್ತಿ ಝಳಪಿಸುತ್ತಾರೆ। ಕೆಲ ಕಾಲ ಸಂಘರ್ಷ ನಡೆಯುತ್ತದೆ। ಸಮಯ ನೋಡಿ ಮ್ಯಾಕ್ ಬೆತ್ ಓಡಿ ಹೋಗಲು ನೋಡುತ್ತಾನೆ। ಮ್ಯಾಕ್ ಡೆಫ್ ಕತ್ತಿಯಿಂದ ಬಲವಾಗಿ ಮ್ಯಾಕ್ ಬೆತ್ ನನ್ನು ಇರಿಯುತ್ತಾನೆ)
ಕಡೆಗೆ ಮಾಲ್ಕಂ ಗೆ ಪಟ್ಟಾಭಿಷೇಕ ನಡೆಯುತ್ತದೆ.
…… …… ….. …….
ಮ್ಯಾಕ್ ಬೆತ್ ನಾಟಕದ ಮೊದಲ ಅಂಕಗಳಲ್ಲಿ ಮ್ಯಾಕ್ ಬೆತ್ ಗೆಲ್ಲುತ್ತಾನೆ। ನಂತರದ ಅಂಕಗಳು ಆತನ ಸೋಲಿನೊಂದಿಗೆ ಮುಗಿಯುತ್ತವೆ. ತನ್ನ ಆಲೋಚನೆಗಳಿಗೆ ತಾನೇ ಹೆದರುವ ಮ್ಯಾಕ್ ಬೆತ್ ನ ಸ್ವಗತಗಳಂತೆ ಯಡಿಯೂರಪ್ಪ ಮಾಧ್ಯಮಗಳ ಜತೆ ಮಾತನಾಡಿಕೊಳ್ಳುತ್ತಿದ್ದಾರೆ। ಅವು ತಮಗೆ ತಾವೇ ಹೇಳಿಕೊಳ್ಳುವ ಮತ್ತು ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಳ್ಳುವಂತೆ ಅನಿಸುತ್ತಿವೆ।
ಕಡೆಗೆ ಮಾಲ್ಕಂ ಆಗೋರು ಯಾರು? ಆ ‘ಜಗದೀಶ’ನೇ ಬಲ್ಲ

‍ಲೇಖಕರು avadhi

November 13, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

4 ಪ್ರತಿಕ್ರಿಯೆಗಳು

  1. ದಿಲಾವರ್

    ಒಂದು ಪುಟ್ಟ ಯತ್ನಕ್ಕೆ ಬೆನ್ನುತಟ್ಟಿದ್ದು ಖುಷಿ ಕೊಟ್ಟಿತು. ನಾನು ನೀನಾಸಂ ಪದವೀಧರ ಖಂಡಿತ ಅಲ್ಲ. ಅಷ್ಟು ಕಪ್ಪು ಸುಂದರಿಯರ ಭಾರವೇ ನನ್ನ ತಲೆಗೆ ಸಾಕು ಸಾಕಾಗಿದೆ. ಈ ಪದವಿ ಕಿರೀಟ ನನ್ನ ತಲೆಗೆ ತುಂಬ ಭಾರ ಸ್ವಾಮೀ… ಡೈರಿಯ ಹಾಗೆ ಬೆಚ್ಚಗೆ ಸದಾ ನನ್ನ ಬಳಿ ಇರಲಿ ಎಂದು ಮಾಡಿದ ಬ್ಲಾಗ್ ಇದು ಅಷ್ಟೇ. ಓದಿ ಹರಸಿದ್ದಕ್ಕೆ ಮತ್ತೊಮ್ಮೆ ದಿಲ್ ಪೂರ್ವಕ ಸಲಾಂ…
    ದಿಲಾವರ್.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: