ಯಶಸ್ವಿನಿ
ಕೆಂಪು ಜುಟ್ಟಿಗೆ ಅಚ್ಚ ಬಿಳಿಯ ಮೈಬಣ್ಣ, ಒಂದು ಧೂಳಿನ ಕಣವೂ ಕಾಣ ಸಿಗದ ಬಿಳಿಯ ಗರಿಗಳು, ಗೇರು ಬೀಜ ಬಣ್ಣದ ಕೊಕ್ಕು, -ಗತ್ತಲ್ಲಿ ಬದುಕಲು ಹೆಚ್ಚೇನು ಬೇಕಾದೀತು ಒಂದು ಹುಂಜಕ್ಕೆ? ಹಾಲಿನಂತಹ ಬಿಳಿಯ ಬಣ್ಣ, ಆ ಬಣ್ಣಕ್ಕೆ ತಕ್ಕ ನಡಿಗೆ, “ಕೊಕ್ಕರೆಕ್ಕೊಕ್ಕೊ..” ಅಂತ ಅದು ಕೂಗುವ ಶೈಲಿಗೆ, ‘ಬಾಬುವಿನ ಬಿಳಿ ಹುಂಜವಲ್ಲವೆ ಅದು?’ ಅಂತ ನೆರೆಹೊರೆಯ ಜನರೆಲ್ಲಾ ಗುರುತಿಸುತ್ತಾರೆ. ಆಟದ ಮೇಳದ ಭಾಗವತರ ಕೆಂಪು ಮುಂಡಾಸಿನಂತೆ ಅದರ ಜುಟ್ಟು- ಅಂತ ಬಡ್ಡು ಬುದ್ಧಿಯ ಜನರೂ ಉಪಮಾಲಂಕಾರ ಬಳಸುವಷ್ಟು ಚಂದ, ಅದರ ಜುಟ್ಟು.
ಬಾವಿಕಟ್ಟೆಯನ್ನೇರಿ ನಾಲ್ಕು ದಿಕ್ಕಿಗೂ ಮುಖ ತಿರುಗಿಸುತ್ತಾ ಅದು ದೃಷ್ಟಿ ಹಾಯಿಸುವ ಪರಿ ಎಷ್ಟೊಂದು ಸ್ಪಷ್ಟ ಮತ್ತು ಸುಂದರ ಎಂದರೆ ದೇವೇಂದ್ರನ ಒಡ್ಡೋಲಗ ಏನೇನೂ ಅಲ್ಲ- ಅಂತ ಯಾರಿಗಾದರೂ ಅನಿಸಬೇಕು. ಇಂದೋ ನಾಳೆಯೋ ಶಿವನ ಪಾದ ಸೇರುವ ಒಂದು ಹುಂಜಕ್ಕೆ ಯಾಕಿಷ್ಟೊಂದು ಪೀಠಿಕೆ? ಅಂತ ಪ್ರಶ್ನೆ ಮಾಡುವ ಹಾಗಿಲ್ಲ- ಅಚ್ಚ ಬಿಳಿಯ ಬಣ್ಣದಿಂದಾಗಿಯೇ ಎಲ್ಲ ರೀತಿಯ ಸ್ತುತಿ ಸೇವೆ ಕೈಗೊಳ್ಳುವ ಅರ್ಹತೆ ಅದಕ್ಕೆ ಹುಟ್ಟಿನಿಂದಲೇ ಬಂದಿದೆ.
ಎಂದಿನಂತೆಯೇ ಅಂದು ಕೂಡಾ ಬೆಳಗ್ಗೆ ಕೋಳಿ ಕೂಗುವ ಹೊತ್ತಿಗೆ ಎದ್ದು ಬೆಳಗ್ಗಿನ ಉಪಹಾರ ಮುಗಿಸಿ, ಬಿಳಿ ಹುಂಜ ಅಂಗಳದಲ್ಲೊಂದು ವಿಹಾರ ನಡೆಸಿ, ನೇರವಾಗಿ ಏರಿದ್ದೇ ಬಾವಿಕಟ್ಟೆಯ ತನ್ನ ಗದ್ದುಗೆಯನ್ನ. ಅಲ್ಲಿ ನಿಂತರೆ ತನ್ನ ಸಾಮ್ರಾಜ್ಯದ ಸರಹದ್ದು ಅದಕ್ಕೆ ಕಾಣಿಸುತ್ತದೆ. ಅಲ್ಲಿಂದಿಲ್ಲಿ ಇಲ್ಲಿಂದಲ್ಲಿ ಕುಣಿಕುಣಿದಾಡುತ್ತಾ ತಿರುಗುವ ಕೋಳಿಗಳಲ್ಲಿ ಅರ್ಧಪಾಲು ತನ್ನ ಸಂತಾನವೇ ಅಲ್ಲವೆ?-ಅನ್ನೋದು ಹೊಳೆದಾಗ ಅದಕ್ಕೆ ಮತ್ತಷ್ಟು ಗರ್ವ ಬಂತು. ಅದೇ ಗರ್ವದಲ್ಲಿ ಮತ್ತೆ ತನ್ನ ಮನೆಯ ಅಂಗಳಕ್ಕೆ ದೃಷ್ಟಿ ಹಾಯಿಸುತ್ತದೆ-ಹೇಂಟೆರಾಣಿಯ ಗೂಡಿನಲ್ಲೇನೋ ಗದ್ದಲ. ಒಂದೇ ಪೆಟ್ಟಿಗೆ ಹಾರಿ, ಬಾವಿ ಕಟ್ಟೆಯಿಂದ ಭೂಮಿಗಿಳಿದು ಹೇಂಟೆಯಮ್ಮನ ಗೂಡಿನ ಬಳಿ ಬಂದು ನಿಂತರೆ ನೋಡುವುದೇನು?

ಹೇಂಟೆಯ ಮರಿಗಳೆಲ್ಲಾ ಅಂಕೆಯಿಲ್ಲದ ಕಪಿಗಳ ಹಾಗೆ ಅಲೆದಾಡುತ್ತಿವೆ. ಕಂದು ಪುಕ್ಕದ ಹೆಣ್ಣು ಮರಿಯಂತೂ ತಾನು ಹೆಣ್ಣು ಅನ್ನೋದನ್ನೇ ಮರೆತು ಅಂಗಳದಲ್ಲಿದ್ದ ಕಲ್ಲಿನ ಮೇಲೆ ನಿಂತು, “ಟ್ಟಿಟ್ಟಿಟ್ಟಿ…ಟ್ಟಿಟ್ಟಿಟ್ಟಿ…” ಅಂತ ಗಟ್ಟಿಯಾಗಿ ಅರಚುತ್ತಿದೆ. ಮತ್ತೆರಡು ಮರಿಗಳು ಇಲ್ಲಿಯ ತನಕ ಅಳವಡಿಸಿದ್ದ ಶಿಸ್ತನ್ನೇ ಮರೆತು ಕಬ್ಬಡ್ಡಿ ಆಟಗಾರರ ಹಾಗೆ ಉರುಳಾಡುತ್ತಿವೆ, ಇನ್ನೊಂದು ಮರಿ, ರೆಕ್ಕೆ ಇನ್ನೂ ಗಟ್ಟಿಯಾಗಿರದಿದ್ದರೂ, ಹದ್ದಿನ ಹೆದರಿಕೆಯೇ ಇಲ್ಲದೆ ಆಕಾಶ ನೋಡುತ್ತಾ ನಿಂತಿದೆ. ಒಂಭತ್ತು ಮರಿಗಳಲ್ಲವೆ ಇರಬೇಕಾದದ್ದು? ಒಂದು, ಎರಡು, ಮೂರು ಅಂತ ಲೆಕ್ಕ ಹಾಕಿದರೆ ಏಳು ಮರಿಗಳಷ್ಟೇ ಇರೋದು!!! ಇನ್ನೆರಡು ಮರಿಗಳು ಎಲ್ಲಿ ಹೋದವು? ಇವಳಿಗೇನಾಗಿದೆ? ಎಂದೂ ಇಲ್ಲದ ವೈಯ್ಯಾರದಲ್ಲಿ ತನ್ನ ಮೈಯನ್ನು ಮೃದುವಾಗಿ ಕುಟುಕುತ್ತಿದ್ದಾಳೆ.
“ಇಬ್ಬರೆಲ್ಲಿ?”
“ಅವರು ಇಲ್ಯಾಕೆ ನಿಲ್ಲುತ್ತಾರೆ? ಇಷ್ಟು ಹೊತ್ತಿಗಾಗಲೇ ಲೀಲಕ್ಕನ ಅಂಗಳ ದಾಟಿ ಹೋಗಿರುತ್ತಾರೆ, ಹುಟ್ಟಿದ ಮರುಗಳಿಗೆಯೇ ಹಾರಿ ಅಂಗಳಕ್ಕಿಳಿದವರಲ್ಲವೆ ಅವರು..?”
“ಅಲ್ಲ ನಿನಗೇನಾಗಿದೆ ಅಂತ…?” ಹುಂಜ ತನ್ನ ಗಡ್ಡ ಕುಲುಕಿಸಿ ಗಂಭೀರವಾಗಿ ಹೇಂಟೆಯ ಹತ್ತಿರ ಬಂತು: “ಹುಚ್ಚು ಗಿಚ್ಚು ಹಿಡಿದಿಲ್ಲ ತಾನೆ? ನಿನ್ನೆಯ ತನಕ ಮಕ್ಕಳನ್ನ ಜೋಪಾನವಾಗಿ ನೋಡ್ತಾ ಇದ್ದೆ… ಇವತ್ತೇನಾಗಿದೆ ನಿನಗೆ..?”
ಹೇಂಟೆ ತನ್ನ ಕಾಲಿನ ಮೂಲೆಯಲ್ಲಿ ಕೂತಿದ್ದ ಕೊಳೆಯನ್ನ ಕುಟುಕುತ್ತಾ ಹೇಳಿತು: “ಮಕ್ಕಳು ಮಕ್ಕಳು ಅಂತ ಇವತ್ತೇನು ವಿಶೇಷ ಪ್ರೀತಿ ಹುಟ್ಟಿದೆ ನಿನಗೆ? ಮಕ್ಕಳೆಲ್ಲಾ ದೊಡ್ಡವರಾಗಿದ್ದಾರೆ”
“ದೊಡ್ಡವರು..? ಇನ್ನೂ ಸರಿಯಾಗಿ ಹೆಜ್ಜೆ ಹಾಕಲು ಬರಲ್ಲ ಅವಕ್ಕೆ! ಇದು ಸರಿಯಿಲ್ಲ.. ಹದ್ದೋ ಹಾವೋ ಬಂದರೆ ಏನು ಗತಿ..?”
“ಅವಕ್ಕೆಲ್ಲಾ ಹೆದರುವಷ್ಟು ಸಣ್ಣವರಲ್ಲ ಅವರು, ನಾವು ಬದುಕಲಿಲ್ಲವೆ ಇಷ್ಟು ದಿನ! ಅವರೂ ಬದುಕಿಕೊಳ್ಳುತ್ತಾರೆ..”
ಹುಂಜಕ್ಕೆ ಎಲ್ಲಿಲ್ಲದ ಸಿಟ್ಟು ಬಂತು, ಹತ್ತಿರ ಬಂದು ರೆಕ್ಕೆಯನ್ನೆತ್ತಿ ಗಾಳಿಯಲ್ಲಿ ಬೀಸಿ, ಹೇಂಟೆಯ ಮುಖದ ಬಳಿ ತಂದು ಗದರಿತು:“ ಇನ್ನೂ ನಡೆದಾಡಲು ಕಲಿತಿಲ್ಲ ಮರಿಗಳು, ಆಗಲೇ ಅವುಗಳನ್ನ ಬಿಡುವ ಯೋಚನೆ ಮಾಡಿದ್ದೀಯ? ಇದು ಸರಿಯಿಲ್ಲ, ಮಕ್ಕಳನ್ನ ಪ್ರೀತಿಯಿಂದ ಆರೈಕೆ ಮಾಡಿ ಅವುಗಳ ಬೇಕು ಬೇಡಗಳನ್ನ ನೋಡಿಕೊಳ್ಳಬೇಕಾದವಳು ತಾಯಿ, ಎಲ್ಲೋ ದಾರಿ ತಪ್ಪಿದರೆ, ಹದ್ದು ಬಂದರೆ, ಹಾಳು ಮೂಳು ತಿಂದರೆ, ಸಂಜೆಯಾಗುವಾಗ ಗೂಡಿಗೆ ಮರಳಲಾಗದಿದ್ದರೆ ಅವುಗಳನ್ನ ಕಾಪಾಡುವವರು ಯಾರು? ಈ ಮನೆಯ ಯಜಮಾನ್ತಿಯನ್ನ ನಂಬಬೇಡ. ಅವಳಿಗೆ ಅವಳ ಸಂಸಾರ ತಾಪತ್ರಯವೇ ಹೆಚ್ಚಾಗಿದೆ. ನಮ್ಮ ಮರಿಗಳಿಗೆ ಕಾಳಜಿ ತೋರುವಷ್ಟು ಸಮಯ ಅವಳಿಗಿಲ್ಲ…”

ಹೇಂಟೆ ಕತ್ತು ಬಗ್ಗಿಸಿ ಕಾಲಲ್ಲಿದ್ದ ಕೊಳೆ ಕುಕ್ಕಿ ತೆಗೆದು ಸ್ವಚ್ಛ ಮಾಡುತ್ತಿತ್ತು. ಹೊಸದಾಗಿ ಹರೆಯ ಬಂದ ಹಾಗಿತ್ತು ಅದಕ್ಕೆ. ಮಾತು ಮಾತಿಗೂ ವೈಯ್ಯಾರ ನಟಿಸುತ್ತಾ ಒಳ್ಳೆ ಮದುವಣಗಿತ್ತಿಯ ಹಾಗೆ ನಿಂತ ಅದನ್ನ ಕಂಡು ಹುಂಜಕ್ಕೆ ಎಲ್ಲಿಲ್ಲದ ಕೋಪ ಬಂತು. “ಏನೆ ರಾಕ್ಷಸಿ ನೀನು? ನಮ್ಮ ಮಕ್ಕಳನ್ನ ಕೊಲ್ಲಬೇಕಂತ ಮಾಡಿದ್ದೀಯ..?” ಎಂದು ಆರ್ಭಟಿಸಿ ಜಿಗಿದು ಹೇಂಟೆಯ ಮೇಲೆ ಕೂತಿತು. ಕೊಬ್ಬಿನ ಹೇಂಟೆ ಅಷ್ಟೇ ವೇಗದಲ್ಲಿ ಮೈ ಕುಲಕಿಸಿ, ಅಡ್ಡಾದಿಡ್ಡಿ ಓಡಿ ಹುಂಜ ಕೆಳಗಿಳಿಯುವ ಹಾಗೆ ಮಾಡಿತು.
ಹುಂಜ ಹೇಂಟೆಯರ ಜಗಳ ನೋಡುತ್ತಿದ್ದ ಕುಂಟ ಹುಂಜವೊಂದು ಮಧ್ಯಸ್ಥಿಕೆ ವಹಿಸಲು ಬಂದಿತು.
“ಏನಾಯ್ತು ಅಂತ ಹೇಳಿ. ಜಗಳ ಯಾಕೆ? ಮಾತಾಡಿ ಸರಿ ಮಾಡುವ ಅಲ್ವ?” ಅಂತ ಅದು ಪೀಠಿಕೆ ಹಾಕಲು ಶುರು ಮಾಡುತ್ತಿದ್ದಂತೆ ಹೇಂಟೆ ಅದರಿಂದ ಮಾರು ದೂರ ಓಡಿತು.
“ಈಗಾಗಲೇ ಮೈಯ್ಯೆಲ್ಲಾ ಕುಟುಕಿ, ಕೊಳೆ ತೆಗೆದು ಒಪ್ಪವಾಗಿದ್ದೇನೆ, ಥೂ ಕೊಳಕ! ನನ್ನ ಹತ್ತಿರ ಬಂದರೆ ಕಾಲು ಮುರಿದೇನು! ದೊಡ್ಡ ಮಧ್ಯಸ್ಥಿಕೆಗಾರನಲ್ಲವೆ ನೀನು- ಕಿವಿಕೊಟ್ಟು ಕೇಳು. ಲೀಲಕ್ಕನ ಮನೆಯ ಹಳದಿ ಹುಂಜ ನನ್ನನ್ನ ಬರಹೇಳಿದ್ದಾನೆ.. ಅಲ್ಲಿಗೆ ಹೊರಟದ್ದು ನಾನೀಗ…”
ಹುಂಜ ಸಿಟ್ಟಲ್ಲಿ ಪ್ರತಿನುಡಿ ಹುಡುಕುತ್ತಿದ್ದಂತೆ ಹೇಂಟೆ ಅದನ್ನ ತೋರಿಸಿ ಹೇಳಿತು: “ಈ ಬಿಳಿ ಹತ್ತಿಯ ಉಂಡೆಗೆ ಗಡ್ಡ ನೀವುತ್ತಾ ಸುಮ್ಮನೆ ಬಿದ್ದಿರಲು ಹೇಳು. ಮಕ್ಕಳು ಮರಿ ಅಂತ ಒದರಾಡಿದರೆ ನಾನು ಮನಸ್ಸು ಕರಗಿ ನಿಂತೇನು ಅಂತ ಭಾವಿಸೋದು ಬೇಡ. ಮಕ್ಕಳು ದೊಡ್ಡವರಾಗಿದ್ದಾರೆ, ಸ್ವಂತ ಕಾಲಲ್ಲಿ ನಿಲ್ಲಲಿ, ಪ್ರಪಂಚ ಏನು ಅಂತ ಸ್ವಂತ ಕಣ್ಣುಗಳಲ್ಲಿ ನೋಡಲಿ. ನಾನೇನು ಅಮರತ್ವ ಬೇಡಿ ಬಂದಿಲ್ಲ- ಇದ್ದಷ್ಟು ದಿನ ಮಜವಾಗಿರೋಣ ಅಂತ ನನಗೂ ಆಸೆ ಇದೆ…”
“ಶಿವ ಶಿವ ಎಂತಹಾ ಮಾತಿದು..” ಅಂತ ಕುಂಟ ಹುಂಜ ಬುದ್ಧಿ ಹೇಳಲು ಉಪಕ್ರಮಿಸುತ್ತಿದ್ದಂತೆ, “ನನ್ನ ಮಾತು ಇನ್ನೂ ಮುಗಿಯಲಿಲ್ಲವೊ ಮಹರಾಯ! ಮಕ್ಕಳ ಮೇಲೆ ಅಷ್ಟೊಂದು ಅಕ್ಕರೆಯಿದ್ದರೆ ಅವುಗಳ ಅಪ್ಪನೇ ನೋಡಿಕೊಳ್ಳಲಿ, ನನಗೆ ಹೊತ್ತಾಯ್ತು. ಕೆಂಪು ಕೇಸರಿ, ಕಂದು, ಹಳದಿ ಪುಕ್ಕಗಳ ಲೀಲಕ್ಕನ ಹಳದಿ ಹುಂಜ ನೋಡಲೆಷ್ಟು ಸುಂದರನೋ ಅಷ್ಟೇ ಸಿಡಿಸಿಡಿ ಆಸಾಮಿ ಕೂಡ! ತಡವಾದರೆ ದೂರ್ವಾಸನ ಹಾಗಾಡುತ್ತಾನೆ. ನಾನಿನ್ನು ಬರುತ್ತೇನೆ..” ಅಂತ ಯಾರ ಉತ್ತರಕ್ಕೂ ಕಾಯದೆ ಕತ್ತು ಕೊಂಕಿಸಿ, ರುಮ್ಮೆಂದು ಬೀಸಿದ ಗಾಳಿಗೆ ಒಮ್ಮೆ ರೆಕ್ಕೆಯಗಲಿಸಿ, ಜಡ ತೆಗೆದು, ಮದುವಣಗಿತ್ತಿಯಂತೆ ಲೀಲಕ್ಕನ ಅಂಗಳದತ್ತ ನಡೆಯಿತು.
ತಾಯಿ ಅತ್ತ ಹೋದದ್ದನ್ನ ಕಂಡ ಅದರ ಮರಿಗಳು, ಮೊದಲ ಬಾರಿಗೆ ಸಿಕ್ಕ ಸ್ವಾತಂತ್ರ್ಯದ ರುಚಿ ಸವಿಯುವ ಉತ್ಸಾಹದಲ್ಲಿ “ಟ್ಟಿಟ್ಟಿಟ್ಟಿ..ಟ್ಟಿಟ್ಟಿಟ್ಟಿ..” ಅಂತ ಕಲರವ ಎಬ್ಬಿಸುತ್ತಾ, ಬಿಳಿ ಹುಂಜ ಹಾಗೂ ಕುಂಟ ಹುಂಜದ ಮೇಲಿನಿಂದಲೇ ಜಿಗಿದು ದಶ ದಿಕ್ಕುಗಳಿಗೆ ಹಾರಿದವು.

ಸಿಟ್ಟಲ್ಲಿ ಕುದಿಯುತ್ತಿದ್ದ ಬಿಳಿಹುಂಜ- ಒಬ್ಬ ಹೆಣ್ಣನ್ನ ತಡೆದು ನಿಲ್ಲಿಸಲಾಗದ ನೀನೆಂತ ಮಧ್ಯಸ್ಥಿಕೆಗಾರನೆಂದು ಕುಂಟಹುಂಜವನ್ನೂ ಅವಮಾನದಿಂದ ಸಿಡಿಯುತ್ತಿದ್ದ ಕುಂಟಹುಂಜ- ಹೆಂಡತಿಯ ಮಾತಿಗೆ ಮೂಕನಾದ ನೀನೆಂತ ಗಂಡನೆಂದು ಬಿಳಿಹುಂಜವನ್ನೂ ಬೈಯ್ಯುತ್ತಾ, ಎರಡೂ ಕೊಕ್ಕು ಯುದ್ಧಕ್ಕೆ ತೊಡಗುತ್ತಿದ್ದಂತೆ, “ಬೆಳಗ್ಗೆ ಬೆಳಗ್ಗೆ ಏನು ಕಾದಾಟ ಶುರು ಮಾಡಿದವು ಈ ಹಡೆಗಳು..” ಅಂತ ತುಳಸಿಗೆ ನೀರೆರೆಯುತ್ತಿದ್ದ ಮನೆಯೊಡತಿ ಮಾಲಕ್ಕ, ನೀರಿನ ಚೊಂಬು ಬದಿಗಿಟ್ಟು, ಮೆಟ್ಟಿಲ ಬಳಿಯಿದ್ದ ಯಾರದ್ದೋ ಚಪ್ಪಲಿ ತೆಗದು ಎರಡೂ ಕೋಳಿಗಳ ಕಡೆ ಎಸೆದಳು.
ಚಪ್ಪಲಿಯ ಪೆಟ್ಟು ತಪ್ಪಿಸಿಕೊಳ್ಳುವ ಸಲುವಾಗಿ ಎರಡು ಹುಂಜಗಳೂ “ಥತ್ ಈ ಹೆಂಗಸರ ಹಣೆಬರಹಾನೆ ಇಷ್ಟು..” ಅಂತ ಬೈಯ್ಯುತ್ತಾ ಜಗಳ ಮರೆತು, ಒಟ್ಟಿಗೆ ಓಡಿ ಹೋದವು.
0 ಪ್ರತಿಕ್ರಿಯೆಗಳು