ಯಾಕ್ಲೇ ತಮ್ಮಾ ಯಾರೂ ರಾಖಿ ಕಟ್ಟಿಲ್ಲೇನು ನಿನಿಗ್ಯ?

ನಾವು ಕಾಯಾ ಆಕ್ಳಾ, ಈ ದೇಸದ ಪಗಡಿಯಾಗಾಕತೈತಿ

ಒಂದು ಪ್ಲಾಸ್ಟಿಕ್ಕಿನ ಕೈಚೀಲದಾಗ ರಾಮಣ್ಣ, ಮಾಂಸದ ಗಟ್ಟಿ ತುಂಡುಗಳನ್ನ ತುಂಬಿಕಂಡು ಬಂದು ಕರಿಯವ್ವನ ಗುಡಿತಾವ ಇರೋ ಕಟ್ಟಿಗೆ ಬಂದು ಕುಂತ.

ಅವಾಗ ಅವಾಗ ಆ ಕಟ್ಟಿ ಮುಂದ ಹಾದು ಹೊಂಟಿದ್ದ ಪಲ್ಲಾಗಟ್ಟಿ ಶಾವಿಂತ್ರಮ್ಮನ ಮಮ್ಮಗ ಗುರುಬಸಣ್ಣನ ಮಾತಾಡ್ಸಿ ತರುಬಿದ ರಾಮಣ್ಣ, ‘ಯಾಕ್ಲೇ ತಮ್ಮಾ ಯಾರೂ ರಾಖಿ ಕಟ್ಟಿಲ್ಲೇನು ನಿನಿಗ್ಯ ?’ ಅಂತ ಕೇಳತಿದ್ದಂಗನಾ ರಾಮಣ್ಣನ ಕಡಿಗೆ ತಿರುಗಿ ನೋಡಿದ ಗುರುಬಸವರಾಜ, ‘ಊರಿಗೆಲ್ಲಾ ಶಾಪ ಹಾಕ್ತಿರಲ್ಲೋ ನಿಮ್ಮೋಳು ಏನಾಗೈತಿ ನಿಮಿಗ್ಯ ? ನಮಿಗ್ಯಾರರ ರಾಖಿ ಕಟ್ಲಿ, ಹಾಳಾಗೋಗ್ಲಿ ನಿಮಿಗ್ಯಾಕ್ರಪ್ಪಾ ಅದೆಲ್ಲಾ?, ಅದು ಬುಡು ಅತ್ಲಾಗಿರ್ಲಿ, ಈಗ ನನ್ನ ತರುಬಿದ್ಯಾಕೇಳಜ್ಜಾ?’ ಅಂದ.

toddyಗುರುಬಸಣ್ಣ ಸಿಟ್ ಆಗಿದ್ದು ನೋಡಿ, ‘ಏನೂ ಇಲ್ಲ ತಮ್ಮಾ ಹಂಗ್ಯಾಕ ಸಿಟ್ ಮಾಡ್ಕಂತಿ? ಹಂಗಾ ನೀ ಹೋಗಾ ಹಾದ್ಯಾಗ ನಮ್ ಮೈಲವ್ವಗ ಇಕಡಿ ಬರಾಕರ ಉಳ್ಳಾಗಡ್ಡಿ ಹಿಡ್ಕಂಡು ಬರಾಕೇಳು’ ಅಂತ ಕೇಳತಿದ್ದಂಗನಾ ಮಾಂಸದ ಚೀಲ ನೋಡಿದ ಬಸಣ್ಣ ‘ಒಂದು ತಿಥಿ ಇಲ್ಲ, ಒಂದು ಮಿತಿ ಇಲ್ಲ ದೇವ್ರು ನಿಮ್ಮನ್ಯಾಕಿನ್ನೂ ಇಟ್ಟಾನೇನಾ ಇಲ್ಲಿ. ಆತು ಬುಡು ಹಂಗಾ ಹೇಳಿ ಹೊಕ್ಕೀನಿ, ಕಟ್ಟಿ ತುಂಬಾ ಎಲುಬು ಚೆಲ್ಲಬ್ಯಾಡ್ರಿ ಅತ್ಲಾಗ ತಿಪ್ಯಾಕ ಒಗಿರಿ’ ಅಂದ್ಕೋತ ಹೋದ.

ಈ ಗುರುಬಸಣ್ಣ ಮನಿಕಡಿಗೆ ಹೋಗದ್ನ ನೋಡ್ಕಂತನಾ ಬಂದ ಬುಡೇನಜ್ಜ, ‘ಅಲೆ ಯಾರನ್ನಾ ತಡಿವಿಕಂಡು ಕುಂತಿಯಲ್ಲೋ ಮಾರಾಯ ? ಅಂದ್ಕೋತ ಇನ್ನೇನು ಕಟ್ಟಿಗೆ ಕುಂದ್ರಬೇಕಿತ್ತು ರಾಮಣ್ಣನ ಮಗ್ಗಲ ಇದ್ದ ಹಾಳಿ ಕವರ್ ನೋಡಿ ಇದೇನಾ ನಡಿಸಿಯಲ್ಲಪಾ ರಾಮಣ್ಣಾ ?’ ಅಂತ ಕೇಳತಿದ್ದಂಗನ ರಾಮಣ್ಣ ಆ ಕವರ್ ಬಿಚ್ಚಿ ತೋರಿಸಿ ‘ಇಷ್ಟ್ ಐತಿ ನೋಡ್ಪಾ ಮಾಲು. ಸಾಕಾಕೈತಿಲ್ಲು ಮುವ್ವರಿಗೂ ? ಮೈಲವ್ವ ಒಬ್ಬಾಕಿ ಬಂದ್ ಬುಡ್ಲಿ ಸುರು ಹಚ್ಚಿಗಂಡುಬುಡಾನು’ ಅಂದ.

ಯಾವಾಗ ಕವರಿನ್ ತುಂಬಾ ಮಾಸದ ಅಡಿಗಿ ನೋಡಿದ್ನೋ, ಹುಬ್ಬೇರಿಸಿ ಖುಷಿಪಟ್ಟ ಬುಡೇನಜ್ಜ, ‘ಅಜ್ಜೋ, ಏನ್ ನಸೀಬೈತೋ ಮರಾಯಾ ನಮ್ಮದಿವತ್ತು. ಹಂಗಾರ ಮೈಲವ್ವ ಬರಾದ್ರಾಗ ಒಡ್ನಳ್ಳಿ ಚನ್ನವ್ವನ ಅಂಗಡಿಗೋಗಿ ಹಿಡ್ಕಂಡ್ ಬಂದ್ ಬುಡ್ಲೇನು ತಗಂಡು ಬುಡಾನು ತಟಗು ತಟುಗು?’ ಅಂದ. ಬುಡೇನಜ್ಜನ ಮಾತು ಕೇಳಿದ ರಾಮಣ್ಣ ‘ ನಾನು ಬೆಣ್ಣಿ ಜೋಡ್ಸೀನಿ, ನೀನು ಎಣ್ಣಿ ಜೋಡ್ಸೋ ಮಾರಾಯಾ, ಅದನ್ನೂ ಹೇಳಿ ಕೋಡಾಕೇನು ನಿನಗ ?’ ಅಂತಿದ್ದಂಗನಾ ಬುಡೇನಜ್ಜ ಇರು ಬಂದೆ, ಅಂದ್ಕೋತ ಒಡ್ನಳ್ಳಿ ಚೆನ್ನವ್ವನ ಅಂಗಡಿ ಕಡಿಗೊಂಟ.

ರಾಮಣ್ಣ, ಕಟ್ಟಿಗೆ ಮುಂಚೆಗಾ ಬಂದು ಕುಂತಿರ ಸುದ್ದಿ ಕೇಳಿದ್ದ ಮೈಲವ್ವ, ಕೈಯಾಗ ನಾಕು ಉಳ್ಳಾಗಡ್ಡಿ ಹಿಡ್ಕಂಡಾ ಬಂದ್ಲು. ಮೈಲವ್ವನ ನೋಡ್ತಿದ್ದಂಗನಾ ರಾಮಣ್ಣ, ‘ಇನ್ನೊಂದು ಚಾವೊತ್ತು ಬಿಟ್ಟು ಬರಾಕ ಬರ್ಲಿಲ್ಲೇನಬೇ ನಿಮೌನು. ಹುಟ್ಟೋ ತೀರ್ಥಕ್ಕೂ ಕಲ್ಲು ಹಾಕಾಕ ಜೋರ್ ಇರ್ತಾಳ ಯಾವಾಗ ನೋಡಿದ್ರೂ’ ಅಂತ ಅನ್ನಾತ್ಗಿದ್ದು ಮೈಲವ್ವ ‘ಲೋ ಭಾಡ್ಕೋ, ಅದೇನಲೇ ಒಗಟಚ್ಚಿ ಮಾತಾಡಕತ್ತಿಯಲ್ಲ ?’ ಇವ್ನೆಲ್ಲಿ ಬುಡೇನಿ?’ ಅಂತಿದ್ಲು, ಅದಾ ಟೈಂಗೆ ಸರಿಯಾಗಿ ಬುಡೇನಜ್ಜ ಎಲ್ಡು ಪ್ಲಾಸ್ಟಿಕ್ ಗ್ಲಾಸ್, ಹೆಗಲಮ್ಯಾಲ ಒಂದು ಸಣ್ಣ ಬಿಂದ್ಗಿ ಹಿಡ್ಕಂಡು ಅಲ್ಲಿಗೆ ಬಂದಾಬುಟ್ಟ.

Shivu Morigere-1 (1)

ಬುಡೇನಜ್ಜನ ಕೈಯಾಗಿನ ಪ್ಲಾಸ್ಟಿಕ್ ಗ್ಲಾಸ್ ನೋಡ್ತಿದ್ದಂಗನಾ ಮೈಲವ್ವಗ ಇವರೇನು ಮಸಲತ್ತು ನಡಸಾಕತ್ಯಾರ ಅನ್ನಾದ್ರ ಅದ್ರ ವಾಸ್ನಿ ಸಿಕ್ಕೋಗಿತ್ತು. ‘ಅಲಾಲಾಲ ಪಾಕಡಿಗುಳಾ, ನನ್ನಾ ಬುಟ್ಟು ಇಂಥಾವೆಲ್ಲಾ ನಡಸಾಕ ಸಾಧ್ಯನಾ ಇಲ್ರಲೋ ಈ ಊರಾಗ, ನಿಮ್ಮಂಥಾ ಕಳ್ ನನ್ ಮಕ್ಳನ್ನ ಕಾಯಾಕಾಗಿನಾ ಈ ಕರಿಯವ್ವನ್ನ ಈ ಗುಡಿಯಾಗ ಕುಂದ್ರಿಸೀನಿ. ಏನಂದ್ಕಂಡೀರಿ ಈ ಮೈಲವ್ವ ಅಂದ್ರ ?’ ಅಂತಿದ್ದಂಗನಾ ನಮ್ ಬುಡೇನಜ್ಜ, ‘ನನಿಗಲೆ ಮುಂದಾಗಾ ಗೊತ್ತಿತ್ತು ಬಾರಬೇ ಮೈಲವ್ವ, ನೀನು ಕುಡಿಯಾ ನೀರಾಗ ಕೈಯಾಡ್ಸಿ ಗೊಡಗೆಬ್ಸಾ ಅಸಾಮಿ ಅನ್ನಾದು ನಮಿಗೆ ಗೊತ್ತಿಲ್ಲೇನು ? ಅದಕ್ಕಾ ನಿನಿಗೂ ಸೇರಿಸಿ ಒಂದುವರಿ ತಂದೀನಿ, ಅತ್ತ ಹಿಂದಕ್ಕ ಸರದು ಕುಂತ್ಕ’. ಅಂದದ್ದಕ್ಕ ಮೈಲವ್ವ ನಕ್ಕೋತ ಹಿಂದಕ್ಕ ಸರದು ಕುಂತ್ಲು, ಬುಡೇನಜ್ಜ ಕಟ್ಟಿ ಹತ್ತಿ ಮೂವ್ವರೂ ದುಂಡುಗು ಒಲಿಗುಂಡು ಕುಂತಂಗ ಕುಂತು ಗುಂಡು ಕಪ್ಪಿಗೆ ಹಾಕ್ಕಂಡು ಕುಂತ್ರು.

ಇನ್ನೇನು ರಾಮಣ್ಣ ಗ್ಲಾಸಿಗೆ ಕೈ ಹಾಕತಿದ್ದ, ನಡುಕ ಬಾಯಿ ಹಾಕಿದ ಮೈಲವ್ವ, ‘ಇರ್ರಲೋ ಒಂಚೂರು, ನಿಮಿಗೊಂದೊಂದು ಕಂಕಣ ಕಟ್ಟಿಬುಡ್ತಿನಿ’ ಅಂದ್ಲು. ಮೈಲವ್ವನ ಕಡಿಗೆ ತಿರುಗಿದ ಬುಡೇನಜ್ಜ, ‘ಆಮ್ಯಾಲ ಕಟ್ ವಂತಿ ಸುಮ್ನಿರಬೇ ಹೆಣಾ ನೋಡಿದ್ರ ದುಃಖ ನಿಂದ್ರತೈತೇನು?, ನಮ್ ಕರಿಯವ್ವಗ ನೈವೇದ್ಯ ಹಿಡದು ಸಿವಾ ಅಂದ್ಕಂಡು ಮದ್ಲು ಮುಗ್ಸಿ ಬಿಡ್ರಿ ಇದನ್ನ’ ಅಂತಿದ್ದಂಗನಾ ಮೂರೂ ಜನ ‘ಸಿವಾ’ ಅಂದ್ಕೋತ ಸರೆ ಮುಗಿಸ್ತಿದ್ದಂಗನಾ ರಾಮಣ್ಣ ಕವರಿನ ಬಾಯಿ ತೆಗದು ಕರಿಯವ್ನ ಗುಡಿಕಡಿಗೆ ತಿರುಗಿ ಆ ಮಾಂಸಾನ ಎಡಿ ಹಿಡದ, ಹಿಂದೆಲೆ ಮೂವರೂ ಒಂದೊಂದು ಪೀಸ್ ಬಾಯಿಗೆ ಹಾಕ್ಕಂಡು ಚಕ್ಕಳಮಕ್ಕಳ ಹಾಕ್ಕಂಡು ಕುಂತ್ಗಂಡ್ರು.

ವಗರಾಗಿದ್ದ ಬಾಯಿಗೆ ಉಪ್ಪು, ಖಾರ, ಮಸಾಲಿ ತುಂಬಿದ್ದ ಮಾಂಸದ ಪೀಸು ಹೋಗ್ತಿದ್ದಂಗನಾ ಅಂತ್ರಕಿಲೆ ತೇಲಾಕತ್ತಿದ್ರು ಮುವ್ವರೂ. ಈಗ ಮೈಲವ್ವ ರಾಮಣ್ಣನ ಕಡಿಗೆ ತಿರುಗಿ ಕಂಕಣ ಕಟ್ಟಿದ್ಲು, ಆಮ್ಯಾಲ ಬುಡೇನಜ್ಜನೂ ಕಂಕಣ ಕಟ್ಟಿಸ್ಕಂಡ. ಆಮ್ಯಾಲ ಏನೋ ನೆಪ್ಪು ಮಾಡ್ಕಂಡ ಬುಡೇನಜ್ಜ ‘ಹೋ, ಆಗ್ಲೇ ನೀನು ಇದಾ ಇಚಾರಕ್ಕಾ ಆ ಹುಡ್ಗನ್ನ ತಡವಿರಬೇಕು, ಹೌದಿಲ್ಲು ರಾಮಣ್ಣ ?’ ಅಂದ.

ಬುಡೇನಜ್ಜನ ಮಾತು ಕೇಳಿದ ರಾಮಣ್ಣ ಹೌದು ಅನ್ನಂಗ ಉದ್ದುದ್ದ ಗೋಣು ಹಾಕಾಂತ, ಏನಾ ಹೇಳಾಕ ಹೊಂಟ, ನಡುಕು ಬಾಯಿ ಹಾಕಿದ ಮೈಲವ್ವ ‘ಈ ನೂಲು ಹುಣುವಿ ಅಂದ್ರ ಈ ಹುಡ್ರು ಅಷ್ಟ್ಯಾಕ ಹೆದ್ರತಾವೋ ಏನೋಪಾ ?, ಈ ಹಬ್ಬದ ಬಗ್ಗೆ ಪೂರ್ತಿ ತಿಳ್ಕಳ್ಳಾದ್ರ, ನಿಮಗ ರಾಖಿ ಕಟ್ಟಾಕೊಂದು ಹಬ್ಬ ಇದ್ದಂಗ ನಮಗ ತಾಳಿ ಕಟ್ಟಾಕೊಂದು ಹಬ್ಬ ಕೊಡ್ರಿ ಅಂದ್ಕೋತ ಇವ್ವತ್ತಿನ ದಿವ್ಸ ಹುಡ್ಗ್ಯಾರನ್ನ ಕಂಡ್ರ, ಓಡಿ ಹೊಕ್ಕಾವು, ಇದ್ರ ಬಗ್ಗೆ ನಾವೆಲ್ಲಾ ಹೇಳ್ತೀವಿ ಬರ್ರೋ ಅಂದ್ರ ನಮ್ ಮಾತು ಯಾರೂ ಕೇಳಾಕಾ ರೆಡಿ ಇಲ್ಲ.’ ಅಂದ್ಕೋತ ಮತ್ತೊಂದು ತುಂಡು ಬಾಯಿಗೆ ಹಾಕ್ಕಂಡ್ಳು.

rakhi‘ಸ್ರಾವಣ ಮಾಸ ಅಂದ್ರನಾ ಹಬ್ಬಗಳನ್ನ ಕರಕೋಂತ ಬರೋಮಾಸ. ಇದಾ ನೂಲು ಹುಣುವಿನ ಮಹಾರಾಷ್ಟ್ರದ ಕರಾವಳಿಯಾಗ ‘ನಾರಳಿ ಹುಣುವಿ’ ಅಂತ ಮಾಡಿ, ಮೀನು ಹಿಡಿಯಾಕ ನಿಂದ್ರತಾರ ಗೊತ್ತೇನೋ ರಾಮಣ್ಣಾ ?’. ಅಂದ್ಕೋತ ಬುಡೇನಜ್ಜ ಮತ್ತೊಂದು ತುಂಡು ಬಾಯಿಗೆ ಹಾಕ್ಕಂಡ. ‘ಅಯ್ಯೋ, ಹುಡಿಕ್ಕಂಡು ಹೋದ್ರ ಇಂಥಾ ಸೌರ ಕತಿಗುಳು ಸಿಗತಾವು ಬುಡೋ ಮರಾಯಾ, ನನಿಗೆ ತಿಳದ ಮಟ್ಟಿಗೆ ನೋಡ್ಪಾ ಈ ನೂಲು ಹುಣವಿ ಅನ್ನಾದು ಹೆಣ್ಮಕ್ಕಳು-ಗಂಡಸ್ರ ನಡುಕ ಇರಾ ಪ್ರೀತಿ, ವಾತ್ಸಲ್ಯ, ಜಬಾದ್ದಾರಿ, ಕರ್ತವ್ಯದ ನೆಪ್ಪಿರಲಿ, ಅಂತ ಮಾಡ್ತಾರ ನೋಡು ಅಷ್ಟ, ಅದನ್ನ ಬುಟ್ ಬುಟ್ಟು ಹೆಣ್ಮಕ್ಳು ಗಂಡಸ್ರಿಗೆ ಇದನ್ನ ಕಟ್ಟಿದ ಕೂಡ್ಲೆ, ಅವ್ರು ಇವ್ರನ್ನ ಕಾಯಬೇಕಂತೆ, ಒಂದು ಗಂಡ್ಸು, ಇನ್ನೊಂದು ಹೆಂಗ್ಸನ್ನ ಯಾರ್ಲಿಂದ ಕಾಪಾಡಾಕು ? ಇನ್ನೊಬ್ಬ ಕೆಟ್ಟ ಸುಳೆಮಗನ್ಲಿಂದ ಹೌದಿಲ್ಲು ? ಮದ್ಲು ಹೆಣ್ಮಕ್ಕಳಿಗೆ ಮರ್ಯಾದಿ ಕೊಡ್ಗಂಡು ಮರ್ಯಾದಿಲಿಂದ ಬದ್ಕಿದ್ರ ಸಾಕು, ಇಲ್ಲಿ ಯಾರನ್ನ ಯರೂ ಕಾಪಾಡಾ ಕಷ್ಟನಾ ಬರಲ್ಲ. ’ಅಂದದ್ಕ ಮೈಲವ್ವ, ಬುಡೇನಜ್ಜ ಹೌದೌದು ಅನ್ನಂಗ ಗೋಣ್ ಹಾಕ್ಕೋತ ಪೀಸ್ ತಿನ್ನೋದನ್ನ ಮುಂದುವರಿಸಿದ್ರು.

ಹಿಂಗಾ ಮಾತುಕತಿ ನಡದಿತ್ತು, ‘ಕಪ್ ಗೆ ಒಂದೀಸು ನೀರ್ ಹಾಕಲೋ ಸಾಬಣ್ಣಾ,’ ಅಂದ ಮೈಲವ್ವ ನೀರು ಕುಡುದು, ಅಲ್ಲಲೋ ರಾಮಾ, ಅದ್ಯಾದಾ ದೇಸದಾಗ ಏನೋ ಆಟ ನಡಿಯಾಕತ್ಯಾವಂತ್ಯ ? ನಮ್ ದೇಸಕ್ಕೇನಾಗೈತಲೋ ? ಒಬ್ರೂ ಫಸ್ಟ್ ಬಂದಿಲ್ಲಂತ್ಯಲ್ಲ ? ಅಂತ ಕೇಳಿದ್ಲು. ಮೈಲವ್ವನ ಮಖಾ ನೋಡಿದ ರಾಮಣ್ಣ, ಆಡಾ ಮಕ್ಳಿಗೆ ಕಡ್ಲಿ ತಿಂದು ತಾಕತ್ತು ತೋರಿಸ್ರಿ ಅಂದ್ರ ? ಅವು ಏನ್ ಮಾಡ್ತಾವು ಪಾಪ ? ನಮ್ ದೇಸಕ್ಕ ಒಂದೂ ಬಂಗಾರದ ಪದಕ ಬರಲಿಲ್ಲ ಅನ್ನದ್ಕಿಂತ ಆಟಕ್ಕ ಹೊಂಟೋರ್ನ ಎಷ್ಟು ಕನಿಷ್ಟ ಕಂಡೀವಿ ಅನ್ನದನ್ನ ಸಂಬಂದಪಟ್ಟಾರು ಯೋಚ್ನಿ ಮಾಡಬೇಕು, ಅದ್ರಾಗಾ ಕಸುವು ಕಿತ್ತು ಒಂದು ಹುಡುಗಿ ಮೂರ್ನೇತ್ ಬಂದಾಳ’. ಅಂತ ಇನ್ನೂ ಏನೋ ಹೇಳಾಕ ಹೊಂಟಿದ್ದ, ನಡುಕ ಬಾಯಿ ಹಾಕಿದ ಬುಡೇನಜ್ಜ ‘ಅಂದ್ರಾ, ನಮ್ ದೇಸಕ್ಕ ಒಂದು ಹುಡ್ಗಿ ರಾಖಿ ಕಟ್ಟಿದ್ಲು ಅಂದಂಗಾತು’ ಅಂದ್ಕೋತ ನಗಾಕತ್ತಿದ,

ಬುಡೇನಜ್ಜನ ಕಡಿಗೆ ತಿರುಗಿದ ಮೈಲವ್ವ, ‘ಅಲ್ಲಲೋ ಸಾಬಣ್ಣ, ಈ ಮಗ್ಗುಲು ಮುಳ್ಳಿನಂಗಾಡಾ ಜಯಲಲಿತಾ , ನೋಡ್ರಪಾ ನಮಿಗೆ ಕನ್ನಡದಾರ್ನ ಮಾತ್ರ ರಾಜ್ಯಪಾಲರ ಹುದ್ದಿಗೆ ಕಳಸಬ್ಯಾಡ್ರಿ, ಅಂತ ಮ್ಯಾಕ ಪತ್ರ ಬರ್ದಾರಂತ್ಯಲ್ಲ ? ಹೌದೇನು ?’ ಅಂತ ಕೇಳಿದ್ಲು. ‘ಅದ್ರ ಕತಿ ಏನ್ ಕೇಳ್ತಿ, ನೋಡ್ರಪಾ, ನಮ್ ರಾಜ್ಯದಾಗ ಮಳಿ ಈ ವರ್ಸ ಕಮ್ಮಿ ಆಗಿ, ನಮ್ಮ ಕೆರಿ, ಕಟ್ಟಿ, ಹೊಳಿಗುಳಾ ತುಂಬಿಲ್ಲ, ನಮ್ಮ ನೀರನ್ನ ನಾವಾ ಕುಡಿಯಾಕಷ್ಟಾ ಬಳಸ್ಕಣಾ ಪರಿಸ್ಥಿತಿಯಾಗದೀವಿ, ಹಂಗಾಗಿ ಸದ್ಯಕ್ಕ ಯಾವ ರಾಜ್ಯದಾರಿಗೆ ನಾವ್ಯಂಗ ನೀರು ಕೊಡಾನು ನೀವಾ ಹೇಳ್ರಿ.’ ಅಂತ ನಮ್ ಸಿಮ್ಮು ಮ್ಯಾಕ ಪತ್ರ ಬರದಾರಂತೆ , ಇದ್ರಾಗ ಯಾರ್ಯಾರು ಏನೇನು ಕಡ್ಡಿ ಆಡಸ್ತಾರಾ ನೋಡಬೇಕು’. ಅಂದ ಮೈಲವ್ವನ ನೋಡ್ಕೋಂತ ರಾಮಣ್ಣ.

‘ಅದು ವತ್ತಟ್ಟಿಗೆ ಹೋಗ್ಲಿ ನಮ್ ಕಣ್ ಮುಂದಾನಾ ಆಕಳದ ಕಾಲಾಗ ಮೆಲ್ಲಕ ಹುಳಿ ಇಂಡಾ ವಾಸ್ನಿ ಬಡದೈತಿ ಇದಾರಾ ಗೊತ್ತೇನಲೋ ರಾಮಾ ನಿನಗ ?’ ಅಂತ ಮೈಲವ್ವ ರಾಮಣ್ಣನ ಕೇಳಿದ್ಕ ‘ನಾವು ಕಾಯಾ ಆಕ್ಳಾ, ಈ ದೇಸದ ಪಗಡಿಯಾಗಾಕತೈತಿ, ಇದ್ರ ಬಗ್ಗೆ ಇನ್ನೊಮ್ಮಿ ಮಾತಾಡಿದ್ರಾತು, ಎಲ್ಲದ್ನೂ ತಿಂದು ಖಾಲಿ ಮಾಡಿದ್ರಿಲ್ಲು, ಇನ್ನು ಅವೆಲ್ಲಾ ಎಲುಬುಗಳನ್ನ ಈ ಖಾಲಿ ಚೀಲಕ್ಕ ಹಾಕ್ರಿ, ಅತ್ಲಾಗ ಹೊಗದು ಕೈ ತೊಕ್ಕಂತ್ನಿ, ಅಂತಿದ್ದಂಗನಾ ಮೈಲವ್ವ, ಬುಡೇನಜ್ಜ ಪೀಸಿನ ಎಲುಬುಗಳನ್ನ ಚೀಲಕ್ಕ ಹಾಕಿ ಕೈ ವರಸಿಕಂಡು, ಮೈಲವ್ವ ತನ್ನ ಕುಣಕಿ ಚೀಲಕ್ಕ ಅಡ್ಕಿ ಎಲಿಗೆ ಕೈ ಹಾಕಿದ್ಲು, ಬುಡೇನಜ್ಜ, ರಾಮಣ್ಣ ಒಂದೊಂದು ಚುಟ್ಟ ಹಚ್ಗೊಂಡು ಸೇದ್ಕೋಂತ ಕುಂತ್ರು.

‍ಲೇಖಕರು admin

August 20, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಮಾಸಂಗಿ’ ಎಂಬ ಮಕ್ಕಳ ಆಸ್ತಿ..

 ಶರಣಬಸವ.ಕೆ.ಗುಡದಿನ್ನಿ 'ಮಾಸಂಗಿ' ಎಂಬ ಹೆಸರೇ ನನ್ನನ್ನ ಆ ಪುಸ್ತಕ ಎತ್ತಿಕೊಳ್ಳುವಂತೆ ಮಾಡಿತು. ಹಂಗಂದ್ರೆ ಏನಿರಬೌದು? ಅಂತ ಪುಸ್ತಕದ ಹೆಸರು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This