ಯಾರದು ನಿನ್ನ ಫೋಟೋ ತೆಗೆದವರು…

-ಶ್ರೀದೇವಿ ಕಳಸದ ಆಲಾಪ

ಅವತ್ತೆಲ್ಲ ಅಮ್ಮ ನನ್ನ ಪುಟ್ಟ ಕೈಗಳ್ಲಲಿ ಗಂಧದಕಡ್ಡಿ ಕೊಟ್ಟು ಬೆಳಗು ಎಂದಾಗಲ್ಲೆಲ ಮೂಡುತ್ತಿದ್ದ ಪ್ರಶ್ನೆ ಒಂದೇ. ಯಾವಾಗಲೂ ನಗುತ್ತಲೇ, ಎರಡು ಎಕ್ಸ್ಟ್ರಾ ಕೈಗಳನ್ನು ಅಂಟಿಸಿಕೊಂಡು, ಕಮಲದ ಮೇಲೆ ನಿಂತಿರುವ ಆ ನಿನ್ನ ಫೋಟೋ ತೆಗೆದವರು ಯಾರು? ಆ ಫೋಟೋಗ್ರಾಫರ್ ಎಲ್ಲರ  ಮನೆಗೂ ಹೋಗಿ ಫೋಟೋ ಹಂಚಿ ಬಂದಿದ್ದಾನೋ ಹೇಗೆ? ಎಲ್ಲರ  ಮನೆಯಲ್ಲೂ  ಸೇಮ್‌ಫೇಸ್‌ ಲಕ್ಷ್ಮೀ… ಸ್ವಲ್ಪ ವರ್ಷಗಳು ಕಳೆದ ಮೇಲೆ ಗೊತ್ತಾಯ್ತು, ಅದು ಫೋಟೊ ಅಲ್ಲ  ಬಿಡಿಸಿದ ಚಿತ್ರ ಅಂತ ಅಪ್ಪಾಜಿ ಹೇಳಿದ್ರು… ಹಾಗಾದರೆ ನಿನ್ನ ಚಿತ್ರ ಬಿಡಿಸಿದವನು ಎಲ್ಲಿದ್ದಾನೆ ? ಯಾವಾಗ ಬಿಡಿಸಿದ? ಅವನು ನಿನ್ನನ್ನು ಎಲ್ಲಿ ಭೇಟಿ ಮಾಡಿದ್ದ? ಎಷ್ಟು ದಿನ ತೆಗೆದುಕೊಂಡ ಚಿತ್ರ ಬಿಡಿಸೋದಕ್ಕೆ? ಅವನು ಚಿತ್ರ ಬಿಡಿಸೋವರೆಗೂ ನಿನ್ನ ಪಕ್ಕದಲ್ಲಿರೋ ಆನೆಗಳು ಸೊಂಡಿಲೆತ್ತಿಕೊಂಡು ಅಷ್ಟೂ ಹೊತ್ತು ಹಾಗೇ ನಿಂತಿದ್ದವಾ? ಪಾಪ ಕಾಲು, ಸೊಂಡಿಲು ನೋವು ಬಂದಿರಬೇಕಲ್ವಾ? ಬೈಯ್ಕೊಬೇಡ ಹೀಗೆ ಕೇಳ್ತಿದಿನಿ ಅಂತಾ.. ಆ ಕಮಲದ ಮೇಲೆ ಅದ್ಹೇಗೆ ನಿಂತುಕೊಂಡಿದ್ದಿ ಮಾರಾಯ್ತಿ? ಬ್ಯಾಲೆನ್ಸ್ ಹೇಗೆ ಮಾಡ್ದೆ?

ಹೀಗೆ ಯೋಚನೆ ಮಾಡ್ತಾ, ಮಾಡ್ತಾ.. ಎಷ್ಟೋ ಸಲ ನಿನಗೆ ನೈವೇದ್ಯ ಮಾಡುವವರೆಗೆ ಕಾಯದೆ ನಿನ್ನ ಫೋಟೋದ ಮುಂದಿಟ್ಟ ಸಕ್ಕರೆಯೊಳಗೆ ಅರ್ಧಂಬರ್ಧ ಕವುಚು ಹಾಕಿಕೊಂಡ್ದಿದ ಪುಟಾಣಿಗಳನ್ನು ಕದ್ದು ಕದ್ದು ತಿಂದುಬಿಟ್ಟಿದ್ದೇನೆ. ನಗುತ್ತ ಯಾವಾಗಲೂ ನೇರವಾಗಿಯೇ ನೋಡುತ್ತಿದ್ದ ನಿನಗೆ ಅದು ಕಂಡಿಲ್ಲ ಅಂದ್ಕೊತೀನಿ.. ಅಂದಹಾಗೆ ಸ್ಟೆಪ್ ಬೈ ಸ್ಟೆಪ್ ನೀನು ಹಾಕಿಕೊಂಡ ಆ ವೆರೈಟಿ ಹಾರಗಳು, ಬಳೆ, ಜುಮುಕಿ, ಕಿರೀಟ ಅದೆಲ್ಲ ಯಾರು ಕೊಡಿಸಿದ್ದು? ಅಪ್ಪಾ ತಾನೆ? ಬಂಗಾರದ್ದೇ ಇರಬೇಕು! ಹಾಗಿದ್ರೆ ನಿಮ್ಮ ಅಪ್ಪಾ ದೊಡ್ಡ ಶ್ರೀಮಂತರೇ ಇದಿರಬೇಕು. ನಿಂಗೆ ನಿಮ್ಮ ಅಮ್ಮನೇ ಎಲ್ಲಾ ರೆಡಿ ಮಾಡ್ದಿದಾ… ಕೆನ್ನೆಗೆ ರೋಸು, ತುಟಿಗೆ ಲಿಪ್‌ಸ್ಟಿಕ್‌, ಕಣ್ಣಿಗೆ ಕಾಡಿಗೆ ಅದೆಲ್ಲ ಎಷ್ಟು ನೀಟಾಗಿ ಹಚ್ಚಿದಾರೆ ನೋಡು… ಇದನ್ನೆಲ್ಲಾ ಹಚ್ಕೊಂಡಿದ್ದಕ್ಕೆ ನಿಮ್ಮ ಅಪ್ಪ ಬೈಯ್ಲಿಲ್ಲಾ ತಾನೆ? ಉಟ್ಕೊಂಡಿರೋ ಸೀರೆ ನಿಮ್ಮ ಅಮ್ಮಂದೇ ಇರಬೇಕು; ಅವರ ಮದುವೇದು. ಚಿತ್ರ ಬಿಡಿಸೋದು ಮುಗಿದ ಮೇಲೆ ನೀನು ನಮ್ಮೆಲ್ಲರ ಹಾಗೆ ಡ್ರೆಸ್ ಹಾಕ್ಕೊಂಡಿದ್ಯಾ? ಆದ್ರೆ ಎಲ್ಲಿ  ಮತ್ತೆ ಒಂದಿನಾನೂ ಸಿಕ್ಲಿಲ್ಲಾ.. ತರಕಾರಿ ತರೋದಕ್ಕೆ, ನಾಟಕ ನೋಡೋದಕ್ಕೆ, ಕೆರೆ ಕಡೆ ಸುತ್ತಾಡೋದಕ್ಕೆ, ಈಜಾಡೋದಕ್ಕೆ, ದೀಪಾವಳಿಗೆ ಸೆಗಣಿ ಹಿಡಿಯೋದಕ್ಕೆ, ನಾಗರಪಂಚಮಿಗೆ ಅಲ್ಲಿ   ಕೇರಿಗೆಂದು ಕೆರೆ ಕಡೆ ಹೋದಾಗ್ಲೆಲ್ಲ ನೋಡ್ತಿದ್ದೆ, ನೀ ಕಾಣ್ತಿರಲೇ ಇಲ್ಲ. ನೀನೆಲ್ಲೂ ಹೋಗಲ್ವಾ ಹಾಗಾದ್ರೆ? ಯಾಕೆ ನಿಮ್ಮ ಅಪ್ಪ-ಅಮ್ಮ ಹೊರಗಡೆ ಬಿಡೋದೇ ಇಲ್ವಾ? ಸರಿ ಬಿಡು, ಇಲ್ ಕೇಳು.. ಒಂದಿನಾ ನಮ್ಮನೆಗೂ ಟಿವಿ ಬಂತು. ಅವತ್ತೊಂದಿನ ಫ್ರಾಕ್ ಮೇಲೆ ಟವಲ್ ಸುತ್ಕೊಂಡು ಸೀರೆ ಉಟ್ಟುಕೊಳ್ಳುತ್ತಿದ್ದ ನನ್ನನ್ನ ಅಮ್ಮ ಕೂಗಿದವರೆ, ‘ಬಾರೇ.. ಲಕ್ಷ್ಮೀ ಬಂದಿದಾಳೆ..’ ಅಂದ್ರು. ‘ಹೇ.. ಲಕ್ಷ್ಮೀ..’ ಅಂತ ಓಡಿ ಬಂದ್ರೆ ಅಮ್ಮಾ ತೋರ್ಸಿದ್ದು ಟಿವಿ ಲಕ್ಷ್ಮೀ. ನಿಜಾ ಕಣೇ… ನಿನ್ನ ಹಾಗೆನೇ ಟಿವಿನಲ್ಲಿ ಇದ್ದ ಲಕ್ಷ್ಮೀ ಅಲಂಕಾರ ಮಾಡಿಕೊಂಡಿದ್ರು! ಅಬ್ಬಾ ಇಷ್ಟು ದೊಡ್ಡ ಹಾವಿನ ಮೇಲೆ ಮಲಗಿಕೊಂಡವರೊಬ್ಬರ ಕಾಲನ್ನು ಅವರು ಒತ್ತುತ್ತಿದ್ದರು. ಆಮೇಲೆ ಅಮ್ಮ, ‘ಅದು ವಿಷ್ಣು ದೇವರು.. ಲಕ್ಷ್ಮೀ ವಿಷ್ಣುವಿನ ಪಾದಸೇವೆ ಮಾಡ್ತಿದಾಳೆ.. ಸುಮ್ನೆ ನೋಡು’ ಅಂತ ಗದರಿಸಿದ್ರು. ಏನೋ ಕೇಳಲೆಂದು ಆ.. ಅಂತ ಬಾಯಿ ತೆಗೆದವಳಿಗೆ ಮುಚ್ಚಿಸೇಬಿಟ್ರು.. ಅಷ್ಟೊತ್ತಿಗೆ ಅಪ್ಪನ ಗಾಡಿ ಶಬ್ದ! ಇನ್ನು ಏನಿದ್ರೂ ಆ ‘ಸರಸ್ವತಿ’ನೇ ಗತಿ ಎಂದು ಕೋಣೆಗೆ ಓಡುತ್ತಾ… ಪುಸ್ತಕ ಕೈಯಲ್ಲಿ ಹಿಡಿದುಕೊಳ್ಳುವ ಹೊತ್ತಿಗೆ ಮತ್ತೆ ನಿನ್ನದೇ ಮುಖ ಆ ತೆಳುನೀಲಿ ಗೋಡೆಯ ಮೇಲೆ.. ಎವರ್‌ ಸ್ಮೈಲಿಂಗ್‌ ಫೇಸ್. ನಿನ್ನ ಕಾಲುಗಳಿಗೆ ಅಂಟಿಕೊಂಡೇ ನೇತಾಡುವ ಆಗಸ್ಟ್, ಸೆಪ್ಟಂಬರ್, ಅಕ್ಟೋಬರ್…. ತಿಂಗಳ ಪುಟ್ಟ ಕ್ಯಾಲೆಂಡರ್. ಪರೀಕ್ಷೆಗೆಂದು ತಾರೀಕುಗಳ ಮೇಲೆ ಅಮ್ಮ ಗುರುತು ಹಾಕಿಟ್ಟ ಕೆಂಪು ಮಾರ್ಕ್ ಕಂಡರೆ ಸಾಕು.. ಕೆಂಪು ಮೆಣಸಿನಕಾಯಿ ನಾಲಿಗೆಗೆ ಚುರುಕು ಮುಟ್ಟಿಸಿದ ಹಾಗೆ! ಅದಕ್ಕೂ ನೀ ನಗುತ್ತ ನಿಂತುಬಿಡ್ತಿದ್ದೆಯಲ್ಲವೆ? ಛೆ.. ನೀ ಸರಿಯಿಲ್ಲಾ ಹೋಗು.. ಒಮ್ಮೆಯಾದರೂ ಕೇಳಿದ್ಯಾ? ಪರೀಕ್ಷೆ ಟೈಮ್‌ನಲ್ಲಿ ಯಾರಿಗೂ ಕಾಣದ ಹಾಗೆ ಬಂದು ಬರೆದು ಕೊಡಲಾ? ಕೊನೆ ಪಕ್ಷ ಕಿವಿನಲ್ಲಿ ಉತ್ತರಗಳನ್ನ ಹೇಳಿ ಹೋಗಬಹುದಿತ್ತಲ್ಲಾ? ಬೇಡಾ ಬಿಡಮ್ಮಾ.. ಪರ್ವಾಗಿಲ್ಲ… ನಮ್ ‘ಸರಸ್ವತಿ’ ನಮ್ ಜೊತೆಗಿರ್ತಾಳೆ. ಆಯ್ತು ಲಕ್ಷ್ಮೀ… ಏನೋ ನಿನ್ನ ಬಗ್ಗೆ ಹಳೇದೆಲ್ಲಾ ಹೇಳಬೇಕು ಅನ್ನಿಸ್ತು ಹೇಳ್ಕೊಂಡೆ. ತಪ್ಪಾಗಿದ್ರೆ ಕ್ಷಮಿಸ್ಬಿಡು ತಾಯೇ.. ನಿನಗೆ ಲೇಟ್ ಆಯ್ತೋ ಏನೋ.. ಎಲಾ ನಿನಗೆ ಪೂಜೆ ಮಾಡೋದಕ್ಕೆ ಕಾಯ್ತಿದಾರೆ.. ಒಂದೇ ಒಂದು ಪ್ರಶ್ನೆ.. ಅದೇನೋ ಹೇಳ್ತಾರಲ್ಲಾ.. ನೀನಿದ್ದಲ್ಲಿ ಸರಸ್ವತಿ ಇರಲ್ಲಾ.. ಅವಳಿದ್ದಲ್ಲಿ ನೀನಿರಲ್ಲಾ ಅಂತ.. ಅದು ನಿಜಾನಾ?]]>

‍ಲೇಖಕರು avadhi

October 23, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

 1. savitri

  Very nice imagination Shridevi madam. Many times me also, have thought like you about our wonderful Gods and Goddesses. Mostly this kind of questions may arise with everybody, especially during our childhood.

  ಪ್ರತಿಕ್ರಿಯೆ
 2. veda

  Oh sogasada lekhana. Nammellara balyada mugdha anisikegalannella bidisitta hage idhe Srideviyavare.Saraswathi+Lakshmi ibru ottige irtharo ilvo annodu,onthara permutation & combination lekka bidisida hage, adre nimage Saraswathiya support anthu kanditha idhe bidi.

  ಪ್ರತಿಕ್ರಿಯೆ
 3. gururaj

  bahal dinagal nantar shridevi avar lekhan odide.avru avadhai ge baritirabhudu adre nanu nodiralilla.nanu elli shridevi avru raga alaapadalli mulugi baravanige nillisiddaro anisitu.adre avaru matte akshargalige banna nididddu khushi tandide.a lakshi photo nodidre nanagu chikkandinind ondu anuman kadtide.’hage lakshmi kyiyind jhan jhan coins biluttiddare chitra tegeyuvavanu sumne kuntna?

  ಪ್ರತಿಕ್ರಿಯೆ
 4. SunilHH

  ಲೇಖನ ಸೊಗಸಾಗಿದೆ!!
  “ನೀನಿದ್ದಲ್ಲಿ ಸರಸ್ವತಿ ಇರಲ್ಲಾ.. ಅವಳಿದ್ದಲ್ಲಿ ನೀನಿರಲ್ಲಾ ಅಂತ.. ಅದು ನಿಜಾನಾ?”
  ಈ ಪ್ರಶ್ನೆಗೆ ಲಕ್ಷ್ಮೀದೇವಿ ಉತ್ತರ ಕೊಟ್ಟರೆ ದಯವಿಟ್ಟು ನಮ್ಮಗೂ ತಿಳಿಸಿ 🙂

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: