ಯಾರಿಗಾಗಿ ಕಾಯುತಿರುವೆ, ಜೀವ ಜೀವವೆ…

urmile.jpg“ರಾಗಿರೊಟ್ಟಿ” ಕಾಲಂ

ಊರ್ಮಿಳೆ

ಯಾಕೆ ಹೀಗಾಯ್ತು ಅಂತ ಗೊತ್ತಿಲ್ಲ. ದಿಢೀರನೆ ಕಾಲಿಂಗ್ ಬೆಲ್ ಸದ್ದಾಯ್ತು. ಎದ್ದು ಹೋಗಿ ಬಾಗಿಲು ತೆರೆದೆ. ಯಾರೂ ಅಂತ ಕೂಗಿದೆ. ಉಹುಂ ಯಾರೂ ಇಲ್ಲ. ಆಚೆ ಕತ್ತಲೋ ಕತ್ತಲು. ಟೈಂ ನೋಡ್ಕೊಂಡೆ ರಾತ್ರಿ ೨ ಗಂಟೆ. ಈ ಹೊತ್ತಲ್ಲಿ ಯಾರು ಬರ್ತಾರೆ?

ಒಂದು ಕ್ಷಣ ಕಕ್ಕಾಬಿಕ್ಕಿಯಾದೆ. ಹಾಗಾದ್ರೆ ಕಾಲಿಂಗ್ ಬೆಲ್ ಸೌಂಡ್ ಕೇಳಿಸಿದ್ದೇ ತಪ್ಪಾ? ಇದು ಈಗಲ್ಲ. ಮೇಲಿಂದ ಮೇಲೆ ಆಗ್ತಿದೆ. ಸಡನ್ನಾಗಿ ಬಾಗಿಲು ಬಡಿದ ಸದ್ದು. ಇಲ್ಲಾ ಕಾಲಿಂಗ್ ಬೆಲ್, ಇಲ್ಲಾ ಹೆಸರು ಹಿಡಿದು ಕರೀತಾರೆ… ನಾನು ಧಡ್ ಅಂತ ಎದ್ದು ಕೂತ್ಕೊಳ್ತೀನಿ. ಓಡಿ ಹೋಗಿ ಬಾಗಿಲು ತೆಗೀತೀನಿ. ಯಾರೂ ಇಲ್ಲ…

ಮಂಟೇಸ್ವಾಮಿ ಕಥಾಪ್ರಸಂಗದಲ್ಲಿ ಒಂದು ನಂಬಿಕೆ ಇದೆ. ಊರ ಹೊರ ಬಾಗಿಲಿಗೆ ಗಂಟೆ ತೂಗುಬಿಟ್ಟಿದ್ದಾರೆ. ಆದರೆ ಅದಕ್ಕೆ ನಾಲಿಗೇನೇ ಇಲ್ಲ. ಆದರೆ ಆ ಮುಕ್ಕಣ್ಣ ಶಿವ ಬಂದ್ರೆ ನಾಲಿಗೆ ಇಲ್ಲದ ಗಂಟೇನೂ ಸದ್ದು ಮಾಡುತ್ತೆ. ಊರಿಗೆ ಶಿವ ಬಂದ್ರೆ ಗೊತ್ತಾಗಲಿ ಅಂತಾನೇ ಈ ಗಂಟೆ ಕಟ್ಟಿದಾರೆ.

glitter1.jpgಯಾಕೆ ನನಗೆ ಹೀಗಾಗುತ್ತೆ. ಯಾರೋ ಬರ್ತಾರೆ, ಯಾರೋ ಬರ್ತಾರೆ ಅಂತ ಯಾಕೆ ನನ್ನ ಮನಸ್ಸು ಕಾಯ್ತಾ ಇರುತ್ತೆ. ಕಾರ್ನಾಡರ ಒಂದಾನೊಂದು ಕಾಲದಲ್ಲಿ “ಅವನೇನ್ ಈ ಕಡೀಂದ ಬರ್ತಾನೋ ಇಲ್ಲಾ ಆ ಕಡೀಂದಾನೋ” ಅಂತ ಗಂಡುಗಲೀನ ಕಾಯ್ತಾ ಇರ್ತಾರಲ್ಲ ನನ್ನ ಕಥೇನೂ ಹಾಗೇನೇ. ನಿದ್ರೇಲಿ ನಡೆಯೋ ರೋಗ ಲೇಡಿ ಮ್ಯಾಕ್ ಬೆತ್ ಗಿತ್ತು ನನಗೇನೂ ಆ ಥರಾ ಖಾಯಿಲೆ ಇಲ್ಲ. ಹಾಸಿಗೆಗೆ ಉರುಳಿದರೆ ಖಡಕ್ಕಾಗಿ ಎಂಟು ಗಂಟೆ ನಿದ್ದೆ. ಅಂತಾದ್ರಲ್ಲಿ ಯಾಕೀಗಾಗುತ್ತೆ.

ಚಿಕ್ಕದರಲ್ಲಿ ತಂಗೀ ಜೊತೆ ಬೆಟ್ ಕಟ್ಟಿದ್ದೆ. ಊರಿಗೆ ಕರಕೊಂಡೋಗೋದಿಕ್ಕೆ ಮಾಮ ಬಂದೇ ಬರ್ತಾರೆ ಅಂತಾ. ಅದು ಹೇಗಪ್ಪಾ ಗೊತ್ತು ಅಂಥಾ ಕೇಳೋಳು. ನೀನು ೫೦ ಹೆಜ್ಜೆ ಹಿಂದೆ ನಡಕೊಂಡು ಹೋಗು ಅವರು ಬಂದೇ ಬರ್ತಾರೆ ಅಂತಿದ್ದೆ. ಹಾಗೇ ಉಲ್ಟಾ ನಡೀತಿದ್ವು. ಆಮೇಲೆ ಕಾಯೋದೇ ಕೆಲಸ ಬರ್ತಾರೆ ಬರ್ತಾರೆ ಅಂತ.

ಮದುವೆ ಆಯ್ತಾ, ಸಡನ್ನಾಗಿ ಇದ್ದ ಸಂಬಂಧ ಎಲ್ಲಾ ಕಿತ್ತೋಯ್ತು. ಯಾರಂದ್ರೆ ಯಾರೂ ಬರೋದು ನಿಂತೋಯ್ತು. ಮನೆ ಮುಂದೆ ರಂಗೋಲಿ ಬಿಡೋವಾಗೆಲ್ಲಾ ಅನಿಸ್ತಿತ್ತು. ಯಾರಿಗೋಸ್ಕರ ಈ ರಂಗೋಲಿ ಅಂತಾ. ಯಾರು ಬರ್ತಾರೆ ನೋಡೋಕೆ?

glitter1.jpgಎಷ್ಟು ಸಲ ನಮ್ಮನೆ ಬಾಗಿಲು ನೋಡ್ತಿದ್ದೆ. ಚಿಕ್ಕವನಿರುವಾಗ ಅಮ್ಮ ಹೇಳಿದ್ದ ಕಥೆ ಇನ್ನೂ ಜ್ಞಾಪಕ ಇತ್ತು. ಒಬ್ಬ ಮುದುಕಿ ಬರ್ತಾಳೆ. ಊಟ ಕೇಳ್ತಾಳೆ. ಒಳಗೆ ಕರಕೊಂಡ್ರೆ ನಮ್ಮನ್ನೇ ತಿನ್ತಾಳೆ. ಅದಕ್ಕೇನೆ ಅವಳು ಬಂದಾಗ ಬಾಗಿಲು ಮೇಲೆ “ನಾಳೆ ಬಾ” ಅಂತಾ ಇದ್ರೆ ಅವಳು ನಾಳೆ ಬರ್ತಾಳೆ. ಆವಾಗ್ಲೂ ಅದು “ನಾಳೆ ಬಾ” ಅಂತಾನೇ ಇರುತ್ತಲ್ಲಾ. ಅವಳು ನಾಳೆ, ನಾಳೆ, ನಾಳೆ ಅನ್ಕೊಂಡು ಒಳಕೆ ಬರಕ್ಕೇ ಆಗಲ್ಲಾ ಅಂತ. ನಾನೂ ಏನಾದ್ರೂ ಹಾಗೇ “ನಾಳೆ ಬಾ” ಅಂತಾ ಬರೆದ್ಬಿಟ್ಟಿದೀನಾ, ನಮ್ಮನೇಗೆ ಬರೋವ್ರೆಲ್ಲಾ ಅದನ್ನ ಓದಿಕೊಂಡು ನಾಳೆ ಬರ್ಬೇಕಂತೆ ಅಂತ ವಾಪಸ್ ಹೋಗ್ತಿದಾರಾ ಅಂತಾ ಬಾಗಿಲು ಎಷ್ಟು ಸಲಾ ನೋಡಿದ್ದೀನಿ.

ಬರುತಿಹನೆ ನೋಡೆ ರಾಜೀವ ಲೋಚನ… ಅಂತ ಆ ನೀಲಮೇಘಶ್ಯಾಮನಿಗಾಗಿ ಕಾಯ್ತಾ ಸಖೀ ಬಳಗ ಹಾಡುತ್ತಲ್ಲಾ ಅದು ಯಾಕೆ ತಟ್ಟುತ್ತೆ ಮನಸಿಗೆ. ಯಾಕೆ ನಾನೂ ಕಾಯ್ತೀನಿ.

ಅಮ್ಮಾ ಹೇಳ್ತಿದ್ರು. ಇವತ್ತು ನಮ್ಮನೆಗೆ ನೆಂಟರು ಬರ್ತಾರೆ ಅಂತಾ. ಹೆಂಗಪ್ಪಾ ಅಂತಂದ್ರೆ ಕಾಗೆ ಬಂದು ಮನೆ ಮೇಲೆ ಕೂತ್ಕೊಂಡು ಕಾ ಕಾ ಅಂತಲ್ಲಾ, ಅದೇನೇ ಗುರುತು ಅನ್ನೋರು. ಅಮ್ಮ ಹಾಗೆ ಹೇಳೋವರ್ಗೆ ನನಗೆ ಕಾಗೆ ಅಂದ್ರೆ “ಕಾಗೆಯೊಂದು ಹಾರಿ ಬಂದು…” ಹಾಡು ಮಾತ್ರ ಆಗಿತ್ತು. ಆದ್ರೆ ಅವತ್ತಿಂದ ಕಾಗೆ ಮೀನಿಂಗೇ ಚೇಂಜ್ ಆಗೋಯ್ತು. ಕಾಗೆ ಬರುತ್ತಾ, ಕಾಗೆ ಬರ್ಲಿ ಅಂತ ಕಾಯ್ತಾನೇ ಇದೀನಿ. ಕಾಗೆ ಕಾಗೆ ಕವ್ವಾ, ಯಾರು ಬರ್ತಾರವ್ವಾ, ಮಾವ ಬರ್ತಾನವ್ವ ಅನ್ನೊ ಹಾಡು ಕ್ಯಾಸೆಟ್ ನಿಂದ ಆಚೆ ಬೀಳ್ತಾ ಇದ್ರೆ ನನ್ನ ಮನಸ್ಸೂ ಕೇಳುತ್ತೆ ಯಾರು ಬರ್ತಾರವ್ವಾ ಅಂತಾ…

ಮದುವೆ ಮನೇಲಿ ಮಡಿಲಕ್ಕಿ ತಗೊಂಡು ಬರ್ತಾರೆ ಅಂತಾ ಹುಡುಗಿ ಕಾಯ್ತಾ ಇರ್ತಾಳೆ. ಕೂಸು ಹೊಟ್ಟೇನಲ್ಲಿ ಕೂತಾಗ ಹಸಿರು ಬಳೆ ಬರುತ್ತೆ ಅಂತಾ ಕಾಯ್ತಾಳೆ. ಮಗು ಕಣ್ಣರಳಿಸಿದರೆ ಇವಾಗಾದ್ರೂ ಬರ್ತಾರೆ ಅಂತ ಕಾಯ್ತಾಳೆ.

glitter1.jpgನನಗೇನಾಗಿದೆ ಹೀಗೆ ಕಾಯೋದಿಕ್ಕೆ? ಒಂಟಿ ಮನೇಲಿ ಕೂತು ಯೋಚನೆ ಮಾಡ್ತೀನಿ. ಇಷ್ಟೊಂದು ಹಾಸಿಗೆಗಳು ಇದೆ. ಎಷ್ಟೊಂದು ರೂಮಿದೆ. ಬೇಕು ಅಂದ್ರೆ ಬೇಕಾದಷ್ಟು ಟವಲ್ ಕಳಿಸ್ತಾರೆ. ನನ್ನತ್ರಾ ಎಷ್ಟೊಂದು ಹೊಸ ಟೂಥ್ ಬ್ರಷ್ ಇದೆ. ಆದ್ರೆ..ಆದ್ರೆ… ಯಾಕೆ ಯಾರೂ ಬರ್ತಾ ಇಲ್ಲ. ಕಾಲಿಂಗ್ ಬೆಲ್ ಸದ್ದಾಗುತ್ತೆ. ಆದ್ರೂ ಯಾರೂ ಬರ್ತಾ ಇಲ್ಲ.

೫೦ ಹೆಜ್ಜೆ ಹಿಂದಕ್ಕೆ ನಡೀಲಾ? ಆವಾಗ ಬರ್ತಾರ? ಅಥವಾ ೨೫ ವರ್ಷ ಹಿಂದಕ್ಕೆ ಜಾರಿ ಹೋಗಲಾ? ಎಲ್ಲಾರೂ ಸಿಗ್ತಾರಾ…?

‍ಲೇಖಕರು avadhi

July 26, 2007

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

3 ಪ್ರತಿಕ್ರಿಯೆಗಳು

 1. matukate

  It is fantastic work.

  Kannadada bahuteka barahagaarara melavanne illi tandu nillisiddeeri.

  Thanks a lot.

  ಪ್ರತಿಕ್ರಿಯೆ
 2. siddamukhi

  ondu reethiya sampradayika ithihaasada daakale.
  idondu janara nambike mattu nade ashte. neevu
  matte matte balyakke jaruvudu nimma baravanigeya
  lakshna. badukannu kattikoduvaga sankastagalu
  barutthave. idannu nimma baraha maremachuttadeyo
  enisuthade.
  – siddamukhi

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: