ಯಾರೀ Mr ಮಂಜುನಾಥ ಕುಣಿಗಲ್ ರಂಗಪ್ಪ?

ಮಂಜುನಾಥ್ ಕುಣಿಗಲ್  ದುಬೈನಲ್ಲಿ ಎಂಜಿನಿಯರ್. ಉದ್ಯೋಗದ ನಿಮಿತ್ತ ಆಫ್ಘಾನಿಸ್ತಾನಕ್ಕೆ ಭೇಟಿ ಕೊಟ್ಟು 32 ದಿನ ಅಲ್ಲಿದ್ದರು. ಅದರ ಅನುಭವ ಕಥನ ಬರೆಯುತ್ತಿದ್ದಾರೆ. ಅವರ ‘ಮಂಜನ್ ಲೋಕ’ದಲ್ಲಿ
ಅವರ ಬರಹಕ್ಕೆ ಅವರದ್ದೇ ಆದ ವಿಶಿಷ್ಟ ಶೈಲಿಯ ವಗ್ಗರಣೆಯಿದೆ. ಹಾಗಾಗಿ ಅವರ 32  ದಿನಗಳನ್ನೂ ನಿಮ್ಮ ಮುಂದೆ ಇಡುವ ಆಸೆ ‘ಅವಧಿ’ಗೆ. ಜೊತೆಗೆ ಅಮೇರಿಕಾ, ಇಂಗ್ಲೆಂಡ್ ಅಂತ ಆಡದೆ ದೇಶಗಳ ಪ್ರವಾಸ ಕಥನ ಓದಿದ ನಮಗೆ ನಮ್ಮನ್ನು ‘ಕಾಡುವ’ ಆಫ್ಘಾನಿಸ್ಥಾನದ ಬಗ್ಗೆ ತಿಳಿಯುವ ಹಂಬಲ.
ಅವರ ಪ್ರವಾಸ ಕಥನ ಆರಂಭವಾಗುವ ಮುನ್ನ ಯಾರು ಈ ಮಂಜುನಾಥ್ ಅಂತ ಪರಿಚಯ ಮಾಡಿಕೊಳ್ಳಿ. ಅವರೇ ಬರೆದಿದ್ದಾರೆ
ಇಲ್ಲಿ ನಾನು ’ನಾಮ’ ಅಂದಿದ್ದು ಒಂದೋ ಇಲ್ಲಾ ಮೂರೋ, ಅಡ್ಡವೋ ಇಲ್ಲಾ ಉದ್ದದ್ದೋ, ಬಿಳಿಯದೋ ಅಥವಾ ಕೆಂಪನೆಯದೋ ಅಲ್ಲ. ’ನಾಮ’, ’ನಾಮಧೇಯ’ ಅರ್ಥಾತ್ ಹೆಸರಿನ ಬಗ್ಗೆ ಅಷ್ಟೆ. ಧರ್ಮಸ್ಥಳ ಮಂಜುನಾಥನ ಕೃಪೆಯಿಂದ(!?) ಹುಟ್ಟಲಿದ್ದ ನನಗೆ ಹುಟ್ಟೋಕ್ ಮುಂಚೇನೆ ನನ್ನ ಹೆಸರು ನಿಗದಿ ಮಾಡಿಕೊಂಡು ಕಾಯ್ತಿದ್ರಂತೆ ನನ್ನ ತಂದೆ ತಾಯಿ. ಅಕಸ್ಮಾತ್ ಹೆಣ್ಣಾಗ್ಬಿಟ್ಟಿದ್ರೆ..? ಇದೆಯಲ್ಲ ಪೂರಕವಾದ ಹೆಸರು ’ಮಂಜುಳ’ಅಂತಂತಂದಿದ್ರು ಇವ್ರು. ಅಲ್ಲಾ.. ಮಂಜುನಾಥನಿಗೂ ಮಂಜುಳಳಿಗೂ ಎಲ್ಲಿಯ ಸಂಬಂಧ ಅಂತೀನಿ. ’ಮಂಜು’ವೆಂಬ ಸಮಾನ ಪದವಷ್ಟೇ ಸಾಕೆ? ಅದರ ಅರ್ಥದ ಗೋಜಿಗೂ ಹೋಗಬೇಡವೆ? ಬಹುತೇಕ ಮಂಜುಳರ ಹೆಸರಿನ ಹಿಂದಿನ ಗುಟ್ಟು ಇದೇ ಇರುತ್ತೆ ಅಂತ ನನಗೆ ಅಂದು ಅರಿವಾಯ್ತು. ಇಲ್ಲಿ ಇನ್ನೊಂದು ವೈರುಧ್ಯವನ್ನ ಪ್ರಸ್ತಾಪಿಸಲೇ ಬೇಕು. ನನ್ನಕ್ಕನ ಹೆಸರು ಪೂರ್ಣಿಮ. ಬಣ್ಣ ಸ್ವಲ್ಪ ಕಪ್ಪು!. ನನ್ನ ತಂದೆ ತಾಯಿಯರ ಪ್ರಕಾರ ನನ್ನಕ್ಕ ’ಅನ್ನಪೂರ್ಣೆಶ್ವರಿ’ ಕೃಪಾಪೋಷಿತಳಂತೆ!. ಅದಕ್ಕೆ ಅವಳ ಹೆಸರು ಪೂರ್ಣಿಮ. ಎಲ್ಲಿಂದೆಲ್ಲಿಗೆ ಸಂಬಂಧ?
ಗೆಳೆಯರಿಗೆಲ್ಲಾ ’ಮಂಜ’ನಾದ ನಾನು ಶಾಲೆ ಕಾಲೇಜುಗಳಲ್ಲಿ ’ಮಂಜುನಾಥ್.ಕೆ.ಆರ್’ ಎಂದು ಕರೆಯಲ್ಪಡುತ್ತಿದ್ದೆ. ಸರ್ನೇಮ್ ಅಂತಾರಲ್ಲ ಹಾಗೇ ನಮ್ ಕಡೆ ಊರಿನ ಹೆಸರು ಮತ್ತು ಅಪ್ಪನ ಹೆಸರಿನ ಮೊದಲಕ್ಷರ ನಮ್ ಹೆಸರಿನ ಸಂಗಾತಿಯಾಗಿಬಿಡುತ್ತಿತ್ತು. ಶಾಲೆಗಳಲ್ಲಿ ಮೇಷ್ಟ್ರುಗಳನ್ನ ನೇರವಾಗಿ ಅವರ ಹೆಸರನ್ನು ಸಂಬೋಧಿಸುವ ಬದಲು ಅವರ ಹೆಸರಿನ ಅಕ್ಷರಗಳಿಂದ ಕರೆಯಬೇಕಿತ್ತಲ್ವೇ? ಸಾ.ರಾ.ನ ಎಂಬ ನನ್ನ ಮೆಚ್ಚಿನ ಮೇಷ್ಟ್ರೊಬ್ಬರಿದ್ರು. ಸಾ.ರಾ. ನರಸಿಂಹಪ್ರಸಾದ್ ಎಂದು ಪೂರ್ಣ ಹೆಸರು. ’ಸಾರನ್ನ’, ’ಮೊಸರನ್ನ’ ಅಂತ ಧ್ವನಿಸೋ ಈ ಪದ ಪದ್ಧತಿ ನನಗೆ ಗೊಂದಲಮಯನನ್ನಾಗಿಸುತ್ತಿತ್ತು. ನನ್ನ ಹೆಸರನ್ನು ’ಮ.ಕು.ರ’ ಎಂದೋ ಎಲ್ಲಾ ’ಕು.ರ.ಮ’ಎಂದೋ ಸಂಬೋಧಿಸೋ ಸಾಧ್ಯತೆಗಳಿದ್ದವಾದ್ದರಿಂದ ಈ ಮೇಷ್ಟ್ರು ಕೆಲಸ ಬೇಡವೇ ಬೇಡ ಎಂಬ ತೀರ್ಮಾನಕ್ಕೆ ಅಂದೇ ಬಂದಿದ್ದೆ.
ನಾಮವೂ ಸೇರಿದಂತೆ ಎಲ್ಲವೂ ಸರಿಯಾಗೇ ಇತ್ತು, ನಾನು ವಿದೇಶಕ್ಕೆ ಹಾರುವ ಪ್ರಯತ್ನಕ್ಕೆ ಕೈ ಹಾಕುವವರೆಗೆ. ಪಾಸ್ಪೋರ್ಟ್ನಲ್ಲಿ ನಮ್ಮ ಹೆಸರು ಪೂರ್ಣ ಪ್ರಮಾಣದ್ದಾಗಿರಬೇಕು. ಅಂದರೆ ಊರಿನ ಮತ್ತು ಅಪ್ಪನ ಮೊದಲಕ್ಷರ ಇಲ್ಲಿ ವಿಸ್ತಾರವಾಗುತ್ತೆ. ಹಾಗಾಗಿ ನನ್ನ ಹೆಸರು ’ಮಂಜುನಾಥ ಕುಣಿಗಲ್ ರಂಗಪ್ಪ’ ಎಂದಾಯ್ತು. ಇಲ್ಲಿ ಬಹುಶಹ ನನ್ನ ಗಮನಕ್ಕೆ ಬಾರದ ಒಂದು ಪ್ರಮಾದ ಜರುಗಿಹೋಯ್ತು. ಕೊನೆಯ ಹೆಸರೇ ನಮ್ಮ ನೈಜ ನಾಮವೆನ್ನುವುದು ಅಂತರ್ರಾಷ್ಟ್ರೀಯ ನಿಯಮವಂತೆ. ಅಂದರೆ ಈಗ ನನ್ನ ನಿಜ ನಾಮಧೇಯ ನಮ್ಮಪ್ಪನದು.

ಆಗ ತಾನೇ ದುಬೈ ವಿಮಾನ ನಿಲ್ದಾಣದ ಹೊರಗೆ ಬಂದು ’ವೆಲ್ ಕಮ್ ಟು ಮಂಜುನಾಥ್ & ಶ್ರೀನಿವಾಸ್’ ಎಂಬೆರೆಡು ಹೆಸರಿನ ನಾಮ ಫಲಕವನ್ನ ಹಿಡಿದಿದ್ದ ಚಾಲಕನೊಬ್ಬನನ್ನು ನೋಡಿ ಅವನ ಬಳಿ ನಾನೇ ಮಂಜುನಾಥನು ಎಂದೆ. ’ಹೌದೇ ಹಾಗಾದರೆ ಸ್ವಲ್ಪ ಹೊತ್ತು ಇಲ್ಲೇ ನಿಲ್ಲಿ, ಶ್ರೀನಿವಾಸ್ ನವರನ್ನೂ ಒಟ್ಟಿಗೆ ಕರೆದೊಯ್ಯೋಣವೆಂದ’. ಸುಮಾರು ಹೊತ್ತಿನ ತರುವಾಯ ಬಂದ ಇಬ್ಬರು, ನಾವು ’ಮಂಜುನಾಥ್ ಮತ್ತು ಶ್ರೀನಿವಾಸ್’ ಅನ್ನಬೇಕೆ? ಮತ್ತೆ ಇವರ್ಯಾರು.. ಎಂದು ಅನುಮಾನ ದೃಷ್ಟಿಯಿಂದಲೇ ನನ್ನ ಪಾಸ್ಪೋರ್ಟನೆಡೆಗೆ ನೋಡಿದ ಆ ಚಾಲಕ ’ಅಲ್ರೀ ನಿಮ್ಮ ಹೆಸರು ರಂಗಪ್ಪ ಅಲ್ವೇ.. ?’ಅಂದ. ಅಂದು ನನ್ನ ಅಧಿಕೃತ ಸ್ವಂತ ಹೆಸರು ನಮ್ಮಪ್ಪನದೇ ಎಂದು ಖಚಿತವಾಗಿತ್ತು.
ನಾನು ನೆಲೆಸಿರುವ ದುಬೈನಲ್ಲಿ ಈಗ ನನ್ನನ್ನು ನನ್ನ ಸಹೋದ್ಯೋಗಿಗಳು ’ರಂಗಪ್ಪ’ ಎಂದೋ ಅಥವಾ’ಕುಣಿಗಲ್ ’ಎಂದೋ, ಅಪರೂಪಕ್ಕೆ ’ಮಂಜುನಾಥ್’ ಎಂದೋ ಸಂಬೋಧಿಸುತ್ತಿದ್ದಾರೆ. ನನಗೆ ಕಿಂಚಿತ್ ಬೇಸರವಿಲ್ಲ!. ನನ್ನನ್ನು ಹಾಗೆ ಸಂಬೋಧಿಸಿದಾಗಲೆಲ್ಲಾ ನನ್ನ ಊರು ಹಾಗೂ ನನ್ನಪ್ಪನ ಮೇಲಿನ ಅಭಿಮಾನ ಜಾಗೃತಿಗೊಳ್ಳುತ್ತಿರುತ್ತದೆ. ಆದರೆ ವಿಷಯ ಅದಲ್ಲ, ಉಚ್ಚಾರಣೆಯದು. ನನ್ನ ಸುತ್ತ ಮುತ್ತ ಇರುವವರೆಲ್ಲಾ ಯೂರೋಪ್, ಆಫ್ರಿಕಾ, ಏಶಿಯಾದ ಹಲವು ದೇಶಗಳು ಸೇರಿದಂತೆ ಬಹುತೇಕ ಅನ್ಯ ದೇಶದವರೇ. ಅವರ ಬಾಯಲ್ಲಿ ಸಿಕ್ಕ ನನ್ನ ಹೆಸರು ನರಳುತ್ತಾ ಇದೆ. ಕ್ಯುಣಿಗಲ್, ಕುನಿಜಲ್, ರ್ಯಾಂಗಪ್ಪ, ರಣ್ಗಪ್… ಅಯ್ಯೋ.. ಇನ್ನು ಅದೆಷ್ಟು ರೀತಿಯೋ! ನನಗಂತೂ ಹಾಗೆ ನಾಲಿಗೆ ತಿರಿಗಿಸಲಿಕ್ಕೂ ಕಷ್ಟ, ಇನ್ನು ಲಿಪಿಯಲ್ಲಿ ಕೂಡಿಡುವುದು ಅಸಾಧ್ಯದ ಮಾತು. ಫಿಲಿಪೈನ್ಸ್ ಮೂಲದ ನನ್ನ ಸಹಾಯಕಿಯೊಬ್ಬಳು ನನ್ನನ್ನು ’ಮ್ಯಾಂಝುನಾಥ್’ ಎಂದೇ ಸಂಬೋಧಿಸುವುದು. ಆಕೆಗೆ ನನ್ನ ಹೆಸರನ್ನು ತಿದ್ದಿ ತಿದ್ದಿ ಹೇಳಿ ಸ್ವಲ್ಪ ಹಿಡಿತಕ್ಕೆ ತರುವಲ್ಲಿ ಯಶಸ್ವಿಯಾಗಿದ್ದೇನೆ. ಈಗ ’ಮೆಂಝುನಾಥ್’ ಅನ್ನುತ್ತಿದ್ದಾಳೆ.
ಇಲ್ಲಿನ ಕಾಲ್ ಸೆಂಟರ್ ನವರ ಕಾಟವನ್ನು ಹೇಗೆ ತಡಿಯೋದು ಅಂತ ಗೊತ್ತಾಗ್ತಾ ಇಲ್ಲ ನೋಡಿ. ಕ್ರೆಡಿಟ್ ಕಾರ್ಡೋ, ಸಾಲವೋ, ಕೆಲಸ ಬೇಕಾಗಿದೆಯೇ ಅಥವಾ ಮತ್ತಿನ್ನೇನೋ ಸಲುವಾಗಿ ಕರೆ ಮಾಡಿ ಸರಾಗವಾಗಿ ಮಾತಾಡುವ ಆ ಹುಡುಗಿ ನನ್ನ ಹೆಸರನ್ನ ಉಚ್ಚರಿಸೋ ಅ ಕ್ಷಣ ಮಾತ್ರ ತಬ್ಬಿಬ್ಬು. ’ಮ್ಯಾಂಜುನಾ…ತ್……. ಕ್ಯುನಿಗಲ್….ರ್ಯಾಂಗ…ಪ್ಪ್.. ’ ಎಂದು ಚಡಪಡಿಸೋ ಆಕೆಯ ಪರಿಸ್ಥಿತಿಗೆ ನಗಬೇಕೋ ಅಥವಾ ಸಿಟ್ಟಾಗಬೇಕೋ ತಿಳಿಯೋಲ್ಲ. ಇತ್ತೇಚೆಗಂತೂ ಎಷ್ಟು ರೋಸಿಹೋಗಿದ್ದೇನೆಂದರೆ ಅತ್ತಲಿಂದ ನನ್ನ ಹೆಸರಿನ ಪ್ರವರ ಬರುವ ಮುಂಚೆಯೇ ನನ್ನ ಹೆಸರನ್ನು ನಾನೇ ಗಟ್ಟಿಯಾಗಿ ಹೇಳಿ ಅವರ ಕೆಲಸವನ್ನು ಸರಾಗವಾಗಿಸಿದ್ದೇನೆ. ಇನ್ನು ಇಲ್ಲಿನ ಕ್ಯಾಕರಿಸುವ ಶೈಲಿ ಉಚ್ಚಾರಣೆಯ ಅರಬ್ಬಿಗಳ ಬಾಯಿಗೆ ನನ್ನ ಹೆಸರು ಸಿಕ್ಕಿ ಪದಗಳಲ್ಲಿ ಬಂಧಿಸಲಾಗದ ಹಾಗೆ ’ಶೇಕ್’ ಅಗುತ್ತಿದೆ.
’ಬೆಳದಿಂಗಳ ಬಾಲೆ’ಚಲನಚಿತ್ರದ ನಾಯಕ ’ರೇವಂತ್’ತನ್ನ ನಾಮಾರ್ಥವನ್ನ ತಿಳಿಯಲು ಅದೆಷ್ಟು ಪಾಡು ಪಡಬೇಕಾಯ್ತು. ಕೊನೆಗೂ ಸಿಕ್ಕಿದ ಅರ್ಥವೇನು? ’ಸಮುದ್ರ ದಂಡೆಯ ಮೇಲೆ ಕುದುರೆಯ ಮೈ ಉಜ್ಜುವವ’ನೆಂದು!. ನಮ್ಮಪ್ಪನಾಗಿದ್ದರೆ ’ರೇವಣ್ಣ ಸಿದ್ದೇಶ್ವರ’ನ ಕಟಾಕ್ಷ ನೀನು ಅಂತಿದ್ದರೇನೋ!. ಇಲ್ಲಿಂದ ಶುರುವಾಯ್ತು ನನ್ನ ಹುಚ್ಚು. ಕಂಡ ಕಂಡವರಿಗೆಲ್ಲಾ ಅವರ ನಾಮಾರ್ಥವೇನೆಂದು ಹುಳು ಬಿಡುವುದು.
ನನ್ನ ಹೆಸರಿನ ವಿಷಯವನ್ನ ಸ್ವಲ್ಪ ಒತ್ತಟ್ಟಿಗಿಡೋಣ. ಪ್ರಪಂಚದ ಹಲವಾರು ಮೂಲೆಯ ಜನರು ನನ್ನೊಟ್ಟಿಗೆ ಕೆಲಸ ನಿರ್ವಹಿಸುತ್ತಿದ್ದಾರೆ ಅಂತ ಹೇಳಿದ್ದೆ ಅಲ್ವೇ?. ಅವರ ಹೆಸರಿನ ಘಮ್ಮತ್ತನ್ನೂ ಸ್ವಲ್ಪ ಇಲ್ಲಿ ಹೇಳಲೇಬೇಕು. ನನ್ನ ಮೇಲಧಿಕಾರಿ ಜರ್ಮನ್. ಹೆಸರು ’ಸ್ಟೆಫನ್ ಬೈಸ್’ಎಂದು. ಒಮ್ಮೆ ನಿಮ್ಮ ಹೆಸರಿನ ಅರ್ಥವೇನು? ಎಂದು ಕೇಳಿದ್ದೆ. ’ಹೆಸರಿಗೆ ಅರ್ಥವಿರಬೇಕೆ?’ ಆತ ನನಗೆ ಮರುತ್ತರಿಸಿದ್ದ. ನನ್ನ ಹೆಸರಿನ ಮೂಲಾರ್ಥ, ಗೂಡಾರ್ಥಗಳನ್ನೆಲ್ಲಾ ಸವಿವರವಾಗಿ ತಿಳಿಸಿ, ಬೆಳದಿಂಗಳ ಬಾಲೆಯ ನಾಯಕನ ಕಥೆಯನ್ನೂ ಹೇಳಿದ ಮೇಲೆ ಆತನಿಗೆ ಕುತೂಹಲ ಹೆಚ್ಚಾಗಿತ್ತು. ತನ್ನೆಲ್ಲಾ ಜರ್ಮನ್ ಗೆಳೆಯರನ್ನ, ಸಂಬಂಧಿಕರನ್ನ ವಿಚಾರಿಸಿಲಾಗಿ ಎಲ್ಲರೂ ನಾ ಕಾಣೆ ಎಂದರುಹಿದರಷ್ಟೇ. ಆತನಿಗೀಗ ತಲೆಯಲ್ಲಿ ಹುಳ ಕೊರೆಯಹತ್ತಿತ್ತು. ಒಂದು ದಿನ ಮುಖವರಳಿಸಿಕೊಂಡು ನನ್ನ ಬಳಿ ಬಂದ ಆತ ’ಸ್ಟೆಫನ್’ ಅಂದರೆ ’ಕಿರೀಟ’ವಂತೆ ಆದರೆ ’ಬೈಸ್’ನ ಅರ್ಥ ಸಿಗುತ್ತಿಲ್ಲವೆಂದ. ’ಜೀವನದ ನಲವತ್ತಾರು ವಸಂತಗಳನ್ನು ಕಳೆದ ಬಳಿಕ ಕೊನೆಗೂ ತನ್ನ ಅರ್ಧ ನಾಮದ ಅರ್ಥ ತಿಳಿದ ಭೂಪ ನೀನು’ ಎಂದೆ. ಆತನನ್ನು ’ಕಿರೀಟಿ’ ಎನ್ನೋಣವೇ?.
ಆತನಿಗೀಗ ಆ ಹುಳ ಅದೆಷ್ಟರ ಮಟ್ಟಿಗೆ ಕೊರೆದಿದೆಯೆಂದರೆ ತನ್ನೆಲ್ಲಾ ಸಹ ಕಾರ್ಮಿಕರನ್ನು ಒಮ್ಮೆ ಕರೆದು ನಿಮ್ಮ ಹೆಸರುಗಳ ಅರ್ಥವೇನೆಂದು ಅರುಹಿರೆಂದು ಆದೇಶವನ್ನೇ ಹೊರಡಿಸಿಬಿಟ್ಟ. ಈಗ ಕಂಗಾಲಾಗುವ ಸರದಿ ಎಲ್ಲರದ್ದಾಗಿತ್ತು, ನನ್ನನ್ನು ಹೊರತುಪಡಿಸಿ. ಅಯಂಡೀ ಲಕಪ್, ಘಟ್ಟಾಝ್ ಕೋಝ, ವಿರ್ಚುಸಿಯೊ ಜೋಯೆಲ್, ಎಲಿಯ ಸಿಸಿಲ್ಲ ವೆಗಾಸ್, ಲುಬ್ರಿನ್ ಜೆರೊಮ್, ಗ್ಯಾಝ್ಮೆಂಡ್ ಸೆಕ, ಅದ್ರೈಜ ಸದ್ರಿಜಿ, ಫಿಸ್ನಿಕ್ ಸೂಸೆ, ಗಿಗಿ ವಿರ್ಗಿನಿಯ ಎಂಬ ತರಹಾವೇರಿ ನಾಮಧೇಯವುಳ್ಳ ಈ ಮಹಾಶಯರು ಪಟ್ಟ ಪಾಡು ವರ್ಣಿಸಲಸದಳ. ಅರ್ಥಾನ್ವೇಷಣೆಯಲ್ಲಿ ಕೊನೆಗೂ ಯಾರೂ ಯಶಸ್ವಿಯಾಗಲಿಲ್ಲವೆನ್ನಿ. ಅರ್ಥವಿಲ್ಲದ ಹೆಸರನ್ನು ಇಟ್ಟುಕೊಂಡಿದ್ದೀರೆಂದು ಹೀಗಳೆಯುವ ಸರದಿ ’ಕಿರೀಟಿ’ಯದಾಗಿತ್ತು. ಹೆಸರಿಗೂ ಅರ್ಥವಿರಬೇಕೆ ಎಂಬ ಭಾವನೆಯ ಅವರೆಲ್ಲರೂ ತಮ್ ತಮ್ಮ ಮುಖ ನೋಡಿಕೊಳ್ಳುತ್ತಿದ್ದರಷ್ಟೇ. ನನಗಿಲ್ಲಿ ಒಂದಂಶ ಅರ್ಥವಾದದ್ದೇನೆಂದರೆ ಭಾರತವೂ ಸೇರಿದಂತೆ ಕೆಲವೇ ರಾಷ್ಟ್ರಗಳಲ್ಲಿ ಮಾತ್ರವೇ ಹೆಸರಿನ ಅರ್ಥಕ್ಕೆ ಪ್ರಾಮುಖ್ಯತೆಯನ್ನು ಕೊಡುವುದು ಎಂದು.
ಒಮ್ಮೆ ಕಾರ್ಯ ನಿಮಿತ್ತ ಅಮೆರಿಕಾ ದೇಶದ ಅಭಿಯಂತರರನ್ನ ಭೇಟಿ ಮಾಡುವ ಅವಕಾಶ ಒದಗಿತ್ತು. ಅವರಲ್ಲೆರ ಹೆಸರಿನ ಅರ್ಥವೇನೆಂದು ಕೇಳುವ ಅಧಿಕ ಪ್ರಸಂಗಿತನದ ಪರಮಾವಧಿತನ ಬೇಡವೆಂದು ಮನದಲ್ಲಿ ಲೆಕ್ಕಾಚಾರಹಾಕುತ್ತಿದ್ದಾಗಲೇ ಈ ನಮ್ಮ ’ಕಿರೀಟಿ’ಅದಾಗಲೇ ಅವರೆನ್ನೆಲ್ಲಾ ಪ್ರಶ್ನಿಸಿ ಮುಸಿ ಮುಸಿ ನಗುತ್ತಿದ್ದ. ಒಮ್ಮೆಗೆ ತಬ್ಬಿಬ್ಬಾದರೂ ಕೆಲವರು ಅವರ ನಾಮಾರ್ಥವನ್ನು ಅವರದೇ ರೀತಿಯಲ್ಲಿ ವಿವರಿಸಿದರು. ಮಾರ್ಕ್ ಹಿಲ್ ಮ್ಯಾನ್, ಡೇವಿಡ್ ಪೋಸ್ಟ್, ಅನಿಡಾ ಲಿವಿಂಗ್ಸ್, ಮಾರ್ಕ್ ಲುಮ್ಮೆರ್ಮ್ಯಾನ್, ಹೆನ್ರಿ ಸ್ಟೋನ್ ಎಂಬೆಲ್ಲಾ ಹೆಸರುಗಳುಳ್ಳ ಅವರ ನಾಮಾರ್ಥ ಊಹಿಸಿಕೊಂಡರೇ ನಗು ಬರುತ್ತೆಂದು ಹೇಳುತ್ತಿದ್ದ ಈ ನಮ್ಮ ’ಕಿರೀಟಿ’ಗೆ ಖುಷಿಯೋ ಖುಶಿ. ಸದ್ಯ ತನ್ನ ಹೆಸರು ಈ ಎಲ್ಲರಿಗಿಂತಲೂ ಚೆನ್ನಾಗಿದೆಯೆಂದು!
ಇಲ್ಲಿಂದ ಆರಂಭವಾದ ನಾಮಾರ್ಥಗಳ ಸಂಶೋಧನೆ ಎಗ್ಗು ಸಿಗ್ಗಿಲ್ಲದೇ ನಡೆಯುತ್ತಲೇ ಇದೆ. ಶ್ರೀಮಾನ್ ’ಕಿರೀಟಿ’ಯವರು ನಮ್ಮ ಸಂಶೋಧನೆಯ ಪ್ರಾಯೋಜಕರೂ, ಸಹಸಂಶೋಧಕರೂ ಸಹ ಆಗಿದ್ದಾರೆ. ಇಷ್ಟರಲ್ಲೇ ಸಂಶೋಧನೆಯ ಪ್ರಥಮ ಫಲವಾಗಿ ಒಂದು ಮಹಾ ಪ್ರಬಂಧವೂ ಹೊರಬರಲಿದೆ. ಈ ಮಹಾನ್ ಕಾರ್ಯಾರ್ಥವಾಗಿ ನಿಮ್ಮೆಲ್ಲರ ನಾಮ-ನಾಮಾರ್ಥಗಳು ಬೇಕಾಗಿದೆ. ಕಳುಹಿಸುವಿರಲ್ಲವೇ..?

‍ಲೇಖಕರು avadhi

March 30, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

3 ಪ್ರತಿಕ್ರಿಯೆಗಳು

 1. Pradeep

  ಇದುನ್ನ ಓದಿ ನನ್ನ ಬಾಲ್ಯ ನೆನಪಾಗ್ತಿದೆ… ನಾವು friends 3rd-4th classಗೆ ಬರೂದ್ರಲ್ಲಿ ನಮ್ಮ ಹೆಸರ ಅರ್ಥ ಹುಡುಕೋಕೆ ಶುರು ಮಾಡಿದ್ವೇ.. 😉
  ನನ್ನ ಹೆಸರು ಪ್ರದೀಪ್… ಪ್ರದೀಪ ಅಂದ್ರೆ ದೀಪವನ್ನು ಬೆಳಗಿಸುವವನು ಅಂತ…. but, ಎಲ್ಲದ್ರೋ light ಉರಿತ್ತಿದ್ರೆ off ಮಾಡ್ತೀನಿ..
  ನಾನು observe ಮಾಡಿರೋ ಪ್ರಕಾರ, ಬಹಳ ಕಡೆ ಹೆಸರಿಗೂ ಅವರಿಗೂ(behavior/look) opposite ಇರುತ್ತೆ…
  ex: ನನ್ನ ತಮ್ಮನ ಹೆಸರು ಪ್ರಶಾಂತ, but, ಯಾವಾಗಲು ಶಾಂತವಾಗಿರೋಲ್ಲಾ

  ಪ್ರತಿಕ್ರಿಯೆ
 2. yashoda

  nimma namarthada pajithiyannu nagu bantu.namma
  deshada hesarugalu videshiyara bayalli nanarthagalannu keli koduvanthiddu avara pranounciationgalu vivida artha niduttada. nanna hesarigu ondondu artha yide.
  naanu vitlapindiya dina janisiddakke yashoda yennuva hesaru bantu.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: