ಬಹುರೂಪಿ
ಮುಖ ಮುಖವೂ ಮುಖವಾಡವ
ತೊಟ್ಟು ನಿಂತ ಹಾಗಿದೆ
ಆಡುತಿರುವ ಮಾತಿನೊಳಗೆ
ಹೃದಯ ಕಾಣದಾಗಿದೆ
ಯಾವುದೀ ಪ್ರವಾಹವು…
ರೇಡಿಯೋ ಕಿವಿ ಹಿಂಡಿದ ತಕ್ಷಣ ತೂರಿ ಬಂದ ಹಾಡು ಇದು. ಯಾಕೋ ಈ ಹಾಡು ನನ್ನನ್ನ ಒಂದು ಕ್ಷಣ ಹಿಡಿದು ನಿಲ್ಲಿಸುತ್ತದೆ. ಏನೋ ತಳಮಳ ಹುಟ್ಟು ಹಾಕುತ್ತದೆ. ಯಾಕೋ ಗೊತ್ತಿಲ್ಲ, ಈ ಹಾಡು ಕೇಳಿದ ದಿನವೆಲ್ಲಾ ನಾನು ಗೊತ್ತಿಲ್ಲದಂತೆ ಈ ಸಾಲುಗಳನ್ನೇ ಗುನುಗುನಿಸುತ್ತಾ ಇರುತ್ತೇನೆ.
ಎದೆ ಎದೆಗಳ ನಡುವೆ ಇರುವ
ಸೇತುವೆಗಳು ಕುಸಿದಿವೆ
ಭಯ ಕಂಪನ ತಲ್ಲಣಗಳ
ವಾದ್ಯವೃಂದ ಮೊಳಗಿದೆ
ಯಾವುದೀ ಪ್ರವಾಹವು…
ಅವತ್ತು ಡಿಸೆಂಬರ್ ಆರು. ನಾನು ದೂರದ ಊರಿಗೆ ಇನ್ನೇನು ಬಸ್ ಹತ್ತಬೇಕಿತ್ತು. ಮನೆಯೊಳಗೆ ಮನೆಯೊಡತಿ ಇರಲಿಲ್ಲ. ಹೀಗಾಗಿ ಮನೆ ಬೀಗದ ಕೈ ಪಕ್ಕದ ಮನೆಯವರಿಗೆ ದಾಟಿಸಿಬಿಡೋಣ ಅಂತ ಹೋಗಿ ಅವರ ಮನೆಯ ಬಾಗಿಲು ಬಡಿದೆ. ಸದ್ದೇ ಇಲ್ಲ. ಇನ್ನಷ್ಟು ಹೊತ್ತು ಬಡಿದೆ. ಅವರ ಮನೆ ಯಾವಾಗಲೂ ಕಲಕಲ ಎನ್ನುತ್ತಿರುತ್ತದೆ. ಅಂತಹದ್ದರಲ್ಲಿ ಯಾರೂ ಇಲ್ಲ ಎಂಬುದನ್ನೇ ನನಗೆ ನಂಬಲಿಕ್ಕಾಗಲಿಲ್ಲ. ವಾಪಸ್ ಬಂದೆ. ಸುಮಾರು ಹೊತ್ತಾಯಿತು. ಆ ಮನೆಯ ಕಿಟಕಿ ತೆರೆದ ಸದ್ದು. ನಂತರ ಸ್ವಲ್ಪ ಸಮಯದ ಬಳಿಕ ಗುಸುಗುಸು. ಸ್ವಲ್ಪ ಸಮಯ ಕಳೆದು ಬಾಗಿಲು ತೆರೆದ ಸದ್ದು. ಮನೆಯೊಡೆಯ ಹೊರಗೆ ಬಂದ. ಅತ್ತಿತ್ತ ನೋಡಿದ. ಪ್ರಶ್ನೆಗಳ ಹುತ್ತವೇ ಇತ್ತು ಆತನ ಮುಖದಲ್ಲಿ. ನಂತರ ನನ್ನ ಮನೆಯ ಬಾಗಿಲು ಬಡಿದ. ನೀವು ಕಾಲಿಂಗ್ಬೆಲ್ ಮಾಡಿದ್ರಾ ಅಂದ. ಹೌದು ಎಂದೆ. ತಕ್ಷಣ ಅವನ ಒಂದು ನಿಡುಸುಯ್ಯುವಿಕೆ ಕೇಳಿಸಿತು. ಚಿಂತೆಯ ಗೆರೆಗಳಲ್ಲಿ ಒಂದಿಷ್ಟಾದರೂ ಕಡಿಮೆಯಾಯಿತು. ಏಕೆ ಅಂದೆ. ಸಾರ್, ಇವತ್ತು ಡಿಸೆಂಬರ್ 6 ಅಲ್ವಾ, ಭಯ ಆಗ್ತಿದೆ. ಎಲ್ಲೂ ಹೋಗಿಲ್ಲ ಅಂದ.
ನನಗೆ ಅದುವರೆಗೆ ಅದು ಆರೋ, ಏಳೋ ಒಂದೂ ಗೊತ್ತಿರಲಿಲ್ಲ. ನವೆಂಬರ್ಗೂ, ಡಿಸೆಂಬರ್ಗೂ ಅಂತಹ ವ್ಯತ್ಯಾಸವೇನಿರಲಿಲ್ಲ. ಆದರೆ ಕ್ಯಾಲೆಂಡರ್ ಪುಟಗಳು ಹಲವರಲ್ಲಿ ಎಂತಹ ನಿಟ್ಟುಸಿರುಗಳನ್ನ, ತಲ್ಲಣಗಳನ್ನ ಭಯ ಕಂಪನವನ್ನ ಹುಟ್ಟಿಸುತ್ತದೆ ಎಂದು ಗೊತ್ತಾಯಿತು.
ನೆನಪಾಯಿತು:ಸ್ಕೂಲ್ನಿಂದ `ಆಲಿಬಾಬಾ 40 ಮಂದಿ ಕಳ್ಳರು’ ನಾಟಕಕ್ಕೆ ಕರಕೊಂಡು ಹೋಗ್ತೀವಿ ಅಂತ ಹೇಳಿದ್ದರು. ಸಖತ್ ಖುಷಿ ಆಗಿತ್ತು. ರಾತ್ರಿಯಿಡೀ ಅಪ್ಪನ ಹಿಂದೆ ಮುಂದೆ ಬಿದ್ದು, ಕಾಲಿಗೆ ತೊಡರುವ ಹಾಗೆ ನಿಂತುಕೊಂಡು ನಾಟಕದ ಟಿಕೆಟ್ಗೆ ಬೇಕಾದ ಕಾಸು ಸಂಪಾದಿಸಿದ್ದೆ. ನಾಟಕ ಆರಂಭವಾಯಿತು. ಸಭಾಂಗಣದ ತುಂಬಾ ಇನ್ನೂ ಮೀಸೆ ಇಲ್ಲದ, ಕಲ್ಪನೆಗಳ ಲೋಕ ಕರಗದವರ ದಂಡು. ನಾಟಕದ ಶುರುವಿಗೇ ಹಾಡು.
ಅಲ್ಲಾ ಓ ಅಲ್ಲಾ, ನಿನ್ನಂತವ್ರಿನ್ನಿಲ್ಲ
ಅಲ್ಲಾ ಓ ಅಲ್ಲಾ ನಿನ್ನಂತವರು ಇನ್ನಿಲ್ಲ
ಅಲ್ಲಾನೂ ಒಂದೇ, ಬೆನಕಾನೂ ಒಂದೇ
ಅಲ್ಲಾ ಓ ಅಲ್ಲಾ ನಿನ್ನಂತವರಿನ್ನಿಲ್ಲ
ಅಂತಾ, ಅರೇ, ಗಣೇಶನ್ನ ಕೂಡಿಸ್ಕೊಂಡು ಎಷ್ಟು ಚೆನ್ನಾಗಿ ಅವನನ್ನೇ ಅಲ್ಲಾ ಮಾಡಿದ್ದಾರಲ್ಲಾ ಅನ್ನಿಸ್ತು. ಅಲ್ಲಾನೂ ಒಂದೇ, ಬೆನಕಾನೂ ಒಂದೇ ಆದಾಗ ಅಲ್ಲ, ಅಲ್ಲ ಅನ್ನೋಕೆ ಆಗ್ಲೇ ಇಲ್ಲ. ಹಾಗಿದ್ವಿ.
ಕುಂಟೇಬಿಲ್ಲೆ, ಐಸ್ಪೈಸ್ ಆಡ್ತಾ ಇದ್ದ ನಮ್ಮ ಗ್ಯಾಂಗಲ್ಲಿ ಎಷ್ಟೊಂದು ಜನ ಸಾಬರಿದ್ರು. ನದೀಂ, ಶಮೀಂ, ತಬಸುಮ್ ದೊಡ್ಡ ಲಿಸ್ಟೇ ಇತ್ತು. ಎಲ್ಲಾರೂ ಎಲ್ಲಾ ಆಟ ಆಡ್ತಿದ್ವಿ, ಎಲ್ಲಾರ ಮನೆಗೂ ನುಗ್ಗಿ `ಹೋ’ ಅಂತ ಗದ್ದಲ ಎಬ್ಬಿಸ್ತಾ ಇದ್ವಿ, ಒಬ್ಬಟ್ಟೂ ಖಾಲಿ ಆಗ್ತಿತ್ತು. ಮನೇಯಿಂದ ಆಟಕ್ಕೆ ಬರೋವಾಗ ಅವರವರ ಮನೆ ಸ್ವೀಟ್ ಕದ್ದುಕೊಂಡು ಆಚೆ ಬರ್ತಾ ಇದ್ರು. ಮೂಲೇಲಿ ಯಾರಿಗೂ ಕಾಣದೆ ಕೂತು ಎಲ್ಲರೂ ಉಡಾಯಿಸಿದ್ವಿ.
ಅದು ಹೇಗೆ ಈ ಹಾಡು ಬಂತೋ ಗೊತ್ತಿಲ್ಲ. ಎಷ್ಟು ಚೆನ್ನಾಗಿ ಒಳ್ಳೇ ನಮ್ಮ ಚಿಳ್ಳೆಪಿಳ್ಳೆಗಳ ಗ್ಯಾಂಗ್ನ ರಾಷ್ಟ್ರಗೀತೆ ಏನೋ ಅನ್ನೋ ಥರಾ ಮಾಡ್ಕೊಂಡಿದ್ವಿ.
ಹಿಂದೂ ಮುಸ್ಲಿಂ ಅಲಗ್ ಅಲಗ್ ಹೈ
ದೋನೋಂ ಕೀ ಭಗವಾನ್ ಏಕ್ಹೈ
ಹಿಂದೂ ಕರ್ತಾ ಹೈ ನಮಸ್ಕಾರ್
ಮುಸ್ಲಿಂ ಕರ್ತಾ ಹೈ ಸಲಾಂ
ನಮಸ್ಕಾರ್ ಸಲಾಂ ಅಲಗ್ ಅಲಗ್ ಹೈ
ದೋನೋಂಕಾ ಹಾಥ್ ಏಕ್ಹೈ
ಅರೆ ಹೋ ಹಿಂದೂ ಖಾತಾ ಹೈ ಕಿಚಡಿ
ಮುಸ್ಲಿಂ ಖಾತಾ ಹೈ ಬಿರಿಯಾನಿ
ಕಿಚಡಿ-ಬಿರಿಯಾನಿ ಅಲಗ್ ಅಲಗ್ ಹೈ
ದೋನೋಂ ಕೀ ಚಾವಲ್ ಏಕ್ ಹೈ
ಹೀಗೆ ಹಾಡು ಬೆಳೆಯುತ್ತಾ ಹೋಗುತ್ತಿತ್ತು. ನೀವು ಯಾವ ಒಂದು ವಿಷಯವನ್ನೇ ಎತ್ತಿಕೊಳ್ಳಿ ಅದರಲ್ಲಿ ಹಿಂದೂ ಮುಸ್ಲಿಂ ಇಬ್ಬರಿಗೂ ಇರುವ ಸಾಮಾನ್ಯ ಎಳೆಯನ್ನು ಈ ಹಾಡು ಎತ್ತಿ ತೋರಿಸುತ್ತಾ ಇತ್ತು.
ಒಂದು ದಿನ ಅದೇ ನನ್ನ ಫ್ರೆಂಡ್ಸ್ ಮನೆಗೆ ಹೋದೆ. ಆಗ ಇದ್ದದ್ದು ದೂರದರ್ಶನ ಒಂದೇ ಚಾನಲ್. ಮಧ್ಯಾಹ್ನ ಆದರೆ ಸಾಕು ನ್ಯಾಷನಲ್ ಅವಾಡರ್್ ಸಿನಿಮಾ ಹಾಕ್ತಿದ್ರು. ಅವತ್ತು `ಫಣಿಯಮ್ಮ’ ಚಿತ್ರ. `ಅರೇ ಕ್ಯಾರೆ ಏ ಬೋಡಿ ಕಾ ಬೊಂಬ್ಡಿ’ ಅಂತ ಆ ಮನೆಯ ಹಿರಿಯ ಹೆಣ್ಣುಮಗಳು ದನಿ ಎತ್ತಿದರು. ನನಗೆ ಅವಾಗ ಆ ಬೋಡಿ ಅಂದದ್ದು ಮಾತ್ರ ತಮಾಷೆಯಾಗಿ ಕಾಣಿಸಿತ್ತು. ಆಮೇಲೆ ಯಾಕೋ ಇದು ನನ್ನ ತಲೆಇಂದ ಹೋಗಲೇ ಇಲ್ಲ.
ಫಣಿಯಮ್ಮನಂತಹ ಅವಾಡರ್್ ಸಿನಿಮಾ ಜಸ್ಟ್ ಒಂದು ಬೋಡಿಕಾ ಬೊಂಬ್ಡಿ ಆಗೋಯ್ತಾ ಅನಿಸ್ತಾ ಇತ್ತು. ನವೆಂಬರ್ಗೂ ಡಿಸೆಂಬರ್ಗೂ, ಡಿಸೆಂಬರ್ 6ಕ್ಕೂ ಹತ್ತಕ್ಕೂ ವ್ಯತ್ಯಾಸ ಗೊತ್ತಿಲ್ಲದ ಮನಸ್ಸೇ ಅಲ್ಲೂ ಕೆಲಸ ಮಾಡ್ತಾ ಇತ್ತು ಅಂತ ಗೊತ್ತಾಗಿದ್ದು ತುಂಬಾ ಲೇಟಾಗಿ.
ಯಾವುದೇ ಹಿಂದೂ ಅಲ್ಲದ ಮನೆಗಳನ್ನ ನೋಡಿ. ಅವರ ಮನೇಲಿ ತುಂಬಾ ಒಳ್ಳೇ ಸೌಂಡ್ ಸಿಸ್ಟಮ್ ಇಟ್ಟಿರ್ತಾರೆ, ಒಳ್ಳೇ ಡಿವಿಡಿ ಪ್ಲೇಯರ್ ಇರುತ್ತೆ. ಇದನ್ನೇ ಒಂದಿನಾ ಚಚರ್ೆ ಮಾಡ್ತಾ ಇರುವಾಗ ಅಣ್ಣ ನಮ್ಮ ದೂರದರ್ಶನ ಒಂದೇ ಥರಾ ಕಲ್ಚರ್ನ ಪ್ರಾಪಗೇಟ್ ಮಾಡುತ್ತೆ ಅಂದ್ರು. ಅವಾಗ ನನ್ನ ತಲೇಲಿ ಟ್ಯೂಬ್ಲೈಟ್ ಪಟಪಟಾ ಅಂತ ತಿಣುಕಾಡಿ ಹತ್ತಿಕೊಳ್ತು. ದೂರದರ್ಶನದಲ್ಲಿ ಬರೋದೆಲ್ಲಾ ನನ್ನ ಕಲ್ಚರ್ಗೆ ಏನೂ ಹತ್ತಿರ ಇಲ್ಲಾ ಅನ್ನೋದಾದ್ರೆ ಏನ್ಮಾಡೋಕಾಗುತ್ತೆ. ಟೇಪ್ ರೆಕಾರ್ಡರ್, ಡಿವಿಡಿ ಪ್ಲೇಯರ್ ನಾವು ಹಾಕಿದ್ದು ಹಾಡುತ್ತೆ, ಹಾಗಾಗಿ ದೂರದರ್ಶನ ಕೂಡ ಒಂದು ರೀತೀನಲ್ಲಿ ಪರಕೀಯತೆ ಹುಟ್ಟುಹಾಕಿ ನಿಂತುಬಿಟ್ಟಿತ್ತು.
ಒಂದಿನಾ ಟೂರ್ ಹೋಗಿದ್ವಿ. ಇದ್ದಕ್ಕಿದ್ದಂತೆ ತುಂಬಾ ಡಿಷ್ ಆ್ಯಂಟೆನಾಗಳು ಕಾಣಿಸ್ತಿದ್ವು. ಜೊತೇಲಿದ್ದವರು ಇದು ಯಾವ ಏರಿಯಾ ಹೇಳಿ ಅಂದ್ರು. ಹೊಸಾ ಊರು ಹೊಸಾ ಜಾಗ ಗೊತ್ತಿಲ್ಲ ಅಂದೆ. ಅಯ್ಯೋ ಡಿಷ್ ನೋಡಿದ್ರೆ ಹೇಳಕ್ಕಾಗಲ್ವಾ ಪಾಕಿಸ್ತಾನ ಅಂತಾ ಅಂದ್ರು. ನನ್ನ ಮುಖ ಕ್ವಶ್ಚನ್ ಮಾಕರ್್ ಆಯ್ತು. ಸಿಂಪಲ್ ರೀ. ಪಾಕಿಸ್ತಾನದಿಂದ ತಮಗೆ ಏನೇನು ಬೇಕೋ ಅದನ್ನ ಇಳಿಸ್ಕೊಂಡು ನೋಡ್ತಾರೆ ಅಂದ್ರು. ಆಗತಾನೇ ಊಟ ಮಾಡಿ ಹೊರಟಿದ್ವಿ. ನನ್ನ ಹೊಟ್ಟೆ ಒಳಗಿದ್ದ ಚಾವಲ್ ಕಿಚಡಿಗೂ ಆಗುತ್ತೆ, ಬಿರಿಯಾನಿಗೂ ಆಗುತ್ತೆ ಅಂತ ಅವನಿಗೆ ಹೇಳೋದು ಹೇಗೆ?
ತೇಜಸ್ವಿ ಕತೆ ಸಾಕಷ್ಟು ಓದ್ತಾ ಇದ್ವಾ, ನಮಗೆ ಸಾಬಿ ಅಂದ್ರೆ ಅದು ಒಂದು ಕ್ಯಾರೆಕ್ಟರ್ರು. ಅದೊಂದು ಹೆಸರು ಅನ್ನೋ ಹಾಗೋಗಿತ್ತು. ಸ್ಕೂಲಲ್ಲಿ ಒಟ್ಟಿಗೇ ಪಾಠ, ರೋಡಲ್ಲಿ ಎಲ್ಲರೂ ಜೊತೆಯಾದ್ರೆ ಮಾತ್ರಾನೇ ಕುಂಟೇಬಿಲ್ಲೆ. ಬೇಕಾದಷ್ಟು ಜನಾ ಸಿಗ್ತಾ ಇದ್ದದ್ದು. ನಮ್ಮ ಫ್ರೆಂಡ್ ಒಬ್ರಿದ್ರು. ತಮಾಷೆ ಅನ್ನೋದು ಎಷ್ಟು ಮಜವಾಗಿರುತ್ತೆ ಅನ್ನೋದು ಗೊತ್ತಾಗಿದ್ದೇ ಅವರಿಂದ. ಉರುಳಾಡಿ ನಗಬೇಕು ಹಾಗೆ ಮಾಡ್ತಿದ್ರು. ದೊಡ್ಡಹೊಟ್ಟೆ ಕುಣಿಸ್ಕೊಂಡು ಡ್ಯಾನ್ಸ್ ಮಾಡೋರು, ಮೀನು ಎತ್ತಾಕಿಕೊಂಡು ಬಂದು ಅಮ್ಮನಿಗೆ ಆಗಲ್ಲ ಅಂತ ಅವರೇ ಬೂದೀನಲ್ಲಿ ಉಜ್ಜಿ ತುಂಡು ಮಾಡಿ ಕೊಡೋರು, ಬದುಕು ನೇರ ಆಗೋದಿಕ್ಕೆ ಹತ್ತು ರೀತಿ ದಾರಿ ತೋರಿಸಿಕೊಡ್ತಿದ್ರು. ಅಂಥಾ ಆ ಫ್ರೆಂಡ್ ‘ನೀವು ನನ್ನ ಫ್ರೆಂಡ್ ಅಂತಾನೇ ನೋಡ್ತೀರಾ ಅಲ್ವ’ ಅಂತ ಪ್ರಶ್ನಿಸಿದರು. ಯಾಕೆ ತಲೆ ಕೆಟ್ಟಿದೆಯಾ ಅಂದ್ವಿ. ಅವರು ಗೊಳೋ ಅಂತ ಕಣ್ಣೀರು ಹಾಕೋಕೆ ಶುರು ಮಾಡಿದ್ರು. ಯಾಕೆ ಏನಾಯ್ತು ಅನ್ನೋದು ಗೊತ್ತಾಗದೆ ನಾವು ಹೆಗಲ ಮೇಲೆ ಕೈ ಹಾಕಿ `ಲೇ, ದೋಸ್ತಾ’ ಅಂದ್ವಿ. ಆತ ಪ್ರತಿಯೊಬ್ಬರ ಹತ್ತಿರ, ಪ್ರತೀಸಲ ನಾನು ಇಂಡಿಯನ್ ಅಂತ ಸಾಬೀತು ಮಾಡೋ ಕಾಲ ಬಂದುಬಿಟ್ಟಿತ್ತು.
ಮನೆ ಮುಂದೆ ರಂಗೋಲಿ ಬಿಟ್ಟ ಮನೆಗಳು, ರಂಗೋಲಿ ಇಲ್ಲದ ಮನೆಗಳಿಗೂ ನಮಗೆ ವ್ಯತ್ಯಾಸ ಗೊತ್ತಿಲ್ಲದ ಕಾಲ ಒಂದಿತ್ತು. ಕೇಸರಿ ಹಸಿರು ಎರಡೂ ಬಣ್ಣ ಅಂತ ಮಾತ್ರ ಗೊತ್ತಿದ್ದ ಕಾಲ ಒಂದಿತ್ತು. ಸಕ್ಕರೆ ಬಾಯಲ್ಲಿ ಹಾಕೋದಿಕ್ಕೂ ಪಂಚಕಜ್ಜಾಯ ತಿನ್ನಿಸೋದಿಕ್ಕೂ ವ್ಯತ್ಯಾಸ ಏನಿಲ್ಲ ಅನ್ನಿಸೋ ಕಾಲ ಒಂದಿತ್ತು.
ಯಾಕೆ ಇದ್ದಕ್ಕಿದ್ದಂತೆ `ನಿಮ್ಮೊಡನಿದ್ದೂ ನಿಮ್ಮಂತಾಗದೆ’ ಅನ್ನೋ ಕವನ ನನ್ನ ತಲೇಲಿ ಎದ್ದೆದ್ದೂ ಕುಣಿಯುತ್ತೆ. `ರಂಗೋಲಿ ಮತ್ತು ಮಗ’ ಜ್ಞಾಪಕಕ್ಕೆ ಬರುತ್ತೆ. ಒಬ್ಬ ಕವಿ ಬರೆದಿದ್ರು ಕೊಲ್ಲುವ ಖಡ್ಗಗಳ ಮೇಲೆ ಶಾಂತಿ ಮಂತ್ರವನ್ನ ಕೊರೆಯಬೇಕಾಗಿದೆ ಅಂತ. ಅವರು ಹಾಗೆ ಬರೆಯುವಾಗ ಡಿಸೆಂಬರ್ 6 ಅವರೊಳಗೆ ಹೆಜ್ಜೆ ಹಾಕ್ತಾ ಇತ್ತೇನೋ ಅನಿಸುತ್ತೆ.
ಕತ್ತಲು ಮತ್ತು ಬೆಳಕು ಇವು ಎರಡು ಬೇರೆಬೇರೆಯೇ ಅಲ್ವಾ?
ಕಳೆದ ಎರಡು ತಿಂಗಳ ಹಿಂದೆ ಇದೇ ಬರಹ ಬಂದಿತ್ತು,ಓದಿಯೂ ಇದ್ದೆ.ಆದರೆ ಇದೀಗ ಅದೇ ಬರಹ. ಶೀರ್ಷಿಕೆ ಮಾತ್ರ ಬೇರೆ.
ಒಳಗಿನ ಊರಣ ಹಿಂದಿನದೇ.ಡಿಸೆಂಬರ್ 6, ನಿಮ್ಮೊಡನಿದ್ದೂ ನಿಮ್ಮಂತಾಗದೆ,ಮೀನು ಸಾಬಿ,ಮುಸ್ಲಿಂ ಗೆಳೆಯರ
ಯಾಕೆ ಹೀಗೆ? ಬೇರೆ ಬರೀರಿ. – ಸಿದ್ದಮುಖಿ
ಸಿದ್ಧಮುಖಿ ಅವರಿಗೆ
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ. ಅವಧಿಯಲ್ಲಿ ಈ ಲೇಖನ ಪ್ರಕಟವಾಗುತ್ತಿರುವುದು ಇದೇ ಮೊದಲು. ಆದರೆ ನೀವು ನಟರಾಜ್ ಹುಳಿಯಾರ್ ಅವರ ‘ಕನ್ನಡ ಟೈಮ್ಸ್’ ಓದುಗರಾಗಿದ್ದರೆ ಈ ಲೇಖನ ಓದಿರುತ್ತೀರಿ. ಅವಧಿಯಲ್ಲಿ ಕನ್ನಡ ಟೈಮ್ಸ್ ಜೋನ್ ವಿಭಾಗವೇ ಇದೆ. ಅಲ್ಲಿನ ಲೇಖನಗಳಲ್ಲಿ ಅತ್ಯುತ್ತಮವಾದ ಹಲವನ್ನು ಅವಧಿ ಮೊದಲಿನಿಂದಲೂ ಪ್ರಕಟಿಸುತ್ತಿದೆ. ಹಾಗೆಯೆ ಅವಧಿಯ ಲೇಖನಗಳನ್ನೂ ಕನ್ನಡ ಟೈಮ್ಸ್ ಪ್ರಕಟಿಸುತ್ತಿದೆ.
-ಅವಧಿ ಬಳಗ
lekhana manamidiyuvantide.mundina namma makklu ee december 6 ra itihasavannu kelidare,enu uttarisuttaro gottilla mahabharata tv serial script writer ondu adbuta lekhana baredidru prajashakti telugu version nanage sikkittu adannu kannada ” rama alla avaralli ondu manavi” sadyavadre omme odi nannuru kamalapuradalli saviraru herige madisuttidda husenamma nanagendu muslimalendu anisale ella illi nuslim hindugala baduku ondagi hogide.adu samajika anivaryateyu haudu,adare komuvadigalu manasu manasugala madde,jeva jevagala madde gode kattuva krura tanakke baliyaguttiva rama,rahimaru.anataraguttiruva avara makkalu madida tappenu, andahage ee bahuroopi ennuva ee anamika barahagararu yary anno kutuhala nanage d,ravi varma hospet
ಡಿಸೆಂಬರ್ 6ರರ ಹಳವಂಡಗಳು. ಹಿಂದು ಮುಸಲ್ಮಾನರ ಬಾಂಧವ್ಯ ಪರಸ್ಪರ ಪೂರ್ವಾಗ್ರಹದಿಂದ ಹಳಸುತ್ತಿದೆ. ಬಹಾಯಿ ಸಿದ್ದಾಂತ ಓದುತ್ತಿದ್ದೆ. ಅವರೇನೋ ಜಾಗತಿಕ ಶಾಂತಿ, ಎಲ್ಲ ಧರ್ಮಗಳ ಸಂದೇಶ ಒಂದೇ ನಮ್ಮಲ್ಲಿರುವ ವ್ಯತ್ಯಾಸ ಕೇವಲ ಸುಪರ್ಫೀಸಿಯಲ್ಲೂ ಇನ್ನೇನೋ ಒಪ್ಪುವ ಹಾಗೆ ಬರೆದಿದ್ದಾರೆ. ನಿಮ್ಮ ಕಾಳಜಿ ನನಗೆ ಅರ್ಥ ಆಗಿದೆ. ನಾನಂತೂ ಆ ಕುರಿತಾಗಿ ಮಾತಾಡಿ ಪ್ರಯೋಜನವಿಲ್ಲ ನಮ್ಮಷ್ಟಕ್ಕೆ ನಮ್ಮೊಡನಾಡಿಗಳ ಜೊತೆ ಹೀಗೆ ಖುಷಿ, ಖುಷಿಯಾಗಿದ್ದರಾಯಿತು. ಲೋಕದ ಡೊಂಕನ್ನು ನಾವು ಹೇಗೆ ತಿದ್ದೋಣ? ಎಂಬೆಲ್ಲ ಆಲೋಚನೆಗೆ ಬಂದು ಮುಟ್ಟಿದ್ದೇನೆ. ರಾಜಕೀಯದವರು ಬಿಡಬೇಕಲ್ಲ? ಪಾರ್ಕಲಾಮ್ ಉದಯಕುಮಾರ ಹಬ್ಬು, ಕಿನ್ನಿಗೋಳಿ