ಯಾವುದೇ ಟೈಲರಿಂಗ್ ಮೆಷೀನು ಬೇಡ

ಪ್ರಕೃತಿಯೊಡನೆ ಮೌನದಲ್ಲಿ ಮಾತನಾಡಲು ಹೊರಟಿದ್ದೇನೆ ಎನ್ನುವ ಅರುಣ್ ತಮ್ಮನ್ನು ಜಟಿಲ ಕಾನನದ ಕುಟಿಲ ಪಥಗಳಲಿ ಹರಿವ ತೊರೆಯು ನಾನು… ಎಂದು ಬಣ್ಣಿಸಿಕೊಳ್ಳುತ್ತಾರೆ. ಪ್ರಕೃತಿಯೊಂದಿಗೆ ಮಾತನಾಡುವುದು ಅವರ ಪ್ರೀತಿಯ ಹವ್ಯಾಸ. ಎಷ್ಟೋ ಮಂದಿ ಪರಿಸರ ಪ್ರಿಯರ ಮಧ್ಯೆ ಅರುಣ್ ಇಷ್ಟವಾಗುವುದು ಅವರು ಬರೆಯುವ ವಿಧಾನಕ್ಕಾಗಿ. ಅದು ಆನಕೊಂಡಾ ಇರಲಿ, ನಂದಾ  ಥಿಯೇಟರ್ ರಸ್ತೆ ಮರಗಳಿರಲಿ, ಪೆಂಗ್ವಿನ್ ಇರಲಿ ಎಷ್ಟು ಆಕರ್ಷಕವಾಗಿ, ಸರಳವಾಗಿ ಬರೆಯುತ್ತಾರೆ!. ಇವರ  ಕ್ಷಿತಿಜದೆಡೆಗೆ… ಬ್ಲಾಗ್ ಹಾಗೂ ಬರಹದ ರುಚಿ ಉಣಿಸಲೆಂದೇ ಅವರ ‘ಅಪ್ಪನ ಕಥೆ’ ಸರಣಿಯ ಒಂದು ಬರಹ ಇಲ್ಲಿದೆ.

 

ಶಾಲೆಯಲ್ಲಿ ಮಕ್ಕಳಿಗೆ Environmental Studies ವಿಷಯದಲ್ಲಿ ನಾನು ಮೊದಲು ಆರಿಸಿಕೊಂಡಿದ್ದು ಈ ಒಂದು ವಿಶಿಷ್ಟ ‘ಅಪ್ಪ’ನ ಕಥೆಯನ್ನು ವಿವರಿಸಲು. ಮಕ್ಕಳೆಲ್ಲರೂ ಒಂದು ರೀತಿ ಥ್ರಿಲ್ ಆಗಿದ್ದರು. ಅಲ್ಲಿಯವರೆಗೂ ಮಕ್ಕಳು ಯಾವ ಗೂಡನ್ನೂ ಕೈಯಲ್ಲಿ ಹಿಡಿದುಕೊಂಡಿರಲಿಲ್ಲ. ಬೆಂಗಳೂರು ನಗರದ ಇಂಗ್ಲಿಷ್ ಶಾಲೆಯ ಮಕ್ಕಳೆಂದರೆ ಹಾಗೇ. ಅವರಿಗೆ ಡಿಸ್ಕವರಿ ಚಾನೆಲ್ ಗೊತ್ತಿರುತ್ತೆ, ಗುಬ್ಬಚ್ಚಿಯನ್ನೂ ಸಹ ಕಣ್ಣಿಂದ ನೋಡಿರೋದಿಲ್ಲ. ಟಾಮ್ ಎಂಡ್ ಜೆರಿ ಗೊತ್ತಿರುತ್ತೆ, ಬೆಕ್ಕು ಇಲಿಯನ್ನು ಹಿಡಿಯುವುದನ್ನು ನೋಡೇ ಇರೋದಿಲ್ಲ.

ಅಂಥಾ ಮಕ್ಕಳಿಗೆ ನಾನು ಗೀಜಗ ಅನ್ನೋ ಪಕ್ಷಿ ಬಗ್ಗೆ ಹೇಳುವಾಗ ನನಗೂ ಒಂದು ರೀತಿ ಥ್ರಿಲ್ ಆಗಿತ್ತು. ಯಾಕೆಂದರೆ ಸರಿಯಾಗಿ ನಾಯಿ ಬೆಕ್ಕುಗಳನ್ನೇ ಗಮನಿಸಿ ಅಭ್ಯಾಸ ಇಲ್ಲದ ಮಕ್ಕಳಿಗೆ ಈ ಪಕ್ಷಿ ಬಗ್ಗೆ ಏನು ಹೇಳೋದು, ಹೇಗೆ ಹೇಳೋದು ಅಂತ ನನ್ನೊಳಗೆ ನನಗೇ ಸವಾಲುಗಳಿದ್ದವು.

ನನ್ನ ಕೈಯಲ್ಲಿ ಸಂಪೂರ್ಣವಾಗಿದ್ದ ಒಂದು ಗೂಡನ್ನು ಹಿಡಿದುಕೊಂಡು ವಿವರಿಸಲು ಆರಂಭಿಸಿದೆ.

“ಇದು ಗೀಜಗನ ಗೂಡು, ಗೀಜಗ ಅಂದರೆ, ವೀವರ್ ಬರ್ಡ್ ಅಂತ. ನಿಮ್ಮಲ್ಲಿ ಹಳ್ಳಿಯಿಂದ ಯಾರಾದರೂ ಬಂದಿದ್ರೆ, ಅವರು ಇದನ್ನು ನೋಡಿರ್ತಾರೆ, ಮರದ ಮೇಲೆ ನೇತಾಡ್ತಾ ಇರುತ್ತೆ.” ಯಾರಿಂದಲೂ ಉತ್ತರ ಬರಲಿಲ್ಲ. ಹಳ್ಳಿಯಿಂದ ಬಂದವರು ಯಾರೂ ಇಲ್ಲ ಎಂದು ಖಾತ್ರಿಯಾಯಿತು.

“ಸರಿ, ಇದು ನಾನು ತೆಗೆದಿರೋ ಫೊಟೋಸು. ನೋಡ್ಬಿಟ್ಟು ವಾಪಸ್ ಕೊಡಿ” ಎಂದು ಹೇಳಿ ಗೀಜಗನ ಗೂಡಿನ ಫೋಟೋಗಳನ್ನು ಮಕ್ಕಳ ಕೈಗೆ ಕೊಟ್ಟೆ.
ಒಬ್ಬ ಧೈರ್ಯಶಾಲಿ ಹುಡುಗ ಪ್ರಶ್ನೆ ಕೇಳಿ ನನ್ನನ್ನು ಸಂತೋಷಗೊಳಿಸಿದ. ಸುಮ್ಮನೆ ನಾನು ಹೇಳಿದ್ದು – ಅವರು ಕೇಳಿದ್ದು ಆಗಬಾರದು. ಪಾಠ ಎಂದರೆ ಅಲ್ಲಿ ಚರ್ಚೆಯಿರಬೇಕು, ಪ್ರಶ್ನೋತ್ತರವಿರಬೇಕು ಎಂದು ನನ್ನ ನಿಲುವು. ಆ ಹುಡುಗ, “ಸರ್, ಈ ಗೂಡು ಇಷ್ಟೊಂದು ಗಟ್ಟಿಯಿದೆ? ಪಕ್ಷಿ ತುಂಬಾ ಚಿಕ್ಕದು ಅನ್ಸುತ್ತೆ? ಗೂಡಿನ ಬಾಗಿಲು ತುಂಬಾ ಚಿಕ್ಕದಾಗಿದೆ??” ಎಂದ.

“ಹೌದಪ್ಪ. ಈ ಪಕ್ಷಿ ತುಂಬಾನೇ ಚಿಕ್ಕದಾಗಿರುತ್ತೆ. ಇದರ ಗೂಡಿದೆಯಲ್ಲಾ, ಇದು ಹುಲ್ಲುಗರಿಗಳಿಂದ ಮಾಡಿದೆ. ಆ ಹುಲ್ಲುಗರಿಗಳು ತುಂಬಾ ಗಟ್ಟಿಯಿರುತ್ತವೆ. ನೈಲಾನ್ ದಾರದಂತೆ!! ಇದನ್ನು ಹೊಲಿಯಬೇಕಾದರೆ ಯಾವುದೇ ಟೈಲರಿಂಗ್ ಮೆಷೀನು ಉಪಯೋಗಿಸೋದಿಲ್ಲ, ಎಲ್ಲಾ ಕೊಕ್ಕಲ್ಲೇ!! ಒಂದೊಂದೇ ಎಳೆಯನ್ನು ತೆಗೆದುಕೊಂಡು ಬರುವ ಈ ಪಕ್ಷಿ, ತನ್ನ ಗೂಡು ಸಂಪೂರ್ಣ ಆಗುವ ಹೊತ್ತಿಗೆ ಸುಮಾರು ಐದು ನೂರು ಟ್ರಿಪ್ಪು ಹೊಡೆದಿರುತ್ತೆ!”

ಮಕ್ಕಳ ಮುಖದಲ್ಲಿ ಆಶ್ಚರ್ಯ ಎದ್ದು ಕಾಣುತ್ತಿತ್ತು. ನಾನು ಅವರ ಅಚ್ಚರಿಯನ್ನು ಇನ್ನಷ್ಟು ಪ್ರಚೋದಿಸಲು, “ಹುಲ್ಲುಗರಿಗಳನ್ನು ಸುಮ್ಮನೆ ತೆಗೆದುಕೊಂಡು ಬರಲಾಗುವುದಿಲ್ಲ. ಈ ಗೂಡನ್ನು ಬಿಡಿಸಿದರೆ ನಮಗೆ ತಿಳಿಯುತ್ತೆ, ಎಲ್ಲಾ ಗರಿಗಳೂ ಒಂದೇ ಗಾತ್ರದಲ್ಲಿರುತ್ತವೆ!! ಪಕ್ಷಿಯು ಸುಮಾರು ನಲವತ್ತು ಸೆಂಟಿಮೀಟರಿನಷ್ಟಕ್ಕೆ ಹುಲ್ಲನ್ನು ಕತ್ತರಿಸಿ ನಂತರ ಕೊಕ್ಕಿನಲ್ಲಿ ಹಿಡಿದುಕೊಂಡು ಮರದ ಬಳಿ ಹಾರಿ ಬಂದು ಒಂದೊಂದೇ ಎಳೆಯನ್ನು ಸೇರಿಸಿ ಹೊಲೆಯುತ್ತೆ! ಮೂರು ತಿಂಗಳು ಬರೀ ಗೂಡು ಕಟ್ಟೋ ಕೆಲಸ ಮಾಡುತ್ತೆ ಈ ಪಕ್ಷಿ. ಗೂಡಿನಲ್ಲಿ ಸುಮಾರು ಐದು ಸಾವಿರ ಎಳೆಗಳಿರುತ್ತವೆ”.

ಆರನೇ ತರಗತಿಯ ಒಬ್ಬಳು ಹುಡುಗಿ ಎದ್ದು ನಿಂತು, “ಅಷ್ಟೊಂದು ಕಷ್ಟ ಪಟ್ಟು ಯಾಕೆ ಗೂಡು ಕಟ್ಟುತ್ತೆ? ಬೇರೆ ಪಕ್ಷಿಗಳು ಹೀಗೆ ಗೂಡು ಕಟ್ಟೋದಿಲ್ವಾ?” ಎಂದು ಕೇಳಿದಳು. “ಬೇರೆ ಪಕ್ಷಿಗಳು ಇಷ್ಟೊಂದು ಕಷ್ಟ ಪಡಲ್ಲ. ಟೈಲರ್ ಬರ್ಡ್ ಅಂತ ಒಂದಿದೆ. ಅದು ಪಡುತ್ತೆ ಅಷ್ಟೆ. ಮಿಕ್ಕ ಪಕ್ಷಿಗಳು ಈ ರೀತಿ ಗೂಡು ಕಟ್ಟಲ್ಲ. ಯಾಕಪ್ಪ ಇಷ್ಟು ಕಷ್ಟ ಪಡುತ್ತೆ ಅನ್ನೋದು ಇನ್ನೂ ಇಂಟರೆಸ್ಟಿಂಗ್ ವಿಷಯ. ಹೆಣ್ಣು ಪಕ್ಷಿಯನ್ನು ಖುಷಿ ಪಡಿಸೋಕೆ!!”

“ಅಂದರೆ, ಈ ಗೂಡನ್ನು ಗಂಡು ಪಕ್ಷಿ ಕಟ್ಟುತ್ತಾ?” ಹತ್ತನೇ ತರಗತಿಯ ಧ್ವನಿ ಕೇಳಿಬಂತು. “ಹೌದು. ಗಂಡು ಪಕ್ಷಿ ಗೂಡು ಕಟ್ಟುತ್ತೆ. ಆಮೇಲೆ, ಹೆಣ್ಣನ್ನು ಕರೆತರುತ್ತೆ. ಹೆಣ್ಣು ಪಕ್ಷಿಗೆ ಆಹ್ವಾನ ಇಷ್ಟವಾದಲ್ಲಿ ಗೂಡಿಗೆ ಬಂದು “inspect” ಮಾಡಿ ಗೂಡು ಹಿಡಿಸಿದರೆ ಗಂಡಿನ ಜೊತೆಯಿದ್ದು breed ಮಾಡಿ ಮೊಟ್ಟೆಯಿಟ್ಟು ನಂತರ ಹಾರಿ ಹೋಗುತ್ತೆ!!” Breeding ಎಂದರೇನು ಎಂದು ಪ್ರೈಮರಿ ಶಾಲೆಯ ಮಕ್ಕಳಿಗೆ ವಿವರಿಸಲು ಸುಸ್ತುಹೊಡೆದುಬಿಟ್ಟೆ.

“ಹೆಣ್ಣನ್ನು impress ಮಾಡಲು ಗೂಡಿನ ಒಳಗೆ ಬಣ್ಣ ಬಣ್ಣದ ಹೂವನ್ನು ಸಹ ಸಿಕ್ಕಿಸಿರುತ್ತೆ – ಜೇಡಿ ಮಣ್ಣಿನ ಸಹಾಯದಿಂದ! ನೋಡಿದ್ರಾ, ಈ ಇಂಜಿನೀಯರ್ ಪಕ್ಷಿಯ ಬುದ್ಧಿ ಹೇಗಿದೆ ಅಂತ. ಈ ಇಂಜಿನಿಯರುಗಳಲ್ಲೂ ದಡ್ಡರು ಇದ್ದಾರೆ. ಕೆಲವು ಪಕ್ಷಿಗಳು ಅರ್ಧಂಬರ್ಧ ಕಟ್ಟಿದ ಗೂಡುಗಳನ್ನೇ ನೆಚ್ಚಿಕೊಂಡು ಹೆಣ್ಣನ್ನು ಕರೆದುಕೊಂಡು ಬರುತ್ತವೆ. ಒಳ್ಳೇ ಹೆಲ್ಮೆಟ್ ಥರ ಇದೆ ನೋಡಿ ಈ ಗೂಡು (ಕೈಯಲ್ಲಿದ್ದ ಇನ್ನೊಂದು ಅರೆನಿರ್ಮಿತ ಗೂಡನ್ನು ತೋರಿಸಿದೆ), ಇಂಥಾ ಗೂಡುಗಳನ್ನು ಹೆಣ್ಣು ಪಕ್ಷಿಗಳು ನಿಕೃಷ್ಟವಾಗಿ ತಳ್ಳಿ ಹಾಕಿಬಿಡುತ್ತವೆ. ಆಗ ಗಂಡು ಪಕ್ಷಿ ಮತ್ತೆ ಮೊದಲಿನಿಂದ ಕಟ್ಟಲು ಆರಂಭಿಸುತ್ತೆ. ಕೆಲವು ಅದೃಷ್ಟ ಪಕ್ಷಿಗಳು ಒಟ್ಟಿಗೇ ಸೇರಿ ಗೂಡನ್ನು ಸಂಪೂರ್ಣಗೊಳಿಸುತ್ತವೆ.”

ಪಕ್ಕದಲ್ಲಿ ನಿಂತಿದ್ದ ಪಿ.ಟಿ. ಮೇಷ್ಟ್ರು, ಸೋಷಿಯಲ್ ಸ್ಟಡೀಸ್ ಮೇಡಮ್ಮು, ಪ್ರಾಂಶುಪಾಲರು ಬಿಟ್ಟಕಣ್ಣು ಬಿಟ್ಟುಕೊಂಡು ಗೂಡುಗಳನ್ನೇ ನೋಡುತ್ತಿದ್ದರು. ಪಿ.ಟಿ. ಮೇಷ್ಟ್ರನ್ನು ಕರೆದು ಗೂಡನ್ನು ಹಿಡಿದುಕೊಳ್ಳಲು ಹೇಳಿ, ಅದರ ಬಾಗಿಲ ಒಳಗೆ ಕೈ ಹಾಕಿ ಗೂಡಿನ ರೀತಿಯನ್ನು ವಿವರಿಸತೊಡಗಿದೆ. “ಗೂಡಿನಲ್ಲಿ ಎರಡು ಛೇಂಬರ್ ಇದೆ. ಒಂದು ಕೆಳಭಾಗ, ಇನ್ನೊಂದು ಮೇಲ್ಭಾಗ. ಹೆಣ್ಣು ಮೊಟ್ಟೆಯಿಟ್ಟು ಹಾರಿಹೋದರೆ ನಂತರ ಗಂಡು ಅದಕ್ಕೆ ಕಾವು ಕೊಟ್ಟು ಮರಿ ಮಾಡುತ್ತೆ. ಇಲ್ಲವಾದರೆ ಹೆಣ್ಣು ಒಳಗೆ ಕೆಳಗಿನ ಛೇಂಬರಿನಲ್ಲಿ ಮೊಟ್ಟೆಯ ಜೊತೆ ಇರುತ್ತೆ, ಗಂಡು ಮೇಲಿರುತ್ತೆ.

ಮರದ ಮೇಲೆ ಗೂಡು ಇರೋದರಿಂದ ವೈರಿಗಳ ಕಾಟ ಜಾಸ್ತಿ. ಹಾವೋ, ಹದ್ದೋ ಬಂದು ಮೊಟ್ಟೆಯನ್ನು, ಮರಿಗಳನ್ನು ತಿಂದು ತೇಗಬಹುದು. ಅದಕ್ಕೋಸ್ಕರವಾಗಿಯೇ ಈ ಕೆಳಭಾಗದ ಛೇಂಬರು. ವೈರಿಗೆ ಒಳಗೆ ಬಂದು ಕೆಳಭಾಗಕ್ಕೆ ಇಳಿಯುವುದು ಕಷ್ಟಸಾಧ್ಯ. ಮತ್ತೆ ಕೆಳಭಾಗದ ಛೇಂಬರಿನಲ್ಲಿ ಮರಿಗೆ ಹಿತವಾಗಿರಲೆಂದು ಹತ್ತಿಯನ್ನೋ, ಹುಲ್ಲನ್ನೋ ತಂದು ಹಾಸಿಗೆಯನ್ನು ಮಾಡಿಕೊಟ್ಟಿರುತ್ತೆ. ಕತ್ತಲೆಯಿರಬಾರದೆಂದು ದೀಪದ ಹುಳುವನ್ನು ಹಿಡಿದು ತಂದು ಜೇಡಿ ಮಣ್ಣಿನ ಸಹಾಯದಿಂದ ಗೂಡಿನ ಗೋಡೆಗಳಿಗೆ ಸಿಕ್ಕಿಸುತ್ತೆ. ತಂದೆ ಪಕ್ಷಿಯು ಮೇಲ್ಭಾಗದ ಛೇಂಬರಿನಲ್ಲಿದ್ದುಕೊಂಡು ಮರಿಗಳನ್ನು ಕಾಯುತ್ತಿರುತ್ತೆ. ಬೆಳಿಗ್ಗೆ ಒಂದು ಹೊತ್ತು ಹಾರಿ ಹೋಗಿ ಆಹಾರದ ಬೇಟೆಯಾಡಿಕೊಂಡು ಬಂದು ಮರಿಗಳಿಗೆ ತಿನ್ನಿಸುತ್ತೆ.

ಕೆಲವು ದಿನಗಳ ನಂತರ ಮತ್ತೆ ಬೇರೆ ಗೂಡು ಕಟ್ಟಲು ಆರಂಭಿಸುತ್ತೆ, ಮತ್ತೆ ಬೇರೆ ಹೆಣ್ಣು, ಬೇರೆ ಮರಿಗಳು!”

ಚಪ್ಪಾಳೆಯೇನೋ ಹೊಡೆದರು. ಆದರೆ, ಮಕ್ಕಳಿಗೆ ಇಂಥಾ ಪಾಠಗಳನ್ನು ಸ್ವಾಭಾವಿಕವಾಗಿ ಕಲಿಸಲು ಈ ನಗರ ಸಹಕಾರಿಯಾಗಿಲ್ಲವಲ್ಲಾ ಎಂಬ ಬೇಸರ ನನಗೆ ತುಂಬಾ ಇದೆ. ಅವರು ಎತ್ತ ನೋಡಿದರೂ ಕಟ್ಟಡಗಳೇ. ಮನೆಯೊಳಗೆ ಹೊಕ್ಕರೆಂದರೆ ಮುಗಿಯಿತು, ಟಿ.ವಿ. ಮುಂದೆ ಪ್ರತಿಷ್ಠಾಪಿಸಿಕೊಂಡುಬಿಡುತ್ತಾರೆ, ಅಥವಾ, ಪುಸ್ತಕದ ಹುಳುಗಳಾಗಿಬಿಡುತ್ತಾರೆ. ವಿಪರ್ಯಾಸವೆಂದರೆ ಇದನ್ನೆಲ್ಲಾ ನೋಡಿ ಅನುಭವಿಸಿರುವ ಪೋಷಕರೂ ಸಹ ಮಕ್ಕಳಿಗೆ ಏನೂ ಹೇಳುವುದಿಲ್ಲ. ಶಾಲೆಯಲ್ಲಿ ಬಿಡುವಾದಾಗ ಮಕ್ಕಳನ್ನು ಗುಂಪುಗೂಡಿಸಿಕೊಂಡು ನಾನು ಇಂಥಾ ಕಥೆಗಳನ್ನು ಹೇಳುತ್ತಿರುವಾಗ ನನಗೂ ಒಂದು ಬಗೆಯ ಆನಂದವಾಗುತ್ತಿರುತ್ತೆ.

………………………………………………………………………….

ಗೀಜಗ – ವೀವರ್ ಬರ್ಡ್ (Ploceus philippinus) ಪಕ್ಷಿಯ ಬಗ್ಗೆ ನನಗೆ ಮೊದಲು ಪಾಠ ಹೇಳಿಕೊಟ್ಟಿದ್ದು ಆ ದಿನಗಳಲ್ಲಿ World Wide Fund for Nature ನಲ್ಲಿದ್ದ ಶ್ರೀ ಕಾರ್ತಿಕೇಯನ್ ಅವರು. ನಂತರ ಕೃಷ್ಣ ಎನ್ನುವ ಪ್ರಖ್ಯಾತ ಪಕ್ಷಿತಜ್ಞರ ಬಳಿ ನಾನು ಪಕ್ಷಿವೀಕ್ಷಣಾ ತರಬೇತಿ ಪಡೆಯುತ್ತಿದ್ದಾಗ ಇನ್ನಷ್ಟು ವಿಷಯ ತಿಳಿಯಿತು. ಆಗ ನಾನೂ ಹೈಸ್ಕೂಲಿನಲ್ಲಿದ್ದೆ. ಅಂದಿನಿಂದ ಇಂದಿನವರೆಗೂ ಅವಕಾಶ ಸಿಕ್ಕಾಗೆಲ್ಲಾ ವೀವರ್ ಬರ್ಡ್ ಬಗ್ಗೆ ನನ್ನವರಿಗೆಲ್ಲಾ ಹೇಳುತ್ತಿರುತ್ತೇನೆ.

ಗೂಡು ಕಟ್ಟುವುದರಲ್ಲಿ ನಿಸ್ಸೀಮ ಇದಾದರೆ, ಅತ್ಯುತ್ತಮ ಪೋಷಕ ಪ್ರಶಸ್ತಿ ಕೂಡ ಪಡೆಯಬಲ್ಲ ಸಮರ್ಥ ಈ “ತಂದೆ” ಪಕ್ಷಿ.

ಮುಂದಿನ ಭಾಗದಲ್ಲಿ ಬೇರೊಂದು “ಅಪ್ಪನ ಕಥೆ”ಯನ್ನು ಕೇಳೋಣ, ಓದೋಣ.

‍ಲೇಖಕರು avadhi

May 24, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿರುತ್ತರದ ಉತ್ತರ, ರಾಜೇಶ್ವರಿ ತೇಜಸ್ವಿ

ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ...

ಅಂಬೇಡ್ಕರ್ ಇಲ್ಲಿದ್ದಾರೆ..

ಅಂಬೇಡ್ಕರ್ ಅವರ ಬರಹಗಳ ಎಲ್ಲಾ ಸಂಪುಟವನ್ನು ಉಚಿತವಾಗಿ ಕನಡದ ಓದುಗರಿಗೆ ಸಿಗಲಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈಗಾಗಲೇ ೫ ಸಂಪುಟಗಳನ್ನು...

’ಧರ್ಮ ನಿರಪೇಕ್ಷತೆ, ಕೋಮುವಾದ ಮತ್ತು ನಮ್ಮೆದುರಿನ ಸವಾಲುಗಳು’ – ಶಶಿಧರ ಭಟ್

ಶಶಿಧರ ಭಟ್ ಕುಮ್ರಿ ಧರ್ಮ ನಿರಪೇಕ್ಷತೆ ಮತ್ತು ಕೋಮುವಾದ ಎಂಬ ಶಬ್ದ ನನ್ನ ಕಿವಿಗೆ ಬಿದ್ದುದು ಯಾವಾಗ ಎಂಬ ಪ್ರಶ್ನೆಗೆ ನನ್ನ ಬಳಿ ಸರಳ...

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: