ಚಲಂ ಹಾಡ್ಲಹಳ್ಳಿ
ಯುದ್ದ ಮಾಡಿಬಿಡಿ
ರಾಜನ ಪೋಷಾಕು ಧರಿಸಿ
ದೇಶದ ಬೀದಿ ಬೀದಿಯಲಿ
ಸುತ್ತಿಬಿಡಿ..
ಗಡಿಯಲ್ಲಿ ನನ್ನ
ಸಹೋದರರು ಸಾಯುತ್ತಿರಲಿ
ಹುತಾತ್ಮ ಅಂತ ಬೋರ್ಡು
ಬರೆಸಿಕೊಂಡು
ನೇತು ಹಾಕಲು
ಸರ್ಕಲ್ಲಿನಲ್ಲಿ ಕುಳಿತುಬಿಡಿ
ಏನೂ ಅರಿಯದ ಕೂಸು..
ತಾಯಿಯ ರೋದನೆ..
ಮುದ್ದು ಹೆಂಡತಿಯ ನಿಟ್ಟುಸಿರು
ಆಯಾ ಮನೆಯಲ್ಲಿ ಕರಗಿ ಹೋಗುತ್ತವೆ..
ನೀವು ಯುದ್ದ ಮಾಡಿಬಿಡಿ
ಮಾತುಗಳು ಜನರಲ್ಲಿ
ನಂಬಿಕೆ ಹುಟ್ಟಿಸಲು
ಸೋತು ಹೋದಾಗ
ಬಾಂಬು,ಮಿಸೈಲುಗಳ
ಮೂಲಕ ಜನರನ್ನು ನಂಬಿಸಲು
ಹೊರಟಿದ್ಧೀರಿ..
ನೀವು ದೇಶಭಕ್ತರೆಂಬುದು ಸಾಭೀತಾಗಲು
ಗಡಿಯಲ್ಲಿ ಯಾವುದೋ
ಯೋಧನ ರಕ್ತ ಹರಿಯಲೇಬೇಕು
ನೆತ್ತರಿನ ವಾಸನೆಯ
ಗಲ್ಲಿ ಗಲ್ಲಿಗಳಲ್ಲಿ ಹರಡಿಬಿಡಿ
ದೇಶ ಭಕ್ತಿಯೂ
ರಸ್ತೆ ರಸ್ತೆಗಳಲ್ಲಿ ಚೆಲ್ಲಾಡಲಿ
ನೀವು ಯುದ್ದ ಮಾಡಿಬಿಡಿ
ಶಾಂತಿಯ ಬಗ್ಗೆ
ಮಾತನಾಡಿದವನನ್ನು
ದೇಶದೊಳಗೇ ಗಡಿಪಾರು
ಮಾಡಿಬಿಡಿ..
ನಿಮ್ಮ ರಾಜ ಪೋಷಾಕಿಗೆ
ನನ್ನ ಸಹೋದರರ
ರಕ್ತದ ಕಲೆಯು ಚಿಮ್ಮದಿದ್ದರೆ
ಬಹುಪರಾಕುಗಳು
ಅರ್ಥ ಕಳೆದುಕೊಳ್ಳುತ್ತವೆ
ರಕ್ತ ಒಳಗಿದ್ದರೆ ಜೀವ
ಹೊರ ಬಂದರೆ ನಾಶವಲ್ಲದಿದ್ದರೆ
ಯುದ್ದ ಮಾಡಿಬಿಡಿ
0 ಪ್ರತಿಕ್ರಿಯೆಗಳು