
ರೇಷ್ಮಾ ನಾಯ್ಕ
ಅದೇನು ಜರೂರತ್ತಿತ್ತು
ಕೊಲ್ಲುವ ಕೈಗಳಿಗೆ?
ವಿದ್ರೋಹ ಉದ್ವಿಗ್ನತೆಯ ತಾಕಾಟದೊಂದಿಗೆ,
ಒಂದೇ ಸಮನೆ
ಗೋರಿಯೊಳಗೆ ಬಿಕ್ಕುವ
ಸದ್ದು;
ಸತ್ತದ್ದು ಯಾಕೆ?
ಹಪಹಪಿಸುವ
ಬಂದೂಕಿನ ನಿರ್ಜೀವ
ಗುಂಡುಗಳಿಗೆ ತಿಳಿದಿರುವುದಿಲ್ಲ;
ಅವು ತಾಕಿದ ಎದೆಯ,
ಒಳಗುದಿಯ ಆರ್ತನಾದ.
ಆದರೂ..,
ನಿನ್ನ ಅಂತಃಕರಣಕ್ಕೆ
ತಿಳಿದಿರಬಹುದಲ್ಲವೇ?
ಇವ,
ಯಾರದ್ದೋ ಮಗ,
ಇನ್ಯಾರದ್ದೋ ಪತಿ,
ಮತ್ಯಾರದ್ದೋ ಅಪ್ಪ;
ಮತ್ತು ಅವರಿಟ್ಟ ಕನಸುಗಳು.

ಎಲ್ಲ ಮುಗಿದ ಮೇಲೆ,
ನೆಲಮುಗಿಲು ಹೊತ್ತು ನಿಲ್ಲುವ
ನಿಗೂಢ ನಿರಾಳತೆ;
ಮತ್ತು ಚಿತ್ತಕ್ಕೆ
ಜೋತುಬಿದ್ದ ಕಳೆಬರ
ಸೂತಕದ ಛಾಯೆ,
ಮತ್ತೂ
ಸತ್ತ ಎರಡೂ ಕಡೆಯವರು.
ಹಾಗಾದರೆ..
ಸೋಲು ಗೆಲುವುಗಳ ಜಿಜ್ಞಾಸೆಯಲ್ಲಿ
ಗೆದ್ದದ್ದು ಏನು?
ರಕ್ತಸಿಕ್ತ ಬತ್ತಳಿಕೆಯ ತುಂಬಾ
ಮತ್ತದೇ ಮಿತಿಯಿರದ ಆಸೆಗಳು,
ದೀರ್ಘ ನಿಟ್ಟುಸಿರು.
ಯುದ್ಧ ಮುಗಿಯಿತು.
ಒಳ್ಳೆಯ ಕವಿತೆ