ಮಂಜುಳಾ ಹುಲಿಕುಂಟೆ
ನೀವೇನೇ ಹೇಳಿ
ಯುದ್ಧ – ಶತೃತ್ವದ ಕುರಿತು
ನನಗಷ್ಟು ಮೋಹವಿಲ್ಲ ..
ಯುದ್ಧವನ್ನೇ ಶಪಿಸುವವಳ
ದೇಶದ್ರೋಹಿ ಅನ್ನುವುದಾದರೇ
ನನ್ನ ಅಭ್ಯಂತರವೂ ಇಲ್ಲ…
ಅಲ್ಲಿ ಗಡಿಯಲ್ಲೊಬ್ಬ
ಗೆಳೆಯನಿದ್ದಾನೆ
ಕೂಡು ಕುಟುಂಬದ ಹಸಿವ ತಣಿಸಲು
ಹಸಿ ಬದುಕನ್ನೆ ಬಲಿಗೊಟ್ಟು
ಬೆನ್ನಿಗೆ ಬಂದೂಕು ಕಟ್ಟಿಕೊಂಡು
ಮಳೆ-ಚಳಿ-ಗಾಳಿಯಲ್ಲಿ
ಸಣ್ಣಗೆ ಉರಿಯುತ್ತಾನೆ
ಯುದ್ಧವೆಂದರೆ ಅವನ ನೆನಪು ಆತಂಕ
ಏನೋ ಭಯ..
ಸಣ್ಣ ತಂಗಿ ಓದುತ್ತಿದ್ದಾಳಂತೆ
ಅಮ್ಮಾ ನಿತ್ಯ ದಾರಿಕಾಯುತ್ತಾಳೆನ್ನುವುದೇ
ಅವನ ನೋವು ..
ನೀವೇನೇ ಹೇಳಿ
ದಿನದ ಅನ್ನಕ್ಕಾಗಿ
ಪರಿತಪಿಸುವ ನನ್ನ ಕೇರಿಯ
ಅದೆಷ್ಟೋ ಮಂದಿಗೆ
ಈ ಗಡಿಗಳ ಕುರಿತು
ಏನೊಂದೂ ತಿಳಿದಿಲ್ಲ..
ಮೊನ್ನೆಯಷ್ಟೇ ಸತ್ತ ಯೋಧನ ಪತ್ನಿ
ಪರಿತಪಿಸಿದ್ದು
ಮತ್ತಾವ ಹೆಣ್ಣಿಗೂ
ಈ ನೋವು ಬೇಡವೆಂದಷ್ಟೇ
ಬಹುಷಃ …
ಯುದ್ಧೋನ್ಮಾದದಲ್ಲಿ ಅಬ್ಬರಿಸುವ
ಯಾರ ಮನೆಯ ಮಗನೂ ಗಡಿಯಲಿಲ್ಲ…
ಅಲ್ಲಿ ಸತ್ತವನ
ಇಲ್ಲಿ ಸತ್ತವನ
ಇನ್ನೇಲ್ಲೋ ಸತ್ತವನ
ಮಡದಿಯರ ಒಡೆದ ಕೈಬಳೆಗಳ
ಸದ್ದ ಸುಖಿಸುವ ಸಂಕುಚಿತನೊಬ್ಬನ
ನೀಚ ಹಾಡಿಗೆ
ಉಧೋ ಎಂದ
ಹೆಣ್ತನ ಸತ್ತವರ
ಕುರಿತು ಕನಿಕರ ಪಡಬೇಕೆ
ಇಲ್ಲ ಇನ್ನಷ್ಟು ..
ಯುದ್ಧ-ಯುದ್ಧವೆಂದಷ್ಟೇ
ಹಪಹಪಿಸಬೇಕೆ ತಿಳಿದಿಲ್ಲ …
ಯಾರದೋ ಸಾವು
ಹಬ್ಬವಾದ ದಿನಗಳಲ್ಲಿ
ಸತ್ತ ಅವರ ಅಂತಃಕರಣದ ಕುರಿತು
ಯೋಚಿಸುತ್ತೇನೆ …
ಯಾವ ಯುದ್ಧದಲ್ಲೂ
ಉಳ್ಳವರ ಮನೆಯ ಬಲಿತ ಹೆಣಗಳು ಬಿದ್ದಿಲ್ಲ
ರಕ್ತಮೋಹಿ ನಾಯಕರೂ ಸತ್ತಿಲ್ಲ
ಯುದ್ಧ ವೆಂದರೇ …
ತಿಂದು ತೇಗುವವರ
ಸಂತೋಷಕ್ಕಾಗಿ ನಡೆವ
ಬಡವರ ಮಕ್ಕಳ ಸಾವಿನ ವೈಭವವಷ್ಟೇ …
ನೀವು ಹೇಳಿದ್ದು ಸತ್ಯ. ನಿಮ್ಮಂತ ದೇಶ ದ್ರೋಹಿಯೊಂದಿಗೆ ನಾನು ಇದ್ದೇನೆ.
ಕಾಲು ಕೆರೆದುಕೊಂಡು ಯುದ್ಧಕ್ಕೆ ಬರುವವರೊಂದಿಗೆ ಸರಸವಾಡಬೇಕೆ?