ಕಾಸು ಕುಡಿಕೆ:‘ಯುಲಿಪ್ ಟ್ರೋಫಿ’ ಎಂಬ ರಾಷ್ಟ್ರೀಯ ಹಗ್ಗ ಜಗ್ಗಾಟದ ಪಂದ್ಯ’

ಕಾಕು-೨೦
-ಜಯದೇವ ಪ್ರಸಾದ ಮೊಳೆಯಾರ

When you are skinning your customers leave some skin on so that it grows for you to skin again. . . . . . . Nikita Khrushchev

ಗ್ರಾಹಕರನ್ನು ಸುಲಿಗೆ ಮಾಡುವಾಗ, ಅದು ಬೆಳೆದು ಪುನಃ ಸುಲಿಗೆ ಮಾಡಲು ಬೇಕಾಗುವಂತೆ ಸ್ವಲ್ಪ ಚರ್ಮವನ್ನು ಹಾಗೆಯೇ ಬಿಟ್ಟು ಬಿಡಿ.

. . . . . ನಿಕಿತ ಕೃಷ್ಚೆವ್

“ನೀವೆಂತದ್ದು ಮೊಳೆಯಾರ್ರೇ? ಒಮ್ಮೊಮ್ಮೆ ಬರೇ ಟೆಕ್ನಿಕಲ್ಲು. ಹಾಸ್ಯ, ಕತೆ ಏನೂ ಇರೋದಿಲ್ಲ. ನಮಗಂತೂ ತಲೆಬುಡ ಅರ್ಥವಾಗುವುದಿಲ್ಲ. ಆಸಕ್ತಿ ಮೊದ್ಲೇ ಇಲ್ಲ. ನಾವೆಲ್ಲ ನಿಮ್ಮ ಕುಡಿಕೆಯಿಂದ ಬರೇ ಮಸಾಲೆ ತಿಂದು ದೋಸೆ ಬಿಸಾಡುವವರು. ಗೊತ್ತಾಯ್ತಾ? ಇನ್ನೂ ಸ್ವಲ್ಪ ಜಾಸ್ತಿ ಮಸಾಲೆ ಹಾಕಿ ಬರೀರಿ” ಅಂತ ಖ್ಯಾತ ಹಾಸ್ಯ ಭಾಷಣಗಾರ್ತಿ ಉಡುಪಿಯ ಸಂಧ್ಯಾ ಶೆಣೈ ಫೋನಿನಲ್ಲಿ ಇತ್ತೀಚೆಗೊಂದು ದಿನ ದಬಾಯಿಸಿಯೇ ಬಿಟ್ಟರು.

ಹೌದು. ಕೆಲವೊಮ್ಮೆ ಕಾಕುವಿನಲ್ಲಿ ಸ್ವಲ್ಪ ಅತಿಯಾಗಿಯೇ ಟೆಕ್ನಿಕಲ್ ಅಂಶಗಳು ನುಸುಳುತ್ತವೆ. ಹಾಗೆಂದು ನನ್ನ ಉದ್ಧೇಶವೇನೂ ಇರುವುದಿಲ್ಲ.

ನನ್ನ ಪ್ರಯತ್ನ ಯಾವತ್ತೂ ಅತ್ಯಂತ ಸರಳವಾಗಿ ವಿತ್ತೀಯ ವಿಷಯಗಳನ್ನು ವಿಶ್ಲೇಷಿಸುವುದೇ ಆಗಿರುತ್ತದೆ. ಆದರೆ, ವಸ್ತುನಿಷ್ಠತೆಯ ದೃಷ್ಟಿಯಿಂದ ಎಲ್ಲಾ ಸಂದರ್ಭಗಳಲ್ಲೂ ಅತಿ ಸರಳವಾಗಿ ಕಥಾರೂಪದಲ್ಲಿ ಮಾತು ಬೆಳೆಸಲು ಆಗುವುದಿಲ್ಲ. ಅತಿಮುಖ್ಯವಾದ ಕೆಲವೊಂದು ಟೆಕ್ನಿಕಲ್ ಅಂಶಗಳನ್ನು ಕೆಲವೊಮ್ಮೆ ಹೇಳಲೇ ಬೇಕಾಗುತ್ತದೆ. ಅವುಗಳನ್ನೂ ಮೆಚ್ಚಿ ಹಲವರು ಅಭಿನಂದಿಸುತ್ತಾರೆ, ಪ್ರೋತ್ಸಾಹಿಸುತ್ತಾರೆ.

ನಮ್ಮಲ್ಲಿ ದೋಸೆ ಬಿಸಾಕಿ ಬರೇ ಮಸಾಲೆ ತಿನ್ನುವವರೂ ಇದ್ದಾರೆ, ಮಸಾಲೆ ಬಿಸಾಕಿ ಬರೇ ದೋಸೆ ತಿನ್ನುವವರೂ ಇದ್ದಾರೆ. ಅಲ್ಲದೆ, ಮಸಾಲೆಯನ್ನೂ ದೋಸೆಯನ್ನೂ ಒಟ್ಟಾಗಿ ಜಗಿದು ಚಪ್ಪರಿಸುವವರೂ ಇದ್ದಾರೆ.

ಅದಿರಲಿ, ಈ ಬಾರಿ ಸಧ್ಯ ನಮ್ಮಗಳ ಮಧ್ಯೆ ನಡೆಯುತ್ತಿರುವ ಒಂದು ಹಗ್ಗ ಜಾಗ್ಗಾಟದ (Tug of War) ಕತೆ ಹೇಳುತ್ತೇನೆ. ಕತೆ ಗಮ್ಮತುಂಟು. ಇದೋ ಕೇಳಿ,

ಜೀವನದಲ್ಲಿ ಎಷ್ಟು ಕಲಿತರೂ ಸಾಲದೆ ಜೀವನಪರ್ಯಂತ ಕಲಿಯುತ್ತಲೇ ಇರಬೇಕಾದಂತಹ ಈ ಕಲಿಗಾಲದಲ್ಲಿ, ವಿತ್ತಪತ್ರಗಳ ಹಾಗೂ ಶೇರುಗಟ್ಟೆಯ ನಿಯಂತ್ರಣಕ್ಕಾಗಿ SEBI (Securities and Exchange Board of India) ಎಂತೆಂಬ ಸರಕಾರೀ ಅಂಗಸಂಸ್ಥೆ ಜನ್ಮ ತಾಳಿದೆಯಷ್ಟೆ? ಇದು ಲಕ್ಷಾಂತರ ಕೋಟಿ ವ್ಯವಹಾರ ನಡೆಯುವೆಡೆಯಲ್ಲಿ ಮೋಸ ವಂಚನೆ ಆಗದೆ ಸರಿಯಾಗಿ ಕಾರೋಬಾರು ನಡೆಯುವಂತೆ ನೋಡಿಕೊಳ್ಳುವ ಹಾಗೂ ಅದಕ್ಕೆ ಬೇಕಾದ ಕಾನೂನುಗಳನ್ನು ಮಾಡುವ ಸಂಸ್ಥೆ.

ಕಳೆದೆರಡು ದಶಕಗಳಲ್ಲಿ ಮ್ಯೂಚುವಲ್ ಫಂಡು ಉದ್ಯಮೆ ಹುಟ್ಟಿ ದೈತ್ಯ ಗಾತ್ರಕ್ಕೆ ಬೆಳೆಯುವಾಗ ಹಲವೆಡೆ ಸೆಬಿಯು ಮಧ್ಯೆ ಪ್ರವೇಶಿಸಿ ಸಾಮಾನ್ಯ ಹೂಡಿಕೆದಾರರ ಹಿತರಕ್ಷಕೆಗಾಗಿ ಹಲವಾರು ಕಾನೂನುಗಳನ್ನು ಮಾಡಿದೆ. ಪ್ರತಿಯೊಂದು ಹೊಸ ಫಂಡನ್ನೂ ಸೆಬಿಯ ಅನುಮತಿ ಪಡೆದೇ ಆರಂಭಿಸಬೇಕು; ಅಷ್ಟೇ ಅಲ್ಲದೆ, ಅವುಗಳ ಹೂಡಿಕೆ, ನೆಟ್ ಅಸೆಟ್ ವಾಲ್ಯೂ (NAV) ಪರಿಕಲ್ಪನೆ, ಅದರ ದೈನಂದಿನ ಘೋಷಣೆ, ಯಾವೆಲ್ಲ ಮಾಹಿತಿಗಳನ್ನು ಯಾವ ಕಾಲಾವಧಿಯಲ್ಲಿ ಸಾರ್ವಜನಿಕರಿಗೆ ಬಿಡುಗಡೆಮಾಡಬೇಕು ಇತ್ಯಾದಿ ಕಾನೂನುಗಳನ್ನು ಸೆಬಿಯೇ ನಿರ್ಮಿಸಿ ಗ್ರಾಹಕರ ಹಿತದೃಷ್ಟಿಯಿಂದ ಅನುಷ್ಠಾನಕ್ಕೆ ತಂದಿದೆ.

ಆದರೆ, ಇವೆಲ್ಲ ಆಢಳಿತಾತ್ಮಕ ವಿಷಯಗಳನ್ನು ಮೀರಿ ಅತಿಮುಖ್ಯವಾದ ಸಂಗತಿ ಫಂಡ್ ಹೌಸ್‌ಗಳ ಆದಾಯಕ್ಕೆ ಸಂಬಂಧಪಟ್ಟದ್ದು. ಲಾಗಾಯ್ತಿನಿಂದ ಫಂಡ್ ಹೌಸ್‌ಗಳು ಒಂದು ಹೊಸ ಸ್ಕೀಂ/ಫಂಡ್ ಹೊರತಂದರೆ ಅದಕ್ಕೆ ಸುಮಾರು ೨.೫% ದಷ್ಟು ಎಂಟ್ರಿ ಶುಲ್ಕ ಎಂದು ವಿಧಿಸುತ್ತಿತ್ತು.

ಈ ೨.೫% ದಲ್ಲಿ ೧% ಏಜೆಂಟರ ಕಮಿಶನ್, ಉಳಿದ ೧.೫% ರಲ್ಲಿ ಜಾಹೀರಾತು ಮತ್ತು ಇತರ ಆಢಳಿತಾತ್ಮಕ ವೆಚ್ಚ ಹಾಗೂ ಫಂಡ್ ಹೌಸ್‌ನವರ ಕಮಿಶನ್ ಕೂಡಾ ಇರುತ್ತಿತ್ತು. ರೂ ೧೦ ರಲ್ಲಿ ಇವೆಲ್ಲವನ್ನು ಕಳೆದು ಉಳಿದ ೯.೭೫ ರೂ ಗಳನ್ನು ಮ್ಯೂಚುವಲ್ ಫಂಡಿನಲ್ಲಿ ಹೂಡಲ್ಪಡುತ್ತಿತ್ತು. ಅಂದರೆ ಹೂಡಿದ ದಿನವೇ ೧೦ ರೂ ಗಳ ಎನ್.ಎ.ವಿ ೯.೭೫ ರೂ. (ಇದೇ ರೀತಿ ಫಂಡಿನಿಂದ ಹೊರ ಬರುವಾಗ ೧% ಎಕ್ಸಿಟ್ ಶುಲ್ಕವನ್ನೂ ವಿಧಿಸುತ್ತಿತ್ತು) ಈ ರೀತಿಯ ಆದಾಯದಲ್ಲಿ ಬೆಳೆಯುತ್ತಾ ಬಂದ ಮ್ಯೂಚುವಲ್ ಫಂಡುಗಳು ದಿನ ಬೆಳಗಾದರೆ ಒಂದು ಹೊಸ ಫಂಡಿನೊಂದಿಗೆ ಹಾಜರಾಗುತ್ತಿದ್ದವು.

ಇವತ್ತು ಇದು ಒಳ್ಳೆಯದಾದರೆ, ಮರುದಿನ ಅದರಿಂದ ಬೆಟರ್ ಇನ್ನೊಂದು ಫಂಡು. ಹೀಗೆ ಹೇರಳ ಧನರಾಶಿಯನ್ನು ಒಟ್ಟು ಹಾಕಿ ಸುಮಾರು ೭-೮ ಲಕ್ಷ ಕೋಟಿ ರೂಪಾಯಿಗಳಷ್ಟು ದೊಡ್ಡ ವಿತ್ತಭೂತವಾಗಿ ಬೆಳೆದು ನಿಂತಿತು.

ತಾರ್ಕಿಕ ದೃಷ್ಟಿಯಿಂದ ನೋಡಿದರೆ ಹೊಸ ಹೊಸ ಫಂಡುಗಳನ್ನು ಹೊರತರುವುದಕ್ಕೆ ಯಾವುದೇ ಕಾರಣ ಇಲ್ಲ. ಕೇವಲ ಮಾರ್ಕೆಟಿಂಗ್ ಕಾರಣಕ್ಕಾಗಿ ಈ ರೀತಿ ಹೊಸ ಹೊಸ ಫಂಡುಗಳನ್ನು ಸೃಷ್ಟಿಸಿ ಅವುಗಳಿಂದ ಭಾರೀ ಪ್ರಮಾಣದ ಖರ್ಚುವೆಚ್ಚಗಳನ್ನು ಕಳೆಯುವುದು ಹಾಗೂ ಅವು ಹಳತಾದಂತೆ ಅವುಗಳನ್ನು ಕೇಳುವವರಿಲ್ಲದಾಗುವ ದುರವಸ್ಥೆ ಹೂಡಿಕೆದಾರರ ಹಿತಿದೃಷ್ಟಿಯಲ್ಲಿ ಅಲ್ಲ ಎಂಬ ನಿರ್ಣಯಕ್ಕೆ ಸೆಬಿ ಬಂದಿತು.

ಅಲ್ಲದೆ, ಆಗಸ್ಟ್ ೨೦೦೯ ರಿಂದ ಮೊದಲ್ಗೊಂಡು ಮ್ಯೂಚುವಲ್ ಫಂಡುಗಳು ವಿಧಿಸುವ ೨.೫% ಎಂಟ್ರಿ ಲೋಡ್ ಹಾಗೂ ಫಂಡಿನಿಂದ ಹೊರ ಬರುವಾಗ ವಿಧಿಸುವ ೧% ಎಕ್ಸಿಟ್ ಲೋಡ್ ಅನ್ನು ಸಂಪೂರ್ಣವಾಗಿ ನಿಷೇಧಿಸಿತು. ಅಂದರೆ ಕೊಟ್ಟ ೧೦ ರೂ ಗಳಲ್ಲಿ ಸಂಪೂರ್ಣವಾಗಿ ೧೦ ರೂಗಳೂ ಹೂಡಲ್ಪಡಬೇಕು; ಮತ್ತು ಹಿಂತಿರುಗಿಸುವಾಗಲೂ (ಕನಿಷ್ಟ ೧ ವರ್ಷ ಮೀರಿದ ಫಂಡುಗಳನ್ನು) ಇದ್ದ ಹಣವನ್ನು ಯಾವುದೇ ಖಡಿತವಿಲ್ಲದೆ ಹಿಂತಿರುಗಿಸಬೇಕು ಎಂಬ ಕಾನೂನು ತಂದಿತು. ಯಾವುದೇ ಖರ್ಚುವೆಚ್ಚಗಳನ್ನು ಕೂಡಾ ಕಳೆಯುವಂತಿಲ್ಲ.

ಯಾನೀ ಕೀ, ಏಜೆಂಟರಿಗೆ, ಫಂಡು ಹೌಸ್‌ಗಳಿಗೆ ಕಮಿಶನ್ ಖೋತಾ. ಗ್ರಾಹಕರ ವೆಚ್ಚದಲ್ಲಿ ಪಾರ್ಥೇನಿಯಂ ಬಲ್ಲೆಯಂತೆ ಹಬ್ಬುತ್ತಿದ್ದ ಹೊಸ ಫಂಡುಗಳಿಗೆ ಖಡಿವಾಣ ಹಾಕಲು ಸೆಬಿಯು ಕಂಡುಕೊಂಡ ಸೂತ್ರ ಇದು. ಅಂತೂ ಇಂತೂ, ಚಿನ್ನದ ಮೊಟ್ಟೆಯಿಡುವ ಮ್ಯೂಚುವಲ್ ಫಂಡ್ ಎಂಬ ಕೋಳಿಯನ್ನು ಫಂಡುಹೌಸ್‌ಗಳೆಲ್ಲಾ ಸೇರಿ ಕೊನೆಗೊಂದು ದಿನ ಕೊಂದು ಚಿಕನ್ ಮಂಚೂರಿಯನ್ ಮಾಡೇ ಬಿಟ್ಟರು.

ಇದಾದ ಕೂಡಲೇ, ಪ್ರವಾಹದಂತೆ ಹರಿದು ಬರುತ್ತಿದ್ದ ಮ್ಯೂಚುವಲ್ ಫಂಡುಗಳು ರೇಗಿಸ್ತಾನದಲ್ಲಿ ಬಿದ್ದ ನೀರಿನಂತೆ ಬತ್ತಿ ಹೋದವು. ನಿನ್ನೆ ಮೊನ್ನೆಯವರೆಗೆ “ಮ್ಯೂಚುವಲ್ ಫಂಡು ಈಸ್ ದ ಬೆಸ್ಟ್ ಮಾರಾಯ್ರೇ. . . ” ಎನ್ನುತ್ತಿದ್ದ ನೆರೆಮನೆಯ ಸಹಿಯಾಸೆಯ ಏಜೆಂಟರೆಲ್ಲಾ ಸಡನ್ನಾಗಿ ಪ್ಲೇಟ್ ಚೇಂಜ್ ಮಾಡಿ ಯುಲಿಪ್ ಇನ್ಶ್ಯೂರನ್ಸ್ ಸ್ಕೀಂಗಳ ಬಗ್ಗೆ ನಮಗೆ ಕೊರೆಯತೊಡಗಿದರು. ಯುಲಿಪ್ ಎಂದರೆ ಯುನಿಟ್ ಲಿಂಕ್ಡ್ ಇನ್ಶ್ಯೂರನ್ಸ್. ಅಂದರೆ ಇನ್ಶ್ಯೂರನ್ಸೂ ಹೌದು ಮ್ಯೂಚುವಲ್ ಫಂಡಿನ ಯುನಿಟ್ ಕೂಡಾ ಹೌದು.

ಒಂದು ರೀತಿಯ ಎಡಬಿಡಂಗಿ. ಟು ಇನ್ ವನ್. ನಾವು ಹೂಡಿದ ದುಡ್ಡಿನಲ್ಲಿ ಅಲ್ಪ ಪ್ರಮಾಣವನ್ನು ಇನ್ಶ್ಯೂರನ್ಸ್ ಅಥವ ವಿಮೆಗಾಗಿ ವಿನಿಯೋಗಿಸಿ ಉಳಿದ ದುಡ್ಡಿನಲ್ಲಿ ಮ್ಯೂಚುವಲ್ ಫಂಡಿನ ಯುನಿಟ್ಸ್‌ಗಳನ್ನು ಖರೀಧಿಸುತ್ತಾರೆ. ಇಲ್ಲಿ ಮುಖ್ಯ ವಿಷಯವೇನೆಂದರೆ ಈ ಯುಲಿಪ್ ಸ್ಕೀಂ ಸೆಬಿಯ ಆಡಳಿತದಡಿಯಲ್ಲಿ ಬರುವುದೇ ಇಲ್ಲ. ಇದು ವಿಮೆಯ ಸ್ಕೀಂ ಎಂದಾದ್ದರಿಂದ ಇರ್ಡಾ (Insurance Regulation and Development Authority) ಅಡಿಯಲ್ಲಿ ಬರುತ್ತದೆ.

ಹಾಗಾಗಿ ಇಲ್ಲಿ ಶೇಖಡಾ ೧೦-೪೦ ರವರೆಗೂ ಕಮಿಶನ್‌ನೊಂದಿಗೆ ವಿಮೆಯ ಹೆಸರು ಹೇಳಿ ಮ್ಯೂಚುವಲ್ ಫಂಡುಗಳ ಮಾರಾಟ ಭಿರುಸಿನಿಂದ ಮುಂದುವರಿಯಿತು. ಸ್ವಾಭಾವಿಕವಾಗಿಯೇ ಮ್ಯೂಚುವಲ್ ಫಂಡಿಗೆ ಎಂಟ್ರಿ ಲೋಡ್‌ನ ಈ ‘ಬಾಕ್ ಡೋರ್ ಎಂಟ್ರಿ’ ಸೆಬಿಯ ಕಣ್ಣು ಕೆಂಪಾಗಿಸಿತು. ಗ್ರಾಹಕರ ಹಿತದೃಷ್ಟಿಯಿಂದ, ಈ ಪರಿಪಾಠವನ್ನು ಹೇಗಾದರೂ ಮಟ್ಟಹಾಕಬೇಕು ಅಂತ ಸೆಬಿ ಸ್ಕೆಚ್ ಹಾಕತೊಡಗಿತು.

ಯುಲಿಪ್‌ಗಳೂ ಶೇರು ಮಾರುಕಟ್ಟೆಯಲ್ಲಿ ವ್ಯವಹರಿಸುವ ಸ್ಕೀಂ ಆದ್ದರಿಂದ ನೀವುಗಳು ಯಾಕೆ ನಮ್ಮಲ್ಲಿ ರಿಜಿಸ್ಟರ್ ಮಾಡಿಕೊಳ್ಳುವುದಿಲ್ಲ? ಹಾಗೂ ನಮ್ಮ ಕಾನೂನುಗಳಿಗೆ ಯಾಕೆ ಬದ್ಧವಾಗಿಲ್ಲ ಎಂಬ ನೋಟೀಸನ್ನು ಜನವರಿಯಲ್ಲಿ ಸೆಬಿಯು ಎಲ್ಲಾ ಯುಲಿಪ್ ಮಾರುವ ಸಂಸ್ಥೆಗಳಿಗೆ ನೀಡಿತು. ಸೆಬಿಯಲ್ಲಿ ಹೋಗಿ ರಿಜಿಸ್ಟರ್ ಮಾಡಿಕೊಂಡರೆ ಮೊತ್ತ ಮೊದಲು ಯಾವ ಕಾನೂನು ಅವರ ಕೊರಳ್ಗೆ ಉರುಳ್ ಆಗುವುದೆಂದು ಅವರೆಲ್ಲರಿಗೂ ಚೆನ್ನಾಗಿ ಗೊತ್ತು.

“ನಾವುಗಳು ವಿಮೆಯನ್ನು ಮಾರುವ ಸಂಸ್ಥೆಗಳು, ಮಹಾಸ್ವಾಮೀ, ನಾವು ಲಾಗಾಯ್ತಿನಿಂದ ವಿಮೆಯ ಆಡಳಿತ ಸಂಸ್ಥೆಯಾದ ಇರ್ಡಾ ಛತ್ರಛಾಯಾದಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದೇವೆ, ಮಹಾಸ್ವಾಮೀ” ಎಂಬ ವಿನಯಯಪೂರ್ವಕ, ಚಾಣಾಕ್ಷ ಉತ್ತರವನ್ನು ಈ ಯುಲಿಪ್ ಸಂಸ್ಥೆಗಳು ನೀಡಿ ಗೆಲುವಿನ ನಗೆ ಬೀರಿದವು.

ಸೋ, ಇದೀಗ ಕಳೆದ ವಾರ ಸೆಬಿಯು ೧೪ ಯುಲಿಪ್ ಸಂಸ್ಥೆಗಳಿಗೆ ತಮ್ಮಲ್ಲಿ ರಿಜಿಸ್ಟರ್ ಮಾಡಿಕೊಳ್ಳುವವರೆಗೆ ಯುಲಿಪ್‌ನಲ್ಲಿ ವ್ಯವಹರಿಸದಂತೆ ನಿಷೇಧಾಜ್ಞೆ ನೀಡಿದೆ.

ಈ ಆಜ್ಞೆ ಬಂದ ೨೪ ಘಂಟೆಯೊಳಗೆ ಇರ್ಡಾ ಭಾಯ್ ಅವರ ರಕ್ಷಣೆಗೆ ಮುಂದೆ ಬಂದು ‘ನೀವುಗಳು ಸೆಬಿ ಹೇಳಿದ್ದನ್ನು ಕೇಳಬೇಕೆಂದಿಲ್ಲ, ನೀವೆಲ್ಲ ನಮ್ಮ ಆಧೀನದಲ್ಲಿ ಇರುವವರು, ನಾವು ಹೇಳಿದ್ದನ್ನು ಮಾತ್ರ ಕೇಳಿದರೆ ಸಾಕು, ನಿಮ್ಮ ಬಿಸಿನೆಸ್ ನೀವು ಚಾಲೂ ರಕ್ಕೋ. ಉಸ್ಕಾ ಬಾತ್ ನಹೀ ಸುನ್‌ನೇ ಕಾ. ವೋ ಕೌನ್ ಹೋತಾ ಹೈ ಪೂಚ್ನೇವಾಲಾ? ’ ಎಂದು ಸೆಬಿಯ ವಿರುದ್ಧರಣಕಹಳೆ ಊದಿತು.

ಅರ್ಥಾತ್, ಯುಲಿಪ್ ಮೇಲೆ ಹಕ್ಕು ಸ್ಥಾಪನಾರ್ಥಾಯ ಇರ್ಡಾ ಮತ್ತು ಸೆಬಿ ಎಂಬ ಎರಡು ಸರಕಾರದ ಅಂಗಸಂಸ್ಥೆಗಳು ಸಾರ್ವಜನಿಕವಾಗಿ ಹಗ್ಗ ಜಗ್ಗಾಟಕ್ಕೆ ಇಳಿದಿದ್ದಾರೆ. ಈ ರೀತಿ ಎರಡು ಸರಕಾರೀ ಸಂಸ್ಥೆಗಳು ಹಕ್ಕಿಗಾಗಿ ಜಗಳಾಡುವುದು ಬಹಳ ವಿಶೇಷ ಹಾಗೂ ಅಪರೂಪ.

ಕಳೆದ ಶುಕ್ರವಾರ/ಶನಿವಾರ (೯-೧೦, ಎಪ್ರಿಲ್) ನಡೆದ ಈ ಘಟನೆಗೆ ಸೋಮವಾರ ವಿತ್ತ ಮಂತ್ರಿ, ‘ಈ ಎರಡೂ ಸಂಸ್ಥೆಗಳೂ ಕೋರ್ಟಿನ ಮೊರೆಹೊಕ್ಕು ಯುಲಿಪ್ ಸ್ವಾಮ್ಯದ ಬಗ್ಗೆ ಸ್ಪಷ್ಟೀಕರಣ ಪಡೆದುಕೊಳ್ಳಬೇಕು, ಸಧ್ಯಕ್ಕೆ ಪರಿಸ್ಥಿತಿ ಮೊದಲಿದ್ದಂತೆಯೇ’ ಎಂದು ಹೇಳಿ ತನ್ನ ಜವಾಬ್ದಾರಿಯಿಂದ ಕೈಯನ್ನು ತೊಳೆದುಕೊಂಡರು. ರಾಜಕಾರಣಿಗಳಿಗೆ ಈ ರೀತಿ ಆಗಿಂದಾಗ್ಗೆ ಕೈತೊಳೆದುಕೊಳ್ಳುವ ಚಾಳಿ ಬೆಳೆಸಿಕೊಂಡಿರಬೇಕಾದರೆ ಇನ್ನು ಯಾರು ತಾನೆ ಅವರ ಕೈಶುದ್ಧವಿಲ್ಲವೆಂದು ಹೇಳಬಹುದು?

ಇನ್ನೇನು, ಸಧ್ಯಕ್ಕೆ ಪರಿಸ್ಠಿತಿ ‘ಈ ಮೊದಲಿನಂತೆ’ (status quo ante) ಹಾಗೂ ಮುಂದಿನ ಪರಿಸ್ಥಿತಿ ಕೋರ್ಟ್ ಹೇಳಿದಂತೆ ಎಂದು ಎಲ್ಲರೂ ನಿರಾಳರಾಗಿ ಉಸಿರು ಬಿಡಬೇಕೆನ್ನುವಷ್ಟರಲ್ಲಿ ಮರುದಿನವೇ ಇರ್ಡಾ, ‘ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ; ೧೪ ಯುಲಿಪ್ ಕಂಪೆನಿಗಳ ಮೇಲಿನ ನಿರ್ಬಂಧ ಹಳೆ ಸ್ಕೀಂಗಳನ್ನು ಹೊರತುಪಡಿಸಿ ಹೊಸ ಸ್ಕೀಂಗಳ ಮಟ್ಟಿಗೆ ಖಂಡಿತವಾಗಿಯೂ ಲಾಗೂ ಇದೆ’ ಎಂದು ಸೆಕೆಂಡ್ ಅಟ್ಯಾಕ್ ಕೊಟ್ಟಿತು.

ಸೆಬಿಯ ಈ ನಿಲುವಿನಿಂದ ಮಾರುಕಟ್ಟೆಗೆ ಬರುವ ದುಡ್ಡು ನಿಂತು ಹೋದೀತು, ಮಾರುಕಟ್ಟೆ ಕುಸಿದೀತು, ಇದರಿಂದ ಗ್ರಾಹಕರಿಗೆ ಭಾರಿ ತೊಂದರೆಯಾದೀತು, ಎಂದೆಲ್ಲ ಇರ್ಡಾ ತಂಡದವರಿಂದ ಸೆಬಿ ತಂಡದ ವಿರುದ್ಧ ಪ್ರಚಾರ ನಡೆಯುತ್ತಿದೆ. ತನ್ನ ಪ್ರೀಮಿಯಂನ ಕೇವಲ ೨% ದಷ್ಟು ಮಾತ್ರ ನಾಮ್ ಕೆ ವಾಸ್ತೆ ಜೀವವಿಮೆಯಲ್ಲಿ ತೊಡಗಿಸಿ ಸಿಂಹಪಾಲನ್ನು ಮ್ಯೂಚುವಲ್ ಫಂಡಲ್ಲೇ ವಿನಿಯೋಗಿಸಿ ಅದನ್ನು ಅದೇ ರೀತಿ ಪ್ರಚಾರ ಕೂಡಾ ಮಾಡಿ,

ಸೆಬಿ ಕಣ್ಣು ತಪ್ಪಿಸಿ ಭಾರೀ ಪ್ರಮಾಣದ ಕಮಿಶನ್, ಖರ್ಚುಚೆಚ್ಚಗಳನ್ನು ಗ್ರಾಹಕರಾದ ನಮ್ಮ ತಲೆಗೆ ಹಚ್ಚುವ ಯುಲಿಪ್ ಯೋಜನೆಗಳು ಸೆಬಿಯ ಕೊಡೆಯಡಿಯಲ್ಲಿ ಬರಬಾರದು ಎಂದು ಯಾವ ಗ್ರಾಹಕ ಹೇಳುವ? ಅಷ್ಟಕ್ಕೆಲ್ಲಾ, ಯುಲಿಪ್ ಕಂಪೆನಿಗಳು ಸೆಬಿ ಎಂದರೆ ಪ್ಲೇಗ್‌ನಂತೆ ದೂರ ಓಡಿ ‘ಇರ್ಡಾ ಭಾಯ್’ ಹಿಂದೆ ಯಾಕೆ ಅಡಗಿಕೊಳ್ಳಬೇಕು? ಸೆಬಿ ಹೇಳಿದಂತೆ ಸುಮ್ಮನೆ ಹೋಗಿ ಯಾಕೆ ರಿಜಿಸ್ಟರ್ ಮಾಡಬಾರದು? ಸ್ವಲ್ಪ ಯೋಚಿಸಿ ನೋಡಿದರೆ ಇದರ ಕಾರಣ ಎಲ್ಲರಿಗೂ ಸುಸ್ಪಷ್ಟವಾಗಿಯೇ ಇದೆ!

ಸೆಬಿ ಈಗಾಗಲೇ ಈ ವಿಷಯದಲ್ಲಿ ತನ್ನನ್ನು ಕೇಳದೆ ಯಾವ ನಿರ್ಧಾರಕ್ಕೂ (ex parte) ಬರಬಾರದು ಎಂದು ಹೇಳಿ ಕೋರ್ಟಿನ ಮೆಟ್ಟಲೇರಿದೆ. ಇನ್ನೇನು, ಒಂದು ಸುಧೀರ್ಘವಾದ ‘ಯುಲಿಪ್ ಟ್ರೋಫಿ’ ರಾಷ್ಟ್ರೀಯ ಜಗ್ಗಾಟದ ಪಂದ್ಯವನ್ನು ನಾವೆಲ್ಲಾ ನೋಡಲಿರುವೆವು.

(ಇದೀಗ ಯುಲಿಪ್ ಸ್ಕೀಮುಗಳೆಲ್ಲವೂ ಐ.ಆರ್.ಡಿ.ಎ ಯ ಆಧೀನದಲ್ಲಿಯೇ ಬರುತ್ತದೆ ಎಂಬ ಕಾನೂನನ್ನು ಕೇಂದ್ರ ಸರಕಾರ ತಂದು ಈ ಜಗ್ಗಾತಕ್ಕೆ ತೆರೆ ಎಳೆದಿದೆ. . . ಜಯದೇವ)

ಸರ್ವರಿಗೂ ಸ್ವಾಗತ! ಟಿಕೆಟ್ ಇಲ್ಲ ಹಾಗೂ ಅಂದಚಂದದ ಬೆಡಗಿಯರ ಚಿಯರ್ ಡಾನ್ಸ್ ಕೂಡಾ ಇದೆ ಎಂದು ವದಂತಿ.

೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯

ಅಟ್ಯಾಚ್‌ಮೆಂಟ್:

ಮ್ಯೂಚುವಲ್ ಫಂಡಿನ ಬಗ್ಗೆ ಬರೆದ ಲೇಖನಗಳ ಮೇಲೆ ಭಾರಿ ಉತ್ತಮ ಪ್ರತಿಕ್ರಿಯೆಗಳು ಬರುತ್ತಿವೆ. ಈ ವಿಷಯದ ಮೇಲೆ ಇನ್ನಷ್ಟು ವಿಸ್ತಾರವಾಗಿ ಹೆಚ್ಚಿನ ಮಾಹಿತಿಗಳೊಂದಿಗೆ ಬರೆಯುತ್ತಿರಿ ಎಂಬುದು ಸಾರ್ವತ್ರಿಕ ಬೇಡಿಕೆ. ಗಣ್ಯವಾಗಿ, ಶ್ರೀ ಗಣಪ್ಪಯ್ಯ ಭೀಮಗುಳಿ ಎಂಬವರು ಪತ್ರಮುಖೇನ ಒಂದು ಉತ್ತಮವಾದ ವಿಮರ್ಶೆಯನ್ನು ನೀಡಿ ಪ್ರೋತ್ಸಾಹ ನೀಡಿದ್ದಾರೆ. ಎಲ್ಲರಿಗೂ ಧನ್ಯವಾದಗಳು.

ಡಾ| ಕೃಷ್ಣಮೂರ್ತಿಯವರು ಈ ಮೇಲ್ ಕಳುಹಿಸಿ ‘ಗುರುಗುಂಟಿರಾಯರು ಯಾಕೆ ನಗುವುದೇ ಇಲ್ಲ? ಯಾವತ್ತೂ ಸಿಟ್ಟಿನಲ್ಲೇ ಯಾಕೆ ಇರುತ್ತಾರೆ?’ ಎಂದು ಕೇಳಿದ್ದಾರೆ.

ಗುರುಗುಂಟಿರಾಯರು ಸ್ವಲ್ಪ ಹಾಗೇ, ಒಂದು ಟೈಪ್ ಜನ! ಅವರ ಪ್ರಾಬ್ಲೆಂ ಏನೆಂದು ಖಚಿತವಾಗಿ ನನಗೂ ಗೊತ್ತಿಲ್ಲ, ಡಾಕ್ಟ್ರೆ. ನೀವೇ ಏನಾದ್ರು ಚಕ್-ಅಪ್ ಮಾಡಿ ಮದ್ದು ಕೊಟ್ರೆ ಆಗ್ತಿತ್ತೋ ಏನೋ. . . !

‍ಲೇಖಕರು avadhi

July 26, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ತೆರಿಗೆ ಹೆಂಗೆಲ್ಲಾ ಕದೀತಾರೆ ಗೊತ್ತಾ?

ದುಡ್ಡು ಕೊಟ್ಟ ಮೇಲೆ ’ಬಿಲ್ಲು ಕೇಳಿ ಸ್ವಾಮಿ ’ ಎಂದು ನಾರಾಯಣ ಸ್ವಾಮಿ ಅವರು ಬರೆದ ಲೇಖನದ ಮುಂದಿನ ಭಾಗ ಎನ್ ನಾರಾಯಣಸ್ವಾಮಿ ತೆರಿಗೆ ಕದಿಯುವ...

ಬಿಲ್ಲು ಕೇಳಿ ಸ್ವಾಮಿ

ತೆರಿಗೆ ನಿಮಗೆ ಅರಿವಿಲ್ಲದಂತೆ ಪಾವತಿಸಿರುವಿರಿ ಅರಿವುಂಟೇ ಎನ್  ನಾರಾಯಣಸ್ವಾಮಿ ಹೀಗೆ ತೆರಿಗೆ ಎಂದರೆ ಬೆಚ್ಚಿ ಬೀಳುತ್ತೀರಲ್ಲವೇ?ಏಕೆಂದರೆ...

ಕಾಸು – ಕುಡಿಕೆ ಈಗ ಪುಸ್ತಕವಾಗಿ

ಅವಧಿಯಲ್ಲಿ ಅಂಕಣವಾಗಿ ಬರುತ್ತಿದ್ದ ಕಾಸು ಕುಡಿಕೆ ಈಗ ಪುಸ್ತಕವಾಗಿ! ಮೊಳೆಯಾರರಿಗೆ ಅವಧಿಯ ಅಭಿನಂದನೆಗಳು.. ಬರುತ್ತಿದೆ ಕಾಸು ಕುಡಿಕೆ! -...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This