ಯು ಆರ್ ಲೋನ್ಲಿ ಅಟ್ ದಿ ಟಾಪ್…

gali2.gif

 

 

ಗಾಳಿ ಬೆಳಕು

ನಟರಾಜ್ ಹುಳಿಯಾರ್

ದ್ರಾಸಿನಲ್ಲಿ ಕಾರ್ಪೋರೇಟ್ ಸಂಸ್ಥೆಯೊಂದರ ಮುಖ್ಯಸ್ಥರಾಗಿರುವ ಸೆಲ್ವಂ ಅವತ್ತು ಅಪಾರ ಟೆನ್ಷನ್ ನಲ್ಲಿದ್ದರು. “ರಿಲ್ಯಾಕ್ಸ್ ಪ್ಲೀಸ್” ಪುಸ್ತಕ ಕೂಡ ಅವರ ಟೇಬಲ್ಲಿನ ಮೇಲಿತ್ತು. ಆ ಪುಸ್ತಕವನ್ನು ಅವರ ಸಂಸ್ಥೆಯ ಅನೇಕ ತರುಣ, ತರುಣಿಯರಿಗೆ ಸೆಲ್ವಂ ಕೊಟ್ಟಿದ್ದರು.

ಆದರೆ ಅಮೇರಿಕಾದಿಂದ ಭಯಂಕರ ಸುದ್ದಿಗಳು ಬರತೊಡಗಿದ್ದವು. ಕ್ರೈಸಿಸ್ ಶುರುವಾಗಿತ್ತು. ಅಪಾರ ಹಣವಿರುವುದರಿಂದ ಅವರ ವೈಯಕ್ತಿಕ ಜೀವನಕ್ಕೇನೂ ತೊಂದರೆಯಾಗುವಂತಿರಲಿಲ್ಲ. ಅವರ ಸಂಸಾರಕ್ಕೂ ಕಷ್ಟವಾಗುವಂತಿರಲಿಲ್ಲ.

“ಹಾಗಾದರೆ ಒಂದು ಸಮಸ್ಯೆಯಿಂದ ಪಾರಾಗಿದ್ದೀರಿ. ಈ ವರ್ಷ ಅಥವಾ ಮುಂದಿನ ವರ್ಷ ನಿಮ್ಮ ಕಂಪೆನಿಗೆ ಎಂಥಾ ಬಿಕ್ಕಟ್ಟು ಬಂದರೂ ನಿಮಗೆ ತೀರಾ ನಷ್ಟವಿಲ್ಲ. ನಿಮ್ಮ ಮನೆಯ ಮನೆಯಲ್ಲಿನ ಲೈಫ್ ಸ್ಟೈಲಿನಲ್ಲಿ ಏನೂ ಏರುಪೇರಾಗುವುದಿಲ್ಲ. ಈ ವ್ಯವಹಾರದಲ್ಲಿ ಒಂದೆರಡು ಕೋಟಿ ಹೋದರೂ ನಿಮ್ಮ ಆರ್ಕಾಟ್ ಸ್ಟ್ರೀಟಿನ ಸೈಟುಗಳಲ್ಲಿ ಹೂಡಿರುವ ಹತ್ತಾರು ಕೋಟಿ ಹಣದಿಂದ ನಿಮ್ಮ ಕುಟುಂಬದ ಇನ್ನೂ ಮೂರು ತಲೆಮಾರಿನ ಜೀವನ ಆರಾಮಾಗಿ ನಡೆಯುತ್ತದೆ…” ಹೀಗೆ ಲಹರಿಯಲ್ಲಿ ಹೊಳೆದದ್ದನ್ನು ಹೇಳುತ್ತಿದ್ದೆ. ಅವರು ಹಾಗೇ ಹಿಂದಕ್ಕೆ ಒರಗಿ ಸ್ವಲ್ಪ ರಿಲ್ಯಾಕ್ಸ್ ಆಗಿ ಮಾತಾಡತೊಡಗಿದರು:

“ನಾನು ಹಾಗೆ ಯೋಚಿಸಿರಲಿಲ್ಲ. ನನ್ನ ಕಂಪನಿಯಲ್ಲಿರುವ ಹುಡುಗರ ಗತಿ ಏನು ಎಂಬುದು ನನ್ನ ಮುಖ್ಯ ಆತಂಕ… ಆಮೇಲೆ ನಾನು ಅಡ್ಡಾಡುವ ಎಲೈಟ್ ವಾತಾವರಣದಲ್ಲಿ ಸೋತ ಮುಖ ಹೊತ್ತು ಓಡಾಡಬೇಕಲ್ಲ ಅಂತ…”

“ಎರಡೂ ಅರ್ಧಸತ್ಯ ಮತ್ತು ಅರ್ಧಸುಳ್ಳು. ಲಾಭದ ಉದ್ದೇಶದಿಂದ ಕಂಪನಿ ನಡೆಸುವ ನೀವು ನಿಮಗೆ ನಷ್ಟವಾದರೂ ಈ ಕಂಪನಿಯ ಉದ್ಯೋಗಿಗಳ ಗತಿಯೇನು ಎಂಬ ಬಗ್ಗೆ ನಿಜವಾಗಿಯೂ ಆಳದಲ್ಲಿ ಆತಂಕಕ್ಕೊಳಗಾಗಿಲ್ಲ. ಇನ್ನು ಎರಡನೆಯದು, ಸೋತ ಮುಖ ಹೊತ್ತವನು ಎಂಬುದು ಕೂಡ ಕೃತಕವಾದ ಭಯ. ಎಲ್ಲ ಜನರಿಗೂ ಅವರದೇ ಆದ ತಾಪತ್ರಯಗಳಿರುತ್ತವೆ. ಅವರು ಸದಾ ನಿಮ್ಮ ಸೋಲನ್ನು ಚರ್ಚಿಸುತ್ತಾ ವ್ಯಾಖ್ಯಾನಿಸುತ್ತಾ ಕೂರುತ್ತಿರುವುದಿಲ್ಲ. ನಾನು ಕೆಲವು ಮಿತ್ರರನ್ನು ನೋಡಿದ್ದೇನೆ. ಅವರು ತಾವು ಹೇರ್ ಕಟಿಂಗ್ ಮಾಡಿಸಿಕೊಂಡ ದಿನ ತುಂಬಾ ಕಾನ್ಷಿಯಸ್ ಆಗಿರುತ್ತಾರೆ. “ತನ್ನ ಹೇರ್ ಸ್ಟೈಲ್ ಇವತ್ತು ಸ್ವಲ್ಪ ಆಕ್ ವರ್ಡ್ ಆಗಿದೆ. ಎಲ್ಲರೂ ತನ್ನನ್ನು ಗಮನಿಸುತ್ತಿದ್ದಾರೆ” ಎಂದುಕೊಂಡು ಮುಜುಗರಪಡುತ್ತಿರುತ್ತಾರೆ. ನಿಮ್ಮದು ಕೂಡ ಅದೇ ರೀತಿಯಾದ ಅತಿಯಾದ ಸ್ವಕೇಂದ್ರಿತತೆ ಅಷ್ಟೆ. ಸೋಲು ಮನುಷ್ಯನ ಮನಸ್ಸಿಗೆ ಅಷ್ಟು ಒಳ್ಳೆಯದಲ್ಲ. ಅದು ಅವನನ್ನು ಕುಗ್ಗಿಸುತ್ತದೆ ಎನ್ನುವುದು ನಿಜ. ಆದರೆ ಆ ಬಗ್ಗೆ ಎಲ್ಲರೂ ಏನೋ ಅಂದುಕೊಳ್ಳುತ್ತಿರುತ್ತಾರೆ, ಅದರಿಂದ ನಿಮಗೆ ಅವಮಾನವಾಗುತ್ತೆ ಎಂದು ತಿಳಿಯುವುದು ಅತಿಯಾದ ಇಗೋ ಪ್ರಾಬ್ಲಮ್ ಅಷ್ಟೆ”.

“ಹಾಗಂತೀರಾ? ನನ್ನ ಫ್ರೆಂಡ್ಸ್ ಯಾರೂ ಈ ಥರ ನನಗೆ ಹೇಳಿರಲಿಲ್ಲ”.

“ಅಷ್ಟಕ್ಕೂ ನಿಮ್ಮ ಫ್ರೆಂಡ್ಸ್ ಯಾರು? ಅವರನ್ನು ಭೇಟಿಯಾಗಲು ನಿಮಗೆ ಬಿಡುವೆಲ್ಲಿದೆ? ಅವರು ನಿಮಗಿಂತ ಬುದ್ಧಿವಂತರೋ ದಡ್ಡರೋ… ನಾನು ನಿಮ್ಮ ಫ್ರೆಂಡ್ ಕೂಡ ಅಲ್ಲ. ನಮ್ಮ ಭೇಟಿ ಕೂಡ ಆಕಸ್ಮಿಕ. ಅದಿರಲಿ, ನಿಮ್ಮ ಈ ಎಲ್ಲ ಸಮಸ್ಯೆಗಳನ್ನೂ ಆರಾಮಾಗಿ ಹೇಳಿಕೊಳ್ಳುವ ಫ್ರೆಂಡ್ ನಿಮಗೆ ಯಾರಾದರೂ ಇದ್ದಾರೆಯೆ?”

“ಹಾಂ, ಇದ್ದಾರೆ…” ಎಂದು ಅವರೆಂದರೂ ಅಂಥ ಸ್ನೇಹಿತರು ಇರುವ ಬಗ್ಗೆ ಅವರಿಗೆ ಖಾತ್ರಿಯಿರಲಿಲ್ಲ. ಯಾಕೆಂದರೆ ಅವರು ಹೈ ಪ್ರೊಫೈಲ್ ವ್ಯಕ್ತಿಯಾದದ್ದರಿಂದ ಅವರು ತಮ್ಮ ಕಷ್ಟಗಳನ್ನು ತಮ್ಮ ಸಮಾನರ ಬಳಿ ಮಾತ್ರ ಹೇಳಿಕೊಳ್ಳಬೇಕಾಗಿತ್ತು. ಇಂಥ ವಿಚಾರಗಳನ್ನು ಹಂಚಿಕೊಳ್ಳಬೇಕಾದರೆ, ಸ್ನೇಹದಲ್ಲಿ ಸಮಾನ ಗುಣ, ಸಮಾನ ದುಃಖ… ಎಷ್ಟೋ ಸಲ ಮುಖ್ಯವೆನ್ನಿಸುತ್ತದೆ. ಹಾಗಲ್ಲದಿದ್ದರೆ ಸಮಾನ ಮನೋಧರ್ಮವಂತೂ ಬಹಳ ಮುಖ್ಯ. ಅದರಲ್ಲೂ ನಾವು ಏನು ಹೇಳಿಕೊಂಡರೂ ಈತ ನನ್ನನ್ನು ಅವಮಾನಕ್ಕೀಡು ಮಾಡುವುದಿಲ್ಲ ಎಂಬ ವಿಶ್ವಾಸವಿರುವ ಸ್ನೇಹಿತ ಬೇಕು. ರಾಜ್ಯಕಾರಣದಲ್ಲಿರುವ ಅನೇಕರ ಸಮಸ್ಯೆ ಇದೇ. ಅವರು ಯಾರ ಬಳಿ ತಮ್ಮ ನಿಜವಾದ ಆತಂಕಗಳನ್ನು ತೋಡಿಕೊಳ್ಳಲು ಸಾಧ್ಯ. ಯಾಕೆಂದರೆ ತಾನೂ ತನ್ನ ಮಿತ್ರನೂ ದಿನವಿಡೀ ಸುಳ್ಳು ಹೇಳುವ ವೃತ್ತಿಯಲ್ಲಿ ಸಿಕ್ಕಿಬಿದ್ದಿದ್ದೇವೆ ಎಂಬುದು ರಾಜಕಾರಣಿಗಳಿಗೆ ಗೊತ್ತಿರುತ್ತದೆ. ಹಾಗಾಗಿ ಇನ್ನೊಬ್ಬನ ಬಳಿ ಮನಸ್ಸು ತೋಡಿಕೊಳ್ಳುವುದು ಸಾಧ್ಯವೇ ಇಲ್ಲ. ಅನೇಕ ದೊಡ್ಡ ಅಧಿಕಾರಿಗಳ ಕಷ್ಟ ಕೂಡ ಇಂಥದ್ದೇ. ಯು ಆರ್ ಲೋನ್ಲಿ ಅಟ್ ದಿ ಟಾಪ್… ಎಂದೊಬ್ಬರು ಈಚೆಗೆ ಹೇಳಿದರು.

ಈಚೆಗೆ ಅಧಿಕಾರಿಯೊಬ್ಬರು ಲೋಕಾಯುಕ್ತದ ರೈಡಿನಲ್ಲಿ ಸಿಕ್ಕಿ ಹಾಕಿಕೊಂಡರು. “ನೋಡಿ, ನಾನು ನಮ್ಮ ಕ್ಷೇತ್ರದ ರಾಜಕಾರಣಿಗಳಿಗಾಗಿ ಇಷ್ಟೆಲ್ಲ ಹಣ ಮಾಡಿಕೊಟ್ಟೆ. ಸ್ವಲ್ಪ ನಾನೂ ಇಟ್ಟುಕೊಂಡೆ… ನೋಡಿ ಹೀಗಾಯಿತು” ಎಂದು ಅವರು ಹೇಳುವ ಸಾಧ್ಯತೆ ಇದ್ದೇ ಇದೆ. ಅದರಿಂದ ಅವರ ಮನಸ್ಸಿನ ಒತ್ತಡ ಬಗೆಹರಿಯುವುದಿಲ್ಲ. ಅವರಿಗೆ ಈಗ ತಮ್ಮೊಳಗಿನದನ್ನೆಲ್ಲಾ ತೋಡಿಕೊಳ್ಳುವ ಗೆಳೆಯ, ಗೆಳತಿ ಬೇಕು. ಸಾಧ್ಯವಾದರೆ ಪ್ರಾಕ್ಟಿಕಲ್ ಆದ ಮಾರ್ಗ ಸೂಚಿಸಬಲ್ಲ ಬುದ್ಧಿವಂತ ಗೆಳೆಯ, ಗೆಳತಿ ಬೇಕು…

ಸಮಾಜದಲ್ಲಿ ನಾವು ಸುತ್ತಮುತ್ತ ನೋಡುವ ಅನೇಕರ ವೃತ್ತಿಜೀವಿಗಳ ಮಟ್ಟ ಏರುತ್ತಾ ಅವರು ತಮ್ಮ ವೃತ್ತಿಯ ಬಗೆಗಾಗಲೀ, ಬಿಕ್ಕಟ್ಟುಗಳ ಬಗೆಗಾಗಲೀ ಯಾರಲ್ಲೂ ಹೇಳಿಕೊಳ್ಳಲಾಗದ ಸ್ಥಿತಿ ಬರುತ್ತದೆ… ಇದೆಲ್ಲದರ ಮಧ್ಯೆ ತಾವಿರುವ ನಗರದಲ್ಲಿಯೋ ಅಥವಾ ಜಗತ್ತಿನ ಯಾವುದೋ ಒಂದು ಭಾಗದಲ್ಲೋ ಒಬ್ಬ ಸ್ನೇಹಿತ, ಸ್ನೇಹಿತೆ ಅದರಲ್ಲೂ ಕೊಂಚ ಐನ್ ಲೈಟನ್ಡ್ ಎನ್ನಬಹುದಾದ ಮನಸ್ಸಿನ ಗೆಳೆಯ, ಗೆಳತಿ ಇದ್ದರೆ ನಮ್ಮ ಮನಸ್ಸಿನ ಅರ್ಧ ಭಾರ ಕಡಿಮೆಯಾಗುತ್ತದೆ… ಇನ್ನುಳಿದ ಪ್ರಾಕ್ಟಿಕಲ್ ಪರಿಹಾರಗಳಿಗೆ ನಿಮ್ಮ ಕಾರ್ಪೋರೇಟ್ ಮಿತ್ರರಿದ್ದಾರೆ. ಈಗ ನೀವು ಮಾಡಬಹುದಾದ ಕೆಲಸ ಅಂಥ ಒಂದು ಮನಸ್ಸನ್ನು ಹುಡುಕಿಕೊಂಡು ಹೋಗುವುದು. ನಿಮ್ಮ ಭಯ, ತಪ್ಪು, ಸರಿ, ಮಾರ್ಗೋಪಾಯ… ಎಲ್ಲದರ ಬಗ್ಗೆ ಸುಮ್ಮನೆ ಮಾತಾಡುವುದು.”

“ಯೂ ಆರ್ ರೈಟ್” ಎಂದ ಅವರು ಆ ಗಳಿಗೆಗಾದರೂ ಗೆಲುವಾದರು. ನಮ್ಮ ಹದಿನೈದು ನಿಮಿಷದ ಮಾತುಕತೆಯೇ ಅವರಿಗೆ ಇಷ್ಟೆಲ್ಲ ವ್ಯವಸ್ಥಿತವಾಗಿ ಹೇಳಲಾಗದೆ, ಅವರಿಗೆ ಇಂಗ್ಲಿಷಿನಲ್ಲಿ ಬರೆದ ಟಿಪ್ಪಣಿಯನ್ನು ಇಲ್ಲಿ ಕನ್ನಡ ರೂಪದಲ್ಲಿ ಕೊಟ್ಟಿರುವೆ.

‍ಲೇಖಕರು avadhi

April 1, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಆ ತಾಯಿಯ ನೆನಪಲ್ಲಿ….

ಇವರು ಮಿಡ್ ಡೇ ಸಂಪಾದಕರಾದ ಎಸ್ ಆರ್ ರಾಮಕೃಷ್ಣ ಅವರ ತಾಯಿ ಇಂದಿರಾ ಸ್ವಾಮಿ ಎಂದು ಪರಿಚಯಿಸಿಕೊಟ್ಟರೆ ತಪ್ಪಾದೀತು. ಎಲ್ಲ ತಾಯಂದಿರನ್ನೂ...

ಬರಲಿರುವ ದುರಂತದ ಮುನ್ಸೂಚನೆ..

'ರೈತ, ದಲಿತ ಸಂಘಟನೆಗಳ ಜೊತೆ ಮತ್ತೆ ಹೊರಡೋಣ' ಗಾಳಿಬೆಳಕು -ನಟರಾಜ್ ಹುಳಿಯಾರ್ ನಾನು ಮತ್ತು ನನ್ನ ವಾರಗೆಯವರು ನಮ್ಮ ಹದಿಹರೆಯದಲ್ಲಿ ಕ್ಲಾಸ್...

೧ ಪ್ರತಿಕ್ರಿಯೆ

  1. ಚಂದಿನ

    ಇದು ನಾಗರೀಕತೆಯ ನ್ಯೂನತೆಯೆ? ಇಲ್ಲ ಅನಿವಾರ್ಯವೆ?

    ಸುತ್ತಿಕೊಂಡಿರುವ ಪರದೆಗಳ ಕಳಚಿ ಬರಲು ಕಷ್ಟವಾಗಬಹುದು.

    – ಚಂದಿನ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: