”ಯೇ ಶಹರ್ ನಹೀಂ, ಮೆಹಫಿಲ್ ಹೈ!”

”ನಾನು ಮಲಗುವುದಿಲ್ಲ,” ಎನ್ನುತ್ತದೆ ಮಹಾನಗರಿ

ಆತ್ಮಕಥನಗಳನ್ನು ಬರೆದಿರುವ ಈ ಜಗತ್ತಿನ ಮಹನೀಯರಿಗೆಲ್ಲಾ ಒಂದು ಸಲಾಂ ಹೊಡೆಯಬೇಕು ಎಂದು ನಾನು ಹಲವು ಬಾರಿ ಅಂದುಕೊಂಡಿದ್ದಿದೆ.

ಏಕೆಂದರೆ ಆತ್ಮಕಥನಗಳನ್ನು ಬರೆಯುವುದೆಂದರೆ ಸುಲಭದ ಮಾತಲ್ಲ. ಅದಕ್ಕೊಂದು ಭಂಡ ಧೈರ್ಯ ಬೇಕು. ಈವರೆಗೆ ಬರೆದಿರುವವರಲ್ಲಿ ಎಲ್ಲರೂ ಎಲ್ಲವನ್ನೂ ಬರೆದಿರಲಾರರು. ಆದರೆ ಬರೆದಿದ್ದಷ್ಟನ್ನಂತೂ ಪ್ರಾಮಾಣಿಕವಾಗಿ ದಾಖಲಿಸುವ ಧಿಮಾಕೂ, ಕಾಳಜಿಯೂ ಈ ಸಾಹಸಕ್ಕೆ ಬೇಕು.

ವ್ಯಕ್ತಿಯೊಬ್ಬ ತನ್ನ ಬದುಕಿನ ಅದೆಷ್ಟೋ ಹಂತಗಳನ್ನು ಹಲವು ಬಗೆಗಳಲ್ಲಿ ದಾಟಿರಬಹುದು. ಆದರೆ ತನ್ನದೇ ಕಥೆಯನ್ನು ದಾಖಲಿಸುವ ಹೊತ್ತಿನಲ್ಲೂ ಆತ ತನ್ನ ಜೀವನಾನುಭವಗಳಿಂದಾಗಿ ಬದುಕಿನ ಬಗ್ಗೆ ಸ್ಪಷ್ಟತೆಯನ್ನು ಪಡೆದುಕೊಂಡಿರುತ್ತಾನೆ ಎಂಬುದನ್ನು ಖಡಾಖಂಡಿತವಾಗಿ ಹೇಳುವುದು ಕಷ್ಟ. ಎಲ್ಲರಿಗೂ ವಯಸ್ಸಾದರೆ ಕೆಲವರಷ್ಟೇ ಮಾಗುತ್ತಾರೆ. ಹಾಗೆಂದು ಮಾಗಿದ ಮಾತ್ರಕ್ಕೆ ಬದುಕು ಸಂಪೂರ್ಣವಾಗಿ ಅರ್ಥವಾಯಿತೇ? ಅದರಲ್ಲೂ ಮುಂದೆ ಸಾಗಿ ಬಂದಾದ ನಂತರ, ಹಿಂದೆ ನಡೆದು ಬಂದ ಹಾದಿಯು ಕೇವಲ ಒಂದು ಸುಂದರ ಅಥವಾ ರೋಚಕ ಅನುಭವಗಳ ಸರಣಿಯಷ್ಟೇ ಎಂಬಲ್ಲಿಗೆ ಬಂದು ನಿಲ್ಲುತ್ತದೆ.

ಜೀವನಾನುಭವಗಳಿಂದ ಸಮೃದ್ಧವಾಗಿರುವ ನೆನಪಿನ ಮಾಲಿಕೆ. ಅಷ್ಟಕ್ಕೂ ಬದುಕಿನ ಅಚ್ಚರಿಯೆಂದರೆ ಈ ನೆನಪುಗಳನ್ನು ಸ್ವತಃ ದಾಖಲಿಸಿಟ್ಟವನೂ ಕೂಡ ಅದನ್ನೊಂದು ಚೌಕಟ್ಟಿನೊಳಗೆ ಫ್ರೀಝ್ ಮಾಡುವಂತಿಲ್ಲ. ಇಂದು ಬರೆದಿಟ್ಟ ಮಹಾಗಾಂಭೀರ್ಯದ ಕಥೆಯು ಮುಂದಿನ ಕೆಲ ವರ್ಷಗಳ ನಂತರ ಬರೆದ ವ್ಯಕ್ತಿಗೇ ಬಾಲಿಶವೆನ್ನಿಸಬಹುದು. ಒಮ್ಮೆ ಜೀವನ್ಮರಣದ ಸಂಗತಿಯಂತಿದ್ದ ತನ್ನ ಬದುಕಿನ ಒಂದು ಭಾಗವು ಕೆಲ ಕಾಲದ ನಂತರ ತೀರಾ ಚಿಲ್ಲರೆ ಸಂಗತಿಯಾದಂತನ್ನಿಸಬಹುದು. ಇದು ಬದುಕಿನ ಸಂಕೀರ್ಣತೆಯೂ ಹೌದು, ಸೌಂದರ್ಯವೂ ಹೌದು.

ಆತ್ಮಕಥನದ ಈ ತಾಪತ್ರಯಗಳು ವ್ಯಕ್ತಿಗಳಿಗಷ್ಟೇ ಸೀಮಿತವಲ್ಲ. ಊರುಗಳಿಗೂ, ನಗರಗಳಿಗೂ, ದೇಶಗಳಿಗೂ ಇದು ಸತ್ಯ. ಏಕೆಂದರೆ ವ್ಯಕ್ತಿಯೊಬ್ಬನ ಬದುಕಿನಂತೆ ಒಂದು ಶಹರವೂ ಕೂಡ ಕಾಲಾನುಕ್ರಮದಲ್ಲಿ ಬದಲಾಗುತ್ತಲೇ ಇರುತ್ತದೆ. ಕಾಡು ಇಷ್ಟಿಷ್ಟೇ ಬಯಲಾಗುತ್ತಾ ನಾಡಾಗುತ್ತದೆ. ಹಳ್ಳಿಗಳು ಮೆಲ್ಲನೆ ನಗರಗಳಾಗುತ್ತವೆ. ನಗರಗಳು ಮೈಮುರಿಯುತ್ತಾ ಮಹಾನಗರಗಳಾಗುತ್ತವೆ. ಮಹಾನಗರಗಳು ಮಾನವನ ಮಹಾತ್ವಾಕಾಂಕ್ಷೆಯಂತೆ ಮತ್ತಷ್ಟು ವಿಶಾಲವಾಗುವ ಆಸೆಯಲ್ಲಿ ತಮ್ಮ ಕಬಂಧಬಾಹುಗಳನ್ನು ಚಾಚುತ್ತಲೇ ಸಾಗುತ್ತವೆ.

ಇತ್ತ ಭೌಗೋಳಿಕವಾಗಿ, ಸಾಮಾಜಿಕವಾಗಿ, ರಾಜಕೀಯ ನೆಲೆಯಲ್ಲೂ ಆಗುವ ಹಲವು ರೂಪಾಂತರಗಳದ್ದು ಬೇರೆಯದ್ದೇ ಕಥೆ. ಒಟ್ಟಿನಲ್ಲಿ ಹಲವು ಗುಣಾವಗುಣಗಳ ಕಲಬೆರಕೆಯಾಗಿರುವ ಮಾನವನಂತೆ, ಒಂದು ಪ್ರದೇಶವೂ ಕೂಡ ಅಚ್ಚರಿಯ ಆಗರ ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ.

ಅದು ಪರಿಚಯವಾದಷ್ಟೂ ಆಗಂತುಕ. ಅರಿತುಕೊಂಡಷ್ಟೂ ನಿಗೂಢ. ಊರಾಗಲೀ, ಮಹಾನಗರವಾಗಲೀ ಅದು ಓರ್ವ ವ್ಯಕ್ತಿಯಷ್ಟೇ ಸಂಕೀರ್ಣ. ಹೀಗಾಗಿ ಒಂದೂರಿನ ಆತ್ಮಕಥನವನ್ನು ಬರೆಯುವುದೂ ಕೂಡ ವ್ಯಕ್ತಿಯೊಬ್ಬನ ಜೀವನಕಥನವನ್ನು ಹಿಡಿದಿಡುವುದಷ್ಟೇ ಸವಾಲಿನ ಕೆಲಸ.

ಅಷ್ಟಕ್ಕೂ ಕಥೆಗಳೆಂದರೆ ಮಹಾಕಿಲಾಡಿಗಳು. ಸರ್ವಾಂತರ್ಯಾಮಿಯಾಗಿದ್ದರೂ ಕೆಲವರ ಒಳನೋಟಕ್ಕಷ್ಟೇ ಸಿಗುವ ಚಂಚಲತೆ ಅವುಗಳದ್ದು. ಕೇಳುವುದಕ್ಕೂ, ಓದುವುದಕ್ಕೂ ಊರಿನ ಕಥೆಗಳು ಆಪ್ಯಾಯಮಾನ. ಕಾಡಿನ ಕಥೆಗಳು ರೋಚಕ. ಆದರೆ ಮಹಾನಗರದ ಕಥೆಗಳು? ಅವುಗಳಿಗೋ ಅಸಂಖ್ಯಾತ ಮುಖಗಳು. ವಿಕಾಸದ, ರೂಪಾಂತರದ ಹಲವು ಹಂತಗಳನ್ನು ದಾಟುತ್ತಾ ಮುಂದೇನು ಎಂಬ ದೊಡ್ಡದೊಂದು ಪ್ರಶ್ನಾರ್ಥಕ ಚಿಹ್ನೆಯತ್ತ ಕಣ್ಣರಳಿಸುತ್ತಿರುವ ಅಚ್ಚರಿಗಳು.

ಒಂದೆಡೆ ಎಲ್ಲರನ್ನೂ, ಎಲ್ಲವನ್ನೂ ತಮ್ಮತ್ತ ಸೆಳೆಯುತ್ತಲೇ, ಇನ್ನೊಂದೆಡೆ ತನ್ನಿಂದ ಸುರಕ್ಷಿತ ದೂರವನ್ನು ಕಾದುಕೊಂಡು, ನೆಲೆಯೂರಿದವರಲ್ಲಿ ಆಗಾಗ ಅನಾಥಭಾವವನ್ನು ಹುಟ್ಟಿಸುವ ಕೌತುಕಗಳು. ದೂರದ ಹಳ್ಳಿಗೆ ಸ್ವರ್ಗವಾಗಿಯೂ, ನೆಲೆಸಿರುವವರಿಗೆ ಬಂಗಾರದ ಪಂಜರವಾಗಿಯೂ ಕಾಣುವ ಮಾಯಾವಿಗಳು.

ಹಾಗೆ ನೋಡಿದರೆ ಮಹಾನಗರಗಳಲ್ಲಿ ಬದುಕುವ ಪ್ರತಿಯೊಂದು ಜೀವವೂ ಒಂದು ರೀತಿಯಲ್ಲೇ ಕಥೆಗಾರನೇ. ಎಲ್ಲೆಂದರಲ್ಲಿ ಇರುವೆಗಳಂತೆ ಭಯಂಕರ ಗಡಿಬಿಡಿಯಲ್ಲಿ ಓಡಾಡುತ್ತಿರುವ ಈ ಜನಸಮೂಹವು ಚಲಿಸುತ್ತಿರುವ ಜೀವಂತ ಅಕ್ಷರಗಳ ರೂಪದಲ್ಲಿ ಮಹಾನಗರಗಳ ಕಥೆಯನ್ನು ಬರೆಯುತ್ತಲೇ ಇವೆ. ಹೀಗಾಗಿ ಪ್ರತಿಯೊಬ್ಬ ಮಹಾನಗರವಾಸಿಯೂ ಸೂತ್ರಧಾರನೂ ಹೌದು, ಪಾತ್ರಧಾರಿಯೂ ಹೌದು. ಈ ಸಂಗತಿ ಆತನಿಗೆ ತಿಳಿದಿರಲಾರದು ಎಂಬುದು ಮಾತ್ರ ಬೇರೆ ಸಂಗತಿ. ಓದುವವರಿರಲಿ, ಇಲ್ಲದಿರಲಿ. ಮಹಾನಗರಗಳ ಮಹಾಭಾರತವು ನಿರಂತರ ಚಾಲ್ತಿಯಲ್ಲಿದೆ.

ಕಥೆಗಳು ಇಲ್ಲಿ ನಿರಂತರವಾಗಿ ಹುಟ್ಟುತ್ತಲೂ, ಸಾಯುತ್ತಲೂ ಇವೆ. 

”ನಾನು ಮಲಗುವುದಿಲ್ಲ,” ಎನ್ನುತ್ತದೆ ಮಹಾನಗರಿ. ”ನೀನು ಮಲಗಲೂಬಾರದು. ಮಲಗಿದರೆ ನೀನು ಮಹಾನಗರಿಯೇ ಅಲ್ಲ,” ಎಂದು ಹಟ ಹಿಡಿಯುತ್ತದೆ ಮಹಾನಗರದ ಬದುಕು. ”ನನ್ನದು ಶರವೇಗ,” ಎಂದು ಬೀಗುತ್ತದೆ ಮಹಾನಗರಿ. ”ಆಗಲೇಬೇಕು. ಕಾಲೆಳೆದುಕೊಂಡು ಸಾಗಿದರೆ ನಿನಗೂ ಹಳ್ಳಿಗೂ ವ್ಯತ್ಯಾಸವೇನು?” ಎಂದು ಸವಾಲು ಹಾಕುತ್ತದೆ ಆಧುನಿಕ ಯುಗ. ಮಹಾನಗರಿಗೆ ನಿಜಕ್ಕೂ ಇವೆಲ್ಲವೂ ಬೇಕೇ ಎಂಬುದು ಬೇರೆ ಸಂಗತಿ. ಆದರೆ ಎಲ್ಲವೂ ಬೇಕೆನ್ನುವವರಿಗೆ ಮಹಾನಗರಿಯು ಒಂದು ಆಶಾಕಿರಣ. ಅಲ್ಲಿ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆಂಬ ಲೆಕ್ಕಾಚಾರ. ಮಹಾನಗರಗಳೆಂದರೆ ಮಹಾತ್ವಾಕಾಂಕ್ಷಿಗಳ ಮೆಕ್ಕಾ. ಯಶಸ್ಸೇ ಇಲ್ಲಿ ಭಗವಂತ.

ಆದರೆ ಭಗವಂತನಿಗೂ ಹಲವಾರು ಅವತಾರಗಳಿರುತ್ತವೆ! ಹೀಗಾಗಿ ಬದುಕಿಲ್ಲಿ ಕೊಂಚ ಗೊಂದಲಮಯ. ಒಬ್ಬೊಬ್ಬರದ್ದೂ ಒಂದೊಂದು ತಲಾಶೆ, ಒಂದೊಂದು ದಿಕ್ಕು. ಕೆಲವರದ್ದು ವ್ಯವಧಾನದ ರಾಜಮಾರ್ಗವಾದರೆ ಇನ್ನು ಕೆಲವರದ್ದು ಒಳದಾರಿಯ ಕಸರತ್ತುಗಳು. ಭೂಗತ ಜಗತ್ತಿನ ರಹಸ್ಯದಷ್ಟೇ ತೀವ್ರವಾಗಿ, ಖುಲ್ಲಂಖುಲ್ಲಾ ನಡೆಯುತ್ತಿರುವ ವೈಟ್ ಕಾಲರ್ ಅಪರಾಧಗಳಿಗೂ ಇದು ಬೀಡು. ಮಹಾನಗರಗಳ ಚಮಕ್-ಧಮಕ್ ಗೆ ಮನಸೋಲುವುದು ಸ್ವಾಭಾವಿಕ. ಆದರೆ ಮೈಮರೆಯುವುದು ದುಬಾರಿ. ಹೀಗಾಗಿಯೇ ಮಹಾನಗರಕ್ಕೆ ಗಮ್ಯವೆನ್ನುವುದು ಮುಖ್ಯವೇ ಹೊರತು ಪಯಣವಲ್ಲ. ಅಂತಿಮ ಫಲಿತಾಂಶವಾದ ಹೊಳಪಿಗಿರುವ ಮಹತ್ವವು ಇಲ್ಲಿ ಸಾಗಿ ಬಂದಿರುವ ಉಳಿಪೆಟ್ಟಿನ ಹೊಡೆತಗಳಿಗಿಲ್ಲ.   

ಇಷ್ಟೆಲ್ಲಾ ವಿರೋಧಾಭಾಸಗಳಿದ್ದರೂ ನಮಗೆ ಮಹಾನಗರದ ಕಥನಗಳು ಬೇಕು. ಮಹಾನಗರಿಯ ಕಾಣದ ಝಲಕ್ ಗಳು ಬೇಕು. ಏಕೆಂದರೆ ಇಂದಿನ ಊರುಗಳೆಲ್ಲಾ ಮುಂದೊಂದು ದಿನ ಸ್ಮಾರ್ಟ್‍ಸಿಟಿಗಳಾಗುವ ಕನಸು ಕಾಣುತ್ತಿವೆ. ಹಳ್ಳಿ ಹೈದನಿಗೆ ಬಯಲಿನ ತಂಗಾಳಿಗಿಂತ ಹವಾನಿಯಂತ್ರಿತ ಕೊಠಡಿಯ ಕ್ಯೂಬಿಕಲ್ಲಿನ ಇಕ್ಕಟ್ಟಿನಲ್ಲಿ ಸಿಗುವ ತಂಪುಗಾಳಿಯೇ ಆಕರ್ಷಕವೆಂಬಂತೆ ಕಾಣುತ್ತದೆ.

ಅಂಥದ್ದೊಂದು ಕನಸಿನ ಬೀಜವನ್ನು ಬದಲಾಗುತ್ತಿರುವ ಕಾಲಮಾನ, ವ್ಯವಸ್ಥೆಗಳೂ ಕೂಡ ನಮ್ಮೆಲ್ಲರ ಮನದಲ್ಲಿ ವ್ಯವಸ್ಥಿತವಾಗಿ ಬಿತ್ತಿವೆ. ಹಸಿರಿರುವ ಜಾಗಗಳಲ್ಲೆಲ್ಲಾ ಇಂದು ರೆಸಾರ್ಟುಗಳು ತಲೆಯೆತ್ತುತ್ತಿವೆ, ಪ್ರಭಾವಿ ಬಾಬಾಗಳು ಎಕರೆಗಟ್ಟಲೆ ಪ್ರದೇಶಗಳಲ್ಲಿ ತಮ್ಮ ಆಶ್ರಮಗಳನ್ನು ಆರಂಭಿಸಿ ಆರಾಮಾಗಿ ನೆಲೆಯೂರತೊಡಗಿದ್ದಾರೆ. ಸರಿಯೋ, ತಪ್ಪೋ. ಸಂಪತ್ತಿನ ಹರಿವು ತರಹೇವಾರಿ ವಿಧಾನಗಳಲ್ಲಿ ನಿರಂತರವಾಗಿದ್ದರೂ ಒಟ್ಟಾರೆ ಆರ್ಥಿಕತೆಯು ಆಯ್ದ ಕೆಲವರ ಹಿಡಿತದಲ್ಲಷ್ಟೇ ಬಂಧಿಯಾಗಿದೆ. ಈ ನಿಟ್ಟಿನಲ್ಲಿ ಮಹಾನಗರದ ಆತ್ಮಕಥನಗಳು ಮುಂದೊಂದು ದಿನ ನಮ್ಮೆಲ್ಲರ ಕಥೆಗಳಾಗಿಬಿಟ್ಟರೂ ಅಚ್ಚರಿಯೇನಿಲ್ಲ. 

ದಿಲ್ಲಿಯ ಬಗ್ಗೆ ಈಗಾಗಲೇ ಧಾರಾಳವೆನಿಸುವಷ್ಟು ಸಾಹಿತ್ಯವು ಹರಿದು ಬಂದಿದೆ. ಖುಷ್ವಂತ್ ಸಿಂಗ್ ರಂಥಾ ಘಟಾನುಘಟಿಗಳು ಇದಕ್ಕೊಂದು ಮೈಲುಗಲ್ಲಿನ ಸ್ಥಾನಮಾನವನ್ನು ಕೊಟ್ಟಿದ್ದಾರೆ. ವಿಲಿಯಂ ಡ್ಯಾರ್ರಿಂಪಲ್ ರಂಥಾ ವಿದೇಶಿ ಲೇಖಕರು ತಮ್ಮದೇ ದೃಷ್ಟಿಕೋನಗಳಿಂದ ಈ ಶಹರದ ಕಥೆಗಳನ್ನು ಅಕ್ಷರರೂಪಕ್ಕಿಳಿಸಿದ್ದಾರೆ. ಕನ್ನಡದಲ್ಲೂ ದಿಲ್ಲಿಯ ಬಗ್ಗೆ ಬೆರಳೆಣಿಕೆಯ, ಆದರೆ ಒಳ್ಳೆಯ ಕಥಾನಕಗಳು ಈಗಾಗಲೇ ಬಂದಿವೆ. ಹೀಗಾಗಿ ನಾನಿಂದು ದಿಲ್ಲಿಯ ಆತ್ಮಕಥನವನ್ನು ಹೊಸದಾಗಿ ಬರೆಯ ಹೊರಟಿದ್ದೇನೆ ಎಂದರೆ ಉದ್ಧಟತನವಾದೀತು. ಆದರೆ ದಿಲ್ಲಿಯ ಮತ್ತು ಒಟ್ಟಾರೆ ನ್ಯಾಷನಲ್ ಕ್ಯಾಪಿಟಲ್ ರೀಜನ್ (ಎನ್.ಸಿ.ಆರ್) ಭಾಗದ ಕಾಣದ ಮುಖಗಳ ಬಗ್ಗೆ, ಸ್ವಾರಸ್ಯಕರ ಆಯಾಮಗಳ ಬಗ್ಗೆ ಬೆಳಕು ಚೆಲ್ಲುವ ಪ್ರಾಮಾಣಿಕ ಪ್ರಯತ್ನವಂತೂ ಇದ್ದೇ ಇರಲಿದೆ.

”ಯೇ ಶಹರ್ ನಹೀಂ… ಮೆಹಫಿಲ್ ಹೈ,” ಎಂದು ತನ್ನ ಗೀತೆಯ ಸಾಲೊಂದರಲ್ಲಿ ಬರೆಯುತ್ತಾರೆ ಕವಿ ಪ್ರಸೂನ್ ಜೋಷಿ. ಮಹಾಕವಿ ಮಿರ್ಜಾ ಗಾಲಿಬ್ ತನ್ನ ಕಾವ್ಯದಿಂದಲೇ ಈ ಶಹರಕ್ಕೆ ‘ಮೆಹಫಿಲ್’ ನ ಆಕರ್ಷಣೆಯನ್ನು ನೀಡಿದ ಪ್ರತಿಭಾವಂತ. ದಿಲ್ಲಿ ಅಮೀರ್ ಖುಸ್ರೋ, ನಿಜಾಮುದ್ದೀನ್ ಔಲಿಯಾರಂಥಾ ದಾರ್ಶನಿಕರನ್ನು ತನ್ನೊಡಲಿನಲ್ಲಿ ಪೊರೆದ ನೆಲವೂ ಹೌದು.

ಇನ್ನು ಜಗತ್ತಿನ ಎಲ್ಲಾ ಸಂಗತಿಗಳಂತೆ ಮಹಾನಗರಗಳೂ ಕೂಡ ಪ್ರತೀಕ್ಷಣವೂ ರೂಪಾಂತರಕ್ಕೊಳಗಾಗುತ್ತಲೇ ಇರುವುದು ಸತ್ಯವಾದ್ದರಿಂದ ದಿಲ್ಲಿಯ ಬಗ್ಗೆ ಎಲ್ಲವನ್ನು ಹೇಳಿದರೂ, ಏನನ್ನೂ ಹೇಳಿಲ್ಲವೆಂಬಂತಿನ ಅನುಭವಗಳು ಬರಹಗಾರರಿಗೆ ಆಗುವುದು ಸಹಜ. ಹೀಗಾಗಿ ಈ ಸರಣಿಯು ಅಂಥದ್ದೊಂದು ಕೌತುಕದ ಬೆನ್ನುಹತ್ತಿರುವ ಪ್ರಾಮಾಣಿಕ ಪ್ರಯತ್ನ ಎಂಬುದನ್ನು ಮಾತ್ರ ಧೈರ್ಯವಾಗಿ ಹೇಳಬಲ್ಲೆ. 

ಓದುಗರಿಗೆ ‘ಶಹರ್’ ಮತ್ತು ‘ಮೆಹಫಿಲ್’ ಗಳ ಜೊತೆಗೇ ಮಹಾನಗರಿಯ ಹಲವು ಹೊಸತನದ ಸಂಗತಿಗಳು ಮುಖಾಮುಖಿಯಾಗಲಿ ಎಂಬುದು ಈ ವಿಶಿಷ್ಟ ಸರಣಿಯ ಆಶಯ.

August 17, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪ್ರಜಾವಾಣಿಯಲ್ಲಿ ‘ಪ್ಲೇ ಬಾಯ್’

ಪ್ರಜಾವಾಣಿಯಲ್ಲಿ ‘ಪ್ಲೇ ಬಾಯ್’

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ...

ಬೆಚ್ಚಿ ಬಿದ್ರಾ…?

ಬೆಚ್ಚಿ ಬಿದ್ರಾ…?

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ ...

2 ಪ್ರತಿಕ್ರಿಯೆಗಳು

 1. Ambika Idoor

  Beautiful narration with a great element of curiosity. Eagerly waiting to connect the Heart of the great city.
  ” I asked My soul : What is Delhi?
  She replied : The World is the body and Delhi it’s Life ” – Mirza Ghailb

  ಪ್ರತಿಕ್ರಿಯೆ
 2. ರೇಣುಕಾ ರಮಾನಂದ

  ಮಜಾನಗರಿಯ ಕಥೆ ಚನ್ನಾಗಿದೆ ಪ್ರಸಾದ್

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: