ರಕ್ತದ ಮಡಿಲಲ್ಲಿ ಮಲಗಿದ ಹುಡುಗ ಯಾರು ಗೊತ್ತೆ?

-ವಿನಾಯಕ ರಾಮ ಭಟ್ ಕಲಗಾರು
ಪೂರ್ಣ ವಿ-ರಾಮ
ಮೊದಲ ಬಾರಿ ಕ್ಯಾಮೆರಾ ಮುಂದೆ ನಿಂತ ಕ್ಷಣ ಏನನ್ನಿಸಿತು?ಹೀಗಂತ ಕೇಳಿದಾಗ ಗಣೇಶ್ ಕಣ್ಣಲ್ಲಿ ಕಂಡದ್ದು ರಕ್ತ ! ವಿಷಯ ತಿಳಿಯಲು ಓದಿ…
ಅದು ಯಲಹಂಕದ ಒಂದುರೆಸಾರ್ಟ್. ಬಿ. ಸುರೇಶ್ ಡೈರೆಕ್ಟರ್ ಟೊಪ್ಪಿಯಲ್ಲಿದ್ದರು. ಆಶೋಕ್ ಕಶ್ಯಪ್ ಕ್ಯಾಮೆರಾಮನ್. ಸಂಜೆ ಹೊತ್ತಾದ್ದರಿಂದ ಊರ ತುಂಬಾ ಬೀದಿ ದೀಪಗಳು ದಾರಿಗೆ ಬೆಳಕು ಚೆಲ್ಲತೊಡಗಿದ್ದವು. ನಟ ಅಲಂಕಾರ್ ನಾಯಕನ ಗೆಟಪ್‌ನಲ್ಲಿ ಅಲಂಕಾರಭೂಷಿತರಾಗಿದ್ದರು. ನಟಿ ಪ್ರೇಮಾ ಕೂಡ ಇದ್ದರು. ಸರಿ, ಬಿ.ಸು. ತುಸು ಜೋರಾಗಿಯೇ ಓಕೆ, ಕ್ಯಾಮೆರಾ, ಆಕ್ಷನ್… ಎಂದರು. ಎದುರಿಗೆ ನಿಂತಿದ್ದ ಆ ಹುಡುಗ-ಸಾರ್ ನೋಡ್ತಾ ಇರಿ, ಒಂದೇ ಟೇಕ್‌ನಲ್ಲಿ ಓಕೆ ಎನ್ನುವಂತೆ ಮಾಡುತ್ತೇನೆ. ನೋಡ್ತಾ ಇರಿ… ಎಂದ.
ಸರೀನಪ್ಪಾ ಅದೇನ್ ಮಾಡ್ತೀಯೊ ಮಾಡು… ಎಂದು ಮೂಗು ಸವರಿಕೊಂಡರು ಸುರೇಶ್.
ರೀಲು …ಗೊರ ಗೊರ ಗೊರ ಗೊರ…
ಕಶ್ಯಪ್ ಕ್ಯಾಮೆರಾ ಕಣ್ಣಲ್ಲಿ ಆ ಹುಡುಗನನ್ನೇ ನೋಡುತ್ತಿದ್ದರು… ಆತ ಒಂದೇ ಉಸಿರಲ್ಲಿ ಹೀರೊ ಮುಖದತ್ತ ಕೈ ತೋರಿಸಿ… ‘ಏನ್ ಮರೀ… ನಿನ್ ಹಕ್ಕೀಗೇ ಲಗೇಜ್ ಹಾಕಿ, ಟಿಕೆಟ್ ಇಲ್ದೇನೇ ಬಸ್ಸಲ್ಲಿ ಕಳಿಸ್ತಿದೀವಿ…’
ಅವನ ಮಾತಿಗೆ ಸಿಟ್ಟಿಗೆದ್ದ ನಾಯಕ ಒಮ್ಮೆ ಬಲಗೈ ಎತ್ತಿ ಝಾಡಿಸಲು ಮುಂದಾದ. ಆದರೆ ಆ ಕೈ ಸುಮ್ಮನಿರಲಿಲ್ಲ. ಸೀದಾ ಆ ಹುಡುಗನ ಮುಖಕ್ಕೇ ಬಂದು ಬಡಿಯಿತು. ಸುರೇಶ್ ಕಟ್ ಕಟ್ ಕಟ್ ಎಂದರು. ಅಷ್ಟೊತ್ತಿಗೆ ಆ ವಿಲನ್ ಮೂಗಿನಲ್ಲಿ ಕೆಂಪು ಬಣ್ಣ ಮನೆಮಾಡಿತು. ರಕ್ತದ ವಾಸನೆ ಎಲ್ಲೆಡೆ ಓಕಳಿಸಿತು… ಬಳ ಬಳ ಬಳ ಬಳ ಬಳ ಬಳ…
ಅಶೋಕ ತಮ್ಮ ಸೀಟು ಬಿಟ್ಟು ಎದ್ದು ಬಂದರು. ಕೂಡಲೇ ಐಸ್‌ಗಳನ್ನು ಮೂಗಿನ ಸುತ್ತ ಮೆತ್ತಲಾಯಿತು. ಆ ಬಡಪಾಯಿ ಹುಡುಗ ಮಾತ್ರ ಅಷ್ಟೆಲ್ಲಾ ಆದರೂ ನಿರ್ದೇಶಕರ ಕಡೆಗೇ ನೋಡುತ್ತಿದ್ದ.
ಸುರೇಶ್ ಕಣ್ಣಲ್ಲೇ ಸನ್ನೆ ಮಾಡಿದರು. ಹೆಬ್ಬೆಟ್ಟನ್ನು ಮೇಲಕ್ಕೆತ್ತಿ ಓಕೆ ಎಂದರು. ಅವನಿಗೆ ಆ ನೋವಿನಲ್ಲೂ ಸಂತಸದ ಪರಮಾವಧಿ. ಮೊದಲ ಚಿತ್ರದ ಮೊದಲ ದೃಶ್ಯದಲ್ಲೇ ನಾನು ಸೈ ಎನಿಸಿಕೊಂಡೆ ಎಂಬ ಹೆಮ್ಮೆ ಇನ್ನೊಂದು ಕಡೆ. ಅಂತೂ ಇಂತೂ ಆತನ ಮೂಗಿಗೆ ದೊಡ್ಡ ಪ್ಲ್ಯಾಸ್ಟರ್ ಬಿತ್ತು. ಆದರೂ ಆ ದೃಶ್ಯ ಓಕೆ ಆಗಿತ್ತು…!
ಇದಕ್ಕೆ ಸುರೇಶ್ ಹೇಳಿದರು : ಎಲ್ಲರೂ ಬೆವರು ಸುರಿಸಿ ಸಿನಿಮಾಕ್ಕೆ ಬರ್‍ತಾರೆ. ನೀನು ರಕ್ತ ಸುರಿಸಿ ಬಂದ್ದಿದ್ದೀಯಾ, ಉಳಿತೀಯಾ ಬಿಡು…
***
ಅಂದು ಅಷ್ಟೆಲ್ಲಾ ಒದ್ದಾಟ ಮಾಡಿ, ರಕ್ತದ ಮಡಿಲಲ್ಲಿ ಮಲಗಿದ ಹುಡುಗ ಯಾರು ಗೊತ್ತೆ? ಇಂದಿನ ಗೋಲ್ಡನ್ ಸ್ಟಾರ್ ಗಣೇಶ್! ಇದೇ ಗಣೇಶ್ ಅಂದು ಬಾಲ್ಯದ ಸಹಪಾಠಿ ಆರೂರು ಜಗದೀಶ್ ನಿರ್ದೇಶನದ ಸಾಧನೆ ಧಾರಾವಾಹಿಯಲ್ಲಿ
ನಟಿಸುತ್ತಿದ್ದರು. ಜಗದೀಶ್ ಸ್ನೇಹಿತ ಬಿ. ಸುರೇಶ್. ಸುರೇಶ್ ಠಪೋರಿ ಸಿನಿಮಾದ ಒಬ್ಬ ವಿಲನ್ ಪಾತ್ರದ ಹುಡುಕಾಟದಲ್ಲಿ ತೊಡಗಿದ್ದರು. ಆಗ ಗಣೇಶನನ್ನು ಜಗದೀಶ್ ಪರಿಚಯಿಸಿ, ಚೆನ್ನಾಗಿ ನಟಿಸುತ್ತಾನೆ. ಒಂದು ಛಾನ್ಸ್ ಕೊಟ್ಟು ನೋಡಿ. ಹಿಡಿಸಿದರೆ ಮುಂದುವರಿಸಿ… ಎಂದು ಶಿಫಾರಸ್ಸು ಮಾಡಿದ್ದರು.
ಆ ದಿನಗಳನ್ನು ಗಣೇಶ್ ಇಂದಿಗೂ ಮರೆತಿಲ್ಲ. ಆ ವಿಷಯ ನೆನಪಾದಾಗ ಈಗಲೂ ಮೂಗನ್ನು ಸವರಿಕೊಂಡು ಫ್ಯಾಷ್‌ಬ್ಯಾಕ್‌ಗೆ ತೆರಳುತ್ತಾರೆ. ರಕ್ತ ಸುರಿಸಿಕೊಂಡ ಗಣೇಶ್ ಇಂದು ಮನೆ ಮಾತಾಗಿದ್ದಾರೆ. ರಕ್ತ ಸುರಿವಂತೆ ಹೊಡೆದ ಹಂಸಲೇಖ ಪುತ್ರ ಅಲಂಕಾರ್ ಮನೆಯಲ್ಲಿ ಅಲಂಕಾರವಾಗಿದ್ದಾರೆ. ಇದೇ ಬಣ್ಣದ ಲೋಕ !

‍ಲೇಖಕರು avadhi

December 9, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This