ರಮೇಶ್ ಆರೋಲಿ ಬರೆದ ಕವಿತೆ-ಜುಲುಮೆ

-ರಮೇಶ ಅರೋಲಿ ರಾಯಚೂರಿನ ಅಸ್ಕಿಹಾಳ, ಕರ್ನಾಟಕ, (ಸದ್ಯ ದೆಹಲಿ ), India ಕಾಲ ಗೆರೆಗಳಲಿ ಸರಿಸೃಪದ ಚಿನ್ಹೆಗಳ ಬರೆದು ಹಸ್ತರೇಖೆಗಳಲಿ ಪುಸ್ತಕದ ಸಹವಾಸವಿಟ್ಟು ಹೋಗು ಬದುಕಿಕೋ ಎಂದ ಅರೆಕ್ಷಣಗಳ ಹುಡುಕಿ ಹೊರಟವನು ನಾನೇನು ಹೇಳಲಿ..? – ಜುಲುಮೆ ಉತ್ತುತ್ತ ಉರಿಯಲ್ಲಿ ಊರಾಚೆ ಕೆರೆಯಲ್ಲಿ ಉತ್ತರ ನಾಡಿನ ಗಡಿಯಲ್ಲಿ ಕಾಣಿರೊ ಮುತ್ತಂಥ ಮೆಟ್ಟಿನ ಮಲ್ಲಯ್ಯನ   ಭೂಮಿ ಗುಡಿಸುವವರ ಬಾನು ಬಳಿಯುವವರ ಪಾದ ಹಸನಾಗಿ ಇರಲೆಂದು ಮಾಡ್ಯಾನೆ ನಾಡೊಪ್ಪೊ ಜೋಡ ಮಲ್ಲಯ್ಯ   ಹರಗಿದ್ದು ನೆಲವಲ್ಲ ಒರಗಿದ್ದು ತೆನೆಯಲ್ಲ ಬಿಟ್ಟಿ ಚಾಕರಿಗೆ ಕೊನೆಯಿಲ್ಲ ಮಲಶೆಟ್ಟಿ ನಾಯಿಚೂರಿಗೆಲ್ಲ ದೊರೆಮಲ್ಲ   ಪಾದ ಪಾದರಸ ಹೆಸರು ಸಣ್ಣ ಸರಸ ದೊರೆಶೆಟ್ಟಿಗೀಕೆ ಕೊನೆ ಕೂಸ ಸರಸೀಗೆ ಕಾಲಡಿ ಆಣಿಗಾಯ ಕಾಡಿತ್ತ   ಸೂರ್ಯಂಗೆ ಮುಗಿದಾರೊ ಚಂದ್ರಂಗೆ ನಮಿಸ್ಯಾರೊ ಅಷ್ಟ ದಿಕ್ಕೀಗೆ ಹುಡಿಕ್ಯಾರೊ ಕೈ ಮದ್ದು ಕಾಣದೆ ಬರಿಗೈಲೆ ಬಂದಾರೊ   ಕಟ್ಟು ಕುಲಕಿಲ್ಲ ಕೆಟ್ಟು ಬಗೆಯೋದಿಲ್ಲ ಮೆಟ್ಟು ಮಾಡೋರ ಮನೆತನಕ ನಡಿಬೇಕ ಹುಟ್ಟುಗಾಲಿಲೆ ಗಿಳಿಯೊಂದ ಹೇಳಿತು   ಗುರುತು ಹೇಳಲು ಬ್ಯಾಡ ಮರೆತು ದೊರೆಗೂಸೆ ಮದ್ದಿನ ಹೆಸರು ಮೆಟ್ಟೆಂಬುದ ಅರಿತು ಗುಟ್ಟಾಗಿ ಪಡೆದುಕೊ ಜೋಡೊಂದ   ತಿಂದಿದ್ದು ಮದ್ದಲ್ಲ ಕಂಡಿದ್ದು ಕಲ್ಲಲ್ಲ ಕಾಲು ಬ್ಯಾನಿಗೆ ನಿದಿರಿಲ್ಲ ಹಗಲಲ್ಲಿ ಕುಂಟುತ್ತ ನಡೆದಾಳೊ ದಾರೀಲಿ   ಅಲೆಯುತ್ತ ನಡೆದಾಳೊ ಅಳಲು ನುಡಿದಾಳೊ ಮಾವಿನಕೆರೆ ದಂಡೆ ತಲುಪ್ಯಾಳೊ ಮಂದಿಯ ಮಲ್ಲಯ್ಯನ ಜೋಪಡಿ ಕೇಳ್ಯಾಳೊ     ಮುತ್ತಿನರಮನೆಯಲ್ಲ ಕತ್ತಿ ಹಿಡಿದವರಿಲ್ಲ ಸುತ್ತ ಗುಡಿಸಲು ಕೊನೆಯಲ್ಲಿ ಸಿಕ್ಕೀತು ಶಿವನು ಮೆಚ್ಚಿದ ಜೋಪಡಿ   ಅರಳಿ ಮರದ ನೆರಳು ಅಳತೆಗೆ ಬೆರಳು ಅವಳಿ ಆತನ ಕೈಯಲ್ಲಿ ಚರ್ಮವು ಚಿತ್ತಾರದುಂಗುಟ ಮೆಟ್ಟಲ್ಲಿ   ಕತ್ತು ಹೊರಳಲಿಲ್ಲ ಚಿತ್ತ ಕದಲಲಿಲ್ಲ ಸುತ್ತ ಪರಪಂಚದರಿವಿಲ್ಲ ದುಡಿಮೇಲಿ ದೂರಾಯ್ತು ದು:ಖವು ಬೆವರಲ್ಲಿ   ಕಾವು ಕಾಣದ ಕಾಲು ಬಿಸಿಲು ತಟ್ಟದ ಬಾಲೆ ಸರಿಸಿಯು ಒಣಗಿದ ಬರಿ ನಾಲೆ ಕೇಳಿದಳು ಜೋಡೊಂದ ಹಿಮ್ಮಡಿ ಉರಿಜ್ವಾಲೆ   ಊರೆಲ್ಲ ಅಲೆದಾಳೊ ಚಮ್ಮಾರ ಬೇಡ್ಯಾಳೊ ಕಾದ ನೆಲವೆಲ್ಲ ಅಂಗಾರ ಬ್ಯಾಸಿಗೆ ಸಹಿಸೋಂತ ಮೆಟ್ಟಿನ ಜೋಡೊಂದ   ರೆಕ್ಕೆ ಕಾಲು ಗಿಣಿಗೆ ಖಾಲಿಪಂಜರ ದಣಿಗೆ ರೊಕ್ಕದ ಚಿಂತಿಲ್ಲ ಮಲ್ಲಯ್ಯ ಜೋಡೊಂದ ಮಾಡಯ್ಯ ಕುದುರೆ ಚರ್ಮದಿ     ಹದಿಹರೆಯ ಕಾಲಿಗೆ ಕುದುರೆ ಜೋಡಾದರೆ ಹಡೆದವ್ವರೆಲ್ಲ ಹೆದರ್ಯಾರೊ ಚಮ್ಮಾಳಿಗೆ ಆಗದು ಕುದುರೆ ಚರ್ಮದಿ   ಜಿಗಿ ಜಿಗಿವ ಜಿಂಕೆ ಚರ್ಮದಿ ಮಲ್ಲಯ್ಯ ಚೆಂದಾದ ಜೋಡೊಂದ ಆದೀತ ಬಿಂದಿಗೆ ಬಿರಬಿರನೆ ನೀರೊತ್ತು ತಂದೇನಾ   ಜಿಗಿವ ಪರಿ ಕಂಡು ಊರೆಲ್ಲ ಎಲೆ ನಾರಿ ಜೀರಿಗೆ ತಿಂದು ಉಗಿದಾರ ಮಲ್ಲಯ್ಯನ ಜೀವಕ್ಕೆ ಕುತ್ತು ತಂದಾರ   ಸದ್ದಿಲ್ಲದೇನೆ ಕದ್ದು ಮೇಯುವೆ ಕಬ್ಬು ಮದ್ದಾನೆ ಚರ್ಮ ಆದೀತ ಮಲ್ಲಯ್ಯ ನಡೆವ ದಾರಿನೆ ಕಡಿದ್ಹಂಗ   ಜಂಬಾದ ನಾರಿ ನಾ ಕಟುಕನೇನಾ ಜಂಬುರಾಯನ ಕೊಂದೇನಾ ಕುಲದೇವ ಜಾಂಬವಂತನು ಮೆಚ್ಚಾನು   ಮರಳುಗಾಡಿನ್ಯಾಗ ಕರವೊಡ್ಡಿ ಬೇಡಿದರೆ ಒಡಲ ನೀರುಯ್ಯುವ ಒಂಟೆಯ ತೊಗಲಲಿ ಹೊಲಿದು ಕೊಡುವೇಯ ಜೋಡೊಂದ     ಬಾಯಾರಿ ಬಂದಾರೆ ನೀರುಣಿಸಿ ಕಳುಸೇನು ನಿಗಿ ನಿಗಿ ಬಿಸಿಲಾಗ ನಿಂದೇನಾ ನಾರಿ ನಡಿ ನಡಿ ಮುಂದಿನ ಕೇರಿಗೆ   ಕೊಟ್ಟು ಕುದಿಯಲು ಬ್ಯಾಡ ಮೆಟ್ಟಿಲ್ಲ ಎನಬ್ಯಾಡ ಉಟ್ಟುಡುಗೆ ಒಡ್ಡಾಣ ನಿಡೇನ ಹೋಗಲಿ ನುಣುಪಿನ ನರಿ ಚರ್ಮ ಆದೀತಾ   ಗುಂಡು ಹೊಡೆಯಲಾರೆ ಬಾಣ ಬಿಡಲಾರೆ ಬಂಡೆಣ್ಣೆ ಬದುಕದು ತರವಲ್ಲ ತೆಗಿಯೆ ಮನೆದೇವ ಹರಳಯ್ಯ ಒಪ್ಪಾನು   ಮಾತು ಮಾತಿಗು ಮನೆದೇವನೆಂಬ ಓತಿಕ್ಯಾತನ ತರಲ್ಯಾಕ ತರಾವರಿ ಮಾತಾಡಿ ಮಾಡಿದ ಕಸುಬೇನ   ಕುಲದೇವನೆಂಬೋನು ನೆಲದೊಡೆಯನೆಂಬುದ ಕುಳಿತುಂಡ ಕುಲಕೆತ್ತ ತಿಳಿದೀತ ಎಲೆ ಕುಲತಿ ಕೇಡು ಕುಲದ್ಹಾಡು ನಾಯಿ ಮೊಲೆಜೋಡು   ಒಡಲೆಲ್ಲ ಕೊಳಿಗೇರಿ ಒಲೆಯಲ್ಲ ಹೊಲಿಗೇರಿ ಕರದಲ್ಲಿ ಕೆರದ ಚಾಕರಿ ಆದರು ಕರೆದುಕೊಳ್ಳುವ ಪರಿ ಅಚ್ಚರಿ     ತಿಂಬೋನಲ್ಲ ಹೊಲೆಯ ಅಂಬೋನು ಅರಿಯೆ ಅಂಬಿಗನಿಗೆ ನೀರೆತ್ತ ಹೊಲೆಯೆ ಅಂಬಾ ಎಂದುಲಿವ ಕೂಗೆತ್ತ ಹೊಲೆಯೆ   ಕಾಲಾಗ ಉರಿಯೆಚ್ಚಿ ನಾಲಿಗಿ ಉರಿಯಾಗಿ ಮರೆತಾಳು ಮದ್ದಿನ ಕರಾರು ಸರಸಿಯು ತಾನ್ಯಾರನೆಂಬುದ ಸಾರ್ಯಾಳೊ   ಓಣಿ ಓಡಿ ಬಂತು ಕೇರಿ ಕೇಳುತ ನಿಂತು ದರ್ಪದ ದೊರೆಮಗಳ ದನಿ ಕೇಳಿ ಖುದ್ದು ಅರಮನೆ ನೆರೆದಿತ್ತು ಕೆರೆದಂಡೇಲಿ   ಆಳು ಮಕ್ಕಳು ಸರಿದು ಓಳಾಗಿ ನಿಂತರು ಮಲಶೆಟ್ಟಿ ಮಗಳೆಡೆಗೆ ಬಂದಾನೊ ಗಳಿಗೆ ಮಂದಿ ಮೌನದಿ ನಿಂತಾರು   ಕಣ್ಣು ಖಾರದ ಉಂಡೆ ಕಾಲು ಹೆಬ್ಬಂಡೆ ಕೆಕ್ಕರಿಸಿ ಮಲ್ಲಯ್ಯನ ಕಂಡಾನೊ ಮಲಶೆಟ್ಟಿ ಬಲ್ಲೆಯಾ ತಾನ್ಯಾರು ಎಂದಾನೊ   ದೊರೆತಾನ ದುರಾಯ್ತು ಗೌಡಿಕೆ ಗುಡಿಸೋಯ್ತು ಬಂದಾರೆ ಮನೆತನಕ ದೊರೆತಾನು ದೊರೆಕೀತ ದೊರೆ ದೊರೆ ತಾನೆಂಬ ದುರುಳಂಗೆ     ಅವಳಿ ಕೈ ಬಿಡಲಿಲ್ಲ ತೆವಳಿ ಬದುಕಲಿಲ್ಲ ಗಟ್ಟಿಗ ಮಲ್ಲಯ್ಯ ತಂದಾನೆ ತಾನೆ ಬಂದವನ್ಯಾರಾದರೆಂದಾನೆ   ದುರುದುರು ನೋಡ್ಯಾನೆ ದೊರೆ ಕತ್ತಿ ಬೀಸ್ಯಾನೆ ಮಲ್ಲಯ್ಯ ಕುತ್ತಿಗೆ ತೆಗೆದಾನೆ ಮರುಚಣ ಕುಸಿದ ಕೇಕೆ ಅಳಲು ಕೇಳ್ಯಾನೆ   ಹಗಲಲ್ಲೆ ಕತ್ತಲು ಕೆರೆಯಲ್ಲ ನೆತ್ತಾರು ನಡುಗಿದ ಮಂದಿ ಸುತ್ತಲೂ ಕಂಡಾರು ಹಾರಿತು ರುಂಡ ಎತ್ತಲೊ   ಚಿತ್ಕಾರದನಿ ಕೇಳಿ ಚೀರ್ಯಾವೊ ಅಳಿಲು ದಿಕ್ಕು ಪಾಲಾಗಿ ಹಕ್ಕಿಯು ಹಾರಿತು ರೆಕ್ಕೆ ನಾಯಿಯು ರುಂಡ ಒಯ್ಯಿತು   ಆದದ್ದು ಅರಿವಿಲ್ಲ ಕಾದಿದ್ದು ಒಳಿತಲ್ಲ ಕತ್ತಿ ಹಿಡಿದವಗೆ ಖಬರಿಲ್ಲ ಕೂಸು ಕಣ್ಣೆದುರೆ ಕುಸಿದಾಗ ಕಸುವಿಲ್ಲ   ಪಾದಾದುರು ಏರಿ ಮೊಣಕಾಲು ಮೀರಿ ಕಾದ ಮೈಕುಲುಮೆ ಕಾವೇರಿ ಸರಸಿಗೆ ಜಗವೊಂದು ಉರಿಚೆಂಡು ಕಣ್ಣಿಗೆ     ಧರೆಗೆ ದೊಡ್ಡವನೆಂಬ ದೊರೆಯೊಬ್ಬನಿಲ್ಲ ಗರಿಕೆ ಮ್ಯಾಲಿನ ಕಿರೀಟ ಸ್ಥಿರವಲ್ಲ ದೊರೆಯೆ ಉದುರಿ ಬೀಳುವ ಜೀವ ಉಳಿಸೀಕೊ   ಮಡದಿಯ ದನಿ ಕೇಳಿ ಮಡುಗಟ್ಟಿದ ಶೆಟ್ಟಿ ಮರುಕಾದಿ ಮಗಳೆಡೆಗೆ ನೋಡ್ಯಾನೊ ಕಡೆತನಕ ಹಿಡಿಯೇನು ಕತ್ತಿ ಎಂದಾನೊ   ಹಿಂದಿಲ್ಲ ಮುಂದಿಲ್ಲ ಮಲ್ಲಯ್ಯನೆಂಬುವಗೆ ಕಲ್ಲೆದೆಯ ಮಲಶೆಟ್ಟಿ ಕೊಂದಾನೊ ನಾಡೆಲ್ಲ ನೆತ್ತಾರು ಮಳೆಯ ತಂದಾನೊ   ಪಾಪದ ಮಳೆ ಸುರಿದು ಪಾದಾವು ಸರಿದು ಕೇರಿ ಗುಡಿಸಲು ಸೇರ್ಯಾವೊ ಕಣ್ಣಾರೆ ಹರಿದ ನೆತ್ತರು ಮಡವು ಕಂಡಾವೊ   ನೆತ್ತಾರು ಮಳೆಯಲ್ಲಿ ಸುತ್ತಾರು ಜನರಿಲ್ಲ ಹೆತ್ತವರತ್ತು ಕರೆದಾರೊ ಸರಸಿಯ ಹೊತ್ತೊಯ್ದು ಗುಡಿಸಲಲಿಟ್ಟಾರೊ   ಉರಿಉರಿ ಗಂಟಲು ಉರಿಯೆಚ್ಚಿ ಗಂಟಲು ಬೊಗಸೆ ನೀರನು ಬೇಡ್ಯಾಳೊ ಕಣ್ಣಲ್ಲಿ ನೆತ್ತಾರ ಹನಿಯ ಮೂಡ್ಯಾವೊ     ಆ ಮನಿ ಈ ಮನಿ ನಡುಮನಿ ಕಡೆಮನಿ ಎಲ್ಲಾ ಮನಿ ಕೊಡಪಾನ ತಂದಾರೊ ಬಾಯ್ತೆರೆದು ಕುಡಿ ಮಗಳೆ ನೀರ ಎಂದಾರೊ   ನೀರೆಲ್ಲ ರಗುತಾಯ್ತು ಕೊಡಪಾನ ಕೆಂಪಾಯ್ತು ಹಳ್ಳ ಕೆರೆ ಬಾವಿ ಇಂಗೋಯ್ತು ತಂಬಿಗೆ ನೀರೆಂಬುದಂತು ಮಾಯಾಯ್ತು   ಗಂಡ ಹೆಂಡರು ಸೇರಿ ಮುಂಡಾದ ಬಳಿ ಸಾರಿ ಕಂಡ ದೇವರಿಗೆ ಮುಗಿದಾರೊ ಕೆರೆದಂಡೆ ಕೊನೆಯ ಬಂಡೆಗೆ ಬಂದಾರೊ   ಆ ಮಾರಿ ಈ ಮಾರಿ ಊರಿಗೆ ಉಗಿ ಮಾರಿ ಉಗಿದುಗಿದು ಅತ್ತು ಕೇಳ್ಯಾರೊ ಕೈ ಮುಗಿದು ಉಳಿಸಿಕೊಡು ಜೀವ ಎಂದಾರೊ   ಉತ್ತುತ್ತ ಊರೆಲ್ಲ ಕತ್ತಾಲಾಗೊ ಹೊತ್ತು ಮಲ್ಲಪುರಗುಡ್ಡಕ್ಕೆ ಹೋಗಿರಿ ಮಲ್ಲಯ್ಯನ ಕಲ್ಲೆಂದ ಬಾಯಿಂದ ಹರಸಿರಿ   ಕಲ್ಲೆಂದ ಬಾಯಿಂದ ಮಲ್ಲಯ್ಯನ ಹರಿಸಿ ಮುಂಡಕ್ಕೆ ಹೆಂಡತಿ ಮಾಡೀರಿ ಮಗಳ ಗಂಡನ ಮನೆಗಿತ್ತು ನಡೆಯೀರಿ     ಅಂದಿದ್ದು ಅರಿವಾಯ್ತು ಕೊಂದದ್ದು ತಪ್ಪಾಯ್ತು ಎಂದಿಗೂ ನಾ ನಿನ್ನ ಮಗನಯ್ಯಾ ತಂದೆ ಜೀವ ಕೂಡಿಸು ನಿನ್ನಿಛ್ಚೆಯೆಂದೆ   ಕರವೊಡ್ಡಿ ಬೇಡಲು ಕಣಗಿಲೆ ನೀಡಲು ಜೀವ ಪಡೆದಾವೊ ಇಡುದೇಹ ಒಡನೆ ಗಂಧ ಸುರಿದಾವೊ ಮೋಡ ಸಮನೆ   ಚೌಡಿಕೆ ಹಾಡೀತು ಬುಡುಬುಡಿಕಿ ನಕ್ಕೀತು ಹಲಗೆ ಶಬುದಕ್ಕೆ ಹಗಲಾಯ್ತು ನಾಯಿಚೂರು ನಿನ್ನೆದಲ್ಲ ಹಳತು ಹೊಸದಾಯ್ತು   ರಾತ್ರಿ ಕಂಡ ರಗುತ ಬೆಳಗಾನ ನೀರಾಯ್ತು ಹಳ್ಳ ಬೆಳ್ಳಾನೆ ಬೆಳ್ಳಕ್ಕಿ ಆಯಿತು ಮಲ್ಲಯ್ಯನ ಪವಾಡ ಬಯಲಾಯಿತು   ಉತ್ತುತ್ತ ಊರಲ್ಲಿ ಕೆರೆದಂಡೆ ಮನಿಯಲ್ಲಿ ಉತ್ತಮರ ಕುಲದಾಗೆ ಹುಟ್ಟೇನಾ ಮೆಟ್ಟಿನ ಮಲ್ಲಯ್ಯ ಮೆಚ್ಚಿನ ಮಗನೇನಾ ___________________________________________________ ಟಿಪ್ಪಣಿ : ನಾಯಿಚೂರು : ಹಿಂದೊಮ್ಮೆ ದಂಡನಾಯಕನೊಬ್ಬ ಈಗಿನ ರಾಯಚೂರು ಪ್ರಾಂತ್ಯದಲ್ಲಿ ವಾಯು ವಿಹಾರಕ್ಕೆ ಬಂದಾಗ ಮೊಲವೊಂದು ನಾಯಿಯನ್ನು ಬೆನ್ನಟ್ಟಿದ ದೃಶ್ಯ ಕಂಡನಂತೆ. ಕುತೂಹಲಕ್ಕೆ ಹೊಗಿ ನೋಡಿದರೆ ಮೊಲ ನಾಯಿಯನ್ನು ಚೂರಾಗಿ ಹರಿದು ಬಿಟ್ಟಿತ್ತಂತೆ. ನಾಯಿ ಸತ್ತ ಆ ಸ್ಥಳ ಕೋಟೆ ಕಟ್ಟಲು ಸೂಕ್ತಯೆನಿಸಿ; ಕೋಟೆ ಕಟ್ಟಿಸಿ ಅದಕ್ಕೆ ನಾಯಿಚೂರು ಎಂದು ಹೆಸರಿಟ್ಟನಂತೆ. ಉಗುಳು ಮಾರಿ ದೇವರು : ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರಿನಲ್ಲಿರುವ ಈ ದೇವರಿಗೆ ಉಗುಳುವ ಮೂಲಕ ನಮಿಸುವುದು ಇಲ್ಲಿಯ ವಿಶೇಷ.   -ರಮೇಶ ಅರೋಲಿ, [email protected] ನವ ದೆಹಲಿ.]]>

‍ಲೇಖಕರು G

February 1, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅವಿವಾಹಿತನ ವೈವಾಹಿಕ ಕಲ್ಪನೆಗಳು

ಅವಿವಾಹಿತನ ವೈವಾಹಿಕ ಕಲ್ಪನೆಗಳು

ವಿಶ್ವನಾಥ ಎನ್. ನೇರಳಕಟ್ಟೆ ನನ್ನವಳು ‘ಊಟದಲ್ಲಿದ್ದಂತೆ ಹೋಳಿಗೆನೀನು ನನ್ನ ಬಾಳಿಗೆ’ಎನ್ನದಿದ್ದರೆ ಮಾಡಿಟ್ಟ ಹೋಳಿಗೆಹಾಕುವುದೇಇಲ್ಲ ನನ್ನ...

ಚೈತ್ರಚೇತನ ಕೊನರಿ…

ಚೈತ್ರಚೇತನ ಕೊನರಿ…

ಅರ್ಚನಾ ಎಚ್ ಹೆಡೆಯರಳಿ ಬುಸುಗುಟ್ಟಿಕೋಪದುರಿಬುಗ್ಗೆಗಳ ಎಸರು..ತಿಳಿಬಾನಿಗೆರಚಿ ಕೆಸರು..!!ರಾಡಿಕೊಳದಲಿ ಕಂಡದ್ದು ಭಗ್ನ...

ಮಣ್ಣ ಕಾಯಕ ಕಾಯುವುದಷ್ಟೇ…

ಮಣ್ಣ ಕಾಯಕ ಕಾಯುವುದಷ್ಟೇ…

ಸಂತೆಬೆನ್ನೂರು ಫೈಜ್ನಟ್ರಾಜ್ ಎಷ್ಟೇ ಬಿಡಿಸಿದರೂ ಅಲ್ಲೊಂದು ಇಲ್ಲೊಂದು ಮೊಗ್ಗು ಬಳ್ಳಿಯಲೇ ಉಳಿದಂತೆ ಅಗೋ ಉಳಿದಿವೆ ನೋಡು ಆಡದ ಎಷ್ಟೋ...

5 ಪ್ರತಿಕ್ರಿಯೆಗಳು

 1. Gubbachchi Sathish

  ಪ್ರೀತಿಯ ರಮೇಶ್ ರವೆರೆ, ನಿಮ್ಮ ಸುದೀರ್ಘ ಕವನ ತುಂಬ ಚೆನ್ನಾಗಿ ಮೂಡಿದೆ.
  ಈ ಸಾಲುಗಳು ಬಹಳ ಅರ್ಥಗರ್ಭಿತವಾಗಿವೆ. ಮತ್ತು ಇಷ್ಟವಾದವು.
  ಧರೆಗೆ ದೊಡ್ಡವನೆಂಬ ದೊರೆಯೊಬ್ಬನಿಲ್ಲ
  ಗರಿಕೆ ಮ್ಯಾಲಿನ ಕಿರೀಟ ಸ್ಥಿರವಲ್ಲ ದೊರೆಯೆ
  ಉದುರಿ ಬೀಳುವ ಜೀವ ಉಳಿಸೀಕೊ
  ಧನ್ಯವಾದಗಳು,
  ಗುಬ್ಬಚ್ಚಿ ಸತೀಶ್.

  ಪ್ರತಿಕ್ರಿಯೆ
 2. lalitha siddabasavaiah

  ಪದ್ಯ ಚೆನ್ನಾಗಿದೆ. ಅಪರೂಪವಾಗಿಬಿಟ್ಟಿರುವ ಕನ್ನಡ ತ್ರಿಪದಿ ಒಳ್ಳೆಯ ನಾದಗುಣ ಲಯದೋಟದೊಡನೆ ಮತ್ತಿಲ್ಲಿ ಪ್ರತ್ಯಕ್ಷವಾಯ್ತು.ಧನ್ಯವಾದ ರಮೇಶ್.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: