ರವಿ ಬೆಳಗೆರೆ ಇನ್ನಿಲ್ಲ..

ಶಿವಾನಂದ ತಗಡೂರು

ಹಿರಿಯ ಪತ್ರಕರ್ತರು, ಅಧ್ಯಕ್ಷರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ

ರವಿಬೆಳಗೆರೆ ಇನ್ನಿಲ್ಲ…

ಬೆಳಗಾಗುವ ಮುನ್ನವೇ ಸುನಾಮಿಯಂತೆ ಪತ್ರಕರ್ತ ರವಿಬೆಳಗೆರೆ ನಿಧನ ಸುದ್ದಿ ಸುನಾಮಿಯಂತೆ ಅಪ್ಪಳಿಸಿತು.

ಹಾಯ್ ಬೆಂಗಳೂರ್ ಪತ್ರಿಕೆ ಸಂಪಾದಕರಾಗಿ ತನ್ನ ಬರವಣಿಗೆಗಳ ಮೂಲಕವೇ ನಾಡಿನ ಉದ್ದಗಲಕ್ಕೂ ತನ್ನದೇ ಆದ ಓದುಗರ ವಲಯ ಸೃಷ್ಟಿಸಿಕೊಂಡಿದ್ದ ವಿಭಿನ್ನ ಮನೋಭಾವದ ಕ್ರಿಯಾಶೀಲ ವ್ಯಕ್ತಿತ್ವದ, ಸೂಕ್ಷ್ಮ ಸಂವೇದನೆಯ ರವಿಬೆಳಗೆರೆ ಪ್ರತಿಭೆ ಅದ್ಭುತವಾದದ್ದು. ಸಾಹಿತಿಯಾಗಿ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅನನ್ಯ.

ಟಿವಿ ಕಾರ್ಯಕ್ರಮಗಳಲ್ಲಿ ಗಮನಸೆಳೆದ ಅಕ್ಷರ ಮಾಂತ್ರಿಕ, ಕ್ರೈಂ ವರದಿಗಾರಿಕೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ ದಿಟ್ಟ ಸಾಹಸಿ.

ವಿವಾದಗಳನ್ನು ಮೈ ಮೇಲೆ ಎಳೆದುಕೊಂಡರೂ, ಅದನ್ನೆಲ್ಲ ಅಷ್ಟೇ ಬೇಗ ಪಕ್ಕಕ್ಕೆ ಸರಿಸಿ, ಬರವಣಿಗೆ ಲೋಕದಲ್ಲಿ ಮುಳುಗಿ ಹೋಗುತ್ತಿದ್ದ ಭಿನ್ನ ಕ್ರೀಯಾಶೀಲ ಲೇಖಕ.

ಅರವತ್ತೆರಡನೇ ವಸಂತಕ್ಕೆ ಕಾಲಿಟ್ಟ ದಿನ ಹಾಯ್ ಬೆಂಗಳೂರ್ ಕಚೇರಿಗೆ ಹೋಗಿ ಅವರನ್ನು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಹೃದಯಪೂರ್ವಕವಾಗಿ ಸನ್ಮಾನಿಸಿ ಬಂದಿದ್ದು ಕೊನೆಯಾಯಿತು.
ತಿಂಗಳ ಹಿಂದೆ ಪೋನ್ ನಲ್ಲಿ ಮಾತನಾಡಿದ್ದು ಕೊನೆ ಮಾತಾಗಬಹುದು ಅಂದುಕೊಂಡಿರಲಿಲ್ಲ.

ರವಿಬೆಳಗೆರೆ ನಿಧನಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ.

ರವಿ ಬೆಳಗೆರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಸಾವಿನ ನೋವು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ಕರುಣಿಸಲಿ😌


(March 15
My FB wall post)

ಒಮ್ಮೊಮ್ಮೆ ಹೀಗೂ ಆಗುತ್ತೆ…

ಮೈಸೂರು ಜಿಲ್ಲೆ ಸುತ್ತೂರಿನಲ್ಲಿ 2019 ಮಾರ್ಚ್ 1&2 ರಂದು ನಡೆದ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ 34ನೇ ಪತ್ರಕರ್ತರ ಸಮ್ಮೇಳನಕ್ಕೆ ಹಾಯ್ ಬೆಂಗಳೂರ್ ಪತ್ರಿಕೆ ಸಂಪಾದಕ ರವಿ ಬೆಳಗೆರೆ ಅವರನ್ನು ಆಹ್ವಾನಿಸಿದ್ದೆವು. ಸಂಪಾದಕರ ಸಮ್ಮಿಳನ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಅವರ ಅನಾರೋಗ್ಯ ಕಾರಣ ಕೊನೆ ಕ್ಷಣದಲ್ಲಿ ಬರಲಾಗಲಿಲ್ಲ.

ಮಾರ್ಚ್ 15 ರವಿ ಬೆಳಗೆರೆ ಜನ್ಮದಿನ. ಶುಭ ಹಾರೈಸಿ ಮೆಸೇಜ್ ಮಾಡಿದೆ. ಅತ್ತಲಿಂದ ಪಟಕ್ ಅಂತ ಪೋನ್ ಬಂತು. ಆಫೀಸ್‌ನಲ್ಲಿ ಇದ್ದಾರೆ ಬನ್ನಿ ಎಂದು.
ಕದಿರೇನಹಳ್ಳಿ ಕ್ರಾಸ್ ನಲ್ಲಿ ಪ್ರಾರ್ಥನಾ ಸ್ಕೂಲ್ ಬಳಿ ಇರುವ ಅವರ ಕಚೇರಿಗೆ ಹೋಗಿ ಶುಭ ಹಾರೈಸಿದ ಕ್ಷಣ ಹಳೆಯ ನೆನಪುಗಳು ತೆರೆದುಕೊಂಡವು.
ಅಲ್ಲಿ ನಮ್ಮ ಸ್ವಾಮಿಗೌಡ ಲಕ್ಷ್ಮಿಸಾಗರ ಸಾಥ್ ನೀಡಿದ್ದರು.

ಲಂಕೇಶ್ ಪತ್ರಿಕೆಯಿಂದ ಹೊರಬಿದ್ದ ಸತ್ಯಮೂರ್ತಿ ಆನಂದೂರು, ಸಿದ್ದಪ್ಪ ಅರಕೆರೆ ಎಲ್ಲರೂ ಸೇರಿ ಈ ವಾರ ಕರ್ನಾಟಕ ಪತ್ರಿಕೆ ಮಾಡಿದ್ದಾಗ ನಾನು ಅಲ್ಲಿ ವರದಿಗಾರನಾಗಿ ಕೆಲಸ ಮಾಡಿದ್ದೆ. ಆಗ ಅದೇ ಕಚೇರಿಯಲ್ಲಿ ರವಿಬೆಳಗೆರೆ ಅವರು ನಾನು ಎದುರುಬದುರಾಗಿ ಕುಳಿತು ವರದಿಗಳ ಬರೆದ ಕ್ಷಣ ಮರೆಯುವಂತಿಲ್ಲ.

ಸತ್ಯಮೂರ್ತಿ ಸಿಕ್ಕಿದ್ದರೇನ್ರಿ ತಗಡೂರ್ ಅಂದ್ರು ರವಿ ಬೆಳಗೆರೆ. ಇಲ್ಲ ಸರ್ ಅಂದೆ. ಸತ್ಯಮೂರ್ತಿ ವಿಷಯ ಬಗ್ಗೆ ಅವರೇ ಮಾತನಾಡಿ ನೊಂದುಕೊಂಡರು. ಅಲ್ಲಿ ಇನ್ನೂ ಕೆಲವರನ್ನು ನೆನಪು ಮಾಡಿಕೊಂಡರು. ನಾನೇ ಪೋನಾಯಿಸಿ ಕೊಟ್ಟೆ. ಹಳೆಯ ನೆನಪುಗಳ ಮೆಲುಕು ಹಾಕಿ ಮಾತನಾಡಿದರು.

ಕೊನೆಯಲ್ಲಿ ಅವರಿಗೆ ಶಾಲು ಹೊದಿಸಿ, ಹಾರ ಹಾಕಿ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದೆ. ಮೈಸೂರು ಪತ್ರಕರ್ತರ ಸಂಘ ಅಂದು ನೀಡಿದ್ದ ಬ್ಯಾಗ್ ಅವರಿಗೆ ಕೊಟ್ಟು, ನೀವು ವರ್ಷದ ಹಿಂದೆ ಸುತ್ತೂರು ಸಮ್ಮೇಳನಕ್ಕೆ ಕೈಕೊಟ್ಟಿದ್ರಿ, ಆ ಬ್ಯಾಗ್, ಗೌರವ ನಿಮ್ಮನ್ನು ಹುಡುಕಿಕೊಂಡು ಬಂದಿದೆ ಎಂದು ತಮಾಷೆ ಮಾಡಿದೆ. ಹೌದಲ್ವಾ ಎಂದು ನಕ್ಕರು.

ಒಮ್ಮೆ ಎಲ್ಲರೂ ಸೇರೋಣ ತಗಡೂರ್ ಅಂದ್ರು. ಆಯ್ತು ಸರ್ ಎಂದು, ಮತ್ತೊಮ್ಮೆ
Happy birthday Sir
ಹೇಳಿ ಹೊರಟೆ.

(ಮತ್ತೊಮ್ಮೆ ಎಲ್ಲಿ ಸೇರೋಣ ಎಂದು ಅವರು ಹೇಳಲಿಲ್ಲ, ನಾನೂ ಕೇಳಲಿಲ್ಲ. ಈಗ‌ ಅವರ ನಿಧನ ಸುದ್ದಿ ಬಂದಿದೆ)

‍ಲೇಖಕರು avadhi

November 13, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅಂದು, ನಾನು ವಿದ್ಯಾರ್ಥಿಗಳ ಮುಂದೆ ತಲೆ ತಗ್ಗಿಸಿದೆ…

ಅಂದು, ನಾನು ವಿದ್ಯಾರ್ಥಿಗಳ ಮುಂದೆ ತಲೆ ತಗ್ಗಿಸಿದೆ…

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ...

‘ಫಿರ್ ಭೀ ದಿಲ್ ಹೈ ಹಿಂದೂಸ್ತಾನಿ’

‘ಫಿರ್ ಭೀ ದಿಲ್ ಹೈ ಹಿಂದೂಸ್ತಾನಿ’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ 'ಅರೇ... ಹೋದ......

೧ ಪ್ರತಿಕ್ರಿಯೆ

  1. Kum. VEERABHADRAPPA

    ರವಿ ಬೆಳಗೆರೆ ಮೊನ್ನೆಯಷ್ಟೆ ಅರವತ್ತರ ಹೊಸ್ತಿಲು ದಾಟಿದ್ದ, ಕನಸುಗಳನ್ನೆ ಮೆಟ್ಟಿಲಾಗಿಸಿಕೊಂಡು ನಾಡಿನಾದ್ಯಂತ ವ್ಯಾಪಿಸಿದ್ದ, ಪಂಚೇಂದ್ರಿಯಗಳ ಗ್ರಹಿಕಾ ಸಂಹಿತೆಯನ್ನು ಪುನರ್ ವ್ಯಾಖ್ಯಾನಿಸಿದ್ದ, ಮುಖಮುಲಾಜಿಲ್ಲದೆ ತೋಚಿದ್ದನ್ನು ತೋಚಿದ ಹಾಗೆ ಅಭಿವ್ಯಕ್ತಿಸಿ ಅಸಂಖ್ಯಾತ ಯುವಮನಸ್ಸನ್ನಾಳಿದ ಪವಾಡ ಸದೃಶ ಅಪೂರ್ವ ಪ್ರತಿಭಾವಂತ, ದಶಕಗಳುದ್ದಕ್ಕೂ ತನ್ನ ದೇಹವನ್ನು ತಾನೇ ಹಿಗ್ಗಾಮುಗ್ಗ ದಂಡಿಸಿ ಅಕ್ಷರ ವ್ಯವಸಾಯದ ದುಡಿಮೆಗೆ ಹಚ್ಚಿ ನೂರಾರು ಕೃತಿಗಳ ಫಸಲನ್ನು ಸುಗ್ಗಿಸಿ ಹಿಗ್ಗಿದ ಅಕ್ಷರ ಲೋಕದ ರಾಕ್ಷಸ, ಲಂಕೇಶ್ ನಂತರದ ಪತ್ರಿಕೋದ್ಯಮದ ಸ್ವರೂಪವನ್ನೆ ಬದಲಾಯಿಸಿದ ಏಕಮೇವಾದ್ವಿತೀಯ ಮಾಧ್ಯಮಿಕ, ಲೈಫ್ ಎಂಜಾಯ್ ಮೆಂಟಿನ ಪಠ್ಯಕ್ರಮವನ್ನು ರಚಿಸಿ ಸಾರ್ವತ್ರೀಕರಿಸಿದ ಮೇಧಾವಿ, ಅನುಭಾವಿ, ಕನ್ಬಡದ ನೀತ್ಸೆ.. ಹೀಗೆ ಆಲ್ ಇನ್ ಒನ್ ನಮ್ಮ ರವಿ, ಇವನ ಬಗ್ಗೆ ಇರುವ ಬೇಸರ ಒಂದೆ, ಅದೆಂದರೆ ನಮ್ಮೆಲ್ಲರ ಗೂಡುಗಳಿದ್ದ ವೃಕ್ಷದಿಂದ ತಾನೊಬ್ಬನೆ ಆಗಸಕ್ಕೆ ನೆಗೆದದ್ದು. ಓಹ್ ರವಿ ಅಲ್ಲೂ ಸುಖ ಸಂತೋಷದಿಂದ ಅಜರಾಮರವಾಗಿರು
    – ಕುಂವೀ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: