ರಸ್ಕಿನ್ ಬಾ೦ಡ್ ಕಥೆ – ’ನನ್ನ ಕಿಟಕಿ ಬದಿಯ ಮರಗಳು’

ನನ್ನ ಕಿಟಕಿ ಬದಿಯ ಮರಗಳು -ರಸ್ಕಿನ್ ಬಾ೦ಡ್ (selected from ruskin bond’s MINI BUS, title name:trees by my window)

ಕನ್ನಡಕ್ಕೆ ಅನುವಾದ-ಸುನಿಲ್ ರಾವ್

ಬದುಕುತ್ತಿರುವುದು ಹಿಮಾಲಯದ ಏಳು ಸಾವಿರ ಅಡಿಗಳ ಎತ್ತರದಲ್ಲಿ, ಮನೆಗೆ ದೊಡ್ಡ ಕಿಟಕಿಗಳು ಇರುವುದೇ ನನ್ನ ಅದೃಷ್ಟ, ಇಡೀ ಕಾಡಿನ ಮರಗಳು ಅದರ ಮೂಲಕ ನನಗೆ ಎಟಕುವಂತೆ ಭಾಸವಾಗುತ್ತದೆ. ನಾನು ಜಿಗಿದರೆ ಓಕ್ ಮರದ ತೊಳಿನಲ್ಲೋ ಅಥವಾ ಚೆಸ್ಟ್ ನಟ್ ಮರದ ಬಾಹುಗಳಲ್ಲೋ ಹೋಗಿ ಕೂರಬಲ್ಲೆ, ಆದರೆ ನಾನು ಯಾವತ್ತು ಆ ರೀತಿ ಜಿಗಿದಿಲ್ಲ….ಈ ಉದ್ದ ಬಾಲದ ಮಂಗಗಳು ನನ್ನ ಮನೆಯ ಚಾವಡಿಯ ಮೇಲೆ ಜಿಗಿದು ಬಹಳವೇ ಸದ್ದು ಮಾಡಿ ಅಲ್ಲಿದ್ದ ಹಕ್ಕಿಗಳನ್ನು ಓಡಿಸಿಬಿಡುತ್ತದೆ. ಹಾಗೆ ನನ್ನ ಕಿಟಕಿಗೆ ಆತುಕೊಂಡು ನಿಂತಾಗ ಒಂದು ಆಕ್ರೋಟದ ಮರವಿದೆ, ನಿಜಕ್ಕೂ ಅದು ಎಲ್ಲ ಕಾಲದ ಮರ, ಚಳಿಗಾಲದಲ್ಲಿ ರೆಂಬೆ ಕೊಂಬೆಗಳು ಖಾಲಿ ಇರುತ್ತದೆ ಆದರೆ ಮೃದು, ಸುಂದರ ಹಾಗು ದುಂಡಗೆ ಕಾಣುತ್ತದೆ. ಮಳೆಗಾಲದಲ್ಲಿ ಅಥವಾ ವಸಂತದಲ್ಲಿ ಹಸಿರು ಚಿಗುರಿ ಹೊಸ ಜೀವ ಮೈದಳೆದಂತೆ ಗೋಚರಿಸುತ್ತದೆ. ಬೇಸಿಗೆಯ ಮಧ್ಯಕಾಲದಲ್ಲಿ ಇಡೀ ಮರವು ಹಸಿರೆಲೆಗಳಿಂದ ತುಂಬಿಕೊಂಡಿರುತ್ತದೆ, ಇನ್ನು ಮುಂಗಾರಿನ ಕೊನೆಯಲ್ಲಿ ಹಸಿರು ಹೊದಿಕೆಯ ಪೆಟ್ಟಿಗೆಯಂತಹ ಕಾಯಿಗಳ ಮಧ್ಯೆ ಅಕ್ರೋಡ ಋತುಮತಿಯಂತೆ ಕಾಣುತ್ತದೆ. ಆ ಹಸಿರು ಪೆಟ್ಟಿಗೆಯಲ್ಲಿದ್ದ ಅಕ್ರೋಟ ಕಂದುಬಣ್ಣಕ್ಕೆ ತಿರುಗಿ ಅದು ಇಬ್ಭಾಗವಾದಾಗ ಕಾವಡೆಯ ಮಧ್ಯದಲ್ಲಿ ಅತ್ಯಂತ ರುಚಿಯಾದ ತಿನ್ನತಕ್ಕ ತಿನಿಸಾಗುತ್ತದೆ. ಪ್ರತಿವರ್ಷ ನನಗೆ ಆ ಮರ ಮೂರು ಬುಟ್ಟಿಯ ತುಂಬಾ ಅಕ್ರೋಟವನ್ನು ಕೊಡುತ್ತದೆ, ಆದರೆ ಈ ವರ್ಷ ಅದು ಒಂದಾದಮೇಲೊಂದು ಮಾಯವಾಗುತ್ತಾ ಬಂದಿತು, ನಾನು ಬೆಳಗಿನ ಜಾವ ಏಳುವ ಹೊತ್ತಿಗೆ ಯಾರೋ ಆ ಬೀಜಗಳು ತೆಗೆದುಕೊಂಡು ಹೋಗುತ್ತಿದ್ದರು, ನಾನು ಆ ನಷ್ಟದ ರುವಾರಿಯನ್ನು ಹುಡುಕುತ್ತಲಿದ್ದೆ, ಹಾಲು ಮಾರುವವನ ಕೊನೆಯ ಮಗನಾ ?? ಸಂಶಯ ಹುಟ್ಟಿತು ಆದರೆ, ಸಾಮಾನ್ಯವಾಗಿ ಅವನು ಓಕ್ ಮರಗಳನ್ನು ಹತ್ತುವುದನ್ನು ಕಂಡಿದ್ದೆ, ಅಲ್ಲಿ ಆತ ತನ್ನ ದನಗಳಿಗೆ ಒಣಹುಲ್ಲು ಹಾಗು ಗೋಗ್ರಾಸವನ್ನು ಸಂಗ್ರಹಿಸುತ್ತಾನೆ, ಅವನೊಬ್ಬ ಚಾಲಾಕಿ ಮರ ಹತ್ತುವವ….ಕರೆದು ಕೇಳಿದೆ, ಅವನ ಹಸುಗಳು ನನ್ನ ಮನೆಯ ದಾಲಿಯಾ ಗಿಡವನ್ನು ಕಳೆದ ವಾರ ಬಹಳವೇ ಆಸ್ವಾದಿಸಿತ್ತು ಎಂದು ಒಪ್ಪಿಕೊಂಡನಾದರು, ಅಕ್ರೋಟನ್ನು ತಾನೆಂದೂ ದನಗಳಿಗೆ ತಿನ್ನಿಸಿಯೇ ಇಲ್ಲ ಎಂದು ಮುಲಾಜಿಲ್ಲದೆ ಗಟ್ಟಿಯಾಗಿ ದಬಾಯಿಸಿ ನಿರಾಕರಿಸಿದ. ಮರಕಡಿಯುವವನೂ ಅಲ್ಲ!! ಅವನು ಪ್ರತಿದಿನವೂ ಒಂದಿಲ್ಲೊಂದು ಮರದ ಬಳಿ ಹೋಗಿ ಅದರ ಚರ್ಮವನ್ನು ತಟ್ಟಿ ತಟ್ಟಿ ಸದ್ದು ಮಾಡಿ, ಆಹಾರಕ್ಕಾಗಿ ಮರದ ಪೊಟರೆಯೊಳಗಿದ್ದ ಹುಳುಗಳನ್ನು ಹುಡುಕುತ್ತಾನೆ, ಅವನೊಬ್ಬ ಶಿಸ್ತುಬದ್ಧ ಮಾಂಸಾಹಾರಿ, ಇನ್ನು ಈ ಉದ್ದಬಾಲದ ಮಂಗಗಳೂ ಕೊಡ ತಿಂದಿರಲಾರದು ಯಾಕೆಂದರೆ ಅದು ತೋಟದ ಗಿಡಗಳನ್ನು ಮಾತ್ರ ತಿನ್ನುತ್ತವೆ. ನಾನು ಹಾಸಿಗೆಯಲ್ಲಿದ್ದಾಗಲೇ ಈ ಅಕ್ರೋಟ ಮಾಯವಾಗುತ್ತಿತ್ತು, ಒಂದು ದಿನ ಎಲ್ಲರು ಆಶ್ಚರ್ಯ ಪಡುವಂತೆ ನಾನು ಬೇಗ ಎದ್ದುಬಿಟ್ಟೆ, ಸ್ವತಹ ನನಗೆ ಆಶ್ಚರ್ಯ!! ಯಾಕೆಂದರೆ ನಾನು ಎಂದೂ ಸೂರ್ಯೋದಯಕ್ಕೆ ಮೊದಲು ಎದ್ದವನಲ್ಲ. ಅಪರಾಧಿಯನ್ನು ನಾನು ಹಿಡಿದೇಬಿಟ್ಟೆ, ಆಶ್ಚರ್ಯ..ಆಕೆ ಒಬ್ಬ ವಯಸಾದ ಮುದುಕಿ, ಕೆಲವೊಮ್ಮೆ ಗುಡ್ಡಗಳಲ್ಲಿ ಹುಲ್ಲಿಗಾಗಿ ಆಕೆ ಬಂದಿದ್ದನ್ನು ಕಂಡಿದ್ದೆ. ಅವಳ ಮುಖ ಅಕ್ರೋಟದಂತೆಯೇ ಒಣಗಿತ್ತು ಆದರೆ ಅವಳ ತೋಳು ಹಾಗು ಕಾಲುಗಳು ದಾಂಡಿಗನಂತೆ ಒರಟಾಗಿದ್ದವು. “ಮತ್ತೆ ಎಷ್ಟು ಅಕ್ರೋಟನ್ನು ಕಿತ್ತಿದ್ದೀಯ ಅಜ್ಜಿ” ಕೇಳಿದೆ ನಾನು. ‘ಬರೀ ಎರಡು’, ಕಿಸಿ ಕಿಸಿ ನಕ್ಕು ಆಕೆ ತನ್ನ ಮುಷ್ಟಿಯಲ್ಲಿದ್ದ ಅದನ್ನು ನನಗೆ ಕೊಡುವಂತೆ ಮಾಡಿದಳು, ಅದರಲ್ಲಿ ಒಂದನ್ನು ನಾನು ತೆಗೆದುಕೊಂಡೆ, ನಾನು ಅವಳನ್ನು ಮತ್ತೆ ಮರದಮೇಲೆ ಹತ್ತುವಂತೆ ಪ್ರೋತ್ಸಾಹಿಸಿದೆ ಆಕೆ ಹತ್ತಿದಳು…ಅದು ನನಗೆ ಖಂಡಿತ ಸಾಧ್ಯಾವಾಗುತ್ತಿರಲಿಲ್ಲ ಎಂದು ತಿಳಿದಿದೆ, ಆಕೆಯ ವಯಸ್ಸು ನನ್ನ ಎರಡರರ್ಷ್ಟಿರಬಹುದು, ಆದರೆ ನಾನು ಬಲ್ಲೆ ಯಾವತ್ತು ನನಗೆ ಮರ ಹತ್ತಲು ಸಾಧ್ಯವಿಲ್ಲ ಎಂದು…ಅವಳು ಸುಲಿಗೆ ಮಾಡಿ ಗೆದ್ದವಳಂತೆ ಬೀಗಿದಳು. ಈ ಕಾಡಿನಲ್ಲಿ ಇನ್ನು ಬಹಳಷ್ಟು ಸೋಜಿಗವಿದೆ, ಅಕ್ರೋಟದಂತೆ ಹಾರ್ಸ್ ಚೆಸ್ಟ್ ನಟ್ ಅನ್ನು ತಿನ್ನಲಾಗದು ಅದು ಯೋಗ್ಯವಲ್ಲ, ರೈಸಸ್ ಜಾತಿಯ ಮಂಗಗಳು ಕೂಡ ಅದನ್ನು ಅಸಹ್ಯದಿಂದ ಎಸೆದುಬಿಡುತ್ತದೆ. ಆದರೆ ಆ ಮರ ಬಹಳ ಸ್ನೇಹಶಾಲಿಯಾದದ್ದು, ಅದರಲ್ಲೂ ಬೇಸಿಗೆಯಲ್ಲಿ ಮರ ಹಸಿರೆಲೆಗಳಿಂದ ತುಳುಕುತ್ತಿರುತ್ತವೆ, ಮಂದವಾಗಿ ತಂಗಾಳಿಯು ಮರವನ್ನು ಸೋಕಿದಾಗ ಒಂದಕ್ಕೊಂದು ಎಲೆಗಳು ತಾಕಿ ಸಂಭಾಷಿಸುತ್ತದೆ ಹಾಗು ವಿನೋದವಾಗಿ ಸದ್ದು ಮಾಡುತ್ತವೆ. ವಸಂತದಲ್ಲಿ ಮರದ ಹೂ ಗಳು ಕ್ಯಾಂಡಲಿಬ್ರಾದಂತೆ ಕಾಣುತ್ತದೆ, ಹೂಗಳು ಅರಳಿ ನೆಲಕ್ಕೆ ಉದುರಿದಾಗ ಗುಡ್ಡದ ಸುತ್ತ ಸುವಾಸನೆಯುಳ್ಳ ಗುಲಾಬಿ ಬಣ್ಣದ ಹೂ ಪಕಳೆಗಳು ರತ್ನಗಂಬಳಿಯಂತೆ ಹರಡಿರುವುದನ್ನು ನೋಡುವುದೇ ಮನೋಹರ… ನನ್ನ ಮತ್ತೊಂದು ಮೆಚ್ಚುಗೆ ಅಂದರೆ ದೇವದಾರು ಮರ, ಅದು ಪ್ರತಿಷ್ಟೆಯಂತೆ ಪ್ರೌಢವಾಗಿ ಉದ್ದಕ್ಕೆ ನಿಂತಿರುತ್ತದೆ ಗಾಳಿಯೊಂದಿಗೆ ಬಾಗುವುದೇ ಇಲ್ಲ. ವಸಂತದಲಿ ಹೊಸ ಎಲೆಗಳು ಅಥವಾ ಸೂಜಿಗಳು ಮಂದಹಸುರಾಗಿರುತ್ತವೆ, ಮಾನ್ಸೂನ್/ಮು೦ಗಾರು ಬಂದಾಗ ಮರದ ಎಲೆಯ ಸಣ್ಣ ಕೋನಗಳು ಅರಳಿ ಸುವಾಸನೆಯುಳ್ಳ ದಟ್ಟಹಸುರಿನ ಕೊಂಬೆಗಳಾಗಿ ಬೆಳೆಯುತ್ತದೆ. ದೇವದಾರುವಿಗೆ ಅದರದೇ ಆದ ಸಂಗಾತಿಯಿದೆ .ಒಂದು ಕೊಂಬೆ ಬೆಳೆದರೆ ಅದರ ಜೊತೆ ಹಲವಾರು ರೆಂಬೆಗಳು ಬೆಳೆಯುತ್ತದೆ. ದೇವದಾರುವಿನ ಕಾಡಿನಲ್ಲಿ ನಡೆದುಕೊಂಡು ಹೋಗುವುದೇ ಒಂದು ಸ್ಫೂರ್ತಿ. ಪರ್ವತದ ತಪ್ಪಲಿನಲ್ಲಿ ಸುವಿಶಾಲವಾಗಿ ಬೆಳೆದ ದೇವದಾರುವಿನ ಮಧ್ಯೆ ವಾಯುವಿಹಾರಕ್ಕೆ ಹೊರಟರೆ, ಆ ಮರಗಳೂ ನಮ್ಮ ಜೊತೆ ವಿಹಾರಕ್ಕೆ ಹೊರಟಿದೆಯೇನೋ ಎಂದು ಭ್ರಮಿಸುವಷ್ಟು ಸೋಜಿಗದ ಅನುಭವ. ಆಗಾಗ ನಾನು ಕಿಟಕಿಯಿಂದ ಕಾಣುವ ಮರಗಳ ಹತ್ತಿರ ವಿಹಾರಕ್ಕೆ ಹೋಗುತ್ತಾ ಇರುತ್ತೇನೆ, ಆ ಮರಗಳನ್ನು ಮುಟ್ಟಿ ಅದರ ಇರುವಿಕೆಯನ್ನು ಅನುಭವಿಸುತ್ತೇನೆ. ಓಕ್ ಮರವೇ ಇಲ್ಲಿ ತುಂಬಾ ಎತ್ತರವಾಗಿ ಬೆಳೆಯುವುದು, ಜೋರಾಗಿ ಗಾಳಿ ಬೀಸಿದಾಗ ಅದರ ಮೇಲ್ಭಾಗದ ಕೊಂಬೆಗಳು ಬಾಗಿ, ಒಂದರ ಜೊತೆ ಮತ್ತೊಂದು ಹೊಂದಿಕೊಂಡು ಲೀನವಾದಂತೆ ಕಾಣುತ್ತದೆ, ಬೇರೆ ಬೇರೆಯಾಗಿ ಕಾಣುವುದೇ ಇಲ್ಲ. ಆದರೆ ಹಕ್ಕಿ ಪಕ್ಷಿಗಳ ಏಕಾಂತಕ್ಕೆ ಅದು ಉತ್ತಮ ಜಾಗ. ಕೆಲವೊಮ್ಮೆ ಹೆಲಿಕಾಪ್ಟರಿನ ಸದ್ದು ಆಗುವವರೆಗೂ ಅಥವಾ ನೀಲಿ ಮ್ಯಾಗ್ಪೀಸ್ ಗಳು ಕಾಡಿನ ಮಧ್ಯೆ ಗುಂಪಾಗಿ ಸದ್ದು ಮಾಡಿಕೊಂಡು ಹೋಗುವ ವರೆಗೂ ಅಲ್ಲಿ..ಎಕಾಂತದಂತೆಯೇ ನಿಶಭ್ದವಾಗಿರುತ್ತದೆ. ಹೆಚ್ಚಾಗಿ ಪೀತದಾರು ಅಥವಾ ಸೂಚಿಪರ್ಣ ಮರಗಳು ಮನೆಯ ಬಳಿ ಇರುವ ಗುಡ್ಡದ ಬಳಿ ಕಾಣುತ್ತದೆ.ಹಿಮಾಲಯದ ತಪ್ಪಲಿನಲ್ಲೇ ಆ ಮರಗಳು ಇವೆ, ಅದೂ ನನ್ನ ಮನೆಯ ಕೆಳಭಾಗದಲ್ಲೇ…ಕೆಲವೊಮ್ಮೆ ನಾನು ಕೂತು,ತಂಗಾಳಿ ಹಾದಾಗ ಮರದ ಕೊಂಬೆಗಳು ಬಾಗಿ ಅದರಿಂದ ಹೊರಹೊಮ್ಮುವ ಸಣ್ಣ ದನಿಯನ್ನು ಆನಂದದಿಂದ ಆಸ್ವಾದಿಸುತ್ತೇನೆ. ರಾತ್ರಿಯಹೊತ್ತು ಕಿಟಕಿಯನ್ನು ತೆರೆದಾಗ ಅಲ್ಲಿ ಕೇಳಿಸಿಕೊಳ್ಳಲು ಏನೋ ಒಂದು ಶಬ್ದ ಇದ್ದೆ ಇರುತ್ತದೆ,ಕುಳ್ಳ ಗುಜ್ಜಾರಿ ಗೂಬೆಯ ಮರಿಗಳ ಸಣ್ಣ ಶಿಳ್ಳೆಯ ಸದ್ದು ಅಥವಾ ಜೋರಾಗಿ ಕೂಗುವ ನರಿಗಳ ಅಳುವಿಕೆಯೋ…..ಹೀಗೆ ಏನೋ ಇರುತ್ತದೆ. ಕೆಲವೊಮ್ಮೆ ಅದೃಷ್ಟವಿದ್ದರೆ ಪರ್ವತಗಳ ನಡುವೆ ಎರಡು ದೇವದಾರು ಮರಗಳ ಮಧ್ಯದಲ್ಲಿ ಉದಯಿಸುವ ಚಂದ್ರಮನನ್ನು ಕಾಣುತ್ತೇನೆ.ಅದೊಂದು ಪಕ್ವ ಛಾಯರೂಪದಂತೆ ರೋಮಾಂಚನಗೊಳಿಸುತ್ತದೆ. ಕೆಲರಾತ್ರಿಗಳು ಕಿಟಕಿಯಾಚೆಯಿಂದ ನಿಗೂಢವಾದ ದನಿಗಳು ಕೇಳಿಬರುತ್ತದೆ,ಆದರೆ ಅದು ಮರಗಳದ್ದೆ ಸದ್ದು. ಕೈಗಳನ್ನು ಅಗಲಿಸಿ, ತೋಳುಗಳನ್ನು ಚಾಚಿ, ಸಣ್ಣಗೆ ಮರಗಳ ಮಧ್ಯೆ ಬೆಳಕಿಗೆ ದಾರಿ ಮಾಡಿಕೊಡುತ್ತಾ, ಒಂದರ ಜೊತೆ ಒಂದು ಮೆಲುದನಿಯಲ್ಲಿ ಪಿಸುಗುಡುತ್ತದೆ. ಪರ್ವತ ಶ್ರೇಣಿಯ ಮರಗಳೆಲ್ಲಕ್ಕೂ ನನ್ನ ಪರಿಚಯವಿದೆ ಎಂದು ನಾನು ಭಾವಿಸಿದ್ದೇನೆ. ಅದನ್ನು ನೋಡುತ್ತಾ, ಅದರ ಗುಟ್ಟುಗಳನ್ನು ಕೇಳುತ್ತ, ಅದರ ಬಾಹುಗಳಲ್ಲಿ ನಾನು ಆತುಕೊಂಡು ಮಲಗಲು ಬಹಳವೇ ಖುಷಿಯೆನಿಸುತ್ತದೆ.]]>

‍ಲೇಖಕರು G

July 5, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

6 ಪ್ರತಿಕ್ರಿಯೆಗಳು

 1. Prakash Srinivas

  ತುಂಬಾ ಒಳ್ಳೆಯ ಬರವಣಿಗೆ!
  ಬದುಕುತ್ತಿರುವುದು ಹಿಮಾಲಯದ ಏಳು ಸಾವಿರ ಅಡಿಗಳ ಎತ್ತರದಲ್ಲಿ, ಮನೆಗೆ ದೊಡ್ಡ ಕಿಟಕಿಗಳು ಇರುವುದೇ ನನ್ನ ಅದೃಷ್ಟ, ಇಡೀ ಕಾಡಿನ ಮರಗಳು ಅದರ ಮೂಲಕ ನನಗೆ ಎಟಕುವಂತೆ ಭಾಸವಾಗುತ್ತದೆ.
  ಮೊದಲ ಸಾಲುಗಳೇ ಮುಂದೆ ಓದಲೇ ಬೇಕು ಅನ್ನೋ ಶಕ್ತಿ ತುಂಬುತ್ತೆ!
  ಸೂಪರ್ ಸುನಿಲ್!

  ಪ್ರತಿಕ್ರಿಯೆ
 2. ushakattemane

  ಸುನಿಲ್ ನಿಮಗೆ ಭಾಷೆಯ ಬಗ್ಗೆ ಒಳ್ಳೆಯ ಹಿಡಿತವಿದೆ. ಘಟನೆಗಳನ್ನು ಸುಲಭವಾಗಿ ಅನುವಾದಿಸಬಹುದು. ಆದರೆ ಭಾವಗಳನ್ನು ಕಷ್ಟ. ಅದನ್ನು ನೀವು ಸಣ್ಣ ಸಣ್ಣ ವಾಕ್ಯಗಳಲ್ಲಿ ಸರಳವಾಗಿ ಹಿಡಿದಿಟ್ಟಿದ್ದೀರಿ..
  ನೀವು ನಿಮ್ಮನ್ನು ನಿಸ್ಸಂಕೋಚವಾಗಿ ಅನುವಾದದಲ್ಲಿ ತೊಡಗಿಸಿಕೊಳ್ಳಬಹುದು.

  ಪ್ರತಿಕ್ರಿಯೆ
 3. Poornima Girish

  ಸುನಿಲ್, ತು೦ಬ ಸೊಗಸಾಗಿ ಬರ್ದಿದ್ದೀಯ.. I appreciate your involvment and committment towards writng. God bless..

  ಪ್ರತಿಕ್ರಿಯೆ
 4. Chetana Bhat

  ಕೆಲ ಸಮಯ ಕಾಡಿನಲ್ಲಿದ್ದು ಬಂದಂತಾಯ್ತು ಸುನಿಲ್…ಬರೀ ಭಾಷೆಯನ್ನ ಕನ್ನಡೀಕರಿಸದೆ ಭಾವವನ್ನೂ ಚೆನ್ನಾಗಿ ಚಿತ್ರಿಸಿದ್ದೀರಿ.

  ಪ್ರತಿಕ್ರಿಯೆ
 5. D.RAVI VARMA

  ಕೆಲರಾತ್ರಿಗಳು ಕಿಟಕಿಯಾಚೆಯಿಂದ ನಿಗೂಢವಾದ ದನಿಗಳು ಕೇಳಿಬರುತ್ತದೆ,ಆದರೆ ಅದು ಮರಗಳದ್ದೆ ಸದ್ದು. ಕೈಗಳನ್ನು ಅಗಲಿಸಿ, ತೋಳುಗಳನ್ನು ಚಾಚಿ, ಸಣ್ಣಗೆ ಮರಗಳ ಮಧ್ಯೆ ಬೆಳಕಿಗೆ ದಾರಿ ಮಾಡಿಕೊಡುತ್ತಾ, ಒಂದರ ಜೊತೆ ಒಂದು ಮೆಲುದನಿಯಲ್ಲಿ ಪಿಸುಗುಡುತ್ತದೆ. ಪರ್ವತ ಶ್ರೇಣಿಯ ಮರಗಳೆಲ್ಲಕ್ಕೂ ನನ್ನ ಪರಿಚಯವಿದೆ ಎಂದು ನಾನು ಭಾವಿಸಿದ್ದೇನೆ. ಅದನ್ನು ನೋಡುತ್ತಾ, ಅದರ ಗುಟ್ಟುಗಳನ್ನು ಕೇಳುತ್ತ, ಅದರ ಬಾಹುಗಳಲ್ಲಿ ನಾನು ಆತುಕೊಂಡು ಮಲಗಲು ಬಹಳವೇ ಖುಷಿಯೆನಿಸುತ್ತದೆ.
  ಇದು ಅನುವಾದ ಎನಿಸುವುದೇ ಇಲ್ಲ .ಮನಸಿಗೆ ತುಂಬಾ ಮುದ ನೀಡಿತು ಈ ನಿಮ್ಮ ಕಥೆ ಅಭಿನಂದನೆಗಳು .
  ರವಿವರ್ಮ ಹೊಸಪೇಟೆ

  ಪ್ರತಿಕ್ರಿಯೆ
 6. Vinod Bangalore

  ‘ಪರ್ವತ ಶ್ರೇಣಿಯ ಮರಗಳೆಲ್ಲಕ್ಕೂ ನನ್ನ ಪರಿಚಯವಿದೆ ಎಂದು ನಾನು ಭಾವಿಸಿದ್ದೇನೆ’ಎನ್ನುವ ವಾಕ್ಯ ಓದಿದಾಗ , ಹಿರಿಯೊಬ್ಬರು ಮರಗಳು ನಮ್ಮ ಸ್ನೇಹಿತರಂತೆ ಎಂದ ಮಾತು ಜ್ಞಾಪಕಕ್ಕೆ ಬಂತು. ಬರಹ ಚೆನ್ನಾಗಿದೆ.ಹೀಗೆ ಮುಂದುವೆರೆಯಲಿ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: