ರಾಜೇಂದ್ರ ಚೆನ್ನಿಯವರ ‘ಧಾರವಾಡದ ಪಡ್ಡೆದಿನಗಳು’

ಪ್ರಸನ್ನ ಸಂತೇಕಡೂರು

ಧಾರವಾಡ ಅಂದ ತಕ್ಷಣ ನಿಮಗೆ ಏನು ಜ್ಞಾಪಕ ಬರುವುದು? ಧಾರವಾಡ ಅಂದರೆ ಪೇಡ, ಖಾನಾವಳಿಗಳು, ಬೇಂದ್ರೆಯವರ ಸಾಧನ ಕೇರಿ, ಕರ್ನಾಟಕ ವಿಶ್ವವಿದ್ಯಾನಿಲಯ, ಹಿಂದುಸ್ತಾನಿ ಸಂಗೀತದ ಅತಿರಥ ಮಹಾರಥರಾದ ಪಂಡಿತ್ ಭೀಮಸೇನ್ ಜೋಷಿ, ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್, ಪಂಡಿತ್ ಬಸವರಾಜ ರಾಜಗುರು, ಗಂಗೂಬಾಯಿ ಹಾನಗಲ್, ಕುಮಾರ ಗಂಧರ್ವ, ಕಿತ್ತೂರು ಚೆನ್ನಮ್ಮನಿಂದ ಹತನಾದ ಬ್ರಿಟಿಷ್ ಅಧಿಕಾರಿ  ಥ್ಯಾಕರೆಯ ಸಮಾಧಿ,  ಐತಿಹಾಸಿಕ ಸೋಮೇಶ್ವರ ದೇವಸ್ಥಾನ, ಶಾಲ್ಮಲಾ ನದಿಯ ಉಗಮ ಸ್ಥಾನದ ಜೊತೆಗೆ ಇನ್ನು ಹಲವು ವ್ಯಕ್ತಿಗಳು, ಸ್ಮಾರಕಗಳು  ತಿಂಡಿಗಳು ಜ್ಞಾಪಕಕಕ್ಕೆ ಬರಬಹುದು.

ಅದು ಕರ್ನಾಟಕದ ಇನ್ನೊಂದು ಸಾಂಸ್ಕೃತಿಕ ಕೇಂದ್ರವಾಗಿರುವುದರಿಂದ ನಿಮಗೆ ಹಲವಾರು ಸಾಹಿತಿಗಳು, ಸಂಗೀತ ವಿದ್ವಾಂಸರು, ಪ್ರಾಧ್ಯಾಪಕರುಗಳು ಇನ್ನೇನೊ ಜ್ಞಾಪಕಕ್ಕೆ ಬರಬಹುದು.

ಶಾಲ್ಮಲಾ ನದಿ ಅಂದ ತಕ್ಷಣ ನಿಮಗೆ ಚಂಪಾ ಅವರ ಗುಪ್ತಗಾಮಿನಿ ಶಾಲ್ಮಲಾ ಜ್ಞಾಪಕಕ್ಕೆ ಬರಬಹುದು. ಹಾಗಾದರೆ, ಯಾರು ಈ ಶಾಲ್ಮಲಾ?

ಆ ಹೆಸರು ಕೇಳಿದ ತಕ್ಷಣವೇ ನಿಮ್ಮ ಬದುಕಿನಲ್ಲಿ ಅಥವಾ ನಿಮ್ಮ ಹದಿಹರೆಯದ ದಿನಗಳಲ್ಲಿ ಕಂಡಿರುವ ಅತೀ ಸುಂದರವಾದ ಹುಡುಗಿಯ ಚಿತ್ರ ನಿಮ್ಮ ಸ್ಮೃತಿಪಟಲದಿಂದ ಹೊರಬಂದು ನಿಮ್ಮ ಮುಂದೆ ಮರುರೂಪ ಪಡೆದು ನಿಲ್ಲಬಹುದು. ಅದರಲ್ಲೂ ಸಿ ಅಶ್ವಥ್ ಅವರು ಹಾಡಿರುವ

ಗುಪ್ತಗಾಮಿನಿ ನನ್ನ ಶಾಲ್ಮಲಾ ಹಾಡನ್ನು ಕೇಳಿರುವ ಎಲ್ಲರಿಗೂ ತಮ್ಮ ಬದುಕಿನಲ್ಲಿ ಬಂದು ಹೋಗಿರಬಹುದಾದ ಗುಪ್ತಗಾಮಿನಿ ಮತ್ತೇ ಜ್ಞಾಪಕಕ್ಕೆ ಬಂದು ಜೀವ ಹಿಂಡಿ ಹಿಪ್ಪೆ ಮಾಡಬಹುದು.

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಒಳಗೊಳಗೇ ಹರಿಯುವವಳು

ಜೀವ ಹಿಂಡಿ ಹಿಪ್ಪೆ ಮಾಡಿ ಒಳಗೊಳಗೇ ಕೊರೆಯುವವಳು, ಸದಾ….

ಗುಪ್ತಗಾಮಿನಿ ನನ್ನ ಶಾಲ್ಮಲಾ.

ಶಾಲ್ಮಲಾ ಅಂದರೆ ಚಂಪಾ ಅವರು ಹೇಳುವ ಪ್ರಕಾರ ಧಾರವಾಡದ ಏಳು ಗುಡ್ಡಗಳ ಗರ್ಭದಲ್ಲಿ ಹರಿಯುತ್ತಿದೆ ಎನ್ನಲಾದ ಒಂದು ಗುಪ್ತಗಾಮಿನಿ ನದಿ. ಇದನ್ನು ಕಂಡವರಿಲ್ಲ ಎಂದು ಹಲವರು ಹೇಳುತ್ತಾರೆ. ಆದರೆ, ನಮ್ಮ ಕನ್ನಡ ನಾಡಿನಲ್ಲಿ ಹರಿಯುವ ಬೇಡ್ತಿ, ಗಂಗವಳ್ಳಿ ನದಿಗಳ ಮೂಲ ರೂಪವೇ ಶಾಲ್ಮಲಾ ನದಿಯ ಉಗಮ ಸ್ಥಾನ.

ಗಂಗವಳ್ಳಿ ನದಿಗೆ ಶಿರಸಿ, ಸಹಸ್ರಲಿಂಗ ಮತ್ತು ಸೊಂದೆ ಕಡೆಯಿಂದ ಹರಿದು ಬರುವ ನದಿಯ ಇನ್ನೊಂದು ಉಪನದಿಗೂ ಶಾಲ್ಮಲೆ ಎಂದೇ ಹೆಸರು. ಈ ಶಾಲ್ಮಲಾ ನದಿಯಿಂದ ಮೂಡಿ ಬಂದ ಗಂಗವಳ್ಳಿ ನದಿಯೂ ಅಂಕೋಲ ಮತ್ತು ಗೋಕರ್ಣ ನಡುವೆ ಮಂಜುಗುಣಿಯ ಸಮೀಪ ಅರಬ್ಬೀ ಸಮುದ್ರವನ್ನು ಸೇರುತ್ತದೆ.

ಹಾಗಾದರೆ, ರಾಜೇಂದ್ರ ಚೆನ್ನಿಯವರ ಧಾರವಾಡದ ಪಡ್ಡೆದಿನಗಳಿಗೂ ಈ ಶಾಲ್ಮಲಾ ಎಂಬ ಗುಪ್ತಗಾಮಿನಿಗೂ ಏನು ಸಂಬಂಧ?

ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಗಿರೀಶ್ ಕಾರ್ನಾಡರಿಗೆ ಗುಪ್ತಗಾಮಿನಿ ಇದ್ದಳೆ? ನಟರಾಗಿದ್ದ ಅವರಿಗೆ ಬಾಲಿವುಡ್ ನ ಜನಪ್ರಿಯ ಮೋಹಕ ತಾರೆಯೊಡನೆ ಪ್ರೇಮಾಂಕುರವಾಗಿತ್ತೇ? ಇದು ಪಡ್ಡೆದಿನಗಳಲ್ಲಿ ಚಿತ್ರಿಸಿಕೊಳ್ಳುವ ಇನ್ಫ್ಯಾಟ್ಯುಯೆಶನ್ ಅಥವಾ ಹದಿಹರೆಯದ ಮೋಹವೇ?

ಇಲ್ಲಿ ಬೇಂದ್ರೆ, ಮಲ್ಲಿಕಾರ್ಜುನ ಮನ್ಸೂರ್, ಚಂದ್ರಶೇಖರ ಪಾಟೀಲ್(ಚಂಪಾ) ಮತ್ತು ಅವಧೇಶ್ವರಿಯ ಶಂಕರ ಮೊಕಾಶಿ ಪುಣೇಕರರು ಪಾತ್ರಗಳಾಗಿ ಬಂದು ಹೋಗುತ್ತಾರೆ. ರಾಜೇಂದ್ರ ಚೆನ್ನಿಯವರ ಧಾರವಾಡದ ಪಡ್ಡೆದಿನಗಳು ಒಂದು ಕಿರು ಪ್ರಬಂಧ ಸಂಕಲನ ಅಥವಾ ಆತ್ಮಕಥನದ ಕೆಲವು ತುಣುಕುಗಳು ಎಂದು ಹೇಳಬಹುದು.

ರಾಜೇಂದ್ರ ಚೆನ್ನಿಯವರು ವಿಮರ್ಶಕರಾಗಿ, ಕಥೆಗಾರರಾಗಿ, ಲೇಖಕರಾಗಿ, ಪ್ರಾಧ್ಯಾಪಕರಾಗಿ ಮತ್ತು ಹಲವಾರು ಚಳುವಳಿಗಳಲ್ಲಿ ಸ್ವತಃ ತಮ್ಮನ್ನು ತೊಡಗಿಸಿಕೊಂಡಿರುವುದರಿಂದ ನಾಡಿನಾದ್ಯಂತ ಪ್ರಖ್ಯಾತರಾಗಿದ್ದಾರೆ. ಬಹಳ ಹಿಂದೆಯೇ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದಿದ್ದಾರೆ.

ಇಲ್ಲಿ ಬರುವ ಪಡ್ಡೆಹುಡುಗರು ಮೇಲ್ನೋಟಕ್ಕೆ ಚೆನ್ನಿಯವರ ಆ ಕಾಲದ ಗೆಳೆಯರಾಗಿದ್ದರೂ ಕೂಡ ಇದು ಇಂದಿನ ಪಡ್ಡೆಹುಡುಗರು ಓದಿದರೂ ಸ್ವತಃ ತಾವೇ ಆ ರೀತಿಯೆಲ್ಲಾ ಮಾಡುತ್ತಿದ್ದೆವಲ್ಲವೇ ಎಂದು ತಮ್ಮನ್ನು ತಾವೇ ಪ್ರಶ್ನೆ ಮಾಡಿಕೊಳ್ಳುವಂತಾಗುತ್ತದೆ. ಪ್ರತಿಯೊಬ್ಬ ವಿದ್ಯಾವಂತನೂ ತನ್ನ ಪ್ರೌಢಶಾಲಾ ಅಥವಾ ಕಾಲೇಜು ದಿನಗಳಲ್ಲಿ ಹಲವಾರು ಪೋಲಿ ಆಟಗಳನ್ನಾಡಿರುತ್ತಾರೆ. ಕದ್ದು ಬೀಡಿ ಅಥವಾ ಸಿಗರೇಟು ಸೇದಿರುತ್ತಾರೆ.

ಆಲ್ಕೋಹಾಲ್ ಸೇವಿಸಿರಲೂಬಹುದು. ಹುಡುಗಿಯರಿಗೆ ರಹಸ್ಯ ಪ್ರೇಮ ಪತ್ರ ಕೊಟ್ಟಿರುತ್ತಾರೆ. ಕೆಲವೊಮ್ಮೆ ಪ್ರೇಮಪತ್ರ ಯಾರಿಗೂ ಕೊಡಲು ಹೋಗಿ ಮತ್ಯಾರಿಗೋ ತಲುಪಿರಬಹುದು. ತಲುಪಿ ಏಟನ್ನು ತಿಂದಿರಬಹುದು. ಕೆಲವೊಮ್ಮೆ ಅಧ್ಯಾಪಕರಿಗೋ ಅಥವಾ ಹುಡುಗಿಯರಿಗೋ ಕಾಗದದ ರಾಕೇಟ್ ಮಾಡಿ ಉಡಾವಣೆ ಮಾಡಿರುತ್ತಾರೆ. ಆ ಕಾರಣದಿಂದ ಇದು ನಮ್ಮೆಲ್ಲರ ಅನುಭವವೂ ಆಗಿರಬಹುದು.

ಇಲ್ಲಿ ರಾಜೇಂದ್ರ ಚೆನ್ನಿಯವರ ಈ ಪುಸ್ತಕದ ಶೀರ್ಷಿಕೆಯ ಜೊತೆ ಬೇಂದ್ರೆಯವರ ಒಂದು ಕವನದ ಸಾಲುಗಳನ್ನು ನೀಡಿರುತ್ತಾರೆ. ಆ ಸಾಲುಗಳು ಪುಸ್ತಕದ ಸಾರವನ್ನು ಮೊದಲೇ ತಿಳಿಸುತ್ತವೆ. ಅದು ಈ ರೀತಿ ಇದೆ “ಅಲ್ಲೇ ಸುತ್ತಾಡತಾವ ನಮ್ಮ ಖ್ಯಾಲ, ಎಲ್ಲಿ ಹೋದಾವೋ ಗೆಳೆಯಾ ಆ ಕಾಲಾ” ಎಲ್ಲರಿಗೂ ತಮ್ಮ ಬಾಲ್ಯದ ಮತ್ತು ಯವ್ವನದ ದಿನಗಳು ತುಂಬಾ ಮೋಡಿ ಮಾಡಿರುತ್ತವೆ. ನೀವು ಎಷ್ಟೇ ದೊಡ್ಡವರಾದರು ಎತ್ತರಕ್ಕೆ ಬೆಳೆದಿದ್ದರೂ ಆ ದಿನಗಳು ತುಂಬಾ ಕಾಡುತ್ತವೆ.

ಅದರಲ್ಲಿ ಯಾವುದೋ ಹುಡುಗಿ ನಿಮ್ಮನ್ನು ತೀವ್ರವಾಗಿ ಆಕರ್ಷಿಸಿದ್ದರೆ ಅಥವಾ ನೀವು ಅವಳ ಪ್ರೇಮಪಾಶದಲ್ಲಿ ಬಿದ್ದಿದ್ದರೆ ಆ ದಿನಗಳು ನಿಮ್ಮ ಮೇಲೆ ಇನ್ನು ಹೆಚ್ಚು ಪ್ರಭಾವ ಬೀರಿರುತ್ತವೆ. ಅವಳು ಗುಪ್ತಗಾಮಿನಿಯಾಗಿ ಶಾಲ್ಮಲಾ ಆಗಿದ್ದರೆ ನಿಮ್ಮ ಬದುಕಿನ ಬಹಳಷ್ಟು ದಿನಗಳನ್ನು ನೀವು ಅವಳ ನೆನಪಿನಲ್ಲಿಯೆ ಕಳೆದಿರಬಹುದು.

ಇಲ್ಲಿ ಚೆನ್ನಿಯವರು ಸಹ್ಯಾದ್ರಿ ಕಾಲೇಜಿನಲ್ಲಿ ಮತ್ತು ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿದ್ದವರು. ತಮ್ಮ ಬದುಕಿನಲ್ಲಿ ಹಲವಾರು ಪಡ್ಡೆ ಹುಡುಗರನ್ನು ಅಥವಾ ಪೋಲಿ ಹುಡುಗರನ್ನು ಕಂಡಿರಬಹುದು. ಅಥವಾ ಹಲವಾರು ಭಗ್ನ ಪ್ರೇಮಿಗಳನ್ನು ಕಂಡಿರಬಹುದು. ಏಕ ಮುಖ ಪ್ರೇಮವನ್ನು ನೋಡಿರಬಹುದು. ಆದರೆ, ಸ್ವತಃ ತಾವೊಬ್ಬ ಪಡ್ಡೆಹುಡುಗನಾಗಿದ್ದೆ ಎಂದು ಹೇಳಿಕೊಳ್ಳುವುದು ಸಂತೋಷದ ವಿಚಾರ.

ಕೆಲವೊಮ್ಮೆ ಹೆಚ್ಚು ಓದಿಕೊಂಡಿರುವವರು ಅದರಲ್ಲೂ ಒಂದು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿದ್ದವರು ಪಡ್ಡೆ ಹುಡುಗನಾಗಿದ್ದೆ ಎಂದು ಹೇಳಿಕೊಳ್ಳಲು ಧೈರ್ಯ ಬೇಕು. ಹೇಳಿಕೊಂಡರೆ ಒಂದು ಭಯ ಮಿಶ್ರಿತ ಗೌರವ ಭಾವ ಮೂಡಿಸಿಕೊಂಡಿದ್ದ ವಿದ್ಯಾರ್ಥಿಗಳು ಅಥವಾ ಆತ್ಮೀಯರು ನಮ್ಮನ್ನು ಹೇಗೆ ನೋಡಬಹುದು ಎಂಬ ಆತಂಕ ಕಾಡಬಹುದು.

ಇಲ್ಲಿ ಹನ್ನೊಂದು ಚಿಕ್ಕ ಚಿಕ್ಕ ಪ್ರಬಂಧಗಳಿವೆ. ಅದು ಚೆನ್ನಿಯವರು ಕರ್ನಾಟಕ ಕಾಲೇಜಿನಲ್ಲಿ ಪದವಿಗೆ ಓದುತ್ತಿದ್ದಾಗ ಆನಂತರ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿದ್ದಾಗ ನಡೆದ ಹಲವಾರು ಘಟನೆಗಳನ್ನು ಈ ಪ್ರಬಂಧಗಳು ಒಳಗೊಂಡಿವೆ.

ಮೊದಲ ಪ್ರಬಂಧದಲ್ಲಿ ಬೇಂದ್ರೆಯವರ ಬಗ್ಗೆ ಆಮೇಲೆ ಗಿರೀಶ್ ಕಾರ್ನಾಡರ ಬಗ್ಗೆ ಕೆಲವು ಮಾತುಗಳು ಬರುತ್ತದೆ. ಕನಸಿನ ಕನ್ಯೆ ಹೇಮಾ ಮಾಲಿನಿ ಗಿರೀಶ್ ಕಾರ್ನಾಡರನ್ನು ಮದುವೆಯಾಗಿ ಧಾರವಾಡದ ಕಾರ್ನಾಡರ ಮನೆಯ ಮುಂದೆ ರಂಗೋಲಿ ಹಾಕಬಹುದೇ? ಎಂದು ಪಡ್ಡೆ ಹುಡುಗರು ಅವಳ ಬರುವಿಕೆಗಾಗಿ ಶಬರಿಯ ಹಾಗೆ ಕಾಯುತ್ತಿರುತ್ತಾರೆ. ಆದರೆ ಅವಳು ಬರುವುದಿಲ್ಲ.

ಎರಡನೇ ಪ್ರಬಂಧದಲ್ಲಿ ಅವರು ತಮ್ಮ ಕರ್ನಾಟಕ ಕಾಲೇಜನ್ನು ಹುಲಗೂರು ಸಂತಿ ಎಂದು ಕರೆಯುತ್ತಾರೆ. ಆ ಕಾಲಕ್ಕೆ ಎಲ್ಲಾ  ಸರ್ಕಾರಿ ಕಾಲೇಜುಗಳು ಅತೀ ಹೆಚ್ಚು ವಿದ್ಯಾರ್ಥಿಗಳಿಂದ ತುಂಬಿಕೊಂಡು ಒಂದು ರೀತಿಯ ಸಂತೆಗಳೇ ಆಗಿದ್ದವು.  ಆಗ ಕಾಲೇಜು ಚುನಾವಣೆಗಳು ಕೂಡ ತುಂಬಾ ಜೋರಾಗಿಯೇ ನಡೆಯುತ್ತಿದ್ದವು. ಇಲ್ಲಿ ಸಂತ ಶಿಶುನಾಳ ಶರೀಫರ ತತ್ವ ಪದ “ಬಿದ್ದಿಯಬ್ಬೇ ಮುದುಕಿ”ಯಲ್ಲಿ ಬರುವ ಹುಲಗೂರು ಸಂತಿಗೆ ಹೋಲಿಸುತ್ತಾರೆ.

ಆ ವಯ್ಯಸ್ಸಿನಲ್ಲಿ ಎಲ್ಲಾ ಹುಡುಗರು ಅಂದರೆ ಕಾಲೇಜು ದಿನಗಳಲ್ಲಿ, ಕಾಲೇಜು ಮುಗಿದರೆ ಸಾಕು ಒಳ್ಳೆಯ ಹುಡುಗಿಯನ್ನು ಮದುವೆಯಾಗಿ ಒಳ್ಳೆಯ ಉದ್ಯೋಗ ಪಡೆದು ಸಂಸಾರ ಮಾಡಬಹುದು ಅಂದುಕೊಳ್ಳುತ್ತಾರೆ. ಆದರೆ, ಕಾಲ ಬದಲಾಗಿ ಎಲ್ಲವೂ ಸಿಕ್ಕ ಮೇಲೆ ಆ ದಿನಗಳೇ ತುಂಬಾ ಚೆನಾಗಿದ್ದವು ಅನಿಸುತ್ತವೆ. ಅವರ ಕಾಲೇಜಿನಲ್ಲಿ ಹಿಂದೂ ಹುಡುಗನೊಬ್ಬ ಸುಂದರವಾದ ಮುಸ್ಲಿಂ ಹುಡುಗಿಯ ಜೊತೆ ಕೈಯಿಡಿದು ಕುಳಿತುಕೊಳುವದೇ ಇವರಿಗೆಲ್ಲಾ ಪರಮಾಶ್ಚರ್ಯದ ವಿಷಯವಾಗಿರುತ್ತದೆ.

ಇನ್ನೊಮ್ಮೆ ಕಾಲೇಜಿಗೆ ಲಂಕೇಶರು ಬಂದಿರುತ್ತಾರೆ. ಆ ಕಾರ್ಯಕ್ರಮಕ್ಕೆ ಪಡ್ಡೆಹುಡುಗರು ಹೋಗಲಾಗಿರುವುದಿಲ್ಲ.  ಆಮೇಲೆ ಲಂಕೇಶರ ಪ್ರಸ್ತಾಪವನ್ನು ಮಡಿವಂತಿಕೆಯ ನಾರಾಯಣಾಚಾರ್ಯರು ಮಾಡಿ  “ಅಯ್ಯೋ, HE WAS ADVOCATING FREE SEX YOU SEE” ಎಂದು ತಿಳಿಸುತ್ತಾರೆ. ಪಡ್ಡೆ ಹುಡುಗರು ಅಯ್ಯೋ ನಾವು ಆ ಕಾರ್ಯಕ್ರಮಕ್ಕೆ ಹೋಗಲಾಗಲಿಲ್ಲವಲ್ಲ ಎಂದು ತಮ್ಮ ಅದೃಷ್ಟವನ್ನು  ಶಪಿಸಿಕೊಳ್ಳುತ್ತಾರೆ.

ಇನ್ನೊಮ್ಮೆ ಪೋಲಿ ಮನಸ್ಸಿನ ಈ ಪಡ್ಡೆ ಹುಡುಗರಿಗೆ ಮಲ್ಲಿಕಾರ್ಜುನ ಮನ್ಸೂರರ ಸಂಗೀತ ನಾದಲೋಕದಿಂದ ಹೇಗೆ ಅಕ್ಕ ಮಹಾದೇವಿಯ ಕದಳಿಗೆ ಕರೆದುಕೊಂಡು ಹೋಯಿತು ಮತ್ತು ಮೀರಾಬಾಯಿಯ ಭಕ್ತಿಯ ಪರವಶತೆಯಲ್ಲಿ ಮನಸೂರೆಗೊಂಡಿತು ಎಂದು ತಿಳಿಸುತ್ತಾರೆ.

ಇನ್ನೊಂದು ಪ್ರಬಂಧದಲ್ಲಿ ಖ್ಯಾತ ನಟ ನರಸಿಂಹರಾಜು ಅವರು ಸದಾರಮೆ ನಾಟಕ ಮಾಡಲು ಧಾರವಾಡಕ್ಕೆ ಬಂದಾಗ ಏನೆಲ್ಲಾ ಘಟನೆಗಳು ನಡೆದವು ಎಂದು ತಿಳಿಸುತ್ತಾರೆ. ಧಾರಾವಾಡದಲ್ಲಿದ್ದ ಜರ್ಮನ್ ಆಸ್ಪತ್ರೆ ಮತ್ತು ಅಲ್ಲಿನ ಕನ್ನಡ ಮಾತನಾಡುವ ಫರಂಗಿ ವೈದ್ಯೆ. ಅಲ್ಲಿ ಪ್ರಸವ ವೇದನೆಗೆ ಬಂದ ಹೆಣ್ಣು ಮಕ್ಕಳ ಆರೈಕೆಯ ಬಗ್ಗೆ ತಿಳಿಸುತ್ತಾರೆ. 

ಕೊನೆಗೆ ಇಂಗ್ಲಿಷ್ ತುಂಬಾ ಚೆನ್ನಾಗಿ ಮಾತನಾಡುವ ಅಷ್ಟೇನೂ ಸುಂದರವಲ್ಲದ ಹುಡುಗಿಯೊಬ್ಬಳ ಪಪ್ಪಿ ಲವ್ವಲ್ಲಿ ಬಿದ್ದು ಏನಾಯಿತು ಎಂದು ಹೇಳುವುದರ ಮೂಲಕ “ಕಾಲನೆನ್ನುವ ಪಾಪಿ ಕಡೆಗೂ ನಮ್ಮ ಪಡ್ಡೆದಿನಗಳನ್ನು ಕದ್ದು ನಡದೇಬಿಟ್ಟನು” ಎಂಬ ವಿಷಾದದ ಮೂಲಕ ಈ ಪುಸ್ತಕವನ್ನು ಮುಗಿಸುತ್ತಾರೆ. 

ಈ ಎಲ್ಲಾ ಲಲಿತ ಪ್ರಬಂಧಗಳನ್ನು ಓದಿದ ನಂತರ ನೀವು ಮಧ್ಯ ವಯಸ್ಸಿನವರೋ ಅಥವಾ ಐವತ್ತರ ಗಡಿ ದಾಟಿದವರೋ ಆಗಿದ್ದರೆ ಖಂಡಿತ ನಿಮ್ಮ ಪೋಲಿ ಆಟಗಳು, ಕಾಲೇಜು ದಿನಗಳು, ಹಿಂದೆ ಹೋಳಿ ಹಬ್ಬಗಳಲ್ಲಿ ಮಾಡುತ್ತಿದ್ದ ತರ್ಲೆ ಘಟನೆಗಳು. ಅವಕ್ಕೆಲ್ಲಕ್ಕಿಂತ ಹೆಚ್ಚಾಗಿ ಪಪ್ಪಿ ಲವ್ವಿನ ನಿಮ್ಮ ಶಾಲ್ಮಲಾ ಖಂಡಿತ ಜ್ಞಾಪಕಕ್ಕೆ ಬರಬಹುದು.

ಇದರ ಜೊತೆಗೆ ಖ್ಯಾತ ಲೇಖಕರಾದ ಮಲ್ಲಿಕಾರ್ಜುನ ಹಿರೇಮಠರು “ಮೂರು ಸಂಜೆ ಮುಂದ ಧಾರವಾಡ” ಎಂಬ ಲಲಿತ ಪ್ರಬಂಧಗಳ ಸಂಕಲನವನ್ನು ಬರೆದಿದ್ದಾರೆ. ಅಲ್ಲಿಯೂ ಕೂಡ ಇದೆ ರೀತಿ ಕಥನ ಶೈಲಿ, ಕಾವ್ಯದ ಲಯಗಾರಿಕೆ ಮತ್ತು ನವಿರಾದ ಹಾಸ್ಯ, ಎಲ್ಲವೂ ಇದೆ.  ಮೊಬೈಲಾಯಣ, ಆದರ್ಶ ಶಿಕ್ಷಕನಿಗೆ ಸನ್ಮಾನ, ಸರ್ಪಹುಣ್ಣು, ಹಿಂದಿನ ಸಾಲಿನವರು ಮೊದಲಾದ ಪ್ರಬಂಧಗಳಲ್ಲಿ ಹಿರೇಮಠರ ಆತ್ಮಕಥನದ ತುಣುಕುಗಳನ್ನು ಕಾಣಬಹುದು. ಅದು ಕೂಡ ಧಾರವಾಡದ, ಶಾಲ್ಮಲಾ ನದಿಯ ಸೋಮೇಶ್ವರ ದೇವಸ್ಥಾನದ ಪ್ರಸ್ತಾಪವನ್ನು ತರುತ್ತದೆ.

ರಾಜೇಂದ್ರ ಚೆನ್ನಿಯವರ “ಧಾರವಾಡದ ಪಡ್ಡೆದಿನಗಳು” ಎಂಬ ಈ ಕಿರು ಪುಸ್ತಕವನ್ನು ಹೊಸದಾಗಿ ಬರಹವನ್ನು ಆರಂಭಿಸಬೇಕೆಂದಿರುವವರೆಲ್ಲರೂ ಓದಿದರೆ ತುಂಬಾ ಸಹಾಯವಾಗುತ್ತದೆ. ಕೆಲವೊಮ್ಮೆ ಏನನ್ನು ಬರೆಯಬೇಕೆಂದು ತೋಚುವುದಿಲ್ಲ ಎಂದು ಹೇಳುವವರಿಗೂ ಇದು ಸಹಾಯಕವಾಗುತ್ತದೆ.

ನಾನು ಶಿವಮೊಗ್ಗದವನೇ ಆಗಿದ್ದರೂ ಶಿವಮೊಗ್ಗದಲ್ಲಿಯೇ ನೆಲೆಸಿರುವ ರಾಜೇಂದ್ರ ಚೆನ್ನಿಯವರ ಹೆಸರನ್ನು ಬಾಲ್ಯದಿಂದಲೂ ಕೇಳುತ್ತಾ ಬಂದವನಾದರೂ ಎಂದು ಅವರ ಪುಸ್ತಕಗಳನ್ನು ಓದಲು ನನಗೆ ಆಗಿರಲಿಲ್ಲ. ಈ ಪುಸ್ತಕದ ಮೂಲಕ ಅವರ ಸಾಹಿತ್ಯವನ್ನು ಓದಲು ಆರಂಭಿಸಿದಂತಾಯಿತು. ಇದು ತನ್ನ ಲಘು ಹಾಸ್ಯ ಮತ್ತು ಲಲಿತತೆಯಿಂದ ಓದಿಸಿಕೊಳ್ಳುವ ಚಿಕ್ಕ ಮತ್ತು ಒಳ್ಳೆಯ ಪುಸ್ತಕವೆಂದು ಹೇಳಬಹುದು.

‍ಲೇಖಕರು Avadhi

October 16, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನರೇಂದ್ರ ಪೈ ಅವರ “ಕನಸುಗಳು ಖಾಸಗಿ”

ನರೇಂದ್ರ ಪೈ ಅವರ “ಕನಸುಗಳು ಖಾಸಗಿ”

ಕಮಲಾಕರ ಕಡವೆ ಕತೆಯಿರುವುದು ಕಣ್ಣಲ್ಲಿ. ಕತೆಗಾರರ ಕಣ್ಣು ಕಾಣಲು ನಿರ್ಧರಿಸುವ ಜಗತ್ತು ಅವರ ಸುತ್ತಲಿನದೋ, ಒಳಗಿನದೋ, ಹಿಂದೆಂದಿನದೋ,...

ಜಯಮೋಹನ್ ಅವರ ‘ನೂರು ಸಿಂಹಾಸನಗಳು’

ಜಯಮೋಹನ್ ಅವರ ‘ನೂರು ಸಿಂಹಾಸನಗಳು’

ಪ್ರಸನ್ನ ಸಂತೆಕಡೂರು 'ನೂರು ಸಿಂಹಾಸನಗಳು' ಮಲಯಾಳಂ ಭಾಷೆಯಿಂದ ಕನ್ನಡ ಭಾಷೆಗೆ ಅನುವಾದವಾಗಿರುವ ಒಂದು ಕಿರು ಕಾದಂಬರಿ. ಇದರ ಮೂಲ ಲೇಖಕರು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This