ರಿಯಾಲಿಟಿ ಷೋನ ರೀಲು!

ಎಸ್.ಜಿ.ಶಿವಶಂಕರ್

ಆಚೆ ಕತ್ತಲಾಗುತ್ತಿತ್ತು. ಕ್ಯಾಂಪಸ್ಸ್ ಖಾಲಿಯಾಗಿತ್ತು. ಇನ್ನು ಹೊರಡೋಣ ಎಂದು ಚೇಂಬರಿನ ಲೈಟು, ಫ್ಯಾನು ಸ್ವಿಚ್ ಆರಿಸಿ ಬ್ರೀಫ್ ಕೇಸು ಎತ್ತಿಕ್ಕೊಳ್ಳುವಾಗ ಅತಿವಿನಯದ “ನಮಸ್ಕಾರ ಸಾರ್” ಎಂಬ ಚಮತ್ಕಾರದ ಮಾತು ಕೇಳಿಸಿತು. ಅರೆ ಕತ್ತಲಿನಲ್ಲಿ ಬಾಗಿಲಲ್ಲಿ ನಿಂತಿದ್ದ ವ್ಯಕ್ತಿಯ ಆಕಾರವಷ್ಟೆ ಕಂಡಿತು! ಕಳೆದ ಎರಡು ತಿಂಗಳಿಂದ ಜನ್ಮಾಂತರ ಟಿವಿ ಕಾರ್ಯಕ್ರಮ ನೋಡುತ್ತಿದ್ದುದರಿಂದ ಕಂಡಿದ್ದು ಯಾವುದಾದರೂ ಪ್ರೇತಾತ್ಮವೋ ಎಂಬ ಗುಮಾನಿಯಾಗಿ ಬೆದರಿದೆ. ಕಳೆದ ತಿಂಗಳಷ್ಟೆ ನಮ್ಮ ಕಾಲೇಜಿನ ಇಬ್ಬರು ವಿಧ್ಯಾರ್ಥಿಗಳು ಮೋಟಾರ್ಬೈಕ್ ಆಕ್ಸಿಡೆಂಟಿನಲ್ಲಿ ಸತ್ತಿದ್ದರು; ಅಂಕುರ್ ಮತ್ತು ಸಂತೋಷ್! ಅಂಕುರ ಒಣಕಲ, ಸಂತೋಷ ಅಡ್ಡಾದಿಡ್ಡಿ ಶರೀರದವನು. ಎದುರು ಕಂಡಿದ್ದು ಅವರಿಬ್ಬರ ಆಕಾರವೂ ಆಗಿರಲಿಲ್ಲ! ಇದು ಇನ್ಯಾರ ಪ್ರೇತಾತ್ಮ ಇರಬಹುದೆಂದು ಹೆದರಿ ಅಟೆಂಡರ್ ಪಳನಿಯನ್ನು ಕೂಗಿದೆ. “ಇದ್ಯಾಕ್ಸಾ ಇಂಗೆ ಗಾಬರಿ..? ಪಳನೀನ ಟೀ ತರಾಕೆ ಕಳಿಸಿದ್ದೀನಿ! ನಾನು ಸಾರ್ ಕಲ್ಲೇಶಿ! ನಿಮ್ಮ ಶಿಷ್ಯ..೨೦೦೮ ಎಮ್ಬಿಎ ಬ್ಯಾಚು, ಚೈತ್ರದ ಚಿಂಗಾರಿ ಸೀರಿಯಲ್ ಮೇಕರ್ರು ಸಾ..! ನೆನಪಾಯ್ತಾ ಸಾ…? ಲೈಟಾಕಿ ಸಾ..ಇದ್ಯಾಕಿಂಗ್ ಕತ್ಲಾಗಿದ್ದೀರಿ”

ಕೃಪೆ: ಔಟ್ ಲುಕ್

ಕಲ್ಲೇಶಿಯ ನೆನಪು ಬಂತು. ಎಂ.ಬಿ.ಎ ಓದಲು ಬಂದು ಅದೊಂದು ಬಿಟ್ಟು ಉಳಿದಿದ್ದೆಲ್ಲಾ ಮಾಡುತ್ತಿದ್ದ ಕಲ್ಲೇಶಿಯನ್ನು ಮರೆಯಲು ಸಾಧ್ಯವೇ ಇರಲಿಲ್ಲ! ಕಲ್ಲೇಶಿಯ ಅಪ್ಪ ಐವತ್ತು ಎಕರೆ ಜಮೀನಿನ ದೇವ್ನಳ್ಳಿ ಕುಳ! ಎರಡು ಎಕರೆ ಮಾರಿ ಬಂದಿದ್ದ ದುಡ್ಡಲ್ಲಿ ಮಜಾ ಮಾಡು ಅಂತ ಮಗನ ಕೈಗೆ ಕೋಟಿ ಹಾಕಿದ್ದನಂತೆ! ಕಲ್ಲೇಶಿ ಆ ಹಣದಲ್ಲಿ ಕನ್ನಡ ತಾಯಿಯ ಋಣ ತೀರ್ಸೋಕೇಂತ ಮೂರು ರೌಡಿಸಂ ಸಿನಿಮಾ, ಒಂದು ಅರ್ಥವಿಲ್ಲದ ಮೆಗಾ ಸೀರಿಯಲ್ ಮಾಡಿದ್ದ! ಪ್ರೇತಾತ್ಮಗಳ ರೀತಿಯಲ್ಲಿ ಒಮ್ಮೊಮ್ಮೆ ನನ್ನನ್ನು ಕಾಣಲು ಬರುತ್ತಿದ್ದ; ಗುರುಗಳು ಎಂಬ ಅಭಿಮಾನ ಉಳಿಸಿಕೊಂಡಿದ್ದ!. ನನ್ನ ಶಿಷ್ಯ ಎಂದು ಹೇಳಿಕೊಂಡು ಅಭಿಮಾನಪಡಲು ವಿನಯವೂಂದನ್ನು ಬಿಟ್ಟು ಅವನಲ್ಲಿ ಯಾವ ಗುಣವೂ ಇಲ್ಲದಿದ್ದುರಿಂದ ಪ್ರತಿ ಭಾರಿಯೂ ಅವನನ್ನು ನೆನಪಿಸಿಕ್ಕೊಳ್ಳಬೇಕಾಗಿತ್ತು! ಲೈಟು ಸ್ವಿಚ್ಚು ಹಾಕಿದೆ. ಮಾಸಿದ ನೀಲಿಯಾಗಿದ್ದಿರಬಹುದಾದ ಅರೆ ಮಾಸಿದ ಬಣ್ಣದ ಜೀನ್ಸ್ ಪ್ಯಾಂಟು, ಹರೋಹರ ಬಣ್ಣದ ಟಿ ಷರ್ಟು, ಹಣೆಯಲ್ಲಿ ತಮಿಳರಂತೆ ಸಣ್ಣ ವಿಭೂತಿ, ಭ್ರೂಮಧ್ಯದಲ್ಲಿ ತ್ರಿಪುಂಡ್ರ, ಷೇವ್ ಮಾಡದ ಮುಖ, ಕೆದರಿದ ತಲೆಯೊಂದಿಗೆ ತನ್ನ ದಂತಪಂಕ್ತಿಯನ್ನು ಪೂರಾ ಪ್ರದರ್ಶಿಸುತ್ತಾ ನಿಂತಿದ್ದ ಕಲ್ಲೇಶಿ. “ಇದೇನಯ್ಯಾ ಮನೇಗೆ ಹೋಗೋ ಹೊತ್ನಲ್ಲಿ..?” ಆಕ್ಷೇಪಿಸಿದೆ. “ಸಾರಿ ಸಾ.. ಆದ್ರೆ ಇದೇ ಬೆಸ್ಟ್ ಟೈಮು ಸಾರ್.. ಬೆಳಿಗ್ಗೆ ನೀವು ಕ್ಲಾಸು, ಮೀಟಿಂಗು, ಸೆಮಿನಾರು, ಹುಡುಗ ಹುಡುಗೀರ್ನ ಬೈಯಾದು ಅಂಗೆ ಇಂಗೇಂತ ಬಿಜಿಯಾಗಿರ್ತೀರಾ! ಅದ್ಕೆ ಏನಾರ ಸೀರಿಯಸ್ ವಿಷ್ಯ ಮಾತಾಡೋಕೆ ಇದೇ ಬೆಸ್ಟ್ ಟೈಮು ಅಂತ ಬಂದೆ. ಬೇಜಾರು ಮಾಡ್ಕೋಬೇಡಿ ಸಾರ್” “ಕೂತ್ಕೋ, ಹೇಗ್ನಡೀತಾ ಇದೆ ನಿನ್ನ ಕಲಾಸೇವೆ..?” “ಎಲ್ಲಾ ನಿಮ್ಮಾರ್ಶೀರ್ವಾದ ಸಾ..ಚೆನ್ನಾಗಿ ನಡೀತಾ ಇದೆ” “ಮದ್ವೆ ಮುಂಜಿ..?” “ಅದ್ಕಿನ್ನೂ ಟೈಮೈತೆ ಸಾ..” “ಲೌವ್ವು ಗಿವ್ವು?” “ಅದೆಲ್ಲಾ ಕಾಲೇಜ್ನಾಗೇ ಮುಗ್ದೋಯ್ತಲ್ಲ ಸಾರ್” “ಸರಿ ಬಂದಿದ್ದು..?” “ಒಂದು ರಿಯಾಲಿಟಿ ಷೋ ಮಾಡೋವಾಂತ ಪ್ಲಾನ್ ಮಾಡಿವ್ನಿ ಸಾ..” “ಮಾಡು..” “ಒಂದೈಡಿಯಾ ಕೊಡಿ ಸಾ..” “ಅಲ್ಲಯ್ಯಾ..ಸೀರಿಯಲ್ ಮಾಡೋನು ನೀನು. ನಿನ್ನ ಯೂನಿಟ್ನವರನ್ನ ಸೇರಿಸ್ಕೊಂಡು ಬ್ರೈನ್ಸ್ಟಾ ರಮ್ ಮಾಡೋದು ಬಿಟ್ಟು ನನ್ನ ಹತ್ರ ಬಂದಿದ್ದೀಯಲ್ಲ..?” “ಅದ್ಕೆ ಬ್ರೈನ್ ಇರ್ಬೇಕಲ್ಲ ಸಾ..” ಬ್ರೈನ್ ಇಲ್ಲದವರು ನಾವೆಲ್ಲಾ ಎಂದು ಕಲ್ಲೇಶಿ ಕ್ಲೀನಾಗಿ ಒಪ್ಪಿಕೊಂಡುಬಿಟ್ಟ! “ಕಾಲೇಜ್ನಲ್ಲಿ ಪಾಠ ಹೇಳೋ ಮೇಷ್ಟ್ರನ್ನ ರಿಯಾಲಿಟಿ ಷೋಗೆ ಐಡಿಯಾ ಕೇಳಿದರೆ ಹೆಂಗೆ ಕಲ್ಲೇಶಿ. ಮೊದ್ಲಿಗೆ ಈ ರಿಯಾಲಿಟಿ ಷೋ ಅಂದ್ರೇನು ಅದ್ನೇಳು” “ನೀವು ಸಖತ್ತಾಗಿ ತಮಾಷೆ ಮಾಡ್ತೀರಿ ಸಾ…ನಾಟ್ಕ ಬರ್ದಿದ್ದೀರಿ, ಆಡ್ಸಿದ್ದೀರಿ, ಕತೆ, ಕವನ ಎಲ್ಲಾ ಬರ್ದಿರೋ ನಿಮಗೆ ನಾವು ಹೇಳಾದೇನಿದೆ ಸಾರ್! ರಿಯಾಲಿಟಿ ಷೋ ಅಂದ್ರೆ ಕಾಡು ಜನ್ರನ್ನ ಪೇಟೆಗೆ ತಂದು ಅವ್ರ್ಕೈಲಿ ಪ್ಯಾಟೆ ಮಂದಿ ತರಾ ಏನೇನೋ ಮಾಡ್ಸಾದು! ಪ್ಯಾಟೆ ಜನರನ್ನ ಕಾಡಿಗೆ ಕರ್ಕೊಂಡು ಹೋಗಿ ಅಲ್ಲಿ ಕಾಡು ಮನ್ಸರ ತರಾ ಇರೋದನ್ನ ಸೀರಿಯಲ್ ಮಾಡೋದು ಇವೇ..ಸಾರ್..ರಿಯಾಲಿಟಿ ಶೋಗಳು” “ಅಂದ್ರೆ..ರಿಯಲ್ ಆಗಿಲ್ಲದೆ ಇರೋ ರೀಲು ಸುತ್ತೋದೇ ರಿಯಾಲಿಟಿ ಷೋ ಅಂದಂಗಾಯ್ತು” “ಅಂಗಂತಾನೇ ಇಟ್ಕೊಳ್ಳಿ ಸಾರ್..ಗಂಟೇನು ಹೋಗೋದು..? ಒಟ್ನಲ್ಲಿ ಜನಕ್ಕೆ ಮಜಾ ಕೊಡ್ಬೇಕು’ “ಸರಿಯಪ್ಪ, ನಿನ್ನ ತಲೇ ಒಳಗೇನಿದೆ ಹೇಳು..” “ಕಾಡಿನ ಮಂದಿ ಪ್ಯಾಟೇಗ್ ಬಂದಿದ್ಡಾಯ್ತು, ಪ್ಯಾಟೆ ಮಂದಿ ಕಾಡಿಗೆ ಕರ್ಕೊಂಡು ಹೋಗಿದ್ದೂ ಆಯ್ತು” ಆಷ್ಟೊತ್ತಿಗೆ ಪಳನಿ ಟೀ ಮತ್ತು ಬಿಸ್ಕತ್ತಿನೊಂದಿಗೆ ಪ್ರತ್ಯಕ್ಷನಾದ. “ಕಲ್ಲೇಶಿ ಪೆರಿಯ ಹಾಳಾಗಿಬಿಟ್ಟೆತೆ ಸಾರ್” ತನ್ನ ಕೆಟ್ಟ ಕನ್ನಡದಲ್ಲಿ ಪಳನಿ ಟೀ ಕಪ್ಪು ಮುಂದಿಡುತ್ತಾ ಹೇಳಿದ. “ಲೇ,,ಗೂಬೆ ಹಾಳಾಗಿ ಅಲ್ಲವೋ ಆಳಾಗಿ ಅಂತೇಳೋ..” ಕಲ್ಲೇಶಿ ಆತ್ಮೀಯವಾಗಿ ಗದರಿದ. ಪಳನಿ ಕಲ್ಲೇಶಿ ವಿಧ್ಯಾರ್ಥಿಯಾಗಿದ್ದಾಗ ತುಂಬಾ ಸಹಾಯ ಮಾಡಿದ್ದ. ಪರೀಕ್ಷೆಯಲ್ಲಿ ನೀರು ಕೊಡುವಂತೆ ಹೋಗಿ ಕಾಪಿ ಮಾಡಲು ಚೀಟಿ ಕೊಡುವುದು, ಚೆನ್ನಾಗಿ ಓದೋ ಹುಡುಗಿಯರ ನೋಟ್ಸ್ ಕದ್ದು ಕಲ್ಲೇಶಿಗೆ ಕೊಡೋದು ಮುಂತಾದ ಸಹಾಯವನ್ನು ಮಾಡಿ ಕಾಸು ಗಿಟ್ಟಿಸಿಕೊಳ್ಳುತ್ತಿದ್ದ. ಅವನ ದೃಷ್ಟಿಯಲ್ಲಿ ಕಲ್ಲೇಶಿ ದೊಡ್ಡ ಮನುಷ್ಯ! ದುಡ್ಡು ಕೊಡದ ನಾವೆಲ್ಲಾ ಸಣ್ಣ ಮನುಷ್ಯರು! “ನನ್ನ ಚೈತ್ರದ ಚಿಂಗಾರಿ ಕೊನೆ ಎಪಿಸೋಡಿಗೆ ಇವನೇ ಐಡಿಯಾ ಕೊಟ್ಟಿದ್ದು ಸಾರ್..” ಕಲ್ಲೇಶಿ ಹೊಗಳಿದ. “ಈಗ್ಲೂ ನಿನ್ನ ರಿಯಾಲಿಟಿ ಶೋಗೆ ಇವನನ್ನೇ ಐಡಿಯಾ ಕೊಡೋಕೆ ಕೇಳು” ಕಲ್ಲೇಶಿಗೆ ಯಾಕೋ ನನ್ನ ಮಾತು ಹಿಡಿಸಲಿಲ್ಲ. “ಅದೇನೋ ಅಡ್ಡೇಟಿಗೊಂದು ಗುಡ್ಡೇಟು ಸಾ..! ಟೀ..ಕುಡೀರಿ ಸಾ..ಅಂಗೇ ಆ ಬಿಸ್ಕೆಟ್ಟೂ ತಿನ್ನಿ..ಗುಡ್ ಡೇ ಬಿಸ್ಕೆಟ್ಟು” ಉಪಚರಿಸಿದ. ಕಲ್ಲೇಶಿ ನನ್ನನ್ನು ನಂಬಿ ಬಂದಿದ್ದ! ನನಗೂ ದೃಷ್ಯ ಮಾಧ್ಯಮಕ್ಕೂ ಎಣ್ಣೆ ಸೀಗೇಕಾಯಿ ಸಂಬಂಧ! ಮನೆಯಲ್ಲಿ ಟೀವಿ ಸೀರಿಯಲ್ ನೋಡೋರು ಹೆಂಗಸರು ಮತ್ತು ಹುಡುಗರು. ನಾನೇದಾರೂ ಅಪ್ಪಿತಪ್ಪಿ ನ್ಯೂಸ್ ಚಾನಲ್ ತಿರುಗಿಸಿದರೆ ರದ್ಧಾಂತವೇ ನಡೆಯುತ್ತದೆ. ಅದಕ್ಕೆ ಟಿವಿಯ ಉಸಾಬರಿಗೆ ನಾನು ಹೋಗೋದೇ ಇಲ್ಲ! ನನ್ನನ್ನು ನಂಬಿ ಬಂದ ಕಲ್ಲೇಶಿಗೆ ನಾನು ಯಾವ ರೀತಿಯಲ್ಲೂ ಸಹಾಯ ಮಾಡಲಾರೆ ಎನ್ನಿಸಿತು. ಹಾಗೆ ಒಮ್ಮೆಲೇ ಒಪ್ಪಿಕೊಂಡುಬಿಟ್ಟರೆ ನನ್ನ ಲೇಖಕನೆಂಬ ಹಣೆಪಟ್ಟಿಗೆ ಸೋಲು! ಪ್ರಯತ್ನ ಮಾಡಿ ನೋಡೋಣ ಎನ್ನಿಸಿತು. “ಇಪ್ಪೊ ಕಲ್ಲೇಶಿ ಸಾರು ಸಿನಿಮಾ ಪಂಡ್ರೋದಾ? ಇಲ್ಲೇ. ಸೀರಿಯಲ್ ಪಂಡ್ರೋದೊ..?” ಪಳನಿ ತನ್ನ ವಿಚಿತ್ರ ಭಾಷೆಯೊಂದಿಗೆ ನಮ್ಮ ಮಾತುಕತೆಯಲ್ಲಿ ತಾನೂ ಭಾಗವಹಿಸುವ ಉತ್ಸಾಹ ತೋರಿದ. “ಪಳನಿ ಎನಕ್ಕು ಕೊಂಚ ಹೆಲ್ಪ್ ಪಂಡ್ರಿಯಾ..?” ಕನ್ನಡದ ಕಲ್ಲೇಶಿ ಪಳನಿಯನ್ನು ಗದರಿಸುವಂತೆ ಕೇಳಿದ. “ಚೊಲ್ಲು ಸಾರ್..ನೀ ಚೊಲ್ರೋದು ಪೆರಿಯದಾ ನಾ ಪಂಡ್ರದು ಪೆರಿಯದಾ..? ಚೊಲ್ಲು” ಪಳನಿ ಕೊಡಬಹುದಾದ ದುಡ್ಡು ನೆನಸಿ ಜೊಲ್ಲು ಸುರಿಸುತ್ತಾ ಹೇಳಿದ ಪಳನಿ. “ಒರು ಪ್ಯಾಕೆಟ್ ಸಿಗರೇಟು ವಾಂಗರಿಯಾ..?” “ಸರಿ ಸಾರ್..” ಕಲ್ಲೇಶಿ ಕೊಟ್ಟ ಹಣ ತಗೊಂಡು ಪಳನಿ ಹೋದ. “ನಾನಿಲ್ಲಿ ಸಿಗರೇಟು ಸೇದೋಕೆ ಅವಕಾಶ ಕೊಡೊಲ್ಲ ಕಲ್ಲೇಶಿ” ಎಚ್ಚರಿಸಿದೆ. “ನಿಮ್ಮುಂದೆ ಸಿಗರೇಟು ಸೇದಿದರೆ ಆ ಶಿವ ಮೆಚ್ತಾನಾ..ಸಾರ್..? ನೀವು ಗುರುಗಳು..ಅದ್ಕೇ ಅಲ್ವೇ ಸಾರ್..ಗುರು ಬ್ರಹ್ಮ..” “ಸಾಕು ಕಲ್ಲೇಶಿ ಅತಿ ವಿನಯಂ ಧೂರ್ತ ಲಕ್ಷಣಂ ಅಂತಾರೆ..ಅದೆಲ್ಲಾ..ಬೇಡ ಈಗ ನಿನ್ನ ರಿಯಾಲಿಟಿ ಷೋ ವಿಷಯಕ್ಕೆ ಬಾ..” “ಅದ್ಕೇ ಅಲ್ವಾ ಸಾರೆ ಬಂದಿರೋದು. ಈ ಪಳನಿ ಕನ್ನಡ ಕೊಲೆ ಮಾಡ್ತಿದ್ದ ಅದ್ಕೆ ಆಚೆಗೆ ಕಳಿಸಿದೆ” ಕಲ್ಲೇಶಿ ಮತ್ತು ಪಳನಿಯರ ನಡುವೆ ನಡೆದ ಮಾತು ನನಗೆ ಒಂದು ಐಡಿಯಾ ಕೊಟ್ಟಿತ್ತು. “ಕಲ್ಲೇಶಿ ಕರ್ನಾಟಕಕ್ಕೆ ಯಾರು ಬಂದ್ರೂ ಸುಲಭವಾಗಿ ಹೊಂದಿಕೋತಾರೆ! ಯಾಕೆ ಹೇಳು” “ಕನ್ನಡಿಗರು ಒಳ್ಳೇಯವರು, ಹೃದಯವಂತರು, ಮೃದು ಭಾಷಿಗರು, ಯಾರಿಗಾದರೂ ಸಹಾಯ ಮಾಡ್ತಾರೆ ಅದ್ಕೇ” ಕಲ್ಲೇಶಿ ತನ್ನ ಅಭಿಪ್ರಾಯ ಹೇಳಿದ. “ಅದರ ಜೊತೆಗೆ ಯಾರೇ ಬಂದ್ರೂ ನಾವು ಅವ್ರ ಭಾಷೇಲೇ ಮಾತಾಡ್ತೀವಿ! ಅವ್ರಿಗೆ ನಮ್ಮ ಭಾಷೆ ಕಲಿಯೋ ತೊಂದ್ರೇನೇ ಕೊಡೊಲ್ಲ! ಆದ್ರೆ…ನಾವು ಅವರ ರಾಜ್ಯಕ್ಕೆ ಹೋದ್ರೆ..ಅವರು ನಮ್ಮ ಭಾಷೇಲಿ ಮಾತಾಡ್ತಾರೇನು..? ಇಲ್ಲ! ತಮಿಳು ನಾಡಲ್ಲಿ ತಮಿಳು ಬರದಿದ್ರೆ ನಮ್ಮ ಪಾಡು ದೇವರೇ ಕೇಳಬೇಕು! ಇನ್ನು ಕಲಕತ್ತಾಗೆ ಹೋದ್ರೆ..? ಬಂಗಾಳಿ ಕಲಿತಿರಲೇಬೇಕು ಕನಿಷ್ಟ ಹಿಂದಿನೂ ಬರದಿದ್ರೆ ನೀನು ಅರ್ಧ ಸತ್ತ ಹಾಗೇ..!” “ಒಪ್ಕೋತೀನಿ ಸಾರ್..ಆದ್ರೆ ನಾನು ಬಂದಿದ್ದು ರಿಯಾಲಿಟಿ ಷೋಗೆ ಒಂದೈಡಿಯಾ ಕೊಡೀಂತ..ನೀವು ಭಾಷೆ-ಜನಾಂತ ಏನೋ ಮಾತಾಡ್ತಾ “ “ಟೈಂ ವೇಸ್ಟ್ ಮಾಡ್ತಿದ್ದೀನೀಂತಿದ್ದೀಯಾ..? ನಾನು ನಿನ್ನ ರಿಯಾಲಿಟಿ ಷೋ ವಿಷಯಾನೇ ಮಾತಾಡ್ತಿದ್ದೀನಿ..ಒಂದ್ವೇಳೆ ತಮಿಳಿನ ಗಂಧ ಗಾಳಿಯೂ ಇಲ್ಲದ ಕನ್ನಡದ ಜನ ತಮಿಳು ನಾಡಿನ ಬೇರೆಬೇರೆ ಊರುಗಳಿಗೆ ಹೋದ್ರೆ ಹೇಗಿರುತ್ತೆ..?” “ಸತ್ತೋಗ್ತಾರೆ ಸಾರ್..ಅವರ ಹೆಣಾನೂ ಕರ್ನಾಟಕಕ್ಕೆ ಬರೊಲ್ಲ!” “ಪಡಿಪಾಟಲು ಪಡ್ತಾರಲ್ಲವಾ..? ಅದನ್ನೇ ರಿಯಾಲಿಟಿ ಷೋ ಮಾಡು” “ಏನೈಡಿಯಾ..ಸಾರ್! ಬೊಂಬಾಟಾಗಿದೆ! ಇಲ್ಲಿಂದೋದೋರ ಕನ್ನಡ ಪದಗಳು ಅವರಿಗೆ ಎಂಗೆಂಗೋ ಅರ್ಥ ಕೊಡುತ್ತೆ! ಮಜವಾಗಿರುತ್ತೆ! ಸೂಪರಾಗಿರುತ್ತೆ ಸಾ!” ಕಲ್ಲೇಶಿಯ ಮುಖ ಸೂರ್ಯನಿಗೆ ಮುಖ ಮಾಡಿದ ಸೂರ್ಯಕಾಂತಿ ಹೂವಿನಂತಾಗಿತ್ತು! “ಇಷ್ಟು ಸಾಕು ಸಾ..ಇನ್ನು ನೂರು ಎಪಿಸೋಡು ಹೊಸೀತೀನಿ..ಅಂದಂಗೆ ನೀವೇ ಇವ್ನ ಡವಲಪ್ ಮಾಡ್ಕೊಟ್ರೆ ಚೆನ್ನಾಗಿರುತ್ತೆ ಸಾ..ನೀವು ಯಾಕೆ ನಮಗೆ ಈ ಸಹಾಯ ಮಾಡಬಾರದು..? ಚೆನ್ನಾಗಿ ದುಡ್ಡಿದೆ ಸಾರ್” “ಕಲ್ಲೇಶಿ, ನೀನು ನನ್ನ ಶಿಷ್ಯ ಅನ್ನೋದಕ್ಕೆ ಇದೆಲ್ಲಾ ಮಾತಾಡಿದ್ದು. ದೇವ್ರು ನನಗೆ ಬೇಕಾದಕ್ಕಿಂತ ಹೆಚ್ಚಿಗೇನೇ ಕೊಟ್ಟಿದಾನೆ ಅದಕ್ಕಿಂತ ಹೆಚ್ಚಿನ ಆಸೆ ನನಗಿಲ್ಲ! ನಿನ್ನ ಸೀರಿಯಲ್ ಚೆನ್ನಾಗಿ ಆಗಿ ಬರಲೀಂತ ಹಾರೈಸ್ತೀನಿ” ಇನ್ನು ಮಾತು ಸಾಕು ಎನ್ನುವಂತೆ ನುಡಿದೆ. ಕಲ್ಲೇಶಿ ಅರ್ಥವಾದವನಂತೆ ಧನ್ಯವಾದ ಹೇಳಿ ಹೊರಟ. “ಅರೆ ಕಲ್ಲೇಶಿ ಪಳನೀನ ಸಿಗರೇಟಿಗೆ ಕಳಿಸಿದೀಯಲ್ಲ..?” “ಅವ್ನೇ ಸೇದಕಳ್ಲಿ ಬಿಡಿ ಸಾರ್..ತುಂಬಾ ತುಂಬಾ ತ್ಯಾಂಕ್ಸ್ ಸಾರ್” ಕಲ್ಲೇಶಿ ನಮಸ್ಕರಿಸಿ ಹೊರಟಾಗ ನನ್ನ ಮೊಬೈಲು ಶಬ್ದ ಮಾಡಿತು. “ಟೈಮು ಎಷ್ಟಾಗಿದೆ ಗೊತ್ತಾ..?” ಮಡದಿಯ ಅಲಾರಂ! “ಕಲ್ಲೇಶಿ ಬಂದಿದ್ದ” “ಹೌದಾ..ನೆಕ್ಸ್ಟ್ ಯಾವ ಸೀರಿಯಲ್ಲಂತೆ..? ಪರವಾಗಿಲ್ಲ ಇನ್ನೂ ಲೇಟಾಗೇ ಬನ್ನಿ, ಆದ್ರೆ ಎಲ್ಲಾ ತಿಳ್ಕೊಂಡು ಬನ್ನಿ..ಲಾಸ್ಟ್ ಸೀರಿಯಲ್ ’ಚೈತ್ರದ ಚಿಂಗಾರಿ’ ಎಂಡಿಂಗ್ ಬೊಂಬಾಟಾಗಿತ್ತು’ ಕಲ್ಲೇಶಿಯ ಹೆಸರಿಂದ ಮನೆಗೆ ಲೇಟಾಗಿ ಹೋಗಲು ಅನುಮತಿ ಸಿಕ್ಕಿತ್ತು. “ಕಲ್ಲೇಶಿ ಸಾರ್ ಎಂಗೆ ..?” “ಕಲ್ಲೇಶಿ ಅಂಗೆ! ತಮಿಳು ನಾಡಿಗೆ ಹೋದ..ಡಿಪಾರ್ಟ್ಮೆಂಟ್ ಕ್ಲೋಸ್ ಮಾಡಿ ಸೆಕ್ಯೂರಿಟಿಗೆ ಬೀಗದ ಕೈ ಕೊಡು” ಎಂದೆ ಪಳನಿಗೆ. “ಈ ಸಿಗರೇಟು ಪ್ಯಾಕು..?” “ಅದು ನಿನಗೇನೆ..ನೀನೇ ಸೇದ್ಕೋಬೇಕಂತೆ” “ಕಲ್ಲೇಶಿ ಸಾರು ಪೆರಿಯ ಮನಿದನ್” ಕಲ್ಲೇಶಿಯನ್ನು ಹೊಗಳಿ ಡಿಪಾರ್ಟ್ಮೆಂಟ್ ಬಾಗಿಲು ಹಾಕಲನುವಾದ ಪಳನಿ. ಕಲ್ಲೇಶಿಯ ರಿಯಾಲಿಟಿ ಷೋ ಯಾವಾಗ ಶುರುವಾಗುತ್ತೆ ಎಂಬ ಮನೆಯವರ ಪ್ರಶ್ನೆಗೆ ಏನು ಉತ್ತರ ಕೊಡುವುದು ಎಂದು ಯೋಚಿಸುತ್ತಾ ನಾನು ಸ್ಕೂಟರ್ ಸ್ಟ್ಯಾಂಡಿನತ್ತ ಹೆಜ್ಜೆ ಹಾಕಿದೆ.]]>

‍ಲೇಖಕರು G

August 17, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಈ ದೇಶದಲ್ಲಿ ಹುಟ್ಟೋದೆ ಒಂದು ಪುಣ್ಯ

ಈ ದೇಶದಲ್ಲಿ ಹುಟ್ಟೋದೆ ಒಂದು ಪುಣ್ಯ

ಈಕೆ ‘ಜಯನಗರದ ಹುಡುಗಿ’. ಹಾಗಂತ್ಲೆ ಫುಲ್ ಫೇಮಸ್ಸು. ಈಕೆ ಬರೆಯುತ್ತಿದ್ದ ‘ಜಯನಗರದ ಹುಡುಗಿ’ ಅಂಕಣ ಹಾಗೂ ಆನಂತರ ಅದೇ ಹೆಸರಲ್ಲಿ ಬಂದ...

೧ ಪ್ರತಿಕ್ರಿಯೆ

 1. shivalatha

  ಇದು ರೀಲಲ್ಲ ರಿಯಲ್ಲೇ!
  ನೂರಾರು ಕಲ್ಲೇಶಿಗಳಿದ್ದಾರೆ ಸೀರಿಯಲ್ ಸುತ್ತುವವರು!
  ಮುಗ್ಧರನ್ನು ಮಂಗನನ್ನಾಗಿಸುವವರು!
  ತುಂಬಾ ಚೆನ್ನಾಗಿದೆ ಲೇಖನ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: