ಅದೇ ಆಗುವುದೆಂದರೆ…
– ರೂಪ ಹಾಸನ
ಶಾಂತಿಯ ಸಂಕೇತವಾಗಿ ಪಾರಿವಾಳಗಳನ್ನು ಹಾರಿಬಿಡಲಾಗುತ್ತದಂತೆ……. ಇದನ್ನು ಯಾರು ಪ್ರಾರಂಭಿಸಿದ್ದೋ ಕಾಣೆ. ಒಂದು ಕಾರ್ಯಕ್ರಮದ ಉದ್ಘಾಟನಾ ಸಮಾರಂಭ. ಸಾಂಕೇತಿಕವಾಗಿ ಒಳಗೆ ದೀಪ ಬೆಳಗಿ, ಬಯಲಿನಲಿ ಗಿಡ ನೆಟ್ಟು ಮುಂದೆ ಸಾಗುತ್ತಿರುವಾಗ, ಯಾರೋ ಅನಿರೀಕ್ಷಿತವಾಗಿ ಕೈಗೊಂದು ಪಾರಿವಾಳವನ್ನು ತುರುಕಿಬಿಟ್ಟರು! ಮೃದುವಾದ ರೆಕ್ಕೆಗಳ ಬೂದು ಬಣ್ಣದ ಮುದ್ದಾದ ಪಕ್ಷಿ. ನಿರೀಕ್ಷೆ ಇರದೇ ಬೊಗಸೆಗೆ ಬಂದು ಕುಳಿತ ಹಕ್ಕಿಯನ್ನು ಹೇಗೆ ಸಂಭಾಳಿಸುವುದೆಂದು ಅರಿಯದೇ ನಾನು ಬೆವರಿಹೋದೆ. ಆ ಹಕ್ಕಿಗೆ ಬಹುಶಃ ನನ್ನ ಎರಡರಷ್ಟು ಆತಂಕ! ಅದು ಬೊಗಸೆಯೊಳಗೇ ಪತರುಗುಟ್ಟುತ್ತಿತ್ತು. ತನ್ನ ರೆಕ್ಕೆಗಳನ್ನು ಬಂಧನದಿಂದ ಬಿಡಿಸಿಕೊಳ್ಳಲು, ಅದನ್ನು ಕೊಡವಿಕೊಂಡು ಮತ್ತೆ ಹಾರಲು ಅಂಗೈಯೊಳಗೇ ಒದ್ದಾಡುತ್ತಿತ್ತು. ನನ್ನ ಉಸಿರು ನಿಂತಷ್ಟು ಗಾಬರಿ, ನಿಶ್ಚೇತವಾದಂತಾ ಅನುಭವ. ಮೊದಲ ಬಾರಿಗೆ ಹಕ್ಕಿಯೊಂದನ್ನು ಹಾಗೆ ಅಮುಕಿ ಹಿಡಿದಿಡಬೇಕಾದ ತಳಮಳ. ಅದು ವಿಲವಿಲಗುಟ್ಟಿ ಪಡುತ್ತಿರುವ ಹಿಂಸೆ ನನ್ನ ಕೈಗಳ ಮೂಲಕ ರಕ್ತಕ್ಕೆ ಹರಿದು ನನ್ನ ಅಂಗೈಗಳೆರಡೂ ನಸುನೀಲಿಗಟ್ಟಿದವು! ಇನ್ನು ಸಹಿಸಲಾರದಂತೆ ಪಾರಿವಾಳ ಹಾರಿ ಬಿಡುವ ನಿಗದಿತ ಸಮಯಕ್ಕೆ ಮೊದಲೇ, ಕೆಲವೇ ನಿಮಿಷಗಳಲ್ಲಿ ನನಗರಿವಿಲ್ಲದೇ ಹಕ್ಕಿಯ ಮೇಲಿನ ನನ್ನ ಕೈಗಳ ಹಿಡಿತ ಸಡಿಲಾಗಿ ಪಾರಿವಾಳ ಹಾರಿಹೋಯ್ತು! ನಾನು ಸಮಾಧಾನದ ನಿಟ್ಟುಸಿರುಬಿಟ್ಟೆ. ಹಿಂಸೆ ನೀಡಿದ ಸಂಕೇತವಾಗಿ ನನ್ನ ಅಂಗೈ ಬೂದುಬಣ್ಣಕ್ಕೆ ತಿರುಗಿತ್ತು! ಪಕ್ಷಿಯ ರೆಕ್ಕೆಯ ಬಣ್ಣ ಕೈಗಂಟಿರಬಹುದೆಂದು ಉಜ್ಜಿ ತೊಳೆದೆ. ಅದು ಬಣ್ಣವಲ್ಲ…….. ಪಶ್ಚಾತ್ತಾಪದ ಕಲೆ. ಎಷ್ಟೋ ಹೊತ್ತಿನವರೆಗೆ ಅಂಗೈ ಹಾಗೇ ಇತ್ತು………. ಎಷ್ಟೋ ದಿನಗಳವರೆಗೆ ಈ ಘಟನೆ ಕಾಡುತ್ತಲೇ ಇತ್ತು……..
ನಾವು ‘ಅದೇ ಆಗಿ’ ಅನುಭವಿಸಿದಾಗ ಮಾತ್ರ ಹಿಂಸೆಯ ತೀವ್ರತೆ ನಮಗೆ ಅರ್ಥವಾಗಬಹುದೇನೋ?
Heart Touching.
ಬಹುಶಃ ಬಂಧನದಲ್ಲಿರುವ ಜೀವದ ನೋವನ್ನು ನಾವು ‘ಅದೇ ಆಗಿ’ ಅನುಭವಿಸಿದಾಗ ಮಾತ್ರ ಹಿಂಸೆಯ ತೀವ್ರತೆ ನಮಗೆ ಅರ್ಥವಾಗಬಹುದೇನೋ? ಅದನ್ನು ಬುದ್ಧಿಪೂರ್ವಕವಾಗಿ ಯೋಚನೆಗಿಳಿಸದೇ ಹೃದಯಕ್ಕೆ ಅರ್ಥವಾಗಿಸಿದ ಆ ಕ್ಷಣಕ್ಕೆ ಎಷ್ಟು ವಂದನೆ ಸಲ್ಲಿಸಲಿ? ಹೀಗೆಯೇ ಮುಂದೆಯೂ ಯಾವುದೇ ಜೀವಕ್ಕೆ ನನ್ನಿಂದ ಆಗಬಹುದಾದ ಹಿಂಸೆಯ ಮಿಡಿತ ನನ್ನ ಮನವನ್ನು ಎಚ್ಚರಿಸುತ್ತಿರಲಿ………
nimma edeyolagina novu, yaatane nijakku manamidiyuvantide. naanu kshanakaala nimma baraha odi mukanaade