‘ರೈತನಾಗುವ ಹಾದಿಯಲ್ಲಿ’ ಪೆಜತ್ತಾಯ

ಬಾಲಕೃಷ್ಣ ನಾಯಕ್

ಬೆಂಗಳೂರಿನ ಗೆಳೆಯ ಸೃಷ್ಟಿ ನಾಗೇಶ್ ತನ್ನ ದೇಸಿ ಪ್ರಕಾಶನದ ಮೂಲಕ ಪ್ರಕಟಿಸುವ ಎಸ್.ಮಧುಸೂಧನ್ ಪೆಜತ್ತಾಯ ಅವರು ಬರೆದ ’ರೈತನಾಗುವ ಹಾದಿಯಲ್ಲಿ’ ಕನ್ನಡ ಪುಸ್ತಕಲೋಕದಲ್ಲಿ ಈಗಾಗಲೇ ಒಂದು ಭರವಸೆಯ ಕೃತಿಯಾಗುವ ಲಕ್ಷಣಗಳು ಕಂಡು ಬರುತ್ತಿವೆ. ಪುಸ್ತಕದ ಬೆನ್ನುಡಿಯಲ್ಲಿ ಜಿ.ಎಸ್.ಎಸ್. ರಾವ್ ಅವರು ಯಶಸ್ವೀ ರೈತರೊಬ್ಬರು, ಸುಮಾರು ನಲವತ್ತೈದು ವರ್ಷಗಳ ಹಿಂದೆ, ರೈತರಾಗಲು ಹೊರಟಾಗಿನ ಪ್ರಾರಂಭದ ಒಂದು ವರ್ಷದ ಕಥೆ! ಎಂದು ಬರೆಯುತ್ತಾರೆ.

ಆದರ್ಶದ ಬೆನ್ನು ಹತ್ತಿದ ಯುವಕನೊಬ್ಬನ ನಿಜ ಜೀವನದ ಸಾಹಸಗಾಥೆಯನ್ನು ಕಥೆಯಾಗಿಸಿದ್ದಾರೆ, ಪೆಜತ್ತಾಯರು. ತಾವು ನಡೆದ ಹಾದಿಯಲ್ಲಿ ಎದುರಾದ ಪ್ರಕೃತಿ ವಿಕೋಪಗಳು, ಸಾಮಾಜಿಕ ವೈಪರೀತ್ಯಗಳು, ಮನುಷ್ಯರ ಸ್ವಭಾವಗಳು ಇವುಗಳ ನಡುವೆಯೂ ಗುರಿಸಾಧನೆ ಮಾಡುವುದು ಈ ಕೃತಿಯ ತಿರುಳು. ವಿಷಾದದಲ್ಲಿ ಕೊನೆಯಾಗಬಹುದಾಗಿದ್ದ ಘಟನೆಗಳು ಕೂಡ ತಿಳಿಹಾಸ್ಯದ ಲೇಪನವನ್ನೊಳಗೊಂಡು ಸಹ್ಯವಾಗಿಬಿಡುತ್ತವೆ. ಸಮಾಜದ ಮತ್ತು ಪರಿಸರಸದ ಅವಿಭಾಜ್ಯ ಅಂಗವೆಂದು ತಮ್ಮನ್ನು ಗುರುತಿಸಿಕೊಂಡಿರುವ ಪೆಜತ್ತಾಯರು, ರೋಚಕ ಚಿತ್ರಗಳನ್ನು ನೀಡುತ್ತಾರೆ. ತಾವು ಪಟ್ಟ ಪಾಡನ್ನು ಹಾಡಾಗಿಸಿರುವ ಕೃತಿ ಇದು, ಎನ್ನುತ್ತಾರೆ ರಾವ್ ಅವರು.

ಮಧುಸೂದನ ಪೆಜತ್ತಾಯ ಅವರು ಹಿರಿಯ ಕಾಫಿ ಬೆಳೆಗಾರರು. ಭದ್ರಾ ನದಿಯ ಆದಿಭಾಗದಲ್ಲಿ ಇವರ ವಿಶಾಲವಾದ ತೋಟವಿದೆ. ಹೊಳೆಯ ಈ ಕಡೆ ಬಾಳೆಹೊಳೆ ಎಂಬ ಊರಿದ್ದರೆ ಆ ಕಡೆ ಇವರ ಸುಳಿಮನೆ ತೋಟವಿದೆ. ಪ್ರಗತಿಪರ ರೈತರಾಗಿರುವ ಇವರ ಜೀವನಾನುಭವ ದೊಡ್ಡದು. ಎದುರಿಗೆ ಕುಳಿತಿರುವವರಿಗೆ ಒಂದರೆಕ್ಷಣವೂ ಬೋರು ಹೊಡೆಸದಂತೆ, ವಾತಾವರಣದಲ್ಲಿ ನಗುವಿನ ಸದ್ದು ಸೃಷ್ಟಿಸಬಲ್ಲ ವಾಕ್ಚಾತುರ್ಯ ಇವರಿಗಿದೆ. ತಮ್ಮ ಬಲ್ಲವರಿಂದ ’ಕೇಸರಿ’ ಎಂದೇ ಕರೆಸಿಕೊಳ್ಳುತ್ತಿರುವ ಇವರು ಈಗ ರೈತಬದುಕಿನಿಂದ ಆಂಶಿಕ ನಿವೃತ್ತರಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮಕ್ಕಳು ತೋಟದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ವೃತ್ತಿಯಿಂದ ರೈತರಾದರೂ, ಪ್ರವೃತ್ತಿಯಿಂದ ಒಬ್ಬ ಒಳ್ಳೆಯ ವಾಗ್ಮಿ, ಫೋಟೋಗ್ರಾಫರ್, ಕೃಷಿಸಂಶೋಧಕ ಹಾಗೂ ಬರಹಗಾರರು ಕೂಡಾ. ಅವರು ’ಕಾಗದದ ದೋಣಿ’ ಎಂಬ ಆತ್ಮವೃತ್ತಾಂತವೆಸಬಹುದಾದ ಲೇಖನಸಂಕಲನವನ್ನು ಬರೆದಿದ್ದಾರೆ.

ಪುಸ್ತಕವನ್ನು ಸಂಪಾದಿಸಿದ ಬೆಂಗಳೂರಿನ ಡಾ. ಬಿ.ಆರ್. ಸತ್ಯನಾರಾಯಣ ಅವರು ಪೆಜತ್ತಾಯರ ಜೀವನಪ್ರೀತಿಯನ್ನು ಪ್ರತಿ ಲೇಖನದಲ್ಲೂ ಓದುಗ ಸವಿಯಬಹುದು ಎನ್ನುತ್ತಾರೆ. ಸಾಹಿತ್ಯಲೋಕದ ಯಾವುದೇ ಕಟ್ಟುಪಾಡುಗಳು, ಮುಲಾಜುಗಳೂ ಈ ಲೇಖಕರಿಗಿಲ್ಲ. ಅವರೆಂದೂ ತಮ್ಮನ್ನು ತಾವು ಲೇಖಕ ಎಂದು ಕರೆದುಕೊಳ್ಳುವುದಿರಲಿ, ಹಾಗೆಂದು ಭಾವಿಸಿಯೂ ಇಲ್ಲ. ನಾನೊಬ್ಬ ರೈತ, ಮಡ್ಡ, ದಡ್ಡ ಎಂದು ಹೇಳಿ ಎದುರಿಗೆ ಕುಳಿತಿರುವವರಲ್ಲಿ ನಗೆಯ ಬುಗ್ಗೆ ಉಕ್ಕಿಸುವ ಅವರೊಳಗೆ ಪ್ರಧಾನವಾಗಿ ಕಾಣುವುದು ರೈತನನ್ನೇ. ಆದರೆ ಮಿಶ್ರಬೆಳೆ ಪದ್ಧತಿಯಲ್ಲಿ ಉಪಉತ್ಪನ್ನಗಳಿರುವಂತೆ, ಪೆಜತ್ತಾಯರೊಳಗೆ ಒಬ್ಬ ಸಂಶೋಧಕ, ಒಬ್ಬ ಬರಹಗಾರ, ಒಬ್ಬ ಛಾಯಾಚಿತ್ರಕಾರ ಒಟ್ಟಾರೆಯಾಗಿ ಬಹುಮುಖೀ ಕಲಾವಿದನೊಬ್ಬನಿದ್ದಾನೆ. ಕೃಷಿ ಅವರ ಜೀವನದ ಸ್ಥಾಯಿಭಾವವಾದರೆ ಉಳಿದೆಲ್ಲವೂ ಸಂಚಾರೀ ಭಾವಗಳು!

ಕೇವಲ ಒಂದು ವರ್ಷದ ಅವಧಿಯಲ್ಲಿ ಅವರು ಪಟ್ಟ ಕಷ್ಟಗಳು, ಎದುರಿಸಿದ ಸವಾಲುಗಳು, ಒಡನಾಡಿದ ಜನಸಮೂಹ ಎಲ್ಲವೂ ಈ ಬರಹದಲ್ಲಿ ಬಂದು ಹೋಗುತ್ತವೆ. ಯಾವುದೇ ರಸವತ್ತಾದ ಕಾದಂಬರಿಗಳ ಪಾತ್ರವನ್ನೂ ಮೀರಿಸಬಲ್ಲಂತಹ ಪಾತ್ರಗಳು ಅವರ ನಿಜಜೀವನದಲ್ಲಿ ಬಂದು ಹೋಗಿರುವುದನ್ನು ಕಾಣಬಹುದಾಗಿದೆ. ಗ್ರಾಮೀಣ ಬದುಕಿನ ಸೊಗಡು ಸಹಜವಾಗಿಯೇ ನಮಗೆ ದಕ್ಕುವುದು ಅವರು ನೆನಪಿನಲ್ಲಿಟ್ಟುಕೊಂಡು ಚಿತ್ರಿಸಿರುವ ಆ ಮುಗ್ಧ ಹಳ್ಳಿಗರ ಪಾತ್ರಗಳಿಂದ! ಕುವೆಂಪು, ಕಾರಂತ, ಗೊರೂರು, ತೇಜಸ್ವಿ, ದೇವನೂರು ಮೊದಲಾದವರ ಕಥೆ ಕಾದಂಬರಿಗಳಲ್ಲಿ ಬಂದು ಹೋಗುವ ನೂರಾರು ಪಾತ್ರಗಳ ಒಂದು ಪುಟ್ಟ ಮೆರವಣಿಗೆ ಈ ಕೃತಿಯ ಓದುಗನ ಮನಸ್ಸಿನಲ್ಲಿ ನಡೆದು ಹೋದರೆ ಆಶ್ಚರ್ಯವೇನಲ್ಲ ಎನ್ನುತ್ತಾರೆ ಸತ್ಯನಾರಾಯಣ ಅವರು. ಲೇಖಕ ಅಬ್ದುಲ್ ರಶೀದ್ ಈ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ.

ಪುಸ್ತಕವನ್ನು ಕೃಷಿ ವಿಶ್ವ ವಿದ್ಯಾಲಯದ ಕುಲಪತಿ ಡಾ. ನಾರಾಯಣ ಗೌಡರ ಅಧ್ಯಕ್ಷತೆಯಲ್ಲಿ ಚಿಕ್ಕಬಳ್ಳಾಪುರದ ಪ್ರಗತಿಪರ ರೈತರಾದ ನಾಡೋಜ ನಾರಾಯಣ ರೆಡ್ಡಿ ಅವರು ಬೆಂಗಳೂರಿನಲ್ಲಿ ಜನವರಿ ೨೫ರಂದು ಬಿಡುಗಡೆಗೊಳಿಸಲಿದ್ದಾರೆ. ಈ ವಿಶಿಷ್ಟ ಯೋಜನೆಯಲ್ಲಿ ತೊಡಗಿಸಿಕೊಂಡವರಿಗೆಲ್ಲರಿಗೂ ಅಭಿನಂದನೆಗಳು.

‍ಲೇಖಕರು G

January 23, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬಯಲು ಸೀಮೆಯ ʼಒಕ್ಕಲ ಒನಪುʼ

ಬಯಲು ಸೀಮೆಯ ʼಒಕ್ಕಲ ಒನಪುʼ

ಮಧುಸೂದನ ವೈ ಎನ್ ಈ ಪುಸ್ತಕ ಕೈಗೆ ಸಿಕ್ಕಿ ಒಂದೋ ಎರಡೋ ತಿಂಗಳಾಗಿರಬಹುದು. ಎರಡು ಹಗಲು ಎರಡು ಇನ್ನಿಂಗ್ಸ್‌ ಗಳಲ್ಲಿ ಖತಂ! ಓದಿದ ಎಷ್ಟೋ...

ಗಾಲಿಬನ ಮೇಲಿನ ಪ್ರೀತಿಗಾಗಿ..

ಗಾಲಿಬನ ಮೇಲಿನ ಪ್ರೀತಿಗಾಗಿ..

ವಿರಹ, ವಿಯೋಗ, ವಿದ್ರೋಹ, ಪ್ರೇಮ, ವ್ಯಾಮೋಹ, ವಿಷಣ್ಣತೆ, ತೀವ್ರ ತೊಳಲಾಟ, ಹೂ ಪುಳಕ, ಬದುಕಿನ ಚೆಲುವುಗಳನ್ನು ಗಜಲುಗಳ ಮೂಲಕ ಕಟ್ಟಿ ಕೊಟ್ಟ...

2 ಪ್ರತಿಕ್ರಿಯೆಗಳು

 1. ಈಶ್ವರ ಭಟ್,ತೋಟಮನೆ

  ರೈತರ ಅನುಭವಗಳನ್ನು ಪ್ರಕಟಿಸುವಂತಹ ಲೇಖನ ಬೇಕು. ಅದು ನೈಜ ಚಿತ್ರನವಾದರೆ ಚೆನ್ನ. ಇಂತಹ ಕಥೆಗಳಲ್ಲಿ ಹೆಚ್ಚು ಭಾವನೆಗಳಿರುತ್ತವೆ ಅಲ್ಲವೇ?

  ಪ್ರತಿಕ್ರಿಯೆ
 2. ಜಿ.ಎನ್.ಅಶೋಕವರ್ಧನ

  ನನ್ನಂಗಡಿ ಕೆಲಸವೆಲ್ಲಾ ಕುಂಟುವಂತೆ ಮಾಡಿ, ಒಂದೇ ಉಸುರಿಗೆ ಓದಿಸಿಕೊಂಡ ‘ರೈತನಾಗುವ ಹಾದಿಯಲ್ಲಿ’ ಬರೆದ ಅಕ್ಕ ಭಾವರ ರೈಟ, ಶಿರೂರು ವಲಯದ ಕೇಸರಿಯಣ್ಣ, ಗೊಟ್ನಾ ಕೃಷಿಕ್ಷೇತ್ರದ ಆದಿಶಿಲ್ಪಿ, ಆರು ದೈವಗಳ ಕೇಸರಿಯಣ್ಣೆ, ಕೆಂಪಿಯಿಂದ ಒದೆತಿಂದ ಕೌಬಾಯ್, (ಗೋ)ಮಲಹೊತ್ತು ಹೆಸರಿಗೆ ಅರ್ಥ ತಂದ ಮಣ್ಣಿನಮಗ, ಮಿಟ್ಸುಬಿಶಿ ಚಾಲಕ, ಸುವರ್ಣಾನದಿ ನಾವಿಕ, ಚೀಂಪನ ರಾಬಿನ್ಸನ್ ಕ್ರೂಸೋ, ಪಂಚನಬೆಟ್ಟಿನ ಬಕಾಸುರ, ಕೋಲ (-ಗುರು?) ಕಾರಂತರ ಶಿಷ್ಯ, ಕಣ್ಣನ್ ಮೇಸ್ತ್ರಿಪರಿಪಾಲಿತ ಇತ್ಯಾದಿ ಇತ್ಯಾದಿ ಬಿರುದಾಂಕಿತ ಮದುಸೂದನ ಪೆಜತ್ತಾಯರಿಗೆ ಭೋ ಪರಾಕ್, ಭೋ ಪರಾಕ್. ಭೋ ಪರಾಕ್!
  ಸುತ್ತುಬಳಸಿನ ವಾಕ್ಯರಚನೆ, ಗೂಢಾರ್ಥ, ವ್ಯಂಗ್ಯಾರ್ಥಗಳಿಗೆಲ್ಲಾ ತಿಣುಕಿ ಬರೆಯುವ ನನಗೆ ಇಷ್ಟು ನೇರ, ಸರಳ ವಾಕ್ಯಗಳು ಪರಿಣಾಮಕಾರಿಯಾಗಲು ಕಂಡ ಒಂದೇ ಕಾರಣ ಪೆಜತ್ತಾಯರು ಅದನ್ನು ಜೀವಿಸಿದ್ದಾರೆ. ಅಂಗಡಿಯಲ್ಲಿ ನಮಗೆ ಮಾಮೂಲೀ ಸಿಗುವ ಊಟದಕ್ಕಿಗೆ ನಾವು ಅದೇನೋ ಸೊಪ್ಪು ಹಾಕಿ ‘ಗಂಧಸಾಲೆ’ಯ ಪರಿಮಳ ದಕ್ಕಿಸಿಕೊಳ್ಳುವುದುಂಟು. ಆದರೆ ಅದೇ ಸಾದಾ ಅಕ್ಕಿಯ ಇತರ ಪಾಕಗಳಲ್ಲೂ (ಹಾಲುಬಾಯಿ ಅಥವಾ ಬಿರಿಯಾನಿ) ಪಡೆಯಲು ಪ್ರಯತ್ನಿಸುವಾಗ ಗೆಲುವು ಮೂಲ ಗಂಧಸಾಲೇ ಅಕ್ಕಿಗೇ ಹೊರತು ಹೊರಗಿನಿಂದ ಪರಿಮಳ ಆರೋಪಿಸಿದ ಸಾದಾ ಅಕ್ಕಿಗಲ್ಲ. ಅಂಥ ಮೂಲ ಗಂಧಸಾಲೆಯ ಪರಿಮಳ ಹೊರಡಿಸುವ ಈ ಪುಸ್ತಕಕ್ಕಾಗಿ ಮತ್ತೊಮ್ಮೆ ಪೆಜತ್ತಾಯರಿಗೆ ಅಭಿನಂದನೆಗಳು.
  ಅಶೋಕವರ್ಧನ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: