ರೈತರ ‘ಚಲೋ ದಿಲ್ಲಿ’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’

ಹಿಂದೆ ದಿಲ್ಲಿ ಮತ್ತು ಗುರ್ಗಾಂವ್ ಮಹಾನಗರಿಯ ಸರಹದ್ದು ಜನರ ಮಾತುಗಳಲ್ಲಿ ಬಂದು ಹೋಗುತ್ತಿದ್ದಿದ್ದು ಒಂದು ಕಾರಣಕ್ಕೆ ಮಾತ್ರ.

ಅದೇನೆಂದರೆ ಟೋಲ್ ಗೇಟ್. ಒಂದು ಬಗೆಯ ಕಾಂಕ್ರೀಟ್ ಸಮುದ್ರದಂತೆ ಕಾಣುತ್ತಿದ್ದ ಈ ಬೃಹದಾಕಾರದ ಟೋಲ್ ಗೇಟ್ ನಿಂತು ಹೋಗಿ ವರ್ಷಗಳೇ ಸಂದಿವೆ. 2020ರ ಆರಂಭದಲ್ಲಿ ಕೊರೋನಾ ಸದ್ದು ಮಾಡಿದ ದಿನಗಳಲ್ಲಿ ಈ ಸರಹದ್ದು ಮತ್ತೆ ಸುದ್ದಿಗೆ ಬಂತು. ನಿಮ್ಮ ಖಾಯಿಲೆ ನಮ್ಮಲ್ಲಿಗೆ ತರಬೇಡಿ ಎಂದು ದಿಲ್ಲಿ ಹೇಳಿತು. ನೀವೇನೂ ಸಂಭಾವಿತರಲ್ಲ ಎಂದು ಹರಿಯಾಣವೂ ಹೇಳಿತು. ಅಲ್ಲಿಗೆ ಒಂದೇ ನಾಣ್ಯದ ಎರಡು ಮುಖಗಳಂತಿದ್ದ ದಿಲ್ಲಿ ಮತ್ತು ಹರಿಯಾಣ ರಾಜ್ಯಗಳು ‘ನಾನೊಂದು ತೀರ, ನೀನೊಂದು ತೀರ’ ಎಂದು ತಮ್ಮದೇ ಧಾಟಿಯಲ್ಲಿ ಕೊಂಚ ಮುನಿಸಿಕೊಂಡು ದೂರಾಗಿಬಿಟ್ಟವು.

ಆದರೆ ಈ ಮುನಿಸು ಹೆಚ್ಚು ದಿನ ಉಳಿಯುವಂಥದ್ದೇನಲ್ಲ ಎಂಬುದು ಬಹುತೇಕ ಎಲ್ಲರಿಗೂ ಗೊತ್ತಿದ್ದೇ! ಏಕೆಂದರೆ ಒಂದೆಡೆ ದಿಲ್ಲಿ ಶಹರವು ಈ ದೇಶದ ಶಕ್ತಿ ಕೇಂದ್ರವಾದರೆ, ಹರಿಯಾಣಾದ ಗುರ್ಗಾಂವ್ ಮಹಾನಗರಿಯು ಚಿನ್ನದ ಮೊಟ್ಟೆಯಿಡುವ ಕೋಳಿ. ಎರಡೂ ಮಹಾನಗರಿಗಳು ತಮ್ಮ ಪರಿಧಿಗಳಲ್ಲೇ ಘಟಾನುಘಟಿಯೆಂಬಂತೆ ಬೀಗುವ ಅದ್ಭುತಗಳು.

ಲಾಕ್ ಡೌನ್ ಹೇರಿಕೆಯಾಗಿ ಎನ್.ಸಿ.ಆರ್ (ನ್ಯಾಷನಲ್ ಕ್ಯಾಪಿಟಲ್ ರೀಜನ್) ಭಾಗದ ಜನಜೀವನವೂ, ಅರ್ಥವ್ಯವಸ್ಥೆಯೂ ಉಸಿರುಗಟ್ಟಿ ಹೋದಂತೆ, ಮುಂದೆ ಲಾಕ್ ಡೌನ್ ಸಡಿಲಿಕೆಯೂ ಅನಿವಾರ್ಯವಾಗಿ ಎಲ್ಲವೂ ಮೊದಲಿನಂತೆ ಯಥಾಸ್ಥಿತಿಗೆ ಬಂದು ಬಿಟ್ಟಿತು. ಮೇಲ್ನೋಟದ ಅಥವಾ ಗೂಡಾರ್ಥದ ಕಾರಣಗಳು ಅದೇನೇ ಇರಲಿ ಅಂತಿಮ ಸತ್ಯವೆಂದರೆ ಇದೊಂದೇ. ಅದೇನೆಂದರೆ: ”ಬಾತ್ ಐಸಾ ಹೈ, ಕಿ ಸಬ್ಸೇ ಬಡಾ ಪೈಸಾ ಹೈ!”

ಈಗ ದಿಲ್ಲಿ-ಗುರ್ಗಾಂವ್ ಸರಹದ್ದು ಮತ್ತೆ ಸುದ್ದಿಗೆ ಬಂದಿದೆ. ಅದು ರೈತರ ಚಳುವಳಿಯಿಂದಾಗಿ. ದಿಲ್ಲಿ-ಗುರ್ಗಾಂವ್ ಸರಹದ್ದು ಬಹುತೇಕ ಮುಚ್ಚಿಯೇ ಹೋಯಿತು ಎಂಬ ಮಾತುಗಳು ಮೊದಲು ನಮ್ಮ ಸುತ್ತಮುತ್ತಲ ಜನರ ಮಧ್ಯೆ ಹರಿದಾಡುತ್ತಿದ್ದಾಗ ಥಟ್ಟನೆ ನೆನಪಾಗಿದ್ದು ಕೊರೊನಾ ಖಾಯಿಲೆಯೇ ಹೊರತು ಬೇರೇನಲ್ಲ.

ಆದರೆ ಬೃಹತ್ ಸಂಖ್ಯೆಯಲ್ಲಿ ‘ಚಲೋ ದಿಲ್ಲಿ’ ಎನ್ನುತ್ತಾ ದಿಲ್ಲಿಯತ್ತ ದಾಪುಗಾಲು ಹಾಕುತ್ತಿರುವ ರೈತರ ಗುಂಪು ಈ ಬಾರಿ ಭಾರೀ ಸದ್ದನ್ನೇ ಮಾಡಿದೆ. ಒಟ್ಟಿನಲ್ಲಿ ಶಾಂತಿಯುತ ಪ್ರತಿಭಟನೆಯಲ್ಲಿ ನಿರತರಾಗಿದ್ದ ರೈತರನ್ನು ಕಂಡು ಬೆಚ್ಚಿದ ವ್ಯವಸ್ಥೆಯು ಪೊಲೀಸರನ್ನು ಛೂಬಿಟ್ಟ ನಡೆಯು ವ್ಯವಸ್ಥೆಯ ನೈತಿಕತೆಯನ್ನೇ ಜನತೆಯು ಪ್ರಶ್ನಿಸುವಂತೆ ಮಾಡಿದ್ದು ಸತ್ಯ.  

ಈ ಬಾರಿಯೂ ಇಲ್ಲಿ ಸದ್ದು ಮಾಡುತ್ತಿರುವುದು ಕಾಂಚಾಣವೇ. ಹಿನ್ನೆಲೆಯಲ್ಲಿರುವುದು ಇದ್ದೂ ಇಲ್ಲದಂತಿರುವ ಕಾರ್ಪೊರೇಟ್ ಲಾಬಿಯೆಂಬ ಸೂತ್ರಧಾರ. ಈ ದೇಶದ ರೈತನ ಸಮಸ್ಯೆಗಳಿಗೆ ಪರಿಹಾರವು ಹಾಗಿರಲಿ. ಅವುಗಳು ಸುದ್ದಿಯಾಗುವುದಕ್ಕೂ ಲಾಯಕ್ಕಲ್ಲ ಎಂಬಂತೆ ನಮ್ಮ ಮುಖ್ಯವಾಹಿನಿಯ ಮಾಧ್ಯಮಗಳು ಹಲವು ವರ್ಷಗಳಿಂದ ನಡೆದುಕೊಂಡಿವೆ. ವ್ಯವಸ್ಥೆಗಳಿಗೂ ಕೂಡ ರೈತರು ಸೀಮಿತವಾಗಿದ್ದು ಚುನಾವಣಾ ಪ್ರಚಾರ ಭಾಷಣಗಳಲ್ಲಿ ಮಾತ್ರ.

ಪಿ ಸಾಯಿನಾಥ್ ರಂತಹ ಧೀಮಂತ ಪತ್ರಕರ್ತರು ಗ್ರಾಮೀಣ ಭಾರತದತ್ತ ತಲೆ ಹಾಕದಿದ್ದರೆ ಟಿ.ಆರ್.ಪಿ ತರದ ಗ್ರಾಮೀಣ ಭಾರತದ ದಾರುಣ ಕತೆಗಳಿಗೆ ವೇದಿಕೆಯೇ ಸಿಗುತ್ತಿರಲಿಲ್ಲ. ಅಂಥದ್ದರಲ್ಲಿ ಏಕಾಏಕಿ ಆಸ್ಫೋಟಗೊಂಡ ಜ್ವಾಲಾಮುಖಿಯಂತೆ ಕಾಣುತ್ತಿರುವ ರೈತ ಚಳುವಳಿಯು ವ್ಯವಸ್ಥೆಯನ್ನೂ ಸೇರಿದಂತೆ, ನಮ್ಮೆಲ್ಲರನ್ನೂ ಬಡಿದೆಬ್ಬಿಸಿದ್ದು ಸುಳ್ಳಲ್ಲ.

ಇತ್ತೀಚೆಗೆ ದಿಲ್ಲಿ-ಗುರುಗ್ರಾಮ ಸರಹದ್ದಿನಲ್ಲಾದ ಈ ಘರ್ಷಣೆಯು ಒಂದು ರೀತಿಯಲ್ಲಿ ಶ್ರಮಿಕ ಮತ್ತು ಶ್ರೀಮಂತನ ಮಧ್ಯೆ ನಡೆಯುತ್ತಿರುವ ನಿರಂತರ ಶೀತಲ ಸಮರಕ್ಕೆ ರೂಪಕದಂತೆಯೂ ಕಾಣುತ್ತಿದೆ. ಗುರುಗ್ರಾಮ ಹೇಳಿಕೇಳಿ ಪಕ್ಕಾ ಕಾರ್ಪೊರೆಟ್ ಸ್ವರ್ಗ. ಹರಿಯಾಣಾದ ಗಡಿದಾಟಿ ಕೊಂಚ ದೂರಕ್ಕೆ ನಡೆದರೆ ಕಾರ್ಪೊರೇಟ್ ಕೃಪಾಕಟಾಕ್ಷದಿಂದಲೇ ನಡೆಯುತ್ತಿರುವ ಸದ್ಯದ ವ್ಯವಸ್ಥೆ. ಅಂಥದ್ದರಲ್ಲಿ ಸಿರಿವಂತರ ಭದ್ರಕೋಟೆಯೊಳಕ್ಕೆ ನುಗ್ಗಲು ಪ್ರಯತ್ನಿಸಿದ್ದ ರೈತರ ತಂಡಕ್ಕೆ ಇಂಥದ್ದೊಂದು ಪುಟ್ಟ ಆಘಾತವು ನಿರೀಕ್ಷಿತವೇ ಆಗಿದ್ದರೂ ಅಚ್ಚರಿಯಿಲ್ಲ. ಅಷ್ಟಕ್ಕೂ ರೈತರ ಈ ಬೃಹತ್ ಹೋರಾಟವು ಮುಂದೆ ತಾರ್ತಿಕ ಅಂತ್ಯವನ್ನು ಕಾಣಬಹುದೇ ಎಂಬುದು ಇಂದು ನಮ್ಮೆಲ್ಲರ ಮುಂದಿರುವ ಯಕ್ಷಪ್ರಶ್ನೆ.

ಹಾಗೆ ನೋಡಿದರೆ ಈ ಮಹಾನಗರಿಗಳು ಬೆಳೆಯುವ ಪರಿಯೇ ಒಂದು ಅಚ್ಚರಿ. ನಗರದೊಳಗಿರುವ ದ್ವೀಪಗಳು ಎಂದು ಈ ಬಗ್ಗೆ ನಾನು ಹಿಂದೊಮ್ಮೆ ಬರೆದಿದ್ದೆ. ರಸ್ತೆಯ ಒಂದು ಬದಿಯಲ್ಲಿ ಕೋಟಿಗಟ್ಟಲೆ ಬೆಲೆಬಾಳುವ ಅಪಾರ್ಟ್‍ಮೆಂಟ್ ಗಳ ಸಂಕೀರ್ಣವು ಕಾಣಸಿಕ್ಕರೆ, ಅದೇ ರಸ್ತೆಯ ಇನ್ನೊಂದು ಬದಿಯಲ್ಲಿ ತೀರಾ ಕೊಳಗೇರಿಯಂತಹ ಕೊಂಪೆಗಳನ್ನು ಗುರುಗ್ರಾಮದಲ್ಲಿ ನಾವಿಂದು ಕಾಣಬಹುದು.

ಒಂದಕ್ಕೊಂದು ಮುಖಾಮುಖಿಯಾಗಿದ್ದರೂ ಇಲ್ಲಿ ‘ನಾವು ಬೇರೆ, ಅವರು ಬೇರೆ’ ಎಂಬಷ್ಟಿನ ಕಂದರ. ಮನುಷ್ಯರು ಪರಸ್ಪರ ಮಾತಾಡಿಕೊಂಡರೆ ಕೇಳಿಸಬಹುದೇನೋ. ಆದರೇನು ಮಾಡುವುದು? ಮಹಾನಗರಿಗಳಲ್ಲಿ ಮಾತನಾಡುವುದು ದುಡ್ಡು. ಇಲ್ಲಿ ಅದರ ಮಾತಿಗಷ್ಟೇ ಬೆಲೆ.

ಇಂದು ಹರಿಯಾಣಾ ಎಂದರೆ ಗುರುಗ್ರಾಮ ಎನ್ನುವಂತಾಗಲು ಈ ಮಹಾನಗರಿಯು ರಾಜ್ಯದ ಅರ್ಥವ್ಯವಸ್ಥೆಗೆ ನೀಡುತ್ತಿರುವ ಭಾರೀ ಕೊಡುಗೆಯೇ ಮುಖ್ಯ ಕಾರಣವಾಗಿದೆ. ಪಕ್ಕದಲ್ಲಿರುವ ದಿಲ್ಲಿ ಮತ್ತು ಉತ್ತರಪ್ರದೇಶದ ಕೆಲ ಭಾಗಗಳನ್ನೊಳಗೊಂಡ ಎನ್.ಸಿ.ಆರ್ ಪ್ರದೇಶವು ಇಂದು ಅರಳಿಕೊಳ್ಳುತ್ತಿರುವ ಮಾದರಿಯೇ ಇದಕ್ಕೆ ಸಾಕ್ಷಿ.

ಇದು ಕೇವಲ ಅರ್ಥವ್ಯವಸ್ಥೆಯೆಂಬ ಬುನಾದಿಯ ಮೇಲೆ ಕಟ್ಟಲಾಗುತ್ತಿರುವ ಪ್ರಗತಿಯ ಸೌಧವೆಂಬುದು ಗಮನಿಸಬೇಕಾಗಿರುವ ಅಂಶ. ಇಂದು ‘ಯಶಸ್ಸೆಂದರೆ ಕೇವಲ ಆರ್ಥಿಕ ಯಶಸ್ಸಷ್ಟೇ’ ಎಂಬ ಮಾದರಿಯನ್ನು ನಮ್ಮ ಮುಂದೆ ಯಾರು ಸೃಷ್ಟಿಸುತ್ತಿದ್ದಾರೆ? ಈ ಭ್ರಮಾಲೋಕದ ಮಾಯೆಯಲ್ಲಿ ಲಾಭವಾಗುತ್ತಿರುವುದು ಯಾರಿಗೆ? ಅಂದಹಾಗೆ ಮಹಾನಗರಿಯನ್ನು ನಿಯಂತ್ರಿಸುವ ಶಕ್ತಿಗಳ ಅಸಲಿ ಮುಖಗಳು ಇಷ್ಟಿಷ್ಟೇ ಬೆತ್ತಲಾಗುವುದು ಇಂಥಾ ಪ್ರಶ್ನೆಗಳನ್ನು ಬೆನ್ನು ಹತ್ತಿ ಹೋದಾಗಲೇ! 

ಇವಿಷ್ಟನ್ನು ಯಾಕೆ ಹೇಳಬೇಕಾಗಿ ಬಂತೆಂದರೆ ಸೋಕಾಲ್ಡ್ ಅಭಿವೃದ್ಧಿಯ ಮಟ್ಟವನ್ನು ಈಗಾಗಲೇ ಮುಟ್ಟಿರುವ, ಮಹಾನಗರಿಯ ಬಹುತೇಕ ನಿವಾಸಿಗಳ ಅಸಲಿ ಜೀವನಶೈಲಿ ಹೇಗಿದೆಯೆಂಬುದರ ಪರಿಚಯಕ್ಕಾಗಿ. ”ನಾನು ಶ್ರೀಮಂತ ಮಹಾನಗರಿ, ನೀನೂ ಅದಕ್ಕೆ ತಕ್ಕಂತೆ ಇರು” ಎಂದು ಮಹಾನಗರಿ ಹೇಳುತ್ತದೆ. ಈ ಪೊಳ್ಳು ಖೆಡ್ಡಾದೊಳಗೆ ಥಟ್ಟನೆ ಬೀಳುವ ಅಮಾಯಕನೆಂದರೆ ತನ್ನ ಬದುಕಿನುದ್ದಕ್ಕೂ ಆರಕ್ಕೇರದೆ, ಮೂರಕ್ಕಿಳಿಯದೆ ಉಳಿಯುವ ಮಧ್ಯಮವರ್ಗದ ಮನುಷ್ಯ.

ಸಾಲ ಕೊಡಲು ಬ್ಯಾಂಕುಗಳು, ಕ್ರೆಡಿಟ್ ಕಾರ್ಡುಗಳು ಓಡಿ ಬಂದ ಕೂಡಲೇ ಹಲ್ಲುಗಿಂಜಿ ನಿಲ್ಲುವ ಈತ, ತನಗರಿವಿಲ್ಲದಂತೆಯೇ ಸಾಲಗಳ ಕೂಪಕ್ಕೆ ಬಿದ್ದು ಮಹಾನಗರಿಯ ಋಣದಲ್ಲೇ ಬಿದ್ದು ವರ್ಷಗಟ್ಟಲೆ ನರಳುತ್ತಿರುತ್ತಾನೆ. ಅಲ್ಲಿಗೆ ಆತ ಉಸಿರುಗಟ್ಟಿಸುವ ಮಹಾನಗರಿಯಲ್ಲೂ ಇರಲಾರದ, ಮರಳಿ ತನ್ನ ಹಳ್ಳಿಗೂ ಹೋಗಲಾಗದ ತ್ರಿಶಂಕು ಮಹಾರಾಜ. ಏನೋ ಗಳಿಸುತ್ತೇನೆಂದು ಮಹಾನಗರಿಯತ್ತ ವಲಸೆ ಬಂದು, ಇದ್ದ ಹಿಡಿಯಷ್ಟನ್ನೂ ಕಳೆದುಕೊಂಡ ಶಾಪಗ್ರಸ್ತ.

ಕೊರೊನಾ ಕಾಲವಂತೂ ಮಹಾನಗರಿಯ ನಿರ್ದಯತೆಯನ್ನು ಮತ್ತೆ ಸಾಬೀತು ಮಾಡಿತು. ಮಹಾನಗರಿಯ ಅರ್ಥವ್ಯವಸ್ಥೆಯೆಂಬ ರಥದ ಗಾಲಿಯು ನಿಂತು ಹೋದೊಡನೆಯೇ, ರಥವನ್ನು ಇಷ್ಟು ದಿನ ತಳ್ಳುತ್ತಿದ್ದ ಕಾಲಾಳುಗಳು ಅಚಾನಕ್ಕಾಗಿ ಎಲ್ಲರಿಗೂ ಬೇಡವಾದರು. ಸಾವಿರಗಟ್ಟಲೆ ವಲಸಿಗರು ಮರಳಿ ತಮ್ಮ ಊರಿನತ್ತ ಸಾಗಿದರು. ಈ ಗೋಜಲಿನಲ್ಲಿ ಅದೆಷ್ಟೋ ಮಂದಿಯ ಪುಟ್ಟ ಉಳಿತಾಯ ಖಾತೆಗಳು ಸವೆದು ಹೋದರೆ, ಹಲವರ ಪಾದಗಳೇ ಸವೆದು ಹೋದವು.

ಹಾಗಂತ ಇದು ರೈತರ ಅಥವಾ ಕಾರ್ಮಿಕರ ವಿಷಯವಷ್ಟೇ ಅಲ್ಲ. ಸಾವಿರಾರು ವಿದ್ಯಾವಂತರೂ ತಮ್ಮ ಹೊಟ್ಟೆಪಾಡಿನ ಉದ್ಯೋಗವನ್ನು ಕಳೆದುಕೊಂಡರು. ಆತ್ಮಹತ್ಯೆಗಳಾದವು. ಪುಟ್ಟ ಉದ್ಯಮಗಳು ಏದುಸಿರು ಬಿಡತೊಡಗಿದವು. ಮಹಾನಗರಿಯ ವೈಭವವಾಗಲಿ, ಶೋಕಿಯಾಗಲಿ ಕಷ್ಟಕಾಲದಲ್ಲಿ ಅದೆಷ್ಟು ಜನರ ಕೈಹಿಡಿಯಿತು ಎಂಬುದು ಇಲ್ಲಿ ಗಮನಿಸಬೇಕಾದ ಅಂಶ.

ಹಾಗಂತ ಮಹಾನಗರಿಯಲ್ಲಿ ಅವಕಾಶಗಳು ಇಲ್ಲವೆಂದಲ್ಲ. ಕಾಣಲೊಂದು ಕನಸು, ಕೊಂಚ ಬುದ್ಧಿವಂತಿಕೆ, ಒಂದಷ್ಟು ಪರಿಶ್ರಮ ಮತ್ತು ಗುರಿ ಮುಟ್ಟುವವರೆಗೆ ನಿಲ್ಲದೆ ಸಾಗುವ ತಾಕತ್ತಿದ್ದರೆ ಇಲ್ಲಿ ಯಾರು ಯಾರ ವೇಗಕ್ಕೂ ಅಡ್ಡಗಾಲು ಹಾಕಲಾರರು. ಒಂದು ಸ್ಟೂಲು ಮತ್ತು ಕೆಲ ಪೇಪರ್ ಕಪ್ಪುಗಳನ್ನು ಮುಂದಿಟ್ಟುಕೊಂಡು ಚಹಾ ಸ್ಟಾಲು ನಡೆಸುವವನಿಗೂ, ಇಲ್ಲಿ ಕಂಪೆನಿಯೊಂದರಲ್ಲಿ ದುಡಿಯುವ ಉದ್ಯೋಗಿಗಿಂತ ಹೆಚ್ಚು ಸಂಪಾದಿಸಲು ಸಾಧ್ಯವಿದೆ.

ಪುಟ್ಟ ಕೈಗಾಡಿಗಳನ್ನು ಹಾಕಿಕೊಂಡು, ಮೇಲ್ನೋಟಕ್ಕೆ ಕೆಳ ಮಧ್ಯಮವರ್ಗದ ಮಂದಿಯಂತೆ ಕಾಣುವ ಕೆಲ ವಲಸಿಗರು ಫರೀದಾಬಾದ್, ದ್ವಾರಕಾದಂತಹ ಪ್ರದೇಶಗಳಲ್ಲಿ ಮನೆ, ಜಮೀನುಗಳನ್ನು ಖರೀದಿಸುವುದನ್ನು ನಾನು ಕಂಡಿದ್ದೇನೆ. ಈ ಮಟ್ಟಿಗೆ ಮಹಾನಗರಿಯೆಂದರೆ ಅವಕಾಶಗಳ ಹಾಟ್-ಸ್ಪಾಟ್ ಕೂಡ ಹೌದು.

ಇತ್ತ ಹಿಂದೆ ಚುನಾವಣಾ ಪ್ರಚಾರ ಭಾಷಣಗಳಲ್ಲಷ್ಟೇ ಬಂದು ಹೋಗುತ್ತಿದ್ದ ರೈತನ ಮೇಲೆ ಕಾರ್ಪೋರೆಟ್ ಕಣ್ಣುಗಳೂ ಬಿದ್ದಾಗಿವೆ. ರೈತರ ಒಡೆತನದಲ್ಲಿರುವ ಕೃಷಿ ಭೂಮಿಗಳನ್ನು ಇಂದು ಜುಜುಬಿ ಬೆಲೆಗೆ ಖರೀದಿಸಿ, ಅಲ್ಲಿ ಕೋಟಿಗಟ್ಟಲೆ ಬೆಲೆಬಾಳುವ ಗಗನಚುಂಬಿ ಐಷಾರಾಮಿ ಅಪಾರ್ಟ್‍ಮೆಂಟುಗಳು ತಲೆಯೆತ್ತುತ್ತಿವೆ. ಮಾರುಕಟ್ಟೆ ವ್ಯವಸ್ಥೆಯಿಂದ ಬೇಸತ್ತಿರುವ ರೈತನಿಗೆ ತನ್ನ ಸಾಲಗಳಿಂದ ಮುಕ್ತನಾಗಲು ಇದೊಂದು ಸುವರ್ಣಾವಕಾಶದಂತೆಯೂ ಕಾಣುತ್ತಿದೆ.

ಇನ್ನು ಇವೆಲ್ಲಾ ಬೆಳವಣಿಗೆಗಳಿಂದಾಗಿ ನಟರ ಮಕ್ಕಳು ನಟರಾಗುವಂತೆ, ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗುವಂತೆ, ವೈದ್ಯರ ಮಕ್ಕಳು ವೈದ್ಯರಾಗುವಂತೆ ತಮ್ಮ ಮುಂದಿನ ಪೀಳಿಗೆಯು ರೈತನಾಗುವಂತೆ ಮಾಡುವ ಎಲ್ಲಾ ಕನಸುಗಳನ್ನೂ ನಮ್ಮ ಬಹುತೇಕ ರೈತರು ಕಳೆದುಕೊಂಡು ಬಿಟ್ಟಿದ್ದಾರೆ. 

ಡಿ.ಎಲ್.ಎಫ್ ನಂಥಾ ನೂರಾರು ದೈತ್ಯ ಸಂಸ್ಥೆಗಳನ್ನು ಹೊಂದಿರುವ ಗುರ್ಗಾಂವ್ ಮಹಾನಗರಿಯು ಇಂದು ಪಕ್ಕಾ ಕಾರ್ಪೋರೆಟ್ ಗೋಲ್ಡ್ ಮೈನ್. ಪಕ್ಕದಲ್ಲಿರುವ ಸೋಹ್ನಾ, ಭಿವಾಡಿ, ಮಾನೇಸರ್, ನೋಯ್ಡಾ ಮತ್ತು ಗ್ರೇಟರ್ ನೋಯ್ಡಾಗಳು ಮುಂದಿನ ವರ್ಷಗಳಲ್ಲಿ ಕಾರ್ಪೋರೆಟ್ ಕಾಶಿಯಾಗಲಿರುವ ಪ್ರದೇಶಗಳು. ಇವೆಲ್ಲದರ ಕೇಂದ್ರ ಬಿಂದುವಿನಂತಿರುವ ದಿಲ್ಲಿಯು ಹಿಂದೆ ಇವುಗಳನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿರುವಂತೆ ಕಾಣುತ್ತಿತ್ತು. ಈಗ ಮಾತ್ರ ಪಾತ್ರಗಳು ನಿಧಾನವಾಗಿ ಅದಲುಬದಲಾಗುತ್ತಿರುವಂತೆ ಕಾಣುತ್ತಿವೆ. ಭಾರತಕ್ಕಿದು ನಿಜಕ್ಕೂ ಅಗ್ನಿಪರೀಕ್ಷೆಯ ಕಾಲ.

ರೈತರು ಈ ಬಾರಿ ದಿಟ್ಟದನಿಯಲ್ಲೇ ‘ಚಲೋ ದಿಲ್ಲಿ’ ಎಂದಿದ್ದಾರೆ. ಅವರ ದನಿಯು ಸಂಸತ್ತಿನ ಅಂಗಳದವರೆಗೂ ತಲುಪುವಂತಾಗಲಿ!

‍ಲೇಖಕರು Avadhi

November 30, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹುಲಿಹೊಂಡದ ಹುಲಿಯಪ್ಪ ನೆನಪು

ಹುಲಿಹೊಂಡದ ಹುಲಿಯಪ್ಪ ನೆನಪು

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ...

೧ ಪ್ರತಿಕ್ರಿಯೆ

  1. Shyamala Madhav

    ವಸ್ತುಸ್ಥಿತಿಯ ಅತ್ಯುತ್ತಮ ಚಿತ್ರ, ಪ್ರಸಾದ್.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: