ರೈತ ಸಂಘದ ರಾಜಕೀಯ ಯಶಸ್ಸಿನ ಗುಟ್ಟು!

ನೆಂಪೆ ದೇವರಾಜ್

ಮಂಡ್ಯ ಮತ್ತು ಮೈಸೂರು ಭಾಗದಲ್ಲಿ ರೈತ ಚಳವಳಿ ದಟ್ಟೈಸಿದ ಕಗ್ಗಸಿರುಮಯವಾಗಿದ್ದ ಸಂದರ್ಭಗಳನ್ನು ದಾಖಲಿಸುವಲ್ಲಿ ನಮಗೆಲ್ಲರಿಗಿಂತಲೂ ಡಿ ಹೊಸಳ್ಳಿ ಶಿವು ಅವರು ಸಮರ್ಥರು ಎಂಬುದರಲ್ಲಿ ಎರಡು ಮಾತಿಲ್ಲ. ಈ ಸಂಬಂಧ ಅವರು ಅನೇಕ ಲೇಖನಗಳನ್ನು ಬರೆದಿದ್ದಾರೆ ಕೂಡಾ. ಮೊನ್ನೆ ಕೆ ಬೋರಯ್ಯನವರ ಜೊತೆ ನಮ್ಮ ತೀರ್ಥಹಳ್ಳಿಯಿಂದ ಫೋನಿನಲ್ಲಿ ಮಾತಾಡುತ್ತಿದ್ದಾಗ ಹಳೆಯ ಘಟನೆಗಳನ್ನೆಲ್ಲ ಬೋರಯ್ಯನವರು ನೆನಪು ಮಾಡಿದ್ದರಿಂದ ಒಂದಷ್ಟು ವಿಚಾರ ಹಂಚಿಕೊಳ್ಳೋಣವೆನಿಸುತ್ತಿದೆ.

ಇಂದು ಭಾರತೀಯ ಜನತಾಪಕ್ಷ ಸ್ಪರ್ಧಿಸುತ್ತಿರುವ ಬಹುತೇಕ ಚುನಾವಣೆಯಲ್ಲಿ ಯಶಸ್ಸು ಸಾಧಿಸುತ್ತಿರುವುದಕ್ಕೆ ಕಾರಣವಾಗಿರುವ ಮುಖ್ಯ ಅಂಶವೆಂದರೆ ಅದು ಕಾರ್ಯಕರ್ತರನ್ನು ತಯಾರು ಮಾಡುವ ರೀತಿ ಹಾಗೂ ಭಾವನಾತ್ಮಕ ವಿವಾದ ಮತ್ತು ವಿಚಾರಗಳನ್ನು ಇದೇ ಕಾರ್ಯಕರ್ತರುಗಳ ಮೂಲಕ ಮುನ್ನೆಲೆಗೆ ತರುವ ಬಗೆಯಿಂದ ಎಂಬುದನ್ನು ಗಮನಿಸಬೇಕಿದೆ.

ಪ್ರಭೆ, ಪ್ರಸಿದ್ಧಿ, ಹಣ, ವಂಶಪಾರಂಪರ್ಯತೆ, ತೋಳ್ಬಲಕ್ಕಿಂತಲೂ ಹೆಚ್ಚಾಗಿ ಕಾರ್ಯಕರ್ತರ ಬಲದ ಮೇಲಿರುವ ನಂಬುಗೆಗೆ ತಕ್ಕುದಾದ ರೀತಿಯಲ್ಲಿ ಹೊಸ ಹೊಸ ಘೋಷಣೆಗಳನ್ನು ಆಮ್ ಅದ್ಮಿ ಮತ್ತು ಬಿಜೆಪಿಯಂತಹ ಪಕ್ಷಗಳು ಮಾಡುತ್ತಲೇ ಇರುತ್ತವೆ. ಅದನ್ನು ಜನರಿಗೆ ತಲುಪಿಸಲು ನಾ ಮುಂದೆ ತಾ ಮುಂದು ಎಂದು ಸಕಲ ಶಸ್ತ್ರಾಸ್ತ್ರಗಳೊಂದಿಗೆ ಶಹರ ಮತ್ತು ಹಳ್ಳಿಗಳ ಭೇದವಿಲ್ಲದೆ ಯುವ ಸಮೂಹ ಹುಟ್ಟುತ್ತಲೆ ಇರುತ್ತವೆ. ಆದರೀ ಸತ್ಯವನ್ನು ಕಾಂಗ್ರೆಸ್ ನಂತಹ ಪಕ್ಷಗಳು ಒಪ್ಪಿಕೊಳ್ಳಲು ಹರ ಸಾಹಸಪಡುತ್ತಿರುತ್ತವೆ.

ಬಿಜೆಪಿಗೆ ಎದುರು ನಿಲ್ಲುವ ಪಕ್ಷಗಳು ಸತತ ಸೋಲುಗಳ ಸುಳಿಯಲ್ಲಿ ಸಿಲುಕುತ್ತಿದ್ದರೂ ಈ ಬಗ್ಗೆ ತಲೆ ಕೆಡಿಸಿಕೊಳ್ಳದಿರುವುದು ಈ ಪಕ್ಷಗಳು ತಮ್ಮಷ್ಟಕ್ಕೆ ತಾವೇ ಲಾಟರಿ ಹೊಡೆಯುವುದಕ್ಕೆ ಆರಿಸಿಕೊಂಡಿರುವ ಮಾರ್ಗವೆನ್ನದೆ ವಿಧಿ ಇಲ್ಲ.

ಕಾರ್ಯಕರ್ತರನ್ನು ತಯಾರು ಮಾಡುವ ವ್ಯವಸ್ಥೆಯೇ ಇಲ್ಲದ ಪಕ್ಷಗಳನ್ನು ರಾಜಕೀಯ ಪಕ್ಷಗಳೆಂದು ಹೇಳಲು ಸಾಧ್ಯವೇ ಇಲ್ಲ ಎಂಬುದನ್ನು ಕರ್ನಾಟಕ ರಾಜ್ಯ ರೈತ ಸಂಘ ಎಂಭತ್ತರ ದಶಕದಲ್ಲೇ ಪದೇ ಪದೇ ಹೇಳುತ್ತಿತ್ತು. ಬಡಕಲು ಬಂಡವಾಳಶಾಹಿ ವ್ಯವಸ್ಥೆಯ ಫಲಾನುಭವಿಗಳಂತೆ ವರ್ತಿಸುತ್ತಾ ಬಂದ ರಾಜಕೀಯ ಪಕ್ಷಗಳ ಒಳ ಹೂರಣಗಳ ಬೂಸಾತನವನ್ನು ಅಂದೇ ಅರಿತಿದ್ದ ಪ್ರೊ. ನಂಜುಂಡಸ್ವಾಮಿಯವರು ರೈತ ಚಳವಳಿಯ ಮೂಲಕ ಕಾರ್ಯಕರ್ತರನ್ನು ತರಬೇತುಗೊಳಿಸಿ ಕಾರ್ಪೋರೇಟ್ ಹಾಗೂ ಬಹುರಾಷ್ಟ್ರೀಯ ಪ್ರಪಂಚಕ್ಕೆ ಸೆಡ್ಡು ಹೊಡೆವ ಬಗೆಗೆಗಳನ್ನು ರೂಪಿಸಿದ್ದರು.

ಬಂಡವಾಳಶಾಹಿಗಳು ಚುನಾವಣೆಯ ಸಂದರ್ಭದಲ್ಲಿ ನೀಡುತ್ತಿದ್ದ ವಂತಿಕೆಯ ಮೇಲಷ್ಟೆ ರಾಜಕೀಯ ಪಕ್ಷಗಳ ಕಣ್ಣಿತ್ತೆ ವಿನಃ ಕಾರ್ಯಕರ್ತರುಗಳಿಗೆ ತರಬೇತು ನೀಡಬೇಕೆಂಬ ಪ್ರಾಥಮಿಕ ವಿವೇಕ ಇವುಗಳ ತಲೆಗೆ ಅಂದು ಹೋಗದ ಕಾರಣಕ್ಕಾಗಿ ಇಂದು ವಿಧಾನಸಭೆ ಮತ್ತು ಲೋಕ ಸಭಾ ಚುನಾವಣೆಗಳಲ್ಲಿ ಎರಡಂಕಿಯನ್ನು ಪಡೆಯಲು ಏದುಸಿರು ಬಿಡುವ ರೀತಿ ನಗೆಯ ಹೊನಲನ್ನೆ ಹರಿಸುತ್ತಿದೆ.

ಕಾರ್ಯಕರ್ತರನ್ನು ಬಿಜೆಪಿ ದುಡಿಸಿಕೊಳ್ಳುವುದಕ್ಕೂ ರೈತ ಸಂಘ ಹೇಳುತ್ತಿದ್ದುದಕ್ಕೂ ಇರುವ ವ್ಯತ್ಯಾಸ ಬೇರೆ ಬೇರೆ ರೀತಿಯದು. ಯಾವ ಕಾರ್ಪೊರೇಟ್ ವಲಯ ಭಾರತೀಯ ರಾಜಕಾರಣವನ್ನು ನಿಯಂತ್ರಿಸುತ್ತಿದೆಯೋ ಆ ಬಂಡವಾಳಶಾಹಿ ವ್ಯವಸ್ಥೆಯ ರಕ್ಷಕನಾಗಿ ತನ್ನ ಕಾರ್ಯತಂತ್ರವನ್ನು ಬಿಜೆಪಿ ಹೆಣೆದರೆ, ರಾಜಕಾರಣದ ಮೇಲಿನ ಬಂಡವಾಳಶಾಹಿ ವ್ಯವಸ್ಥೆಯ ಬಿಗಿ ಹಿಡಿತದ ವಿರುದ್ಧ ಕಾರ್ಯತಂತ್ರಕ್ಕೆ ಎಂಭತ್ತರ ದಶಕದಲ್ಲಿ ರೈತ ಸಂಘ ಕಾರ್ಯಕರ್ತರುಗಳನ್ನು ಉತ್ಪಾದಿಸಬೇಕೆನ್ನುವುದು ರೈತ ಚಳವಳಿಯ ಉದ್ದೇಶವಾಗಿತ್ತು.

ಅಂದು ರೈತ ಸಂಘ ಹಮ್ಮಿಕೊಂಡಿದ್ದ ಅಧ್ಯಯನ ಶಿಬಿರಗಳಿಗೆ ಲೆಕ್ಕವಿಲ್ಲ. ಗ್ಯಾಟ್, ಟ್ರಿಪ್ಸ್, ಟ್ರಿಮ್ಸ್, ಡಬ್ಲ್ಯು ಟಿ ಒ ದಂತಹ ಅಂತಾ‌ರಾಷ್ಟ್ರೀಯ ವ್ಯಾಪಾರಿ ಜಗತ್ತಿನ ವಿಷಯಗಳನ್ನು ಲೀಲಾಜಾಲವಾಗಿ ಮಾತಾಡಬಲ್ಲವರಾಗಿದ್ದರು. ಡಂಕಲ್ ಪ್ರಸ್ತಾವನೆಗಳ ಭೂಯಿಷ್ಟ ಭಾಷೆಯ ಕಬ್ಬಿಣದ ಕಡಲೆಯಂತಹ ವಿಷಯಗಳನ್ನೂ ವಿವರಿಸಬಲ್ಲವನಾಗಿದ್ದ ಸಾಮಾನ್ಯ ರೈತನನ್ನು ನೋಡಿ ಪ್ರಾಜ್ಞರುಗಳೇ ತಲೆ ಕೆದರಿಕೊಳ್ಳುಂತಹ ವಾತಾವರಣವೊಂದನ್ನು ಸೃಷ್ಟಿಸಿತ್ತು ಎಂಬುದಕ್ಕೆ ಪೂರಕವಾಗಿ ಈ ಕೆಳಗಿನ ಘಟನೆಗಳನ್ನು ಮೆಲುಕು ಹಾಕೋಣ..

1985ರಲ್ಲಿ ಮೊಟ್ಟ ಮೊದಲ ಬಾರಿಗೆ ಸ್ಪಷ್ಟ ಬಹುಮತದೊಂದಿಗೆ ಜನತಾ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿತ್ತು. ಯಾವಾಗ ಜನತಾಪಕ್ಷ ಅಧಿಕಾರಕ್ಕೆ ಬಂತೋ ರೈತ ಸಂಘದ ಉಚ್ರಾಯ ಸ್ಥಿತಿ ಎಂಬುದರ ಮೇಲೆ ಹೊಡೆತಗಳ ಮೇಲೆ ಹೊಡೆತಗಳು ಬೀಳತೊಡಗಿದವು. ಬಲಿಷ್ಠವಾಗಿ ರೂಪುಗೊಂಡಿದ್ದ ರಾಜ್ಯ ರೈತ ಸಂಘದ ಮೇಲೆ ಅಧಿಕಾರದ ಆಮಿಷಗಳೆಂಬ ಅಮಲಿನ ವಾಸನೆಯನ್ನು ಸಂಘದ ಪದಾಧಿಕಾರಿಗಳ ಮೇಲೆ ಸಂಚಿಸತೊಡಗಿದಾಗ, ಬುತ್ತಿಯ ಗಂಟು, ಪಾದಯಾತ್ರೆ, ಕಮಾನುಗಳಿಲ್ಲದ ಲಾರಿಯಲ್ಲಿ ಕೂತು ಸಮಾವೇಶಗಳ ಪ್ರಯಾಣ, ಜೈಲುಬರೋಗಳು ನಲುಗತೊಡಗಿದವು.

ಇಂತಹ ಬೆಳವಣಿಗೆಯೊಂದು ಮಂಡ್ಯದಲ್ಲೂ ನಡೆಯಿತು. ರೈತ ಚಳವಳಿಯಲ್ಲಿ ಅಪೂರ್ವ ಸಂಘಟನಾ ಚಾತುರ್ಯತೆಯ ಬಿರುದನ್ನು ತಮ್ಮದಾಗಿಸಿಕೊಂಡಿದ್ದ ದಿವಂಗತ ಎಸ್ ಡಿ ಜಯರಾಮ್ ಮಂಡ್ಯದಲ್ಲಿ ಅಂದಿನ ಜನತಾ ಪಕ್ಷ ರೂಪಿಸಿದ್ದ ತಂತ್ರಕ್ಕೆ ಮೊದಲ ಬಲಿಯಾದರು. ರೈತ ಸಂಘದಿಂದ ಜಿಗಿದು 1985ರ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯದ ಜನತಾ ಪಕ್ಷದ ವಿಧಾನಸಭಾ ಅಭ್ಯರ್ಥಿಯಾಗಿ ಗೆದ್ದೂ ಬಿಟ್ಟರು. ಅಬ್ದುಲ್ ನಜೀರ್ ಸಾಬರ ಕನಸಿನ ಕೂಸಾಗಿದ್ದ ಅಧಿಕಾರ ವಿಕೇಂದ್ರೀಕರಣದ ಜಿಲ್ಲಾ ಪರಿಷತ್ ಮತ್ತು ಮಂಡಲ ಪಂಚಾಯ್ತಿ ವ್ಯವಸ್ಥೆ ಜಾರಿಯಾಗಿ ಚುನಾವಣೆ ಘೋಷಣೆಯಾದಾಗ ಮಂಡ್ಯದ ಪಕ್ಕವೇ ಇದ್ದ ಬೂದನೂರು ಜಿಲ್ಲಾ ಪರಿಷತ್ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಹುಡುಕುವ ಜವಾಬ್ದಾರಿ ಎಸ್ ಡಿ ಜಯರಾಮ್ ಹೆಗಲಿಗೆ ಬಿದ್ದಾಕ್ಷಣ ಅವರ ಕಣ್ಣಿಗೆ ಬಿದ್ದವರೇ ರೈತ ಸಂಘದ ಪ್ರಬಲ ವ್ಯಕ್ತಿ ಶಿವಾನಂದ್ ರವರು.

ಜನತಾಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಶಿವಾನಂದ್ ಹೊರಹೊಮ್ಮಿದಾಗ ಇಡೀ ಮಂಡ್ಯದಲ್ಲಿ ರೈತ ಸಂಘ ಸಂಪೂರ್ಣ ಜನತಾಪಕ್ಷದಲ್ಲಿ ಲೀನವಾಗಿ ರಾಜ್ಯ ರೈತ ಸಂಘವೆಂಬುದು ಇತಿಹಾಸದ ಬುಟ್ಟಿಯಲ್ಲಿ ಆಕಳಿಸಬೇಕಾಗುತ್ತದೆ ಎಂಬ ವಿಶ್ಲೇಷಣೆಗಳು ಹತ್ತಾರು ರೆಕ್ಕೆ ಪುಕ್ಕಗಳೊಂದಿಗೆ ಜನಮನದಲ್ಲಿ ತುಂಬ ತೊಡಗಿದವು. ಇಂತಹ ಸಂದರ್ಭದಲ್ಲಿ ರೈತ ಸಂಘ ತನ್ನ ಬುಡ ಬೇರುಗಳನ್ನಾದರೂ ಉಳಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಒಳಗಾಗಬೇಕಾಯಿತು.

ರೈತ ಸಂಘಕ್ಕೆ ಪ್ರತಿ ಚುನಾವಣೆಗಳು ಸಹ ಕಾರ್ಯಕರ್ತರನ್ನು ಕಳೆದುಕೊಳ್ಳುವ ಜಾತ್ರೆಗಳಾದವು. ಕೆಲವು ಕಡೆಗಳಲ್ಲಂತೂ ಎಲ್ಲ ಪದಾಧಿಕಾರಿಗಳು ಸಹ ಗುಳೆ ಹೋದರು. ಮಂಡ್ಯದ ಬೂದನೂರಿನಂತಹ ಊರುಗಳೆ ಕಾಲಿ ಹೊಡೆಯತೊಡಗಿದಾಗ ರೈತ ಸಂಘ ಚುನಾವಣಾ ರಾಜಕಿಯದತ್ತ ನೋಡಬೇಕಾದ್ದು ಅನಿವಾರ್ಯವಾಗಿ ರೈತ ಸಂಘದ ತತ್ವಾದರ್ಶಗಳ ಎರಕ ಹೊಯ್ದಂತಿದ್ದ ಇದೇ ಕೆ ಬೋರಯ್ಯನವರನ್ನು ಜನತಾಪಕ್ಷದ ಅಭ್ಯರ್ಥಿಯಾಗಿದ್ದ ಶಿವಾನಂದರ ಎದುರು ರೈತ ಸಂಘದ ಅಭ್ಯರ್ಥಿಯನ್ನಾಗಿಸಬೇಕಾದ ಅನಿವಾರ್ಯತೆಯುಂಟಾಯಿತು.

ಬೋರಯ್ಯನವರು ಒಂದು ರೂಪಾಯಿಯನ್ನೂ ಖರ್ಚು ಮಾಡದೆ ಜನತಾ ಪಕ್ಷದ ಅಭ್ಯರ್ಥಿಯ ವಿರುದ್ಧ ಎಂಟು ಸಾವಿರದ ಇನ್ನೂರು ಮತಗಳ ಅಂತರದಿಂದ ಗೆಲುವನ್ನೂ ಪಡೆದು ಬಿಟ್ಟರು. ಚುನಾವಣಾ ವೆಚ್ಚವೆಲ್ಲವನ್ನೂ ಕಾರ್ಯಕರ್ತರೇ ನೋಡಿಕೊಂಡರು. ಕೇವಲ ಹನ್ನೊಂದುವರೆ ಸಾವಿರ ರೂಪಾಯಿಗಳಲ್ಲಿ ಚುನಾವಣೆ ಮುಗಿಯಿತು. ಅದರಲ್ಲೂ ಸಾವಿರದ ಇನ್ನೂರು ರೂಪಾಯಿ ಉಳಿಯಿತಂತೆ. ಕಾರ್ಯಕರ್ತರೆಲ್ಲ ಸೇರಿ ಬೋರಯ್ಯನವರಿಗೆ 1೦80 ರೂಪಾಯಿ ಮೊತ್ತದ ಅದಾಗ ತಾನೆ ಮಾರುಕಟ್ಟೆ ಪ್ರವೇಶಿಸಿದ್ದ ಟೈಟಾನ್ ವಾಚನ್ನೂ ಕೊಡಿಸಿದ್ದರಂತೆ. ಈ ಮೂವತ್ತ ನಾಲ್ಕು ವರ್ಷಗಳಿಂದ ಇದೇ ವಾಚನ್ನು ಕಟ್ಟಿಕೊಂಡು ಹಳೆಯ ನೆನಪುಗಳನ್ನೆಲ್ಲ ಮೆಲುಕು ಹಾಕುತ್ತಾರೆ ಬೋರಯ್ಯನವರು.

ಅಂದು ಬೂದನೂರು ಜಿಲ್ಲಾ ಪರಿಷತ್ತಿಗೆ ನಡೆದ ಚುನಾವಣೆ ಸಣ್ಣದೇ ಇರಬಹುದು. ಆದರೆ ಇಂದು ಬದಲಾದ ಇಕ್ವೇಷನ್ ಗಳ ಸನ್ನಿವೇಶದ ರಾಜಕಾರಣದ ದೃಷ್ಟಿಯಿಂದ ಬಹು ಮಖ್ಯ ಮೆಲುಕು. ಏಕೆಂದರೆ ತರಬೇತಿ ಇಲ್ಲದ ಕಾರ್ಯಕರ್ತರ ಪಡೆಗಳ ಅಭಾವದಿಂದ ನರಳುವ ರಾಜಕೀಯ ಪಕ್ಷಗಳಿಗೆ ಪಾಠವಾಗಲಿ ಎಂಬ ದೃಷ್ಟಿಕೋನ ಈ ಲೇಖನದ ಉದ್ದೇಶ..

ದಿವಂಗತ ಕೆ ಪುಟ್ಟಣ್ಣಯ್ಯನವರ ಪಾಂಡವಪುರದ ಮೊದಲ ವಿಧಾನಸಭಾ ಚುನಾವಣೆ, ಸುನಂದಾ ಜಯರಾಮ್ ರವರ ಎರಡು ಜಿಲ್ಲಾ ಪಂಚಾಯತ್ ಚುನಾವಣೆಗಳನ್ನೂ ಸಹ ತರಬೇತಿಗೊಂಡ ಕಾರ್ಯಕರ್ತರೆ ನಡೆಸಿದ್ದು ಮಾತ್ರವಲ್ಲ, ಪುಟ್ಟಣ್ಣಯ್ಯನವರು ವಿಧಾನಸಭೆ ಪ್ರವೇಶಿಸಿದ್ದ ಮೊದಲ ಬಾರಿಯ ಚುನಾವಣೆಯಲ್ಲಿ ಖರ್ಚಾಗಿ ಉಳಿದಿದ್ದ ಒಂದು ಲಕ್ಷದ ಹಣದಲ್ಲಿ ಪುಟ್ಟಣ್ಣಯ್ಯನವರಿಗೆ ಕಾರೊಂದನ್ನು ಕೊಡಿಸಿದ್ದ ವಿಚಾರವು ಸಹಾ ಕೆ ಬೋರಯ್ಯನವರ ನೆನಪಿನ ಅಂಗಳದಿಂದ ಹೊರಬಂದಿದೆ.

ಇಂದು ಅಮ್ ಆದ್ಮಿ ಪಕ್ಷ ಅಥವಾ ಭಾರತೀಯ ಜನತಾ ಪಕ್ಷ ಇರಬಹುದು ಹೊಸಕಾಲದ ಚುನಾವಣೆಯ ಬಗ್ಗೆ ತಂತ್ರಗಳನ್ನು ಅಳವಡಿಸಿಕೊಂಡು ಸಫಲತೆಯನ್ನು ಸಾಧಿಸುತ್ತಿವೆ. ಆದರೆ ಇಂತಹ ತಂತ್ರಗಳನ್ನು ಕರ್ನಾಟಕ ರಾಜ್ಯ ರೈತ ಸಂಘ ಎಂಭತ್ತು ತೊಂಭತ್ತರ ದಶಕದಲ್ಲೇ ಮಾಡಿ ಯಶಸ್ಸು ಸಾಧಿಸಿದ್ದನ್ನು ಇತಿಹಾಸದಿಂದ ಅಳಿಸಿ ಹಾಕಲು ಸಾದ್ಯವೆ?

‍ಲೇಖಕರು Avadhi

January 12, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

22ನೇ ವರ್ಷಕ್ಕೆ ಕಾಲಿಟ್ಟ ‘ಹೊಸತು’: ನೆಮ್ಮದಿಯ ನಾಳೆಗಾಗಿ ಪ್ರತಿರೋಧದ ಅಲೆಗಳು

22ನೇ ವರ್ಷಕ್ಕೆ ಕಾಲಿಟ್ಟ ‘ಹೊಸತು’: ನೆಮ್ಮದಿಯ ನಾಳೆಗಾಗಿ ಪ್ರತಿರೋಧದ ಅಲೆಗಳು

ಸಿದ್ದನಗೌಡ ಪಾಟೀಲ ಆತ್ಮೀಯ ‘ಹೊಸತು’ ಓದುಗರೆ, ತಮ್ಮ ಸಹಕಾರದಿಂದ ಪತ್ರಿಕೆ 22ನೇ ವರ್ಷಕ್ಕೆ ಕಾಲಿಟ್ಟಿದೆ. ವೈಚಾರಿಕ ನೆಲೆಗಟ್ಟಿನಿಂದ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This