ರೊಟ್ಟಿ ಜಾರಿ…

ಡಾ. ಎಸ್.ಬಿ. ರವಿಕುಮಾರ್ 

ತಿಂಗಳ ಕೊನೆಯ ದಿನವಾದ್ದರಿಂದ  ಪೇಷಂಟ್ ರೆಜಿಸ್ಟರಿನಲ್ಲಿ ನಮೂದಾಗಿರುವ ಔಷಧಿಗಳ ಪ್ರಮಾಣವನ್ನು ಲೆಕ್ಕ ಹಾಕುತ್ತಿದ್ದೆ. ಉಪಯೋಗಿಸಿದ ಔಷಧಿಗಳನುಗುಣವಾಗಿ ದಾಸ್ತಾನು ಪುಸ್ತಕದಲ್ಲಿ ಆ ತಿಂಗಳ ಖರ್ಚು ಹಾಕಬೇಕಿತ್ತು. ಆಗಿನ  ಪ್ರಾಮಾಣಿಕ ಕಾಲದಲ್ಲಿ ಉಪಯೋಗಿಸಿದ ಪ್ರತಿಯೊಂದು ಮಾತ್ರೆಯ. ಪ್ರತಿ ಮಿಲೀ ಇನ್ಜೆಕ್ಷನ್ನಿನ ಲೆಕ್ಕವನ್ನೂ  ಸರಿಯಾಗಿ ಇಟ್ಟಿರಬೇಕೆಂದು  ನಮ್ಮ ಮೇಲಾಧಿಕಾರಿಗಳು ಬಯಸುತ್ತಿದ್ದರು. ಉಪಯೋಗದಲ್ಲಿರುವ ವಯಲಿನಲ್ಲಿ  ಉಳಿಕೆ ಎಷ್ಟಿದೆ ಎಂದು ಅಳೆದು ತಾಳೆ ನೋಡುವ ಮೇಲಾಧಿಕಾರಿಗಳೂ ಇದ್ದರು ! ಹಾಗಾಗಿ ಪ್ರತಿ ತಿಂಗಳ ಕೊನೆಯ ದಿನ ಈ ಸರ್ಕಸ್ ಅನಿವಾರ್ಯವಾಗಿತ್ತು.

ಮಳೆಗಾಲದ ಸಂಜೆ . ನಾವು ಚಿಕಿತ್ಸೆ ನೀಡುವ ಆಸ್ಪತ್ರೆಯ ಹಿಂಭಾಗದ ಜಾಗದಲ್ಲಿ ತುಂಬಾ ಮರಗಳಿದ್ದುದರಿಂದ ಮಳೆ ನಿಂತ ಮೇಲೂ ಮರದ ಹನಿ ನಿಲ್ಲುತ್ತಿರಲಿಲ್ಲ. ಮಳೆ ಬಂದು  ನಿಂತಿದ್ದರೂ ಮರದ ಹನಿಗಳ ಟಪ್ ಟಪ್ ಕೇಳುತ್ತಲೇ ಇತ್ತು.  ಈ ಏಕತಾನದ ಶೃತಿಯ ನಡುವೆ ‘ಸಾ’ ಎಂಬ ದನಿ ಹೊರಗಿನಿಂದ. ನೋಡಿದರೆ ತೆಳ್ಳಗಿನ, ಎರಡು ಮೂರು ದಿನದ ಗಡ್ಡದ, ದಪ್ಪ ಫ್ರೇಮಿನ ಕನ್ನಡಕ ಧರಿಸಿದ್ದ ಮುದುಕರೊಬ್ಬರು ‘ಕುರಿಮರಿ ಸಾ’ ಎಂದರು .

ಪ್ಯೂನ್ ಬಸಪ್ಪ  ಕಾಫಿಗೆ ಹೋಗಿದ್ದುದರಿಂದ ನಾನೇ ಎದ್ದು ಬಂದೆ. ಕುರಿ ಎಲ್ಲೂ ಕಾಣಲಿಲ್ಲ . ‘ಎಲ್ಲಿದೆ ಕುರಿ ?’ ಎಂದೆ ಆಚೀಚೆ ಹುಡುಕುತ್ತ.  ‘ತಂದದೀನಿ ಸಾ ಇಲ್ಲೇ ಐತೆ ಇಗಾ’ ಎನ್ನುತ್ತ ಒಂದು ಬಿದಿರಿನ ಪುಟ್ಟಿಯಲ್ಲಿ ಹೊದಿಸಿದ್ದ ಹಳೆಯ ಸೀರೆಯೊಂದನ್ನು  ಸ್ವಲ್ಪ ಸರಿಸಿದಾಗ  ಕುರಿಮರಿಯ ತಲೆ ಕಾಣಿಸಿತು. ಹೊದಿಸಿದ್ದ ಸೀರೆಯ ತುಂಡನ್ನು ಪೂರ್ತಿ ತೆಗೆದು ನೋಡಿದೆ. 

ಸುಮಾರು ಮೂರ್ನಾಲ್ಕು ತಿಂಗಳ ಕುರಿ ಮರಿ. ಪೀಚಲು ದೇಹ. ಕುತ್ತಿಗೆಯ ಬಳಿ ಅನೇಕ ಕಡೆ ಚರ್ಮ ಹರಿದಿದೆ.  ಕೆಳಗೆ ಎಡಗಡೆಯ ಮುಂಗಾಲಿನ ಬಳಿ ಮಾಂಸಖಂಡ ಹರಿದು ಚರ್ಮ ಜೋತುಬಿದ್ದಿದೆ. ‘ಹೇಗಾಯಿತು ಯಜಮಾನ್ರೇ?’ ಕೇಳಿದೆ. ‘ನಾಯಿ ಸಾ ನೋಡ್ ನೋಡ್ತಿದ್ದಂಗೆ    ಕಚ್ಚಿಬಿಡಾದಾ ? ಭರ್ತಿ ಆಗ್ಯಾವೆ ಕಣ್ರೀ ನಾಯಿಗಳು ನಮ್ಮೂರಾಗೆ ಇತ್ತೀಚಿಗೆ’ ಎಂದರು. ಅಷ್ಟರಲ್ಲೇ ಬಂದ ಬಸಪ್ಪನನ್ನು ಚಿಕಿತ್ಸೆಗೆ ಸಲಕರಣೆಗಳನ್ನು ತರಲು ಸೂಚಿಸಿ ಇದನ್ನು ಯಾವ ರೀತಿ ಚಿಕಿತ್ಸೆ ಮಾಡುವುದೆಂದು ಯೋಚಿಸುತ್ತ ನಿಂತೆ. ಅಲ್ಲೊಂದು ಇಲ್ಲೊಂದು ಮರದ ಹನಿ ಬೀಳುತ್ತಿತ್ತು.

‘ಎಂಥ ನಾಯಿ ಯಜಮಾನ್ರೇ ಸಾಧಾರಣ ನಾಯಿನೋ ಹುಚ್ಚು ನಾಯಿನೋ?’ ನನ್ನ ಪ್ರಶ್ನೆಗೆ ‘ಅದೇ ನಮ್ ಪೈಲ್ವಾನರ ಶಂಭಣ್ಣರ ನಾಯಿ. ಸಾಕಿರದೇಯ’  ಎಂಬ ನಿರಾಸಕ್ತಿಯ ಉತ್ತರ.  ಸಾಕಿರುವುದಾದ ಮಾತ್ರಕ್ಕೆ ಹುಚ್ಚು ಹಿಡಿಯಬಾರದೆಂದೇನೂ ಇಲ್ಲವಲ್ಲ ?  ‘ಅದೇನಾದರೂ ಜೊಲ್ಲು ಸುರಿಸುತ್ತಿತ್ತಾ ?’ ನನ್ನ ದನಿಯಲ್ಲಿನ ಕಾತರವನ್ನು ಗ್ರಹಿಸಿದರೇನೋ.   ‘ಏ ಇಲ್ಲ ತಗಳ್ರೀ ಅಂಥದ್ದೇನೂ ಇಲ್ಲ’ ಎಂದು ಭರವಸೆ ನೀಡಿದರು.

‘ಅಕಸ್ಮಾತ್ ಹುಚ್ಚು ನಾಯಿ ಆದರೆ ಹೊಲಿಗೆ ಹಾಕದೆ ಹಾಗೆಯೇ ಚಿಕಿತ್ಸೆ ನೀಡುವುದು ಉತ್ತಮ.  ಆದರೆ ಆಗಿರುವ ಗಾಯದ ಪ್ರಮಾಣ ನೋಡಿದರೆ ಹಾಗೆಯೇ ಮಾಯಬೇಕು ಎಂದರೆ ಕನಿಷ್ಟ ತಿಂಗಳಾದರೂ ಬೇಕು. ಅಲ್ಲಿಯವರೆಗೆ ಈ ಯಜಮಾನರು ಗಾಯವನ್ನು ನೊಣ ಕೂರದಂತೆ, ಗಾಯದಲ್ಲಿ ಹುಳುಗಳಾಗದಂತೆ ನೋಡಿಕೊಳ್ಳಬಲ್ಲರೇ? ಮೂರು ನಾಲ್ಕು ಕಡೆ ಬೇರೆ ಗಾಯ ಆಗಿದೆ’ ಎಂದು ಯೋಚಿಸುತ್ತಿದ್ದಾಗ ಬಸಪ್ಪ ಗಾಯ ತೊಳೆಯಲು ಬೇಕಾದ ಸಲಕರಣೆ ತೆಗೆದುಕೊಂಡು ಬಂದು ಗಾಯ ತೊಳೆಯಲೇ ಎಂಬಂತೆ  ಅನುಮತಿಗಾಗಿ ನನ್ನ ಕಡೆನೋಡಿದ. 

ವಾಶ್ ಮಾಡಿ ಕ್ಲೀನ್ ಮಾಡು ಹಂಗೇ ಶೇವಿಂಗ್ ಕೂಡಾ ಮಾಡಬೇಕು.  ನಾಯಿ ಎಂತದು  ಶಂಭಣ್ಣರದಂತೆ. ಅದಕ್ಕೇನೂ ಹುಚ್ಚು ಹಿಡಿದಿಲ್ಲಾ ತಾನೇ ?’ ಬಸಪ್ಪನಿಗೆ ಸಾಮಾನ್ಯವಾಗಿ ಇಂತ ಎಲ್ಲಾ  ಮಾಹಿತಿ ಇರುತ್ತಿತ್ತು. ‘ಒಳ್ಳೆ ನಾಯಿನೇ ಸಾ. ಆದರೆ ಅದಕ್ಕೆ ಮನೆ ಮುಂದೆ ಹಾದು ಹೋಗೋರ್ನೆಲ್ಲಾ ಕಚ್ಚಾಕೆ ಓಡಿಸ್ಕಂಡು ಬರೋ ಹುಚ್ಚಿದೆ’   ಎಂದು ನನ್ನ ದಿಗಿಲನ್ನು ಹೆಚ್ಚಿಸಿದ. “ಅಂಥ ಹುಚ್ಚಲ್ಲೋ ಮಾರಾಯ ರೇಬೀಸ್ ಏನಾದರೂ ಇದೆಯಾ ಅಂತ ನಾನು ಕೇಳಿದ್ದು”  ಒಂದು ಕ್ಷಣ ಯೋಚಿಸಿ ‘ಆದರೂ ಹೆಂಗೆ ಹೇಳಾದು ಸಾ. ವೈರಸ್ ಒಳಗೆ ಸೇರ್ಕೆಂಡು ಇನ್ನೂ ಸಿಂಪ್ಟಂಮ್ಸ್ ಕಾಣಿಸಿಲ್ಲಪಾ   ಅಂದರೆ ?’  ಎಂದು  ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ನನ್ನನ್ನೇ ಪ್ರಶ್ನಿಸಿದ. 

ಕಳೆದ ವಾರವಷ್ಟೇ ನಾನು ಕಾಂಪೌಂಡರ್ ನಾಯ್ಕ ಹಾಗೂ ಬಸಪ್ಪ ಇಬ್ಬರಿಗೂ ಪೇಪರಿನಲ್ಲಿ ಬಂದಿದ್ದ, ಯಾವುದೇ ಚಿನ್ಹೆ ತೋರಿಸದ ನಾಯಿಯ ಜೊಲ್ಲು ತಾಗಿ ಎಷ್ಟೋ ದಿನಗಳ ನಂತರ ಕಾಯಿಲೆ ಕಾಣಿಸಿರುವ ವಿಚಾರದ ಬಗ್ಗೆ ಮಾತನಾಡುತ್ತಾ ರೇಬೀಸ್ ಕಾಯಿಲೆಯ ಬಗ್ಗೆ ವಿವರವಾಗಿ ಮಾಹಿತಿ ನೀಡಿದ್ದೆ. ನೀವು ನೀಡಿರುವ ಮಾಹಿತಿಯನ್ನು ನಾನು ಮರೆತಿಲ್ಲ ಎನ್ನುವಂತೆ  ಸಿಂಪ್ಟಂಮ್ಸ್ ಕಾಣಿಸುವ ಮುಂಚೆಯೂ ವೈರಸ್ ಇರಬಹುದು ಎನ್ನುವ ತನ್ನ ಜ್ಞಾನವನ್ನು ಹೆಮ್ಮೆಯಿಂದ ಪ್ರದರ್ಶಿಸಿದ್ದ.

ಪುಟ್ಟ ಗ್ರಾಮವಾದ ಅಲ್ಲಿ ಯಾವುದೇ ನಾಯಿಗೆ ಹುಚ್ಚು ಹಿಡಿದರೆ ತಕ್ಷಣವೇ ನಮ್ಮ ಆಸ್ಪತ್ರೆಗೆ ಸುದ್ದಿ ಬರುತ್ತಿತ್ತು. ಅಲ್ಲದೆ ಇದು ರೇಬಿಸ್ ಸೀಸನ್ನಲ್ಲ. ಮೂರು ನಾಲ್ಕು ಕಡೆ ಚಿಕ್ಕ ಚಿಕ್ಕ ಗಾಯಗಳು ಹಾಗೂ ಒಂದು ಕಡೆ ತುಂಬಾ ದೊಡ್ಡ ಗಾಯವಾಗಿದ್ದುದರಿಂದ ಹೊಲಿಗೆಯಿಲ್ಲದೆ ಮಾಯುವುದು  ಸಾಧ್ಯವಿರಲಿಲ್ಲ.  ಹಾಗಾಗಿ ಅದು ಹುಚ್ಚು ನಾಯಿ ಇರಲಾರದು ಎಂಬ ಭರವಸೆಯಿಂದ  ಹೊಲಿಗೆ ಹಾಕಲು ನಿರ್ಧರಿಸಿದೆ.

ಇನ್ಸ್ಪೆಕ್ಟರ್ ನಾಯ್ಕ ದಾವಣಗೆರೆಗೆ ತಿಂಗಳ ಪ್ರೊಗ್ರೆಸ್ ರಿಪೋರ್ಟ  ಕೊಟ್ಟುಬರಲು ಹೋಗಿದ್ದರಿಂದ ಬಸಪ್ಪನಿಗೆ ಹೊಲಿಗೆ ಹಾಕಲು ಬೇಕಾದ ಸಲಕರಣೆಗಳನ್ನು ತರಲು ತಿಳಿಸಿದೆ. ಚರ್ಮ ಜೋತುಬಿದ್ದ ಕಡೆ ಗಾಯ ಆಳವಾಗಿ ಮಾಂಸ ಖಂಡ ಹರಿದಿದ್ದರಿಂದ ಮೊದಲು ಒಳಗೆ ಕರಗುವ ದಾರದಲ್ಲೇ ಹೊಲಿಗೆ ಹಾಕಬೇಕಿತ್ತು. ಒಳಗೆ ಬಂದು ಬಿರುವಿನಲ್ಲಿದ್ದ ಕ್ಯಾಟ್ ಗಟ್ ತೆಗೆದುಕೊಂಡು ಬಂದು ಬಸಪ್ಪ ಗಾಯವನ್ನು ತೊಳೆದು ಸ್ವಚ್ಛಗೊಳಿಸುವವರೆಗೂ ಕಾಯುತ್ತ ನಿಂತೆ. ಆಗ ಒಂದು ವೇಳೆ ನಾಯಿ ಜೊಲ್ಲಿನಲ್ಲಿ ವೈರಸ್ ಇದ್ದು, ನಾಳೆ ನಾಡಿದು ಅದು ಚಿನ್ಹೆ ತೋರಿಸಲು ಪ್ರಾರಂಭಿಸಿಬಿಟ್ಟರೆ ಎನ್ನುವ ಗುಮಾನಿ ಬಂತು. ಇರಲಾರದು .

ನಾಯಿಗಳ ಬ್ರೀಡಿಂಗ್ ಸಮಯದಲ್ಲಿ  ಬೇರೆ ಗ್ರಾಮಗಳಿಂದಲೂ  ನಾಯಿಗಳು ಆಚೀಚೆ ತಿರುಗಾಡಲು ಪ್ರಾರಂಭಿüಸಿದಾಗ ಸಾಮಾನ್ಯವಾಗಿ ರೇಬೀಸ್ ಕಾಯಿಲೆ ಕಾಣಿಸಿಕೊಳ್ಳುವುದು ಹೆಚ್ಚು. ಇದು ಆ ಸೀಸನ್ ಸಹ ಅಲ್ಲ. ಆದರೂ ನನ್ನ ಹುಷಾರಿ ನನಗೆ ಇರಬೇಕಲ್ಲ. ಒಂದು ವೇಳೆ ವೈರಸ್ ಇದ್ದು,  ಎಷ್ಟೇ ಎಚ್ಚರಿಕೆಯಿಂದ ಹೊಲಿಗೆ ಹಾಕುತ್ತೇನೆ ಎಂದರೂ ಅಕಸ್ಮಾತ್ ಕುರಿ ಮರಿ ಅಲ್ಲಾಡಿ ಸೂಜಿ ಒಮ್ಮೆ ನನ್ನ ಕೈಗೆ ತಾಗಿದರೆ ಸಾಕಲ್ಲ ವೈರಸ್ ನನ್ನ ದೇಹವನ್ನೂ ಸೇರಲು ? ಒಮ್ಮೆ ಚಿನ್ಹೆ ಕಾಣಿಸಲು ತೊಡಗಿದರೆ ಮುಗಿಯಿತು.

ಅದು ಪ್ರಾಣಿಯಾಗಿರಲಿ ಅಥವಾ ಮನುಷ್ಯನಾಗಿರಲಿ ಅದಕ್ಕೆ ಚಿಕಿತ್ಸೆಯಿಲ್ಲ. ವೈದ್ಯಕೀಯ ಜಗತ್ತಿನಲ್ಲಿ  ಚಿಕಿತ್ಸಾ ವಿಧಾನಗಳು  ಎಷ್ಟೇ ಮುಂದುವರೆದಿದ್ದರೂ ಸಾಧಾರಣ ವೈರಸ್ಸಿಗೆ ಇಂದಿಗೂ ಪರಿಣಾಮಕಾರಿ ಚಿಕಿತ್ಸೆ ಇಲ್ಲವಲ್ಲ ಎಂಬ ಆತಂಕದ ನಡುವೆಯೂ  ರೇಬಿಸ್ ವೈರಸ್ ಅತ್ಯಂತ ಸೂಕ್ಷ್ಮವಾದುದು. ಕೇವಲ ಸೋಪು ಹಾಕಿಕೊಂಡು ತೊಳೆದುಕೊಂಡರೂ, ಸ್ವಲ್ಪ ಬಿಸಿ ತಾಕಿದರೂ  ಸಾಯುತ್ತದೆ ಎಂಬ ಮಾಹಿತಿ ಜ್ಞಾಪಕಕ್ಕೆ ಬಂತು.  ಹಾಗೆಯೇ ಬಿಟ್ಟರೆ  ಗಾಯದಲ್ಲಿ ಹುಳುಗಳಾಗಿ ಮರಿ ಬದುಕುವುದು ಕಷ್ಟ  ಎನಿಸಿತು. ಎಚ್ಚರಿಕೆಯಿಂದ ಹೊಲಿಗೆ ಹಾಕಿ ಆನಂತರ ಸೋಪಿನಿಂದ ಬಿಸಿ ನೀರಿನಲ್ಲಿ ಕೈತೊಳೆದುಕೊಂಡರಾಯಿತು ಎಂದು ನಿರ್ಧರಿಸಿದೆ.  ಸ್ವಚ್ಛಗೊಳಿಸಿದ ಬಸಪ್ಪ  ‘ ಬರ್ರಿ ಸಾ’ ಎಂದು ಕರೆದ.

 ಆಪರೇಷನ್ನಿಗೆ  ನಾವೇ ನೇರವಾಗಿ ಹಾಕಿರುವ ಇನ್ಸಿಷನ್  ಹೊಲಿಯುವುದು ಸುಲಭ. ಆದರೆ  ಯರ್ರಾಬಿರ್ರಿ ಹರಿದಿರುವ ಚರ್ಮವನ್ನು  ಹೊಲಿಯುವುದು ಕಷ್ಟ.  ಅಲ್ಲಲ್ಲಿ ಸಣ್ಣ ಸಣ್ಣ ಗಾಯಗಳು ಬೇರೆ ಇದ್ದವಲ್ಲ. ಹೊಲಿಗೆ ಎಂದರೆ ಏನೋ ಒಂದೆರಡು ಹೊಲಿಗೆ ಹಾಕುತ್ತಾರೆ ಎಂದು ಕೊಂಡಿದ್ದ ಯಜಮಾನರಿಗೆ ನಾನು  ತಲ್ಲೀನನಾಗಿ ಹೊಲಿಗೆ ಹಾಕುತ್ತ ತುಂಬಾ ಸಮಯ ತೆಗೆದುಕೊಳ್ಳುತ್ತಿರುವುದಕ್ಕೋ,   ಕುಕ್ಕರುಗಾಲಿನಲ್ಲಿ  ಕುಳಿತು ಬೇಸರ ಬರತೊಡಗಿದ್ದಕ್ಕೋ, ಅಥವಾ ವಯಸ್ಸಾಗಿದ್ದುದರಿಂದ ಕುಳಿತುಕೊಳ್ಳಲು ತೊಂದರೆಯಾಗಿದ್ದಕ್ಕೋ ಇದೆಲ್ಲಾ ರಗಳೆ ಯಾಕೆ ಬೇಕಿತ್ತು ಎನಿಸಿರಬೇಕು. ‘ಹೇಳ್ದೇ ಕಣ್ರೀ ನಾಳೆ ಅತ್ಲಾಗೆ ಮಸಾಲೆ ಅರದು ಬಿಡಾಣ ಅಂತ. ಕೇಳಲಿಲ್ಲ ಮನ್ಯಾಗೆ’ ಎಂದು ಸೊಗಸಾದ ಭೋಜನ ತಪ್ಪಿದುದಕ್ಕೆ ಮನೆಯವರನ್ನು ದೂರಿ ಬೇಸರಿಸಿಕೊಂಡರು.

 ಸಣ್ಣ ಕುರಿಮರಿಯನ್ನು ಉಳಿಸಲು ಶಸ್ತ್ರಚಿಕಿತ್ಸೆಯೋಪಾದಿಯಲ್ಲಿ ಕೆಲಸ ಮಾಡುತ್ತಿದ್ದರೆ, ಅದೂ ನಾಯಿ ಕಡಿದ ಕೇಸು,  ನನಗೆ ಸಿಕ್ಕ ಶಭಾಸ್ಗಿರಿ ಇಂತದ್ದು ! ಏನು ಮಾಡುವುದು ? ಎಷ್ಟೋ ಬಾರಿ ನಮ್ಮ ಆಸ್ಪತ್ರೆಯ ಸಿಬ್ಬಂದಿಗೆ ಇರುವಷ್ಟು ಕಾಳಜಿ ಕೂಡಾ ಪ್ರಾಣಿಯ ಮಾಲೀಕರಿಗೆ ಇರುವುದಿಲ್ಲ. ಹಾಗಂತ ನಾವು ನಿರ್ಲಕ್ಷಿಸಲಾದೀತೇ ?  ನಾಳೆ ದಸರಾಗೆ ಕಡಿಯುವ ಪ್ರಾಣಿಯಾದರೂ ನಮ್ಮಲ್ಲಿಗೆ ಬಂದಾಗ ಅದು ರೋಗಿಯೇ ತಾನೆ ?  ಹೇಗೂ ನಾಳೆ ಕಡಿಯುತ್ತಾರೆಂದು ನಿರ್ಲಕ್ಷಿಸದೇ ಅನೇಕ ಬಾರಿ ಚಿಕಿತ್ಸೆ ನೀಡಿರುವುದುಂಟು. ನನ್ನ ಕೆಲಸ ನನಗೆ. ಅದನ್ನು ಇಟ್ಟುಕೊಳ್ಳುತ್ತಾರೋ ನಾಳೆಯೇ ಕಡಿಯುತ್ತಾರೋ ಎಂಬ  ವಿಚಾರ ನನಗೆ ಸಂಬಂಧಿಸಿದ್ದಲ್ಲವಲ್ಲ ?

ಹೊಲಿಗೆ ಮುಗಿಸಿ ಎದ್ದು ನಿಂತೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಕುಕ್ಕರುಗಾಲಿನಲ್ಲಿ ಕುಳಿತಿದ್ದುದರಿಂದ ಕಾಲುಗಳು ಜೋಮು ಹಿಡಿದಿದ್ದವು. ನಿಧಾನವಾಗಿ ಕೆಸರಿನಲ್ಲಿ ಕಾಲು ಜಾರದಂತೆ ಅತ್ತಿಂದಿತ್ತ ಒಂದೆರಡು ಹೆಜ್ಜೆ ಹಾಕುತ್ತ, ಬಸಪ್ಪನಿಗೆ ಇಂಜೆಕ್ಷನ್ ತರಲು ಹೇಳಿದೆ.  ಮೇಲೆ ಏಳಲು ಪ್ರಯತ್ನಿಸುತ್ತಿದ್ದ ಯಜಮಾನರಿಗೆ ‘ಒಂದು ನಿಮಿಷ ಇನ್ಜೆಕ್ಷನ್ ಕೊಟ್ಟುಬಿಡುತ್ತೇನೆ’ ಎಂದು ತಡೆದು, ಬಸಪ್ಪನಿಗೆ  ಬೇಗ ತರಲು ಅವಸರಿಸಿ ನಂಜಾಗದಂತೆ ಚುಚ್ಚುಮದ್ದು ಕೊಟ್ಟು ಒಳಗೆ ಬಂದೆ.

ಕೈತೊಳೆದು ಟವಲಿನಲ್ಲಿ ಒರೆಸಿಕೊಳ್ಳುತ್ತಿದ್ದೆನಷ್ಟೇ. ಧೊಪ್ ಎಂಬ ಸದ್ದಾಯಿತು. ಏನಿರಬಹುದು ಎಂದುಕೊಳ್ಳುವಷ್ಟರಲ್ಲೇ ಬಸಪ್ಪ ‘ನಿಧಾನ ಮಾರಾಯ ಕೆಸರೈತಿ ನೋಡ್ಕಂಡು   ಕಾಲಿಡಾದಲ್ಲ?’ ಎನ್ನುವುದು ಕೇಳಿಸಿತು.  ಹೊರಗೆ ಬಂದೆ. ಯಜಮಾನರು  ಕೆಳಗೆ ಬಿದ್ದುಬಿಟ್ಟಿದ್ದಾರೆ. ಮೊದಲೇ ವಯಸ್ಸಾದವರು ಏನಾದರೂ ಆದರೆ ಗತಿ ಏನು  ಎಂಬ ಆತಂಕ.  ಬಸಪ್ಪ ಕೈಕೊಟ್ಟು ಎಬ್ಬಿಸುತ್ತಿದ್ದ.  ನಿಧಾನವಾಗಿ ಯಜಮಾನರು ಎದ್ದು ನಿಂತ ಮೇಲೆ ಅವರಿಗೇನೂ ಆಗಿಲ್ಲವೆಂದು ಖಾತ್ರಿಯಾಗಿ ಸಮಾಧಾನವಾಯಿತು. 

ಪುಟ್ಟಿಯನ್ನು ತಲೆಯ ಮೇಲಿಟ್ಟುಕೊಂಡು ಎದ್ದ ಯಜಮಾನರು ಹೆಜ್ಜೆ ಇಡುವಾಗ ಕೆಸರಿದ್ದಿದ್ದಕ್ಕೋ ಅಥವಾ ಕಾಲು ಜೋಮು ಹಿಡಿದದ್ದಕ್ಕೋ ಬಿದ್ದುಬಿಟ್ಟಿದ್ದಾರೆ. ಸಧ್ಯ ಏನೂ ಆಗಲಿಲ್ಲವಲ್ಲ ಎಂದು ನಿಟ್ಟುಸಿರು ಬಿಡುವಾಗ  ಎದ್ದುನಿಂತು ಸುಧಾರಿಸಿಕೊಂಡ ಯಜಮಾನರು ಆಚೆ ಈಚೆ ಹುಡುಕುವುದನ್ನು ಕಂಡ ಮೇಲೇ ನಮಗೆ ಕುರಿಮರಿಯ ಜ್ಞಾಪಕವಾಗಿದ್ದು. ಪುಟ್ಟಿ ಏಳೆಂಟು ಅಡಿ ದೂರದ ಗೋಡೆಯ ಬಳಿ ಕೆಳಗೆ ಬೋರಲು ಬಿದ್ದಿತ್ತು.  ಬಸಪ್ಪ ತಕ್ಷಣ  ಹೋಗಿ ಪುಟ್ಟಿಯ ಕೆಳಗಿದ್ದ  ಕುರಿಮರಿಯನ್ನು  ಮತ್ತೆ ಪುಟ್ಟಿಯಲ್ಲಿ  ನಿಧಾನವಾಗಿ ಮಲಗಿಸಿ ‘ಹುಷಾರು ಯಜಮಾನ’ ಎಂದು ಹೇಳುತ್ತಾ ಎತ್ತಿ ಯಜಮಾನನ ತಲೆಯ ಮೇಲೆ ಇಡುವಾಗ ಯಾಕೋ ಅನುಮಾನ ಬಂದು ‘ತಡಿ ಒಂದು ನಿಮಿಷ’ ಎಂದು ಕೆಳಗೆ ಇಳಿಸಿದ.

‘ಸಾ  ಬರ್ರಿ ಇಲ್ಲಿ’ ಎಂದು ನನ್ನನ್ನು ಕೂಗಿದ. ಅವನ ದನಿಯಲ್ಲಿನ ಆತಂಕವೇ ಏನಾಗಿರಬಹುದೆಂದು ಹೇಳಿತು.  ಹತ್ತಿರ ಹೋಗಿ  ಕಣ್ಣಿನ ರೆಪ್ಪೆ ಅಗಲಿಸಿ ನೋಡಿದೆ. ಬಿದ್ದ ರಭಸಕ್ಕೆ ಗೋಡೆಗೆ ಅಪ್ಪಳಿಸಿದಂತಾಗಿ ಕುರಿಮರಿ ಪ್ರಾಣಬಿಟ್ಟಿದೆ ! ಎದೆಯನ್ನು ಒತ್ತುತ್ತಾ ಮತ್ತೆ ಮರಿ ಉಸಿರೆಳೆದುಕೊಳ್ಳವಂತೆ ಮಾಡಿದ ನಮ್ಮ ಪ್ರಯತ್ನ ಫಲಕೊಡಲಿಲ್ಲ. ರೇಬೀಸ್ ಬಗ್ಗೆ ಅನುಮಾನವಿದ್ದರೂ ಧೈರ್ಯ ಮಾಡಿ  ಅರ್ಧಗಂಟೆಗೂ ಹೆಚ್ಚುಕಾಲ ಕುಕ್ಕರುಗಾಲಿನಲ್ಲಿ ಕುಳಿತು ಮರಿಯನ್ನು ಉಳಿಸಲು  ಮಾಡಿದ ಚಿಕಿತ್ಸೆ ಕ್ಷಣಮಾತ್ರದಲ್ಲಿ ವ್ಯರ್ಥವಾಗಿಬಿಟ್ಟಿತು. 

ಛೇ ಎಂಥ ಕೆಲಸವಾಯಿತು.  ಕನಿಷ್ಟ ಸಣ್ಣ ಪ್ರಾಣಿಗಳ ಚಿಕಿತ್ಸೆಗಾದರೂ ಒಂದು ಟೇಬಲ್  ಇಲ್ಲದ  ವ್ಯವಸ್ಥೆ ಬಗ್ಗೆ ಬೇಸರವಾಗಿ ಅಸಹಾಯಕತೆಯಿಂದ  ಖಿನ್ನನಾದೆ.  ನನಗೇ ಹೀಗಾಗಿರುವಾಗ ಇನ್ನು  ಅಷ್ಟು ಕಕ್ಕುಲಾತಿಯಿಂದ ಆಸ್ಪತ್ರೆಗೆ ತಂದು ಚಿಕಿತ್ಸೆ ಕೊಡಿಸಿದ ಯಜಮಾನರಿಗೆ ಎಷ್ಟು ಬೇಸರವಾಗಿರಬಹುದು  ಎಂದು   ವಾರೆನೋಟದಿಂದ ಅವರ ಮುಖ ನೋಡಿದೆ.  ಅವರ ಮುಖವರಳಿ    ಕಣ್ಣುಗಳು  ವಿಶೇಷ ಕಾಂತಿಯಿಂದ ಹೊಳೆಯುತ್ತಿದ್ದವು. !     

                                                                                                

‍ಲೇಖಕರು Avadhi

September 26, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ವಿಫಲ ಪ್ರೇಮಕ್ಕೆ ಐದು ಉದಾಹರಣೆಗಳು

ವಿಫಲ ಪ್ರೇಮಕ್ಕೆ ಐದು ಉದಾಹರಣೆಗಳು

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ...

೧ ಪ್ರತಿಕ್ರಿಯೆ

  1. ಲಲಿತಾ ಸಿದ್ಧಬಸವಯ್ಯ

    ಇದಕ್ಕೆ ನಗಬೇಕೋ ಅಳಬೇಕೋ ಗೊತ್ತಾಗಲಿಲ್ಲ. ಛೇ ಪಶುವೈದ್ಯರ ಬದುಕೇ ಅನಿಸಿತು. ಪಶುವೈದ್ಯ ಇಲಾಖೆಗೆ ಮೀಸಲಿಟ್ಟ ಫಂಡ್ ಕಡಿಮೆಯಿರುವುದಿಲ್ಲ. ಒಂದು ಕ್ಲಿನಿಕಲ್ ಟೇಬಲ್ ಇಲ್ಲದ ದುಸ್ಥಿತಿಯಲ್ಲಿ‌
    ವೈದ್ಯರು ಕೆಲಸ ಮಾಡುವ ಮಟ್ಟಕ್ಕೆ ಇಲಾಖೆಯನ್ನಿಳಿಸಿದ್ದಾರೆ ಎನ್ನುವುದೇ ಆದಲ್ಲಿ ಅದಕ್ಕಾಗಿ ಪ್ರತ್ಯೇಕ ಇಲಾಖೆ ಇರುವುದೇ ದಂಡ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: