ರೋಗವೆಂಬ ರೂಪಕ

 lankeshcolour.jpg

 

 

 

 

 

 

ನಟರಾಜ್ ಹುಳಿಯಾರ್

ಲಂಕೇಶರು ಸಮಾಜದ ಕಾಯಿಲೆಗಳನ್ನು ತನ್ನೊಳಗೆ ಬಿಟ್ಟುಕೊಂಡು ನವೆದ ಲೇಖಕ ಕೂಡ. ಸೂಸನ್ ಸೊಂಟಾಗ್ ಎಂಬ ವಿಮರ್ಶಕಿ ಜಗತ್ತಿನ ಸಾಹಿತ್ಯದಲ್ಲಿ ರೋಗವು ರೂಪಕವಾಗುವುದನ್ನು ಚರ್ಚಿಸುತ್ತಾಳೆ. ಲಂಕೇಶರ ಕೃತಿಗಳಲ್ಲಿ ಇದು ಆಗಿದೆ. ಕೆಲ ಲೇಖಕರು ರೋಗಗಳನ್ನು ರೂಪಕಗಳನ್ನಾಗಿ ಮಾಡಿ ಆನಂದದಿಂದ ಇರಬಲ್ಲರು. ಆದರೆ ಸೂಕ್ಷ್ಮವಾದ ವ್ಯಕ್ತಿಗೆ ಅಥವಾ ಲೇಖಕನಿಗೆ ತನ್ನ ಸ್ವಂತ ದುಃಖಕ್ಕೂ ಸಮಾಜದ ದುಃಖಕ್ಕೂ ಇರುವ ಅಂತರ ಕಡಿಮೆಯಾಗುತ್ತಾ ಬರುತ್ತದೆ. ನೈಜೀರಿಯಾದ ಲೇಖಕ ವೋಲೆ ಷೋಯಿಂಕಾನ “ದಿ ಸ್ಟ್ರಾಂಗ್ ಬ್ರೀಡ್” ನಾಟಕದಲ್ಲಿ ಜವಾಬ್ದಾರಿಯುತ ವ್ಯಕ್ತಿಯೊಬ್ಬ ಸಮಾಜದ ಪಾಪವಾಹಕನಾಗಿ ಕೆಲಸ ಮಾಡಬೇಕಾಗಿ ಬರುವುದನ್ನು ಕುರಿತ ಒಂದು ರೂಪಕವಿದೆ. ಈ ರೂಪಕ ಆಫ್ರಿಕಾದ ಯೊರೂಬಾ ಬುಡಕಟ್ಟಿನ ಆಚರಣೆಯೊಂದನ್ನು ಆಧರಿಸಿದೆ. ಈ ಆಚರಣೆಯ ಪ್ರಕಾರ, ಯೊರೂಬಾ ಬುಡಕಟ್ಟು ತನ್ನ ಪಾಪಗಳನ್ನು ಹೊತ್ತು ಸಾಗಿಸಲು ಪ್ರತಿವರ್ಷ ಯಾರನ್ನಾದರೂ ಹುಡುಕುತ್ತಿರುತ್ತದೆ. ಆ ಹುಡುಕಾಟದಲ್ಲಿ ಸಿಕ್ಕವನು ಆ ವರ್ಷದ ಬಲಿ. ಈ ಆಚರಣೆಯನ್ನು ಚರ್ಚಿಸುತ್ತಾ ಷೊಯಿಂಕಾ, “ಲೇಖಕ ಕೂಡ ಸಮಾಜದ ದುಃಖ ಹಾಗೂ ಪಾಪಗಳನ್ನು ಹೊರಬೇಕಾಗುತ್ತದೆ” ಎನ್ನುತ್ತಾನೆ. ಲಂಕೇಶ್ ಕನ್ನಡದಲ್ಲಿ ಹಲವು ದಶಕಗಳ ಕಾಲ ಅಂಥ ಕೆಲಸ ಮಾಡಿದ ಲೇಖಕ; ಭೀಕರ ಸತ್ಯಗಳನ್ನು ಕಾಣಿಸುತ್ತಾ ನವೆದ ಲೇಖಕ.

ಲಂಕೇಶರು ಅನುವಾದಿಸಿದ “ದೊರೆ ಈಡಿಪಸ್” ನಾಟಕದಲ್ಲಿಈಡಿಪಸ್ ಎದುರಿಗೆ ಸತ್ಯ ಹೇಳಲು ಒಲ್ಲದ ಕಾಲಜ್ಞಾನಿ ಟೈರೀಷಿಯಸ್ ಅದನ್ನು ನುಂಗಿಕೊಳ್ಳಲೆತ್ನಿಸುತ್ತಾನೆ. ಈಡಿಪಸ್ ಮತ್ತೆ ಮತ್ತೆ ಒತ್ತಾಯಿಸಿದಾಗ, ಅಂಧ ಟೈರೀಷಿಯಸ್ ಹೇಳುತ್ತಾನೆ: “ನಾನು ಹೇಳುವುದಿಲ್ಲ. ಈಗ ಅದು ನನ್ನ ದುರಂತ; ಹೇಳಿದ ಮೇಲೆ ನಿನ್ನದು.” ಇದು ನಿಜವಾದ ಕಲಾವಿದ ಅಥವಾ ಲೇಖಕನೊಬ್ಬನ ಬಾಯಿಂದ ಹೊರಬಿದ್ದ ಮಾತಿನಂತೆಯೂ ಕೇಳಿಸುತ್ತದೆ. ತನ್ನೊಳಗೇ ದುರಂತ ಸತ್ಯವನ್ನು ಇಟ್ಟುಕೊಂಡು ಬೇಯುವ ಲೇಖಕನ ದುರಂತ ಅವನು ಅದನ್ನು ಬರಹಕ್ಕಿಳಿಸಿದ ನಂತರ ಓದುಗನೊಳಗೆ ಬೆಳೆಯುತ್ತದೆ. ಹಾಗೆ ಬೆಳೆಯುತ್ತಾ ಅದು ಲೇಖಕ ಹಾಗೂ ಓದುಗರಿಬ್ಬರ ದುರಂತವನ್ನೂ, ಆ ಮೂಲಕ ಸಮಾಜದ ದುರಂತವನ್ನೂ ಧ್ವನಿಸುವ ರೀತಿಯನ್ನು ಟೈರೀಷಿಯಸ್ ಮಾತು ಸೂಚಿಸುತ್ತದೆ. ಸತ್ಯ ಹೇಳುವಂತೆ ಈಡಿಪಸ್ ಮತ್ತೆ ಒತ್ತಾಯ ಮಾಡಿದಾಗ, ಟೈರೀಷಿಯಸ್ “ನನ್ನನ್ನಾಗಲೀ ನಿನ್ನನ್ನಾಗಲೀ ಹಿಂಸಿಸಲು ಇಷ್ಟವಿಲ್ಲ” ಎನ್ನುತ್ತಾನೆ. ಸತ್ಯ ಹೇಳುವುದು, ಇನ್ನೊಬ್ಬನನ್ನು ಬೆಚ್ಚಿಸುವ ದುರಂತ ಸತ್ಯವನ್ನು ಹೇಳುವುದು ಎಂಥ ಯಾತನೆಯ ಕೆಲಸವೆಂಬುದು ಟೈರೀಷಿಯಸ್ ಗೆ ಗೊತ್ತಿತ್ತು. ಈ ಹಿನ್ನೆಲೆಯಲ್ಲಿ ನೋಡಿದರೆ: ಎಲ್ಲರ ಬಗ್ಗೆ ಕಟುಸತ್ಯ ಹೇಳುತ್ತಾ, ಎಲ್ಲರನ್ನೂ ಟೀಕಿಸುತ್ತಾ ಪುಳಕಗೊಂಡ, ವ್ಯಗ್ರಗೊಂಡ ಹಾಗೂ ದುಃಖಿಯಾದ ಲೇಖಕ ಲಂಕೇಶ್. ಲಂಕೇಶರ “ನನ್ನ ಸುತ್ತಾ” ಪದ್ಯದಲ್ಲಿ “ಈ ನರಕ ಈ ಪುಲಕ” ಎಂಬ ಸಾಲು ಬರುತ್ತದೆ. ಈ ಸಾಲನ್ನೇ ಆಧರಿಸಿ ಲಂಕೇಶರ ಇಡೀ ನೋಟವನ್ನು ಅವರ ಕೆಲವು ನಾಟಕಗಳ ಮೂಲಕ ಹಿಡಿಯಲು ರಘುನಂದನ್ ಪ್ರಯತ್ನಿಸಿದ್ದರು. ಅದೇನೇ ಇರಲಿ, “ಈಡಿಪಸ್” ನಾಟಕದ ಟೈರೀಷಿಯಸ್ ಛಾಯೆ ಲಂಕೇಶರಲ್ಲಿ ಇತ್ತು. ಅವರು ಇನ್ನೂ ಕೆಲಕಾಲ ಬದುಕಿದ್ದರೆ ಅವರ ಎರಡೂ ಕಣ್ಣುಗಳು ಹೋಗಿ ಟೈರೀಷಿಯಸ್ ನಂತೆಯೇ ಆಗಿಬಿಡುವ ದುಃಖಕರ ಸನ್ನಿವೇಶವನ್ನು ನಾವೆಲ್ಲ ನೋಡಬೇಕಾಗುತ್ತಿತ್ತೇನೋ. ಒಮ್ಮೆ ಅವರು ಒಂದು ಕಣ್ಣನ್ನು ಕಳೆದುಕೊಂಡು ತಮ್ಮ ಮತ್ತೊಂದು ಕಣ್ಣಿನ ಬಗ್ಗೆ ಆತಂಕದಲ್ಲಿದ್ದಾಗ ತಮಾಷೆ ಮಾಡಿಕೊಂಡಿದ್ದು ನೆನಪಿದೆ: “ಬೆಳಗಾಗೆದ್ದು ಪೇಪರ್ ನಲ್ಲಿ ಈ ಹೆಗಡೆ, ದೇವೇಗೌಡ ಥರದವರ ಫೋಟೋ ನೋಡೋದಕ್ಕಿಂತ ಕಣ್ಣಿಲ್ಲದಿರೋದೇ ವಾಸಿ ಕಣಯ್ಯ!”

ಲಂಕೇಶರ ದೈಹಿಕ ಕಾಯಿಲೆಗಳ ವಿವಿಧ ಘಟ್ಟಗಳನ್ನು ಹತ್ತಿರದಿಂದ ನೋಡಿದವರಿಗೆ ಅವರ ಕಾಯಿಲೆಯ ಹಿನ್ನೆಲೆಯಲ್ಲಿ ದೈಹಿಕ ಕಾರಣಗಳ ಜೊತೆಜೊತೆಗೇ ಈ ಸಮಾಜದ ಕಾಯಿಲೆಗಳ ಒತ್ತಡವೂ ಇತ್ತು ಎಂಬುದು ಗೊತ್ತಿರುತ್ತದೆ. “ಒಂದು ಸಣ್ಣ ಹಿಂದೂ ಮುಸ್ಲಿಂ ಜಗಳವಾದ ತಕ್ಷಣ ಲಂಕೇಶರ ಬಿ.ಪಿ ರೈಸ್ ಆಗಿಬಿಡುತ್ತಿತ್ತು” ಎಂದು ಅಗ್ರಹಾರ ಕೃಷ್ಣಮೂರ್ತಿಯವರು ಹೇಳಿದ್ದು ನಿಜ. ನನಗಿನ್ನೂ ಚೆನ್ನಾಗಿ ನೆನಪಿದೆ: ಲಂಕೇಶರಿಗೆ ಅದೇ ಆಗ ಒಂದು ಕಣ್ಣು ಹೋಗಿತ್ತು. ಒಂದು ಸಂಜೆ ಯಾರೋ ಮುಸ್ಲಿಂ ಹುಡುಗಿ ತನ್ನ ತಾಯಿಯ ಜೊತೆ ಬಂದು ತನ್ನ ಕಷ್ಟ ಹೇಳಿಕೊಂಡು ಹೋಗಿದ್ದಳು. ಅವರು ಅಂದು ಸಂಜೆ ತಮ್ಮ ಕಣ್ಣಿನ ಕಷ್ಟ ಮರೆತು ತಮ್ಮ ವರದಿಗಾರರೊಬ್ಬರಿಗೆ ಆ ಮುಸ್ಲಿಂ ಹೆಂಗಸಿನ ಕಷ್ಟಕ್ಕೆ ಪರಿಹಾರ ಹುಡುಕುವಂತೆ ತಾಕೀತು ಮಾಡತೊಡಗಿದರು. ನೋಯುತ್ತಿದ್ದ ತಮ್ಮ ಕಣ್ಣನ್ನು ಮುಚ್ಚಿಕೊಂಡು ಮುಸ್ಲಿಮರ ಅಸಹಾಯಕತೆಯ ಬಗ್ಗೆ ಮಾತಾಡುತ್ತಾ ಹೋದರು.

ಲಂಕೇಶರ ಕಣ್ಣಿನ ಸ್ಥಿತಿ ನೋಡಿ ನಮಗೆಲ್ಲಾ ಕಸಿವಿಸಿಯಾಗುತ್ತಿತ್ತು. ಇರುವ ಒಂದು ಕಣ್ಣೂ ಹೋದರೆ ಲಂಕೇಶರಿಗೆ ಇಷ್ಟವಾದ ಪುಸ್ತಕಗಳನ್ನೆಲ್ಲಾ ನಾನು ಅವರಿಗಾಗಿ ಓದಿ ಹೇಳುತ್ತೇನೆ ಎಂದುಕೊಂಡಿದ್ದೆ ಒಂದು ದಿನ, ಮುಗ್ಧವಾಗಿ. ಕ್ರಮೇಣ ಅವರ ಒಂದು ಕಣ್ಣು ಉಳಿಯಿತು. ಆ ಘಟ್ಟದಿಂದಾಚೆಗೂ ಲಂಕೇಶರು ಓದುತ್ತಾ, ಬರೆಯುತ್ತಾ ಹೋದರು. ಒಂದೇ ದಿನದಲ್ಲಿ ಒಂದು ಪುಸ್ತಕ ಓದಿ ತೀಕ್ಷ್ಣವಾದ ರಿವ್ಯೂ ಬರೆದುಬಿಡುತ್ತಿದ್ದರು. ಆದರೂ ಲಂಕೇಶರ ಕಣ್ಣು ನೋಡಿದಾಗ ಕೆಲವೊಮ್ಮೆ ಅರ್ಜೆಂಟೀನಾದ ಲೇಖಕ ಬೋರ್‍ಹೆಸ್ ನೆನಪಾಗುತ್ತಿದ್ದ. ಬೋರ್‍ಹೆಸ್ ಗೆ ಬಹುಬೇಗ ಕಣ್ಣು ಹೊರಟು ಹೋದವು. ಆದರೆ ಅವನು ಪುಸ್ತಕಗಳನ್ನು ಕೊಳ್ಳುತ್ತಲೇ ಹೋಗಿ ತನ್ನ ಮನೆಯನ್ನು ಪುಸ್ತಕಗಳಿಂದ ತುಂಬಿಸತೊಡಗಿದ. ಕಣ್ಣು ಹೋದ ಮೇಲೂ ಅದ್ಭುತವಾಗಿ ಬರೆದ. ನಮಗೆಲ್ಲ ಲಂಕೇಶರು ಮಿಲ್ಟನ್ ಅಥವಾ ಬೋರ್‍ಹೆಸ್ ಥರ ಕಣ್ಣು ಕಳೆದುಕೊಳ್ಳಬಹುದೇನೋ ಎಂಬ ಭಯವಿತ್ತು. ಆದರೆ, ಅಂಥ ಸ್ಥಿತಿಯಲ್ಲೂ ಅವರು ಛಲದಿಂದ ಬರೆಯುತ್ತಿದ್ದುದನ್ನು ಕಂಡಾಗ, ಬರೆಯುವವನಿಗೆ ಹೊರಗಣ್ಣಿಗಿಂತ ಒಳಗಣ್ಣು ಮುಖ್ಯ ಎಂಬ ಸರಳ ಅರಿವು ಇನ್ನಷ್ಟು ಗಾಢವಾಗುತ್ತಾ ಹೋಯಿತು.

‍ಲೇಖಕರು avadhi

December 2, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಿನಿಮಾ ತಯಾರಿಯ ತಮಾಷೆಗಳು…

-ಕೃಷ್ಣ ಮಾಸಡಿ ನಾನು ಬಾಲ್ಯದಲ್ಲಿ ಹೊನ್ನಾಳಿ ಮತ್ತು ರಾಂಪುರ ಜಾತ್ರೆಯಲ್ಲಿ ಹಾಕುತ್ತಿದ್ದ ಟೂರಿಂಗ್ ಟಾಕೀಸುಗಳಲ್ಲಿ ನೆಲದಲ್ಲಿ ಹಾಗೂ ಆಗಾಗ...

೧ ಪ್ರತಿಕ್ರಿಯೆ

  1. siraj ahmed s

    priya nataraj
    tumba chennagi barediddeeri.rogavemba roopakada moolaka lankesh kandukonda kanke bahala doddadu.tyrasius jothege nenapaguva innondu pathra nadir shah.neevu gunamukha natakada baggeyu bareyabeku..please

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: