ರೋಮಾಂಚನಕಾರಿ ʼನಮ್ಮ ಅರಸುʼ

ಜಿ.ಪಿ.ಬಸವರಾಜು

ನಮ್ಮ ಅರಸು

(ಒಡನಾಡಿಗಳು ಕಂಡಂತೆ)

ಲೇ: ಬಸವರಾಜು ಮೇಗಲಕೇರಿ

ಪಲ್ಲವ ಪ್ರಕಾಶನ, ಚನ್ನಪಟ್ಟಣ ಫೋನ್‍: 88800 87235

ಒಂದು ವಸ್ತುವನ್ನು, ಸಂಗತಿಯನ್ನು ಹತ್ತು ದಿಕ್ಕುಗಳಿಂದ ನೋಡಿದಾಗ ಸತ್ಯ ತಿಳಿಯಬಹುದು. ಈ ಹತ್ತುದಿಕ್ಕುಗಳ ನೋಟ ಜೈನ ದರ್ಶನದ ಒಂದು ಚಿಂತನೆ. ಜಪಾನಿನ ಪ್ರಖ್ಯಾತ ಚಲನಚಿತ್ರ ನಿರ್ದೇಶಕ ಅಕಿರ ಕುರಸೋವರ ‘ರಾಶೊಮನ್‍’ ಎನ್ನುವ ಚಿತ್ರ ಕೂಡಾ ವಿಭಿನ್ನ ನೋಟಗಳಿಂದ ಒಂದು ಸಂಗತಿಯನ್ನು ನೋಡುವುದಾಗಿದೆ.

ಸತ್ಯ ಎನ್ನುವುದೇ ಹೀಗೆ. ಒಂದೊಂದು ಕೋನದಿಂದ ನೋಡಿದಾಗಲೂ ಒಂದೊಂದು ಮುಖ ಕಾಣಿಸುತ್ತ ಹೋಗುತ್ತದೆ. ನಿಜವಾದ ಮುಖ ಯಾವುದು? ಕರ್ನಾಟಕ ಕಂಡ ಬಹುದೊಡ್ಡ ರಾಜಕಾರಣಿ, ಮುತ್ಸದ್ದಿ, ಚಿಂತಕ, ಸಮಾಜ ಸುಧಾರಕ, ಹೃದಯವಂತ ಡಿ.ದೇವರಾಜ ಅರಸು ಅವರ ವ್ಯಕ್ತಿತ್ವಕ್ಕೆ ಎಷ್ಟೋ ಮುಖಗಳು. ಒಂದೇ ಕೋನದಿಂದ ನೋಡಿದರೆ, ಈ ವ್ಯಕ್ತಿತ್ವದ ಒಂದು ಮಗ್ಗುಲ ನೋಟವೂ ಸಿಕ್ಕುವುದು ಕಷ್ಟ.

ಅರಸು ಇಡೀ ವ್ಯಕ್ತಿತ್ವದ ನೋಟ ಸಿಕ್ಕಬೇಕು ಎಂದರೆ ಅವರನ್ನು ಹಲವು ಕೋನಗಳಿಂದ ನೋಡಬೇಕು. ಪಲ್ಲವ ಪ್ರಕಾಶನ ಪ್ರಕಟಿಸಿರುವ, ಬಸವರಾಜು ಮೇಗಲಕೇರಿ ಅವರ ‘ನಮ್ಮ ಅರಸು’ ಇಂಥ ಒಂದು ಪ್ರಯತ್ನ; ಹಲವು ನೋಟಗಳಿಂದ, ವಿಭಿನ್ನ ಹಿನ್ನೆಲೆಯಿಂದ ಅರಸು ಅವರನ್ನು ಕಾಣುವ ಮಹತ್ವದ ಪ್ರಯತ್ನ.

ಅರಸು ಅವರನ್ನು ಕುರಿತು ಈಗಾಗಲೇ ಕೆಲವು ಕೃತಿಗಳು ಪ್ರಕಟವಾಗಿವೆ. ಅರಸು ಮುಖ್ಯಮಂತ್ರಿಯಾದಾಗ ಅವರ ವಿಭಿನ್ನ ಭಂಗಿಗಳನ್ನು ಹಿಡಿದ ಚಿತ್ರಗಳು ಸಾವಿರಾರು. ಅವರು ನೆಲದ ಮೇಲೆ ಕುಂತು ಉಣ್ಣುವುದು, ಪೈಪ್‍ ಸೇದುವುದು, ಹಸು ಕರೆಯುವುದು, ಸಾರ್ವಜನಿಕ ಸಭೆಗಳಲ್ಲಿ ಮಾತನಾಡುವುದು, ಮೈಸೂರುಪೇಟ ಹಾಕಿಕೊಂಡು ಸನ್ಮಾನ ತೆಗೆದುಕೊಳ್ಳುತ್ತಿರುವುದು, ಬಡವರ ಕೈಹಿಡಿದು, ಅವರ ಹತ್ತಿರ ಕುಳಿತು ಕಷ್ಟ ಕೋಟಲೆಗಳನ್ನು ಕೇಳುತ್ತಿರುವುದು-ಹೀಗೆ ಇಂಥ ಚಿತ್ರಗಳೂ ಲೆಕ್ಕವಿಲ್ಲದಷ್ಟು. ಆ ಕಾಲದಲ್ಲಿ ಪತ್ರಿಕೆಗಳ ತುಂಬ ಅರಸು ಚಿತ್ರಗಳೇ; ಅರಸು ಸುದ್ದಿಗಳೇ.

ಅರಸು ಯುಗ ಮುಗಿದು ಹತ್ತಿರ ಹತ್ತಿರ ನಲವತ್ತು ವರ್ಷಗಳು ಕಳೆದುಹೋಗಿರುವ ಈ ಹೊತ್ತಿನಲ್ಲಿ ‘ನಮ್ಮ ಅರಸು’ ಓದುಗರ ಮುಂದೆ ಬಂದಿದೆ. ಅಕ್ಷರದಿಂದ ವಂಚಿತವಾಗಿದ್ದ ಅನೇಕ ಹಿಂದುಳಿದ, ಶೋಷಿತ ಸಮುದಾಯದ ಮಕ್ಕಳು ಈಗ ವಿದ್ಯಾವಂತರಾಗಿದ್ದಾರೆ. ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ರಾಜಕೀಯವಾಗಿ ಉನ್ನತ ಸ್ಥಾನಮಾನಗಳನ್ನು ಪಡೆದಿದ್ದಾರೆ. ಇದರ ಹಿನ್ನೆಲೆಯ ಶಕ್ತಿಯಾಗಿದ್ದ ಅರಸು ಈಗಿಲ್ಲ. ಅವರ ಮುಂಗಾಣ್ಕೆಯ, ಚಿಂತನೆಯ ಫಲವಾಗಿ ಸಮಾಜದ ಮುಖ್ಯವಾಹಿನಿಗೆ ಬಂದು ಸೇರಿರುವ ಈ ಸಮುದಾಯಗಳ ವಿದ್ಯಾವಂತರ ಮುಂದೆ ‘ನಮ್ಮ ಅರಸು’ ಬಂದಿದೆ.

ತನ್ನನ್ನು, ತನ್ನ ತಲೆಮಾರನ್ನು, ತನ್ನ ಹಿರಿಯರನ್ನು, ತನ್ನ ಸಮುದಾಯವನ್ನು ಎಚ್ಚರದಿಂದ ನೋಡಿಕೊಳ್ಳುವ ಯಾರಿಗಾದರೂ, ಈ ಕೃತಿ ರೋಮಾಂಚನ ಉಂಟುಮಾಡಬೇಕು. ಸಮ ಸಮಾಜವನ್ನು ಬಯಸುವವರಿಗೂ ಈ ಕೃತಿ ಅಷ್ಟೇ ರೋಚಕವಾಗಿ ಕಾಣಬೇಕು. ಅರಸು ವ್ಯಕ್ತಿತ್ವ ಇಡಿಯಾಗಿ ಕಣ್ಮುಂದೆ ಬಂದಾಗ ಬೆಚ್ಚಿಬೀಳುವವರೂ ಇರಬಹುದು. ರೋಮಾಂಚನಗೊಳ್ಳುವವರು, ಕೃತಜ್ಞತೆಯ ಕಣ್ಣೀರು ಹನಿಸುವವರೂ ಇರಬಹುದು.  ಕಣ್ಣು ಹನಿಯುವವರ, ಎದೆ ಸೆಟೆಸಿ ನಿಲ್ಲುವವರ ಸಂಖ್ಯಯೇ ಅಧಿಕ. ಅಂಥವರೇ ಅರಸರ ನಿಜವಾದ ಉತ್ತರಾಧಿಕಾರಿಗಳೂ ಹೌದು. ಇದೇ ಈ ಕೃತಿಯ ಜೀವಾಳವೂ ಹೌದು.

‘ನಮ್ಮ ಅರಸು’ ಕೃತಿಯ ಮಹತ್ವ ಎಂದರೆ ಇಲ್ಲಿರುವ ಲೇಖನಗಳು, ಮಾತುಕತೆಗಳು, ನೆನಪಿನ ಮೆಲುಕುಗಳು ಎಲ್ಲ ಅರಸು ಅವರನ್ನು ನೇರವಾಗಿ ಕಂಡವರಿಂದ ಬಂದಿವೆ; ಅರಸು ಅವರ ಒಡನಾಡಿದ ರಾಜಕಾರಣಿಗಳು, ಜೊತೆಯಲ್ಲಿ ಕೆಲಸ ಮಾಡಿದ ರಾಜಕಾರಣಿಗಳು, ಪತ್ರಕರ್ತರು, ಸಿಬ್ಬಂದಿ ವರ್ಗದವರು; ಅಧಿಕಾರಿಗಳು, ಸ್ನೇಹಿತರು, ವಿರೋಧ ಪಕ್ಷದ ನಾಯಕರಾಗಿ ಅರಸು ಅವರನ್ನು ಕಟುವಾಗಿ ಟೀಕಿಸಿದವರು, ಕುಟುಂಬದ ಸದಸ್ಯರಾಗಿ, ಸಂಬಂಧಿಕರಾಗಿ ಅರಸು ಅವರ ಬೇರೆಯದೇ ಆದ ಮುಖಗಳನ್ನು ಕಂಡವರು-ಹೀಗೆ ಹಲವು ಬಗೆಯಲ್ಲಿ ಅರಸು ಅವರ ಜೊತೆಯಲ್ಲಿ ಬಾಳಿದವರು, ಅವರನ್ನು ಹಲವು ಬಗೆಯಲ್ಲಿ ಕಂಡವರು ಇಲ್ಲಿ ಅರಸು ಅವರನ್ನುಕಟ್ಟಿ ಕೊಟ್ಟಿದ್ದಾರೆ.

ಮಾಮೂಲಿ ಹೊಗಳಿಕೆಯ ಮಾತುಗಳ ಆಚೆಗೂ ಹೋಗಿ ಅರಸು ಅವರ ಭಾವುಕತೆಯನ್ನು, ಕೋಪತಾಪಗಳನ್ನು, ಕಣ್ಣೀರನ್ನು, ದೌರ್ಬಲ್ಯಗಳನ್ನು ಕುರಿತು ಬಿಚ್ಚುಮನಸ್ಸಿನಿಂದ, ನೇರವಾದ ನೋಟದಿಂದ ನೋಡಿದವರೂ ಈ ಕೃತಿಯಲ್ಲಿ ಇದ್ದಾರೆ. ಅಂಥವರು ಈಗ ತಮ್ಮ ಬಾಳ ಮುಸ್ಸಂಜೆಯಲ್ಲಿದ್ದಾರೆ;  ಕೆಲವರು ತೀರಿಹೋಗಿದ್ದಾರೆ. ಅರಸು ಅವರಾಗಲಿ, ಅವರ ಅಧಿಕಾರ, ಪ್ರಭಾವ, ಹಿಡಿತ ಯಾವುದೂ ಇಲ್ಲದ ಇಂಥ ಹೊತ್ತಿನಲ್ಲಿ ಮಾತನಾಡುವವರ ಮೇಲೆ ಯಾವ ಒತ್ತಡವೂ ಇರುವುದಿಲ್ಲ. ಯಾವ ಆಸೆ ಆಮಿಷಗಳೂ ಇರುವುದಿಲ್ಲ. ಸಹಜವಾಗಿಯೇ ಇವರ ಮಾತುಗಳು ಬಿಚ್ಚುಮನಸ್ಸಿನ ಮಾತುಗಳಾಗಿರುತ್ತವೆ. ಈ ಕೃತಿಯನ್ನು ಓದುವಾಗ ಈ ಅಂಶ ನಿಚ್ಚಳವಾಗಿ ಕಾಣಿಸುತ್ತದೆ.

ಟಿ.ಸಿದ್ಧಲಿಂಗಯ್ಯನವರು, ಹುಣಸೂರಿನಲ್ಲಿ ಅರಸು ಎನ್ನುವ ಹುಡುಗ, ಪ್ರತಿಭಾವಂತ ಇದ್ದಾನೆಂದು ಕೇಳಿ ಆತನನ್ನು ಹುಡುಕಿ ಹೊರಡುವುದು, ಮಿತ್ರ ಸಾಹುಕಾರ್ ಚೆನ್ನಯ್ಯ ನೀನೇ ಹೋಗಿಬಾ ಎಂದು ಹೇಳುವುದು, ಹುಡುಕಿ ಹೊರಟವರಿಗೆ ಅರಸು ಸಿಕ್ಕುವುದು ನೇಗಿಲ ಸಮೇತ ಎತ್ತುಗಳ ಜೊತೆಯಲ್ಲಿ ಹೊಲದಿಂದ ಉಳುಮೆ ಮುಗಿಸಿ ಬರುವುದು-ಇವೆಲ್ಲ ಅರಸು ಅವರ ಆರಂಭದ ಸ್ಥಿತಿಯನ್ನು ತೋರಿಸುತ್ತವೆ. ಮುಂದೆ ಅರಸು ನಾಯಕನಾಗಿ, ಮುತ್ಸದ್ದಿಯಾಗಿ, ಮುಖ್ಯಮಂತ್ರಿಯಾಗಿ, ಚಾಣಾಕ್ಷ ರಾಜಕಾರಣಿಯಾಗಿ, ಬಡವರ ಬಗ್ಗೆ ತೀವ್ರವಾದ ಕಾಳಜಿಯನ್ನು ಇಟ್ಟುಕೊಂಡ ವ್ಯಕ್ತಿಯಾಗಿ  ಕಾಣುತ್ತ ಹೋಗುತ್ತಾರೆ.

‘ಸಾಮಾಜಿಕ ನ್ಯಾಯ’ ಎನ್ನುವ ಕಲ್ಪನೆಯನ್ನು ಸಾಕಾರಗೊಳಿಸಿದ, ಹಿಂದುಳಿದ ವರ್ಗಗಳನ್ನು, ದಲಿತರನ್ನು ಜಾಗೃತಗೊಳಿಸಿದ, ಅವರಿಗೆ ಸಿಕ್ಕಬೇಕಾದ ನ್ಯಾಯಬದ್ಧ ಹಕ್ಕುಗಳನ್ನು, ಸವಲತ್ತುಗಳನ್ನು ಕೊಡಿಸುವ ಹೋರಾಟದಲ್ಲಿ ಅರಸು ಬೆಳೆಯುತ್ತ ಹೋಗುವುದೂ ಇಲ್ಲಿ ಕಾಣಿಸುತ್ತದೆ. ತುರ್ತುಪರಿಸ್ಥಿತಿಯ ನಂತರ ಕಾಂಗ್ರೆಸ್‍ ಧೂಳಿಪಟವಾದಾಗ, ಹತಾಶರಾಗಿ ಕೈಚೆಲ್ಲಿದ ಇಂದಿರಾ ಗಾಂಧಿಯವರಲ್ಲಿ ಆತ್ಮವಿಶ್ವಾಸ ತುಂಬಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿ ಗಾಂಧಿಯವರನ್ನು ಗೆಲ್ಲಿಸುವ ಮೂಲಕ ತಮ್ಮ ಅಗಾಧ ರಾಜಕೀಯ ಶಕ್ತಿಯನ್ನು ಪ್ರದರ್ಶಿಸುವ ಅರಸು,

ಅಲ್ಲಿಂದ ಮುಂದೆ ಪತನದ ಹಾದಿಯಲ್ಲಿ ಸಾಗುವುದನ್ನೂ ಈ ಕೃತಿ ತೋರಿಸುತ್ತದೆ. ಇಂದಿರಾ ಗಾಂಧಿಯವರ ಈ ಗೆಲವು ಅರಸು ಅವರಲ್ಲಿ ಚಿಗುರಿಸಿದ ಅಹಂಕಾರ, ಅವರ ಪಕ್ಷದಲ್ಲಿಯೇ ಹುಟ್ಟಿಕೊಂಡ ವಿರೋಧಿಗಳು, ಮುಂದಿನ ಪ್ರಧಾನಿ ನೀವೇ ಎಂದು ಅರಸು ಅವರ ದಾರಿತಪ್ಪಿಸಿದ ಜ್ಯೋತಿಷಿಗಳು, ರಾಷ್ಟ್ರಮಟ್ಟದ ನಾಯಕರು, ಇಂದಿರಾ ಅವರೊಳಗೆ ಹೊಗೆಯಾಡಿದ ಸಂಶಯದ ಕಿಡಿ-ಇವೆಲ್ಲದಕ್ಕೂ ಸಿಕ್ಕ ಅರಸು ಬಹುದೊಡ್ಡ ದುರಂತ ನಾಯಕನಂತೆ  ಪತನಗೊಳ್ಳುವ ಚಿತ್ರವನ್ನು ಈ ಕೃತಿ ಸಮರ್ಥವಾಗಿ ಕಟ್ಟಿಕೊಡುತ್ತದೆ.

ಅರಸು ಕರ್ನಾಟಕದ, ಅಷ್ಟೇಕೆ, ಇಡೀ ಭಾರತದ ದೊಡ್ಡ ನಾಯಕ. ಅರಸು ಜಾರಿಗೆ ತಂದ ಭೂ ಸುಧಾರಣೆಯೂ ಸೇರಿದಂತೆ ಅನೇಕ ಕಾರ್ಯಕ್ರಮಗಳು ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ ಜಾರಿಯಾದ ಕಾರ್ಯಕ್ರಮಗಳು. ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರಲ್ಲಿ ಅರಸು ತುಂಬಿದ ಆತ್ಮವಿಶ್ವಾಸ, ಅಲ್ಲಿನ ಪ್ರತಿಭಾವಂತರನ್ನು ಹೆಕ್ಕಿ ರಾಜಕೀಯಕ್ಕೆ ತಂದು ನಾಯಕರಾಗಿ ಬೆಳಸಿದ ರೀತಿ ಅನನ್ಯ. ಅರಸು ಅವರ ಈ ಕಾರ್ಯಕ್ರಮಗಳಲ್ಲಿ ಲೋಹಿಯಾ ಇರುವುದು, ಶಾಂತವೇರಿ ಗೋಪಾಲಗೌಡರು ನಡೆಸಿದ ಭೂ ಹೋರಾಟ ಇರುವುದು, ಗಾಂಧಿಯ ಚಿಂತನೆ ಇರುವುದನ್ನು ಕಾಣಬಹುದು.

ಇಂಥ ಇನ್ನೊಬ್ಬ ನಾಯಕನೇ ನಮಗೆ ಕಾಣುವುದಿಲ್ಲ. ಇದನ್ನೆಲ್ಲ ಈ ಕೃತಿ ಸಮರ್ಥವಾಗಿಯೆ ಹಿಡಿದು ಕೊಡುತ್ತದೆ. ಹಾಗೆಯೇ,’ಭ್ರಷ್ಟಾಚಾರವನ್ನು ಸಾಂಸ್ಥೀಕರಣಗೊಳಿಸಿದ’ ಅರಸು ಹೇಗೆ ವೈಯಕ್ತಿಕವಾಗಿ ಭ್ರಷ್ಟತೆಯಿಂದ ದೂರವಿದ್ದ ಪ್ರಾಮಾಣಿಕ ವ್ಯಕ್ತಿಯಾಗಿದ್ದರು ಎಂಬುದೂ ಇಲ್ಲಿ ದಾಖಲಾಗಿದೆ.

ತಮ್ಮ ಪಕ್ಷದವರೇ ಆದ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದಕ್ಕೆ ಮತ್ತು ಹೈಕಮಾಂಡ್ ಗೆ ಕಾಲಕಾಲಕ್ಕೆ ಸಲ್ಲಿಸುವುದಕ್ಕೆ ಹಾಗೂ ಇಂಥ ಕಾರಣಗಳಿಗಾಗಿ ಅರಸು ಹಣ ಸಂಗ್ರಹಿಸಬೇಕಾಗಿತ್ತು. ಇದು ದೊಡ್ಡ ದೊಡ್ಡ ಉದ್ಯಮಿಗಳಿಂದಲೇ ಬರಬೇಕಾಗಿತ್ತು. ಹಾಗೆ ಕೊಟ್ಟವರಿಗೆ ಅದನ್ನು ಹಿಂದಿರುಗಿಸುವ ಋಣವಾಗಿ ಅವರ ಕೆಲಸಗಳನ್ನು ಮಾಡಬೇಕಾದ ಅನಿವಾರ್ಯತೆಗೂ ಅರಸು ಸಿಕ್ಕಿಹಾಕಿಕೊಂಡಿದ್ದರು. ಜೊತೆಗೆ, ತಮ್ಮ ಬಳಿ ಯಾಚಿಸಿ ಬಂದ ಕಡುಬಡವರಿಗೆ ಕೊಡುಗೈ ದಾನಿಯೂ ಆಗಿದ್ದರು. ಒಂದು ಕೈಯಿಂದ ಪಡೆದು ಮತ್ತೊಂದು ಕೈಯಿಂದ ಕೊಡುತ್ತಿದ್ದ ಅರಸು, ತಮಗಾಗಿ, ತಮ್ಮ ಕುಟುಂಬಕ್ಕಾಗಿ ಏನನ್ನೂ ಇಟ್ಟುಕೊಳ್ಳಲಿಲ್ಲವೆಂಬುದು ಅವರ ಪ್ರಾಮಾಣಿಕತೆಗೆ ಕನ್ನಡಿ ಹಿಡಿಯುತ್ತದೆ. ಈ ಪ್ರಾಮಾಣಿಕತೆಯನ್ನು ಅರಸು ಅವರ ಕಡು ವಿರೋಧಿಗಳೂ ಒಪ್ಪಿಕೊಳ್ಳುತ್ತಾರೆ. ಇದೆಲ್ಲವೂ ಈ ಕೃತಿಯಲ್ಲಿ, ಹಲವರ ಬಿಚ್ಚುಮನಸ್ಸಿನ ಮಾತುಗಳಲ್ಲಿ ಕಾಣಿಸುತ್ತವೆ.

‘ಹೆಂಡದ ದೊರೆ’ ಯಾದ ಶ್ರೀಹರಿ ಖೋಡೆಯಂಥ ಆಪ್ತರು, ರಘುಪತಿ, ರಮೇಶ್‍ ಕುಮಾರ್‍ ಅವರಂಥ ಬಲಗೈ ಬಂಟರು, ಲಿನ್‍, ರೆಬೆಲೊ, ಚಿರಂಜೀವಿ ಸಿಂಗ್‍, ಎಸ್‍.ಕೆ.ಹಾಜರ, ಎಸ್‍.ಕೆ.ದಾಸ್‍  ಮೊದಲಾದ ಅಧಿಕಾರಿಗಳು, ಕೆ.ಎಚ್‍.ಶ್ರೀನಿವಾಸ್, ಚಂದ್ರೇಗೌಡ, ನಾಣಯ್ಯ, ಕಾಗೋಡು, ಮಾರ್ಗರೆಟ್ ಆಳ್ವ, ಸಚ್ಚಿದಾನಂದಸ್ವಾಮಿ ಮೊದಲಾದ ರಾಜಕಾರಣಿಗಳು, ಎ.ಕೆ.ಸುಬ್ಬಯ್ಯ ಮತ್ತು ಎಚ್‍.ಡಿ.ದೇವೇಗೌಡರಂಥ ವಿರೋಧ ಪಕ್ಷಗಳ ನಾಯಕರು, ಕಲ್ಲೆ ಶಿವೋತ್ತಮ ರಾವ್‍, ಗರುಡನಗಿರಿ ನಾಗರಾಜ, ಪಿ.ರಾಮಯ್ಯನವರಂಥ ಪತ್ರಕರ್ತರು-ಹೀಗೆ ವಿಭಿನ್ನ ಹಿನ್ನೆಲೆಯ ಜನ ಅರಸು ಅವರ ಚಿತ್ರವನ್ನು ಬಿಡಿಸುತ್ತ ಹೋಗಿರುವುದು ಈ ಕೃತಿಯ ಸಮೃದ್ಧಿ ಮತ್ತು ಶ್ರೀಮಂತಿಕೆಯನ್ನು ಹೆಚ್ಚಿಸಿದೆ.

ಕೆ.ಎಚ್.ಶ್ರೀನಿವಾಸ್‍, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ಅರಸು ಅಂತರಂಗವನ್ನು ಬಲ್ಲವರು. ದಿಲ್ಲಿಯ ಹೈಕಮಾಂಡ್‍ ಜೊತೆ ವ್ಯವಹರಿಸಿ ಅಲ್ಲಿನ ವಿದ್ಯಮಾನಗಳನ್ನು ತಿಳಿದವರು. ಇವರ ಮಾತುಗಳು ಅರಸು ಅವರ ರಾಜಕೀಯ ಚಿಂತನೆಯನ್ನು, ಆ ಹೊತ್ತಿನ ದಿಲ್ಲಿಯ ಹಲವು ವಿದ್ಯಮಾನಗಳನ್ನು ತಿಳಿಸುತ್ತವೆ.

ಮೈಸೂರು ಪೇಪರ್ ಮಿಲ್ಸನ್ನು ಖಾಸಗಿಯವರಿಂದ ಕೊಂಡು, ಸರ್ಕಾರಿ ಸ್ವಾಮ್ಯದ ಸಂಸ್ಥೆಯನ್ನಾಗಿ ಮಾಡುವಲ್ಲಿ ಅರಸು ಅವರು ತೋರಿದ ಮುಂಗಾಣ್ಕೆ ಮತ್ತು ಜನಪರ ಕಾಳಜಿ ಯಾವ ಸ್ವರೂಪದ್ದು ಎಂಬುದನ್ನು ತಿಳಿಯಬೇಕಾದರೆ, ಎಲ್ಲವನ್ನೂ ಖಾಸಗೀಕರಣಗೊಳಿಸುತ್ತಿರುವ ಇಂದಿನ ರಾಜಕರಣವನ್ನು ನಾವು ಎಚ್ಚರದಿಂದ ಗಮನಿಸಬೇಕು. ನಿರಂತರವಾಗಿ ಜನಪರವಾಗಿ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳಿಗಾಗಿ ತುಡಿದ ಅರಸು ಅವರಿಗೆ ದ್ರೋಹ ಮಾಡಿದ ರಾಜಕಾರಣಿಗಳು, ಅರಸು ಅವರಿಗೆ ಮಾತ್ರ ದ್ರೋಹಬಗೆಯಲಿಲ್ಲ; ನಮ್ಮ ಜನರಿಗೆ ಮತ್ತು ಜನತಂತ್ರಕ್ಕೆ ಮಹಾದ್ರೋಹ ಮಾಡಿದರು. ಇದು ಚರಿತ್ರೆಯ ಬಹು ಮುಖ್ಯ ಸಂಗತಿ.

ಬೃಹತ್‍ ಗಾತ್ರದ ಈ ಕೃತಿಯನ್ನು ಲಂಕೇಶ್‍ ಅವರಿಗೆ ಅರ್ಪಿಸಿರುವುದು ಸರಿಯಾದ ನಡೆಯೇ ಆಗಿದೆ. ಆದರೆ ಲಂಕೇಶ್‍ ಅವರು ಅರಸು ಅವರನ್ನು ಕುರಿತು ಬರೆದ ಒಂದು ಬರಹವೂ ಇಲ್ಲಿ ಇಲ್ಲದಿರುವುದು ಕೊರತೆಯಾಗಿಯೇ ಕಾಣಿಸುತ್ತದೆ. ಅರಸು ಅವರ ಬದುಕಿನ ಸಮಗ್ರ ವಿವರಗಳ ಅನುಬಂಧ ಇಲ್ಲದಿರುವುದೂ ಮತ್ತೊಂದು ಪ್ರಧಾನ ಕೊರತೆಯೇ.

ಇದೇನೇ ಇರಲಿ, ಅರಸು ಅವರ ಜನ್ಮ ಶತಾಬ್ದಿಯನ್ನು ಹೊತ್ತಿನಲ್ಲಿ ಈ ಸಂದರ್ಶನಗಳನ್ನು ಮಾಡಿ, ಇದೀಗ ಈ ಕೃತಿಯನ್ನು ಪ್ರಕಟಿಸಿರುವುದು ಅರಸು ಅವರಿಗೆ ಸಲ್ಲಿಸಿದ ಬಹುದೊಡ್ಡ ಗೌರವ. ಈ ಶ್ರಮದ  ಹಿಂದಿನ ಬೆವರಿಗಾಗಿ ಬಸವರಾಜು ಮೇಗಲಕೇರಿ  ಮತ್ತು ಈ ಗ್ರಂಥವನ್ನು ಪ್ರಕಟಿಸಿರುವ ಪಲ್ಲವ ಪ್ರಕಾಶನದ ವೆಂಕಟೇಶ್‍ ಅಭಿನಂದನೆಗೆ ತಕ್ಕವರು.

                                                                                

ನಮ್ಮ ಅರಸು

(ಒಡನಾಡಿಗಳು ಕಂಡಂತೆ)

ಲೇ: ಬಸವರಾಜು ಮೇಗಲಕೇರಿ

ಪಲ್ಲವ ಪ್ರಕಾಶನ,ಚನ್ನಪಟ್ಟಣ

ಫೋನ್‍: 88800 87235

‍ಲೇಖಕರು Avadhi

October 7, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಚಂದ್ರಕಾಂತ ಕುಸನೂರರ ಯಾತನಾ ಶಿಬಿರ

ಚಂದ್ರಕಾಂತ ಕುಸನೂರರ ಯಾತನಾ ಶಿಬಿರ

ಪ್ರಸನ್ನ ಸಂತೇಕಡೂರು ಯಾತನಾ ಶಿಬಿರ ಇತ್ತೀಚೆಗೆ ನಿಧನರಾದ ಕನ್ನಡದ ಖ್ಯಾತ ಸಾಹಿತಿಗಳಲ್ಲಿ ಒಬ್ಬರಾದ ಚಂದ್ರಕಾಂತ ಕುಸನೂರರ ಪ್ರಖ್ಯಾತ ಕಾದಂಬರಿ....

ಸೈಕಲ್ ಬಗೆಗಿನ ವ್ಯಾಮೋಹ

ಸೈಕಲ್ ಬಗೆಗಿನ ವ್ಯಾಮೋಹ

    ಸತೀಶ ಕುಲಕರ್ಣಿ ಶ್ರೀಮತಿ ಗಾಯತ್ರಿ ರವಿ ಅವರ 'ಶಶೂನ ಸೈಕಲ್' ಎಂಬ ಲಲಿತ ಪ್ರಬಂಧಗಳ ಪುಸ್ತಕ ಇದೀಗ ಬಂದಿದೆ. ಮಲೆನಾಡು...

ನರೇಂದ್ರ ಪೈ ಅವರ “ಕನಸುಗಳು ಖಾಸಗಿ”

ನರೇಂದ್ರ ಪೈ ಅವರ “ಕನಸುಗಳು ಖಾಸಗಿ”

ಕಮಲಾಕರ ಕಡವೆ ಕತೆಯಿರುವುದು ಕಣ್ಣಲ್ಲಿ. ಕತೆಗಾರರ ಕಣ್ಣು ಕಾಣಲು ನಿರ್ಧರಿಸುವ ಜಗತ್ತು ಅವರ ಸುತ್ತಲಿನದೋ, ಒಳಗಿನದೋ, ಹಿಂದೆಂದಿನದೋ,...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: