ರೋಷದ ರಾಗಗಳು

door_number142.jpg“ಡೋರ್ ನಂ. 142” ಕಾಲಂ

ಬಹುರೂಪಿ

ದಿಢೀರನೆ ಅಪ್ಪನ ದೊಡ್ಡ ದನಿ ಕೇಳಿ ಬೆಚ್ಚಿದೆ.

ಅಪ್ಪನ ಕೋಪ ತಾಪ ಎಲ್ಲರಿಗೂ ಗೊತ್ತಿತ್ತು. ರೂಢಿಯಾಗಿ ಹೋಗಿತ್ತು. ಆದರೆ ಬಂದವರ ಮುಂದೆ ಅಪ್ಪ ಈ ರೀತಿ ದನಿ ಎತ್ತುವುದು ತೀರಾ ಅಪರೂಪ. “ಊರಿಗೆ ಉಪಕಾರಿ, ಮನೆಗೆ ಮಾರಿ” ಅಂತಾನೇ ನಂಬಿಬಿಟ್ಟಿದ್ದೆವು. ಊರವರಿಗೆಲ್ಲ ಅಪ್ಪ ಅಂದ್ರೆ ತುಂಬಾ ಇಷ್ಟ.

ಅಂತಾದ್ರಲ್ಲಿ ದಿಢೀರನೆ ಬಂದವರ ಮುಂದೆ ದನಿ ಎತ್ತರಿಸಿದ್ದು ಆಶ್ಚರ್ಯ ತಂತು. ಒಳಗೆ ಪಾಠ ಗಟ್ಟಿ ಮಾಡುತ್ತಿದ್ದವನು ಬಾಗಿಲಿಗೆ ಓಡಿಬಂದೆ. ಏನೂ ಅರ್ಥ ಆಗಲಿಲ್ಲ. ಅಪ್ಪನ ಆಫೀಸಿನವರು ಇಬ್ಬರು ಬಂದಿದ್ದರು. ಎಲ್ಲರೂ ಒಳಗೆ ಕುಳಿತು ಮಾತನಾಡುತ್ತಿದ್ದಾಗಲೇ ಈ ಅಬ್ಬರ ಕೇಳಿಬಂದಿದ್ದು. ಬಂದು ನೋಡುವ ವೇಳೆಗೆ ಆಫೀಸಿನವರ ಪೈಕಿ ಒಬ್ಬರು ಹೊರಗೆ ನಿಂತಿದ್ದರು. ಸೈಕಲ್ ಏರಿ ಇನ್ನೇನು ಹೊರಡುವುದರಲ್ಲಿದ್ದರು. ಅವರ ದನಿ ಕುಗ್ಗಿತ್ತು.

ಏನಿದು ಎಂಬುದೇ ಗೊಂದಲವಾಯಿತು. ಅಪ್ಪನ ಮಾತಿನ ಚಾಟಿಯ ಏಟಿನಲ್ಲಿ “ಹೇಗೆ ನೀನು ಒಳಗೆ ಬಂದೆ” ಎಂಬ ಮಾತು ಕೇಳಿ ಬಂತು. ಹೇಗೆ ನೀನು ಒಳಗೆ ಬಂದೆ ಅಂದ್ರೆ….? ಏನದು? ಅಪ್ಪನೇ ಕರೆದಿದ್ರು. ಅವರು ಒಳಗೆ ಬಂದಿದ್ರು. ಅಪ್ಪನ ಮುಂದೇನೇ ಬಂದಿದ್ರು. ಮುಂಬಾಗಿಲಿನಿಂದಲೇ ಬಂದಿದ್ರು. ಮತ್ತೆ…

ಇದು ಮತ್ತೆ ರಿಪೀಟ್ ಆದ ನೆನಪಿಲ್ಲ. ನಾನು ಇನ್ನೂ ಎರಡನೆಯದ್ದೋ ಮೂರನೆಯದ್ದೋ ಕ್ಲಾಸಿನಲ್ಲಿ ಇದ್ದಾಗ ನಡೆದದ್ದು. ಆಗ ನಾವು ಇದ್ದದ್ದು ಈಗ ಮಹಾ ಬೆಂಗಳೂರು ಅಂತ ಅನ್ನಿಸಿಕೊಂಡಿರೋ ಮುಖ್ಯ ಭಾಗದಲ್ಲಿಯೇ. ಆದರೆ ಆಗ ಅದು ಹಳ್ಳಿ, ಪಕ್ಕಾ ಹಳ್ಳಿ. ಎಡವಿ ಬಿದ್ರೆ ಬೆಂಗಳೂರು.

ನರಗುಂದದಲ್ಲಿ ಅಣ್ಣ ಕೆಲಸ ಮಾಡ್ತಿದ್ರು. ರಜೆ ಬರೋದೆ ಅಲ್ಲಿಗೆ ಹಾರೋಕೆ ಅನ್ನೋ ದಿನಗಳು ಅದು. ಹೈಸ್ಕೂಲ್ ನಲ್ಲಿದ್ದೆ. ನರಗುಂದಕ್ಕೆ ಹೋದಾಗ ಅಣ್ಣ ತಂದಿದ್ದ ಪುಸ್ತಕ ತಿರುವಿ ಹಾಕ್ತಾ ಇದ್ದೆ. ಸಡನ್ನಾಗಿ ಆ ಪುಸ್ತಕ ಕಣ್ಣಿಗೆ ಬಿತ್ತು. ಮುಖಪುಟದಲ್ಲಿ ರೋಷಾವೇಷದಿಂದ ಕೈ ಎತ್ತಿರುವ ಒಬ್ಬ ಯುವಕನ ಚಿತ್ರ. ದೊಡ್ಡ ದನಿ. ಪುಸ್ತಕದ ಹೆಸರು ಹೊಲೆಮಾದಿಗರ ಹಾಡು.

ಇನ್ನೊಂದು ಪುಸ್ತಕ. ಮುಖಪುಟದಲ್ಲಿ ಇನ್ನೂ ರೋಷತಪ್ತನಾದ ಯುವಕನ ಮುಖ. ಅಬ್ಬರಿಸಿ ಹೇಳುತ್ತಿದ್ದಾನೆ-

mara.jpg

ನಿನ್ನೆ ದಿನ ನನ್ನ ಜನ
ಬೆಟ್ಟದಂತೆ ಬಂದರು
ಕಪ್ಪು ಮುಖ, ಬೆಳ್ಳಿ ಗಡ್ಡ
ಉರಿಯುತಿರುವ ಕಣ್ಣುಗಳು
ಹಗಲು ರಾತ್ರಿಗಳನು ಸೀಳಿ
ನಿದ್ದೆಯನ್ನು ಒದ್ದರು
ಕಂಬಳಿಗಳು ಕರಗಿದವು
ಎದ್ದೇಳುವ ರೊಚ್ಚಿಗೆ
ಭೂಕಂಪನವಾಯಿತು
ಅವರು ಕುಣಿದ ಹುಚ್ಚಿಗೆ
ಇರುವೆಯಂತೆ ಹರಿವ ಸಾಲು
ಹುಲಿ ಸಿಂಹದ ದನಿಗಳು

ನನ್ನ ಬಾಲ್ಯದಲ್ಲಿ ಎಂದೋ ನಡೆದು ಹೋಗಿದ್ದ ಆ ಘಟನೆ ಮತ್ತೆ ಸುರುಳಿ ಬಿಚ್ಚಿಕೊಂಡಿತು. ಅಪ್ಪನ ಬೈಗುಳಕ್ಕೆ ಸಿಕ್ಕು ತತ್ತರಿಸಿದ್ದ ಆತನಿಗೂ ಉರಿವ ಕಣ್ಣುಗಳಿತ್ತು ಎಂಬುದು ನೆನಪಾಯಿತು. ಪುಸ್ತಕದಲ್ಲಿದ್ದ ಎಲ್ಲಾ ಕವನಗಳು ನನ್ನ ಬಾಲ್ಯಕ್ಕೆ ಕನ್ನಡಿ ಹಿಡಿದಿತ್ತು. ಅಂದೆಂದೋ ನಡೆದ ಘಟನೆಗೆ ವಿಮರ್ಶೆ ಬರೆದಿತ್ತು. ನನ್ನೊಳಗೆ ಅಪ್ಪನ ಬಗ್ಗೆ ಇದ್ದ ಅಸಹನೆಗೆ ಮತ್ತೊಂದು ವಿಷಯ ದಾಖಲಾಯಿತು.

ಈ ಪುಸ್ತಕ ಕೈಗೆ ಸಿಕ್ಕುವವರೆಗೂ ನಿಧಾನವಾಗಿ ಓಡುತ್ತಿದ್ದ ಕಾಲ ದಿಢೀರನೆ ಬುಲೆಟ್ ಟ್ರೈನ್ ಹತ್ತಿ ಕೂತಿತ್ತು. ಅಥವಾ ಅಲ್ಲಿಯವರೆಗೂ ಗೊತ್ತಾಗದಿದ್ದ ಸಂಗತಿಗಳು ನನಗೆ ಅರಿವಾಗತೊಡಗಿತೇನೋ.

ಬೆಲ್ಚಿ ನಾಟಕ ನೋಡಿದೆ-

ದೊಡ್ಡ ಗೌಡರ ಬಾಗಿಲೀಗೆ
ನಮ್ಮ ಮೂಳೆಯ ತೋರಣ
ನಮ್ಮ ಜನಗಳ ಕಾಲು ಕೈಯಿ
ಕಂಬ ಅವರಾ ಹಟ್ಟಿಗೆ
ಅವರ ಬೇಟೆಗೆ ನಾವು ಮೊಲಗಳು
ನಮ್ಮ ಬಾಳೇ ಬಂಗಲೆ
ಅವರ ಬಂಗಲೆಯಂಗಳಕ್ಕೆ
ನಮ್ಮ ರಕ್ತದ ರಂಗೋಲೆ
ಯಾವ ಪಾಪವ ಮಾಡಲಿಲ್ಲ
ಯಾರ ತಲೆಯನು ಒಡೆಯಲಿಲ್ಲ

ಪತ್ರೆ ಸಂಗಪ್ಪನ ಕೊಲೆ ನಾಟಕ ನೋಡಿದೆ-

ಬೆಂಡಿಗೇರಿ, ಕುದುರೆಮೋತಿ, ಕೋಲಾರದ ಅನಸೂಯ.

ಎಷ್ಟೊಂದು ಕಥೆಗಳು ಬಿಚ್ಚಿಕೊಂಡವು. ಹಾಡು ಎನ್ನುವುದಕ್ಕಿಂತ ರೋಷದ ರಾಗ ಹರಡಿಕೊಂಡವು.

idu1.jpgidu1.jpgಏಟು ತಿಂದು ನೊಂದ ದಲಿತ
ಪೊಲೀಸಿಗೆ ದೂರು ಕೊಡಲು
ಅವಮಾನವಾಯಿತೆಂದು
ದರದರನೆ ಎಳೆದು ತಂದು
ನಾಯಂಗೆ ಎಳೆದು ತಂದು
ಅಲ್ಲೊಂದು ಮರಕೆ ಕಟ್ಟಿ
ತುಂಡು ತುಂಡು ಮಾಡಿದರಲ್ಲೋ

ಹಾಡು ಮಾತ್ರವಲ್ಲ. ಆ ಬೆಂಕಿಯುಗುಳುವ ಕಣ್ಣು ರೋಷತಪ್ತ ದನಿ ಎಲ್ಲವೂ ಎಲ್ಲವೂ ನನ್ನೊಳಗೆ ಇಳಿದು ಹೋಯಿತು.

ಬರುತಿಹೆವು ನಾವು ಬರುತಿಹೆವು
ಯುಗ ಯುಗಗಳಿಂದ ನೀವ್
ತುಳಿದ ಜನಗಳಾ ಕೊರಳ ದನಿಗಳು ನಾವು
ಅಸಮಾನತೆಯನು ಸುಟ್ಟು ಬಿಡಲು
ಭುಗಿಲೆದ್ದ ಬೆಂಕಿಯಾ ಜ್ವಾಲೆಗಳು

ಇದೂ ಒಳಗಿಳಿಯಿತು.

ಈ ರಾಗಗಳೇ ನನ್ನೊಳಗಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಜಾತಿ ಎಂಬ ಸೊಲ್ಲನ್ನು ಮೆಟ್ಟಿ ನಿಂತುಬಿಟ್ಟಿತು. ಜಾತಿ ಎಂಬುದನ್ನು ಕೇಳಲೂ, ಮಾತನಾಡಲೂ, ಅಗತ್ಯವಿದ್ದಾಗ ಚರ್ಚಿಸಲೂ ನನ್ನ ಬಾಯಿ ಬರದಾಯಿತು. ಪ್ರತೀ ಬಾರಿ ಈ ಪದ ಕಿವಿಗೆ ಬಿದ್ದರೆ ನನ್ನೊಳಗೆ ಆ ಉರಿವ ಕಣ್ಣಿನ ಯೋಧರು ಎದ್ದು ನಿಲ್ಲುತ್ತಿದ್ದರು.

ಪಿ.ಸಾಯಿನಾಥ್ ಸಹವಾಸ ಒದಗಿ ಬಂತು.
ಪುಸ್ತಕದ ಮೂಲಕ…. ಬರಹದ ಮೂಲಕ…

ಊರು ಕೇರಿಗಳು ಚಾದಂಗಡಿಗಳು ಹೇಗೆ ಎರಡು ಲೋಟ ಪದ್ಧತಿ ಹೊಂದಿದೆ ಎಂಬುದನ್ನು ಬಿಡಿಸಿಟ್ಟಿದ್ದರು. ಆಂಧ್ರದಲ್ಲೆಲ್ಲೋ ಎರಡು ಲೋಟ ಒಡೆಯುವ ಚಳುವಳಿ ಹೊಮ್ಮಿದ್ದೂ ಗೊತ್ತಾಯಿತು. ಊರೂರು ಸುತ್ತುವ ಕಾಲ ಬಂದಾಗಲೆಲ್ಲಾ ಚಾದಂಗಡಿಯಲ್ಲಿ ನನ್ನ ಕಣ್ಣು ಓಡಾಡುತ್ತಿತ್ತು. ಎರಡು ಲೋಟಗಳ ಬಗ್ಗೆ ತಪಾಸಣೆ ಮಾಡುತ್ತಿತ್ತು.

ಹೀಗಿರುವಾಗಲೇ ಸಾಯಿನಾಥರೂ ಸಿಕ್ಕಿಬಿಟ್ಟರು. ನನ್ನೊಳಗಿದ್ದ ಅನೇಕ ಕಥೆಗಳಿಗೆ ಇನ್ನಷ್ಟು ಸುರಿದು ಹೋದರು.

ಬಿಳಿ ಬಟ್ಟೆ ಧರಿಸಿದ್ದಕ್ಕೇ ಕೊಲೆಯಾಗಿ ಹೋದ, ಸತ್ತರೂ ಮಣ್ಣಿಗೆ ಜಾಗ ಸಿಗದ, ಪೋಸ್ಟ್ ಕೊಡಲು ಹೋಗುವಾಗ ಸೈಕಲ್ ಏರಿದ, ಓಟದಲ್ಲಿ ಗೆದ್ದ ಎಂಬ ಕಾರಣಕ್ಕೇ ಸೆನ್ಸಸ್ ನ ಅದ್ಭುತ ಅಂಕಿ ಅಂಶಗಳಿಂದ ಅಳಿಸಿ ಹೋದ ಜನರ ಕಥೆ ಹೇಳಿದರು.

ಇತ್ತೀಚೆಗೆ ಇಂಟರ್ ವ್ಯೂ ಹಾಲ್ ನಲ್ಲಿ ಕುಳಿತಿದ್ದೆ. ತುಂಬಾ ಓದಿದ್ದ, ಬುದ್ಧಿವಂತನಾಗಿದ್ದ, ವಿಮರ್ಶೆ ಗೊತ್ತಿದ್ದ, ಸಾಹಿತ್ಯದ ಗಂಧವಿದ್ದ ಹುಡುಗನೊಬ್ಬ ಎದುರು ಕುಳಿತ. ಆತನ ಅರ್ಜಿ ತಿರುವಿ ಹಾಕುತ್ತಿದ್ದೆ. ಇನ್ನೇನು ಪ್ರಶ್ನೆ ಎಸೆಯಬೇಕು ಅವನ ಅರ್ಜಿಯಲ್ಲಿ “ಜಾತಿ” ಕಾಲಂ ಕಂಡಿತು. ಚೇಳು ಕಚ್ಚಿದಂತಾಯಿತು.

ಆ ನಗಾರಿ ಸದ್ದು ಗುಡುಗಲು ಆರಂಭವಾಯಿತು. ಉರಿವ ಕಣ್ಣುಗಳ ಹುಡುಗರು ಎದ್ದು ನಿಂತರು. ರೋಷ ಚಿಮ್ಮಲಾರಂಭಿಸಿತು. ಎದುರಿಗಿದ್ದವನ ಮುಖದಲ್ಲಿ ಅಪ್ಪ ಕಾಣಿಸಿಕೊಂಡ.

‍ಲೇಖಕರು avadhi

September 5, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಡೋರ್ ನಂ ೧೪೨: ಇವು ಶಬ್ದಚಿತ್ರಗಳು

ಡೋರ್ ನಂ ೧೪೨: ಇವು ಶಬ್ದಚಿತ್ರಗಳು

ಉದಯಕುಮಾರ್ ಹಬ್ಬು 'ಡೋರ್ ನಂ 142' ಈ ಕೃತಿ ನಮ್ಮೆಲ್ಲರ ಮನೆ ಮನದ ಡೋರ್ ನಂ ಆಗಿಬಿಟ್ಟಿದೆ. ನಮೆಲ್ಲರ ಬಾಲ್ಯದ ನೆನಪುಗಳು, ಹದಿಹರೆಯದ ಬಿಸಿ,...

ಯಾವುದೀ ಪ್ರವಾಹವು…

ಯಾವುದೀ ಪ್ರವಾಹವು…

ಡೋರ್ ನಂ 142 ಬಹುರೂಪಿ   ಮುಖ ಮುಖವೂ ಮುಖವಾಡವ ತೊಟ್ಟು ನಿಂತ ಹಾಗಿದೆ ಆಡುತಿರುವ ಮಾತಿನೊಳಗೆ ಹೃದಯ ಕಾಣದಾಗಿದೆ ಯಾವುದೀ ಪ್ರವಾಹವು... ರೇಡಿಯೋ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This