ಲಂಕೇಶರು ಮೊದಲು ಸಂಪಾದಕರಾಗಿದ್ದು `ಲಂಕೇಶ್ ಪತ್ರಿಕೆ'ಗಲ್ಲ; `ಪಾಂಚಾಲಿ' ಗೆ

ಬಸವರಾಜು ಲಂಕೇಶರ ಉಸಿರಿನಂತೆ ಒಡನಾಡಿದವರು. ‘ಲಂಕೇಶ್ ಪತ್ರಿಕೆ’ಯ ಹಿಂದೆ ಕಾಣದಂತೆ ಕೆಲಸ ಮಾಡಿದವರು. ಲಂಕೇಶ್ ಪತ್ರಿಕೆ ರೂಪುಗೊಳ್ಳುವುದಕ್ಕೆ ಮುನ್ನವೇ ಲಂಕೇಶ್ ‘ಪಾಂಚಾಲಿ’ ರೂಪಿಸಿದ್ದರು. ಕನ್ನಡದ ವಿಶೇಷಾಂಕಗಳು ನಾಚಿಕೆ ಪಟ್ಟುಕೊಳ್ಳುವಂತೆ ಪಾಂಚಾಲಿ ರೂಪುಗೊಂಡಿತ್ತು.
ನೆಲಮನೆ ದೇವೇಗೌಡರ ಅಗಾಧ ಉತ್ಸಾಹ, ಲಂಕೇಶರ ಹುರುಪು ಎರಡೂ ಕನ್ನಡಕ್ಕೆ ‘ನ ಭೂತೋ, ನ ಭವಿಷ್ಯತಿ..’ ಎನ್ನುವ ವಿಶೇಷಾಂಕ ಕೊಟ್ಟಿತು. ಆ ಪಾಂಚಾಲಿ ಕಥೆಯನ್ನು ಬಸವರಾಜು ಇಲ್ಲಿ ಮೆಲುಕು ಹಾಕಿದ್ದಾರೆ.
ಈ ಲೇಖನ ಒದಗಿಸಿದ್ದಕ್ಕಾಗಿ ಬಸವರಾಜು ಅವರಿಗೆ ಥ್ಯಾಂಕ್ಸ್
-ಬಸವರಾಜು
`ಮೇಸ್ಟ್ರನ್ನ ಹಿಂದಕ್ಕೂರಿಸ್ಕಂಡ್ ಒಸಿ ಸುತ್ತಿದೀನ ಬಸುರಾಜು… ಹೋಗ್ದೆ ಇರ ಜಾಗ್ವೇ ಇಲ್ಲ, ನಂದೋ ಲಡಾಸ್ ಸ್ಕೂಟ್ರು, ನಾನಾಗ ಅಂತಾ ದಪ್ಕಿರಲಿಲ್ಲ, ಮೇಸ್ಟ್ರು ಜೋರಾಗಿದ್ರು, ಒಳ್ಳೆ ಎದ್ದಾಳು, ಇಬ್ರು ಸೇರದ್ರೆ ಏನಾಗನ ಅದು, ಎಳೀವಳ್ದು ನಾವ್ ಬುಡ್ತಿಲ್ಲ… ಪೆಟ್ರೋಲ್ಗೂ ಕಾಸಿಲ್ಲ, ನಮ್ ಪೆಟ್ರೋಲ್ಗುವೆ… ಅಂತಾದ್ರಲ್ಲಿ ಮೇಸ್ಟ್ರು ಹುಚ್ಚತ್ತಿಸ್ಕಂಡವ್ರೆ, ಲೇ ಗೌಡ, ನಂಗೊತ್ತಿಲ್ಲ ಸ್ಪೆಷಲ್ ಇಷ್ಯೂ ತರ್ಬೇಕು ಕಣಲೇ ಅಂತರೆ…’
`ಪಾಂಚಾಲಿ ಹೆಂಗ್ಬಂತು ಗೌಡ್ರೆ…’ ಎಂದು ನೆಲಮನೆ ಪ್ರಕಾಶನದ ದೇವೇಗೌಡ್ರನ್ನ- ಅವರು ಸಾಯುವುದಕ್ಕೆ ಮುಂಚಿನ ಆರೇಳು ತಿಂಗಳಿನಲ್ಲಿ, ಹೀಗೆ ಸಂಜೆಯ `ಕೂತು ಮಾತಾಡುವ’ ತಂಪು ಹೊತ್ತಿನಲ್ಲಿ ಕೇಳಿದಾಗ, ಪಾಂಚಾಲಿ ಹುಟ್ಟಿದ್ದು, ಮೇಸ್ಟ್ರು ತಲೆಕೆಡಿಸಿಕೊಂಡಿದ್ದು, ಕಾಸಿಗಾಗಿ ಪರದಾಡಿದ್ದು, ಹೊಸ ತಲೆಮಾರಿನ ಲೇಖಕ/ಲೇಖಕಿಯರನ್ನು ಪಟ್ಟಿ ಮಾಡಿದ್ದು, ಮಾಡುವಾಗ ಎದುರಾದ ಸಮಸ್ಯೆಗಳು, ಅನಗತ್ಯ ವಾದ-ವಿವಾದಗಳು, ಮನಸ್ತಾಪಗಳು, ಜಗಳಗಳು… ಹೀಗೆ ಎಲ್ಲವನ್ನೂ ಸ್ವಾರಸ್ಯಕರವಾಗಿ ಬಿಚ್ಚಿಡತೊಡಗಿದರು.
ಲಂಕೇಶರು ಮೊದಲು ಸಂಪಾದಕರಾಗಿದ್ದು `ಲಂಕೇಶ್ ಪತ್ರಿಕೆ’ಗಲ್ಲ; `ಪಾಂಚಾಲಿ’ ಎಂಬ ವಿಶೇಷ ಸಂಚಿಕೆಗೆ. 1974ರಲ್ಲಿ ಹೊರಬಂದ ಇದು `ಪ್ರಜಾವಾಣಿ’ ದೀಪಾವಳಿ ವಿಶೇಷಾಂಕವನ್ನು ಹೋಲುವ ಆಕಾರ ಮತ್ತು ಸೈಜ್ನಲ್ಲಿತ್ತು. ಇದು ಕೂಡ `ದೀಪಾವಳಿ-ರಾಜ್ಯೋತ್ಸವ ವಿಶೇಷ ಸಂಚಿಕೆ’ ಎಂಬ ಹಣೆಪಟ್ಟಿ ಹಚ್ಚಿಕೊಂಡಿತ್ತು. ಆ ಕಾಲಕ್ಕೇ ನವ್ಯ, ವೈಚಾರಿಕ, ಪ್ರಗತಿಪರ ಆಲೋಚನೆಗಳ ಸಿಡಿಗುಂಡುಗಳಂತಹ ಲೇಖಕರಿದ್ದ, ಚಿಂತನೆಗಚ್ಚುವ ಬರಹಗಳಿಂದ ಕೂಡಿದ, ಈ ಕಾಲಕ್ಕೂ ವಿಶಿಷ್ಟವಾದ ಅಪರೂಪದ ಅದ್ಭುತ ಸಂಚಿಕೆ.
ಲಂಕೇಶರ ಒಡನಾಟಕ್ಕೆ ಬಿದ್ದಾಗಿನಿಂದಲೂ, ಅವರಿಗೆ ಸಂಬಂಧಪಟ್ಟ ಹತ್ತಾರು ವಿಷಯಗಳನ್ನು ಅರಿಯುವ, ಅರಗಿಸಿಕೊಳ್ಳುವ, ಅದರಲ್ಲೇ ಏನೋ ಒಂದು ಖುಷಿ ಕಾಣುವ ನನಗೆ, ಅವರಿಗೆ ಹತ್ತಿರವಾದಂತೆಲ್ಲ ಅರ್ಥವಾಗದವರಂತೆಯೇ ಕಾಣುತ್ತಿದ್ದರು. ಆ ವ್ಯಕ್ತಿತ್ವವೇ ಅಂಥಾದ್ದು- ವಿಸ್ಮಯ, ವಿಚಿತ್ರ. ಎಪ್ಪತ್ತರ ದಶಕದಲ್ಲಿ ಲಂಕೇಶರು ಸಂಪಾದಿಸಿದ್ದ `ಪಾಂಚಾಲಿ’ಯ ಬಗೆಗಿನ ಬೆರಗು ಕೂಡ ಅಂಥಾದ್ದೇ ಒಂದಾಗಿ ಬುದ್ಧಿಗೆಡಿಸಿತ್ತು. ಏನಾದರೂ ಮಾಡಿ ಅದನ್ನೊಂದು ಸಲ ನೋಡಬೇಕು, ಓದಬೇಕು ಎಂದು ನೇರವಾಗಿ ಹೋಗಿ ಲಂಕೇಶರನ್ನೇ ಕೇಳಿದ್ದೆ. ಅದಕ್ಕವರು ಎಂದಿನ ತಮ್ಮ ಉಡಾಫೆಯಿಂದ, `ಅದ್ನೆಲ್ಲ ಯಾರಿಡ್ತರಲೇ…’ ಎಂದು ಒಂದೇ ಸಾಲಿನ ಉತ್ತರದಲ್ಲೇ ಎಲ್ಲವನ್ನೂ ಹೇಳಿ ಸುಮ್ಮನಾಗಿಸಿದ್ದರು.

ಅವರಿದ್ದದ್ದೇ ಹಾಗೆ- ನಿರ್ಲಕ್ಷಿಸುವ ಮೂಲಕ ಕುತೂಹಲ ಕೆರಳಿಸುವುದು. ನಿರಾಕರಿಸುವ ಮೂಲಕ ನಿರೀಕ್ಷೆಯ ಬೀಜ ಬಿತ್ತುವುದು. ಹಳೆಯದನ್ನು ಕಂಡರೆ ಕಣ್ಣರಳಿಸುವುದು, ಅಷ್ಟೇ ಬೇಗ ಖಿನ್ನರಾಗುವುದು. ಇದನ್ನು ಅವರ ನಡವಳಿಕೆಗಳಿಂದ ಖುದ್ದಾಗಿ ಕಂಡಿದ್ದೆ. ಪತ್ರಿಕೆಯಲ್ಲಿ, ಅವರೊಂದಿಗೆ ಕೆಲಸ ಮಾಡುತ್ತಿದ್ದಾಗ ಅವರ ಕೆಲ ಅಭಿಮಾನಿಗಳು ಅವರಿಗೆ ಸಂಬಂಧಿಸಿದ ಅಪರೂಪದ ಹಳೆಯ ವಸ್ತುಗಳನ್ನು ತಂದು ಕೊಡುತ್ತಿದ್ದರು. ಅವರ ಕೆಲವೇ ಕೆಲವು ಸ್ನೇಹಿತರು ಆಗಾಗ ಬಂದು ಮರೆತುಹೋದ ವಿಷಯಗಳನ್ನು ಜ್ಞಾಪಿಸುತ್ತಿದ್ದರು. ಅದನ್ನೆಲ್ಲ ಬಹಳ ಸಂಭ್ರಮದಿಂದಲೇ ಸವಿಯುತ್ತಿದ್ದರು.
ಒಂದು ಸಲ ಹೀಗೆಯೇ, ಯಾರೋ ಅವರ ಅಭಿಮಾನಿಯೊಬ್ಬರು, ಅವರ ಒಂದು ಹಳೆಯ ಫೋಟೋವನ್ನು- ಸುಮಾರು ವರ್ಷಗಳಿಂದ ಜೋಪಾನವಾಗಿ ಕಾಪಾಡಿಕೊಂಡು ಬಂದ್ದದ್ದನ್ನು- ಪೋಸ್ಟ್ ಮುಖಾಂತರ ಕಳುಹಿಸಿಕೊಟ್ಟಿದ್ದರು. ಅದು ಸುಮಾರು ಎಪ್ಪತ್ತರ ದಶಕದ್ದು, ಬ್ಲ್ಯಾಕ್ ಅಂಡ್ ವೈಟ್ ಕಾಲದ್ದು. ತುಂಬಾ ಚೆನ್ನಾಗಿತ್ತು. ಮೇಸ್ಟ್ರು ಹ್ಯಾಂಡ್ಸಮ್ಮಾಗಿದ್ದರು. ಆ ಫೋಟೋ ನಮ್ಮ ಪಾಲಿಗೆ ನಿಧಿ. ಮೇಸ್ಟ್ರಿಗೆ ತೆಗೆದುಕೊಂಡು ಹೋಗಿ ಕೊಟ್ಟೆ, ನೋಡಿದರು, ಮಾತಿಲ್ಲ, ಮುಖದಲ್ಲಿ ಯಾವ ಭಾವನೇನೂ ಇಲ್ಲ. ತಕ್ಷಣ ಹರಿದು ಕಸದಬುಟ್ಟಿಗೆ ಹಾಕಿದರು. `ಜೀವವಿರುವ ನಾನೇ ಇರುವಾಗ, ಜೀವವಿಲ್ಲದ ಫೋಟೋ ಯಾಕೆ’ ಎಂಬ ಭಾವ. ಸೇಡ್, ಬೋದಿಲೇರ್, ಕಾಮು, ಕಾಫ್ಕಾ ಎಲ್ಲ ಲಂಕೇಶರಲ್ಲಿಯೇ. ಒಂದೇ ಗಳಿಗೆಯಲ್ಲಿಯೇ. ಅಲ್ಲಿ ನಿಲ್ಲಲಿಕ್ಕೇ ಹೆದರಿಕೆಯಾಯಿತು.
ಈತನ್ಮಧ್ಯೆ ಒಂದ್ಸಲ ಊರಿಗೆ ಹೋಗಿದ್ದೆ, ಅದು 1992. ನಮ್ಮ ಮನೆ ಶಿಫ್ಟ್ ಮಾಡ್ತಿದ್ದರು. ಹಳೆಮನೆಯಿಂದ ಹೊಸಮನೆಗೆ ಸಾಮಾನು ಸಾಗಿಸುತ್ತಿದ್ದರು. ಅದರಲ್ಲಿ ಪುಸ್ತಕಗಳ ಒಂದು ದೊಡ್ಡ ಗಂಟೂ ಇತ್ತು. ಅದನ್ನು ನಮ್ಮಣ್ಣ ಕೆದಕುತ್ತ, ಅವನ ಮೈಸೂರಿನ ಮಹಾರಾಜ ಕಾಲೇಜಿನ ನೆನಪಿನ ಬುತ್ತಿಯನ್ನು ಬಿಚ್ಚಿಕೊಂಡಿದ್ದ. `ಬಸ್ವಾ, ಇದ್ ನೋಡಿದ್ದಾ ನೀನು…’ ಎಂದು ರಾಗ ಎಳೆದ. ನೋಡಿದ್ರೆ ಪಾಂಚಾಲಿ!
ಗಂಟಿನಲ್ಲಿ ಇದ್ದದ್ದಕ್ಕೋ ಏನೋ ಹಳದೀ ಬಣ್ಣಕ್ಕೆ ತಿರುಗಿತ್ತು, ಜಿರಲೆಗಳ ಜಬರಾಟದಿಂದ ಕವರ್ ಪೇಜ್ ತೂತ್ ತೂತಾಗಿತ್ತು, ಕೈಗೆತ್ತಿಕೊಂಡರೆ ಗಮ್ಮಂತ ವಾಸನೆ ಬತರ್ಿತ್ತು. 1974ರಲ್ಲಿ ಪ್ರಕಟವಾಗಿದ್ದು, ಸುಮ್ಮನೆ ಲೆಕ್ಕ ಹಾಕಿದೆ… ಅವತ್ತಿಗೆ ಪಾಂಚಾಲಿಗೆ ಹದಿನೆಂಟು ವರ್ಷವಾಗಿತ್ತು, ಹರೆಯದ ಹುಡುಗಿಯ ಬೆವರಿನ ವಾಸನೆ ಮೂಗಿಗಡರುತ್ತಿತ್ತು! ಅಷ್ಟು ವರ್ಷ ಜತನದಿಂದ ಕಾಪಾಡಿಕೊಂಡು ಬಂದಿದ್ದ ಅಣ್ಣನನ್ನು ಅಲ್ಲೇ ಬಿಟ್ಟು ಪಾಂಚಾಲಿಯನ್ನು ಎತ್ತಿಕೊಂಡು ಓಡಿದೆ. ಯಾರೂ ಇಲ್ಲದ ಜಾಗ ನೋಡಿ ಪಾಂಚಾಲಿಯ ನಿರಿಗೆಗಳಂಥ ಪುಟಗಳನ್ನು ನಿಧಾನವಾಗಿ ಬಿಚ್ಚತೊಡಗಿದೆ.
ಪುಟ ತಿರುವಿದಂತೆಲ್ಲ ಪುಟಿದೇಳುತ್ತಿದ್ದ ಉತ್ಸಾಹ… ಕಣ್ಣಿಗೆ ಬಿದ್ದಳು ನೀಲು-
`ಹಾಲು ಹಿಂಡುವ ಹರಯದ
ಅವಳ ಬೆರಳಲ್ಲಿ
ಆಕಳ ಮೊಲೆಯ
ಪುಲಕ’
ನೀಲು ಜೊತೆಗೆ ಹಾದಿಮನಿ, ಎಂಎಸ್ ಮೂತರ್ಿ ಬರೆಯುತ್ತಿದ್ದಂಥದೇ ಚಿತ್ರ. ಅಂದ್ರೆ ನೀಲು ಹುಟ್ಟಿದ್ದು 1974ರಲ್ಲಿ. ಪಾಂಚಾಲಿ ಹೊಟ್ಟೆಯಲ್ಲಿ. ಅರೆ, ಅವತ್ತಿಗೆ ಪಾಂಚಾಲಿಗೂ ಹದಿನೆಂಟು, ನೀಲೂಗೆ ಹದಿನೆಂಟು!
ಹಾಗೇ ನೋಡ್ತಾ ಹೋದೆ, ಮೇಸ್ಟ್ರ ಹಸ್ತಾಕ್ಷರವೂ ಇದೆ. ಕುವೆಂಪು ಅವರನ್ನು ಸಂದಶರ್ಿಸಲು, ಅವರಿಗೆ ಮೊದಲೇ ಕೆಲವು ಪ್ರಶ್ನೆಗಳನ್ನು ಕಳುಹಿಸಿಕೊಟ್ಟಿದ್ದಾರೆ. ಕೈ ಬರಹವನ್ನೇ ನೆಗಟಿವ್ ಮಾಡಿಸಿ ಯಥಾವತ್ ಪ್ರಕಟಿಸಿದ್ದಾರೆ. ಮೇಸ್ಟ್ರ ಅಕ್ಷರಗಳು- ದಪ್ಪ, ಇದ್ದಕ್ಕಿದ್ದಂತೆ ಸಣ್ಣ, ಮತ್ತೆಲ್ಲೋ ಬಾಣ ಹಾಕಿ ಅತಿ ಸಣ್ಣಗೆ ಕೊರೆದಿದ್ದಾರೆ. ಕುವೆಂಪು ಆ ಪ್ರಶ್ನೆಗಳಿಗೆಲ್ಲ ವಿವರವಾಗಿ ಉತ್ತರಿಸಿದ್ದಾರೆ. ಒಂದೊಂದು ಪ್ರಶ್ನೆಯೂ ಎದೆಗೇ ನೇರವಾಗಿ ಬಾಣ ಬಿಟ್ಟಂತೆ. ಉತ್ತರವೂ ಅಷ್ಟೇ- ಯಾವ ಅನುಮಾನಕ್ಕೂ ಆಸ್ಪದವೀಯದಂತೆ. ಆ ಸಂದರ್ಶನ ಆ ಸಂಚಿಕೆಯ ವಿಶೇಷ. ಇಬ್ಬರು ದಿಗ್ಗಜರ ನಡುವಿನ ಅಪರೂಪದ, ಕನ್ನಡ ಸಾಹಿತ್ಯಲೋಕದಲ್ಲಿ ಮಹತ್ವದ ಸ್ಥಾನ ಪಡೆದ ಸಂದರ್ಶನಗಳಲ್ಲೊಂದು ಎಂಬುದು ನನ್ನ ಗ್ರಹಿಕೆ.
ಇದರಷ್ಟೇ ಮುಖ್ಯವಾದ `ಪಾಂಚಾಲಿ’ಯ ಮತ್ತೊಂದು ಅಂಶವೆಂದರೆ, ಕನರ್ಾಟಕದ ಪ್ರತಿಭಾವಂತ ತರುಣ ಜನಾಂಗ- ಲೇಖಕರು, ಚಿತ್ರಕಾರರು, ವೈದ್ಯರು, ಅಧ್ಯಾಪಕರು, ಇತ್ಯಾದಿ ಎಂದು ನಲವತ್ತೇಳು ಜನರನ್ನು ಗುರುತಿಸಿರುವುದು. ಅವರ ಚಿತ್ರಗಳನ್ನು ಹಾಕಿ, ಒಂದು ಪುಟ್ಟ ಪ್ಯಾರಾದಲ್ಲಿ ಅವರ ಪರಿಚಯವನ್ನೂ ನೀಡಿರುವುದು. ಅದರಲ್ಲಿ ದೇವನೂರ ಮಹಾದೇವರಿಂದ ಹಿಡಿದು ಎಚ್.ಎನ್.ನಂಜೇಗೌಡರವರೆಗೆ, ಪ್ರೊಫೆಸರ್ ನಂಜುಂಡಸ್ವಾಮಿಯವರಿಂದ ಹಿಡಿದು ಕೆ.ವಿ.ತಿರುಮಲೇಶ್ರವರೆಗೆ, ಎಚ್.ಎಲ್.ಕೇಶವಮೂತರ್ಿಯವರಿಂದ ಹಿಡಿದು ಗಿರೀಶ್ ಕಾನರ್ಾಡರವರೆಗೆ, ಭಾರ್ಗವಿ ನಾರಾಯಣ್ರಿಂದ ಹಿಡಿದು ಚಂದ್ರಶೇಖರ ಕಂಬಾರರವರೆಗೆ… ಕನರ್ಾಟಕ ಕಂಡ ಅತಿರಥ ಮಹಾರಥರೆಲ್ಲ ಅಲ್ಲಿದ್ದಾರೆ. ಅಂದಿನ ಕಪ್ಪು-ಬಿಳುಪಿನ ಮಸಕು ಮಸಕಾದ ಫೋಟೋಗಳು. ಕೆಲವು ಹೆಬ್ಬರಳ ಗಾತ್ರವಾದರೆ, ಇನ್ನು ಕೆಲವು ಸ್ಟಾಂಪ್ ಸೈಜ್, ಎಲ್ಲೋ ಒಂದೆರಡು ಮಾತ್ರ ದೊಡ್ಡವು. ಇವತ್ತು ಅವರೆಲ್ಲ ಏನೇನೋ ಆಗಿಹೋಗಿದ್ದಾರೆ. ಕೆಲವರು ಇದ್ದಾರೆ, ಇನ್ನು ಕೆಲವರು ಇಹಲೋಕ ತ್ಯಜಿಸಿದ್ದಾರೆ.
ಹಾಗೇ ಪುಟ ತಿರುವಿದರೆ, ಒಂದು ಪೇಜಿನಲ್ಲಿ ಒಂದು ಕವನ ಮತ್ತು ಪುಟ್ಟ ಬರಹವಿದೆ. ಕವನ ದೇವನೂರ ಮಹಾದೇವರದು, ಲೇಖನ ಶ್ರೀಧರ ಕಲಿವೀರರದು. ಇವರಿಬ್ಬರ ಬರಹಕ್ಕೆ ಹೆಡ್ಡಿಂಗು- ಇಬ್ಬರು `ಹೊಲೆಯ’ ಬುದ್ಧಿಜೀವಿಗಳ ರಕ್ತಸಂವೇದನೆಯ ಮಾತುಗಳು. ಆಮೇಲೆ ಎರಡೇ ಸಾಲಿನ ಇಂಟ್ರೋ- `ಇವರಿಬ್ಬರು ಹೊಲೆಯರು. ಹೊಲೆಯರಾಗಿರುವುದರ ನೋವು, ಹಿಂಸೆ, ನರಕ ಮತ್ತು ವಿಚಿತ್ರ ಕನಸು ಇವರಿಗೆ ಗೊತ್ತು’ ಎಂದು ಬರೆಯಲಾಗಿದೆ. ಇದು ಇವತ್ತಿಗೂ ಯಾವ ಪತ್ರಿಕೆಯಲ್ಲೂ ಕಾಣದ್ದು- ಅವತ್ತಿಗೇ ಲಂಕೇಶರು ಕಂಡಿರಿಸಿದ್ದು.
ಶ್ರೀಕೃಷ್ಣ ಆಲನಹಳ್ಳಿಯವರ `ಪರಸಂಗದ ಗೆಂಡೆತಿಮ್ಮ’ ಕಾದಂಬರಿ ಮೊಟ್ಟ ಮೊದಲ ಬಾರಿಗೆ ಬೆಳಕು ಕಂಡಿದ್ದೇ `ಪಾಂಚಾಲಿ’ಯಲ್ಲಿ. ಆನಂತರ ಅದು ಚಲನಚಿತ್ರವಾಗಿದ್ದು, ಚಿತ್ರರಸಿಕರ ಮನ ಗೆದ್ದಿದ್ದು, ಸಿನಿಲೋಕದಲ್ಲಿ ಸದ್ದು ಮಾಡಿದ್ದು. ಆಲನಹಳ್ಳಿಯವರ `ಗೆಂಡೆತಿಮ್ಮ’ ಗಂಭೀರ ವಸ್ತುವುಳ್ಳ ಉತ್ಕೃಷ್ಟ ಕಾದಂಬರಿ. ಕಥಾನಾಯಕ ಗೆಂಡೆತಿಮ್ಮ ಫ್ಯಾಷನ್ ವಸ್ತುಗಳನ್ನು ಮಾರಾಟ ಮಾಡುವ ಅನ್ಫ್ಯಾಷನಬಲ್ ಮನುಷ್ಯ. ಆತ ತನಗೆ ಗೊತ್ತಿಲ್ಲದಂತೆಯೇ ತನ್ನ ಸಾಮಾನುಗಳನ್ನು ಮಾರಾಟ ಮಾಡುವ ಮೂಲಕ ಹಳ್ಳಿಗಳಲ್ಲಿ ಬದಲಾವಣೆಗಳನ್ನು, ದುರಂತವನ್ನು ಬಿತ್ತುತ್ತಾನೆ. ಗೆಂಡೆತಿಮ್ಮನ ಕಥಾವಸ್ತು- ಫ್ಯಾಷನ್ ವಸ್ತುಗಳು ಹಳ್ಳಿ ಪ್ರವೇಶಿಸುವಂಥಾದ್ದು, ಒಂದು ರೀತಿಯಲ್ಲಿ ಭವಿಷ್ಯ ಭಾರತದ್ದು. ಅಂದರೆ 1974ರಲ್ಲಿಯೇ ಶ್ರೀಕೃಷ್ಣ ಆಲನಹಳ್ಳಿಯವರು ಜಾಗತೀಕರಣವನ್ನು ಗ್ರಹಿಸಿದ್ದರು. `ಸಿನಿಮಾ ಮತ್ತು ಜಾಗತೀಕರಣ’ ಎಂಬ ವಿಷಯದ ಬಗ್ಗೆ ಯಾರಾದರು ಗಂಭೀರವಾದ ಸಂವಾದ ಏರ್ಪಡಿಸಿದರೆ- ಅದರಲ್ಲಿ ಮುಖ್ಯವಾಗಿ ಚಚರ್ೆಗೆತ್ತಿಕೊಳ್ಳಲೇಬೇಕಾದ ಚಿತ್ರವಾಗಿ `ಗೆಂಡೆತಿಮ್ಮ’ ಅಗ್ರಪಂಕ್ತಿಯಲ್ಲಿದ್ದರೆ ಆಶ್ಚರ್ಯವಿಲ್ಲ. ಹಳ್ಳಿಗಳಿಗೆ ಪೆಟ್ಟಿಕೋಟ್, ಬ್ರಾ, ಗಮಂದೆಣ್ಣೆ ಪ್ರವೇಶ ಪಡೆಯುವ ಮೂಲಕ ಹಳ್ಳಿಯಲ್ಲಾಗುವ ಬದಲಾವಣೆಗಳನ್ನು ಆಲನಹಳ್ಳಿ ಅಂದೇ ಚಿತ್ರಿಸಿದ್ದರು.
ಬೆಸಗರಹಳ್ಳಿ ರಾಮಣ್ಣ, ಶಾಂತಿನಾಥ ದೇಸಾಯಿ, ವೀಣಾ, ಸೀತಾ, ಗೀತಾ ಕುಲಕಣರ್ಿ, ಸಿದ್ಧಲಿಂಗ ಪಟ್ಟಣಶೆಟ್ಟರ ಕತೆಗಳು, ಚೆನ್ನವೀರ ಕಣವಿ, ಲಂಕೇಶ್, ಚದುರಂಗರ ಕವಿತೆಗಳು, ಚಂಪಾರ ಜಗದಂಬೆ- ಇಂದಿರಾಗಾಂಧಿಯನ್ನು ದುಗರ್ಿಯನ್ನಾಗಿ ಚಿತ್ರಿಸಿದ ನಾಟಕ, ಚಿದಾನಂದಮೂತರ್ಿ, ಜಿಎಸ್ಸೆಸ್, ನಿಸಾರ್ ಅಹಮದ್, ಸಿದ್ಧಲಿಂಗಯ್ಯ, ತೇಜಸ್ವಿ, ಎಚ್ಚೆಲ್ಕೆ, ಪ್ರೊ.ಎಂಡಿಎನ್ರ ಲೇಖನಗಳು… ಯಾವ ಪ್ರತಿಷ್ಠಿತ ಪ್ರತಿಕೆಯೂ- ತನ್ನ ಓದುಗ ವಲಯ, ತಾನು ಕಟ್ಟಿಕೊಂಡ ಸಕ್ಯರ್ುಲೇಷನ್ ಸಾಮ್ರಾಜ್ಯ ಮತ್ತು ತಾನು ಗಳಿಸಿಕೊಂಡ ಸಾಹಿತ್ಯಕ, ಸಾಂಸ್ಕೃತಿಕ ಸ್ಥಾನಮಾನಗಳ ಆಧಾರದ ಮೇಲೆ- ರೂಪಿಸಲಾಗದಿದ್ದ ಸಂಚಿಕೆಯನ್ನು ಮೇಸ್ಟ್ರು, ಸರಿಯಾಗಿ ಕೂರಲು ಒಂದು ಕಚೇರಿ ಕೂಡ ಇಲ್ಲದ ಸ್ಥಿತಿಯಲ್ಲಿ ಕೆಲವೇ ಕೆಲವು ಗೆಳೆಯರೊಳಗೂಡಿ ರೂಪಿಸಿದ್ದರು. ಒಂದು ರೀತಿಯಲ್ಲಿ ಅದು ಶೂನ್ಯ ಸಂಪಾದನೆ. ಮತ್ತೊಂದು ರೀತಿಯಲ್ಲಿ ಲಂಕೇಶರ ದೈತ್ಯ ಪ್ರತಿಭೆಯ ಅನಾವರಣ.
ಪೊಗದಸ್ತಾಗಿರುವ ಪಾಂಚಾಲಿಯಲ್ಲಿ ಭವಿಷ್ಯದ ಊರ್ವಶಿ ಎಂದು ವನಮಾಲಾ ವಿಶ್ವನಾಥ್ರನ್ನು, ಪ್ರತಿಭಾವಂತ ನರ್ತಕಿ ಎಂದು ಉಮಾ ಎಂಬ ಭರತನಾಟ್ಯ ಕಲಾವಿದೆಯನ್ನು ಪರಿಚಯಿಸುವ ಲೇಖನಗಳೂ ಇವೆ. ಆಶ್ಚರ್ಯವೆಂದರೆ, ಈ ಲೇಖನಗಳನ್ನು ಬರೆದವರು ನೀಲು!
ಇಷ್ಟೆಲ್ಲ ಇದ್ದ ಪಾಂಚಾಲಿಯೊಂದಿಗೆ ಅದೆಷ್ಟು ರಾತ್ರಿಗಳನ್ನು ಕಳೆದಿದ್ದೆನೋ? ಹೀಗೇ ನಡೆದಿತ್ತು ಪಾಂಚಾಲಿಯೊಂದಿಗೆ ನನ್ನ ಸಂಸಾರ! ಇದರ ನಡುವೆಯೇ ಪಾಂಚಾಲಿಯನ್ನು ಮೇಸ್ಟ್ರಿಗೆ ತೋರಿಸುವ ಆಸೆಯೂ ಗರಿಗೆದರತೊಡಗಿತು. ಹಾಗೆಯೇ ಪಾಂಚಾಲಿ ನನ್ನವಳು ಎಂದರೆ? ಇಟ್ಟುಕೊಂಡರೆ ಓಕೆ, ಇದಕ್ಕೂ ಆ ಫೋಟೋಗಾದ ಗತಿಯಾದರೆ? ಈ ಅನುಮಾನ, ಹೆದರಿಕೆಗಳೆಲ್ಲ ನನ್ನೊಳಗೇ ಥಳಕು ಹಾಕಿಕೊಂಡು, ಅವರಿಗೆ ತೋರಿಸುವ ಧೈರ್ಯವೇ ಬರಲಿಲ್ಲ. ಆದರೆ ಪಾಂಚಾಲಿಯ ನೀಲು ಮಾತ್ರ ತಲೆಕೆಡಿಸುತ್ತಲೇ ಇತ್ತು. ಆ ಚಿತ್ರ-ಬರಹ ಬೇರೆ ಥರಾನೇ ಕಾಣಿಸುತ್ತಿತ್ತು. ಮೇಸ್ಟ್ರಿಗೆ ಗೊತ್ತಿಲ್ಲದಂತೆ ಪತ್ರಿಕೆಯಲ್ಲಿ ಪ್ರಕಟಿಸಿಬಿಡುವ ಕೆಟ್ಟ ಧೈರ್ಯವನ್ನೂ ಕೊಡುತ್ತಿತ್ತು.
ಪತ್ರಿಕೆಯಲ್ಲಿ ಸಾಮಾನ್ಯವಾಗಿ ಒಂದು ವಾರಕ್ಕೆ ಮೂರು ನಾಲ್ಕು ನೀಲುಗಳನ್ನು ಹಾಕುತ್ತಿದ್ದೆವು. ಪತ್ರಿಕೆಯ ಪೇಜ್ ಡಿಸೈನ್ ಮಾಡುತ್ತಿರುವಾಗ ಒಂದು ಕಡೆ ಜಾಗ ಉಳಿದರೆ, ಅಲ್ಲಿ ನೀಲು ಹಾಕುತ್ತಿದ್ದೆವು. ಜಾಗ ಚಿಕ್ಕದಿದ್ದರೆ ಬರೀ ನೀಲು, ದೊಡ್ಡದಾಗಿದ್ದರೆ ಚಿತ್ರಸಹಿತ. ಇದನ್ನು ಮುಂಚೆಯೇ ಯೋಚಿಸಿ, ಮೇಸ್ಟ್ರಿಂದ ನೀಲುಗಳನ್ನು ಬರೆಸಿಟ್ಟುಕೊಂಡಿದ್ದರೆ, ಅದಕ್ಕೆ ತಕ್ಕಂತೆ ಕಲಾವಿದರಿಂದ ಚಿತ್ರ ಬರೆಸಿ, ಅದನ್ನು ಪಾಸಿಟಿವ್ ಮಾಡಿಸಿ, ಚಿತ್ರ ಮತ್ತು ನೀಲು- ಎರಡನ್ನೂ ಒಂದು ಬಾಕ್ಸ್ ಮಾಡುವುದು ಒಂದು ರೂಢಿಯಾಗಿತ್ತು.
ಲಂಕೇಶರಿಂದ ನೀಲು ಬರೆಸುವುದು… ಆ ನೀಲು ಸೃಷ್ಟಿಯೇ ಸೋಜಿಗದ್ದು. ಮೇಸ್ಟ್ರೇನೋ ನಿಂತ ನಿಲುವಿನಲ್ಲಿಯೇ ಬರೆದುಕೊಡುತ್ತಿದ್ದರು. ಆದರೆ ಆ ನೀಲು ಬರೆಯಲು ಆಡರ್ಿನರಿ ಪೆನ್ ಆಗುತ್ತಿರಲಿಲ್ಲ. ಅದಕ್ಕಾಗಿ ಪೇಸ್ಟಪ್ ರಾಜಗೋಪಾಲ್ರಿಂದ ರೋಟ್ರಿಂಗ್ ಪೆನ್ನು, ಕಂಪ್ಯೂಟರ್ ಸೆಕ್ಷನ್ನಲ್ಲಿ ಬಳಸುವ ಟ್ರೇಸಿಂಗ್ (ಇದಕ್ಕೂ ಮೊದಲು ಬಟರ್ ಶೀಟ್ ಇತ್ತು) ಪೇಪರ್ ಎರಡನ್ನೂ ತೆಗೆದುಕೊಂಡು ಹೋಗಿ ಮೇಸ್ಟ್ರ ಟೇಬಲ್ ಮೇಲಿಟ್ಟರೆ, ಅವರಿಗೆ ಸಮಯ ಸಿಕ್ಕಾಗ, ಮೂಡ್ ಬಂದಾಗ ಬರೆದು ಕೊಡುತ್ತಿದ್ದರು. ಅಷ್ಟರೊಳಗೆ ಆ ಟ್ರೇಸಿಂಗ್ ಪೇಪರ್ಗಳು ನೀರು-ಕಾಫಿ-ವ್ಹಿಸ್ಕಿ ಕುಡಿದು ಕೂತಿರುತ್ತಿದ್ದವು. ಮೆತ್ತಗಾದರೆ ಅವುಗಳನ್ನು ಬಳಸಲು ಬರುತ್ತಿರಲಿಲ್ಲ. ಮತ್ತೆ ಕೊಟ್ಟು, ಅಲ್ಲೆ ನಿಂತು ಬರೆಸಿಕೊಳ್ಳಬೇಕಾಗಿತ್ತು. ಆಗೆಲ್ಲ ಅವರಿಂದ, `ನಿಂದೊಳ್ಳೆ ಕಾಟ ಕಣಲೇ…’ ಎಂಬ ಬೈಗಳ ಇದ್ದೇ ಇತ್ತು.
ಹೀಗೆ… ಒಂದು ವಾರ ಮೇಸ್ಟ್ರು ಬರೆದುಕೊಟ್ಟ ನೀಲು ಖಾಲಿಯಾಗಿದ್ದವು. ಪಾಂಚಾಲಿಯ ನೀಲುಗಳು ಪ್ರಚೋದಿಸುತ್ತಿದ್ದವು. ಪಾಂಚಾಲಿಯಲ್ಲಿದ್ದ ಒಂದು ನೀಲುವನ್ನು- ಚಿತ್ರಸಹಿತ ಪತ್ರಿಕೆಯಲ್ಲಿ, ಮೇಸ್ಟ್ರ ಅನುಮತಿಯಿಲ್ಲದೆ, ಪಾಂಚಾಲಿಯಿಂದ ಎಂಬ ಅಡಿಟಿಪ್ಪಣಿ ಕೂಡ ಇಲ್ಲದೆ ಮರು ಮುದ್ರಿಸಿದೆ. ಪತ್ರಿಕೆ ಪ್ರಿಂಟಾಗಿ ಬಂದ ದಿನ ನನ್ನ ತಳಮಳ ನನಗೇ ಗೊತ್ತು. ಮೇಸ್ಟ್ರು ಬಂದ್ರು, ಪತ್ರಿಕೆಯ ಪುಟಗಳನ್ನು ತಿರುವಿಹಾಕುತ್ತಿದ್ದಾರೆ, ನಾನು ಹೊರಗೆ ಯಾವಾಗ ಕರೀತಾರೋ ಏನ್ ಅಂತಾರೋ ಇವತ್ತು ಏನ್ ಕಾದಿದೆಯೋ ಎಂದು ಒದ್ದಾಡುತ್ತಿದ್ದೇನೆ.
ಆಶ್ಚರ್ಯ ಅಂದ್ರೆ, ರೂಮಿನಿಂದ ಹೊರಗೆ ಬಂದವರೆ, `ಎಲ್ಲಿತ್ತಲೇ, ಎಲ್ಲೋ ಹುಡುಕ್ಬುಟ್ಟಿದಿಯಾ…’ ಎಂದರು. ಅವರ ನೀಲು ಅವರಿಗೇ ಚಕಿತಗೊಳಿಸಿದ್ದಳು. ಹೊಸ ಹುಡುಗಿ ಸಿಕ್ಕಷ್ಟೇ ಖುಷಿಯಲ್ಲಿದ್ದರು. ನನ್ನ ಆತಂಕವೆಲ್ಲ ಕರಗಿ ಕೂಲಾಗಿ, `ಊರಲ್ಲಿತ್ತು ಸಾರ್, ನಮ್ಮಣ್ಣನತ್ರಿತ್ತು ತಗಂಬಂದೆ…’ ಅಂದೆ.
`ನಾನೇ ನೋಡಿಲ್ವಲೋ, ಕೊಡಿಲ್ಲಿ…’ ಎಂದರು. ಯಾರ್ಯಾರದೋ ಕಣ್ತಪ್ಪಿಸಿ ಕಾಪಾಡಿಕೊಂಡು ಬಂದಿದ್ದ ಪಾಂಚಾಲಿಯನ್ನು ಕೈಗೆ ಕೊಡುತ್ತ ಅವರ ಮುಖ ನೋಡಿದೆ. ನನ್ನ ತಲೆತುಂಬಾ ಆ ಫೋಟೋಗಾದ ಗತಿ ತುಂಬಿತ್ತು. ಅವರು, `ನಿನ್ನ ಪಾಂಚಾಲಿಗೇನೂ ಮಾಡಲ್ಲ, ಕೊಡೋ…’ ಎಂದು ಅವತ್ತಿನ ರಜಾ ದಿನವನ್ನು ಅವಳೊಂದಿಗೆ ಕಳೆದರು. ಅವರೇ ಮಾಡಿದ ಅವರ ಪಾಂಚಾಲಿಯ ಬಗ್ಗೆ ಹದಿನೆಂಟು ವರ್ಷಗಳ ನಂತರ ಏನನ್ನಬಹುದೆನ್ನುವ ಕುತೂಹಲ, ಕಾತರವಿತ್ತು. ಅದಕ್ಕೆ ತಕ್ಕಂತೆ ಅವರ ಮನಸ್ಸು ಕೂಡ ಆವತ್ತಿನ ಕ್ಷಣಗಳನ್ನು ಮೆಲುಕು ಹಾಕುತ್ತಿತ್ತು. ಹಾಗಾಗಿ ಮಾರನೆ ದಿನ ಹೋಗಿ ಅವರ ಮುಂದೆ ನಿಂತೆ.
ಇವನು ಇದಕ್ಕೇ ಬಂದಿದ್ದಾನೆಂಬುದನ್ನು ಗ್ರಹಿಸಿ, `ಪರವಾಗಿಲ್ಲ ಕಣೋ, ಚೆನ್ನಾಗಿದೆ. ಆ ಟೈಮೇ ಹಂಗಿತ್ತು… ಸಂಥಿಂಗ್ ನ್ಯೂ ಅಂಡ್ ಡಿಫರೆಂಟ್… ಜೊತೆಗೆ ಅನ್ನಿಸಿದ್ದನ್ನ ಹೇಳುವ ಧೈರ್ಯ, ಹೇಳುವಾಗ ಬಳಸಬೇಕಾದ ಬುದ್ಧಿವಂತಿಕೆ ಎರಡೂ ಮುಖ್ಯ. ಇದರಲ್ಲಿ ಬರ್ದಿರೋ ಎಲ್ರಲ್ಲೂ ಅದಿದೆ, ಅದ್ಕೆ ಇದು ಚೆನ್ನಾಗಿದೆ…’ ಎಂದವರೆ ಅಷ್ಟೇ ತುಂಟತನದಿಂದ, ಪಾಂಚಾಲಿಯನ್ನೇ ನನಗೆ ಧಾರೆ ಎರೆದು ಕೊಟ್ಟಂತೆ, `ತಗೋ, ಮಜಾ ಮಾಡೋಗು’ ಎಂದರು.
ಅಷ್ಟೊತ್ತಿಗಾಗಲೇ ಪಾಂಚಾಲಿಗಾಗಿ ನನ್ನಂತೆಯೇ ಹುಡುಕಾಡುತ್ತಿದ್ದ ಅಗ್ರಹಾರ ಕೃಷ್ಣಮೂತರ್ಿಯವರಿಗೆ `ಪಾಂಚಾಲಿ’ ನನ್ನ ಹತ್ತಿರ ಇರುವುದು ತಿಳಿದು, `ಬಸು, ನನಗೊಂದು ಝೆರಾಕ್ಸ್ ಕಾಪಿ ಬೇಕಲ್ಲ…’ ಅಂದರು. ಆಮೇಲೆ ನಟರಾಜ್ ಹುಳಿಯಾರ್, ಎಸ್.ಎಸ್.ಶಂಕರ್… ಹೀಗೆ ಕೇಳಿದವರೆಲ್ಲರಿಗೂ ಕೊಟ್ಟಿದ್ದಾಯಿತು. ಹಾಗೆಯೇ ಅದರಲ್ಲಿರುವ ಅಷ್ಟೂ ನೀಲುಗಳನ್ನು ಮತ್ತೆ ಮತ್ತೆ ಪತ್ರಿಕೆಯಲ್ಲಿ ಪ್ರಕಟಿಸಿದ್ದೂ ಆಯಿತು.
ಲಂಕೇಶರ ಪಾಂಚಾಲಿ ಬಗ್ಗೆ ಲಂಕೇಶರೇ ಹೀಗಂದ ಮೇಲೆ, ಅದರ ಬಗ್ಗೆ ಇದ್ದ ಕುತೂಹಲ ಇನ್ನಷ್ಟು ಇಮ್ಮಡಿಗೊಂಡು ಮತ್ತೆ ಮತ್ತೆ ಓದತೊಡಗಿದೆ. ಹೊಸ ತಲೆಮಾರಿನ ಕಲಾವಿದರ ಬಗ್ಗೆ ತೇಜಸ್ವಿ, ದಲಿತರ ಬಗ್ಗೆ ಪ್ರೊಫೆಸರ್ ನಂಜುಂಡಸ್ವಾಮಿ, ಜೆಪಿ-ಬಸವಲಿಂಗಪ್ಪನವರ ಬಗ್ಗೆ ಲಂಕೇಶ್, ಬೂಸಾ ಪ್ರಕರಣದ ಬಗ್ಗೆ ಸಿದ್ಧಲಿಂಗಯ್ಯ… ಅಂದಿನ ತುತರ್ಿಗೆ ತಕ್ಕಂತೆ ಎಲ್ಲರೂ ಒಂದು ಮನಸ್ಸಿನಂತೆ ಸ್ಪಂದಿಸಿರುವುದು ಎದ್ದು ಕಾಣತೊಡಗಿತು. ನಾಡನ್ನು ಒಂದು ಚಳುವಳಿಗೆ ಸಿದ್ಧಗೊಳಿಸಿದಂತಿತ್ತು.
ಕನರ್ಾಟಕದ ಸಾಹಿತ್ಯಕ, ಸಾಂಸ್ಕೃತಿಕ ಜಗತ್ತನ್ನು ಸಮೃದ್ಧಗೊಳಿಸಿದ ಆ ಕ್ರಿಯಾಶೀಲ ಮನಸ್ಸುಗಳು ಇವತ್ತು, ಪಾಂಚಾಲಿ ಹೊರಬಂದ ಮೂವತ್ತೈದು ವರ್ಷಗಳ ನಂತರ, ಒಬ್ಬೊಬ್ಬರು ಒಂದೊಂದು ಬಾವಿಯಾಗಿದ್ದಾರೆ. ತಮ್ಮ ಸುತ್ತ ಕೋಟೆ ಕಟ್ಟಿಕೊಂಡಿದ್ದಾರೆ. ಕಾಲ-ಬುದ್ಧಿ-ಬದುಕು ಅವರನ್ನು ಬದಲಾಯಿಸಿತೆ ಅಥವಾ ಬಲಿ ತೆಗೆದುಕೊಂಡಿತೆ?

‍ಲೇಖಕರು avadhi

December 23, 2009

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

26 ಪ್ರತಿಕ್ರಿಯೆಗಳು

 1. suresh kota

  ಲಂಕೇಶ್ ಬರಹಗಳು, ಲಂಕೇಶ್ ಕುರಿತ ಬರಹಗಳು. ಓದುವುದಕ್ಕೆ ಎರಡೂ ತುಂಬ ಕುತೂಹಲ. ಧನ್ಯವಾದ ಬಸವರಾಜು ಅವರಿಗೆ!

  ಪ್ರತಿಕ್ರಿಯೆ
 2. K.V.Tirumalesh

  Priya Basava Raju
  Panchaali bagge barediddiiri. Lankesh avara ii saahasakke nanna kirukaaNike niiDuvudu nanage abhimaanada sanagatiyaagittu. Aa kaalada adbhutavaada utsaaha matte nenapumaaDikonDe. Aa kaaladalli yuvakanaagiruvudu adeshTu divyavaagittu!
  K.V.Tirumalesh

  ಪ್ರತಿಕ್ರಿಯೆ
 3. K VITTAL SHETTY

  Excellent article. This kind of article can be found only in once life time.Bravo..well done Basavaraj.I do not know Kannada typing. Please pardon me

  ಪ್ರತಿಕ್ರಿಯೆ
 4. rathod

  ಬಸವರಾಜ್, ಲಂಕೇಶ್ ರ ಬಗ್ಗೆ ಬರೆದಿರುವುದು ತುಂಬಾ ಸಂತೋಷ,ಲಂಕೇಶ್
  ಇಲ್ಲದ ಈ ಹೊತ್ತಲ್ಲಿ , ಅವರನ್ನು ನೆನೆದು, ಆ ಕಾಲದ ವ್ಯಕ್ತಿಗಳ(ದೇವನೂರು,
  ಸಿದ್ದಲಿಂಗಯ್ಯ ಮುಂ…)ಹೋರಾಟದ ಕಿಚ್ಚು, ಹುಮ್ಮಸ್ಸಿನ ಬಗ್ಗೆ ಹೇಳಿದ್ದಿರಿ.
  ಅವರೇನಾ ಈ ಹೂರಾಟಗಾರರು ಎಂದು ತಬ್ಬಿಬ್ಬಾದೆ.

  ಪ್ರತಿಕ್ರಿಯೆ
 5. ಜೋಗಿ

  ಬಸವರಾಜ್,
  ಎಪ್ಪತ್ತರ ದಶಕ ಕಣ್ಮುಂದೆ ಸರಿದಂತಾಯಿತು. ನಂಗೂ ಒಂದು ಪ್ರತಿ ಬೇಕು. ಎಲ್ಲಿ ಯಾವಾಗ ಸಿಗಲಿ.

  ಪ್ರತಿಕ್ರಿಯೆ
 6. ಸತ್ಯನಾರಾಯಣರಾವ್ ಅಣತಿ

  ಲಂಕೇಶರೇ ಎದುರುಬಂದಂತಾಯ್ತು! “ನಿರ್ಲಕ್ಷಿಸುವಮೂಲಕ ಕುತೂಹಲಕೆರಳಿಸುವ. ನಿರಾಕರಿಸುವಮೂಲಕ ನಿರೀಕ್ಷೆಯ ಬೀಜ ಬಿತ್ತುವ.
  ಹಳೆಯದನ್ನು ಕಂಡರೆ ಕಣ್ಣರಳಿಸುವ” ಲಂಕೇಶರನ್ನು ಅವರ ದೈತ್ಯ ಪ್ರತಿಭೆಯನ್ನು,
  ಆಕಾಲವನ್ನೂ ಎಷ್ಟು ಸಮರ್ಪಕವಾಗಿ ಕಟ್ಟಿಕೊಟ್ಟಿದ್ದೀರಾ ಬಸವರಜ್ . ತ್ಯಾಂಕ್ಸ್.
  -ಸತ್ಯನಾರಾಯಣರಾವ್ ಅಣತಿ

  ಪ್ರತಿಕ್ರಿಯೆ
 7. Rekha Rani

  ಪಾಂಚಾಲಿ, ಆ ಮೇಷ್ಟ್ರು, ಆ ನೀಲು, ಈ ಬಸು..ಯಾವುದೋ ಗತಕಾಲದ ರಮ್ಯ ಕಥೆಯೊಂದನ್ನು ಕೇಳಿದಂತಾಯ್ತು…ನೀನು ಹೇಳಿದ ಹಾಗೆ ಎಲ್ಲರೂ ಕೋಟೆಯೊಳಗಿನ ಬಾವಿಯಾಗಿದ್ದಾರೆ… ಯಾಕೆ ಹೇಳು?ಅವರೆಲ್ಲರನ್ನು ಒಟ್ಟುಗೂಡಿಸುತ್ತಿದ್ದ ಲಂಕೇಶ್ ಎಂಬ ಕೇಂದ್ರ ಬಿಂದುವೇ ಇಂದು ಮಾಯವಾಗಿದೆಯಲ್ಲ…

  ಪ್ರತಿಕ್ರಿಯೆ
 8. Nagesh K N

  ಅವರಿದ್ದದ್ದೇ ಹಾಗೆ- ನಿರ್ಲಕ್ಷಿಸುವ ಮೂಲಕ ಕುತೂಹಲ ಕೆರಳಿಸುವುದು. ನಿರಾಕರಿಸುವ ಮೂಲಕ ನಿರೀಕ್ಷೆಯ ಬೀಜ ಬಿತ್ತುವುದು. ಹಳೆಯದನ್ನು ಕಂಡರೆ ಕಣ್ಣರಳಿಸುವುದು, ಅಷ್ಟೇ ಬೇಗ ಖಿನ್ನರಾಗುವುದು. ಇದನ್ನು ಅವರ ನಡವಳಿಕೆಗಳಿಂದ ಖುದ್ದಾಗಿ ಕಂಡಿದ್ದೆ.
  Annayya,
  kandiddashte alla, thundarisi mundittiddira..
  regards
  Nagesh K N

  ಪ್ರತಿಕ್ರಿಯೆ
 9. RJ

  ಎಂಭತ್ತರ ದಶಕವದು.
  ನಾನಾಗ ಮೂರೋ ನಾಲ್ಕನೇ ಕ್ಲಾಸೋ ಇರಬೇಕು.
  ನಮ್ಮೂರಿನ ಏರಿಯಾದಲ್ಲಿ ಮಹಮ್ಮದ್ ಅಲಿ ಎಂಬ ರೌಡಿಯಿದ್ದ.
  ನೋಡಿದರೆ ಅಷ್ಟೇನೂ ಹೆದರಿಸುವಂಥ ಆಳಲ್ಲ.ಅದರೂ ಜನರಿಗೆ ಅವನ ಬಗ್ಗೆ ಒಂಥರಾ ಭಯವಿತ್ತು.
  ಅವನಪ್ಪ ಪೈಲ್ವಾನ್. ಒಳ್ಳೇ ಹೆಸರಿತ್ತು.ಆತ ಸ್ವತಃ ಕುಸ್ತಿಪಟು ಆಗಿದ್ದಲ್ಲದೇ ಸುತ್ತಮುತ್ತ ನಡೆಯುವ ಕುಸ್ತಿ ಸ್ಪರ್ಧೆಗಳಲ್ಲಿ ರೆಫರಿ ಆಗುತ್ತಿದ್ದ.
  ಇಂಥ ಪೈಲ್ವಾನನ ಮಗ ಮಹಮ್ಮದ ಅಲಿ ಅದ್ಹೇಗೆ ರೌಡಿಯಾದ ಗೊತ್ತಿಲ್ಲ.
  ಇನ್ನು ಅವನ ಕಸುಬುಗಳೋ ಚಿತ್ರವಿಚಿತ್ರ.
  ಒಮ್ಮೆ ತರಕಾರಿ ಮಾರುತ್ತಿದ್ದರೆ,ಇನ್ನೊಮ್ಮೆ ಬಾಳೆಹಣ್ಣು ಮಾರುತ್ತಿದ್ದ.
  ಮರುದಿನ ಐಸ್ ಕ್ರೀಮ್ ಡಬ್ಬಾ ದೂಕಿಕೊಂಡು ಬರ್ತಿದ್ದ!
  ಆದರೆ ಮಹಮ್ಮದ್ ಅಲಿಯ ಮುಖ್ಯ ಕಸುಬೆಂದರೆ ಕೇರಂ ಸ್ಟ್ರೈಕರ್ ಗಳ ಆಟ.
  ಮೂರು ಬೇರೆ ಬೇರೆ ಬಣ್ಣದ ಸ್ಟ್ರೈಕರ್ ಗಳನ್ನು ಟೇಬಲ್ ಮೇಲೆ ಮಿಂಚಿನ ವೇಗದಲ್ಲಿ ಅದಲು ಬದಲು ಮಾಡುತ್ತಾ ನಿಗದಿತ ಬಣ್ಣದ ಸ್ಟ್ರೈಕರ್ ನ್ನು
  identify ಮಾಡುವಂತೆ ಎದುರಿಗಿದ್ದವರಿಗೆ ಬೆಟ್ ಕಟ್ಟುತ್ತಿದ್ದ.
  ಪ್ರತಿಬಾರಿ ಅವನೇ ಗೆಲ್ಲುತ್ತಿದ್ದ.
  ಯಾವಾಗಲೋ ಜಾಸ್ತಿ ಹಣ ಗೆದ್ದ ಖುಷಿಯಲ್ಲಿ ಅವನ ತಮ್ಮನಾದ ಇಕ್ಬಾಲ್ ಮತ್ತು ಇಕ್ಬಾಲ್ ನ ಚಡ್ಡಿ ಗೆಳೆಯನಾದ ನನಗೆ
  ಐದೋ ಹತ್ತೋ ಪೈಸೆ ಕೊಡುತ್ತಿದ್ದ.ಒಮ್ಮೊಮ್ಮೆ ಕುಡಿತ ಜಾಸ್ತಿಯಾಗಿದ್ದರೆ ನಾಲ್ಕಾಣೆ ಕೂಡ ನಮ್ಮ ಜೇಬು ಸೇರುತ್ತಿತ್ತು.
  ಇಂಥ ಮಹಮ್ಮದ ಅಲಿ ಒಂದಿನ ಬೆಳಿಗ್ಗೆ ನನ್ನನ್ನು ಮತ್ತು ಇಕ್ಬಾಲ್ ನನ್ನು ಕರೆದು ಕೊಂಚ ಜಾಸ್ತಿಯೇ ಹಣ ಕೊಟ್ಟ.
  ನಾವಿಬ್ಬರೂ ಖುಷಿಯಿಂದ ಜಾಗ ಖಾಲಿಮಾಡುವಷ್ಟರಲ್ಲಿ bus stand ಗೆ ಹೋಗುವಂತೆ ಜೋರಾಗಿ ಅಬ್ಬರಿಸಿದ್ದ.
  ಅಷ್ಟೇ ಅಲ್ಲ, Bus stand ನಲ್ಲಿದ್ದ ಪುಸ್ತಕದಂಗಡಿಯಲ್ಲಿ ‘ಲಂಕೇಶ್ ಪತ್ರಿಕೆ’ಯನ್ನು ತೆಗೆದುಕೊಂಡು ಬರುವಂತೆ ಹೇಳಿದ್ದಲ್ಲದೇ
  ನಾವೆಲ್ಲಿ ಪತ್ರಿಕೆಯ ಹೆಸರು ಮರೆತು ಬಿಟ್ತೆವೆಂದು ‘ಲಂಕೇಶ್ ಪತ್ರಿಕೆ’,’ಲಂಕೇಶ್ ಪತ್ರಿಕೆ’ ಅಂತ ಹತ್ತು ಬಾರಿ ತನ್ನೆದುರಿಗೆ ನಮ್ಮಿಂದ ಹೇಳಿಸಿಕೊಂಡಿದ್ದ!
  ಆಮೇಲೆ ಅನೇಕ ಸಲ ಲಂಕೇಶ್ ಪತ್ರಿಕೆಯನ್ನು ಮಹಮ್ಮದ್ ಅಲಿಗೆ ತಲುಪಿಸಿದ್ದೆವು.
  ಎಲ್ಲಿಯ ಮಹಮ್ಮದ್ ಅಲಿ?ಎಲ್ಲಿಯ ಲಂಕೇಶ್?
  ಘಟನೆ ನಡೆದು ಎರಡು ದಶಕಗಳೇ ಕಳೆದರೂ ಇಬ್ಬರೂ ಅರ್ಥವಾಗಿಲ್ಲ.
  ಈಗ ಇಬ್ಬರೂ ಬದುಕಿಲ್ಲ..

  ಪ್ರತಿಕ್ರಿಯೆ
 10. RJ

  ಕ್ಷಮಿಸಿ,ಚೇತೋಹಾರಿ ಲೇಖನ ಅಂತ ಹೇಳಲು ಮರೆತೆ..
  ನಿಜಕ್ಕೂ ಅದ್ಭುತವಾಗಿದೆ.ಥ್ಯಾಂಕ್ಸ್!

  ಪ್ರತಿಕ್ರಿಯೆ
 11. Hadimani

  Priyarada Basavaraju
  sir,
  Lekhana oduttiddanteye,
  Meshtru,Nelamane Devegoudru,Patrike mattu neevu..ella nenepaagi Khushi mattu duKha annistu.eega Meshtr bhasheyalliye thanks heluttene..
  LOVELY,BEAUTIFUL,WONDERFUL..
  Hadimani

  ಪ್ರತಿಕ್ರಿಯೆ
 12. d.s.ramaswamy

  ನಿಜಕ್ಕೂ ತುಂಬ ಕುತೂಹಲಕರವಾದ ಹಾಗೇ ಅಗತ್ಯವಾದ writeup. ಥ್ಯಾಂಕ್ಸ್

  ಪ್ರತಿಕ್ರಿಯೆ
 13. armanikanth

  Akkareya basavaraju avarige,
  nimma lekhana odida nantara naanu highschool li iddaaga appa tandidda PAANCHALI nenapige bantu.LANKESH andre LAKNESHESHE…AVANA THARAA MAATAADOKE BERE YAARIGOOO DHAIRYA ILLA anta appa abhimaanadinda heltaa iddaru…aa dinagalu nimma baraha odida nantara matte nenapige bandvu…plzzz paanchali ya XEROX COPY nanagooo beku…neevu ottige 25 xerox copy haakisibidi…astanno naavu xerox charge jote ge nimage sweet kkoda kodisi ,5 nimisha maatooo aadi copy tagondu hogteve……

  ಪ್ರತಿಕ್ರಿಯೆ
 14. ಚಿನ್ನಸ್ವಾಮಿವಡ್ಡಗೆರೆ

  ಬಸವರಾಜ್ ಲಂಕೇಶ್ ಇಲ್ಲದ ಹೊತ್ತಿನಲ್ಲಿ ನಾವು ಬದುಕುತ್ತಿರುವುದಕ್ಕೆ ಬೇಸರ
  ವಾಗುತ್ತದೆ.ಭ್ರಷ್ಟರು,ಆಸೆ ಬುರುಕರ ನಡುವೆ ಪತ್ರಿಕೋದ್ಯಮ ನಲುಗುತ್ತಿದೆ.ಒಂದು
  ಸಣ್ಣ ರೋಮಾಂಚನವನ್ನು ಹುಟ್ಟಿಸಿ ಹೊಸ ಸೃಷ್ಠಿಗೆ ನಾಂದಿ ಹಾಡಬಲ್ಲ ಒಬ್ಬ ಸಂಪಾದಕ
  ನ್ನು ಈಗ ಈಲ್ಲ. ಅದಕ್ಕೆ `ಮತ್ತೆ ಮತ್ತೆ ಲಂಕೇಶ್’ ಬೇಕು ಹೀಗೆ ಬರೆಯುತ್ತಿರಿ.
  ಯುವಕರಿಗೆ ತಮ್ಮ ಶಕ್ತಿ ನೆನಪಿಸಲು ಲಂಕೇಶರ ಗುಣಅವಗುಣಗಳ ನೆನಪಷ್ಟೇ ಸಾಕು.
  ಥ್ಯಾಂಕ್ಸ ಬಸೂ .ಚಿನ್ನಸ್ವಾಮಿವಡ್ಡಗೆರೆ

  ಪ್ರತಿಕ್ರಿಯೆ
 15. kaviswara shikaripura

  Adyaaro punyaathma Mauyra-dalli Lankesh-rannu pariganisadeyu kannada saahithya uliyutthade matthu beleyutthade antha baredidru… Avarige ee PANCHALI-ya prathi kalisabeku… Matthu Lankesh-vidaveyaru yendu lankesh baraha-sambandhi-galannu heeyalisida sampadakarigondu prathi kalisabeku…

  ಪ್ರತಿಕ್ರಿಯೆ
 16. madhavi bhandary

  Article is simply wonderful.So many things are new to me.I have enjoyed the artticle.

  ಪ್ರತಿಕ್ರಿಯೆ
 17. tarikere

  ಪ್ರಿಯ ಬಸು,
  ಬಹಳ ಚೆನ್ನಾಗಿದೆ. ನಿಮ್ಮ ಗದ್ಯದಲ್ಲಿ ನಡೆದದ್ದನ್ನು ಚಿತ್ರವತ್ತಾಗಿ ಜೀವಂತವಾಗಿ ಚಿತ್ರಿಸುವ ನಾಟಕೀಯ ಗುಣವಿದೆ. ಪಾಂಚಾಲಿ ನನಗೂ ನೋಡಲು ಸಿಕ್ಕರೇ? ಕೊನೆಯ ಪಕ್ಷ ಬೂಸಾದ ಮೇಲೆ ಸಿದ್ದಲಿಂಗಯ್ಯ ಬರೆದ ಲೇಖನ.ರಹಮತ್ ತರೀಕೆರೆ

  ಪ್ರತಿಕ್ರಿಯೆ
 18. ramasridhara

  Namasthe Basavaraj, ‘paanchaliya’lekhana akweya bagge athaynath kuthuhalavannu huttisidhe. sadhyavadhare xerox copy kodi. sridharara librarayge uttama kodigeyagutthade.
  vandanegalu,
  ramasridhara

  ಪ್ರತಿಕ್ರಿಯೆ
 19. b t jahnavi

  nimma lekhana oduththaa odahaage chithra kanmunde moodthaa iththu basavaraju. Ashtu jeevantavaagide adu. Lankesh reactionge kaaithidda nimma aa talamala oohiskolta neneskolta nagu bartide nange. Illa naan odirlilli. Thumbaa thanks nenapmaadiddakke. Bykobedi pl pl pl pl pl nangond copy…

  ಪ್ರತಿಕ್ರಿಯೆ
 20. ashok shettar

  ಪ್ರಿಯ ಬಸವರಾಜು,
  ಪಾಂಚಾಲಿ ವಿಶೇಷಾಂಕದ ಕುರಿತ ನಿಮ್ಮ ನೆನಪುಗಳು ಮೋಹಕವಾಗಿದ್ದವು.ಎಂ. ಎ. ಮುಗಿಸುವ ವರೆಗೆ ಅದರದೊಂದು ಪ್ರತಿಯನ್ನು ನಾನೂ ಜತನವಾಗಿ ಇಟ್ಟಿದ್ದೆ..ಆಮೇಲಿನ ನನ್ನ ಅವಸ್ಥಾನ್ತರಗಳಲ್ಲಿ ಎಲ್ಲೋ ಕಳೆದು ಹೋಯಿತು. ಅದು ತುಂಬಾ ಅರ್ಥಪೂರ್ಣವಾಗಿ,ಜೀವಂತವಾಗಿ ರೂಪಿಸಲ್ಪಟ್ಟ ಒಂದು ವಿಶಿಷ್ಟ ಸಾಂಸ್ಕೃತಿಕ ದಾಖಲೆ.ಅದನ್ನು ಇನ್ನೊಮ್ಮೆ ಇಡಿಯಾಗಿ ಓದಬೇಕೆನ್ನುವ ಆಶೆಯನ್ನು ಕೆರಳಿಸಿದಿರಿ. ಅದು ನಿಮ್ಮ ಕೃಪೆಯಿಂದಲೇ ಸಾಧ್ಯವಾಗಬೇಕೆನೋ..

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: