ಲಂಕೇಶ್ ಅನುವಾದಿಸಿದ ಕವಿತೆಗಳು

ಚರ್ಚ್ ಒಂದರಲ್ಲಿ ಅರ್ಚಕನಾಗಿದ್ದ ಜಾನ್ ಡನ್ ಎಂಬ ಇಂಗ್ಲಿಷ್ ಕವಿ ಬರೆದ ಬಹುತೇಕ ಕವಿತೆಗಳ ವಸ್ತು `ಪ್ರೀತಿ, ಪ್ರೇಮ, ಪ್ರಣಯ’!. 17 ನೇ ಶತಮಾನದ ಮೆಟಾಫಿಸಿಕಲ್ ಕಾವ್ಯಧಾರೆಗೆ ಸೇರಿದ ಡನ್ ಮತ್ತು ಮಾರ್ವೆಲ್ ರ ಕವಿತೆಗಳಲ್ಲಿ ಬೆಚ್ಚಿ ಬೀಳಿಸುವ ಸಮಕಾಲೀನ ರೂಪಕಗಳು, ವಿಶಿಷ್ಟ ತಂತ್ರಗಾರಿಕೆ, ಹೊಸ ಪರಿಭಾಷೆಯ ಆವಿಷ್ಕಾರ, ಅಡುನುಡಿಯ ಬಳಕೆ, ವಸ್ತು ಮತ್ತು ತಂತ್ರದ ಅಮೋಘ ಸಮ್ಮಿಲನ ಮತ್ತು ಬೌದ್ದಿಕ ಎನ್ನಿಸಿಕೊಳ್ಳುವ ವಸ್ತುವನ್ನು ಅನುಭವವನ್ನಾಗಿಸುವ ವಿಶಿಷ್ಟ ಕಲೆ ಗಮನ ಸೆಳೆಯುತ್ತದೆ.

ಮುಖ ಗಂಟಿಕ್ಕಿಕೊಂಡು ಕಾವ್ಯವನ್ನು ವ್ಯಾಖ್ಯಾನಿಸುವ ವಿಮರ್ಶಕರಿಗೆ ಡನ್ ಕವಿಯ ಚೇತೋಹಾರಿ ಪದ್ಯಗಳು ಯಾವತ್ತೂ ಸವಾಲೇ ಸರಿ. 18 ಮತ್ತು19 ನೇ ಶತಮಾನದ ವಿಮರ್ಶಕರಿಂದ ಮೂಲೆಗೊತ್ತಲ್ಪಟ್ಟಿದ್ದ ಡನ್ ಮತ್ತು ಮಾರ್ವೇಲ್ ನಂಥ ಕವಿಗಳನ್ನು ಪ್ರಧಾನಧಾರೆಗೆ ತಂದವರು ಟಿ.ಎಸ್ ಏಲಿಯಟ್ ಮತ್ತು ಹೆಲೆನ್ ಗಾರ್ಡನರ್ ನಂತಹ ನವ್ಯರು. ಇಬ್ಬರು ಪ್ರೇಮಿಗಳನ್ನು ರೇಖಾಗಣಿತದ ಕೈವಾರದ ಎರಡು ಕಾಲುಗಳಿಗೆ ಹೋಲಿಸಿ ಪದ್ಯ ಬರೆದ ಡನ್ ಮುಖ್ಯ ಕವಿ ಎಂದು ಈ ನವ್ಯರಿಗೆ ಅನ್ನಿಸಿದ್ದರಲ್ಲಿ ಅಚ್ಚರಿ ಏನಿಲ್ಲ.

ಡನ್ ಕಾವ್ಯದ ನಾಯಕ ತೀವ್ರ ತಮಾಷೆಯ ಮನುಷ್ಯ. ಪ್ರೇಮ ಮತ್ತು ಕಾಮದಲ್ಲಿ ಬಿದ್ದು ಹೊರಳಾಡುವ ಈತ ಪ್ರಪಂಚದ ಸರ್ವಸುಖಗಳನ್ನು ತನ್ನ ಪ್ರಿಯತಮೆಗೋಸ್ಕರ ಬಿಟ್ಟುಕೊಟ್ಟು ಪರಿತ್ಯಾಗಿಯಾಗಿಬಿಡಬಲ್ಲ ಗಟ್ಟಿಗ. ಅದನ್ನು ಆತ ಪ್ರತಿ ಕವಿತೆಯಲ್ಲೂ ತನ್ನ ಪ್ರಿಯತಮೆಯ ಮುಂದೆ ಮತ್ತೆ ಮತ್ತೆ ನಿವೇದಿಸಿಕೊಳ್ಳುತ್ತಿರುತ್ತಾನೆ. ಆದರೆ ಡನ್ ಕವಿತೆಯ ಬಗ್ಗೆ ಹೆಣ್ಣು ಮಕ್ಕಳದೊಂದು ದೊಡ್ಡ ಕಂಪ್ಲೆಂಟ್ ಏನೆಂದರೆ ಡನ್ ಕವಿತೆಯ ನಾಯಕ ತನ್ನೊಂದಿಗಿರುವ ತನ್ನ ಪ್ರಿಯತಮೆಯನ್ನು ಬೇಡಿದರೂ, ಕಾಡಿದರೂ, ಅಂಗಲಾಚಿದರೂ, ಹೊಗಳಿದರೂ, ತಮಾಷೆ ಮಾಡಿದರೂ, ವ್ಯಂಗ್ಯವಾಡಿದರೂ ಕೊನೆಗೆ ಪ್ರೀತಿಗಾಗಿ ಪೀಡಿಸಿದರೂ ಆಕೆ ಅವನೆದುರಿಗಿರುತ್ತಾಳೆ ಆದರೆ ಆಕೆ ಮಾತಾಡುವುದಿಲ್ಲ. ಆಕೆಯ ಪ್ರತಿಕ್ರಿಯೆ ಏನಿದೆ ಎಂದು ನಮಗೆ ತಿಳಿಯುವುದು ಕಾವ್ಯದ ನಾಯಕನ ಮಾತಿನ ಮೂಲಕವೇ. ಮಾರ್ವೇಲ್ ನ ಕಾವ್ಯದಲ್ಲಿ ಕೂಡ ಹೀಗೆ ಆಗುತ್ತದೆ. ಹೆಣ್ಣು ಮಕ್ಕಳು ಈವೊಂದು ವಿಷಯದಲ್ಲಿ ಮೌನವಾಗಿದ್ದೆ ತಮ್ಮ ಮನದಿಚ್ಚೆಯನ್ನು ನೆರವೇರಿಸಿಕೊಳ್ಳುತ್ತಾರೆ ಎಂದು ಈ ಕವಿಗಳು ಬಗೆದಿರಬಹುದು…

ಎಲಿಯಟ್ ನಂತೆ ಲಂಕೇಶ್ ಕೂಡ ಡನ್ ಮತ್ತು ಮಾರ್ವೇಲ್ ರ ಕವಿತೆಗಳನ್ನು ಬಹುವಾಗಿ ಮೆಚ್ಚಿಕೊಂಡವರು. ಡನ್ ಕಾವ್ಯದ ವಸ್ತುವನ್ನು ಇಟ್ಟುಕೊಂಡು ಲಂಕೇಶ್ ಬರೆದ `ನಲ್ಲನಲ್ಲೆಯರ ನಡುವೆ’ ಎಂಬ ಲೇಖನದ ಸಂಕ್ಷಿಪ್ತ ಭಾಗವನ್ನು ಹಾಗೂ ಅವರೇ ಅನುವಾದಿಸಿದ ಡನ್ ಮತ್ತು ಮಾರ್ವೇಲ್ಮಾ ರ ಒಂದೊಂದು ಕವಿತೆಯ ಭಾವಾನುವಾದವನ್ನು ಇಲ್ಲಿ ಕೊಡುತ್ತಿದ್ದೇವೆ. ಇದು ಕಾವ್ಯ ಪ್ರೇಮಿಗಳಿಗಾಗಿ…

– ಕೆ ಅಕ್ಷತಾ

sketch13

ಸೊಳ್ಳೆ

ವಲ್ಲೆ ಅನ್ನಬೇಡ ಹುಡುಗಿ, ನೋಡು ಈ ಸೊಳ್ಳೆ,

ನಿನ್ನ ಭಯ, ಸಂಕೋಚ ಖಂಡಿತ ಸುಳ್ಳೇ,

ನನ್ನ ಕಚ್ಚಿತು ಮೊದಲು, ನಿನ್ನ ಕಚ್ಚಿತೀಗ

ನಮ್ಮಿಬ್ಬರ ನೆತ್ತರಿಗೆ ಸೊಳ್ಳೆಯ ಸಂಯೋಗ

ಏನಾಯ್ತು ಇದರಿಂದ? ತಟ್ಟಿತೇನು ದೋಷ?

ಮೋಸವೆಲ್ಲಿ? ಕಡಿಮೆಯಾಯ್ತೆ ನಿನ್ನ ಮಂದಹಾಸ?

ಜುಜುಬಿ ಸೊಳ್ಳೆ ಹೇಗೆ ಗೆಲ್ಲುತ್ತದೆ:

ನಮ್ಮಿಬ್ಬರಿಗೆ ಮಿಗಿಲು ಮೆಲ್ಲುತ್ತದೆ

ಬೇಡೆ, ಕೊಲ್ಲಬೇಡೆ ತಿಕ್ಕಿ ಬೆರಳ ನಡುವೆ,

ಆಗಿ ಹೋಗಿದೆ ನಮಗೆ ಅದರಲ್ಲಿ ಮದುವೆ

ನಾವಿಬ್ಬರೂ ಈಗ ಅದರಲ್ಲಿ ಮಲಗಿ

ನಮ್ಮ ಹಾಸಿಗೆ, ಗುಡಿ ಸೊಳ್ಳೆಯೀಗ ಹುಡುಗಿ

ನಮ್ಮ ಹೆತ್ತವರು ಬಡಕೊಂಡು ಬಯ್ದರೂ

ಸೊಳ್ಳೆಯೊಳಗಿದ್ದೇವೆ ನಾವಿಬ್ಬರೂ

ಅದನ್ನ ಕೊಂದರೆ ಖಂಡಿತ ಆತ್ಮಹತ್ಯೆ

ನಾ, ನೀನು, ಸೊಳ್ಳೆ ಎಲ್ಲ ನಾಪತ್ತೆ

ಅಯ್ಯೋ ಕೊಂದೆಬಿಟ್ಟೆ ! ನಿನ್ನ ಬೆರಳಲ್ಲಿ ರಕ್ತ

ಅನ್ನುತ್ತೀ `ಸೊಳ್ಳೆ ಸತ್ತರೆ ಏನಾದರಾಗುತ್ತಾ?

ಅದಕ್ಕೇ ಜಾಣೆ, ಯಾವುದರಲ್ಲು ಕೆಡಿಸಿಲ್ಲ ಸೊಳ್ಳೆ

ನೀನೊಲಿದರೆ ಪಾಪ ತಟ್ಟುತ್ತಂತೆ! ಹಸಿಹಸೀ ಸುಳ್ಳೆ.

( ಮೂಲ; ಜಾನ್ ಡನ್ ನ `Flee’)

ಬಿಂಕದ ಪ್ರೇಯಸಿಗೆ

ಎಲ್ಲ ಸ್ಥಿರವಿದ್ದರೆ, ಇರಲು ಪುರಸೊತ್ತು

ನಿನ್ನ ಸಿಟ್ಟೇನು ಮಹಾ ಅನ್ನಬಹುದಿತ್ತು

ನೆನೆದು ಆಕಳಿಸಿ ಅಲೆದು ಅತ್ತಿತ್ತ

ಧಿಮಾಕಿನ ಧೀರ್ಘ ಕಾಲ ಕಳೆಯುತ್ತಾ

ಭರತ ಖಂಡದಿ ನೀನು ವಜ್ರಗಳ ಹೆಕ್ಕಿ

ನಾನು ಹಂಬರ್ ಅಲೆಯೊಳಗೆ ಸಿಕ್ಕು

ಸಿಂಹಗಳು ಮೃದುವಾಗಿ ಮಿಗವಾಗುವರೆಗೆ,

ನಿನ್ನ ಅಸಡ್ಡೆ ಕರಗಿ ಝರಿಯಾಗುವರೆಗೆ

ನಿನ್ನ ಕಣ್ಗಳ, ಹಣೆಯ ಹಿಗ್ಗಿ ಹೊಗಳಿ

ಸಂತೋಷಿಸಲು ನೂರೊರ್ಷ ಉರುಳಿ;

ವರ್ಷ ವರ್ಣಿಸುತ್ತಿದ್ದೆ ಒಂದೊಂದು ಮೊಲೆಯ

ಮಿಕ್ಕ ಭಾಗಕ್ಕೆ ಕಟ್ಟಿ ಇನ್ನೆಷ್ಟೊ ಬೆಲೆಯ;

ಹೀಗೆ ಆರಾಮಾಗಿ ಯುಗಗಳನು ಕಳೆದು

ಕೊನೆಗೆ ನೋಡುತ್ತಿದ್ದೆ ಹೃದಯವನು ತೆರೆದು

ಇಷ್ಟೆಲ್ಲ ಅಕ್ಕರೆಗೆ ನೀ ತಕ್ಕ ಚಿನ್ನ

ಕಡಿಮೆ ಕಾಳಜಿ ಮಾಡು ಅನ್ನುವೆಯ ನನ್ನ?

ಆದರೆ ಕಾಲ ರಥದಲ್ಲೋಡಿ ಈ ಕಡೆ

ಬರುವ ಕರ್ಕಶ ಬೆನ್ನ ಹತ್ತಿರ;

ಕಣ್ಣಿನೆದುರಿಗೆ ಮರಳ ಸಾಗರ

ಬರಡು ಕಾಲದ ಬಿತ್ತರ

ನೀನು ಸತ್ತರೆ ಹಾಳು ಪಿಳ್ಳೆ ಕೂಡಾ

ಮೆಚ್ಚಿ ಹೊಗಳದು ನಿನ್ನ;

ತಂಪು ಗೋರಿಯ ಬಿಚ್ಚಿ

ಈ ಹಾಡು ಹಬ್ಬದು;

ಮಣ್ಣು ಹುಳ ನೆಕ್ಕುವವು

ನಿನ್ನ ಮೋಹಕ ಮುಖವ;

ಬಿಕ್ಕುತ್ತಾ ನಾನು

ಮಣ್ಣಲ್ಲಿ ನೀನು, ಭಸ್ಮ;

ನಲಿಸಬಾರದೆ ನನ್ನ ಸೊಗಸಾದ ಕುಸುಮ?

ಒಳ್ಳೆ ಖಾಸಗಿ ಜಾಗ ಗೋರಿ, ಖರೆ;

ಯಾರಾದರೂ ಅಲ್ಲಿ ಅಪ್ಪಿ ಮುದ್ದಾಡುವರೆ?

ಆದ್ದರಿಂದಿಗೋ, ಚಿನ್ನ, ಯೌವನದ ಹೊಳಪು

ಇಬ್ಬನಿಯೊಲಿದ್ದಾಗ ಮೈಮೇಲೆ ಕುಳಿತು

ನಮ್ಮ ದೇಹದ ಬೆಂಕಿ ರಂಧ್ರಗಳ ಬಿಟ್ಟು

ಹೊರಟುಹೋಗುವ ಮುನ್ನ ನಮಗೆ ಕೈಕೊಟ್ಟು

ಬೇಟೆ ಹಕ್ಕಿಗಳಂತೆ ಕುಕ್ಕುತ್ತಾ ಕುಣಿದು

ಎಲ್ಲ ಅನುಭವವವನ್ನು ಬಲವಾಗಿ ಬಿಗಿದು

ಶಕ್ತಿಯೆಲ್ಲವ, ಎಲ್ಲ ಸುಖವನ್ನು ಸುತ್ತಿ

ಎಲ್ಲ ಕೂಡಿಸಿ ಅರೆದು ಚೆಂಡಾಗಿ ಕಟ್ಟಿ

ಬದುಕೆಂಬ ಬಾಗಿಲನ್ನತ್ತ ಕಡೆ ದಬ್ಬಿ

ಸುಖವಾಗಿ ನಿಲ್ಲೋಣ ಇಬ್ಬರೂ ತಬ್ಬಿ

ಇದು ಚಿನ್ನ ಹೊತ್ತನ್ನು ಸೋಲಿಸುವ ರೀತಿ;

ರವಿಯ ಕೊಬ್ಬಿಗೆ ಮದ್ದು ಮಾನವರ ಪ್ರೀತಿ.

( ಮೂಲ ಮಾರ್ವೇಲ್ ನ To my coy mistress)

ಲಂಕೇಶರ ಟಿಪ್ಪಣಿ

`ನನ್ನ ಚಿನ್ನ ನೀನು ಒಲಿಯದಿರಲು ಕಾರಣವಾದರೂ ಇದೆಯೇ? ನೋಡು ನನ್ನನ್ನು ಕಚ್ಚಿದ ಸೊಳ್ಳೆಯೇ ನಿನ್ನನ್ನು ಕಚ್ಚಿಬಿಟ್ಟಿತು. ನನ್ನ ರಕ್ತ ಮತ್ತು ನಿನ್ನ ರಕ್ತ ಸೊಳ್ಳೆಯ ಹೊಟ್ಟೆಯಲ್ಲಿ ಮಿಲನಗೊಂಡವು. ಸೊಳ್ಳೆ ಈಗ ನಮ್ಮ ಪ್ರಸ್ತದ ಹಾಸಿಗೆ, ನಮ್ಮ ಸಮ್ಮಿಲನದ ದೇವಾಲಯ ಅಲ್ಲವೆ? ಈ ಮಿಲನದಿಂದ ನಿನಗೆ ಪಾಪ ಸೋಂಕದಿದ್ದರೆ, ನಾವು ಒಂದಾದರೆ ಹೇಗೆ ಪಾಪ ತಟ್ಟುತ್ತದೆ?’. ಜಾನ್ ಡನ್ ಎಂಬ ಹದಿನೇಳನೆ ಶತಮಾನದ ಕವಿಯ `ಸೊಳ್ಳೆ ‘ ಎಂಬ ಚಿಕ್ಕ ಪದ್ಯದ ತರ್ಕ ಇದು. ಪ್ರೇಮಿಗಳೆಂದರೆ ಸದಾ ಹರಳೆಣ್ಣೆ ಕುಡಿದಂತಿರುವ, ಆಕಾಶವನ್ನೇ ನೋಡುತ್ತಿರುವ, ನೋವು ತುಂಬಿದ ನೋಟವನ್ನು ಎಲ್ಲೆಡೆ ಹರಿಸುತ್ತಾ ಓಡಾಡುವ ಜನರೆಂದು ಕೆಲವರು ನಂಬಿದ್ದಾರೆ.ಅಂಥದೊಂದು ಕಾಲವೂ ಇತ್ತು. ಪ್ರೇಮ ಎನ್ನುವುದು ಪ್ಯೂರ್ ಎಷ್ಟು ಪರಿಶುದ್ಧ ಎಂದರೆ ಪ್ರೇಮಿ ತನ್ನ ಪ್ರೇಯಸಿಯನ್ನು ಖುದ್ದು ನೋಡಬೇಕಾದ ಅಗತ್ಯ ಕೂಡಾ ಇರಲಿಲ್ಲ. ಪೆಟ್ರಾರ್ಕ್ ಎಂಬ ಕವಿ ಒಮ್ಮೆ ಚರ್ಚನಲ್ಲಿ ನೋಡಿದ ಹುಡುಗಿಯೊಬ್ಬಳ ಬಗ್ಗೆ ಧ್ಯಾನಿಸಿ ಚಿಂತಿಸಿ ಅನೇಕ ವರ್ಷ ಕವನಗಳನ್ನು ಕಟ್ಟಿದ. ಆಮೇಲೆ ಬಂದ ಅನೇಕ ಕವಿಗಳು ಪ್ರೇಯಸಿಯನ್ನು ಮೋಡದ ಮೇಲೆ ಅಥವಾ ಸಿಂಹಾಸನದ ಮೇಲೆ ಕೂರಿಸಿ ಕಾವ್ಯದಲ್ಲಿ ಆರಾಧಿಸುತ್ತಲೇ ನಿತ್ಯ ಜೀವನದಲ್ಲಿ ಆಕೆಯನ್ನು ಕೀಳಾಗಿ ಕಂಡರು.`ಹೃದಯೇಶ್ವರಿ’, `ಹರಿಣಾಕ್ಷಿ’ ನಿತ್ಯ ಜೀವನದಲ್ಲಿ ಗಂಡಿಗೆ ಅಡಿಯಾಳಾಗಿದ್ದಳು. ಕಾವ್ಯ ಸವಕಲು ಪದಗಳ ಬಂಡಿಯಲ್ಲಿ ಸಾಗುತ್ತಲೇ ಇತ್ತು.

ಆದರೆ ಜಾನ್ ಡನ್ ಹುಡುಗಿಯನ್ನು ಹುಡುಗಿಯಾಗಿ ನೋಡಿದ- ತಾನು ಬಲ್ಲ ರೇಖಾಗಣಿತ, ಭೂಗೋಳ, ರಸಾಯನಶಾಸ್ತ್ರ ಮುಂತಾದ್ದನ್ನು ಬಳಸಿಕೊಂಡು ಆಕೆಯೊಂದಿಗೆ ವಾದಿಸುತ್ತ, ಆಕೆಯನ್ನು ಛೇಡಿಸುತ್ತ, ಆಕೆಯ ಬುದ್ದಿವಂತಿಕೆಯನ್ನು ಗೌರವಿಸುತ್ತ, ಆಕೆ ತನ್ನಂತೆಯೇ ಚತುರೆ ಜಾಣೆ ಎಂದು ಸೂಚಿಸುತ್ತಲೇ ಆಕೆಯ ಮನವೊಲಿಸುವ ಕವನಗಳನ್ನು ಕಟ್ಟಿದ.

ಮತ್ತೊಂದು ಕವನ ಹೇಗಿದೆ ಗೊತ್ತೆ? ಒಳ್ಳೆಯವರು ಅಗಲಿದಾಗ ಗಾಢ ಮೌನವಿರುತ್ತದೆ; ಕೆಟ್ಟವರು ಸತ್ತಾಗ ಎಲ್ಲರೂ ಬೊಬ್ಬೆ ಹಾಕುತ್ತಾರೆ. ಭೂಮಿಯ ಶಬ್ದಗಳು ದೊಡ್ಡದಾಗಿರುತ್ತವೆ. ಭೂ ಮಂಡಲದ ಘರ್ಷಣೆ ಎಷ್ಟೆ ಜೋರಾಗಿದ್ದರೂ ನಿಶಬ್ದದಂತೆ ಭಾಸವಾಗುತ್ತದೆ… ಹೀಗೆ ಹೇಳುವ ಕವಿ ಸಾವಿನ ಬಗ್ಗೆ ಹೇಳುತ್ತಿಲ್ಲ. ಅದೂ ಇದೂ ಮಾತನಾಡುತ್ತಾ ತಾನು ತನ್ನ ಪ್ರೇಯಸಿಯಿಂದ ಅಗಲುವಾಗ ಆಕೆಯನ್ನು ಸಂತೈಸುತ್ತಿದ್ದಾನೆ. `ಅಳದಿರು ನನ್ನ ಅರಗಿಣಿ’ ಎಂದು ಅಳುಬುರಕನಂತೆ ಮಾತಾಡಲು ನಿರಾಕರಿಸುವ ಕವಿ ವಾಕ್ಚಾತುರನಾಗಿ ಉಪಮಾನ ಎತ್ತಿಕೊಳ್ಳುತ್ತಾನೆ. ` ನಾನು ಕೈವಾರದ(ಕಂಪಾಸ್) ಒಂದು ಕಾಲು, ನೀನು ಇನ್ನೊಂದು ಕಾಲು. ವೃತ್ತವನ್ನೆಳೆವಾಗ ನೀನು ನಿಂತಿರುವ ಕಾಲು ನಾನು ಚಲಿಸುತ್ತಿರುವ ಕಾಲು. ನೀನು ಸ್ಥಿರವಾಗಿದ್ದರೆ ಮಾತ್ರ ವೃತ್ತರಚನೆ ಮಾಡುತ್ತಿರುವ ಕಾಲಿಗೆ ಅರ್ಥ ಬರುತ್ತದೆ. ನಾನೆಷ್ಟೆ ದೂರ ಹೋದರೂ ನಾನು ನಿನಗೆ ಅಂಟಿಕೊಂಡೆ ಇಲ್ಲವೆ? ನಾನು ದೂರ ಹೋದಷ್ಟು ನಿನ್ನತ್ತ ವಾಲಿಕೊಂಡೇ ಇರುವುದಿಲ್ಲವೇ?

ಮೈ ಮನ ಆತ್ಮಗಳ ಸಮ್ಮಿಲನವಾದ ಪ್ರೇಮದ ಏರಳಿತಗಳು, ಗೋಳು, ನೋವು ನಿರರ್ಥಕತೆ ಕೂಡಾ ಡನ್ ಕವಿಗೆ ಗೊತ್ತು. ಒಂದು ಪದ್ಯದಲ್ಲಿ ಜಂಬದ ತನ್ನ ಪ್ರೇಯಸಿಗೆ ಹೇಳುತ್ತಾನೆ; ನಿನ್ನ ಪ್ರೇಮಕ್ಕಾಗಿ ನಾನು ಯಾಚಿಸಿ ಯಾಚಿಸಿ ಸತ್ತೆನೆಂದುಕೋ ಸದ್ಯ ಪೀಡೆ ಬಗೆಹರಿಯಿತು ಎಂದು ನೀನು ಇನ್ನೊಬ್ಬನನ್ನು ವರಿಸಿ ಅವನೊಂದಿಗೆ ಮಲಗಿದ್ದಾಗ ನಾನು ದೆವ್ವವಾಗಿ ಬಂದು ನಿನ್ನನ್ನು ಕಾಡುತ್ತೇನೆ; ನಿನಗೆ ಎಚ್ಚರಾಗಿ ಆತನನ್ನು ಎಬ್ಬಿಸಲು ಪ್ರಯತ್ನಿಸಿದಾಗ ನೀನು ಇನ್ನಷ್ಟು ಪ್ರೇಮಕ್ಕಾಗಿ ಪ್ರೇಮಕ್ಕಾಗಿ ಪೀಡಿಸುತ್ತಿರಬಹುದೆಂದು ಆತ ಗಾಢ ನಿದ್ರೆಯನ್ನು ನಟಿಸುತ್ತಾನೆ. ನೀನು ಬೆಳ್ಳಿಯ ಬೆವರಿನಲ್ಲಿ ನೆಂದುಹೋಗುತ್ತಿ…

`ಹರಟದೆ ತೆಪ್ಪಗಿದ್ದು ನಾನು ಪ್ರೇಮಿಸಲು ಬಿಡು ನನ್ನಾಣೆ’ ಎಂದೊಮ್ಮೆ ಬೇಡುತ್ತಾನೆ ಡನ್. ಪ್ರೇಮ ಆತನಿಗೆ ಎಷ್ಟು ವಾಸ್ತವ ಸಂಗತಿಗಳಿಂದ ಕೂಡಿದೆ ಎಂದರೆ ನನ್ನ ರೋಗಗಳ ಬಗ್ಗೆ ಹೇಳಿ ಚುಡಾಯಿಸು, ಉಳಿದಿರುವ ನನ್ನ ಐದೇ ಐದು ಬಿಳಿಗೂದಲುಗಳನ್ನು ವಣರ್ಿಸು, ನನ್ನ ಬಡತನವನ್ನು ಹೀಯಾಳಿಸು-ಬೇಕಾದರೆ ನೀನು ಶ್ರೀಮಂತಿಕೆಯಿಂದ ನಿನ್ನ ಘನತೆ ಹೆಚ್ಚಿಸಿಕೋ, ಕಲೆಗಳ ಅಭ್ಯಾಸದಿಂದ ನಿನ್ನ ಅಭಿರುಚಿಯನ್ನು ಬೆಳೆಸಿಕೋ ಏನಾದರೂ ಮಾಡು, ನನ್ನನ್ನು ಪ್ರೇಮಿಸಲು ಮಾತ್ರ ಬಿಡು” ಎನ್ನುತ್ತಾನೆ.

‍ಲೇಖಕರು avadhi

July 14, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅವಳು

ಅವಳು

ಸತ್ಯಮಂಗಲ ಮಹಾದೇವ ಅವಳುಈಗ ಹೆಚ್ಚು ಮೌನಿನೆಲಕೆ ನೀರು ಹಬ್ಬಿದಂತೆ ಅವಳುಈಗ ಮಾತಿನ ಕಸುವನ್ನುದುಡಿಯುವ ಕೈಗಳಿಗೆದಾಟಿಸುತ್ತಿರುವ ಅಭಿಯಂತರೆ...

ನಂಬಿಕೆ

ನಂಬಿಕೆ

ಗೀತಾ ಜಿ ಹೆಗಡೆ ಕಲ್ಮನೆ ಹಿಂದಿಂದೇ ಬರುವ ಒಂಟಿ ನೆರಳೊಂದುಕೇಳುತ್ತಿದೆ ಅವನೆಲ್ಲಿ ಬೇಗ ಹೇಳುಗುಟ್ಟೊಂದು ಅರ್ಜೆಂಟಾಗಿ ಹೇಳಬೇಕಿದೆನನಗೂ ಈಗ...

ತ್ರಿಲೋಕ…

ತ್ರಿಲೋಕ…

ಚಂದ್ರಪ್ರಭ ಕಠಾರಿ ಮನದಾಳದಲೆಲ್ಲೋ ಹುಟ್ಟಿದಅಣು ಗಾತ್ರದ ಭಯದ ಬಿಂದುಭುವಿಯಾಚೆಆಕಾಶದಾಚೆಅನಂತತೆಯಾಚೆಭೂತಾಕಾರದೀ ಬೆಳೆದುಅಗಣಿತ...

೧ ಪ್ರತಿಕ್ರಿಯೆ

  1. ರಮೇಶ್ ಹಿರೇಜಂಬೂರು

    ಮಾರ್ವೇಲ್ ಕವಿತೆಗಳಿಗಿಂತ ನನಗೆ ಹೆಚ್ಚು ಮನದಾಳಕ್ಕೆ ನಾಟುವುದು ಜಾನ್ ಡನ್ ಕವಿತೆಗಳು. ಅವುಗಳನ್ನು ಪಿ. ಲಂಕೇಶ್ ಕೂಡ ತುಂಬಾ ನಯವಾಗಿ, ಸೊಗಸಾಗಿ, ಹಾಸ್ಯಬರಿತ ಪ್ರೇಮದ ನಿವೇದನೆಯ ರೀತಿ ಅನುವಾದಿಸಿದ್ದಾರೆ… ಹಿಂದೆ ಓದಿದ ಕವಿತೆಗಳನ್ನು ಈಮುಲಕ ಮತ್ತೆ ಓದಿಸಿ, ನೆನಪಿಸಿದ ಮಲೆನಾಡ ಹುಡುಗಿ ಅಕ್ಷತಾಗೆ ತುಂಬಾ ಥ್ಯಾಂಕ್ಸ್ …. -ರಮೇಶ್ ಹಿರೇಜಂಬೂರು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: