ಲಂಕೇಶ್ ಪತ್ರಿಕೆ ಓದುತ್ತಾ ಓದುತ್ತಾ ಕಣ್ಣು ತೆರೆದೆ…

ಹೈವೇ 7

———

hoovu4.jpg

ಭಾಗ: ಹನ್ನೆರಡು

ವಿ.ಎಂ.ಮಂಜುನಾಥ್

ಇಸವಿಯಲ್ಲಿ ಏನು ಸಂಭವಿಸಿತೆಂದು
ಹೇಳುವ ಧೈರ್ಯ ನನಗಿಲ್ಲದೇ ಹೋಯಿತು.
ಆದರೆ,
ಆ ಗ್ರಾಮದ ಸಾಲುಮನೆಗಳ ಮನೆಯೊಂದರ ಚಿಮಣಿಯಿಂದ
ಕಪ್ಪುಹೊಗೆಯ ಬದಲಿಗೆ,
ದಟ್ಟ ರಕ್ತದ ಹೊಗೆಯೇ ಚಿಮ್ಮುತ್ತಿತ್ತು.

(ನನ್ನ ಪ್ರಿಯ ಲೇಖಕ ಲಂಕೇಶ್ ತೀರಿಕೊಂಡಾಗ ಬರೆದ ಪದ್ಯ)

ನನಗೆ ಜ್ಞಾಪಕದಲ್ಲಿರುವಂತೆ ನನ್ನ ಅಪ್ಪ, ಅಣ್ಣನ ಕೈಯ್ಯಲ್ಲಿ ಪ್ರಜಾಮತವನ್ನು ತರಿಸುತ್ತಿದ್ದರು. ಅದನ್ನು ನಾನು ಓದುತ್ತಿದ್ದೆ. ಆದರೆ ಅದು ಚಿಕ್ಕಂದಿನಲ್ಲಿ ನನ್ನ ಮೇಲೆ ಪ್ರಭಾವ ಬೀರಿದ್ದು ಹೇಗೆಂದರೆ, ಪತ್ರಿಕೆಗಳನ್ನು ಓದಬಹುದೆಂಬ ಬಹಳ ಮುಖ್ಯವಾದ ಪ್ರಜ್ಞೆಯೊಂದನ್ನು ನೀಡಿದ್ದು ಬಿಟ್ಟರೆ ಅಂತಹ ಬದಲಾವಣೆಗೇನೂ ಕಾರಣವಾಗಲಿಲ್ಲ ಅಷ್ಟೇ. ನನ್ನ ದೊಡ್ಡ ಅಣ್ಣನಿಗೆ ಸಿನಿಮಾ ಹುಚ್ಚಿದ್ದಿದ್ದರಿಂದ ಭಾನುವಾರ ಯಲಹಂಕದ ಸಂತೆಗೆ ಹೋಗಿ ಸಿನಿಮಾ ಹಾಡುಗಳ ಸಾಕಷ್ಟು ಪುಸ್ತಕಗಳನ್ನು ತರುತ್ತಿದ್ದ. ತನ್ನ ನೆಚ್ಚಿನ ಹೀರೋನ ಚಿತ್ರ ಬಿಡುಗಡೆಯಾದ ದಿನ ಹುಣಸೆಮರದ ಕೆಳಗೆ ಗೆಳೆಯರನ್ನು ಕೂಡಿ ಹಾಕಿಕೊಂಡು ಬಿದಿರಿನ ಬೊಂಬುಗಳಿಂದ ಸ್ಟಾರ್ ಅನ್ನು ಕಟ್ಟುತ್ತಿದ್ದ. ಆ ಸ್ಟಾರ್ ನ ಮಧ್ಯೆ ಹೀರೋನ ಪೋಸ್ಟರ್  ಹಚ್ಚುತ್ತಿದ್ದ. ನಂತರ ಇಡೀ ದಿನ ಪೂರ್ತಿ ಆ ಸ್ಟಾರ್ ಅನ್ನು ಸೈಕಲ್ಲಿನ ಹ್ಯಾಂಡಲ್ ಗೆ ಕಟ್ಟಿಕೊಂಡು ಊರೆಲ್ಲಾ ಸುತ್ತು ಹೊಡೆಯುತ್ತಿದ್ದ. ಅಪ್ಪನಿಗೆ ಇದು ಆಗುತ್ತಿರಲಿಲ್ಲ. ಆ ಸಿನಿಮಾ ಹಾಡುಗಳ ಪುಸ್ತಕಗಳು, ಕ್ಯಾಲೆಂಡರ್ ಗಳು, ಪೋಸ್ಟರ್ ಗಳು ಕಣ್ಣಿಗೇನಾದರೂ ಬಿದ್ದರೆ ಉರಿಯುವ ಒಲೆಗೆ ತುರುಕುತ್ತಿದ್ದರು. ಇದು ಇನ್ನು ಆಗದ ಕೆಲಸ ಎಂದು, ಬರಬರುತ್ತಾ ಲಂಕೇಶ್ ಪತ್ರಿಕೆ ಮತ್ತು ಪೊಲೀಸ್ ನ್ಯೂಸ್ ಪತ್ರಿಕೆಗಳನ್ನು ತರಲು ಶುರು ಮಾಡಿದ. ಪೊಲೀಸ್ ನ್ಯೂಸ್ ಪತ್ರಿಕೆಯಲ್ಲಿ ಅಶ್ಲೀಲ ಚಿತ್ರಗಳಿರುತ್ತಿದ್ದದ್ದರಿಂದ ಕದ್ದು ಮುಚ್ಚಿ ನೋಡುತ್ತಿದ್ದೆ. ಮನೆಯಲ್ಲಿ ಯಾರೂ ಇಲ್ಲದಾಗ “ಹೆಣ್ಣೇ ಕೇಳು ನಿನ್ನಯ ಗೋಳು” ಮತ್ತು ಕೊನೆಯ ಪುಟದಲ್ಲಿ ಅಚ್ಚಾಗುತ್ತಿದ್ದ ಕ್ಯಾಬರೆ ಹೆಣ್ಣುಗಳ ಅರೆಬೆತ್ತಲೆ ಚಿತ್ರಗಳನ್ನು ಸುಮಾರು ಹೊತ್ತು ದಿಟ್ಟಿಸುತ್ತಿದ್ದೆ. ಏಕೆಂದರೆ ಆ ಚಿತ್ರಗಳಲ್ಲಿ ಪ್ರಕಟಗೊಳ್ಳುತ್ತಿದ್ದ ಲಲನಾಂಗಿಯರ ಎದೆ, ತೊಡೆ, ಸೊಂಟ, ನಿತಂಬಗಳ ಮೇಲೆ ಕಾಮ ಪ್ರಚೋದಕ ಬರಹಗಳಿರುತ್ತಿದ್ದವು. ಸ್ಕರ್ಟನ್ನು ಮೇಲೆ ಎಳೆದುಕೊಳ್ಳುತ್ತಾ “ಇನ್ನೂ ಸ್ವಲ್ಪ ಮೇಲೆತ್ತಲೆ?”, ಅರ್ಧ ಸ್ತನಗಳನ್ನು ಬಿಚ್ಚಿ ತೋರಿಸಿ “ಇಷ್ಟು ಸಾಕೇ, ಇನ್ನೂ ಬೇಕೆ”, ಸೊಂಟದ ಉಡುಪನ್ನು ಕೆಳಗೆ ಎಳೆದುಕೊಳ್ಳುತ್ತಾ, “ಹಾಗೇ ನೋಡುತ್ತಿರಿ, ಸಂಪೂರ್ಣವಾಗಿ ತೋರಿಸುತ್ತೀನಿ” ಎಂಬಂತಹಾ ಅದೆಷ್ಟೋ ಉನ್ಮತ್ತತೆಯನ್ನು ಉಕ್ಕಿಸುವ ಬರಹಗಳಿರುತ್ತಿದ್ದವು. ಅಪ್ಪ, ಅಣ್ಣ ಇರುವಾಗ ಆ ಪತ್ರಿಕೆಯನ್ನು ಮುಟ್ಟುತ್ತಿರಲಿಲ್ಲ. ದೂರದಿಂದಲೇ ನೋಡಿ ಸಂತೃಪ್ತನಾಗುತ್ತಿದ್ದೆ. ಈ ಪತ್ರಿಕೆಯ ಜೊತೆಗೆ ಲಂಕೇಶ್ ಪತ್ರಿಕೆ ಹೇಗೆ ಮನೆಗೆ ಬರುತ್ತಿತ್ತೋ ಇವೊತ್ತಿಗೂ ಅಚ್ಚರಿ ಹುಟ್ಟಿಸುತ್ತದೆ. ಒಂದು ಪುಟವೂ ತೆರೆಯದೇ ಲಂಕೇಶ್ ಪತ್ರಿಕೆಯನ್ನು ನೋಡುತ್ತಿದ್ದದ್ದು, ಕಡೆಗೆ ಅದು ನನ್ನ ಬದುಕನ್ನೇ ವಿಶಿಷ್ಟವಾಗಿ ರೂಪಿಸಿಬಿಡುತ್ತದೆ ಎಂದು ಯಾರೂ ಕೂಡ ಭವಿಷ್ಯ ನುಡಿಯಲಾಗುತ್ತಿರಲಿಲ್ಲ. ಅಂತಹ ಸ್ಥಿತಿಯಲ್ಲಿದ್ದೆವು ನಾವು.

ದಲಿತರನ್ನು ಗೇಲಿ ಮಾಡುತ್ತಾನೆಂದು, ಕೀಳಾಗಿ ಬರೆಯುತ್ತಾನೆಂದು ಪತ್ರಿಕೆಯಲ್ಲಿ ಅಂಕಣ ಬರೆಯುತ್ತಿದ್ದ ಪುಂಡಲೀಕ್ ಶೇಟ್ ನನ್ನು ಅಪ್ಪ ಯಾವಾಗಲೂ ವಿರೋಧಿಸುತ್ತಿದ್ದರು. ಮತ್ತು ನಮಗೆಲ್ಲರಿಗೂ ಅವನ ಲೇಖನಗಳನ್ನು ಓದಬಾರದೆಂದು ಹೇಳುತ್ತಿದ್ದರು. ಆದರೆ ಅದೇನು ಅವರ ಉಗ್ರ ಆದೇಶವೇನೂ ಆಗಿರಲಿಲ್ಲ. ಲಂಕೇಶರ ಎದೆಗಾರಿಕೆ, ದಿಟ್ಟತನವನ್ನು ನಮಗೆಲ್ಲ ಆಗಿನ ಕಾಲಕ್ಕೆ ಅಪ್ಪ ಹೇಳಿದ್ದರು. ಪೊಲೀಸ್ ನ್ಯೂಸ್ ಪತ್ರಿಕೆಯನ್ನು ವಾರೆಗಣ್ಣಿನಲ್ಲಾದರೂ ನೋಡುವ ನೆಪದಲ್ಲಿ ಲಂಕೇಶ್ ಪತ್ರಿಕೆಯನ್ನು ಎಳೆದುಕೊಂಡು ಓದಲೆತ್ನಿಸುತ್ತಿದ್ದೆ. ಅದು ಹಾಗೆ ನೋಡುತ್ತಿದ್ದದ್ದು ಕ್ರಮೇಣ ನನ್ನನ್ನೇ ಅಫೀಮಿನಂತೆ ಹೀರಿ ಹಾಕತೊಡಗಿದ್ದು ಮಾತ್ರ ಬೆರಗು ಹುಟ್ಟಿಸುವಂಥದ್ದು. ನಾನು ಲಂಕೇಶ್ ಪತ್ರಿಕೆಯನ್ನು ಓದುವ ಉತ್ಸಾಹ, ಹುಮ್ಮಸ್ಸನ್ನು ಗಮನಿಸತೊಡಗಿದ ನನ್ನ ಅಣ್ಣ, ಪತ್ರಿಕೆ ತರುವುದನ್ನು ಬಿಟ್ಟ. ನಾನು ತಲೆ ಬಾಚಿಕೊಂಡು ಸ್ವಲ್ಪ ಮಟ್ಟಿಗೆ ನೋಡಲು ಲಾಯಕ್ಕಾಗಿ ಕಾಣುತ್ತಿದ್ದದ್ದು ಬಿಟ್ಟರೆ, ಹಾಕಿಕೊಳ್ಳುತ್ತಿದ್ದ ಬಟ್ಟೆಬರೆಯಲ್ಲಿ ಕಣ್ತೆರೆದು ನೋಡಲಾಗುತ್ತಿರಲಿಲ್ಲ. ತೂಗುದಾರದಲ್ಲಿ ಹರಿದು ಚಿಂದಿಯಾಗಿ ನೇತಾಡುತ್ತಿದ್ದ ಶರ್ಟ್ ಮತ್ತು ಚೆಡ್ಡಿಯನ್ನು ಎಳೆದು ಹಾಕಿಕೊಂಡು, ಅಪ್ಪನ ಹೀರೋ ಸೈಕಲ್ಲನ್ನು ತುಳಿದುಕೊಂಡು ವೆಂಕಟಾಲದಿಂದ ಯಲಹಂಕಕ್ಕೆ ಪ್ರತಿವಾರ ಪತ್ರಿಕೆ ತರಲು ಹೋಗುತ್ತಿದ್ದೆ. ಸೈಕಲ್ಲು ಇಲ್ಲದಿದ್ದಾಗ ನಡೆದುಕೊಂಡೇ ಹೋಗಿ ತರುತ್ತಿದ್ದೆ. ಆಗ ತಂದಾಗ ಪತ್ರಿಕೆಯಲ್ಲಿ ಏನು ಓದುತ್ತಿದ್ದೆನೋ ಸ್ಪಷ್ಟವಿಲ್ಲ, ಆದರೆ ಏನೋ ಓದುತ್ತಿದ್ದದ್ದು ಮಾತ್ರ ಸತ್ಯವಾಗಿತ್ತು. ಕಾಲಾಂತರದಲ್ಲಿ ಅದರ ಮೋಹಕ್ಕೆ ಸಿಲುಕಿದ ನಾನು, ಸಂಜೆ ಪತ್ರಿಕೆ ತಂದ ಕೂಡಲೇ ಯಾರಿಗೂ ಕೊಡದೇ, ಎಲ್ಲಾದರೂ ಒಂದು ಕಡೆ ಮರೆಯಲ್ಲಿಟ್ಟು, ಕೈಕಾಲು ಮುಖ ತೊಳೆದುಕೊಂಡು ನಂತರ ಓದಲು ತೊಡಗುತ್ತಿದ್ದೆ. ಲಂಕೇಶರ “ಈ ಸಂಚಿಕೆ”ಯನ್ನು ಮೊದಲು ಓದಲು ಶುರು ಮಾಡಿ, ಅವರ “ಟೀಕೆ-ಟಿಪ್ಪಣಿ”ಯನ್ನು ಮುಗಿಸಿ, ಅದರ ಅಡಿಗೆ ಪ್ರಕಟವಾಗುತ್ತಿದ್ದ “ಮರೆಯುವ ಮುನ್ನ” ಓದಿ, ಸಾಹಿತ್ಯಕ್ಕೆ ಮೀಸಲಾದ ಒಳಪುಟಗಳನ್ನು ಓದಿಕೊಳ್ಳುತ್ತಿದ್ದೆ.

lankesh_a-portrait-by-manjunatha-vm-copy22.jpg

ಹೀಗೆ ನನ್ನ ಮನೆಯಲ್ಲಷ್ಟೇ ಅಲ್ಲ, ಇಡೀ ನಮ್ಮ ವಂಶದಲ್ಲೇ ಯಾರೊಬ್ಬರೂ ಪದ್ಯ, ಕತೆ, ನಾಟಕ, ಚಿತ್ರ ಬರೆದವರಲ್ಲ. ಅಲ್ಲೇ ಎಲ್ಲೋ ಮೂಲೆಯಲ್ಲಿರುತ್ತಿದ್ದ ಇವೆರಡೂ ಪತ್ರಿಕೆಗಳಲ್ಲಿ ಪೊಲೀಸ್ ನ್ಯೂಸ್ ನಿರ್ಲಕ್ಷ್ಯಕ್ಕೊಳಗಾಗಿ, ಲಂಕೇಶ್ ಪತ್ರಿಕೆ ಮೇಲೆ ಕಣ್ಣಾಡಿಸುತ್ತಿದ್ದದ್ದು ಬಿಟ್ಟರೆ, ಅದು ಯಾವತ್ತೂ ನನ್ನನ್ನು ಒಬ್ಬ ಬರಹಗಾರನನ್ನಾಗಿ ರೂಪಿಸುತ್ತದೆಯೆಂದು ಅಂದುಕೊಂಡಿರಲಿಲ್ಲ. ಪ್ರತಿ ಮಂಗಳವಾರ ಸಂಜೆ ಏಳು ರೂಪಾಯಿಗಳನ್ನು ಹೊಂದಿಸಿಕೊಂಡು ನಾನೇ ತರುವಂತಾದೆ. ತೀರ ಬಡವರಾದ ನಾವು ಹಸಿವಿನಿಂದ ಒದ್ದಾಡುತ್ತಿದ್ದಾಗಲೂ ಪತ್ರಿಕೆ ತರುವುದನ್ನು ಎಂದಿಗೂ ನಿಲ್ಲಿಸಲಿಲ್ಲ. ನನ್ನ ಅಣ್ಣಂದಿರು, ಅಪ್ಪ, ಅಮ್ಮನ ಹತ್ತಿರ ಎಲ್ಲರಿಂದಲೂ ಕಾಸು ಹೊಂದಿಸುತ್ತಿದ್ದೆ. ಮನೆಯಲ್ಲಿ ಯಾರೊಬ್ಬರ ಹತ್ತಿರವೂ ಕಾಸಿಲ್ಲದಾಗ ನೆರೆಹೊರೆಯವರ ಹತ್ತಿರ ಸಾಲ ಪಡೆದು ಹೋಗಿ ಪತ್ರಿಕೆ ತರುತ್ತಿದ್ದೆ. ಚರ್ಚ್ ನಲ್ಲಿ ಕೊಡುತ್ತಿದ್ದ ನುಚ್ಚನ್ನು ತಂದು ನಮ್ಮ ಅಮ್ಮ ಬೇಯಿಸಿ ಹಾಕಿ, ಪತ್ರಿಕೆಗೆ ಹಣ ಕೊಟ್ಟ ಚಿತ್ರಗಳು ನನ್ನ ಕಣ್ಣಿನಲ್ಲಿ ಜೀವಂತವಾಗಿವೆ.

ಬೋದಿಲೇರ್, ನೆರೂಡ, ಎಲಿಯಟ್, ಶೇಕ್ಸ್ ಪಿಯರ್, ಲೋರ್ಕಾ, ಮಾರ್ಕ್ವೆಜ್, ಬ್ರೆ ಬೆಕೆಟ್, ಏಟ್ಸ್, ಕೀಟ್ಸ್, ಕ್ಯಾಥರೀನ್ ಆನ್ ಪೋರ್ಟರ್, ಬೋರ್ಹೆಸ್, ಶೋಯಿಂಕಾ, ಚೆಕಾವ್, ಅಕ್ಟೋವಿಯಾ ಪಾಜ್, ಜೀನ್ ಜೀನೆ, ಸಾರ್ತ್ರ್, ಕಾಫ್ಕಾ, ಕಾಮೂ, ಟಾಲ್ ಸ್ಟಾಯ್, ಪುಷ್ಕಿನ್ ಹೀಗೆ ಇನ್ನೂ ಅನೇಕ ಪ್ರಸಿದ್ಧ ಪಾಶ್ಚಾತ್ಯ ಲೇಖಕರನ್ನು ಪತ್ರಿಕೆ ನನಗೆ ಪರಿಚಯಿಸಿತು. ಅವರ ವಿಕ್ಷಿಪ್ತ ಬದುಕು, ಕ್ರಿಯಾಶೀಲ ಬರಹ ನನ್ನನ್ನು ಒಬ್ಬ ಬರಹಗಾರನನ್ನಾಗಿ ರೂಪಿಸಿದರೆ; ಕತೆ, ಪದ್ಯಗಳಿಗೆ ಬಳಸಲಾಗುತ್ತಿದ್ದ ರೇಖಾಚಿತ್ರಗಳು ನನ್ನನ್ನು ಕಲಾವಿದನನ್ನಾಗಿ ತಯಾರು ಮಾಡಿದವು. ಸ್ಕೂಲಿನಲ್ಲಿ ಪದ್ಯಗಳನ್ನು ಓದುತ್ತಿದ್ದದ್ದು ಬಿಟ್ಟರೆ ಮತ್ತಾವ ಪ್ರಕಾರದ ಪದ್ಯಗಳ ಪರಿಚಯವೂ ನನಗಿರಲಿಲ್ಲ. ಲಂಕೇಶ್ ಪತ್ರಿಕೆಯ ಒಳಪುಟಗಳಲ್ಲಿ ಆಕಾಶದಲ್ಲಿ ನಕ್ಷತ್ರಗಳಂತೆ ಕಾಣಿಸಿಕೊಳ್ಳುತ್ತಿದ್ದ ಮೂರ್ನಾಲ್ಕು ಸಾಲುಗಳ “ನೀಲು” ಪದ್ಯಗಳು ನನ್ನನ್ನು ಸೆರೆ ಹಿಡಿದವು.

ಆ ನೀಲು ಪದ್ಯಗಳು ಪ್ರಪಂಚದ ಎಲ್ಲಾ ಹೆಣ್ಣುಗಳ ದ್ವಂದ್ವವನ್ನು ವ್ಯಕ್ತಪಡಿಸುತ್ತವೆ. ಕ್ಲಿಷ್ಟ ಶಬ್ದಗಳಿಂದ ಖಂಡಕಾವ್ಯಗಳ ರಚಿಸಿ, ಜನಪ್ರಿಯರಾಗಲೆತ್ನಿಸುವ ಮೂರ್ಖಕವಿಗಳ ಯಾವುದೇ ಕಸರತ್ತು, ಕುತಂತ್ರ ಇಲ್ಲಿಲ್ಲ. ನೆಲದ ವಾಸನೆಯಿಂದ ಸೀಳಿಕೊಂಡು ಪದಗಳು ಸುಂದರ ಪ್ರತಿಮೆಗಳನ್ನು ಕಟ್ಟಿಕೊಡುತ್ತವೆ; ಮೋಡದ ನೀಲಿ ಹಾಳೆಯಲ್ಲಿ ಕವಿತೆಗಳು ಹಕ್ಕಿಗಳಂತೆ ಮೈದಾಳುತ್ತವೆ. ಚಿರತೆಯು ಜಿಂಕೆಯನ್ನು ಬೆನ್ನಟ್ಟಿ ಹೋಗುವ ವೇಗವಿದೆ. ಸರಳಭಾಷೆ, ನೇರ ನಿರೂಪಣೆ; ಬೆಟ್ಟದ ಬುಡದ ಮರದ ಕೆಳಗೆ ಕುರಿ ಕಾಯುತ್ತ ಮಲಗಿದ ಹುಡುಗಿಯನ್ನೂ ನಾಚಿಸುವಂತಹ ನುಡಿಗಟ್ಟುಗಳು. ಅದು ಕಾವ್ಯದ ನಿಜವಾದ ಕಾಣಿಕೆ. ಹೆಣ್ಣಿನಾಳದಲ್ಲಿ ಹೊರಡುವ ಈ ಪದ್ಯಗಳು ಕಲೆ, ರಾಜಕೀಯ, ಸಂಸ್ಕೃತಿ, ಹಾದರ, ಸಾಹಿತ್ಯ, ತತ್ವಶಾಸ್ತ್ರ, ಎಲ್ಲವನ್ನೂ ಬಗೆದು ನೋಡುತ್ತವೆ. ಆ ಮೂರ್ನಾಲ್ಕು ಸಾಲಿನ ಪದ್ಯಗಳ ಮಾದಕತೆ ಎಂಥದೆಂಬುದು ಗೊತ್ತೇ? ಅದು ಹಾಡುವ ಹಕ್ಕಿ ಶೇಕ್ಸ್ ಪಿಯರ್, ವರ್ಡ್ಸ್ ವರ್ತ್, ಯೇಟ್ಸ್, ನೆರೂಡ, ಎಲಿಯಟ್, ಪುಷ್ಕಿನ್ ರ ತಂಗುದಾಣ; ಅಲ್ಲಿ ಗ್ರೇಟಾ ಗಾರ್ಬೋಳ ವಿಶ್ರಾಂತತೆ, ಆಡ್ರೆ ಹೆಬ್ಬರ್ನ್ ಳ ಮೈ ಕಾಂತಿ, ಮುಗುಳ್ನಗೆ ಮತ್ತು ಬಿಥೋವನ್ ನ ಲಯವಿದೆ. ಆತ ಮನುಕುಲಕ್ಕೆ ನೀಡಿದ ಅಮಲುಗಳು ಇವು. ಮದ್ಯ ಮತ್ತು ಪ್ರೇಮವನ್ನೂ ಮೀರಿದ, ದೂರದೂರಿನ ನಲ್ಲನಲ್ಲೆಯರ ಟೆಲಿಗ್ರಾಮ್ ಗಳು. ಅವು ಎಲ್ಲವನ್ನೂ ಹೊತ್ತು ತರುತ್ತವೆ. ನೀಲಮೇಘಗಳಿಂದ ಸುರಿಯುವ ಹೂಮಳೆಯಂತೆ ಸದಾಕಾಲ ನಮ್ಮನ್ನು ಜೀವಂತವಾಗಿರಿಸಬಲ್ಲವು. ಆ ನೀಲು ಪದ್ಯಗಳ ಕುರಿತು ನಾನು ಬರೆದ ಪದ್ಯವೊಂದನ್ನು ನಿಮಗೆ ಕೊಡುತ್ತೇನೆ.

 ಅವರೆಲ್ಲರೂ ಪಬ್ ನಲ್ಲಿ ಕುಳಿತು ವಿಸ್ಕಿ, ಬ್ರಾಂಡಿ, ಬಿಯರ್
ಹೀರುತ್ತಿದ್ದರೆ ನಾನು ನಿನ್ನನ್ನು ಕುಡಿಯುತ್ತ
ಅಲ್ಲಿ ಮುಲೆಯಲ್ಲಿ ಎಚ್ಚರ ತಪ್ಪಿದ ಬೀಡಾಡಿ ಹುಡುಗಿಯರನ್ನು
ಏಳಿಸಿ, ಮಹಾ ಕುಡುಕನಂತೆ ತೂರಾಡುತ್ತ
ಅವರೆಲ್ಲರ ಪ್ರೀತಿ, ಹಾದರದ ಕುರುಹುಗಳನ್ನು ಅವರದೇ
ಹೃದಯದ ಮೇಲೆ ತೋರಿಸಿ ಕೊಲೆಯಾಗುತ್ತಿರುತ್ತೇನೆ
ಅಥವಾ ನಡೆದುಹೋಗುತ್ತಿರುತ್ತೇನೆ 
ಸದಾ ಉರಿಯುವ ದಿಬ್ಬಗಳ ಮೇಲೆ;
ಆಳದ ಗುಂಡಿಗಳಲ್ಲಿ ನನ್ನನ್ನು ಮುಚ್ಚಿಕೊಂಡು.

ಇನ್ನೂ ನೆನಪಿದೆ. ಗುರು ಲಂಕೇಶ್ ತೀರಿಕೊಂಡಿದ್ದರು. ಒಬ್ಬ ಮನುಷ್ಯನಿಗಾಗಿ ನಾನು ಯಾವತ್ತೂ ನೋವಿನಿಂದ ಅಷ್ಟು ಕಂಗಾಲಾದವನೇ ಅಲ್ಲ. ಮತ್ತೊಮ್ಮೆ ನನ್ನ ಬದುಕಿನಲ್ಲಿ ಅಂಥ ಅಳು ಮರುಕಳಿಸಿದ್ದು ನನ್ನ ತಂದೆ ವಿಧಿವಶರಾದಾಗ. ಮರಳು ತರಲು ಹೋಗಿದ್ದ ಲಾರಿ ಇಂಜಿನ್ ಸಿಡಿದು ಕೆಟ್ಟು ನಿಂತಿತ್ತು. ಅಷ್ಟೊತ್ತಿಗಾಗಲೇ ಆ ಲಾರಿಯಿಂದ ಸಂಪೂರ್ಣವಾಗಿ ಸರ್ವನಾಶವಾಗಿ ಹೋಗಿದ್ದ ನನ್ನ ಅಣ್ಣ, ಸೋತಮುಖದಲ್ಲಿ ಮನೆಗೆ ಬಂದಾಗ, ನಾನು ದುಃಖತಪ್ತನಾಗಿದ್ದು ಕಂಡು ವಿಷಯ ತಿಳಿದು, ಕೂಲಿಯವರಿಗೆ ಕೊಡಲು ಇಟ್ಟುಕೊಂಡಿದ್ದ ನೂರು ರೂಪಾಯಿಯನ್ನು ನನಗೆ ಕೊಟ್ಟು, ಅಂತ್ಯಸಂಸ್ಕಾರಕ್ಕೆ ಹೋಗಿ ಬರಲು ಹೇಳಿದ. ಮತ್ತಷ್ಟು ಕಣ್ಣೀರ ಹನಿಗಳು ಒಡಲಿನಿಂದ ಒತ್ತರಿಸಿಕೊಂಡು ಬಂದವು.

ಮೌಲ್ಯರಹಿತ ಮನುಷ್ಯನನ್ನು ಸೀಳುವ ಮತ್ತು ಪ್ರಜ್ಞಾವಂತಿಕೆಯಿಂದ ಕೂಡಿಸುವ ದಿವ್ಯತೆಯನ್ನು ತನ್ನ ಅಂತ್ಯದ ದಿನಗಳವರೆಗೂ ಉಳಿಸಿಕೊಂಡಿದ್ದ ಪತ್ರಿಕೆ, ನನ್ನ ದೇಹದಲ್ಲಿ ಚಂಡಮಾರುತದಂತೆ ಅಲೆದಾಡಿ ನನಗೆ ವಿಶೇಷವಾದ ಐಡೆಂಟಿಟಿಯನ್ನು ದೊರಕಿಸಿ ಕೊಟ್ಟಿದೆ.

ನಿಜಕ್ಕೂ ನಾನೇನಾದರೂ ಕೃತಜ್ಞತೆ ಹೇಳುವುದಿದ್ದರೆ ಅದು ಫಲವತ್ತಾದ ಹೊಲದಂತೆ ನನ್ನೊಳಗೆ ಇಳಿದು, ನನ್ನ ಎಲ್ಲ ಕೀಳರಿಮೆ, ಯಾತನೆಗಳನ್ನು ದಿಟ್ಟತನದಿಂದ ಎದುರಿಸುವ ಶಕ್ತಿ ನೀಡಿದ ಲಂಕೇಶ್ ಪತ್ರಿಕೆ ಎಂಬ ವಿಶ್ವವಿದ್ಯಾಲಯಕ್ಕೆ.

‍ಲೇಖಕರು avadhi

March 18, 2008

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

2 ಪ್ರತಿಕ್ರಿಯೆಗಳು

 1. uniquesupri

  ನಿಜಕ್ಕೂ ನನಗೆ ನಿಮ್ಮ ಅನುಭವಗಳನ್ನು ಕೇಳಿ ಅಸೂಯೆಯಾಗುತ್ತಿದೆ. ನಾನೊಂದು ಇಪ್ಪತ್ತು ವರ್ಷ ಮೊದಲೇ ಹುಟ್ಟಬಾರದಿತ್ತಾ ಎನ್ನಿಸದಿರಲಿಲ್ಲ. ನಿಜಕ್ಕೂ ಮನಮುಟ್ಟುವ ಬರಹ ಹಾಗೂ ಪದ್ಯಗಳು.
  ಧನ್ಯವಾದಗಳು, ಮಂಜುನಾಥ್

  ಪ್ರತಿಕ್ರಿಯೆ
 2. Basavaraja Halli

  ಓದುತ್ತಾ ಓದಂತೆ ಕಣ್ಣಲ್ಲಿ ನೀರಾಡಿದವು.
  -ಬಸವರಾಜ ಹಳ್ಳಿ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: