ಲಾರಿಯೇರಿ ಬರುವ ಮನೆ!

-ನಾ ಕಾರಂತ ಪೆರಾಜೆ
ಹಸಿರುಮಾತು
 
karanth1‘ಮನೆಕಟ್ಟಿ ನೋಡು, ಮದುವೆ ಮಾಡಿ ನೋಡು’ – ಬದುಕಿಗಂಟಿದ ಗಾದೆ. ಮನೆಕಟ್ಟಿ, ಮದುವೆಯಾಗುವಾಗ ಬದುಕೇ ಹೈರಾಣ! ಉಳ್ಳವರಿಗೆ ತೊಂದರೆಯಿಲ್ಲ. ಮಧ್ಯಮವರ್ಗದವರಿಗೆ? ಸಾಲ-ಸೋಲ ಮುಗಿವಾಗ ಆಯುಸ್ಸಿನ ಅರ್ಧ ಲೆಕ್ಕಣಿಕೆ ಮುಗಿದಿರುತ್ತದೆ!
‘ಅಡಿಪಾಯ ಮಾಡಿಕೊಡಿ. ಎರಡೇ ದಿವಸದಲ್ಲಿ ಮನೆ ಸಿದ್ಧ’ – ಇದೇನೂ ‘ಆಫರ್’ಗಳ ಬೊಗಳೆ ಅಲ್ಲ! ಚಿಕ್ಕಮಗಳೂರು ಜಿಲ್ಲೆಯ ಕಡಬಗೆರೆಯ ಕೆ.ಎ.ಭಾಗ್ಯದೇವ್ ಅವರ ಸ್ಲೋಗನ್. ಈಗಾಗಲೇ ಎಪ್ಪತ್ತಕ್ಕೂ ಮಿಕ್ಕಿ ಕಳಚಿ ಒಯ್ಯಬಹುದಾದ ಕಳಚಿ ಜೋಡಿಸಬಲ್ಲ ಮನೆಗಳನ್ನು ತಯಾರಿಸಿದ್ದಾರೆ.
ಆದೇಶ ಕೊಟ್ಟು ಮರೆತು ಬಿಡಿ. ತಿಂಗಳೊಳಗೆ ಲಾರಿಯೊಂದು ನಿಮ್ಮ ಮನೆಯ ಮುಂದೆ ನಿಲ್ಲುತ್ತದೆ. ಸಿಮೆಂಟಿನ ವಿವಿಧ ಆಕಾರದ ವಸ್ತುಗಳನ್ನು ಕೆಳಗಿಳಿಸುತ್ತಾರೆ. ಬೈಕಿನಲ್ಲಿ ಪೇಟೆಗೆ ಹೋಗಿ ಪೇಪರ್ ತರುವಷ್ಟರಲ್ಲಿ ನಿಮ್ಮ ಮನೆಯಂಗಳದಲ್ಲಿ ಹೊಸ ಮನೆಯೊಂದು ತಲೆಯೆತ್ತಿರುತ್ತದೆ!
ಭಾಗ್ಯದೇವ್ ಇಂಜಿನಿಯರ್. ಮಧ್ಯಮವರ್ಗದವರ ಕಷ್ಟದ ಅರಿವಿದ್ದ ಕೃಷಿಕ. ಏಳೆಂಟು ಲಕ್ಷ ಸುರಿದು ಮನೆಕಟ್ಟಿ, ಅದ್ದೂರಿ ‘ಒಕ್ಕಲು’ ಮಾಡಿದರೂ ಎಷ್ಟು ಮಂದಿ ತೃಪ್ತರು? ‘ದೊಡ್ಡ ಮನೆ ಕಟ್ಟಬೇಕೆಂದರೆ ಐದಾರು ಲಕ್ಷ ಬೇಕಲ್ವಾ. ನಮ್ಮಿಂದಾಗದು’ ಎನ್ನುವವವರ ಬವಣೆಯೂ ಗೊತ್ತು. ಇಂತಹವರ ನೆರವಿಗೆ ಮುಂದೆ ಬಂದಿದ್ದಾರೆ ಭಾಗ್ಯದೇವ್.
ಒಂದು-ಎರಡು-ಮೂರು ‘ಬೆಡ್ರೂಂ’ಗಳು, ಅಡುಗೆ ಮನೆ, ವರಾಂಡ, ಸಿಮೆಂಟ್ ಶೀಟಿನ ಸೂರು. ಸ್ನಾನ-ಶೌಚ ಗೃಹ. ಒಂದೂಕಾಲಿಂಚು ದಪ್ಪದ ಕಾಂಕ್ರಿಟ್ ಗೋಡೆ. ಬಾಗಿಲು, ಕಿಟಕಿ – ಇವಿಷ್ಟು ಕಳಚಿ ಜೋಡಿಸುವಂತಹುದು. ‘ಬೋಲ್ಟ್ ಸಿಸ್ಟಂ’.
2ಅಡಿಪಾಯ ರಚನೆಯು ಭಾಗ್ಯದೇವ್ ‘ಪ್ಯಾಕೇಜ್’ಗೆ ಸೇರಿಲ್ಲ. ಉಳಿದ ಮನೆಗಳಂತೆ ‘ಭಯಂಕರ’ ಅಡಿಗಟ್ಟು ಬೇಕಿಲ್ಲ. ‘3 ಇಂಚು ದಪ್ಪದ ಕಾಂಕ್ರಿಟ್ ಅಡಿಪಾಯ ಸಾಕು. ನುಸುಳು ಜಾಗವಾದರೆ ಎರಡಡಿ ಎತ್ತರ ಮಣ್ಣು ಪೇರಿಸಿ, ಸುತ್ತಲು ಕಲ್ಲು ಅಥವಾ ಇಟ್ಟಿಗೆಯ ಗೋಡೆ ಕಟ್ಟಿ’ – ಭಾಗ್ಯದೇವ್ ಸಲಹೆ. ನೆಲಕ್ಕೆ ಟೈಲ್ಸ್, ವಿದ್ಯುತ್ ಸರಬರಾಜಿಗೆ ವಯರಿಂಗ್ ಮೊದಲಾದ ಹೆಚ್ಚುವರಿ ಕೆಲಸಗಳು ಮನೆಯ ಯಜಮಾನನದ್ದು.
ಒಟ್ಟು ಭಾರ ಏಳೂವರೆ ಟನ್. ಎತ್ತರ ಎಂಟಡಿ. ಇತ್ತೀಚೆಗಂತೂ ಒಂಭತ್ತರಿಂದ ಹತ್ತೂವರೆ ಅಡಿ ಎತ್ತರಕ್ಕೂ ಏರಿಸಿದ್ದಾರೆ. ಗಾಳಿ-ಮಳೆಗೆ ಅಂಜಬೇಕಿಲ್ಲ. ಬೇಸಿಗೆಯಲ್ಲಿ ಶೀಟ್ಸೂರಿನಡಿ ಸೆಕೆ ಸಹಜ. ಸಾಕಷ್ಟು ಗಾಳಿ-ಬೆಳಕು ಬರುವುದರಿಂದ ಸುಧಾರಿಸಬಹುದು. ಮುಂದೆ ಹಂಚು/ಸ್ಲಾಬ್ ಹೊದಿಸುವ ಕುರಿತು ಆಲೋಚಿಸುತ್ತಿದ್ದಾರೆ.
ಇಂಜಿನಿಯರ್ ಭಾಗ್ಯದೇವ್ ಮನೆ ತಯಾರಿಯ ಹಿಂದೆ ಓಡಾಡಿದ್ದಾರೆ, ನಿದ್ದೆಗೆಟ್ಟಿದ್ದಾರೆ. ಅನುಭವಿಗಳೊಂದಿಗೆ ಸಲಹೆ ಪಡೆದಿದ್ದಾರೆ. ಕೂಡಿಸಿ-ಭಾಗಿಸಿ ನಕ್ಷೆತಯಾರಿಸಿ ‘ಕಡಿಮೆ ವೆಚ್ಚದಲ್ಲಿ ಸಾಧ್ಯ’ ಎಂಬ ನಿಲುವಿಗೆ ಬಂದರು.
ಮನೆಯ ವೆಚ್ಚ ಎಷ್ಟು? ‘ಅದು ನಿಮ್ಮ ನಿಮ್ಮ ಶಕ್ತಿಗೆ ಹೊಂದಿಕೊಂಡು’ ಎಂದು ನಗುತ್ತಾರೆ. ಅಡಿಪಾಯ ಬಿಟ್ಟು – ಒಂದು ಕೋಣೆ (ಬೆಡ್ರೂಂ)ಯ ಮನೆಗೆ ನಲವತ್ತು ಸಾವಿರ ರೂಪಾಯಿ. ಎರಡು ಕೋಣೆಯದಕ್ಕೆ ಅರುವತ್ತೈದು ಸಾವಿರ, ಮೂರಕ್ಕೆ ಎಂಭತ್ತೇಳು ಸಾವಿರ. ಇತ್ತೀಚೆಗೆ ಉಡುಪಿಯಲ್ಲಿ ಹತ್ತೂವರೆ ಅಡಿ ಎತ್ತರದ ಮನೆ ತಯಾರಿಸಿದ್ದಾರೆ. ಇದರಲ್ಲಿ ಕಾಲು ನಿಲ್ಲಿಸಲೂ ಸಹ ಜಾಗವಿದೆ. ‘ಒಂದು ಲಕ್ಷದ ಹತ್ತು ಸಾವಿರ ವೆಚ್ಚವಾಗಿದೆಯಂತೆ.’
ರಾಜಧಾನಿಯ ಜೆ.ಪಿ.ನಗರದಲ್ಲಿ ‘ಗ್ರಾಮೀಣ ಕೂಟ ಬ್ಯಾಂಕ್’ ಕಟ್ಟಡ ಇವರದ್ದೇ ತಯಾರಿ. ಇಪ್ಪತ್ತೈದು ಸಿಬ್ಬಂದಿಗಳಿದ್ದಾರೆ.
ಮಂಡ್ಯ, ಮೈಸೂರು, ಹೈದರಾಬಾದ್..ಗಳಲ್ಲಿ ಸೂರು ತಲೆಯೆತ್ತಿದೆ. ಬಹುತೇಕ ವಾಸಕ್ಕೆ ಇಷ್ಟಪಟ್ಟಿದ್ದಾರೆ. ಎಪ್ಪತ್ತಕ್ಕೂ ಮಿಕ್ಕಿ ಮನೆಗಳು ಸಿದ್ಧವಾಗಿವೆ. ಇನ್ನಷ್ಟು ಕೈಯೊಳಗೆ ಇವೆ. ‘ಈಗಾಗಲೇ ನೀವು ಮನೆ ಕಟ್ಟಿಸಿದ್ದಲ್ಲಿ, ತಾರಸಿ ಮೇಲೂ ಕೊಡುತ್ತೇವೆ’ ಎನ್ನುತ್ತಾರೆ ಭಾಗ್ಯ. ಶೇ.75 ಮುಂಗಡ. ಮುಂಚಿತ ಮಾತುಕತೆ. ನೇರ ವ್ಯವಹಾರ.
ತೋಟದ ಮನೆ, ಕಾವಲು ಮನೆ, ಅತಿಥಿಗೃಹ, ಚಿಕ್ಕ ಕಚೇರಿ, ಕಟ್ಟಡಗಳ ಕಾಮಗಾರಿ ನಡೆವಲ್ಲಿ ವಸತಿ, ತೋಟದ ಮನೆ….. ತೋಟದಲ್ಲೋ, ಎಸ್ಟೇಟ್ನಲ್ಲೋ ಮನೆ ಕಟ್ಟುವಾಗ ಸುತ್ತಲಿದ್ದ ಮರಗಳನ್ನು ಕತ್ತರಿಸಬೇಕಾಗಿಲ್ಲ. ಒಂದೇ ಕಡೆ ವಾಸ್ತವ್ಯವಿದ್ದ್ದು, ‘ಬೋರ್’ ಆಯಿತೆನ್ನಿ. ಅಲ್ಲಿಂದ ಕಳಚಿ ಬೇರೆಡೆ ಒಯ್ಯಬಹುದು. ಹೊಸ ವಿನ್ಯಾಸದ ಬೇಡಿಕೆ ಮುಂದಿಟ್ಟಲ್ಲಿ, ವಾಸ್ತು ವಿನ್ಯಾಸವನ್ನು ರೂಪಿಸಿಕೊಟ್ಟಲ್ಲಿ ಅದರಂತೆ ಮನೆಯನ್ನು ವಿನ್ಯಾಸಿಸುತ್ತಾರೆ. ‘ಹವಾನಿಯಂತ್ರಿತ’ ವ್ಯವಸ್ಥೆಯನ್ನೂ ಜೋಡಿಸಬಹುದು. ವೆಚ್ಚ ಮಾತ್ರ ಹೆಚ್ಚುವರಿ.
ಎಷ್ಟೋ ಕಡೆ ‘ವಾಸ್ತು’ವಿಗಾಗಿ ಕಿಟಕಿ-ಬಾಗಿಲುಗಳನ್ನು ಆಗಾಗ್ಗೆ ಬದಲಿಸುತ್ತಾರೆ. ಇದಕ್ಕಾಗಿಯೇ ಕೆಲವು ‘ವಿಶೇಷ ವಾಸ್ತು ತಜ್ಞ’ರಿದ್ದಾರೆ! ಭಾಗ್ಯದೇವ್ ಮಾದರಿಯ ಮನೆಯಲ್ಲಿ ಎಲ್ಲಿ ಬೇಕಾದರೂ ಕಳಚಿ ಜೋಡಿಸಬಹುದು. ನಿರ್ವಹಣೆ ಕಡಿಮೆ. ‘ಕಿಟಕಿಯ ಸರಳುಗಳಿಗೆ ಎರಡು ವರುಷಕ್ಕೊಮ್ಮೆ ಬಣ್ಣ ಬಳಿಯಿರಿ. ಶೀಟಿನಲ್ಲಿ ಎಲ್ಲಾದರೂ ಅಪರೂಪಕ್ಕೆ ಒಡಕು ಬಂದರೆ ಮನೆಯವರೇ ಸರಿಪಡಿಸಿಕೊಳ್ಳಬಹುದು.’ ಎನ್ನುತ್ತಾರೆ.
‘ಇದು ಸುಲಭ ವ್ಯವಸ್ಥೆ. ಟೆನ್ಶನ್ ಇಲ್ಲ. ವರ್ಷಗಟ್ಟಲೆ ಕಾಯಬೇಕಾಗಿಲ್ಲ. ಮನೆಕಟ್ಟುವ ಮೊದಲೇ ಗೃಹಪ್ರವೇಶಕ್ಕೆ ಆಮಂತ್ರಣ ಅಚ್ಚು ಹಾಕಿಸಬಹುದು’ ಎನ್ನುತ್ತಾರೆ ಕೊಪ್ಪದ ವಸಂತಕುಮಾರ್.
ಭಾಗ್ಯದೇವ್ ಅವರ ‘ಮೊಬೈಲ್ ಮನೆ’ ಕಲ್ಪನೆಗಿಂತ ಮುಂಚೆ ‘ಸಿದ್ಧ ಸ್ನಾನಗೃಹ ಮತ್ತು ಶೌಚಾಲಯ’ ಕೈಹಿಡಿದಿತ್ತು. ಶೌಚಗೃಹ – ಏಳಡಿ ಎತ್ತರ, ಮೂರಡಿ ಅಗಲ, ಮೂರೂವರೆ ಅಡಿ ಉದ್ದ. ಸ್ನಾನಗೃಹವಾದರೆ ಮೂರೂವರೆ ಅಡಿ ಉದ್ದಗಲ. ಎರಡಕ್ಕೂ ಎಂಟೂವರೆ ಸಾವಿರ ರೂಪಾಯಿ. ಶೌಚಾಲಯದ ಹೊಂಡ ಮತ್ತು ಮುಚ್ಚಿಗೆ ವೆಚ್ಚ ಇದರಲ್ಲಿ ಸೇರಿಲ್ಲ. ಈಗಾಗಲೇ ಬಾಳೆಹೊನ್ನೂರು ಸುತ್ತಮುತ್ತ ಇನ್ನೂರಕ್ಕೂ ಮಿಕ್ಕಿ ಶೌಚಾಲಯ ವಿತರಿಸಿದ್ದಾರೆ. ಕಾಫಿ ಎಸ್ಟೇಟ್ಗಳಲ್ಲಿ ಮನೆಗಳಿಗೆ ಹೆಚ್ಚು ಬೇಡಿಕೆ.
ಈಗ ಮತ್ತೊಂದು ಸೇರ್ಪಡೆ. ಸ್ನಾನ-ಶೌಚ (ಅಟಾಚ್) ಜತೆಗಿದ್ದ ಮನೆಯ ನಕ್ಷೆಯಿದೆ. ಆರಡಿ ಉದ್ದಗಲ. ಹದಿನಾಲ್ಕು ಸಾವಿರ ಐನೂರು ರೂಪಾಯಿ ಮಾತ್ರ.
ಸೀಗೋಡ್ ಪ್ಲಾಂಟೇಶನ್ನ ಲಿಯೋ ವಿಲ್ಸನ್ ಲೋಬೋ ಹೇಳುತ್ತಾರೆ – ಭಾಗ್ಯದೇವ್ ಮಾದರಿಯ ಇಪ್ಪತ್ತಕ್ಕೂ ಮಿಕ್ಕಿ ಶೌಚಾಲಯ ಮತ್ತು ಸ್ನಾನಗೃಹ ನಮ್ಮಲ್ಲಿದೆ. ನಾವೇ ತಯಾರಿಸಿದರೆ ವೆಚ್ಚ ಅಧಿಕ. ಕಚ್ಚಾ ವಸ್ತುಗಳ ಅಲಭ್ಯತೆ ದೊಡ್ಡ ತಲೆನೋವು. ಕೆಲಸದವರ ಅಭಾವ ಮತ್ತೊಂದೆಡೆ. ಇದಕ್ಕೆಲ್ಲಾ ಪರಿಹಾರ ಈ ಸುಲಭ ವ್ಯವಸ್ಥೆ.’
‘ಶೌಚಾಲಯ ಮಾಡಿದಾಗ ಮೊದಲು ಗೇಲಿ ಮಾಡಿದ್ದರು. ಅಪಪ್ರಚಾರ ಮಾಡಿದರು. ಗುಣಮಟ್ಟದ ಬಗ್ಗೆ ಸಂಶಯ ವ್ಯಕ್ತಪಡಿಸಿದರು. ಕೊನೆಗೆ ಅವರೇ ಆರ್ಡರ್ ಮಾಡಿದರು! ಇವರ ಮನೆಯ ಅಂಗಳದಂಚಿನಲ್ಲಿ ಅತಿಥಿ ಗೃಹವಿದೆ. ಬಂದವರಿಗೆ ಇಲ್ಲೇ ಅತಿಥಿ ಸತ್ಕಾರ, ವಸತಿ. ಜೊತೆಗೆ ಡೆಮೋ!
ಇಷ್ಟು ಕಡಿಮೆ ವೆಚ್ಚದ ಮನೆಯ ಗುಣಮಟ್ಟ? ‘ಉತ್ತಮ ಗುಣಮಟ್ಟದ ಕಚ್ಚಾವಸ್ತು ಬಳಸುತ್ತೇವೆ. ಗುಣಮಟ್ಟದಲ್ಲಿ ರಾಜಿಯಿಲ್ಲ. ಸಿಮೆಂಟಿನ ಆಯುಷ್ಯ ಎಷ್ಟಿದೆಯೋ, ಅಷ್ಟು ಆಯುಸ್ಸು, ಬಾಳ್ವಿಕೆ’ ಎನ್ನುತ್ತಾರೆ.
ಕೆ.ಎ.ಭಾಗ್ಯದೇವ್, ‘ಉನ್ನತಿ’, ಅಂಚೆ : ಕಡಬಗೆರೆ, ಸಂಗಮೇಶ್ವರಪೇಟೆ, ಚಿಕ್ಕಮಗಳೂರು ಜಿಲ್ಲೆ – 577 136,
ದೂರವಾಣಿ : 08262-252222, 9449826085

‍ಲೇಖಕರು avadhi

April 8, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿರುತ್ತರದ ಉತ್ತರ, ರಾಜೇಶ್ವರಿ ತೇಜಸ್ವಿ

ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ...

ಅಂಬೇಡ್ಕರ್ ಇಲ್ಲಿದ್ದಾರೆ..

ಅಂಬೇಡ್ಕರ್ ಅವರ ಬರಹಗಳ ಎಲ್ಲಾ ಸಂಪುಟವನ್ನು ಉಚಿತವಾಗಿ ಕನಡದ ಓದುಗರಿಗೆ ಸಿಗಲಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈಗಾಗಲೇ ೫ ಸಂಪುಟಗಳನ್ನು...

’ಧರ್ಮ ನಿರಪೇಕ್ಷತೆ, ಕೋಮುವಾದ ಮತ್ತು ನಮ್ಮೆದುರಿನ ಸವಾಲುಗಳು’ – ಶಶಿಧರ ಭಟ್

ಶಶಿಧರ ಭಟ್ ಕುಮ್ರಿ ಧರ್ಮ ನಿರಪೇಕ್ಷತೆ ಮತ್ತು ಕೋಮುವಾದ ಎಂಬ ಶಬ್ದ ನನ್ನ ಕಿವಿಗೆ ಬಿದ್ದುದು ಯಾವಾಗ ಎಂಬ ಪ್ರಶ್ನೆಗೆ ನನ್ನ ಬಳಿ ಸರಳ...

5 ಪ್ರತಿಕ್ರಿಯೆಗಳು

 1. Paraanjape

  ಅತ್ಯುಪಯುಕ್ತ ಮಾಹಿತಿಗೆ ಧನ್ಯವಾದ

  ಪ್ರತಿಕ್ರಿಯೆ
 2. ಟೀನಾ

  ಅಲಲಾ!! ಎಂಥ ಮಾಹಿತಿ ಕೊಟ್ಟಿದೀರಿ ಇಂಥ ರಿಸೆಶನ್ ದಿನಗಳಲ್ಲಿ.
  ಕ್ರಾಂತಿ ಅಂದರೆ ಇದು ಸ್ವಾಮಿ!! ಅವರಪ್ಪ ಅಮ್ಮ ಭಾಗ್ಯದೇವಾಂತ ಸರಿಯಾದ ಹೆಸ್ರಿಟ್ಟಾರೆ.
  ನನ್ನಂಥವರು ಇನ್ನು ಸೊಲುಪ ನೆಮ್ಮದಿಯಾಗಿ ನಿದ್ರೆ ಮಾಡಬಹುದು.
  ಭಾಗ್ಯದೇವ್ ಅವರ ಅಡ್ರೆಸನ್ನ ಭದ್ರವಾಗಿಟ್ಟುಕೊಂಡಿದೇನೆ.
  ಇಂಥೊರ್ಗೆಲ್ಲ ನಮ್ಮ ಸರಕಾರ ಪ್ರಶಸ್ತಿ, ಗೌರವ, ಸಹಾಯ ಕೊಡೋದು ಬಿಟ್ಟು,
  ರಾಂಪಿನ ಮೇಲೆ ಶೋಕಿ ಮಾಡಿಕೊಂತ ಬಟ್ಟೆ ಜೊತೆ ಬಿಚ್ಚಾಟ ಆಡೋ
  ಅಕ್ಷಯ್ ಕುಮಾರಂಗೆ ಕರೆದು ಪದ್ಮಶ್ರೀ ಕೊಡೋದು ಏನು ವಿಚಿತ್ರ!!

  ಪ್ರತಿಕ್ರಿಯೆ
 3. ಡಿ,ಎಸ್.ರಾಮಸ್ವಾಮಿ

  ಅರೆ, ಆಶ್ಚರ್ಯ! ವೆಚ್ಚವೂ ಕಡಿಮೆ ಜೊತೆಗೆ ಟೆನ್ಷನ್ ಇಲ್ಲದ ಸುಲಭೋಪಾಯ. ಭಾಗ್ಯದೇವ್ ನಿಜಕ್ಕೂ ಮಧ್ಯಮವರ್ಗದವರ ಭಾಗ್ಯದೇವತೆಯೇ ಸರಿ. ಅಭಿನಂದನೆ

  ಪ್ರತಿಕ್ರಿಯೆ
 4. rj

  ಒಳ್ಳೆಯದೇ..ಆದರೆ ನನ್ನ ಫ್ರೆಂಡ್ ಒಬ್ಬ ಇಂಥದೇ ಮನೆಯನ್ನ ಇವರ ಹತ್ತಿರವೇ ಕಟ್ಟಿಸಿದ್ದಾರೆ.ಬಹುಶಃ ಅದು ಅವರ ಫಸ್ಟ್ ಆರ್ಡರ್ ಇದ್ದರೂ ಇರಬಹುದು..ನನ್ನ ಫ್ರೆಂಡ್ ಗೆ ಮನೆಯ ಗುಣಮಟ್ಟ ಖುಶಿ ನೀಡಿಲ್ಲ.ನನಗೂ ಅಷ್ಟೇ,ಯಾಕೆಂದರೆ ನಾನೂ ಕೂಡ ಆ ಮನೆಯಲ್ಲಿ ಇದ್ದು ಬಂದಿದ್ದೇನೆ..ಸ್ವಲ್ಪ ಜಾಸ್ತಿ ಖರ್ಚಾದರೂ ಚಿಂತೆಯಿಲ್ಲ,ಸರಿಯಾದ ರೀತಿಯಲ್ಲೇ ಮನೆ ಕಟ್ಟಿ ಅನ್ನೋದು ನನ್ನ ಹಾಗೂ ನನ್ನ ಫ್ರೆಂಡ್ ನ ಅನುಭವ..

  ಪ್ರತಿಕ್ರಿಯೆ
 5. Ravishankara

  ತು೦ಬಾ ಕೂತೂಹಲಕಾರಿ ಲೇಖನ ನೀಡಿದ ಪೇರಾಜೆಯವರಿಗೆ ನಮನಗಳು. ಜಗವಿದು ಜಾಣರ ಸ೦ತೆ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: