ಲಾಲಾ ರುಖಳ ಪ್ರೇಮಗಾಥೆ

lalarukha.jpg

ಟೀನಾ

‘ಹಸನ್ ಅಬ್ದಾಲ್’ ಎನ್ನುವುದು ಪಾಕಿಸ್ತಾನದ ಉತ್ತರ ಪಂಜಾಬ್ ಪ್ರಾಂತ್ಯದ ಒಂದು ಮುಖ್ಯ ಐತಿಹಾಸಿಕ ತಾಣ. ಶೇರ್ ಶಾ ಸೂರಿ ನಿರ್ಮಿಸಿದ ಗ್ರಾಂಡ್ ಟ್ರಂಕ್ ರಸ್ತೆಯು ಕರಾಕೊರಂ ಹೈವೇಯನ್ನು ಸೇರುವ ಪ್ರದೇಶದಲ್ಲಿರುವ ಈ ಜಾಗ ತನ್ನ ‘ಶ್ರೀ ಪಂಜಾ ಸಾಹಿಬ್’ ಗುರುದ್ವಾರಾದಿಂದ ಪ್ರಸಿದ್ಧಿ ಪಡೆದಿದೆ. ಸಿಖ್ ಧರ್ಮದ ಪ್ರಮುಖ ತೀರ್ಥಸ್ಥಾನವಾದ ಇಲ್ಲಿಗೆ ಬೈಸಾಖಿ ಹಬ್ಬದ ಸಮಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಿಖ್ಖರು ಭೇಟಿನೀಡುತ್ತಾರೆ. ಅಲ್ಲಿಯ ಬೆಟ್ಟವೊಂದರ ಮೇಲೆ ವಾಸಿಸುತ್ತಿದ್ದ ‘ಬಾಬಾ ವಲಿ ಕಾಂಧಾರಿ’ ಎಂದು ಹೆಸರುಪಡೆದಿದ್ದ 15ನೇ ಶತಮಾನದ ಬಾಬಾ ಹಸನ್ ಅಬ್ದಾಲ್ ಎಂಬ ಸೂಫೀ ಸಂತರ ಹೆಸರೇ ಈ ಊರಿಗೆ ಅಂಟಿಕೊಂಡಿತು. 

ನನ್ನನ್ನು ಈ ಊರಿಗೆ ಆಕರ್ಷಿಸಲು ಕಾರಣವೇ ಬೇರೆ. ಬಾಬಾ ಅಬ್ದಾಲ್ ವಾಸಿಸುತ್ತ ಇದ್ದ ಬೆಟ್ಟದ ಬಳಿಯಲ್ಲೆ ಒಂದು ಉದ್ಯಾನವನ. ಅಲ್ಲಿ ಒಂದು ಸಮಾಧಿ. ಸಮಾಧಿಯ ಎದುರಿಗೆ ದೈತ್ಯ ಮಾಹಶೀರ್ ಮೀನುಗಳ ಕೊಳ. ಈ ಸಮಾಧಿ ಲಾಲಾ ರುಖಳದ್ದು ಎಂದು ಪ್ರತೀತಿ. ಆದರೆ ಇತಿಹಾಸ ಬಲ್ಲವರು ಮಾತ್ರ ಈ ಜಾಗದಲ್ಲಿ ಲಾಲಾ ರುಖಳ ಸಮಾಧಿ ಇರಲು ಸಾಧ್ಯವೇ ಇಲ್ಲ, ಯಾರೋ ಸುಮ್ಮನೆ ಮಾಡಿರುವ ಕೆಲಸ ಇದು ಎಂದು ವಾದಿಸುತ್ತಾರೆ. ಯಾರೂ ಸಮಾಧಿಯನ್ನು ಇಂದಿನವರೆಗೆ ಪರೀಕ್ಷಿಸಿಲ್ಲ. ಚಕ್ರವರ್ತಿ ಅಕ್ಬರನ ಮಂತ್ರಿಯೊಬ್ಬ ಈ ಸಮಾಧಿ ಹಾಗೂ ಕೊಳವನ್ನು ಕಟ್ಟಿಸಿದ ಎನ್ನುತ್ತಾರೆ. ಹಾಗಿದ್ದರೆ ಎಲ್ಲಿದೆ ಲಾಲಾ ರುಖಳ ನಿಜವಾದ ಸಮಾಧಿ? ಯಾರೀ ಲಾಲಾ ರುಖ್?

ಲಾಲಾ ರುಖಳ ಬಗ್ಗೆ ಮೊದಲಬಾರಿಗೆ ನಾನು ಕೇಳಿದ್ದು ಔರಂಗಜೇಬನ ಬಗ್ಗೆ ಓದುವಾಗ. ಲಾಲಾ ರುಖ್ ಆತನ ಮಗಳು. ಅಸಾಧಾರಣ ರೂಪವಂತೆ, ಗುಣವಂತೆ. ಸ್ವಭಾವತಃ ದಿಟ್ಟೆ. ಪ್ರಚಲಿತ ಕಥೆಗಳ ಪ್ರಕಾರ ಈಕೆ ‘ಬ್ಯಾಕ್ಟ್ರಿಯ’ದ (ಬುಖಾರಿಯ, ಈಗಿನ ಬುಖಾರಾ, ಉಜ್ಬೆಕಿಸ್ತಾನ) ರಾಜನನ್ನು ವರಿಸುವವಳಿದ್ದಳು. ಕೆಲವರು ಆಕೆಯ ವಿವಾಹ ನಿಶ್ಚಯವಾಗಿದ್ದು ಕಾಶ್ಮೀರದ ರಾಜನೊಡನೆ ಎನ್ನುತ್ತಾರೆ. ಕೆಲವರು ಬ್ಯಾಕ್ಟ್ರಿಯ ರಾಜ್ಯದ ಪ್ರದೇಶವ್ಯಾಪ್ತಿಯಲ್ಲಿಯೇ ಕಾಶ್ಮೀರವೂ ಇದ್ದದ್ದು ಎನ್ನುತ್ತಾರೆ. ಕಾಶ್ಮೀರೀ ಸಾಹಿತ್ಯದಲ್ಲಿ ‘ಲಾಲಾ ರುಖ್’ ಎಂಬ ಕವಯಿತ್ರಿಯ ಅದ್ಭುತ ಕವಿತೆಗಳು ಇಂದಿಗೂ ಮನೆಮಾತಾಗಿವೆ. ಕಾಶ್ಮೀರದಲ್ಲಿ ‘ಲಾಲಾ ರುಖ್’ ಪರಿಚಿತ ಹೆಸರು.  ಈಕೆ ಮದುವೆಗೆ ಮುಂಚೆ ತಾನು ವರಿಸುವವನನ್ನು ಭೇಟಿಯಾಗಲು ಅಪೇಕ್ಷೆಪಟ್ಟು ಆತನ ರಾಜ್ಯಕ್ಕೆ ಪ್ರಯಾಣ ಹೊರಟಳು. ದಾರಿಯಲ್ಲಿ ’ಫೆರಾಮೊಝ್’ಎಂಬ ಹೆಸರಿನ ಯುವಕ ಭೇಟಿಯಾದ. ಆತನೋ ಹೇಳಿಕೇಳಿ ಒಬ್ಬ ಅಪೂರ್ವ ಕವಿ. ಲಾಲಾ ರುಖಳಿಗೂ ಅಪಾರ ಸಾಹಿತ್ಯಾಸಕ್ತಿ. ಆತ ರಾಜಕುಮಾರಿಗಾಗಿ ಕಥೆಗಳನ್ನು ಕವಿತೆಗಳನ್ನಾಗಿಸಿ ಹಾಡಿದ. ಆಕೆ ಮನಸೋತು ತನ್ನ ಹೃದಯವನ್ನು ಆತನಿಗೆ ಒಪ್ಪಿಸಿದಳು. ಆದರೇನು? ಬ್ಯಾಕ್ಟ್ರಿಯದ ರಾಜನ ಅಂತಃಪುರ ಆಕೆಯ ಬರವನ್ನೇ ಕಾದಿತ್ತು. ಈಕೆಗೆ ಇಕ್ಕಟ್ಟು. ಫೆರಾಮೊಝ್ ಆಕೆಗೆ ವಿದಾಯ ಹೇಳಿದ. ಆಕೆ ಅರಮನೆ ಪ್ರವೇಶಿಸಿದ ಕೂಡಲೆ ವಿರಹವೇದನೆ ತಾಳಲಾರದೆ ಮೂರ್ಛೆಹೋದಳು. ಯಾವುದೋ ಪರಿಚಿತ ಸ್ವರವೊಂದು ಕರೆವ ದನಿಗೆ ಎಚ್ಚರವಾಯಿತು. ಕಣ್ತೆರೆದರೆ ಫೆರಾಮೊಝನ ಪ್ರೀತಿ ತುಂಬಿದ ನಗುಮುಖ. ಫೆರಾಮೊಝ್ ಬೇರಾರೂ ಅಲ್ಲ, ತಾನು ವರಿಸಬೇಕಾದ ಬ್ಯಾಕ್ಟ್ರಿಯದ ರಾಜನೇ ಎಂದು ತಿಳಿದು ಲಾಲಾ ರುಖಳಿಗೆ ನಸುನಾಚಿಕೆ.

ಹಿಂದಿ ಫಿಲ್ಮೊಂದರ ಮೇಲಿನ ಕಥೆಯಂತಿದೆ ಅಲ್ಲವೆ? 1958ರಲ್ಲಿ ನಿರ್ಮಿಸಲಾದ ‘ಲಾಲಾ ರುಖ್’ ಎಂಬ ಚಲನಚಿತ್ರದಲ್ಲಿ ಸ್ವತಃ ಪೃಥ್ವೀರಾಜ್ ಕಪೂರರೇ ನಟಿಸಿದ್ದಾರೆ. ಐರಿಶ್ ಕವಿ ಥಾಮಸ್ ಮೂರ್ ಈ ಕಥೆಯ ಮೇಲೇ ಆಧರಿತವಾಗಿರುವ ‘ಲಲ್ಲಾ ರೂಖ್’ (1817) ಎಂಬ ಮಹಾಕವಿತೆಯನ್ನು ಬರೆದಿದ್ದಾನೆ. ಪ್ರಪಂಚದ ಎಲ್ಲಾ ಮುಖ್ಯ ಭಾಷೆಗಳಿಗೆ ಈ ಮಹಾಕವಿತೆ ಅನುವಾದಿಸಲ್ಪಟ್ಟಿದೆ. ಸಂಗೀತಜ್ನರು ಈ ಕಥೆಯ ಮೇಲೆ ಒಪೆರಾಗಳನ್ನು ರಚಿಸಿ ಪ್ರದರ್ಶಿಸಿದ್ದಾರೆ, ತನ್ನ ‘ರೊಮಾಂಟಿಕ್ ಓರಿಯೆಂಟಲಿಸ್ಟ್’ ಶೈಲಿಗೆ ಹೆಸರುವಾಸಿಯಾಗಿರುವ ಮೂರನ ‘ಲಲ್ಲಾ ರೂಖ್’ ನಾಲ್ಕು ಭಾಗಗಳಲ್ಲಿದೆ – ‘ದ ಸ್ಟೋರಿ ಆಫ್ ದಿ ವೆಯಿಲ್ಡ್ ಪ್ರೊಫೆಟ್ ಆಫ್ ಖೊರಾಸಾನ್’, ‘ದ ಸ್ಟೋರಿ ಆಫ್ ಪ್ಯಾರಾಡೈಸ್ ಅಂಡ್ ದ ಪೆರಿ’, ‘ದ ಸ್ಟೋರಿ ಆಫ್ ದ ಫೈರ್ ವರ್ಶಿಪರ್ಸ್’ ಹಾಗೂ ‘ದ ಸ್ಟೋರಿ ಆಫ್ ದ ಲೈಟ್ ಆಫ್ ದ ಹರಂ’. ಫೆರಾಮೊಝ್ ಲಾಲಾ ರುಖಳಿಗೆ ಹೇಳುವ ನಾಲ್ಕು ಕಥಾಕವಿತೆಗಳಿವು. ಇಲ್ಲಿಯ ‘ದ ಸ್ಟೋರಿ ಆಫ್ ದ ಫೈರ್ ವರ್ಶಿಪರ್ಸ್’ ಭಾಗದಲ್ಲಿ ಒಂದು ಪ್ರೇಮಕಥೆಯಿದೆ. ಪರ್ಶಿಯನ್ ಪಡೆಯ ನಾಯಕ ‘ಹಾಫೆದ’ನಿಗೆ ಮುಸ್ಲಿಮರ ಅಮೀರನೊಬ್ಬನ ಮಗಳಾದ ‘ಹಿಂದಾ’ಳ ಮೇಲೆ ಪ್ರೇಮ. ವಿಪರ್ಯಾಸವೆಂದರೆ ಅಗ್ನಿಯನ್ನು ಪೂಜಿಸುವ ಪರ್ಶಿಯನರಿಗೂ ಅವರನ್ನು ಆಳುವ ಮುಸ್ಲಿಮರಿಗೂ ಬದ್ಧದ್ವೇಷ.. ಈ ಭಾಗವು ಕೇವಲ ಪ್ರೇಮಕಥೆಯಾಗಿ ಉಳಿಯುವುದಿಲ್ಲ. ಐರ್ಲೆಂಡಿನ ಸ್ವತಂತ್ರ ನಿಲುವು ಹಾಗೂ ಅವರನ್ನಾಳುತ್ತಿದ್ದ ಇಂಗ್ಲೆಂಡಿನ ದಬ್ಬಾಳಿಕೆಯ ಸಂಕೇತವಾಗಿ ನಿಲ್ಲುತ್ತದೆ. ಈ ಕವಿತೆ ಶಾರ್ಲಟ್ ಬ್ರಾಂಟೆಯಂಥ ಉತ್ತಮ ಲೇಖಕಿಯ ಬರವಣಿಗೆಯ ಮೇಲೂ ತನ್ನ ಪ್ರಭಾವ ಬೀರಿತು.

ಲಾಲಾ ರುಖ್ ಬ್ಯಾಕ್ಟ್ರಿಯದ ರಾಜನನ್ನು ಮದುವೆಯಾಗಿದ್ದೇ ನಿಜವಾದರೆ ಅಕೆಯ ಸಮಾಧಿ ಎಲ್ಲಿದೆ? ಆಕೆಯ ಸಮಾಧಿಯ ಬಗ್ಗೆ ಗೊಂದಲವೇಕೆ? ಮೊಘಲ್ ವಂಶದ ಈ ರಾಜಕುಮಾರಿ ಎಲ್ಲಿ ಅಜ್ನಾತಳಾಗಿ ಪವಡಿಸಿದ್ದಾಳೆ? ಇತಿಹಾಸತಜ್ನರೇ ಸರಿಯಾದ ಪರೀಕ್ಷೆಗಳನ್ನು ನಡೆಸಿ ಉತ್ತರ ಹೇಳುವವರೆಗೂ ನಾವು ಕಾಯಬೇಕಿದೆ.

‍ಲೇಖಕರು avadhi

October 12, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಿನಿಮಾ ತಯಾರಿಯ ತಮಾಷೆಗಳು…

-ಕೃಷ್ಣ ಮಾಸಡಿ ನಾನು ಬಾಲ್ಯದಲ್ಲಿ ಹೊನ್ನಾಳಿ ಮತ್ತು ರಾಂಪುರ ಜಾತ್ರೆಯಲ್ಲಿ ಹಾಕುತ್ತಿದ್ದ ಟೂರಿಂಗ್ ಟಾಕೀಸುಗಳಲ್ಲಿ ನೆಲದಲ್ಲಿ ಹಾಗೂ ಆಗಾಗ...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: