ಲಿಪಿಯ ಬಗ್ಗೆ ಪ್ರಶ್ನೆಗಳು

ಈಕೆ ‘ಜಯನಗರದ ಹುಡುಗಿ’. ಹಾಗಂತ್ಲೆ ಫುಲ್ ಫೇಮಸ್ಸು. ಈಕೆ ಬರೆಯುತ್ತಿದ್ದ ‘ಜಯನಗರದ ಹುಡುಗಿ’ ಅಂಕಣ ಹಾಗೂ ಆನಂತರ ಅದೇ ಹೆಸರಲ್ಲಿ ಬಂದ ಪುಸ್ತಕದಿಂದಾಗಿ ಈಕೆ ಬಾರ್ಸಿಲೋನದಲ್ಲಿ ಇದ್ದರೂ, ಬೆಂಗಳೂರೆಂಬ ಮಾಯಾ ನಾಗರಿಯಲ್ಲಿದ್ದರೂ ಈಕೆ ‘ಜಯನಗರದ ಹುಡುಗಿ’ ಮಾತ್ರ. ಯಂತ್ರಗಳಿಗೆ ಮಾತು ಕಲಿಸುವ Artificial Intelligence ಕ್ಷೇತ್ರದ ಈ ಎಂಜಿನಿಯರ್ ತಂದೆ ಸುಧೀಂದ್ರ ಹಾಲ್ದೊಡ್ಡೇರಿ, ತಾತ, ಖ್ಯಾತ ಪತ್ರಕರ್ತ ಎಚ್ ಆರ್ ನಾಗೇಶರಾವ್ ಅವರಿಂದ ಪಡೆದದ್ದು ಬಹಳಷ್ಟು.

ಪ್ರಸ್ತುತ ಬಾರ್ಸಿಲೋನಾದಲ್ಲಿ ತಾವು ಕೆಲಸ ಮಾಡುತ್ತಿದ್ದ ಅವಧಿಯಲ್ಲಿ ಕಂಡ ನೋಟಗಳ ಚಿತ್ರಣ ಇಲ್ಲಿದೆ

|ಕಳೆದ ಸಂಚಿಕೆಯಿಂದ|

“ಲೈಬ್ರರಿಯಲ್ಲೇ ಅರ್ಧ ಆಯಸ್ಸು ಕಳಿಯುತ್ತೀನಿ” ಎಂದು ಹುಡುಗಿ ಬೈದುಕೊಂಡು ಎಲೆನಾಳ ಜೊತೆ ಬಂದಳು. ಅವಳ ಜೀವನದಲ್ಲೇ ಇಷ್ಟು ಬಾರಿ ಲೈಬ್ರರಿಗೆ ಹೋಗಿದ್ದಿಲ್ಲ ಎಂದು ಅಂದುಕೊಂಡೇ ಇದ್ದಳು. ಹುಡುಗಿ ಮತ್ತು ಎಲೆನಾ ಬಹಳ ಆಪ್ತ ಗೆಳತಿಯರಾಗಿದ್ದರು. ಕತಲಾನ್ ಪ್ರೇಮ ಅವರನ್ನು ಇನ್ನೂ ಹತ್ತಿರವಾಗಿಸಿತ್ತು. ಹುಡುಗಿಗೆ ರಾಜಕೀಯ ಎಂದರೆ ಮಾರು ದೂರ ಓಡುತ್ತಿದ್ದಳು. ಆದರೆ ಎಲೆನಾಳ ಸಂಗ ಅವಳನ್ನ ಪೊಲಿಟಿಕಲ್ ಸ್ಟಾಂಡ್ಸ್ ತೆಗೆದುಕೊಳ್ಳೋದಕ್ಕೆ ಬಹಳ ಸಹಾಯ ಮಾಡಿತು.

“ಯಾವುದೇ ಮನುಷ್ಯನು ಎಪೊಲಿಟಿಕಲ್ ಆಗಿರೋದಕ್ಕೆ ಸಾಧ್ಯವಿಲ್ಲ” ಎಂದು ಎಲೆನಾ ದಿಟ್ಟವಾಗಿ ಹೇಳುತ್ತಿದ್ದಳು. “ಒಬ್ಬ ಮನುಷ್ಯ ಓಟು ಹಾಕಿದಾಗಲೇ ಅವನ ಪೊಲಿಟಕಲ್ ಇನ್ಕ್ಲಿನೇಷನ್ ಗೊತ್ತಾಗೋದು. ಸೋ ಪ್ರತಿಯೊಬ್ಬನ್ನೂ ಪೊಲಿಟಿಕಲಿ ಇನ್ಕ್ಲೈನ್ ಆಗಿರುತ್ತಾನೆ ಅದನ್ನ ಒಪ್ಪಬೇಕು ಅದನ್ನ ಬಿಟ್ಟು ನನಗೂ ರಾಜಕೀಯಕ್ಕೂ ಸಂಬಂಧವೇ ಇಲ್ಲ ಅನ್ನೋದು ಸುಳ್ಳು, ಅದನ್ನ ವ್ಯಕ್ತ ಪಡಿಸದೇ ಇರುವ ಸ್ವಾತಂತ್ರ್ಯ ಇರುತ್ತದೆ ಆದರೆ ಅದಕ್ಕೆ ಸಂಬಂಧವೇ ಇಲ್ಲ ಅನ್ನೋದು ಅಸತ್ಯ” ಎಂದು ಹಲವಾರು ವೇದಿಕೆಗಳಲ್ಲಿ ಮಾತಾಡಿದ್ದಳು.

ಇದನ್ನ ಹುಡುಗಿಗೂ ಹೇಳುತ್ತಿದ್ದಳು. “ನೀವು ಭಾರತದಲ್ಲಿ ಸೈನ್ಸ್ ಓದಿದವರು ಸುಮ್ಮನಾಗಿ ಬಿಡುತ್ತೀರ ನಿಮಗೂ ದೇಶಕ್ಕೂ ಸಂಬಂಧವೇ ಇಲ್ಲ ಅನ್ನೋ ಹಾಗೆ ಡಿಸೆಂಟನ್ನ ವ್ಯಕ್ತ ಪಡಿಸೋದಿಲ್ಲ, ಅವನೆಲ್ಲಾ ಆರ್ಟ್ಸ್ ಓದಿದವರಿಗೆ ಗುತ್ತಿಗೆ ಕೊಟ್ಟು ಬಿಡುತ್ತೀರ, ಯಾಕೆ ? ನಿಮ್ಮ ಓದು ನಿಮ್ಮ ಪೊಲಿಟಿಕಲ್ ಇನ್ಕ್ಲಿನೇಷನ್ನಿಗೂ ಏನು ಸಂಬಂಧ, ಹೇಳಿ?” ಎಂದು ಆಗಾಗ ಚುಚ್ಚುತಲೇ ಇದ್ದಳು.

ಎಲೆನಾ ಬೆಳೆದು ಬಂದ ಮನೆಯಲ್ಲಿ ಅವರ ಮನೆಯ ಡೈನಿಂಗ್ ಟೇಬಲ್ಲಿನ ಮೇಲೆ ರಾಜಕೀಯ ಮಾತಾಡೋದು ಬಹಳ ಮುಖ್ಯವಾಗಿತ್ತು. ಕತಲಾನ್ ಸ್ವಾತಂತ್ರ್ಯಕ್ಕೆ ಮೂರು ತಲೆಮಾರಿನ ಕೊಡುಗೆ ಇದ್ದಿದ್ದರಿಂದ ಯಾರಿಗೆ ಮತ ಚಲಾಯಿಸಬೇಕು ಎಂಬುದನ್ನೆಲ್ಲಾ ಅವರು ಚರ್ಚೆ ಮಾಡುತ್ತಿದ್ದರು. ವಿಶ್ವವಿದ್ಯಾಲಯದಲ್ಲೂ ಎಲೆನಾ ಲ್ಯಾಬಿನಲ್ಲಿ ಜಗತ್ತಿನ ಪೊಲಿಟಿಕ್ಸ್ ಬಗ್ಗೆ ಗಾಢವಾಗಿಯೇ ಚರ್ಚೆ ಮಾಡುತ್ತಿದ್ದಳು.

ಅವಳಿಗೆ ರಷ್ಯಾದ ರಾಜಕೀಯ, ರೊಮೇನಿಯಾದ ಗಲಾಟೆ, ತೈವಾನಿನ ರೆವಲ್ಯೂಷನ್ನಿನ ಬಗ್ಗೆ ಅಪಾರ ಆಸಕ್ತಿ ಇತ್ತು. ಆಗಾಗ ಭಾರತದ ಸ್ವಾತಂತ್ರ್ಯ ಹೋರಾಟದ ಬಗ್ಗೆಯೂ ಹೇಳುತ್ತಿದ್ದಳು. ಸುಭಾಷ್ ಚಂದ್ರ ಬೋಸ್ ಬಗ್ಗೆ ಅವಳಿಗೆ ಬಹಳ ಆಸಕ್ತಿ ಇತ್ತು. ಅವರು ಸೇನೆ ಕಟ್ಟಿದ್ದರ ಬಗ್ಗೆ ಕತಲಾನಿನಲ್ಲಿ ಪುಸ್ತಕ ಬರೆಯುವ ಆಲೋಚನೆಯಲ್ಲೂ ಇದ್ದಳು.

ಇದೇ ವಿಶ್ವವಿದ್ಯಾಲಯದ ಪೊಲಿಟಿಕಲ್ ಸೈನ್ಸ್ ವಿಭಾಗ ಯಾವಾಗಲೂ ಗಿಜಿಗುಟ್ಟುತ್ತಿತ್ತು. ಎಲೆನಾಳಿಗೆ ಎಲ್ಲರೂ ಗೊತ್ತು. ಹುಡುಗಿ ಮತ್ತು ಅವಳು ಓದುತ್ತಿದ್ದ ಏ ಐ ವಿಭಾಗಕ್ಕಿಂತ ಎಲೆನಾ ಜಾಸ್ತಿ ಅಲ್ಲೇ ಇರುತ್ತಿದ್ದಳು. ಅಲ್ಲಿದ್ದ ಕೆಲವರು ಜೈಲಿಗೆ ಸಹ ಹೋಗಿ ಬಂದಿದ್ದರು. ಹುಡುಗಿಗೆ ಇದು ಗಾಂಧಿ ಸಿನಿಮಾದ ಹಾಗೆ ಅನ್ನಿಸುತ್ತಿತ್ತು. “ಸೈಮನ್ ಗೋ ಬ್ಯಾಕ್” ಎಂದು ಆಗುತ್ತಿದ್ದ ಚಳುವಳಿಯ ಹಾಗೆ ಇಲ್ಲೂ ಇವರಿಗೆ ಸ್ವಾತಂತ್ರ್ಯ ಕೊಡಬೇಕಾ ಬೇಡ್ವಾ ಎಂಬ ಸಮಿತಿಯನ್ನು ಗಲಾಟೆ ಮಾಡಿ ಹೊರದಬ್ಬಿದ್ದರು. ಇವೆಲ್ಲವೂ ಇಲ್ಲಿ ನಡೆದಿತ್ತು. ಅದನ್ನು ಹುಡುಗಿಗೆ ಹಂತಹಂತವಾಗಿ ವಿಷಯ ತಿಳಿಸುತ್ತಿದ್ದರು.

ಒಂದಷ್ಟು ಪಾಲಿಸಿಗಳನ್ನ ಡ್ರಾಫ್ಟ್ ಮಾಡುವ ಪಾಲಿಸಿ ಮೇಕರ್ಸುಗಳು ಈ ಡಿಪಾರ್ಟ್ಮೆಂಟಿನಲ್ಲಿ ಪಾಠ ಮಾಡುತ್ತಿದ್ದರು. ಇವೆಲ್ಲವೂ ಹೋರಾಟಗಳನ್ನು ಇನ್ನೂ ವ್ಯವಸ್ಥಿತವಾಗಿ ನಡೆಸಲು ಅನುಕೂಲವಾಗುತ್ತಿತ್ತು. ಇಲ್ಲೂ ಗಾಂಧಿ, ನೆಹರು, ಬೋಸ್, ಭಗತ್ ಸಿಂಗ್, ಅವರೆಲ್ಲರ ವಿಚಾರಧಾರೆಯನ್ನು ಹೋಲುವ ಮನುಷ್ಯರಿದ್ದರು.

ಕೆಲವೊಮ್ಮೆ ಚರ್ಚೆಗಳು ಅತಿರೇಕಕ್ಕೆ ಹೋಗುತ್ತಿದ್ದವು. ಅರ್ಧ ಲೈಬ್ರರಿಯನ್ನು ಈ ಡಿಪಾರ್ಟ್ಮೆಂಟಿನವರೇ ಆಕ್ರಮಿಸಿಕೊಂಡು ಬಿಟ್ಟಿದ್ದರು. ಈ ಕಾಲೇಜಿನ ನಾಲ್ಕು ಕ್ಯಾಂಪಸ್ಸುಗಳ ಲೈಬ್ರರಿ ಎಲ್ಲರಿಗೂ ಅಕ್ಸೆಸ್ ಇತ್ತು. ಜಗತ್ತಿನ ಅತ್ಯುತ್ತಮ ಬರಹಗಳು, ಪುಸ್ತಕಗಳು ಎಲ್ಲವೂ ಅಲ್ಲಿ ಸಿಗುತ್ತಿದ್ದವು. ಒಂದು ಪಾಂಡೋರಾಸ್ ಬಾಕ್ಸ್ ಇದ್ದಂಗೆ ಆ ಲೈಬ್ರರಿ ಇತ್ತು.

“ಎಲೆನಾ ನೀನು ಒಳ್ಳೆ ಲಾಯರ್, ಯಾವಾಗ ಏನು ಕೇಳಿದರೂ ಬಾ ಲೈಬ್ರರಿ ಬಾ ಲೈಬ್ರರಿ ಎಂದು ಕರೆದುಕೊಂಡು ಹೋಗುತ್ತೀಯ, ನಮ್ಮ ಊರಿನಲ್ಲಿ ನಾವು ನೋಡುವ ಸೀರಿಯಲ್ಲಿನಲ್ಲಿ ಸೀತಾರಾಮ್ ಸರ್ “ಬಸವರಾಜು ಮಾರ್ಕ್ ಮಾಡ್ಕೊಳಿ” ಅಂದಹಾಗೆ ಎಲೆನಾ ಸಹ ಹೀಗೆ ಲೈಬ್ರರಿಗೆ ಕರೆದುಕೊಂಡು ಬಂದು ಮಾರ್ಕ್ ಮಾಡಿಸುವ ಛಾತಿ ಉಳ್ಳವಳು. ಸಿನಿಮಾದಲ್ಲಿ ನೋಡಿದ ಹಾಗೆ ಇಲ್ಲಿ ಯಾರೂ ಲವ್ ಸಹ ಮಾಡುತ್ತಿರಲ್ಲಿಲ್ಲ. ಓಪನ್ ಸೊಸೈಟಿಯಲ್ಲಿ ಲವ್ ಮಾಡೋದು ಬಹಳ ಆರಾಮು, ಅದಕ್ಕೆ ಲೈಬ್ರರಿ ಬರೀ ಓದುವ ಮತ್ತು ಹೋರಾಟ ಮಾಡುವ ಜಾಗವೇ ಆಗಿತ್ತು ಅಷ್ಟೆ.

“ಇದು ನಿಮ್ಮ ಲಿಪಿ ಬಗ್ಗೆ ಏನಾದ್ರೂ ಹೇಳ್ತಿಯೋ ಅಥ್ವಾ ಇನ್ನೂ ಪೀಠಿಗೆ ಹಾಕೊಂಡು ಕೂತಿರ್ತ್ಯೋ” ಎಂದು ಹುಡುಗಿ ಎಲೆನಾಳನ್ನ ಗದರಿದಳು. ಅಷ್ಟರಲ್ಲಿ ಅವಳ ಫ್ರೆಂಡ್ ಅಲೆಕ್ಸ್ ಬಂದು ಕೂತುಕೊಂಡ. ಇಬ್ಬರು ಮಾತಾಡೋವಾಗ ಇವನ್ಯಾವನು ಬಂದೋನು ಎಂದು ಬೈದುಕೊಂಡೇ ಇದ್ದಳು. ಅಲೆಕ್ಸ್ ಆರ್ಥೋಗ್ರಫಿಯಲ್ಲಿ ಪಿ ಎಚ್ ಡಿ ಮಾಡುತ್ತಿದ್ದಾನೆ ಎಂದು ಎಲೆನಾ ಪರಿಚಯ ಮಾಡಿದಳು. ಇಲ್ಲಿ ಆರ್ಥೋಗ್ರಫಿ ಎಂದರೆ ಏನು ಎಂದು ನಯಾಪೈಸೆ ಗೊತ್ತಿರಲ್ಲಿಲ್ಲ. “ಓಹ್ ಹಾಯ್, ಹಾಯ್” ಎಂದು ಹುಡುಗಿ ಅಂದು ಸುಮ್ಮನಾದಳು.

ಬೆಂಗಳೂರಿನಲ್ಲಿ ಕಲ್ಲು ಹೊಡೆದರೆ ಸಾಫ್ಟ್ವೇರ್ ಇಂಜಿನಿಯರಿನ ಮೇಲೆ ಬೀಳುತ್ತದೆ ಎಂದು ಹೇಗೆ ಜೋಕ್ ಮಾಡುತ್ತಿದ್ದರೋ ಹಾಗೆ ಇಲ್ಲಿ ಸಿಕ್ಕ ಸಿಕ್ಕಲ್ಲಿ ಪಿ ಎಚ್ ಡಿ ಮಾಡುವವರು ಸಿಕ್ಕಿರುತ್ತಿದ್ದರು. ಗ್ರಾಂಟ್ ಚೆನ್ನಾಗಿ ಸಿಗುವ ಜಾಗ ಇದಾದರಿಂದ ಇಲ್ಲಿ ಬಂದು ಸೇರಿಕೊಳ್ಳುತ್ತಿದ್ದರು.

“ನೀವು ಏನು ಅಧ್ಯಯನ ಮಾಡುತ್ತೀರಾ?” ಎಂದು ಅಲೆಕ್ಸ್ ನ್ನನ್ನ ಕೇಳಿದಳು ಹುಡುಗಿ, “ನಾನು ಲಿಪಿಯ ಬಗ್ಗೆ ಓದುತ್ತೇನೆ, ಯಾಕೆ ಈ ಭಾಷೆಗೆ ಹೀಗೆ ಲಿಪಿ ಇದೆ, ಯಾಕೆ ಇದು ಹೀಗೆ ಇವಾಲ್ವ್ ಆಯ್ತು, ಯಾರ್ಯಾರು ಇದನ್ನ ಆವಿಷ್ಕಾರ ಮಾಡಿದರು, ಎಂಬೆಲ್ಲದುರ ಬಗ್ಗೆ ನನ್ನ ಸಂಶೋಧನೆ ಇದೆ, ಹೊಸ ಹೊಸ ಲಿಪಿಗಳನ್ನು ನಾವು ಕಂಡು ಹಿಡಿಯಬಹುದು” ಎಂದಾಗ, “ಓಹ್ ಎಲೆನಾಳಿಗೆ ಬೆರಳು ತೋರಿಸಿದರೆ ಹಸ್ತವನ್ನೇ ನುಂಗುತ್ತಾಳೆ, ಸರೀಗಿಲ್ಲ ಪಾರ್ಟಿ, ಏನ್ ಪ್ರಶ್ನೆ ಕೇಳಿದರೂ ಎಲ್ಲಾದಕ್ಕೂ ಎಕ್ಸ್ಪರ್ಟನ್ನೇ ಕರೆದುಕೊಂಡು ಬರುತ್ತಾಳೆ” ಎಂದು ತಲೆ ಚೆಚ್ಚಿಕೊಂಡು ಇಲ್ಲಿಂದ ಕಳಚಿಕೊಳ್ಳಲು ಪ್ರಯತ್ನ ಮಾಡಿದಳು.

ಅಲೆಕ್ಸ್ ಕೈಹಿಡಿದು ಅವಳನ್ನ ಕೂರಿಸಿದ. “ಹೇ ನೀನು ನಮ್ಮ ಲಿಪಿಯ ಬಗ್ಗೆ ಪ್ರಶ್ನೆ ಕೇಳಿದೆಯಂತೆ, ಎಲೆನಾ ಹೇಳುತ್ತಿದ್ದಳು, ನೀನು ನಮ್ಮ ದೇಶದ ಪ್ರಜೆ ಆಗೋದಕ್ಕೆ ಲಾಯಕ್ಕು, ನಮಗೆ ಸ್ವಾತಂತ್ರ್ಯ ಬಂದ ಮೇಲೆ ಮೊದಲು ನೀನು ಇಲ್ಲಿಗೆ ಬಂದು ಬಿಡು” ಎಂದು ಹೇಳಿದ. “ಹೇ ಇಲ್ಲ ಇಲ್ಲ ಇಲ್ಲಿನ ಸಿಟಿಜನ್ಶಿಪ್ ತೆಗೆದುಕೊಂಡರೆ ನಮ್ಮದನ್ನ ತ್ಯಾಗ ಮಾಡಬೇಕು, ಅವೆಲ್ಲ ಮಾಡಲ್ಲ, ಏನಿದ್ದರೂ ನಮಗೆ ಬ್ಲೂ ಪಾಸ್ಪೋರ್ಟೇ ಸರಿ, ವೀಸಾಗೆ ಕ್ಯೂ ನಿಲ್ಲೋದು ನಮ್ಮ ಆಜನ್ಮ ಸಿದ್ಧ ಹಕ್ಕು” ಎಂದು ನಗುತ್ತಾ ಹುಡುಗಿ ಹೇಳಿದಳು.

“ಕತಲಾನ್ ಆರ್ಥೋಗ್ರಫಿಯಲ್ಲಿ ಬಹಳ ವಿಭಾಗಗಳಿದೆ, ನಾವು ಏ ಅನ್ನು ಅ ಎಂದು ಓದುತ್ತೇವೆ, ಬಿ ಅನ್ನು ಬೆ ಎಂದು, ಸಿ ಅನ್ನು ಸೆ, ಡಿ ಅನ್ನು ಡೆ ಹೀಗೆ ನಾವು ಓದುವ ಪರಿ ಬೇರೆ, ನೀನು ಇಂಗ್ಲಿಷಿನ ಲಿಪಿಯೆಂದು ಛೇಡಿಸಿದರೂ ನಾವು ಓದೋದು ಬೇರೆ ಥರಹ, ನೀನು ಇಂಗ್ಲೀಷಿನಲ್ಲಿ ಎರಡು ಎಲ್ ಬರೆದರೆ ಲ್ಲ ಎಂದು ಓದುತ್ತೀಯಲ್ಲ, ನಾವು ಅದನ್ನು ಯಾ ಅನ್ನುತ್ತೇವ್. ನಿನ್ನ ಅಡ್ರೆಸ್ ನಲ್ಲಿ ಬರುವ padilla ವನ್ನು ನಾವು ಪದಿಯಾ ಎಂದು ಓದುತ್ತೇವೆ, ಆ ವ್ಯತ್ಯಾಸಗಳನ್ನು ಕಂಡುಹಿಡಿದುಕೊಂಡರೇ ನಮ್ಮ ಭಾಷೆಯಾಗುತ್ತದೆ, ನಿಮ್ಮದು ಮತ್ತು ತೆಲುಗರ ಲಿಪಿ ಸುಮಾರು ಹಾಗೇ ಇದೆಯಲ್ಲ, ಆದರೆ ಕೆಲವು ಅಕ್ಷರಗಳು ಬೇರೆ ಬೇರೆ ಅಲ್ವಾ ಹಾಗೇ ಇಲ್ಲಿಯೂ, ಅದಕ್ಕೆ ನಮ್ಮ ಭಾಷೆಯನ್ನು ಅಲ್ಲಗೆಳೆಯಬಾರದು” ಎಂದು ಉದ್ದ ಸ್ಪೀಚ್ ಕೊಟ್ಟ.

ಕ್ಯೂಟಾಗಿರುವ ಹುಡುಗರು ಏನು ಮಾತಾಡಿದರೂ ಕೇಳಿಸಿಕೊಳ್ಳಬೇಕು ಅನ್ನಿಸುತ್ತದೆ. ಅದಕ್ಕೆ ಮಾತ್ರ ಹುಡುಗಿ ಅವನ ಮಾತನ್ನು ಕೇಳಿಸಿಕೊಳ್ಳುತ್ತಿದ್ದಳು. “ಈ ಥರಹ ಥಿಯರಿಯಲ್ಲಿ ಇವನು ಪಿ ಎಚ್ ಡಿ ಮಾಡಿ ಏನು ದಬ್ಬಾಕುತ್ತಾನೆ” ಎಂದು ವಿಚಿತ್ರವಾಗಿ ಯೋಚನೆ ಮಾಡುತ್ತಿದ್ದಳು.

“ನಮ್ಮಲ್ಲಿ ಡೆರಿಯಾನಿಕ್ಸ್, ಸೆದಿಯಾ, ಪುಂಟ್ ವೊಲಾಟ್ ಎಂಬೆಲ್ಲಾ ಪ್ರಕಾರಗಳಿವೆ, ಇದು ನಿಮ್ಮ ಭಾಷೆಯಲ್ಲಿ ಒತ್ತು, ದೀರ್ಘ ಇದ್ದ ಹಾಗೆ” ಎಂದಾಗ ಹುಡುಗಿಗೆ ಒಂದರೆಕ್ಷಣ ಶಾಕ್ ಆದಳು. ಒತ್ತು, ದೀರ್ಘ ಎಂದೆಲ್ಲಾ ಮಾತಾಡುವ ಈ ಮನುಷ್ಯ ನಮ್ಮ ಕನ್ನಡದ ಬಗ್ಗೆಯೂ ಬೇಜಾನ್ ತಿಳಿದುಕೊಂಡಿದ್ದಾನೆ ಎಂದು ಚಕಿತಗೊಂಡು, “ಮುಂದೆ?” ಎಂದಳು.

“ನೀವಿಬ್ಬರೂ ನನ್ನ ಸೆಮಿನಾರಿಗೆ ನಾಳೆ ಬರಬೇಕು” ಎಂದು ಆಹ್ವಾನ ಇತ್ತು ಹೊರಟುಹೋದ. ಒತ್ತು, ದೀರ್ಘ ಎಂದ ಅಲೆಕ್ಸ್ ನ ದಾರಿಯನ್ನೇ ನೋಡುತ್ತಿದ್ದಳು ಹುಡುಗಿ.

|ಮುಂದಿನ ಸಂಚಿಕೆಯಲ್ಲಿ|

December 12, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಂಘರ್ಷ-ಸಂಭ್ರಮ

ಸಂಘರ್ಷ-ಸಂಭ್ರಮ

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ...

ಎದೆಬಿಲ್ಲೆಯೂ ಮಾತುಕತೆಯೂ…

ಎದೆಬಿಲ್ಲೆಯೂ ಮಾತುಕತೆಯೂ…

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್...

‘ಲೇಖ’ಕಿ ‘ಲೋಕ’ದ ಅನಾವರಣ

‘ಲೇಖ’ಕಿ ‘ಲೋಕ’ದ ಅನಾವರಣ

ಗಿರಿಜಾ ಶಾಸ್ತ್ರಿ ಕರ್ನಾಟಕ ಲೇಖಕಿಯರ ಸಂಘವು ಕೆಲವು ವರ್ಷಗಳಿಂದ ಲೇಖಕಿಯರು ತಮ್ಮ ಜೀವನಾನುಭವಗಳನ್ನು ಹಂಚಿಕೊಳ್ಳುವ 'ಲೇಖಕಿಯರ ಆತ್ಮ ಕಥೆಗಳ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This