ಲೂದ್ವಿಗ್ ಪೆಸ್ಚ್ ಹೇಳಿದರು :'ಮಕ್ಕಳೇ ನನ್ನ ಸಂಗೀತ


ಜರ್ಮನಿಯಿಂದ ವಿವೇಕ ರೈ
ಪ್ರಸಿದ್ದ ಕರ್ನಾಟಕ ಸಂಗೀತಗಾರ , ಸುಮಧುರ ಕೊಳಲುವಾದಕ , ಕರ್ನಾಟಕವನ್ನು ಪ್ರೀತಿಸುವ ಸಂಗೀತ ಪ್ರಾಧ್ಯಾಪಕ ಲೂದ್ವಿಗ್ ಪೆಶ್ಚ್ ವೂರ್ಜಬರ್ಗ್ ವಿವಿಯಲ್ಲಿ ಸಂಗೀತ ಮಾನವವಿಜ್ಞಾನ ವಿಭಾಗದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲವು ತಿಂಗಳಿಗೊಮ್ಮೆ ಬರುತ್ತಾರೆ. ಕಳೆದ ವಾರ ಬಂದಿದ್ದಾಗ ಸಂಜೆ ಅವರೊಂದಿಗೆ ಒಂದು ರೆಸ್ಟೋರೆಂಟಿನಲ್ಲಿ ಕೆಲವು ಗಂಟೆ ಮಾತಾಡುವ ಅವಕಾಶ ದೊರೆಯಿತು. ಪ್ರೊಫೆಸ್ಸರ್ ಬ್ರೂಕ್ನರ ಮತ್ತು ಅಧ್ಯಾಪಕಿ ಎಲಿಜಬೆಥ್ ನಮ್ಮೊಂದಿಗಿದ್ದರು.
ಮದ್ರಾಸು ಕಲಾಕ್ಷೇತ್ರದಲ್ಲಿ ರಾಮಚಂದ್ರ ಶಾಸ್ತ್ರಿಗಳ ಶಿಷ್ಯನಾಗಿ ಐದು ವರ್ಷದ ಡಿಪ್ಲೋಮಾ ಮತ್ತು ಮತ್ತೆ ಪಿ.ಜಿ ಡಿಪ್ಲೋಮಾ ವನ್ನು ಕರ್ನಾಟಕ ಸಂಗೀತದಲ್ಲಿ ಪಡೆದ ಲೂದ್ವಿಗ್ ಪೆಸ್ಚ್ ಕಳೆದ ಮೂರು ದಶಕಗಳಿಂದ ಕರ್ನಾಟಕದ ಸಹಿತ ದಕ್ಷಿಣ ಭಾರತದಲ್ಲಿ ನೂರಾರು ಕಚೇರಿಗಳನ್ನು ನಡೆಸಿದವರು.ಅವರ ಕೊಳಲುವಾದನ ತುಂಬಾ ಜನಪ್ರಿಯ. ಕರ್ನಾಟಕ ಸಂಗೀತಕ್ಕೆ ಸಂಬಂಧಿಸಿದಂತೆ ಅವರ ಇಂಗ್ಲಿಶ್ ಗ್ರಂಥಗಳು ಸಂಗೀತ ವಿದ್ವಾಂಸರು ಮತ್ತು ವಿದ್ಯಾರ್ಥಿಗಳು ಸದಾ ಬಳಸುವಂತಹವು . ಸಂಗೀತ ಅಧ್ಯಾಪಕರಾಗಿ ಜಗತ್ತಿನ ಅನೇಕ ದೇಶಗಳಲ್ಲಿ ಪೆಸ್ಚ್ ಪಾಠ ಮಾಡಿದ್ದಾರೆ.ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಉಡುಪಿಯಲ್ಲಿ ಪೆಸ್ಚ್ ಅವರನ್ನು ಕಂಡ ನೆನಪು .ಅವರ ಮುರಲೀನಾದ ಕೇಳಿದ ಗುಂಗು ಇನ್ನೂ ಇದೆ.ನಾನು ಕನ್ನಡ ವಿವಿಯಲ್ಲಿ ಕುಲಪತಿಯಾಗಿದ್ದಾಗ ಜೈನ್ ಅವರೊಂದಿಗೆ ಬಂದಿದ್ದ ಪೆಸ್ಚ್ ರೊಂದಿಗೆ ಸುತ್ತಾಡಿದ ರೋಮಾಂಚನ ಇನ್ನೂ ಇದೆ.

ಹೀಗಾಗಿ ದಶಂಬರ ಮೊದಲವಾರ ವೂರ್ಜಬರ್ಗಿಗೆ ಬಂದ ಲೂದ್ವಿಗ್ ಪೆಸ್ಚ್ ರನ್ನು ಕಾಣುವ ಮಾತಾಡಿಸುವ ಅವಕಾಶ ತುಂಬಾ ಸಂತೋಷ ಕೊಟ್ಟಿತು.ಊಟಕ್ಕಿಂತ ಹೆಚ್ಚು ಮಾತಿಗೆ ಪೆಸ್ಚ್ ತಮ್ಮ ನಾಲಗೆ ಬಾಯಿಗಳನ್ನು ಬಳಸುತ್ತಿದ್ದರು.ಭಾರತದ ವಿವಿಗಳ ರಾಜಕೀಯದ ಬಗ್ಗೆ ಹೇಳಿದರು.ವಿವಿಗಳಲ್ಲಿ ಸಂಗೀತ ಕಲೆ ಬೆಳೆಯದೆ ಇರುವ ಕಾರಣಗಳನ್ನು ತಿಳಿಸಿದರು.ಸಂಗೀತಕ್ಕಿಂತ ವ್ಯಕ್ತಿ ಪ್ರತಿಷ್ಟೆಗಳೇ ಮೆರೆಯುವ ಭಾರತದ ವಿವಿಗಳ ಬಗ್ಗೆ ತಮ್ಮ ನೋವು ಅಸಮಾಧಾನ ತೋಡಿಕೊಂಡರು.ಪಶ್ಚಿಮ ಬಂಗಾಳದ ಶಾಂತಿನಿಕೇತನದಲ್ಲಿ ತಾವು ಆರಂಭಿಸಲಿರುವ ಸಂಗೀತದ ಯೋಜನೆಗಳ ಬಗ್ಗೆ ಪ್ರಸ್ತಾವಿಸಿದರು.ಅಲ್ಲಿನ ರಾಜಕಾರಣಿಗಳ ಮಂತ್ರಿಗಳ ಸರಳತೆ,ನಿಜವಾದ ಕಲಾಸಕ್ತಿ ಕುರಿತು ಉತ್ಸಾಹದಿಂದ ಹೇಳಿಕೊಂಡರು.ರವಿಂದ್ರ ಸಂಗೀತದ ಹೊಸ ಆಯಾಮಗಳ ಉಲ್ಲೇಖ ಮಾಡಿದರು.ಪೆಸ್ಚ್ ಮಾತಾಡುತ್ತಲೇ ಇದ್ದರು.ಊಟಮಾದುತ್ತಿರಲಿಲ್ಲ.ನಮಗೆ ಅವರ ಮಾತುಗಳನ್ನು ಕೇಳುವ ಆಸೆ.ತಂದ ಊಟ ತಣ್ಣಗಾಗಿತ್ತು.ನನಗೆ ಆಶ್ಚರ್ಯ. ಪೆಸ್ಚ್ ತುಂಬಾ ಅತ್ರುಪ್ತಿಯಲ್ಲಿ ಇದ್ದ ಹಾಗಿತ್ತು.ಸಂಗೀತಗಾರರ ಶಾಂತತೆ ಅಲ್ಲಿರಲಿಲ್ಲ.ಸಂಗೀತದ ಅಪಸ್ವರದ ಬಗೆಗಿನ ಅಸಮಾಧಾನ ಅಲ್ಲಿತ್ತು.ವ್ಯಂಗ್ಯವೆಂದರೆ ನಾವು ಇದ್ದ ರೆಸ್ಟೋರೆಂಟ್ ಗ್ರಾಮೀಣ ಮಾದರಿಯದ್ದು.ಆದರೆ ಆದಿನ ಅಲ್ಲಿ ತುಂಬಾ ಗದ್ದಲ ಇತ್ತು.ಕ್ರಿಸ್ತ್ಮಸ್ ಪೂರ್ವದ ಔತಣಕೂಟದ ಜನಜಂಗುಳಿಯ ವಾಕ್ಪ್ರವಾಹದದಲ್ಲಿ ಪೆಸ್ಚ್ ಸಂಗೀತದ ಮಾತುಗಳು ಅಸಂಗತವಾಗುತ್ತಿದ್ದುವು.ಸಂಗೀತದ ಬಗೆಗಿನ ಅವರ ಆತಂಕಕ್ಕೆ ಅಲ್ಲಿನ ಜನರ ಮಾತಿನ ಅಬ್ಬರವು ಹಿನ್ನೆಲೆಯ ಬ್ಯಾಂಡ್ ಬಾರಿಸುವಂತಿತ್ತು.
ಊಟ ಮಾತು ಮುಗಿಸಿ ಹೊರಗೆ ಬಂದಾಗ ಲೂದ್ವಿಗ್ ಪೆಸ್ಚ್ ತಾವು ಸಂಗೀತ ಮತ್ತು ಚಿತ್ರದ ಮೂಲಕ ಮಕ್ಕಳಿಗಾಗಿ ಸಿದ್ದಪಡಿಸಿದ ಕೇರಳದ ಸಿ ಡಿ ಮತ್ತು ಚಿತ್ರದ ಪುಸ್ತಕ ಕೊಟ್ಟರು.A musical picture book from Kerala :Vaitari .ಅದರ ಲಯದ ಸಾಲು ಹೀಗಿತ್ತು :ತಿತಿತರ ತಿತಿತೆಯ್ ತಿತಿತೆಯ್ ತಕ ತೆಯ್ ತೆಯ್ ತೊಂ .
ಲೂದ್ವಿಗ್ ಪೆಸ್ಚ್ ಹೇಳಿದರು :’ಮಕ್ಕಳೇ ನನ್ನ ಸಂಗೀತ ‘

‍ಲೇಖಕರು avadhi

December 17, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. sudhanva

    ಇಬ್ಬರ ಮಾತಿನ ಆಪ್ತತೆ-ಸಂದರ್ಭ-ಕಳಕಳಿಗಳು ಬರೆಹದಲ್ಲೂ ಚೆನ್ನಾಗಿ ಬಂದಿವೆ. ಓದಿ ಖುಶಿಯಾಯಿತು.

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ sudhanvaCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: