ಲೇಡಿಸ್ ಹಾಸ್ಟೆಲ್

ಹೇಮಾ ಸದಾನಂದ್ ಅಮೀನ್

ತಮಿಳಿನ ಅರ್ಜುನ್ ರೆಡ್ಡಿ ಮೂವಿ ನೋಡಲೆಂದು  ಗೌತಮಿ  ಪಟ್ಟಪಾಡು ಅಷ್ಟಿಷ್ಟಲ್ಲ. ಅವಳಿದ್ದ ಹಾಸ್ಟೆಲ್ ನಿಯಮದಂತೆ ಬೆಳಿಗ್ಗೆ  ೭.೩೦ ಗೆ ಎಲ್ಲರೂ ಕ್ಯಾಂಟೀನಿನಲ್ಲಿ ಉಪಸ್ಥಿತರಾಗಬೇಕಿತ್ತು.   ರಾತ್ರಿ ಹನ್ನೊಂದು ಗಂಟೆಗೆ ಮಲಗಬೇಕು.  ತಡವಾಗಿ ಬಂದವರಿಗೆ ಬೆಳಗಿನ ಉಪಹಾರವನ್ನು ಕೈ ಬಿಡಬೇಕಾಗುವುದೆಂಬ ಕಟ್ಟು ನಿಯಮಗಳು.    

ನಿದ್ದೆ ಅಂದರೆ ಪಂಚಪ್ರಾಣ ಎನ್ನುವ ಗೌತಮಿ , ‘ ಇಂದು ಏನೇ ಆಗಲಿ,  ಆ ಮೂವಿ ನೋಡಿಯೇ ಸಿದ್ದ’  ಎಂದು ತನ್ನಲ್ಲಿಯೇ   ಚಾಲೆಂಜ್ ಹಾಕಿ ಲ್ಯಾಪ್ಟಾಪಿನಲ್ಲಿ ಸಂಗ್ರಹಿಸಿದ ಮೂವೀಸ್ ಫೈಲುಗಳನ್ನು  ತೆರೆದು ನೋಡಲಾರಂಭಿಸಿದಳು. ಪ್ರತಿ ಶನಿವಾರದಂತೆ ಅಂದೂ  ಅವಳ ಜೊತೆಗಿರುವ ಹರಜೀತ್ ಕ್ವಾರ್  ಮತ್ತು ಸ್ನೇಹ ಸೋನವನೆ ತನ್ನ ಪಾಲಕರ ಮನೆಗೆ ಹೋಗಿದ್ದರು.

ಮೊದ-ಮೊದಲು ಗೌತಮಿಗೆ ಅವರಿಲ್ಲದ ಒಂಟಿತನ ಕಾಡಿದ್ದು ಅಷ್ಟಿಷ್ಟಲ್ಲ. ವರ್ಷಗಳ ಹಿಂದೆ ನಡೆದ ಘಟನೆಗಳೆಲ್ಲಾ ಜೀವ ಪಡೆದು ಪಾತ್ರಗಳಾಗಿ ಕಣ್ಣೆದುರು ಬಂದು ತಿವುಚುವಂತಾಗುತ್ತಿತ್ತು. ಈ ನೆನಪುಗಳು ದೈನಂದಿನ ಪತ್ರಿಕೆಯಂತೆ ಹಳತಾದಂತೆ ತನ್ನ ಅಸ್ಥಿತ್ವವನ್ನು ಕಳೆದುಕೊಳ್ಳುವುದಿಲ್ಲವೇಕೆ? ಇವುಗಳಿಗೂ ಇಷ್ಟು ಪ್ರಬಲವಾದ ಅಸ್ತಿತ್ವದ ಅಗತ್ಯವಿರಬೇಕಾ? ಎಂದೆಲ್ಲ ಅನಿಸುವುದು.

ಮುಂಬಯಿಯಂತಹ ಸದ್ದು ಗದ್ದಲದ ನಗರದಲ್ಲಿ ಐದು ವರುಷ ಮನೆ ಮಗಳಂತೆ ಸಾಕಿ ಅವರು ನೋಡಿದ ಗಂಡನ್ನು ಒಪ್ಪಲಿಲ್ಲವೆಂಬ ಒಂದೇ ಒಂದು ಕಾರಣಕ್ಕೆ  ಇಲ್ಲಸಲ್ಲದ ಅಪಾದನೆಗಳನ್ನು ಹೊರಿಸಿ ಮನೆಯಿಂದ ಹೊರಹಾಕಿದಾಗ ಹೆಣ್ಣೊಬ್ಬಳಿಗೆ ಹಾಸ್ಟೆಲ್ ಅಲ್ಲದೇ ಬೇರೆ ಯಾರು ಗತಿ?  ಇಂಥಹ  ಸಮಯಕ್ಕೆ ಗೆಳತಿಯರದ್ದೇ  ಬಲ.   

ಜೀವದ ಗೆಳತಿಯರಾದ ಲವೀನಾ  ಮತ್ತು ಚಂದ್ರಿಕಾ  ತಮ್ಮ  ಮನೆಯಲ್ಲಿ ಇರಬೇಕೆಂದು ಒತ್ತಾಯಿಸಿದರು.  ಹ್ನೂ೦…  , ಅವರ ಅಣ್ಣ ತಮ್ಮಂದಿರು ಇರುವಾಗ ಪರ ಹೆಣ್ಣೊಬ್ಬಳನ್ನು ಮನೆಯಲ್ಲಿರಿಸುವುದು ಸರಿ ಕಾಣಿಸದೆಂದು ,  ಗೌತಮಿ  ಕೈ ಮುಗಿದು  ಮೃದುವಾಗಿ ನಿರಾಕರಿಸಿದಳು. .

ಇನ್ನು ಮಿಕ್ಕ ಸಂಬಂಧಿಕರ ತಿರಸ್ಕಾರಕ್ಕೆ ಬಲಿ ಆಗುವುದಕ್ಕಿಂತ ಲೇಡೀಸ್ ಹಾಸ್ಟೆಲ್ ವಾಸಿ ಎಂದೆನಿಸಿದ ಗೌತಮಿಗೆ  ಆ ನಾಲ್ಕು ಗೋಡೆಗಳು   ಕಚ್ಚಲು ಬರುವಂತಾಗುತ್ತಿತು. ಅನಾಥ ಪ್ರಜ್ಞೆ ಬೇರೆ.

ನಿಧಾನವಾಗಿ ಅಲ್ಲಿರುವ  ಎಲ್ಲಾ ದಿಂಬುಗಳಲ್ಲೂ  ತನ್ನಂತೆಯೇ  ಹೇಳಲಾಗದ ನೋವುಗಳು ಜೀವಂತ ಪ್ರತಿಮೆಯಂತೆ ಪಿಳಿ ಪಿಳಿ ಕಣ್ಣಿನಿಂದ ನೋಡುವಾಗ ಎಲ್ಲರಿಗೂ ತನ್ನದೇ ಆದ ತೊಡಕುಗಳಿವೆ, ಪರಿಧಿಗಳಿವೆ ಎಂದು ಅನಾವರಣಗೊಂಡ್ಡಿದ್ದು ಮಾತ್ರವಲ್ಲ  ಈಗ ಕೆಲವೊಮ್ಮೆ ಅವರ ನೋವಿಗೆ ತಾನೇ ಹೆಗಲಾಗುತ್ತಿದ್ದೇನೆ ಎಂಬ ಸಮಾಧಾನದೊಂದಿಗೆ ಪರಿಸ್ಥಿತಿ ಮನುಷ್ಯರನ್ನು ದೃಢಗೊಳಿಸಿತ್ತದೆ ಎಂಬ ಸತ್ಯದ ಅರಿವೂ ಅವಳಿಗಾಯಿತು  .

ಅರ್ಜುನ್ ರೆಡ್ಡಿ ಮೂವಿ ಪೂರ್ತಿ ನೋಡಿ ಮುಗಿಸುವ  ಬಯಕೆಯೊಂದಿಗೆ  ನಿದ್ದೆಯ ಸಂಘರ್ಷ ಶುರುವಾಯಿತು.  ಅವಳ ಕಣ್ಣೆವೆಗಳು  ನೆಲ ಮುಟ್ಟುವುದೋ ಎನ್ನುವಷ್ಟು ನಿದ್ದೆ  ಕಣ್ಮನದಲಿ ಅಡರಿಕೊಂಡಾಗ ಇನ್ನು ಸಾಧ್ಯವಿಲ್ಲ . ಎಂದು  ಸೋಲೊಪ್ಪಿ ಮೂವಿಯನ್ನು ಅರ್ಧದಲ್ಲಿಯೇ ಸ್ಥಗಿತಗೊಳಿಸಿದಳು.  ನಾಳೆ ಹೇಗೂ ರವಿವಾರ  ಎಲ್ಲೂ  ಹೋಗಲಿಕ್ಕಿಲ್ಲ . ಮೊದಲು ಉಳಿದಾರ್ಧ ಮೂವಿ ನೋಡಿ ಮತ್ತೆ ಉಳಿದ ಕೆಲಸʼ ವೆಂದು ಮಲಗುವ ಮುಂಚೆ ಅಭ್ಯಾಸದಂತೆ ವಾಶ್ ರೂಮ್ ಗೆ ಹೋದಳು.

ಹಾಸ್ಟೇಲಿನ ಒಂದು ಕಾರಿಡಾರ್ ನಲ್ಲಿ ಪ್ರತಿ ಎರಡು ರೂಮಿಗೆ ಒಂದು ವಾಶ್ ರೂಮಿದೆ. ಗೌತಮಿಯ  ರೂಮಿನ ಎದುರುಗಡೆಯೇ ವಾಶ್ ರೂಂ ಇದ್ದಿದ್ದರಿಂದ ಅರ್ಧರಾತ್ರಿಯಲ್ಲೂ ಹೊರಗೆ ಹೋಗಲು  ಭಯವೆಂಬುದಿರಲಿಲ್ಲ . ” ಆದರೂ ಬಾಗಿಲು ತೆರೆದು ಹೊರಗೆ ಹೋಗಲೇ ಬೇಕಲ್ಲಾ  ”  ಎನ್ನುವ ಉದಾಸೀನ.  ಭಾರವಾದ  ಹೆಜ್ಜೆಯಿಡುತ್ತಾ  ಹೊರಗಡೆ ಇಟ್ಟಿದ್ದ ಸ್ಲೀಪರ್ ಜೋಡು  ಸಿಕ್ಕಿಸಿಕೊಂಡು ಹೊರಗೆ ಹೋದಳು.

ವಾಶ್ ರೂಮಿನ ಟ್ಯೂಬ್ ಲೈಟ್ ರಾತ್ರಿಯಿಡಿ ಆನ್ ಆಗಿರುತ್ತದೆ.   ಹೊರಗೆ ತಣ್ಣನೆಯ ಗಾಳಿ ಸೀಳು  ಹೊಡೆಯುತ್ತಿತ್ತು. ಗೌತಮಿ ವಾಶ್ ರೂಮಿಗೆ ಹೋಗಿ ಹೊರಗೆ ಬಂದು ವಾಶ್ ಬೇಸಿನಿನಲ್ಲಿ ಕೈ ತೊಳೆದು ಹಿಂತಿರುಗಿದಷ್ಟೆ ಗಾಳಿಯ ಮೌನವನ್ನು ಚೀರಿ ದುತ್ತನೆ ಪ್ರತ್ಯಕ್ಷಳಾದ ಅವಳು!!!

ಅವಳು  ಯಾರು?  ಎನ್ನುವುದಕ್ಕಿಂತ ಅವಳ ದಿರಸು ಹೆಚ್ಚು ಪ್ರಭಾವ ಬೀರಿತ್ತು. “ಬಿಳಿ ಬಣ್ಣ”.ಈ ಬಿಳಿ ಬಣ್ಣ ದಿನದಲ್ಲಿ ಶಾಂತಿಯ ಸಂಕೇತವಾದರೂ ಕತ್ತಲೆಯ  ಎದೆಯಲ್ಲಿ  ಭಯ ಮೂಡಿಸುವ  ಉದ್ಭವ ಮೂರ್ತಿಯಂತಿತ್ತು .. ಗೌತಮಿಯ ಎದೆಯೊಡೆದು ನೂರು ಚೂರುಗಳಾದವೋ ಎನ್ನುವಂತೆ ಭಯ. ಬಾಯಿಗೆ ಬೃಹತ್ ಬೀಗ ಜಡಿದು ಮಾತೇ ಹೊರ ಬರದಂತೆ ಆಯ್ತು.

ʼ ಇಲ್ಲಿಗೆ ನನ್ನ ಕತೆ ಮುಗಿಯಿತು ʼ ಎನ್ನುವಷ್ಟರೊಳಗೆ ಅಲ್ಲಿ  ಆ ಬಿಳಿ ಪೋಷಾಕಿನೊಳಗಿನ ಜೀವ ಕದಲಲಾರಂಬಿಸಿತು. ಭಯ….. ಆ ಅನಾಮಿಕ  ಕಣ್ಣುಗಳಲ್ಲಿಯೂ ಘನ ಭಯ.  ಯಾವುದೋ ಹುಡುಕಾಟ , ಆತಂಕ ಸ್ಪಷ್ಟವಾಗಿ ಕಾಣಿಸುತ್ತಿತ್ತು.

ಬೇರೆ ಮಾತಿಲ್ಲ .  ತೊದಲುತ್ತಾ ಬಿಕ್ಕುತ್ತಾ ”  ಪ್ಲೀಸ್ ಪ್ಲೀಸ್ ಹೆಲ್ಪ್.. ಎಂದು ಪುಟ್ಟ ಮಗುವಿನಂತೆ ಗೌತಮಿಯ ಬಳಿ  ಬರುತ್ತಿದ್ದಂತಹ ಆ ದೇಹದ ಒಳಗುದಿಗೆ ಕಿವಿಯಾಗುವುದೇ? ಅಲ್ಲ ತನ್ನೊಳಗೆ ಹುದುಗಿಕೊಂಡ ಭಯಕ್ಕೆ ಸ್ಪಂದಿಸುವುದೇ ಎಂದು  ನಿರ್ಧರಿಸದ ಗೌತಮಿಗೆ ಅ ಕ್ಷಣದಲ್ಲಿ   ಅರ್ಥವಾದ್ದದ್ದು ಇಷ್ಟೇ.

ಎರಡು ದಿನಗಳ ಮುಂಚೆ ನೋಡಿದ ” ದಿ ನನ್ ”  ಹಾರರ್ ಮೂವಿ ಪೋಸ್ಟರಿನ  ನೀಲಿ ನಕ್ಷೆಯಿಂದ ಎದ್ದು ಬಂದಲೋ ಎನೋ ?     ತಿಳಿ ಬುದೂ ಬಣ್ಣದ ನೀಳ  ಕೂದಲ… ಇವಳೇ  ಆ ನನ್.   ಮುದಿತನದ  ಸೋಗು ಧರಿಸಿ ಬಂದಿದ್ದಾಳೆ .  ಹಾರರ್  ಸಿನೆಮಾಗಳನ್ನು ರಾತ್ರಿ ನೋಡುವುದರ ಮಜಾನೇ   ಬೇರೆ  ಎನ್ನುವ ತನ್ನ  ಪುಕ್ಕಲುತನದ ಧೈರ್ಯಕ್ಕೆ ತಾನೇ  ಶಪಿಸುತ್ತ  ಇದೆಲ್ಲಾ ಬೇಕಿತ್ತಾ ? ಎಂದು  ತನ್ನನ್ನೇ ತಾನು ಬೈದುಕೊಂಡಳು.

ವಾಶ್  ಬೆಸಿನ್ನಿನ  ನಳದ ನೀರಿನ ಸದ್ದನ್ನು ಬಿಟ್ಟರೆ ಕೇವಲ ಆ ಅಪರಿಚಿತ ಬಿಳಿಬಟ್ಟೆಯ ಮುದಿಜೀವದ ಸಹಾಯಕ್ಕಾಗಿ ಯಾಚಿಸುವ ದೈನೇಸಿ  ಕೂಗು. ಭಯ ಮತ್ತು ಅನುಕಂಪ ಸಂಘರ್ಷದಲ್ಲಿ ಅನುಕಂಪ ಗಟ್ಟಿಯಾಗುತ್ತ ಬಂತು.

ತಾನು ಈ ಕ್ಷಣದಲ್ಲಿ ಕುಸಿದು ಹೋಗುವೆನೋ ಎನ್ನುವ ಹಂತದಲ್ಲೂ ದಿಟ್ಟತನದ  ಮೇಲುಡುಗೆ ತೊಟ್ಟಂತೆ  “ತಮಗೆ ಎಲ್ಲಿಗೆ ಹೋಗಬೇಕಾಗಿದೆ ”  ಗೌತಮಿ ಕೇಳಿದಾಗ

ಹೆಲ್ಪ್   ಮೀ …..  ಪ್ಲೀಸ್    ಹೆಲ್ಪ್ ಮಿ , ಯ ಬಳಿಕ ಅವಳಿಂದ ಬಂದ ಎರಡನೆಯ ವಾಕ್ಯ,  ” ಐ ಡೋಂಟ್ ನೋ “

ಗೌತಮಿ , “ ನೀವು ಇಲ್ಲಿ ಹೇಗೆ ಬಂದಿರಿ ? ”   ಮತ್ತದೇ   “I don’t Know”.

ಮುಂದಿನ ಎಲ್ಲಾ ಪ್ರಶ್ನೆಗಳಿಗೆ ಬಂದ ಬಹುತೇಕ ಉತ್ತರಗಳೇ

ಮನುಷ್ಯ ನೆನಪಿಡುವ ಶತಪ್ರಯತ್ನಗಳಲ್ಲಿಯೂ ಒಂದು ಹಂತದಲ್ಲಿ ಎಲ್ಲಾ ಖಾಲಿ ಆಗುವುದೂ ಒಂದು ವರದಾನವೇ. ಈ ವರದಾನ ತನಗೆ ಲಭಿಸಿದ್ದರೇ ಪ್ರಯೋಜಕವಾಗುತ್ತಿತ್ತು ಎಂದು ಧೈರ್ಯಮಾಡಿ ಒಂದು ಎಜೆಂಡಾ ಹಾಗೂ ಒಂದು ರಹಸ್ಯವನ್ನು ಬಿಡಿಸಲು ನಿರ್ಧರಿಸಿ ಆ ಭಯಭೀತ ಮುದಿ ದೇಹದ ಕೈ ಹಿಡಿದು ರೂಮಿಗೆ ಬಂದು ತನ್ನ ಮೊಬೈಲನ್ನು ತಡವರಿಸುತ್ತಾ ಪಕ್ಕದಲ್ಲಿಯೇ ಬಿದ್ದ ಸ್ಟೋಲನ್ನು  ಎತ್ತಿ ಹಾಗೆಯೇ ಹೆಗಲಿಗೆ ಸಿಕ್ಕಿಸಿ ಮತ್ತೆ ಹೊರಬಂದು ಒಂದೇ ಒಂದು ಹಿಡಿ ಧೈರ್ಯವನ್ನು ಮಂತ್ರದಂಡದಂತೆ ಪ್ರಯೋಗಿಸಿ  ಕತ್ತಲನ್ನೂ ಚೀರಿ ಮುಂದೆ ಹೋಗುವ ಅದಮ್ಯ ಸಾಹಸ ತನ್ನೊಳಗೆ ಅಂಕುರಿಸುತಿದೆ ಎನ್ನುವ ದೃಢತೆಯಿಂದ  ಗುರಿಯಿಲ್ಲದ ನಿಗೂಢ  ಪಯಣಕ್ಕೆ ಪ್ರವೇಶಿಸುವಂತೆ ಮುಂದೆ ಹೆಜ್ಜೆ ಹಾಕಿದಳು.   

ತಾನೇ ಪೂರ್ತಿ ಭಯಬೀತಳೂ, ತನ್ನನ್ನು ನಂಬಿದ ಜೀವ ಇನ್ನೂ ಪುಕ್ಕಳು. ಪುಕ್ಕಳಾ ಅಥವಾ ನಟನೆಯಾ? ಲೆಕ್ಕವಿಲ್ಲದ  ಅಪಾರದರ್ಶಕ ಚಿತ್ರಗಳು  ಗೌತಮಿಯ  ಕಣ್ಣೆದುರು ಹಾಸ್ಯಾಸ್ಪದವಾಗಿ ನಲಿದಾಡುತಿದ್ದಂತೆ ಭಾಸವಾಯಿತು.

ಇವೆಲ್ಲಾ ಹೇಗೆ ಸಾಧ್ಯವಾಯಿತು ಎಂದು ತನ್ನಲ್ಲಿಯೇ ಪ್ರಶ್ನಿಸುತ್ತಾ ತಾನು ಕೈ ಹಿಡಿದಿರುವ ಜೀವಿಗೆ ನಿಜವಾಗಿಯೂ ಜೀವವಿದೆಯೇ? ನಿಜವಾಗಲೂ ಅವಳು ಕಾಣೆಯಾಗಿದ್ದಾಳಾ? ಅಥವಾ ಈ ರೀತಿ ನಟಿಸಿ ನನ್ನನ್ನೇ ಈ ಲೋಕದಲ್ಲಿ ಕಾಣದಂತೆ ಮಾಡುವ ಮಾಯೇಯೋ? ಎಲ್ಲವೂ ಅಯೋಮಯ.  ಹತ್ತು – ಇಪ್ಪತ್ತು ಹೆಜ್ಜೆ ನಡೆದ ಬಳಿಕ ಲಿಪ್ಟ್.   ಗೌತಮಿ ಮೊಬೈಲಿನ  ಪ್ಲ್ಯಾಶ್ ಲೈಟಿನ ಬೆಳಕಲ್ಲಿ ಲಿಪ್ಟ್ ಬಟನ್ ಒತ್ತುತ್ತಾ, ʼ  ಈ ಕ್ಷಣವೇ ಈ ಲಿಪ್ಟಿನಲ್ಲಿ ನನ್ನನ್ನು ಒಳಗೆ ದಬ್ಬಿ ತನ್ನ ಅಸಲಿ ಚಹರೆ ತೋರಿಸಿ ಬಿಟ್ಟರೆ ?ʼ

ಎಂದು ಕಂಪಿಸುವ ಬೆರಳಿನಿಂದ  ಗುಂಡಿಯನೊತ್ತಿದಳು.   ಲಿಪ್ಟ್ ಬರಲಿಲ್ಲ .  ಮತ್ತೆ ಮತ್ತೆ ಒತ್ತಿದರೂ ಯಾವ ಚಲನೆ ವಲನೆ ಕಾಣದಿರಲು    “ಇದೂ ಒಂದು ತಂತ್ರವಾಗಿರಬೇಕು  .  ಗೌತಮಿ ಬಿಡು. ಅವಳ ಕೈ   ಬಿಟ್ಟು ಓಡು.. ನಿನ್ನ ರೂಮಿಗೆ ಹೋಗಿ ಬಾಗಿಲು ಮುಚ್ಚಿಕೋ”  ಎಂದು  ಒಂದು  ಮನಸ್ಸು ಹೇಳಿದರೆ,  ಇನ್ನೊಂದು ರೀತಿಯಾಗಿ,  ಪಾಪ ಮುದಿ ಜೀವ ಸಹಾಯಕ್ಕೆ ಕೈ ಚಾಚಿದೆ….. ದಿಕ್ಕು ತಪ್ಪಿಸಿಕೊಂಡಿದೆ… ಎನ್ನುವ ಅನುಕಂಪ. ಕೈ ಬಿಡಲು ಮನಸ್ಸು ಬರಲಿಲ್ಲ. ನಡುರಸ್ತೆಯಲ್ಲಿ ಕೈ ಬಿಡುವ ವೇದನೆ ನನಗಲ್ಲದೆ  ಇನ್ಯಾರಿಗೆ ಗೊತ್ತು !

ಅನಿರುದ್ಧ  ಮಾಡಿದ್ದೂ  ಅದೇ ತಾನೇ ?  ನನ್ನನ್ನು  ಇನ್ನಿಲ್ಲದಂತೆ  ಪ್ರೀತಿಸುವ ಹುಡುಗನೆಂದು  ಅವನಿಗಾಗಿ ಮನೆಯವರೊಂದಿಗೆ ಜಗಳ ಕಾದಿದಾಯಿತು .  ದೊಡ್ಡಪ್ಪನ ಅಳಿಯ ತಂದ  ಸೊಪೆಲ್ಟಿಕೇಟೆಡ್ ಪ್ಯಾಮಿಲಿಯ ಸಂಬಂಧಗಳನ್ನು ನಿರಾಕರಿಸಿ ಕೊನೆಗೆ ” ಲೆಸ್ಬಿಯನ್ ”  ಎಂದೂ ಕೇಳಿಸಿಕೊಂಡೆ .  ಅಳಿಯನ  ಮನಸ್ಸು ನೋಯಿಸಿದಕ್ಕೆ  ಮನೆ  ಬಿಡಬೇಕಾಯಿತು .  

ಸಾಲದ್ದು ಅನ್ನುವುದ್ದಕ್ಕೆ  ಅನಿರುದ್ಧ ಸಹ ತನ್ನ ತಂದೆ-ತಾಯಿಯ ಇಚ್ಛೆಯ  ವಿರುದ್ಧ ” ನಿನ್ನೊಂದಿಗೆ ಮದುವೆ ಮಾಡಿಕೊಳ್ಳಲಾಗುವುದಿಲ್ಲ”  ಎಂದು  ಕಡ್ಡಿ  ಮುರಿದಂತೆ  ಹೇಳಿ ಕೈ ತೊಳೆದುಕೊಂಡು ಹೋಗಿದ್ದ. ಪ್ರೀತಿಸಿ ಮದುವೆಯಾಗುವ ಗಂಡು ಇಂದಲ್ಲ ನಾಳೆ ದೇಹ ಬೆಸೆಯುವಂತಹದ್ದೇ ಎಂದು  ಅವನಿಗೆ ದೇಹ ಒಪ್ಪಿಸಿದ್ದೂ ನೆನಪಿಲ್ಲದೇ ಎಲ್ಲವನ್ನೂ ಮೂರು ತಾಸಿನ ಸಿನೆಮಾ ಕತೆಯಂತೆ ಮರೆತು ಹೋದವನಿಂದ ಒಳ್ಳೆಯ ಜೀವನ ಪಾಠ ಕಲಿಯುವಂತಾಯಿತಲ್ಲ  ಎಂದು ನಿರಾಳಳಾಗಿದ್ದಳು.

ಗೌತಮಿಯ ಹಿಡಿತ ಇನ್ನಷ್ಟು ಬಿಗಿಯಾಗಿ ಮೂರನೇ ಮಹಡಿಯ  ಮೆಟ್ಟಿಲುಗಳತ್ತ ಬಂದಾಗ ಏನೂ ಕಾಣಿಸಲಿಲ್ಲ. ಕೈ ಹಿಡಿದಿದ್ದರಿಂದ ಅವಳು ಜೊತೆಗಿದ್ದಾಳೆಂಬ ನಂಬಿಕೆ.  ಆದರೆ ಈಗ ತನ್ನ ರೂಪ ಬದಲಾಯಿಸಿದರೆ ?   ಮೊಬೈಲಿನ ಟಾರ್ಚ್ ಆನ್ ಮಾಡಿ ಒಂದೊಂದು ಹೆಜ್ಜೆ ಮುಂದಿಡುವಾಗ ಚಪ್ಪಲಿಯ ಸದ್ದು ಸ್ಪಷ್ಟವಾಗಿ ಕೇಳಿಸುತ್ತಿತ್ತು .

ಮೂರನೇ ಮಹಡಿಯಲ್ಲಿ ವಾರ್ಡನ್ ಮತ್ತು ಉಳಿದ ನನ್ ಗಳ ರೂಮಿರುವುದರಿಂದ ನೇರವಾಗಿ ಅವರನ್ನೇ ಕೇಳಿದರಾಯ್ತು ಎಂದು ರೂಮ್ ನಂಬರ್ ೩೧೬ ರ  ಬೆಲ್  ಒತ್ತಿದಳು. ಒಂದು…. ಎರಡು…. ಮೂರು ಬಾರಿ ಒತ್ತಿದರೂ ಯಾವುದೇ ಉತ್ತರವಿಲ್ಲ.”  ಎಲ್ಲವನ್ನು ತನ್ನ ಮಾಯಾಶಕ್ತಿಯಿಂದ ನಿಃಶಬ್ದವಾಗಿರಿಸಿದ್ದಾಳೋ ಏನೋ? ಇಷ್ಟು ಶಕ್ತಿಯಿರುವಳು ನನ್ನಿಂದ ಬಯಸುವುದಾದರೂ ಏನು?”

ಯಾಕೆ ನಾನೂ ಕಾಲಗರ್ಭದ ಚಕ್ರದಲ್ಲಿ ಸಿಲುಕಿದಂತೆ ಇವಳನ್ನು ಗಟ್ಟಿಯಾಗಿ ಹಿಡಿದಿಟ್ಟಿದ್ದೇನೆ? “ಈ ಕ್ಷಣ ನನಗೆ ನನ್ನವರಂತ ಯಾರೂ ಇಲ್ವಲ್ಲ. ಇದ್ದ ಒಬ್ಬ ಅಪ್ಪನೂ ವಿಳಾಸ ಕೊಡದೆ ಕಾಣೆಯಾಗಿದ್ದಾನೆ.    ಅಪ್ಪ… ಅಮ್ಮ ಇದ್ದಾಗ ಪರಿವಾರ, ಸ್ನೇಹಿತರೂ ಸಾಕಷ್ಟಿದ್ದರು. ಈಗ ಈ ಲೇಡೀಸ್ ಹಾಸ್ಟೇಲಿನ ಗೆಳತಿಯರೇ ನನ್ನ ಪರಿವಾರ. ಹಾಳಾದ್ದೂ ಇವತ್ತು ಅವರೂ ಇಲ್ಲ. ಇಲ್ಲಾಂದ್ರೆ “ ನನ್ನ ಈ ಹುಚ್ಚುತನಕ್ಕೆ ನಾಲ್ಕು ಬೈದು ಎಳೆದು ಕೋಣೆ ಸೇರಿಸುತ್ತಿದ್ದರು.”

ಇನ್ನೇನು ಮತ್ತೆ ನಾಲ್ಕನೇ ಮಹಡಿಗೆ ಹತ್ತಲೆಂದು ಪುನಃ ಮೆಟ್ಟಿಲತ್ತ ನಡೆಯುತ್ತಿದ್ದಂತೆ ಹಠಾತ್ತನೇ ಲಿಪ್ಟ್ ಗ್ರೌಂಡ್ ಪ್ಲೋರಿಗೆ ಇಳಿದ ಸದ್ದು.ಇಷ್ಟರವರೆಗೆ ಜರಿಯದ ಲಿಪ್ಟ್ ಈಗ….. ಈ ಹೊತ್ತಿನಲ್ಲಿ  ಚಲಿಸುವುದಂದರೆ  ಸೋಜಿಗವೇ.   ರಾತ್ರಿ ಹನ್ನೊಂದರ ನಂತರ ಗೇಟ್ ಮುಚ್ಚಿದರೆ ಬೆಳಿಗ್ಗೆ 5 ಗಂಟೆ ವರೆಗೆ ಇಲ್ಲಿಗೆ  ಯಾರೂ ಬರುವುದೂ ಇಲ್ಲ. ಹೋಗುವುದೂ ಇಲ್ಲ. ಹಾಗಿರುವಾಗ?   ಸರಿ,  ನಿಂತು ನೋಡೋಣವೆಂದರೆ ಭಯಾನಕ ಕತ್ತಲು. ”   ಆದಷ್ಟು ಬೇಗ ತಾನು ಕೈಗೊಂಡ ಮಿಷನ್ ಮುಗಿದೇ ಬಿಡಲಿ  ” ಎಂದು ಮೆಟ್ಟಿಲುಗಳನ್ನೇರಿಯೇ ನಾಲ್ಕನೇ ಮಹಡಿ ಹತ್ತಿದರೆ ಅಲ್ಲಿಯೂ ನೀರವ ಮೌನ .

ಒಂದು ವೇಳೆ ಈಕೆ ಇದೇ ಹಾಸ್ಟೇಲಿನವಳಾಗಿದ್ದರೆ ನಾನು ಯಾವತ್ತೂ ನೋಡಿದ ಹಾಗಿಲ್ಲವಲ್ಲ ! ಹಾಗಿದ್ದರೆ ಇವ್ಲ್ಯಾಕೆ ನನ್ನಲ್ಲಿ ಕೇಳಬೇಕು ತಾನಾಗಿಯೇ ಹುಡುಕ ಬಹುದಲ್ಲ? ಇದೆಲ್ಲ ಒಂದು ನೆಪ ಮಾತ್ರವೇ?  ಈಕೆ ನಿಜವಾಗ್ಲೂ  ಇಲ್ಲಿಯ ಒಂದು ಕೋಣೆಯಿಂದ ಹೊರ ಬಂದಿದ್ದರೂ ಆ  ಬಾಗಿಲು ತೆರೆದಿರಬೇಕಲ್ಲ?  ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಅವಳ ಕೈಯನ್ನು ಬಿಗಿ ಹಿಡಿದು ಕೊರಿಡಾರಿನ  ಕೊನೆಯವರೆಗೂ ಹೋದಳು.  ಅಲ್ಲೇ ಹಾಸ್ಟೆಲಿನ ಹೆಡ್ ನನ್  ಮಿಸ್  ಮರಿಯಾ   ಅವರ ರೂಮಿತ್ತು. 

ಆ ರೂಮಿನ ಬಾಗಿಲು ನೋಡಿದಾಕ್ಷಣ .  ತನ್ನೊಳಗಿನ ಭಯಕ್ಕೆ ಒಂದು ವಿರಾಮ ಸಿಕ್ಕಿತ್ತೆಂದು  ಬಾಗಿಲನ್ನು ದಡದಡನೇ  ಬಡಿದಳು . ಯಾಂತ್ರಿಕವಾಗಿ ಪಕ್ಕದಲ್ಲಿದ್ದ ಬೆಲ್ ಒತ್ತಿದಳು. ಬೆಲ್ ಸದ್ದು  ತನಗೆ ಸರಿಯಾಗಿ ಕೇಳಿಸುತ್ತಿತ್ತು.   ಆದರೂ ಒಳಗಿನಿಂದ  ಯಾವ  ಪ್ರತಿಕ್ರಿಯೆಯೂ  ಇಲ್ಲ. ಯಾವುದೋ ಅನ್ಯಗ್ರಹದಲ್ಲಿ ತಾನು ಸಂಚರಿಸುತ್ತಿದೆನೋ ?  ಅಲ್ಲ,  ಇಲ್ಲಿ ಎಲ್ಲರೂ ನಿದ್ದೆಯಲ್ಲಿ ಕಿವುಡರಾಗುತ್ತಾರೋ? ಒಂದು ಗೊತ್ತಿಲ್ಲ. 

 ಆ ತಿರುವಿನಲ್ಲಿ ಎರಡು ಕೋಣೆಗಳು. ಮೊದಲ ಕೋಣೆಯ ಬಾಗಿಲು ಮುಚ್ಚಿತ್ತು. ಎರಡನೇ ಬಾಗಿಲು ಅರ್ಧ ತೆರೆದಿತ್ತು.   ಗೌತಮಿಗೆ  ಜೀವಕ್ಕೆ ಜೀವ ಬಂದಂತೆ ಆ ಕೋಣೆಯೆಡೆಗೆ  ಧಾವಿಸಿ “  ನೋಡಿ   ಇದು ಇದು ನಿಮ್ಮ ಕೋಣೆಯಾ?” ಎಂದು ಕೇಳಿದಳು .

ಜಗದ ನಂಬಿಕೆಯನ್ನಲ್ಲಾ  ಎಳೆದು ತಂದು ನಿರಾಳತೆಯ ನಗು, ಖುಷಿ ಒಂದೂಗೂಡಿ ದುಮ್ಮುಕ್ಕಿ ಬಂದಂತೆ , ”   ಹೌದೌದು ಇದು ನನ್ನದೇ ರೂಮ್…  ನಾನೀಗ ಪ್ರಾರ್ಥನೆಗೆ ಹೋಗಬೇಕು”  ಎಂದು ತಡವರಿಸುತ್ತಾ ಒಳಗೆ ಹೋದಳು . ಅಬ್ಬಾ ! ಅಂತೂ ಈ ಜೀವ ಸುರಕ್ಷಿತವಾಗಿ ತನ್ನ ಕೋಣೆಗೆ ಸೇರಿತಲ್ಲ ಎಂಬ ಸಂತೋಷ ಗೌತಮಿಗೆ “ಆದ್ರೆ ಈ ನಡುರಾತ್ರಿಯಲ್ಲಿ ಪ್ರಾರ್ಥನೆ  !!?

”  ಮ್ಯಾಮ್ ಈಗಿನ್ನು  ಎರಡುವರೆ ಗಂಟೆ.  ಬೆಳಗಿನ ಪ್ರಾರ್ಥನೆಗೆ  ಇನ್ನೂ  ಎರಡುವರೆ  ತಾಸಿದೆ, ” ಎಂದಳು .

” ಓಹ್ ,   ಹೌದಾ?   ಹಾಗಾದರೆ ಅಷ್ಟರ ವರೆಗೆ ನಾನು ರೆಸ್ಟ್ ಮಾಡುತ್ತೇನೆ. “ಗಾಡ್ ಬ್ಲೆಸ್ ಯು ಮೈ ಡಿಯರ್ .. ಗಾಡ್  ಬ್ಲೆಸ್ ಯು

” ಎನ್ನುತ್ತಾ    ಆಕೆ ಹಾಗೆಯೇ  ಮಂಚಕ್ಕೆ ಒರಗಿದಳು.

ಇಷ್ಟರವರೆಗೆ ಎಲ್ಲವೂ ಸರಿಯಾಗಿಯೇ ಆಯ್ತು. ಆದರೆ ಮುಂದಿನ ಹೆಜ್ಜೆ ಏನಿರಬಹುದು. ನಾನು ಬಾಗಿಲಿನತ್ತ ಮುಖ ತಿರುಗಿಸಿದಾಕ್ಷಣ ಬೆನ್ನ ಹಿಂದಿನಿಂದ ಬಂದು ಕುತ್ತಿಗೆ ಹಿಸುಕಲೂಬಹುದು.   ಈ ಆತ್ಮಗಳು ಏನ್ ಬೇಕಾದ್ರೂ ಮಾಡಿಯಾವು .   ಎಂದು ದಿಗಿಲುಗೊಂಡು ಹಿಂತಿರುಗುವಾಗ  ಪೂರ್ತಿ ಅವಳತ್ತ ಬೆನ್ನು ಮಾಡದೇ ದೇವರೆದುರು ಹಿಂದೆ ಹೆಜ್ಜೆಯಿಡುವಂತೆ ಹಿಂದೆ ಹಿಂದೆ ಸರಿಯುತ್ತಾ ಬಾಗಿಲಿನಿಂದ ಆಚೆ ಹೋದದ್ದೇ ತಡ ರಪಕ್ಕನೇ ಬಾಗಿಲಿನ ಲ್ಯಾಚ್ ಮುಚ್ಚಿ ನಿಟ್ಟುಸುರಿನೊಂದಿಗೆ   ” ಮಿಷನ್ ಸಕ್ಸಸ್ ” ಎಂದು ಬಲಗೈಯನ್ನು  ಖುಷಿಯಿಂದ ಕೊಡವಿದಳು. 

ಈಗ ಅವಳ ಮೈಮನದಲ್ಲಿ   ದಿವ್ಯ ನಿರಾಳತೆ. ಇನ್ನು ತನ್ನ ಕೋಣೆಯವರೆಗೂ ಏಕಾಂತದ  ನಡುಗೆ. ಅಷ್ಟರಲ್ಲಿ ಮತ್ತೆ ಲ್ಯಾಚ್ ತೆಗೆದು ಹೊರಬಂದರೆ?…  ಈಗ ಇನ್ನೊಂದು ರೂಪತಾಳಿ ಬಂದರೂ ಬರಬಹುದು. “ಕತ್ತಲ ಸಾಮ್ರಾಜ್ಯದಲ್ಲಿ ಎಲ್ಲವೂ ಸಾಧ್ಯ” ಎಂದು ಬಿರ ಬಿರನೇ ನಡೆದು ತನ್ನ ರೂಮಿನತ್ತ ಬಂದಳು.   ಆತಂಕದ  ಅಧ್ಯಾಯ ಇನ್ನೂ ಮುಗಿದಿರಲಿಲ್ಲ.

ಆ ಅನಾಮಧೇಯ  ಜೀವ  ಯಾರು? ,  ಈ ನಡುರಾತ್ರಿಯಲ್ಲಿ ಯಾವುದರ ಹುಡುಕಾಟ?  ಮನೆಯೇ ಅವಳ  ಹುಡುಕಾಟವಾಗಿದ್ದರೆ, ಮತ್ತೆ ಮನೆ ಬಿಟ್ಟದ್ದಾದರೂ ಏಕೆ?   ಎಂಬ ಪ್ರಶ್ನೆ ಇದ್ದಿದ್ದು  ಕಾಡಲಾರಂಬಿಸಿತು. ಇಲ್ಲಿಯವರೆಗೂ ನಡೆದದ್ದು ಸತ್ಯವ ಅಥವಾ ಬರೇ ಭ್ರಮೆಯಾ? ಗೌತಮಿ ಎನ್ನುವ ಪುಕ್ಕಲು,  ದೆವ್ವದ ಜೊತೆಗಿದ್ದ ಕಥೆ ಇನ್ನು ಇಲ್ಲಿ ಬರುವ ಎಲ್ಲಾ ಹೆಣ್ಣು ಮಕ್ಕಳ ಬಾಯಲ್ಲೂ ನಲಿದಾಡಬಹುದು. ವಿಚಾರಗಳ ತಳಮಳದಲ್ಲಿ ಗೌತಮಿ ನಿದ್ರೆಗೆ ಜಾರಿದ್ದೆ ಗೊತ್ತಾಗಲಿಲ್ಲ .

ಬೆಳಿಗ್ಗೆ ವಾರ್ಡನ್ ಜೊತೆ ಡಾಕ್ಟರ್ ನಿಂತು “ಮಿಸ್ ಗೌತಮಿ,  ಗೆಟ್ ಅಪ್ ಮೈ ಚಾಯ್ಡ್  ”   ಎಂದು ಕೆನ್ನೆಗೆ ನವಿರಾಗಿ ತಟ್ಟಿ ಎಬ್ಬಿಸಿದಾಗಲೇ ಎಚ್ಚರ. ಮಧ್ಯಾಹ್ನದ ಹನ್ನೆರಡು ಗಂಟೆ.  ಮೈಯೆಲ್ಲಾ ಕೊತಕೊತ ಕುದಿಯುತಿತ್ತು . ಜ್ವರದ ಭರದಲ್ಲಿ ಮಾತು  ಅಸ್ಪಷ್ಟವಾಗಿದ್ದವು.

ಹೆಡ್ ವಾರ್ಡಾನ್  ಮಿಸ್ ಮರಿಯಾ ,  “ವಿ ಆರ್  ಎಸ್ಸ್ಟ್ರೀಮ್ಲಿ  ಸ್ವಾರಿ ಮೈ ಡಿಯರ್ ”  ಎಂದು ಬೇಡಿಕೊಂಡಳು.

ಗೌತಮಿಗೆ ಇನ್ನೂ ವಿಷಯ ಸರಿಯಾಗಿ ಅರ್ಥವಾಗಿರಲಿಲ್ಲ.

“ ಅಂದ್ರೆ ರಾತ್ರಿ ತನ್ನ ಜೊತೆಗೆ ಇದ್ದದ್ದು …….

ಅವರು “ಮಿಸ್ ಸ್ಯಾಲ್ವಿ ಯ ಅನ್ನೋರು “ ನಮ್ಮ ಹಾಸ್ಟೇಲಿನ ಹಿರಿಯ ನನ್ . ಆಕೆ ಅಲ್ಜಾಮರ್  ಪೀಡಿತೆ.

“…………………….”

ಗೌತಮಿಗೆ ಎಷ್ಟು ಅರ್ಥವಾಯಿತೋ ಬಿಟ್ಟಿತೊ ವಾರ್ಡನ್ ಮುಂದುವರೆಸುತ್ತಾ.

“ದೇವರು ದೊಡ್ಡವನು ”  ಅವಳನ್ನು ಸುಖರೂಪವಾಗಿ ಅವಳ ರೂಮಿಗೆ  ಸೇರಿಸಿದ”

ಅವರನ್ನು ಸೇರಿಸಿದ ಈ ಮಧ್ಯ ತನ್ನ ಪರಿಸ್ಥಿತಿ   ದಟ್ಟ ಕಾಡಿನ ಪುಟ್ಟ ಮೊಲದಂತೆ  ಮಾಡಿ ಬಿಟ್ಟ. ಎಂದು ಗೌತಮಿ ಬಾಯಿಬಿಟ್ಟು ಹೇಳದಿದ್ರೂ ಒಳಗೊಳಗೆ ಸಣ್ಣಗೆ  ನಕ್ಕಳು. ವಾರ್ಡನ್ ಮಾತ್ರ ಅವಳದ್ದೇ  ಗುಂಗಿನಲ್ಲಿ ಭಗವಂತನ ಮಹಿಮೆ   ಹಾಗೂ ಸಾಲ್ವಿಯಳ  ದೈವ ಭಕ್ತಿಯನ್ನು  ಸೊಗಸಾಗಿ ಹೇಳುವುದರಲ್ಲಿಯೇ  ಮಗ್ನಳಾಗಿದ್ದಳು.

ಅದೇನಾಯ್ತಂದ್ರೆ ನಿನ್ನ ಮೂರನೇ ಮಹಡಿಯಲ್ಲಿರುವ ಸಾಲ್ವಿಯಳ  ರೂಮ್  ಪೇಂಟಿಂಗ್  ಮಾಡಲಿತ್ತು.   ಹಾಗೆ  ಅವಳನ್ನು ನಾಲ್ಕನೇ ಮಹಡಿಗೆ ವರ್ಗಾಯಿಸಲಾಗಿತ್ತು.   ಸಾಮಾನ್ಯವಾಗಿ ಡೋರತಿ   ಅವರೊಂದಿಗೆ ಇಪ್ಪತ್ನಾಲ್ಕು ತಾಸು  ಇರುತ್ತಿದ್ದರು.   ನಿನ್ನೆ ನಾಲ್ಕನೆಯ ಮಹಡಿಯ  ಸುರೇಖಾಳ  ರೂಮಿನಲ್ಲಿ ಸಾಲ್ವಿಯಳನ್ನು ಮಲಗಿಸಿದ್ದರು.  ಸುರೇಖಾಳಿಗೆ ಡೋರತಿ ಬರಬಹುದೆಂದು ತಾನು ಪಕ್ಕದ ಕೋಣೆಯಲ್ಲಿ ಮಲಗಿದ್ದಳು.    ಡೋರತಿ  ಆ ಕೋಣೆಯಲ್ಲಿ ಎಂತೂ ಸುರೇಖಾ ಇದ್ದಳಲ್ಲ ಇನ್ನು ನಾನೂ ಹೋಗಿ ಗದ್ದಲ ಆಗುವುದಕ್ಕಿಂತ ಮೂರನೇ ಮಹಡಿಯ ಬೇರೆ ಕೋಣೆಯಲ್ಲಿ  ಮಲಗಿದ್ದಳು.   ಅವರಿಬ್ಬರ ತಪ್ಪು ತಿಳುವಳಿಕೆಯಿಂದಾಗಿ ಸಾಲ್ವಿಯ ರೂಮಲ್ಲಿ ಒಬ್ಬಳೇ ಮಲಗುವಂತಾಯಿತು.  ಸಾಲ್ವಿಯಳ  ಪ್ರಾಯ ಎಪ್ಪತ್ತೆರಡಾಗಿದ್ದರೂ ಆಕೆ  ಪ್ರಾರ್ಥನೆ ತಪ್ಪಿಸಿದ್ದು ಬೆರಳೆಣೆಕೆಯಷ್ಡೇ.

ಪಾರ್ಥನೆಗೆಂದು  ತಯಾರಾಗಿ ಹೊರ ಬಂದವಳಿಗೆ ದಿಕ್ಕು ತೋಚಲಿಲ್ಲ.    ಹಸು ಕಾಣದ ಕರುವಿನಂತೆ ಅವಳಾವಸ್ಥೆ ಆಗಿರಬಹುದು.  ಆದರೆ  ಅವಳ ಆಸ್ಥೆಯೇ ದೊಡ್ಡದು.   ನಿನ್ನನ್ನು ಸರಿ ಸಮಯಕ್ಕೆ ಕಳುಹಿಸಿದ ಆ ದೇವರೇ ದೊಡ್ಡವನು. ನಿನ್ನೊಳಗೆ ಅವನಿದ್ದು ದಾರಿ ತೋರಿಸಿದವನೂ  ಅವನೇ.  ಎಂದು ಬೆರಳುಗಳನ್ನು ಬೆಸೆಯುತ್ತಾ ”  ಭಯ ಪಡಬೇಡ ನೀನು ಬೇಗ ಗುಣವಾಗ್ತಿಯಾ. ಚಿಂತಿಸಬೇಡ ಎಂದು  ನವಿರಾಗಿ ತಲೆ ನೇವರಿಸಿ  ಹೋದಳು.

ಹ್ಮು … ಒಂದು ದೀರ್ಘ  ಶ್ವಾಸ ಬಿಟ್ಟ ಗೌತಮಿಗೆ ಈಗಷ್ಟೆ   ಹಾರರ್  ತ್ರಿಡಿ ಮೂವಿಯ ಸಿನಿಮಾ ಹಾಲಿನಿಂದ ಹೊರಗೆ ಬಂದ ಬೆಚ್ಚಗಿನ ಅನುಭವ .  ಇದೂ ಸಣ್ಣ ಪರದೆಯ ದೊಡ್ಡ ಕತೆಯಾಗಬಹುದು ಎಂದು  ಮೇಲೆ ನೋಡಿ ಕಣ್ಣರಳಿಸುತ್ತ  “ ಅಲ್ಲ  ದೇವರೇ  ಒಂದು ಮಾತು ಹೇಳಿ,  ಪ್ರತಿ ಬಾರಿ ನಿಮಗೆ  ನಾನೇ ಸಿಗುವುದಾ ? “ ಎಂಬ  ಪ್ರಶ್ನೆಯನ್ನು ಗಾಳಿಯಲ್ಲಿ  ರವಾನಿಸಿದಳು.

ಮುಂಬಯಿ ಲೇಖಕಿ ಹೇಮಾ ಸದಾನಂದ ಅಮೀನ್ ಈಗಾಗಲೇ ಒಂದು ಕತಾಸಂಕಲನ ( ಅವರೆಲ್ಲಾ ದೇವರಾಗಿದ್ದಾರೆ) ಮತ್ತು ಒಂದು ಕವನ ಸಂಕಲನ ( ಕಲ್ಯಾಣಿಯಲ್ಲಿ ಮಳೆ) ಪ್ರಕಟಿಸಿದ್ದಾರೆ.ಕತಾ ಸಂಕಲನಕ್ಕೆ ಖ್ಯಾತ ಲೇಖಕಿ ಸುನಂದಾ ಪ್ರಕಾಶ ಕಡಮೆ ಮುನ್ನುಡಿ ಬರೆದಿರುವರು.ತಮ್ಮ ಬರಹಗಳಿಗೆ ಪ್ರಶಸ್ತಿ ಬಹುಮಾನ ಪಡೆದಿರುವ ಹೇಮಾ ಅಮೀನ್ ವಿದ್ಯಾಧರ ಪ್ರತಿಷ್ಠಾನದ ಮುಂಬಯಿ ಸಂಚಾಲಕಿ ಆಗಿರುವರು.

‍ಲೇಖಕರು Avadhi

October 11, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ರಗಳೆಗಳು ಬೇಕು..

ರಗಳೆಗಳು ಬೇಕು..

ಅನುಷ್ ಶೆಟ್ಟಿ ಯಾರೂ ಇರದ, ಯಾವ ಕೆಲಸವೂ ಇರದ, ಯಾವ ಜಂಜಾಟಗಳು, ರಗಳೆಗಳು, ಒತ್ತಡವೂ ಇರದ, ಸದ್ದಿರದ, ಏನೂ ಮಾಡದೆ ಎಲ್ಲರಿಂದ ದೂರವಿರುವ...

೧ ಪ್ರತಿಕ್ರಿಯೆ

  1. Smitha Amrithraj.

    ಹೇಮಾ… ನವಿರೇಳಿಸುತ್ತ ಕುತೂಹಲದಿಂದ ಓದಿಸಿಕೊಂಡು ಹೋಯಿತು.ಅಭಿನಂದನೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: