ಲೈಫ಼ು ಇಷ್ಟೇನೆ?

ಹೀಗೊಂದು ಆಟೋ ಅನುಭವ…

– ಡಾ. ಡಿ ಕೆ ಕೃಷ್ಣಮೂರ್ತಿ

ನೆನ್ನೆ ಸಂಜೆ ಸುಮಾರು ಆರು ಘಂಟೆಗೆ ಬೆಂಗಳೂರಿನಲ್ಲಿ ವಿಜಯನಗರದಿಂದ ಶೇಷಾದ್ರಿಪುರಂಗೆ ಹೋಗಲು ಆಟೋಗಾಗಿ ಕಾಯುತ್ತಿದ್ದೆ.ರಜಾ ದಿನವಾದ್ದರಿಂದ ಮಲ್ಲೇಶ್ವರಂನ ‘ಮಂತ್ರಿ ಮಾಲ್ ‘ಸುತ್ತ ಮುತ್ತ ವಿಪರೀತ ‘ಟ್ರ್ಯಾಫಿಕ್ ಜ್ಯಾಮ್’ನಿಂದಾಗಿ ಆ ಕಡೆ ಬರಲು ಯಾವ ಆಟೋದವರೂ ಇಷ್ಟ ಪಡುವುದಿಲ್ಲ .ಖಾಲಿ ಆಟೋ ಅಂತ ಕೈ ತೋರಿಸಿ ನಿಲ್ಲಿಸಿದರೆ,ಆಟೋ ನಿಲ್ಲಿಸಿ ‘ಶೇಷಾದ್ರಿಪುರಂ’ ಎಂದು ಹೇಳಿದ ತಕ್ಷಣ,ಕೆಟ್ಟ ಮುಖ ಮಾಡಿ,ತಿರಸ್ಕಾರದ ನೋಟ ಬೀರಿ,ದುರ್ದಾನ ತೆಗೆದು ಕೊಂಡವರಂತೆ ‘ಭರ್’ಎಂದು ಮುಂದೆ ಹೋಗಿಬಿಡುತ್ತಾರೆ!ಸುಮಾರು ಹತ್ತು ಆಟೋಗಳಿಗೆ ‘ಕೈ ತೋರಿಸಿ ಅವಲಕ್ಷಣ’ಎನಿಸಿ ಕೊಂಡಿದ್ದಾಯಿತು! ಅವೆಲ್ಲಾ ‘ನಾ….ಒಲ್ಲೇ’ಎಂದು ಮುನಿಸಿಕೊಂಡು ಮುಂದೆ ಹೋದವು.ಹನ್ನೊಂದನೇ ಆಟೋದವನು ನಾನು ಶೇಷಾದ್ರಿಪುರಂ ಎಂದಾಗ ಬನ್ನಿ ಎಂಬಂತೆ ಸುಮ್ಮನೇ ತಲೆ ಆಡಿಸಿದ!ಸುಮಾರು ಆಟೋದವರು ಆಟೋ ಹತ್ತಿದ ತಕ್ಷಣ ತಮ್ಮ ಕಷ್ಟಗಳ ಪ್ರವರ ಶುರುಮಾಡಿಬಿಡುತ್ತಾರೆ. ಟ್ರ್ಯಾಫಿಕ್ ಅನ್ನೋ,ರಾಜಕೀಯ ಅವ್ಯವಸ್ಥೆಯನ್ನೋ ಬಯ್ದು ಮನಸ್ಸು ಹಗುರ ಮಾಡಿಕೊಳ್ಳುತ್ತಾರೆ.ಅಥವಾ ನಮ್ಮ ಬಗ್ಗೆ ‘ನೀವು ಯಾರು?ಎತ್ತ?ಎಲ್ಲಿಂದ ಬಂದಿರಿ?ಎಲ್ಲಿ ಕೆಲಸ?ಎಷ್ಟು ಮಕ್ಕಳು?’ಎಂದೆಲ್ಲಾ ಪ್ರಶ್ನೆ ಕೇಳುತ್ತಾ ತಲೆ ಚಿಟ್ಟು ಹಿಡಿಸುತ್ತಾರೆ!ನಾವು ತಲಪುವ ಸ್ಥಳ ಬರುವ ತನಕ ಮುಳ್ಳಿನ ಮೇಲೆ ಕೂತಂತಾಗಿರುತ್ತದೆ!ಆಶ್ಚರ್ಯ ವೆಂಬಂತೆ ಈ ಆಟೋದವನು ತುಟಿ ಬಿಚ್ಚಲಿಲ್ಲ!ಯಾವುದೇ ಆತುರವಿಲ್ಲದೇ(ಆಟೋದವರಲ್ಲೊಂದು ಅಪರೂಪದ ಗುಣ !),ನಿಧಾನವಾಗಿ ಕರೆದೊಯ್ದ.ನನ್ನ ವೈದ್ಯಕೀಯ ಒಳಗಣ್ಣು ಇವನಿಗೇನೋ ತೊಂದರೆ ಇದೆ ಎಂದು ಹೇಳುತ್ತಿತ್ತು.ನಾನು ಇಳಿಯುವ ಸ್ಥಳ ಬಂದಾಗ ಮೀಟರ್ ಅರವತ್ತು ರೂಪಾಯಿ ತೋರಿಸುತ್ತಿತ್ತು.ನೂರು ರೂಪಾಯಿಯ ನೋಟೊಂದನ್ನು ಕೊಡುತ್ತಾ “ಯಾಕಪ್ಪ ಹುಶಾರಿಲ್ಲವಾ?”ಎಂದೆ.ಅದಕ್ಕವನು ‘ನನಗೆ ಕಿಡ್ನಿ ಫೈಲ್ಯೂರ್ ಆಗಿದೆ ಸರ್.ಇದ್ದ ಹಣಾ ಎಲ್ಲಾ ಆಸ್ಪತ್ರೆಗೇಖರ್ಚಾಯಿತು.ಆಪರೇಶನ್ ಎಲ್ಲಾ ನಮ್ಮ ಕೈಯಲ್ಲಿ ಎಲ್ಲಿ ಆಗುತ್ತೇ ಸರ್?ನಾನು ಬಹಳ ದಿನ ಬದುಕೊಲ್ಲಾ ಅಂತ ಗೊತ್ತು’ಎಂದು ತಣ್ಣಗೆ ಹೇಳಿದ.ಅವನನ್ನು ನೋಡಿದ ತಕ್ಷಣ ಅವನಿಗೇನೋ ಹುಶಾರಿಲ್ಲ ಅಂತ ತಿಳಿಯುತ್ತಿತ್ತು.ಆದರೆ ಅವನಿಗೆ ‘ಕಿಡ್ನಿ ಫೈಲ್ಯೂರ್’ಆಗಿರಬಹುದೆಂದು ನಾನು ಕನಸು ಮನಸಿನಲ್ಲೂ ಊಹಿಸಿರಲಿಲ್ಲ.ಒಂದು ಕ್ಷಣ ಅವನ ಕಣ್ಣುಗಳಲ್ಲಿ ‘ಸಾವು’ಇಣುಕಿ ಹೋದದ್ದು ಕಂಡು ಅವಾಕ್ಕಾದೆ.”ಇಂತಹ ಸ್ಥಿತಿಯಲ್ಲೂ ಗಾಡಿ ಓಡಿಸುತ್ತಿದ್ದೀಯಲ್ಲಪ್ಪಾ!ಸುಸ್ಥಾಗುವುದಿಲ್ಲವಾ?”ಎಂದೆ. ‘ಏನು ಮಾಡೋದು ಸರ್!ತುಂಬಾ ಸುಸ್ತಾಗುತ್ತೆ!ಉಸಿರಿರೋಗಂಟಾ ಹೊಟ್ಟೀಗೋಸ್ಕರ ಹೊಡೆದಾಡಲೇ ಬೇಕಲ್ಲಾ ಸರ್?ಮನೇಲಿ ಸಣ್ಣ ಸಣ್ಣ ಮಕ್ಕಳಿದ್ದಾರೆ.ನಾನು ಆಟೋ ಓಡಿಸದಿದ್ದರೆ ಅವಕ್ಕೆ ಊಟವಿಲ್ಲ’ ಎಂದು ಕಣ್ಣಲ್ಲಿ ನೀರು ತಂದು ಕೊಂಡ.’ಲೈಫು ಇಷ್ಟೇನೇ!!!’ಅನಿಸಿ, ಮನಸ್ಸು ಭಾರವಾಯಿತು. ನಾನು ಕೊಟ್ಟ ನೂರು ರೂಪಾಯಿಗೆ ಅವನು ಕೊಟ್ಟ ಬಾಕಿ ಹಣ ನಲವತ್ತು ರೂಪಾಯಿಗಳನ್ನು ಅವನಿಗೇ ಹಿಂದಿರುಗಿಸಿ,’ಅದನ್ನು ನೀನೇ ಇಟ್ಟು ಕೊಳ್ಳಪ್ಪಾ,ಒಳ್ಳೆಯದಾಗಲೀ’ಎಂದು ಬೀಳ್ಕೊಟ್ಟೆ.’ಥ್ಯಾಂಕ್ಯೂ ಸರ್.ದೇವರು ನಿಮ್ಮಂಥವರನ್ನು ಚೆನ್ನಾಗಿಟ್ಟಿರಲಿ’ಎಂದು ಹಾರೈಸಿ,ನನ್ನ ಮನಸ್ಸಿನಲ್ಲೊಂದು ಬಿರುಗಾಳಿ ಎಬ್ಬಿಸಿ ‘ಭರ್’ಎಂದು ಸದ್ದು ಮಾಡುತ್ತಾ ,ಕತ್ತಲಲ್ಲಿ ಕಣ್ಮರೆಯಾದ!!!]]>

‍ಲೇಖಕರು G

July 4, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

4 ಪ್ರತಿಕ್ರಿಯೆಗಳು

 1. Badarinath Palavalli

  ಸಂವೇದನಾಶೀಲ ಬರಹಗಾರ ಡಿ.ಟಿ.ಕೆಯವರ ಬರಹ ತುಂಬಾ ಮನ ಕುಲುಕುವಂತಿದೆ.
  ಮನಸ್ಸು ಭಾರವಾಯಿತು. ನಿಮ್ಮ ಬರಹದಲ್ಲಿ ನಿಮ್ಮ ಮಾನವೀಯತೆ ಮೆರೆದಿದೆ.
  ಆಟೋದವರ ಕಿರಿಕಿರಿ ಅತಿರೇಕಕ್ಕೆ ತಲುಪಿರುವ ಈ ಹೊತ್ತಿನಲ್ಲಿ, ಇಂತಹ ಅಪರೂಪದ ಜೀವನ ಹೋರಾಟಗಾರನ ಬಗ್ಗೆ ಮರುಕವಾಯಿತು.
  ಭಗವಂತ ಪರಿಕ್ಷೆಗಳನ್ನು ಬಡವನಿಗೇ ಏಕೆ ಒಡ್ಡುತ್ತಾನೋ ಎಂದು ಅಚ್ಚರಿಯಾಗುತ್ತದೆ!
  ಕೆಳ ಅಸಂಘಟಿತ ಕಾರ್ಮಿಕ ವಲಯಕ್ಕೆ ಸರ್ಕಾರದಿಂದ ಯಾವ ಸವಲತ್ತುಗಳು ದೊರಕುವುದಿಲ್ಲ. ಅವರಿಗೆ ಕನಿಷ್ಠ ಯಶಸ್ವಿನಿ ಯೋಜನೆಯ ಕಾರ್ಡು ಸಹ ಸರ್ಕಾರ ಕೊಡುತ್ತದೋ ಇಲ್ಲವೋ ಗೊತ್ತಿಲ್ಲ. ಪಾಪ ಈ ಆಟೋ ಗೆಳೆಯ ಪ್ರತಿವಾರ ಡಯಾಲಿಸಿಸಿಗೆ, ನಂತರ ಕಿಡ್ನಿ ಟ್ರಾನ್ಸ್ ಪ್ಲಾಂಟೇಷನ್ನಿಗೆ ಅದೆಲ್ಲಿಂದ ದುಡ್ಡು ಹೊಂಚುತ್ತಾನೋ? ಪಾಪ..

  ಪ್ರತಿಕ್ರಿಯೆ
 2. prakash hegde

  ಬಹಳ ಕಷ್ಟವಾಯಿತು…
  ಮನಸ್ಸೆಲ್ಲ ಭಾರವಾಯ್ತು…
  ದೇವರು ತಾನು ಇದ್ದೇನೆ ಎನ್ನುವದನ್ನು ಅವನಿಗೆ ಸಾಬೀತು ಪಡಿಸಲೆಂದು ಹಾರೈಸೋಣ…
  ಸಾವು ಎದುರಿಗೆ ಇದ್ದಾಗ ನಾವೆಲ್ಲ “ಪ್ರಾಮಾಣಿಕರಾಗಿರ್ತೇವೆ” ಅನ್ನೋದು ಎಷ್ಟು ಸೋಜಿಗ ಅಲ್ವಾ?

  ಪ್ರತಿಕ್ರಿಯೆ
  • shama, nandibetta

   ನಿಜ ಪ್ರಕಾಶಣ್ಣ “ಸಾವು ಎದುರಿಗೆ ಇದ್ದಾಗ ನಾವೆಲ್ಲ “ಪ್ರಾಮಾಣಿಕರಾಗಿರ್ತೇವೆ” ಅನ್ನೋದು ಎಷ್ಟು ಸೋಜಿಗ”
   ಅವನ ಮಕ್ಕಳಿಗೆ ಅಪ್ಪ ಸದಾ ಇರುವಂತೆ ದೇವರು ಅನುಗ್ರಹಿಸಲಿ.

   ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: